Showing posts with label Social media. Show all posts
Showing posts with label Social media. Show all posts

Friday, January 8, 2016

ಪ್ರತಿಕ್ರಿಯಿಸಲು ಮೂರು ಕಾರಣ

ಪ್ರಿಯ ಪ್ರೇಮ ಶೇಖರ್ ಅವರೆ,
ಬೊಳುವಾರು ಅವರ ಹಳೆಯ ಲೇಖನದ ಬಗ್ಗೆ ಪ್ರತಿಕ್ರಿಯಿಸಲು ಎರಡು ದಿನ ತೆಗೆದುಕೊಂಡಿರುವ ನೀವು ಕೊನೆಗೂ ಮೂಲ ಲೇಖನವನ್ನು ಓದದೆ ತಮ್ಮೆಲ್ಲ ಶಬ್ದ ಭಂಡಾರವನ್ನು ನನ್ನ ಹೀಯಾಳಿಕೆ, ತೆಗಳಿಕೆ ಮತ್ತು ಬುದ್ದಿವಾದ ನೀಡಲು ಹಾಗೂ ಪರಿವಾರದ ಹಳೆಯ ಸರಕುಗಳನ್ನು ರಿಸೈಕಲ್ ಮಾಡಲು ಬರಿದುಮಾಡಿದ್ದೀರಿ.ನಿಮ್ಮಲ್ಲಿದ್ದಿರಬಹುದಾದ ಜ್ಞಾನ ಭಂಡಾರವನ್ನು ಬಳಸಿಯೇ ಇಲ್ಲ.
-ಇಷ್ಟು ಹೇಳಿ ಸುಮ್ಮನಾಗಬಹುದಿತ್ತೋ ಏನೋ?
ಆದರೆ ನಿಮ್ಮ ಹಿರಿತನಕ್ಕೆ ಸೂಕ್ತ ಗೌರವ ಕೊಡಬೇಕಾದುದು ನನ್ನ ಧರ್ಮ. ಪ್ರತಿಕ್ರಿಯಿಸಲು ಹೊಸದಾಗಿ ಓದಬೇಕಾದುದು ಏನೂ ಇಲ್ಲ. ಬರೆಯಲು ಸಮಯ ಬೇಕು. ಪುರುಸೊತ್ತು ಮಾಡಿಕೊಂಡು ನಿಮಗೆ ಪ್ರೇಮಪೂರ್ವಕವಾಗಿಯೇ ಉತ್ತರಿಸುತ್ತೇನೆ. ನಮಸ್ಕಾರ
Date: 05-01-2016
---------------------------------------------------------------------------------------------------------------------------------
Date: 07-01-2016
ಪ್ರೀತಿಯ ಪ್ರೇಮಶೇಖರ್, ನಿಮ್ಮ ಸ್ಟೇಟಸ್ ಗೆ ಪ್ರತಿಕ್ರಿಯಿಸಬೇಕೇ ಬೇಡವೇ ಎಂಬ ಬಗ್ಗೆ ನಾನೂ ಗೊಂದಲದಲ್ಲಿದ್ದೆ. ಇದಕ್ಕೆ ಮೂರು ಕಾರಣಗಳು:
1. ನಮ್ಮ ಚರ್ಚೆಗೆ ಕಾರಣವಾಗಿರುವ ಬೊಳುವಾರು ಲೇಖನವನ್ನು ನೀವು ಓದಿಲ್ಲ, ಯಾಕೆಂದರೆ ಅದರ ಪ್ರತಿ ನಿಮ್ಮಲ್ಲಿಲ್ಲ, ನನ್ನನ್ನು ಕೇಳಿದ್ದರೆ ಅದನ್ನು ಕಳಿಸಿಕೊಡುತ್ತಿದ್ದೆ. ಅದನ್ನು ಓದಿ ಅರಗಿಸಿಕೊಂಡು ನೀವೇ ಇತರರಿಗೆ ಬೋದಿಸುತ್ತಿರುವಂತೆ ‘ಅರಿವಿನ ವಿಕಾಸ ಮಾಡಿಕೊಂಡು’ ಸಾವಧಾನವಾಗಿ ಪ್ರತಿಕ್ರಿಯಿಸಬಹುದಿತ್ತು. ಆದರೆ ನಿಮಗೆಷ್ಟು ಅವಸರವಿತ್ತೆಂದರೆ ನಾನು ಅಂಟಿಸಿದ್ದ ಒಂದು ಪುಟದ ಪೋಟೋ ಪ್ರತಿಯ ಅಸ್ಪಷ್ಟ ಸಾಲುಗಳನ್ನು ಓದಿ ನೀವು ವಾಗ್ವಾದದ ಅಂಗಳಕ್ಕೆ ಹಾರಿಬಿಟ್ಟಿದ್ದೀರಿ. ಇದರಿಂದಾಗಿ ಸ್ಪರ್ಧೆ ಯಾವುದೆಂದು ಗೊತ್ತಿಲ್ಲದೆ ಅಖಾಡಕ್ಕೆ ಹಾರಿ ಎಡವಿಬಿಟ್ಟ ಕುಸ್ತಿಪಟುವಿನಂತೆ ನೀವು ಕಾಣುತ್ತಿದ್ದೀರಿ. ಒಂದು ಅವಕಾಶ ಸಿಕ್ಕಿತಲ್ಲಾ, ಏನಾದರೂ ಮಾಡಿ ಈ ನನ್ಮಗನಿಗೆ ಗುದ್ದಿ ಬಿಡಬೇಕು, ಈ ಮೂಲಕ ಪ್ರಚಾರ ಗಿಟ್ಟಿಸಿಕೊಂಡು ಈತನನ್ನು ವಿನಾಕಾರಣ ದ್ವೇಷಿಸುವ ಪಡ್ಡೆ ಹುಡುಗರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕು ಎನ್ನುವ ಕಿಡಿಗೇಡಿತನದ ಆಲೋಚನೆಯೊಂದು ನಿಮ್ಮ ಪ್ರತಿಕ್ರಿಯೆಯಲ್ಲಿ ನಾನು ಕಂಡೆ. ಅದರಲ್ಲಿ ನೀವು ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದೀರಿ. ಇಂತಹ ಯಶಸ್ಸು ಇನ್ನಷ್ಟು ನಿಮ್ಮ ಪಾಲಾಗಲಿ. ಯಾವುದನ್ನೂ ಬಚ್ಚಿಟ್ಟುಕೊಳ್ಳದೆ ನಿಮ್ಮನ್ನು ನೀವು ಇಷ್ಟುಚೆನ್ನಾಗಿ ಪರಿಚಯಿಸಿಕೊಂಡಿರುವಾಗ ನಾನೇನು ಪ್ರತಿಕ್ರಿಯಿಸಲಿ?
2. ಬೊಳುವಾರು ಬರೆದಿರುವುದು ಇಸ್ಲಾಂ ಹೇಗೆ ಪ್ರಪಂಚದಾದ್ಯಂತ ಪಸರಿಸಿತು ಎಂಬ ವಿಷಯದ ಮೇಲಿನ ಸಂಶೋಧನಾತ್ಮಕ ಪ್ರಬಂದ ಅಲ್ಲ. ‘ ಮುಸ್ಲಿಮನೆಂಬ ಪೂರ್ವಗ್ರಹದ ಕನ್ನಡಕವನ್ನು ಕಿತ್ತುಹಾಕಿ ಇತರರಂತೆ ನನ್ನನ್ನೂ ನಿಮ್ಮವನಂತೆ ಕಾಣಿರಿ’ ಎಂದು ಬೇಡಿಕೊಳ್ಳುತ್ತಿರುವ ಸಾಮಾನ್ಯ ‘ಮಹಮ್ಮದ’ ನ ಮನಸ್ಸಿನ ತಳಮಳ ಅದು. “ ....ಸೋಮನಾಥ ದೇವಾಲಯವನ್ನು ಆರ್ಥಿಕ ದಾಹದಿಂದ ಸೂರೆಗೈದ ಘಜನಿ ಮಹಮ್ಮದನನ್ನು ಮೂರ್ತಿ ಭಂಜಕನೆಂದು, ಹಿಂದೂ ಧರ್ಮದ ವಿರೋಧಿಯೆಂದು ವೈಭವೀಕರಿಸುತ್ತಾ, ಘಜನಿ ಎನ್ನುವುದು ಮರವೋ, ಕುದುರೆಯೋ ಎಂದು ಗೊತ್ತಿರದ ಬಡ ಬೀಡಿಕಾರ್ಮಿಕನ ಮಗ ‘ಮಹಮ್ಮದ’ ನನ್ನು ಕೂಡಾ ತೋಳಕುರಿಮರಿ ನೀರು ನ್ಯಾಯದಲ್ಲಿ ಇಂದಿನ ಮುಂದಿನ ಎಲ್ಲ ತಲೆಮಾರುಗಳನ್ನು ಮೋಸ ಗೊಳಿಸುತ್ತಿದ್ದಾರೆ...’’ ಎನ್ನುವ ಸಾಲುಗಳೇ ‘ಮುಸ್ಲಿಮನಾಗಿರುವುದೆಂದರೆ’ ಲೇಖನ ಎತ್ತಿದ್ದ ಮೂಲ ಪ್ರಶ್ನೆ. ಇದಕ್ಕೆ ನೀವು ಉತ್ತರಿಸಿಲ್ಲ.
ನೀವೇ ಬರೆದಂತೆ ಇಸ್ಲಾಂ ಕತ್ತಿ ಹಿಡಿದುಕೊಂಡೇ ಧರ್ಮ ಪ್ರಸಾರ ಮಾಡಿತೆಂದು ಒಪ್ಪಿಕೊಳ್ಳುವ. ನೀವು ಏನು ಮಾಡಬೇಕೆಂದಿದ್ದೀರಿ? ನಿಮಗೆ ಪರಿಚಯವೇ ಇಲ್ಲದ ‘ಮಹಮ್ಮದ’ ನನ್ನು ಬಿಟ್ಟುಬಿಡಿ, ನಿಮ್ಮ ಗೆಳೆಯರಾದ ಬೊಳುವಾರು ಇಲ್ಲವೇ ಜೆ ಎನ್ ಯು ನಲ್ಲಿ ನಿಮ್ಮ ರೂಮ್ ಮೇಟ್ ಆಗಿದ್ದ ಮುಜಫರ್ ಅಸ್ಸಾದಿ ಅವರ ತಲೆ ಕಡಿಯುತ್ತೀರಾ? ಇಂತಹ ಮನಸ್ಥಿಯವರ ಜತೆ ಏನು ಚರ್ಚೆ ಮಾಡಲಿ?
3. ಇಸ್ಲಾಂ ಧರ್ಮದ ಪ್ರಸಾರದ ಬಗ್ಗೆ ನೀವು ಹೇಳಿರುವುದರಲ್ಲಿ ಸಾಸಿವೆಯಷ್ಟಾದರೂ ಹೊಸತಿದೆಯೇ? ಹತ್ತು ಕಡಿಮೆ ನೂರು ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರು ಇದನ್ನೇ ಹೇಳುತ್ತಾ ಬಂದಿದ್ದಾರೆ. ಅದಕ್ಕಿಂತ ಮೊದಲು ಅದನ್ನು ಹಿಂದೂ ಮಹಸಭಾದ ನಾಯಕರು ಹೇಳಿದ್ದರು. ಅವರು ಹೇಳದಿರುವ ಒಂದು ಸಾಲು ನಿಮ್ಮ ಬರಹದಲ್ಲಿ ಎಲ್ಲಿದೆ ಎಂದು ತಿಳಿಸಿ? ಹೊಸ ಅರಿವಿನ ಬೆಳಕು ತಪ್ಪಿಯೂ ಒಳಸೂಸಬಾರದೆಂಬ ಹಟದಿಂದ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿಕೊಂಡು ಹಳೆಯ ಕಂತೆ ಪುರಾಣಗಳನ್ನು ಉರುಹಾಕಿಕೊಂಡು ಕೂತಿರುವವರ ಜತೆ ಚರ್ಚೆ ನಡೆಸಿ ಯಾರಿಗಾದರೂ ಏನು ಲಾಭ?
ಈ ಮೂರು ಕಾರಣಗಳಿಗಾಗಿ ಪ್ರತಿಕ್ರಿಯಿಸುವುದೇ ಬೇಡ ಎಂದಾಗಿತ್ತು. ಆದರೆ ನಮ್ಮ ಯುವಸಮುದಾಯದ ಬಹುದೊಡ್ಡ ಭಾಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಅವರಲ್ಲಿ ಹೆಚ್ಚಿನವರು ಕುರುಡು ಭಕ್ತರು. ಸೂತ್ರಧಾರಿಗಳು ಹೇಳಿದಂತೆ ಕುಣಿಯುತ್ತಿರುವ ಪಾತ್ರಧಾರಿಗಳು. ಅವರೆಲ್ಲ ಮೆಳ್ಳೆಗಣ್ಣಿನ ಇತಿಹಾಸಕಾರರು ಹೇಳಿರುವುದೇ ನಿಜ ಎಂದು ತಿಳಿದು ಅದನ್ನೇ ಉರುಹೊಡೆದು ತಮ್ಮ ಆಯುಧಗಳನ್ನಾಗಿ ಮಾಡಿಕೊಂಡು ಕಂಡಕಂಡವರ ಮೇಲೆ ಎರಗುವವರು. ಕನಿಷ್ಠ ಅಂತಹವರಲ್ಲಿ ಕೆಲವರದ್ದಾದರೂ ಅರಿವಿನ ವಿಕಾಸವಾಗಲಿ ಎನ್ನುವುದಕ್ಕಾಗಿಯಾದರೂ ಪ್ರತಿಕ್ರಿಯಿಸಬೇಕೆಂದು ಅನಿಸಿತು. ನನ್ನ ಪ್ರತಿಕ್ರಿಯೆಗಾಗಿ ನಿಮ್ಮ ಚಡಪಡಿಕೆ ಕೂಡಾ ನನ್ನ ನಿರ್ಧಾರದ ಬದಲಾವಣೆಗೆ ಕಾರಣ.
ನೇರವಾಗಿ ವಿಷಯಕ್ಕೆ ಬರೋಣ ಅಂತಿದ್ದೆ. ಆದರೆ ನಿಮ್ಮ ಉತ್ತರದಲ್ಲಿದ್ದ ಪೀಠಿಕೆಯನ್ನು ನಿರ್ಲಕ್ಷಿಸಿದ್ದರೆ ನಿಮ್ಮ ಹಿರಿತನವನ್ನು ಅಗೌರವಿಸಿದಂತಾಗುತ್ತದೆ ಎಂದು ಮೊದಲು ಅದಕ್ಕೆ ಪ್ರತಿಕ್ರಿಯಿಸುವೆ. ನಿಜ ಹೇಳಬೇಕೆಂದರೆ ‘ ನಿಮ್ಮ ಓದು ಸೀಮಿತ ‘ ಎಂಬ ನನ್ನ ಬಗೆಗಿನ ನಿಮ್ಮ ತೀರ್ಪು ಓದಿದಾಗ ಹೆಚ್ಚೇನೂ ಓದದ ನನ್ನಜ್ಜನ ನೆನಪಾಯಿತು. ಆತ ಮಾತುಮಾತಿಗೆ ‘’ನಿನಗೇನೋ ಗೊತ್ತೋ? ನಾನು...’’ ಎಂದೇ ಮಾತು ಪ್ರಾರಂಭಿಸುತ್ತಿದ್ದದ್ದು. ಈ ಹಿರೀಕ ಏನೋ ನನಗೆ ಗೊತ್ತಿಲ್ಲದ್ದನ್ನು ಹೇಳುತ್ತಾನೆ ಎಂದು ಬೊಗಸೆಯೊಡ್ಡಿ ನಿಂತರೆ ಅದು ಖಾಲಿ ಖಾಲಿ. 50-60 ವರ್ಷಗಳಿಂದ ಹೇಳುತ್ತಾ ಬಂದುದನ್ನೇ ಅವನು ರಿಸೈಕಲ್ ಮಾಡುತ್ತಿದ್ದ.
ನಿಜ ಹೇಳಬೇಕೆಂದರೆ ನೀವು ಅಂಕಣಕಾರ ಪ್ರೇಮಶೇಖರ ಎಂದು ನನಗೆ ಗೊತ್ತಿರಲಿಲ್ಲ. ಪತ್ರಿಕೆಗಳಿಗೆ ಬರೆಯುವವರಿಗೆ ನಾವೆಲ್ಲ ಸೆಲೆಬ್ರೆಟಿಗಳು, ಹೆಸರು ಕೇಳಿದ ಕ್ಷಣ ಜನ ಗುರುತಿಸುತ್ತಾರೆ ಎಂಬ ಭ್ರಮೆ ಇರುತ್ತದೆ. ವಾಸ್ತವದಲ್ಲಿ ಹಾಗಿರುವುದಿಲ್ಲ ಎನ್ನುವುದನ್ನು ಸುಮಾರು ಮೂರು ದಶಕಗಳ ವೃತ್ತಿ ಅನುಭವದಿಂದ ಹೇಳುತ್ತಿದ್ದೇನೆ. ಜನರಿಗೆ ನಮ್ಮಂತಹವರನ್ನು ನೆನಪಲ್ಲಿಟ್ಟುಕೊಳ್ಳಲು ಪುರುಸೊತ್ತಿರುವುದಿಲ್ಲ. ಪಾಪ ಅವರಿಗೆ ತಲೆಕೆಡಿಸಿಕೊಳ್ಳಲು ಅವರದ್ದೇ ಸುಖ-ದು:ಖಗಳಿರುತ್ತವೆ. ನನ್ನ ಹೆಸರಿನ ಮಟ್ಟು ತೆಗೆದು ಗೂಗಲ್ ಗೆ ಹಾಕಿದರೆ ಅದೇ ಹೆಸರಿನ ನೂರು ಹೆಸರು ಬರುತ್ತದೆ. ನಿಮ್ಮದು ಅದೇ ರೀತಿಯ ಸಾಮಾನ್ಯ ಹೆಸರು.
ನಿಮ್ಮ ಪ್ರತಿಕ್ರಿಯೆಯನ್ನು ನಾನು ಓದಿದ್ದು ನಿಮ್ಮ ಸ್ಟೇಟಸ್ ನಲ್ಲಿಯಲ್ಲ. ಯಾರೋ ಮೋಹನಗೌಡ ಎಂಬವರೊಬ್ಬರು ಅದನ್ನು ತಮ್ಮ ಪ್ರತಿಕ್ರಿಯೆಯಲ್ಲಿ ಅಂಟಿಸಿಕೊಂಡಿದ್ದರು. ಕೊನೆಯಲ್ಲಿ ಪ್ರೇಮಶೇಖರ ಎಂದಿತ್ತು. ನನಗೆ ನೀವು ಬರೆದ ವಿಷಯವಷ್ಟೇ ಪ್ರಮುಖವಾಗಿದ್ದ ಕಾರಣ ನಿಮ್ಮ ಹೆಸರಿನ ಸಂಶೋಧನೆಗೆ ಹೋಗಲಿಲ್ಲ, ಬೇಸರವಾಗಿದ್ದರೆ ಕ್ಷಮಿಸಿ. ನಾನು ಲೇಖಕನ ವ್ಯಕ್ತಿತ್ವವನ್ನು ಆತನ ಲೇಖನಗಳ ಮೂಲಕವೇ ಅರ್ಥಮಾಡಿಕೊಳ್ಳುತ್ತಾ ಬಂದವನು, ಹೆಸರು, ಅದಕ್ಕಿರುವ ಬಾಲ-ಬಿರುದಾವಳಿಗಳ ಮೂಲಕ ಅಲ್ಲ. ಕೆಲವರು ಇರುವುದು ಒಂದು ರೀತಿ, ಬರೆಯುವುದೇ ಇನ್ನೊಂದು ರೀತಿ. ನೀವು ಅವರ ಸಾಲಿಗೆ ಸೇರಿದವರಲ್ಲ ಎಂದು ನಾನು ನಂಬಿದ್ದೇನೆ.
ನಿಮ್ಮ ಪ್ರತಿಕ್ರಿಯೆ ಓದಿದ ನಂತರ ನಿಮ್ಮ ಅಪೇಕ್ಷೆಯಂತೆ ನೀವು ಯಾರೆಂದು ತಿಳಿದುಕೊಳ್ಳಲು ಪ್ರಯತ್ನಿಸಿದೆ. ಆಗ ನನಗೆ ತಿಳಿದುಬಂದುದ್ದೆಲ್ಲವನ್ನೂ ಹೇಳಿ ನಿಮ್ಮ ಮನಸ್ಸಿಗೆ ನೋಯಿಸುವುದು ನನಗೆ ಇಷ್ಟ ಇಲ್ಲ. ನನ್ನ ಗೆಳೆಯರಾದ ಮುಜಫರ್ ಅಸ್ಸಾದಿ, ಅಶೋಕ ಶೆಟ್ಟರ್ , ಡೆಕ್ಕನ್ ಹೆರಾಲ್ಡ್ ನ ಕೆ.ಸುಬ್ರಹ್ಮಣ್ಯ ಮೊದಲಾದವರೆಲ್ಲರೂ ನಿಮಗೂ ಗೆಳೆಯರು ಎಂಬುದನ್ನು ತಿಳಿದುಕೊಂಡೆ. ಅವರೆಲ್ಲರ ಜತೆ ನಾನು ನಿಮ್ಮ ಬಗ್ಗೆ ಚರ್ಚಿಸಲು ಹೋಗಲಿಲ್ಲ. ಆದರೆ ಪಾಂಡಿಚೇರಿಯಲ್ಲಿ ನಿಮ್ಮ ಶಿಷ್ಯನಾಗಿದ್ದೆ ಎಂದು ಹೇಳಿಕೊಂಡವನೊಬ್ಬ ಫೇಸ್ ಬುಕ್ ನಲ್ಲಿ ಮೆಜೆಜ್ ಕಳಿಸಿದ್ದ. ಅವನು ವ್ಯಕ್ತಪಡಿಸಿರುವ ನೋವು, ಆಕ್ರೋಶ ಗುರುವೆನಿಸಿಕೊಂಡ ಯಾರಿಗೂ ಶೋಭೆ ತರುವಂತಹದ್ದಲ್ಲ. ಆ ಮೇಲೆ ನಿಮ್ಮ ಬರವಣಿಗೆಗಳನ್ನೂ ಒಂದಷ್ಟು ತಿರುವಿಹಾಕಿದೆ. ಗೌರಿ ಎನ್ನುವ ಒಬ್ಬ ಹೆಣ್ಣುಮಗಳನ್ನು ‘ಗೋರಿ’ ಎಂದು ಗೇಲಿಮಾಡುವ ವಿಕೃತಿ ಬಗ್ಗೆ ಏನು ಹೇಳಲಿ?
ನಿಮ್ಮ ಇನ್ನೊಂದು ಪ್ರಶ್ನೆ/ಸಲಹೆಗೆ ಕೂಡಾ ಉತ್ತರಿಸಬೇಕಾಗಿದೆ. ಇದನ್ನು ಬಹಳಷ್ಟು ಖಾಂಜಿಪೀಂಜಿಗಳು ಆಗಾಗ ಕೇಳುತ್ತಿರುತ್ತಾರೆ.. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವ ಮಾಧ್ಯಮ ಸಲಹೆಗಾರರು ದನದ ಮಾಂಸ ತಿನ್ನುತ್ತಾರೆ ಎಂದು ಶಾಸಕ ಸಿ.ಟಿ.ರವಿ ವಿಧಾನಸಭೆಯಲ್ಲಿಯೇ ಹೇಳಿದ್ದರು. ಅವರೇನೋ ಆಗಾಗ ಇಂತಹ ಜೋಕ್ ಮಾಡುತ್ತಿರುತ್ತಾರೆ. ತಿಳಿದವರಾದ ನೀವು ಹೇಳಿ, ಸರ್ಕಾರದ ಸಂಬಳ ಪಡೆಯುತ್ತಿರುವವರು ಬಾಯಿಮುಚ್ಚಿಕೊಂಡಿರಬೇಕು, ದನದ ಮಾಂಸ ತಿನ್ನುವುದಿರಲಿ, ಅದರ ಬಗ್ಗೆ ಮಾತನಾಡಬಾರದು ಎಂದು ಸಂವಿಧಾನದ ಯಾವ ಪರಿಚ್ಛೇದ ಇಲ್ಲವೇ ಅಪರಾಧ ದಂಡ ಸಂಹಿತೆಯ ಯಾವ ಸೆಕ್ಷನ್ ಹೇಳಿದೆ? ಇದನ್ನು ನೀವು ತಿಳಿಸಿದರೆ ನಾನು ಸ್ವಯೀಚ್ಚೆಯಿಂದ ಗಲ್ಲುಗಂಬಕ್ಕೇರುತ್ತೇನೆ.
ನಮ್ಮ ಸಚಿವರು ಕೂಡಾ ಜನತೆಯ ತೆರಿಗೆಯ ಹಣದಿಂದ ಸಂಬಳ-ಸೌಲಭ್ಯ ಪಡೆದುಕೊಳ್ಳುವವರು. ನಿಮ್ಮ ಲಾಜಿಕ್ ಪ್ರಕಾರ ಅವರು ಕೂಡಾ ಒಂದು ಪಕ್ಷದ ವಿರುದ್ದ ಇಲ್ಲ ಪರ ಮಾತನಾಡಬಾರದೇ? ಹಿಂದಿನ ಸರ್ಕಾರ ನೇಮಿಸಿದ್ದ ಸೆನೆಟ್, ಅಕಾಡೆಮಿಕ್ ಕೌನ್ಸಿಲರ್ ಸದಸ್ಯರಾಗಿದ್ದವರು, ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಮುಜುಗರ ಇಲ್ಲದ ಅಧಿಕಾರ ಅನುಭವಿಸುತ್ತಾ ಯಾವ ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದರೋ ಅದೇ ಸರ್ಕಾರವನ್ನು ಸಾರ್ವಜನಿಕವಾಗಿ ಹಿಗ್ಗಾ ಮುಗ್ಗಾ ಬೈಯ್ಯುತ್ತಿದ್ದಾರಲ್ಲಾ ಅದು ಯಾವ ನೈತಿಕತೆಯ ಸಂಹಿತೆಯಲ್ಲಿ ಬರುತ್ತೆ? ಧಾರ್ಮಿಕ ಸಾಮರಸ್ಯವನ್ನು ಕೆಡಿಸುವುದೇ ತಮ್ಮ ಉದ್ಯೋಗ ಮಾಡಿಕೊಂಡಿರುವ ಕೇಸರಿ ಪಡೆಯ ನಾಯಕರ ಅಕ್ಕಪಕ್ಕದಲ್ಲಿ ಪೋಲಿಸ್ ಇಲಾಖೆ ನೀಡಿರುವ ಅಂಗರಕ್ಷಕರಿದ್ದಾರಲ್ಲಾ ಅವರಿಗೆ ಯಾರ ತೆರಿಗೆ ಹಣದಿಂದ ಸಂಬಳ ಕೊಡುತ್ತಿರುವುದು ಸ್ವಾಮಿ? ಫೇಸ್ ಬುಕ್ ನಲ್ಲಿ ಕೆಲವು ಪಡ್ಡೆ ಹುಡುಗರು ಟಿಆರ್ ಪಿಗಾಗಿ ಏನೇನೋ ಮಕ್ಕಳ ಕತೆ ಬರೆಯುತ್ತಿರುತ್ತಾರೆ ಅದನ್ನು ನಿಮ್ಮಂತಹವರು ಗಂಭೀರವಾಗಿ ತೆಗೆದುಕೊಳ್ಳುವುದೇ?
ಈಗ ನಿಮ್ಮ ಪ್ರತಿಕ್ರಿಯೆಯ ಕೇಂದ್ರಕ್ಕೆ ಬರುತ್ತೇನೆ. ಅರೆ, ಆಗಲೇ 800 ಶಬ್ದಗಳಾಗಿವೆ. ಒಂದೇ ಗುಟುಕಿಗೆ ಓದಿ ಅರಗಿಸಿಕೊಳ್ಳುವುದು ನಿಮಗೂ ಕಷ್ಟ. ಮುಂದಿನದ್ದನ್ನು ಎರಡನೆ ಕಂತಿನಲ್ಲಿ ಬರೆಯುತ್ತೇನೆ. (ಸದ್ಯ ಮುಖ್ಯಮಂತ್ರಿಗಳ ‘ತಲೆಕೆಡಿಸುವ’ ಸಲಹೆಗಳನ್ನು ತುರ್ತಾಗಿ ನೀಡಬೇಕಾಗಿದೆ) ಸದ್ಯಕ್ಕೆ ಇದನ್ನು ಓದಿರಿ. ನೀವು ಮುಂಬೈನಲ್ಲಿದ್ದೀರಿ ಎಂದು ನಿಮ್ಮ ಗೆಳೆಯ ಅಶೋಕ್ ಶೆಟ್ಟರ್ ಬರೆದಿರುವುದನ್ನು ಓದಿದೆ.. ನಾನು ಅಲ್ಲಿಯೇ ಹುಟ್ಟಿದವನು. ನನಗೆ ಅಲ್ಲಿ ಒಂದಿಷ್ಟು ಗೆಳೆಯರಿದ್ದಾರೆ. ಸಹಾಯ ಬೇಕಿದ್ದರೆ ತಿಳಿಸಿ. ವೈಯಕ್ತಿಕ ಸ್ನೇಹ ಬೇರೆ, ಸೈದ್ಧಾಂತಿಕ ಜಗಳ ಬೇರೆ. ಸದ್ಯದಲ್ಲಿಯೇ ನಿಮ್ಮ ಓದಿಗಾಗಿ ನನ್ನ ಪ್ರತಿಕ್ರಿಯೆಯ ಎರಡನೆ ಕಂತು ನಿಮ್ಮನ್ನು ತಲುಪಲಿದೆ. ನಮಸ್ಕಾರ.

Sunday, January 3, 2016

ಅಪರಾಧ ಸಿದ್ದವಾಗುವ ತನಕ ಆರೋಪಿ ಅಪರಾಧಿಯೆನ್ನಿಸಲಾರ

ಬೊಳುವಾರು ಅವರ ಹಳೆಯ ಲೇಖನವೊಂದನ್ನು ಉಲ್ಲೇಖಿಸಿ ನಾನು ಬರೆದ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಪ್ರೇಮಶೇಖರ ಎಂಬವರು (ಇವರ್ಯಾರು ಎಂದು ನಿಜಕ್ಕೂ ನನಗೆ ಗೊತ್ತಿಲ್ಲ) ‘ಮೂವತ್ತಾಲ್ಕು ವರ್ಷಗಳಲ್ಲಿ ನೇತ್ರಾವತಿಯಲ್ಲಿ ಸಾಕಷ್ಟು ನೀರು ಹರಿದಿದೆ..ಬೊಳುವಾರು ಅವರು ಬೆಳೆಯುತ್ತಾ ಹೋಗಿದ್ದಾರೆ.. ಅದನ್ನು ಓದಿದವರು ಅದನ್ನೇ ಪವಿತ್ರಗ್ರಂಥವೆಂದು ಇಂದಿಗೂ ನಂಬಿಬಿಟ್ಟಿದ್ದಾರೆ. ಅದರಾಚೆಗೆ ಬೆಳೆಯುವ ಪ್ರಯತ್ನವನ್ನೇ ಅವರು ಮಾಡಿಲ್ಲ. ತಾವೂ ಬೆಳೆಯಲಿಲ್ಲ,ಕರ್ನಾಟಕವನ್ನೂ ಬೆಳೆಯಲು ಬಿಡುತ್ತಿಲ್ಲ, ಬೊಳುವಾರರನ್ನು ಅಂದಿನ ದಿನಗಳಿಗೆ ಕಟ್ಟಿಹಾಕಲು ನೋಡುತ್ತಿದ್ದಾರೆ..... ಎಂದೆಲ್ಲ ಬರೆದಿದ್ದಾರೆ. ಇದನ್ನು ಮೋಹನ ಗೌಡ ಎನ್ನುವವರು ನನ್ನ ವಾಲ್ ಗೆ ಅಂಟಿಸಿದ್ದಾರೆ.
ಅವರ ಬಡಬಡಿಕೆ ಬಗ್ಗೆ ತೀರ್ಮಾನ ಕೈಗೊಳ್ಳುವ ಮೊದಲು ಬೊಳುವಾರು ಬರೆದಿದ್ದ ಲೇಖನದ ಕೆಲವು ಸಾಲುಗಳನ್ನು ಓದಿರಿ:
- ಕಾನೂನು ಶಾಸ್ತ್ರದಲ್ಲಿ ಅಪರಾಧ ಸಿದ್ದವಾಗುವ ತನಕ ಆರೋಪಿ ಅಪರಾಧಿಯೆನ್ನಿಸಲಾರ, ಆದರೆ ಭಾರತದಲ್ಲಿ ಆಕಸ್ಮಿಕವಾಗಿ ಹುಟ್ಟಿ ಬದುಕನ್ನು ಅನಿವಾರ್ಯವಾಗಿ ಎದುರಿಸಬೇಕಾಗಿರುವ ಪ್ರತಿಯೊಬ್ಬಮುಸ್ಲಿಮನೂ ತನ್ನ ನಿರಪರಾಧಿ ಸಾಬೀತಾಗುವ ತನಕ ಅಪರಾಧಿಯೇ ಆಗಿ ಉಳಿಯಬೇಕಾಗಿದೆ.
- ಮುಸ್ಲಿಮರು ಜನ್ಮತ: ಕ್ರೂರಿಗಳು, ಪ್ರತಿಯೊಂದು ಮನೆಯಲ್ಲೂ ಮಾರಕ ಆಯುಧಗಳಿವೆ, ಪ್ರತಿಯೊಂದು ಮಸೀದಿಯೂ ಶಸ್ತ್ರಾಗಾರ, ಮುಸ್ಲಿಮರೆಲ್ಲ ನಾಲ್ಕು ಮದುವೆಯಾಗಿ ನಲವತ್ತು ಮಕ್ಕಳನ್ನು ಹುಟ್ಟಿಸುತ್ತಾರಾದ್ದರಿಮದ ಅವರ ಜನಸಂಖ್ಯೆ ಅಧಿಕವಾಗುತ್ತದೆ. ಅವರು ಕುಟುಂಬ ಯೋಜನೆಗೆ ತಯಾರಾಗಿಲ್ಲ, ರಾಷ್ಟ್ರೀಯ ಜನಪ್ರವಾಹದೊಂದಿಗೆ ಬೆರೆಯುವುದಿಲ್ಲ. ಅವರು ಪಾಕಿಸ್ತಾನದ ಏಜಂಟರು. ಭಾರತ ಪಾಕಿಸ್ತಾನ ವಿರುದ್ಧ ಹಾಕಿಯಲ್ಲಿ ಸೋತಾಗ ರೇಡಿಯೋಗೆ ಹೂಮಾಲೆ ಹಾಕಿದರು ಇತ್ಯಾದಿ ಪುಟಗಟ್ಟಲೆ ಬರೆಯಬಹುದಾದ ಸಂದಿಗ್ದತೆಯಿಂದ ಭಾರತೀಯ ಮುಸ್ಲಿಮನು ಸಣ್ಣವನಾಗುವುದು ಅನಿವಾರ್ಯವಾಗಿದೆ.
- ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕಪಟ್ಟವೇರಿ ದವರೆಲ್ಲ ಮೇಲ್ವರ್ಗದಿಂದ ಬಂದವರು (ಅಂಬೇಡ್ಕರ್,ರಾಮ್ ಮೊದಲಾದವರು ಕೆಲವು ಅಪವಾದಗಳು, ಅಪವಾದಗಳು ವಾದವನ್ನು ಬಲಪಡಿಸುತ್ತದೆ). ಎಲ್ಲ ಕಾಲದಲ್ಲಿ ಮತ್ತು ಎಲ್ಲ ದೇಶಗಳಲ್ಲಿ ನಡೆದುಬಂದ ಸಂಪ್ರದಾಯ ಇದು. ರಾಜರುಗಳನ್ನು ಮೆಚ್ಚಿಕೊಳ್ಳುವವರು, ನೆಚ್ಚಿಕೊಳ್ಳುವವರು ಮತ್ತು ವಿರೋಧಿಸುವವರು ಕೂಡಾ ಮೇಲ್ವರ್ಗದಿಂದಲೇ ಬಂದವರಾಗಿರುತ್ತಾರೆ....ವಿದ್ಯೆ,ಬುದ್ದಿವಂತಿಕೆಗಳನ್ನು ತಮ್ಮ ಗುತ್ತಿಗೆಯನ್ನಾಗಿ ಮಾಡಿಕೊಳ್ಳುವ ಮೇಲ್ವರ್ಗದವರಿಗೆ ಯಾವುದೇ ಕಠಿಣ ಶ್ರಮ ಅಸಾಧ್ಯವಾಗಿರುವುದರಿಂದ ಅವರಿಗೆ ರಾಜಾಶ್ರಯ, ರಾಜನಂಟು, ಬದುಕಿನ ಅನಿವಾರ್ಯತೆಯೂ ಆಗಿರುತ್ತದೆ.
- ಭಾರತಕ್ಕೆ ಬ್ರಿಟಿಷರು ವ್ಯಾಪಾರಕ್ಕಾಗಿ (ಬ್ರಿಟಿಷರು ಭಾರತಕ್ಕೆ ವ್ಯಾಪಾರದ ನಿಮಿತ್ತ ಬಂದವರೆಂದೂ, ಮುಸ್ಲಿಮರು ಆಕ್ರಮಣ ಮಾಡಿದವರೆಂದೂ ಬರೆದಿರುವ ಚರಿತ್ರೆ ಪುಸ್ತಕಗಳನ್ನೇ ನಮ್ಮ ಮಕ್ಕಳು ಓದುತ್ತಿದ್ದಾರೆ) ಬಂದಾಗ ಅವರಿಗೆ ದುಂಬಾಲು ಬಿದ್ದು ಸರಕಾರಿ ಕೆಲಸಗಳನ್ನು ದಕ್ಕಿಸಿಕೊಂಡು ಐ ಎ ಎಸ್ ಆಗಿ ವಿದೇಶಗಳಲ್ಲಿ ತಮ್ಮ ಮಕ್ಕಳನ್ನು ಬಾರ್ ಅಟ್ ಲಾ ಓದಿಸಿದವರೂ ಭಾರತದೊಳಗೆ ಇಸ್ಲಾಂ ಆಕ್ರಮಣ ಮಾಡಿದಾಗ ಅವರ ಬೆನ್ನುಬಿದ್ದು ಪದವಿಯ ಆಸೆಗಾಗಿ ಮತಾಂತರಗೊಂಡು, ದಿವಾನರುಗಳಾಗಿ, ಜಮೀನ್ದಾರರಾಗಿ ಮೆರೆದವರೂ ಇದೇ ಮೇಲ್ವರ್ಗದ ಮಂದಿಗಳು ಮಾತ್ರ......
- ಭಾರತದ ಮುಸ್ಲಿಮರು ವಿಭಜನೆಯ ಪಿಂಡದ ಹೊರೆಯೊಂದಿಗೆ ಉಳಿಯಬೇಕೆಂದು ಬಯಸುವ ರಾಜಕೀಯ ಹಿಂದೂವಾದಿಗಳು ಚರಿತ್ರೆಯ ಪುಟಗಳನ್ನು ತಮ್ಮ ಕಣ್ಣಿನ ಅಳತೆಯಲ್ಲಿಯೇ ಓದುತ್ತಾ ಭಾಷ್ಯ ಬರೆಯುತ್ತಿದ್ದಾರೆ. ‘ಹಿಂದೂ’ ಎಂಬ ಪದವನ್ನು ಒಂದು ಜಾತಿಯ ಪದವಲ್ಲ, ಒಂದು ಪ್ರಾದೇಶಿಕ ಪದ ಎಂಬೀತ್ಯಾದಿ ಬರೆಯುತ್ತಾ ಎರಡು ಪ್ಯಾರಾ ಬರೆಯುವುದರಲ್ಲಿಯೇ ಗಲಿಬಿಲಿಗೊಂಡು ಗೊಂದಲದಲ್ಲಿಯೇ ಮುಕ್ತಾಯಗೊಳಿಸುತ್ತಾರೆ.
- ‘ನೀನು ಮಸೀದಿಗೆ ಹೋಗುವುದೇ ಇಲ್ವಾ?’ ಎಂಬ ಪ್ರಶ್ನೆಯಲ್ಲಿಯೇ ಖುಷಿಗೊಳ್ಳುವ ಗೆಳೆಯ ಗೋಪಾಲ ಅವನ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ಬಹಳ ಜೋಪಾನವಾಗಿ ತಂದುಕೊಡುತ್ತಾನೆ....’ಇಷ್ಟೆಲ್ಲ ಮಾತನಾಡುವ ನೀನು ನಿನ್ನ ತಾಯಿಯ ಹೆಣವನ್ನು ಮಸೀದಿಗೆ ಯಾಕೆ ಕೊಂಡುಹೋಗಿ ದಪನಮಾಡಿದೆ ಎಂದು ನನ್ನೊಡನೆ ಪ್ರಶ್ನಿಸಿದ ಸುರೇಶ ಕಿಣಿಯೊಡನೆ ‘ಮತ್ತೇನುಮಾಡಬೇಕು?’ ಎಂದು ಪ್ರಶ್ನಿಸಿದರೆ ಸ್ಮಶಾನದಲ್ಲಿ ಸುಡಬೇಕಿತ್ತು ಎನ್ನುತ್ತಾನೆ.
- ಮುಸ್ಲಿಮನು ರಾಷ್ಟ್ರೀಯವಾದಿ ಆಗುವುದೆಂದರೆ ‘ಹಿಂದು’ ಆಗುವುದುಮಾತ್ರ . ಇಂತಹ ಸಣ್ಣ ಯೋಚನೆಯ ಹಿಂದೂಗಳದ್ದೇ ದೊಡ್ಡ ಗುಂಪಾಗಿರುವುದರಿಂದಲೇ ದೇಶದ ಮುಸ್ಲಿಮರು ಮತ್ತಷ್ಟು ಜಾತಿಯವಾದಿಯಾಗುತ್ತಾರೆ. ಹತ್ತರಲ್ಲಿ ಹನ್ನೊಂದಾಗದಿದ್ದರೆ, ಎರಡು ಕಡೆಗಳಿಂದಲೂ ಉಗಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.
- ಗಜನಿ ವಿಗ್ರಹಗಳನ್ನು ಒಡೆದದ್ದು ಸೋಮನಾಥನ ಮೇಲಿನ ವೈರದಿಂದಲ್ಲ, ಅದರೊಳಗಿದ್ದ ಮಣಗಟ್ಟಲೆ ಬಂಗಾರವನ್ನು ದೋಚಲಿಕ್ಕಾಗಿ ಹಾಗೂ ಅಂದು ಗಜನಿಯ ಸೈನ್ಯದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರು ಎನ್ನುವುದು ಇತಿಹಾಸದ ನಿಜಸಂಗತಿಗಳು.
- ಇಷ್ಟೆಲ್ಲ ಹೇಳಿದ ಮಹಮದರು ಕೊನೆಗೆ ‘’ ರಾಷ್ಟ್ರೀಯ ಜನಪ್ರವಾಹದಿಂದ ಮುಸ್ಲಿಮರು ಹೊರಗುಳಿಯಬೇಕಾಗಿ ಬಂದಿರುವ ನಮ್ಮ ದೇಶದ ವ್ಯವಸ್ಥೆ ಬಗ್ಗೆ ವಸ್ತುನಿಷ್ಠ ಚರ್ಚೆ ನಡೆಸುವುದಕ್ಕೆ ಅನುಕೂಲವಾಗಬಲ್ಲ ಕೆಲವು ಪ್ರಾಮಾಣಿಕ ನಿಜಗಳನ್ನು ಹೇಳಲು ಪ್ರಯತ್ನಿಸಿದ್ದೇನೆ ಅಷ್ಟೆ. ಮುಂದಿನ ತಲೆಮಾರು ಕೂಡಾ ನಮ್ಮಂತೆ ಮೋಸ ಹೋಗದಿರಲು ನಾವೇನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಬೇಕು’’ ಎಂದು ಲೇಖನವನ್ನು ಕೊನೆಗೊಳಿಸುತ್ತಾರೆ.
ಪ್ರೇಮಶೇಖರ ಅವರೇ, ನಿಮ್ಮಲ್ಲಿ ಲೇಖನ ಇದ್ದರೆ ಮತ್ತೊಮ್ಮೆ ಓದಿ. ಯಾವುದು ಬದಲಾಗಿದೆ? ಮುಸ್ಲಿಮರನ್ನು ಹಿಂದುತ್ವವಾದಿಗಳು ನೋಡುವ ಯಾವ ದೃಷ್ಟಿ ಬದಲಾಗಿದೆ ಎಂದು ಒಂದೊಂದಾಗಿ ಹೇಳಿಬಿಡಿ. ನೀವಂತೂ ಬದಲಾಗಿದಂತೆ ಕಾಣುವುದಿಲ್ಲ. ಇನ್ನೂ ಪುರಾವೆಗಳು ಬೇಕಿದ್ದರೆ ನಿಮ್ಮ ನಾಯಕರುಗಳ ಭಾಷಣಗಳನ್ನು ಕೇಳಿ ಇಲ್ಲವೆ ನಿಮ್ಮ ಗುಂಪಿನ ಗೆಳೆಯರ ಫೇಸ್ ಬುಕ್ ವಾಲ್ಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಯಾವುದು ಬದಲಾಗಿದೆ?
ಹೌದು, ಆ ಲೇಖನದ ಲೇಖಕರು ಬದಲಾಗಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂಬ ಅನುಮಾನವನ್ನು ಗೆಳೆಯರು ವ್ಯಕ್ತಪಡಿಸುತ್ತಿರುವುದು ನಿಜ. ಅದಕ್ಕಲ್ಲವೇ ಈ ಚರ್ಚೆ ನಡೆಯುತ್ತಿರುವುದು. ಸೂಕ್ಷ್ಮವಾಗಿ ನೋಡಿದರೆ ಅಂತಹದ್ದೊಂದು ಸೂಚನೆ ಆ ಲೇಖನದಲ್ಲಿಯೂ ಕಾಣುತ್ತದೆ.

Friday, January 1, 2016

ಸ್ಪೂರ್ತಿಯಾಗುವ ಈ ಇಬ್ಬರು ಹೋರಾಟಗಾರರು

ಈ ಫೇಸ್ ಬುಕ್, ವಾಟ್ಸಪ್, ಭಾಷಣ, ಬರಹ, ಕೋಪ-ತಾಪ, ಜಗಳ...ಇವೆಲ್ಲ ಯಾಕೆ ಬೇಕು? ಸುಮ್ಮನೆ ನಮ್ಮ ಪಾಡಿಗೆ ನಾವು ಓದ್ಕೊಂಡು,ಬರ್ಕೊಂಡ್, ಪುಸ್ತಕ ಮಾರ್ಕೊಂಡು ಬೊಳುವಾರು ಅವರಂತೆ ಸುಖವಾಗಿ ಇರಬಾರದೇಕೆ ಎಂದು ನನಗೂ ಒಮ್ಮೊಮ್ಮೆ ಅನಿಸುವುದುಂಟು. ಆ ರೀತಿ ಯೋಚನೆ ಬಂದಾಗೆಲ್ಲ ನನ್ನ ಕಣ್ಣಮುಂದೆ ಮಂಗಳೂರಿನ ಇಬ್ಬರು ವ್ಯಕ್ತಿಗಳು ಕಾಣಿಸಿಕೊಳ್ಳುತ್ತಾರೆ. ಒಬ್ಬರು ಶ್ರೀನಿವಾಸ ಕಾರ್ಕಳ, ಇನ್ನೊಬ್ಬರು ಸುರೇಶ್ ಭಟ್ ಬಾಕ್ರಬೈಲು.
‘’ಮುಂಗಾರು’’ ದಿನಗಳಿಂದಲೂ ಪರಿಚಯದ ಶ್ರೀನಿವಾಸ್ ಆಗಿನ್ನೂ ಪಾದರಸದಂತೆ ಚುರುಕಾಗಿದ್ದ ಮತ್ತು ಸಿನೆಮಾ ನಟನಂತೆ ಸುಂದರವಾಗಿದ್ದ ಯುವಕ.(ಚಿತ್ರ ನೋಡಿ: ಈಗಲೂ ಅಷ್ಟೇ ಚಂದ ಇದ್ದಾರೆ) ಸಾಹಿತ್ಯ,ನಾಟಕ,ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀನಿವಾಸ್, ಸಣ್ಣ ಅಪಘಾತಕ್ಕೆ ಸಿಕ್ಕಿ ಕಳೆದ 18 ವರ್ಷಗಳಿಂದ ವೀಲ್ ಚೇರ್ ನಲ್ಲಿದ್ದಾರೆ. ಉದ್ಯೋಗವನ್ನೂ ಕಳೆದುಕೊಂಡು ಹೆತ್ತತಾಯಿಯಂತಹ ಹೆಂಡತಿಯ ಪಾಲನೆಯಲ್ಲಿ ಕಡು ಕಷ್ಟದಲ್ಲಿ ಬದುಕಿದ ಅವರನ್ನು ಅವರ ಕಷ್ಟಗಳ ಬಗ್ಗೆ ಕೇಳಲು ಕೂಡಾ ಮುಜುಗುರವಾಗುತ್ತದೆ.

ದೇಹ ವೀಲ್ ಚೇರ್ ಗೆ ಸೀಮಿತವಾಗಿದ್ದರೂ, ಪಡಬಾರದ ಕಷ್ಟಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದರೂ ಅವರ ಜೀವನಾಸಕ್ತಿ, ಸೈದ್ಧಾಂತಿಕ ಬದ್ದತೆ, ಸಾಮಾಜಿಕ ಕಳಕಳಿ ಮತ್ತು ಪ್ರತಿಭಟನೆಯ ಕೆಚ್ಚು ಒಂದಿನಿತೂ ಕುಂದಿಲ್ಲ. ಕೋಮುವಾದಿಗಳ ವಿರುದ್ಧದ ಅವರ ಹೋರಾಟ ನಿರಂತರ. "ಒಮ್ಮೆ ಇವರು ವೀಲ್ ಚೇರ್ ನಿಂದ ದಿಗ್ಗನೆ ಎದ್ದು ಯಕ್ಷಗಾನದ ಒಂದು ಧಿಗಣ ಹಾಕಬಾರದೇಕೆ?’ ಎಂದು ಎಷ್ಟೋ ಸಂದರ್ಭಗಳಲ್ಲಿ ಅವರೆದುರು ಕೂತಿದ್ದಾಗ ನನ್ನ ಒಳಮನಸ್ಸು ಚೀರಿದ್ದುಂಟು. ಆದರೆ ಶ್ರೀನಿವಾಸ ಕಾರ್ಕಳ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಅವರ ಮಾತುಗಳಲ್ಲಿ ಹತಾಶೆ,ನಿರಾಶೆ,ವೈರಾಗ್ಯ ಎಂದೂ ಇಣುಕಿಲ್ಲ. ಅವರ ದೇಹ ಗಾಲಿಕುರ್ಚಿಯ್ಲಲಿದ್ದರೂ ರೆಕ್ಕೆ ಕಟ್ಟಿಕೊಂಡ ಮನಸ್ಸು ಜಗತ್ತೆಲ್ಲ ವಿಹರಿಸುತ್ತಾ ಇರುತ್ತದೆ.
ಶ್ರೀನಿವಾಸ ಕಾರ್ಕಳ ಅವರ ನೆರೆಯಲ್ಲಿ ವಾಸ ಇರುವ ಸುರೇಶ್ ಭಟ್ ಬಾಕ್ರಬೈಲ್ ಇನ್ನೊಬ್ಬ ಕುತೂಹಲಕಾರಿ ವ್ಯಕ್ತಿ.. ಎಂಜನಿಯರಿಂಗ್ ಓದಿ ನಿವೃತ್ತಿಯಾಗುವ ವರೆಗೆ ದೇಶ-ವಿದೇಶದ ಸಂಸ್ಥೆಗಳಲ್ಲಿ ಕೆಲಸ ಮಾಡಿ, ಜಗತ್ತೆಲ್ಲ ಸುತ್ತಾಡಿದ್ದ ಸುರೇಶ್ ಭಟ್ 2006ರಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ.
ಕೋಮುವಾದದ ವಿರುದ್ಧದ ಅವರ ಹೋರಾಟ ಕೇವಲ ಮಾತಿನದ್ದಲ್ಲ, ಅಂತಹ ಹೋರಾಟದಲ್ಲಿ ತೊಡಗಿರುವವರಿಗೆಲ್ಲರ ಕೈಯ ಅಸ್ತ್ರವಾಗಬಲ್ಲ ಸಾಕ್ಷಿ ಪುರಾವೆಗಳ ಸಂಗ್ರಹ ಅವರಲ್ಲಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮುಗಲಭೆ ಮತ್ತು ಅನೈತಿಕ ಪೊಲೀಸ್ ಗಿರಿ, ಪಠ್ಯಪುಸ್ತಕಗಳ ಕೇಸರೀಕರಣ –ಇವುಗಳ ಬಗ್ಗೆ ಅವರಲ್ಲಿ ನಿಖರ ಮಾಹಿತಿಯ ಭಂಡಾರವೇ ಇದೆ. ಪತ್ರಿಕೆಗಳನ್ನು, ಓದುತ್ತಾ, ಬರೆಯುತ್ತಾ, ನ್ಯಾಯಾಲಯದಲ್ಲಿ ಹೋರಾಡುತ್ತಾ ಇರುವ 70 ವರ್ಷದ ಭಟ್ರಿಗೆ ಪ್ರಾಣ ಬೆದರಿಕೆ ಕರೆಗಳು ಸಾಮಾನ್ಯವಾಗಿಬಿಟ್ಟಿವೆ. ಇವರನ್ನು ಹೆದರಿಸಲು ಮಂಗಳೂರಿನ ಬೀದಿಯಲ್ಲಿ ಕೋಮುವಾದಿ ಪುಂಡರು ಮುಖಕ್ಕೆ ಸೆಗಣಿ ಕೂಡಾ ಬಳಿದಿದ್ದರು. ಇದಕ್ಕೆಲ್ಲ ಜಗ್ಗದ, ಕುಗ್ಗದ ಭಟ್ರು ‘ಸಾಯಿಸಲಿ, ಹುತಾತ್ಮನಾಗುತ್ತೇನೆ’ ಎಂದು ನಕ್ಕು ಸುಮ್ಮನಾಗುತ್ತಾರೆ.
ಸಾರ್ವಜನಿಕ ಬದುಕಿನ ಜಂಜಾಟಗಳಿಂದ ರೋಸಿಹೋಗಿ, ಇದರಿಂದೆಲ್ಲ ದೂರ ಸರಿದುಹೋಗಿ ಸುಖವಾಗಿ ಇರುವ’ ಎಂದು ಅನಿಸಿದಾಗೆಲ್ಲ ಈ ಇಬ್ಬರು ಹೋರಾಟಗಾರರು ನನ್ನ ಕಣ್ಣೆದುರು ಪ್ರತ್ಯಕ್ಷವಾಗಿ ನನ್ನ ಹೇಡಿತನವನ್ನು ಅಣಕಿಸಿದಂತಾಗುತ್ತದೆ.

Wednesday, December 30, 2015

'ನಾನವನಲ್ಲ, ನಾನವನಲ್ಲ'

'ನಾನವನಲ್ಲ, ನಾನವನಲ್ಲ' ಎಂದು ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ಕೂತು ಕಣ್ಣೀರು ಹಾಕುತ್ತಾ ,ಎದೆ ಬಡಿದುಕೊಳ್ಳುತ್ತಿದ್ದ ಪಡ್ಡೆ ಹುಡುಗನೊಬ್ಬನ್ನನ್ನು ದಾರಿಹೋಕನೊಬ್ಬ ಕೇಳಿದನಂತೆ:
'ಮತ್ತೆ ನೀನು ಯಾರು?
ನಾನು 'ರೋತಾ'
'ರೋತಾ'?

'ಹೌದು, ಹಿ..ಹಿ... ಎನ್ನುವುದನ್ನೇ ಇತ್ತೀಚೆಗೆ ಮರೆತುಬಿಟ್ಟಿದ್ದೇನೆ'' ಎಂದನಂತೆ ಪಡ್ಡೆಹುಡುಗ.

Sunday, December 27, 2015

ಸಾಮಾಜಿಕ ಜಾಲತಾಣ ಮತ್ತು `ಭಕ್ತ'ರು

ಕುವೆಂಪು ವಿಶ್ವವಿದ್ಯಾಲಯದಲ್ಲಿದ್ದ ಪ್ರೊ. ಬಾಲಗಂಗಾಧರ್ ಕೃಪಾಪೋಷಿತ ಸಿಎಸ್ಎಲ್ ಸಿ ಮುಚ್ಚಲಾಯಿತು, ಕಾಮಿ ಸ್ವಾಮಿಯೊಬ್ಬನಿಂದ ಪೀಡಿತರಾದ ಹೆಣ್ಣುಮಕ್ಕಳು ಪೊಲೀಸರಿಗೆ ದೂರು ಕೊಟ್ಟರು, ಮೂಢನಂಬಿಕೆ ನಿಷೇಧ ಕಾಯಿದೆಗೆ ಒತ್ತಾಯಿಸಿ ಜಾಥಾ ನಡೆಯಿತು, ಡಾ.ಕಲಬುರ್ಗಿ ಹತ್ಯೆಯನ್ನು ಖಂಡಿಸಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಯಿತು, ಅಸಹಿಷ್ಣುತೆಯನ್ನು ವಿರೋಧಿಸಿ ಸಾಹಿತಿಗಳು ಪ್ರಶಸ್ತಿ ವಾಪಾಸು ಮಾಡಿದರು ಮತ್ತು ಸಹಮನಸ್ಕರು ಅವರನ್ನು ಬೆಂಬಲಿಸಿ ಸಭೆ ನಡೆಸಿದರು, ಟೌನ್ ಹಾಲ್ ಮುಂದೆ ಯಾರೋ ಬೀಫ್ ತಿಂದರು, ಮುಖ್ಯಮಂತ್ರಿಗಳು ‘ನಾನು ಬೀಪ್ ತಿಂದರೆ ಕೇಳಲು ನೀವು ಯಾರು’ ಎಂದು ಪ್ರಶ್ನಿಸಿದರು, ಮಂಗಳೂರಿನಲ್ಲಿ ಸಮಾನಮನಸ್ಕ ಯುವಕ-ಯುವತಿಯರು ಕೂಡಿ ಜನನುಡಿ ನಡೆಸಿದರು. ಮಂಗಳೂರಿನ ಹೋರಾಟಗಾರ್ತಿ ವಿದ್ಯಾ ದಿನಕರ್ ‘ದಿಲ್ ವಾಲೆ’ ಚಿತ್ರಪ್ರದರ್ಶನವನ್ನು
ಬಲತ್ಕಾರವಾಗಿ ತಡೆಹಿಡಿದಿದ್ದನ್ನು ವಿರೋಧಿಸಿ ಪೊಲೀಸರಿಗೆ ದೂರು ಕೊಟ್ಟರು, ಇದೇಕಾರಣಕ್ಕೆ ಅವರ ಮೇಲೆ ಫೇಸ್ ಬುಕ್ ನಲ್ಲಿ ಅಶ್ಲೀಲ ಮಾತುಗಳ ಮೂಲಕ ವಾಗ್ದಾಳಿ ನಡೆದಾಗ ವಿದ್ಯಾ ಇನ್ನೊಂದು ದೂರು ಕೊಟ್ಟರು, ಅವರನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ನಿರಂತರ ಪ್ರಚಾರ ನಡೆಯಿತು. ಇವೆಲ್ಲದರ ಹಿಂದೆ ಇರುವ ವ್ಯಕ್ತಿ ಯಾರು ಗೊತ್ತೇ? ಅದೇ ಕಾಣೆ ಮೀನು ತಿನ್ನುವ ನಾನು. ಸಾಕ್ಷಿ ಬೇಕಿದ್ದರೆ ಫೇಸ್ ಬುಕ್ ನಲ್ಲಿ ಈ ‘ಭಕ್ತ’ ರ ಸ್ಟೇಟಸ್ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತಿರುವ ‘ಹುಚ್ಚ ವೆಂಕಟ್’ ಗಳ ಪ್ರತಿಕ್ರಿಯೆ ನೋಡಿ.
ಮೇಲೆ ಉಲ್ಲೇಖಿಸಿರುವ ಎಲ್ಲ ಘಟನೆಗಳನ್ನು ಹೃತ್ಪೂರ್ವಕವಾಗಿ ನಾನು ಬೆಂಬಲಿಸುತ್ತೇನೆ, ಇವುಗಳ ಸೂತ್ರಧಾರ ನಾನೇ ಆಗಿದ್ದರೆ ನನ್ನ ಜನ್ಮ ಪಾವನವಾಗುತ್ತಿತ್ತು. ಸುಮ್ಮನೆ ಬಾಯಿಮುಚ್ಚಿಕೊಂಡು ಈ ಎಲ್ಲ ಸಾಧನೆಗಳ ಗರಿಯನ್ನು ನಾನೇ ಯಾಕೆ ಮುಡಿದುಕೊಳ್ಳಬಾರದು ಎಂದು ಕೂಡಾ ಒಮ್ಮೊಮ್ಮೆ ಅನಿಸುತ್ತದೆ. ಆದರೆ ಒಳಗಿಂದ ಪ್ರಶ್ನಿಸುತ್ತಿರುವ ಆತ್ಮಸಾಕ್ಷಿಗೆ ಸತ್ಯ ಹೇಳಬೇಕಲ್ಲಾ?
ಸಿಎಸ್ ಎಲ್ ಸಿ ಮುಚ್ಚಲು ದೊಡ್ಡ ಹೋರಾಟವೇ ನಡೆದಿದೆ, ಹಲವಾರು ಹಿರಿಯರು, ಯುವಕರು ಇದಕ್ಕಾಗಿ ಪಡಬಾರದ ಕಷ್ಟ ಪಟ್ಟಿದ್ದಾರೆ, ನಾನಾ ಬಗೆಯ ಕಿರುಕುಳಗಳನ್ನು ಎದುರಿಸಿದ್ದಾರೆ. ಕೊನೆಗೂ ಯಶಸ್ವಿಯಾಗಿದ್ದಾರೆ. ಅದೇ ರೀತಿ ಟೌನ್ ಹಾಲ್ ಮುಂದಿನ ಪ್ರತಿಭಟನೆಗಳಿರಲಿ, ಮಂಗಳೂರಿನಲ್ಲಿ ನಡೆದ ಜನನುಡಿಯಿರಲಿ ಇಲ್ಲವೇ ಇನ್ಯಾವುದೋ ಹೋರಾಟ ಇರಲಿ ಇದರ ಹಿಂದೆ ಕೂಡಾ ಸಮಾಜದಲ್ಲಿ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಬೇಕೆಂಬ ಬದ್ದತೆಯ ಜತೆಯಲ್ಲಿ ಅನ್ಯಾಯಕ್ಕೊಳಗಾದವರಿಗೆ-ನೆರವಾಗಬೇಕೆಂಬ ಕಾಳಜಿಯ ನೂರಾರು ಯುವಕ-ಯುವತಿಯರ ಶ್ರಮವಿದೆ. ಮುನೀರ್,ಅನಂತನಾಯಕ್, ನವೀನ್, ಭಾಸ್ಕರಪ್ರಸಾದ್, ದಿನೇಶ್ ಕುಮಾರ್, ದಯಾನಂದ್, ಹರ್ಷ, ಶ್ರೀಧರ್ ಪ್ರಭು, ಶ್ರೀನಿವಾಸ್,ಪ್ರಭಾ, ಅಕ್ಷತಾ, ಸುಭಾಷ್, ಕಿರಣ್ , ಚೇತನಾ, ಬಸವರಾಜ್, ಇರ್ಷಾದ್, ಪ್ರಶಾಂತ್, ಲಿಂಗರಾಜು, ಮೊದಲಾದವರು ಬದುಕಿನಲ್ಲಿ ಅನ್ಯಾಯ-ಅಕ್ರಮಗಳ ಬಗ್ಗೆ ರಾಜೀ ಮಾಡಿಕೊಳ್ಳದೆ ಇದೇಕಾರಣಕ್ಕೆ ಸಮಾಜದಲ್ಲಿ ಬಲಾಢ್ಯರೆನಿಸಿಕೊಂಡವರನ್ನು ಎದುರುಹಾಕಿಕೊಂಡವರು. ನವೀನ್ ಹೇಳಿರುವ ಹಾಗೆ ಎಸ್ ಇ ಝಡ್ ಮತ್ತು ರಿಯಲ್ ಎಸ್ಟೇಟ್ ಮಾಫಿಯಾ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ ವಿದ್ಯಾ ದಿನಕರ್ ಇಲ್ಲದೆ ಇದ್ದರೆ ಮಂಗಳೂರು ಭೋಪಾಲ್ ಆಗುತ್ತಿತ್ತು. ಮುನೀರ್ ಗೆ ಇರುವ ಪ್ರಾಣಬೆದರಿಕೆ ಬಗ್ಗೆ ನಮಗೆಲ್ಲರಿಗೂ ಆತಂಕವಿದೆ.
ಈ ಯುವ ಹೋರಾಟಗಾರರ ಮುಂದೆ ನಾನು ಏನೂ ಅಲ್ಲ. ನಾನಿದ್ದರೂ, ಇಲ್ಲದೆ ಇದ್ದಿದ್ದರೂ ಇವರ ಹೋರಾಟ ಈಗಿನಂತೆಯೇ ಮುಂದುವರಿಯುತ್ತಿತ್ತು. ನನ್ನ ಬಲ-ಬೆಂಬಲದ ಅಗತ್ಯ ಇವರಿಗಿಲ್ಲ. ಈ ಯುವಕ-ಯುವತಿಯರು ನಡೆಸುವ ಹಲವಾರು ಸಾಹಸಗಳ ಬಗ್ಗೆ ನನಗೆ ಗೊತ್ತೇ ಇರುವುದಿಲ್ಲ. ಈ ನನ್ನ ಮಾತುಗಳು ಪಲಾಯನವಾದವೆಂದು ತಿಳಿದುಕೊಳ್ಳಬಾರದೆಂಬ ಕಾರಣಕ್ಕಾಗಿ ಮಾತ್ರ ಈ ಕೊನೆ ಮಾತು: ಈ ಯುವ ಹೋರಾಟಗಾರರಿಗೆ ನನ್ನ ಸಂಪೂರ್ಣ ಬೆಂಬಲ ಇದೆ, ಅವರ ಮೇಲೆ ಭರವಸೆಯೂ ಇದೆ. ಕಷ್ಟದ ಸಮಯದಲ್ಲಿ ಇವರ ಹಿಂದೆ ಅಲ್ಲ, ಮುಂದೆ ಇರುತ್ತೇನೆ. ಇದಕ್ಕಾಗಿ ಯಾವ ಬೆಲೆ ತೆರಲೂ ಕೂಡಾ ಸಿದ್ದನಿದ್ದೇನೆ. ಬದುಕಿನಲ್ಲಿ ಕಳೆದುಕೊಳ್ಳಲು ಹೆದರುವಷ್ಟು ಯಾವುದೂ ದೊಡ್ಡದಿರುವುದಿಲ್ಲ.

Friday, December 25, 2015

ವಿದ್ಯಾ ದಿನಕರ್ ಮತ್ತು ಒಂದಷ್ಟು ಧರ್ಮಾಂಧ ಯುವಕರು

ವಿದ್ಯಾ ದಿನಕರ್ ಅವರನ್ನು ಒಂದಷ್ಟು ಧರ್ಮಾಂಧ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ಕಂಡಾಗ ತಪ್ಪು ನಮ್ಮದ್ದಲ್ಲದಿದ್ದರೂ ಗಂಡೆಂದು ಹೇಳಿಕೊಳ್ಳಲು, ಪರಿಚಯವಿರುವ ಹೆಣ್ಣು ಮಕ್ಕಳ ಎದುರು ಕೂಡಾ ತಲೆಎತ್ತಲು ನಮಗೆ ಮುಜುಗರವಾಗುತ್ತಿರುವುದು ನಿಜ. ಆದರೆ ಇಂದು ಮಂಗಳೂರಿನಲ್ಲಿ ವಿದ್ಯಾ ದಿನಕರ್ ಅವರ ಮನೆಯಲ್ಲಿ ಇಬ್ಬರು ಗಂಡಸರನ್ನು ಭೇಟಿಯಾದ ನಂತರ ಗಂಡಾಗಿ ಹುಟ್ಟಿರುವ ಬಗ್ಗೆ ಹೆಮ್ಮೆ ಅನಿಸಿತು. ನಿಜಹೇಳಬೇಕೆಂದರೆ ವಿದ್ಯಾ ಅವರ ನಿಜವಾದ ಶಕ್ತಿಯೇ ಈ ಇಬ್ಬರು ಗಂಡಸರು. ಈ ಇಬ್ಬರಲ್ಲಿ ಒಬ್ಬರು ೮೪ ವರ್ಷದ ತಂದೆ,ಇನ್ನೊಬ್ಬರು ಹೆಂಡತಿಯನ್ನು ಮಗುವಿನಂತೆ ನೋಡಿಕೊಳ್ಳುತ್ತಿರುವ ಗಂಡ ನಟೇಶ್. ಮಗಳು ರೈಲಿನಲ್ಲಿ ಬಂದಿಳಿದಾಗ ಈ ಇಳಿವಯಸ್ಸಿನಲ್ಲಿಯೂ ತಾನೇ ಡ್ರೈವ್ ಮಾಡಿಕೊಂಡು ಬಂದು ಮನೆಗೆ ಕರೆದೊಯ್ಯುತ್ತಾರೆ ಈ ತಂದೆ.
ಅಷ್ಟೊಂದು ಪ್ರೀತಿ ವಿದ್ಯಾಳ ಮೇಲೆ.ಈ ತಂದೆಗೆ ಇನ್ನೂ ಮಗಳ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಅವಹೇಳನಕಾರಿಯಾದ ದಾಳಿ ಬಗ್ಗೆ ತಿಳಿದಿಲ್ಲ. ತಿಳಿದಿದ್ದರೆ ಆ ವಯಸ್ಸಾದ ತಂದೆತಾಯಿ ಎಷ್ಟು ನೊಂದುಕೊಳ್ಳುತ್ತಿದ್ದರೇನೋ? ನಟೇಶ್ ಗೆ ಎಲ್ಲವೂ ಗೊತ್ತು. ವಿದ್ಯಾರಿಗೆ ಪ್ರಾಣ ಬೆದರಿಕೆ ಇದೇ ಮೊದಲ ಸಲವೇನಲ್ಲ.ಸಾಮಾನ್ಯ ಗಂಡಾಗಿದ್ದರೆ ಊರಿನ ಉಸಾಬರಿ ಯಾಕೆ ಎಂದು ಹೆಂಡತಿಗೆ ಗದರಿಸುತ್ತಿದ್ದರೇನೋ. ಆದರೆ ನಟೇಶ್ ವಿದ್ಯಾ ಅವರ ಹೆಜ್ಜೆ ಜತೆ ಹೆಜ್ಜೆ ಹಾಕಿ ಜತೆಯಲ್ಲಿ ನಿಂತಿದ್ದಾರೆ. ಈ ಕುಟುಂಬವನ್ನು ನೋಡಿದಾಗ ಎಲ್ಲ ಹೆಣ್ಣುಮಕ್ಕಳಿಗೆ ಇಂತಹ ತಂದೆ ಮತ್ತು ಗಂಡ ಸಿಕ್ಕಿಬಿಟ್ಟರೆ ನಮ್ಮಲ್ಲಿ ಎಷ್ಟು ಮಂದಿ ವಿದ್ಯಾ ದಿನಕರ್ ಗಳು ಹುಟ್ಟಿಕೊಳ್ಳುತ್ತಿದ್ದರೇನೋ ಎಂದು ಅನಿಸಿದ್ದು ನಿಜ. ಕೆಟ್ಟ ಗಂಡಸರಿಗೆ ಶಾಪಹಾಕುವ ಜತೆಯಲ್ಲಿ ಗಂಡುಜಾತಿ ಹೆಮ್ಮೆ ಪಡುವ ಈ ಇಬ್ಬರು ಗಂಡಸರಿಗೆ ನಿಮ್ಮದೊಂದು ಶುಭಹಾರೈಕೆ ಇರಲಿ.

Thursday, October 8, 2015

ಸಮಾಜ ಸುಧಾರಕರು ನಮಗೆ ಆದರ್ಶವಾಗಲಿ

ಚೇತನಾ ತೀರ್ಥಹಳ್ಳಿ ಅವರ ಪೂರ್ವಾಶ್ರಮಕ್ಕೆ ಸಂಬಂಧಿಸಿದಂತೆ ನನಗೆ ಕೆಲವು ಭಿನ್ನಾಭಿಪ್ರಾಯಗಳಿವೆ. ಅವರು ಅಲ್ಲಲ್ಲಿ ಮತ್ತೆ ಮತ್ತೆ ನನ್ನನ್ನು ಕುಟುಕಿದ್ದಾಗ ನಾನು ಖಾರವಾಗಿ ಪ್ರತಿಕ್ರಿಯಿಸಿದ್ದೆ ಕೂಡಾ. ಇತ್ತೀಚೆಗೆ ನಮ್ಮವರು ನಡೆಸಿದ ಪ್ರತಿಭಟನೆಯಲ್ಲಿ ಅವರ ಮುಖ ಕಾಣಿಸಿಕೊಂಡಾಗ ಅದನ್ನು ಪ್ರಶ್ನಿಸಿದ್ದು ಕೂಡಾ ಹೌದು. ಅದಕ್ಕೆ ಅವರು ದೀರ್ಘವಾದ ಪತ್ರ ಬರೆದು ಸ್ಪಷ್ಟೀಕರಣ ನೀಡಿದ್ದಾರೆ. ಇಷ್ಟು ಮಾತ್ರಕ್ಕೆ ಅವರ ಜತೆಗಿನ ಭಿನ್ನಾಭಿಪ್ರಾಯಗಳೆಲ್ಲವೂ ಕೊನೆಗೊಂಡಿದೆ ಎಂದು ಹೇಳಲಾರೆ.ಆದರೆ ಈ ಹೆಣ್ಣಿನ ಮೇಲೆ ಕೆಲವು ಹುಚ್ಚುನಾಯಿಗಳ ಬುದ್ದಿಯವರು ಅಶ್ಲೀಲ,ಅವಾಚ್ಯ ಶಬ್ದಗಳಿಂದ ನಡೆಸುತ್ತಿರುವ ದಾಳಿಯನ್ನು ನೋಡಿದಾಗ ಎಲ್ಲ ಬಗೆಯ ಭಿನ್ನಾಭಿಪ್ರಾಯಗಳನ್ನು ಮೀರಿ ನನ್ನ ಮನಸ್ಸು ಸಿಟ್ಟಾಗುತ್ತಿದೆ, ಮರುಗುತ್ತಿದೆ. ಇಂತಹದ್ದೊಂದು ಸ್ಪಂದನ ನಮ್ಮಲ್ಲಿ ಹುಟ್ಟಿಕೊಳ್ಳದಿದ್ದರೆ ನಾವು ಮನುಷ್ಯರಾಗುವುದಿಲ್ಲ, ಅವರಂತೆ ಅಮಾನುಷರಾಗುತ್ತೇವೆ.
ತಮ್ಮ ಮಾನ, ಘನತೆ, ಗೌರವಗಳನ್ನು ಕಾಪಾಡಿಕೊಳ್ಳಲು ಚೇತನಾ ತೀರ್ಥಹಳ್ಳಿಯವರು ನಡೆಸುವ ಹೋರಾಟವನ್ನು ನಾವೆಲ್ಲರೂ ಬೆಂಬಲಿಸುವ, ನಾನೂ ಬೆಂಬಲಿಸುತ್ತೇನೆ.
ಇದೇ ವೇಳೆ ನನ್ನ ಸ್ನೇಹಿತರಲ್ಲಿ ಸವಿನಯ ವಿನಂತಿ. ನಾವು ಅವರಾಗುವುದು ಬೇಡ. ಎಲ್ಲವನ್ನು ಪ್ರೇಮಪೂರ್ಣ ಜ್ಞಾನದ ಮೂಲಕವೇ ಗೆದ್ದ ಬುದ್ದ, ವಿರೋಧಿಗಳನ್ನು ತರ್ಕಬದ್ಧ ಪಾಂಡಿತ್ಯದಿಂದ ಗೆದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಇದೇ ದಾರಿಯಲ್ಲಿ ನಡೆದು ನಮ್ಮ ಮುನ್ನಡೆಗೆ ದಾರಿ ತೋರಿದ ಸಮಾಜ ಸುಧಾರಕರು ನಮಗೆ ಆದರ್ಶವಾಗಲಿ. ನಮ್ಮ ಸಿಟ್ಟನ್ನು ಹೊರಗೆ ಕಾರಿ ಬೆಂಕಿ ಮಾಡುವುದು ಬೇಡ. ಅದನ್ನು ನಮ್ಮೊಳಗೆ ಮಾಗಲು ಬಿಟ್ಟು ನಮ್ಮ ಶಕ್ತಿಯನ್ನಾಗಿ ಮಾಡಿಕೊಳ್ಳುವ, ಬೆಳಕನ್ನಾಗಿ ಮಾಡುವ.

ನಂಬಿ, ಇತಿಹಾಸ ಕೂಡಾ ನಮ್ಮದೇ ಭವಿಷ್ಯ ಕೂಡಾ ನಮ್ಮದೇ. ಈ ವಕ್ರಬುದ್ದಿಗೇಡಿಗಳು, ಸುಳ್ಳುಬೆಲೆಗೇಡಿಗಳೆಲ್ಲ ಇತಿಹಾಸದ ಚಾಪೆಯಡಿ ಸಿಕ್ಕಿ ನಾಶವಾಗುವ ಹುಳುಗಳು ಅಷ್ಟೇ.

Monday, August 31, 2015

ಕಲ್ಬುರ್ಗಿ ಆಯ್ತು, ಮುಂದಿನ ಗುಂಡು ಯಾರ ತಲೆಗೆ ..

ಕಲ್ಬುರ್ಗಿ ಆಯ್ತು, ಮುಂದಿನ ಗುಂಡು ಯಾರ ತಲೆಗೆ ಎನ್ನುವ ಬಗ್ಗೆ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಪ್ರಾರಂಭವಾಗಿದೆ. ನಮ್ಮ ಸ್ನೇಹಿತರೇ ಮಾಡಿರುವ ಪಟ್ಟಿಯಲ್ಲಿ ನನ್ನ ಹೆಸರೂ ಇದೆ.ಬಲಿಪಶುಗಳ ಸಾಲಿನಲ್ಲಿ ನಾನು ಹಿಂದೆ ಇದ್ದೇನೆ ನನಗಿಂತ ಮುಂದೆ ಹಲವರಿದ್ದಾರೆ, ನನ್ನ ನಂಬರ್ ಶೀಘ್ರದಲ್ಲಿ ಬರಲಾರದೆಂದು ಇಲ್ಲಿಯ ವರೆಗೆ ನಿಶ್ಚಿಂತೆಯಾಗಿದ್ದೆ.

ಯಾಕೆಂದರೆ ಇತ್ತೀಚಿನ ಸಂಘಿಗಳ ಜತೆಗಿನ ವಾದ-ವಿವಾದ, ಹಲ್ಲೆ ಪ್ರಯತ್ನ, ಬೆದರಿಕೆ, ಸೋಷಿಯಲ್ ಮೀಡಿಯಾದಲ್ಲಿನ ಹೇಟ್ ಕ್ಯಾಂಪೇನ್ ಇವುಗಳೆಲ್ಲದರ ಆಧಾರದಲ್ಲಿ ಸಂಭವನೀಯ ಬಲಿಪಶುಗಳ ಪಟ್ಟಿ ಮಾಡುವುದಾದರೆ ಕ್ರಮವಾಗಿ ಭಗವಾನ್, ಬಂಜಗೆರೆ, ಯೋಗೇಶ್ ಮಾಸ್ತರ್, ಗೌರಿ ಲಂಕೇಶ್, ವಿಮಲಾ, ಮುನೀರ್ ಮೊದಲಾದವರಿದ್ದಾರೆ. ನನ್ನದ್ದೇನಿದ್ದರೂ ನಂತರದ ಸ್ಥಾನ ಎಂದು ನಾನು ನಂಬಿದ್ದೆ. ಇತ್ತೀಚೆಗೆ ಕಲ್ಬುರ್ಗಿಯವರೂ ಕೋಮುವಾದಿಗಳನ್ನು ಕೆರಳಿಸುವಂತಹದ್ದೇನನ್ನೂ ಮಾಡದೆ ಇರುವುದರಿಂದ ಅವರು ಬಲಿಪಶುಗಳ ಸಾಲಿನಲ್ಲಿ ಇನ್ನೂ ಹಿಂದೆ ಇದ್ದಾರೆ ಎಂದು ತಿಳಿದುಕೊಂಡಿದ್ದೆ.
ಆದರೆ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿರುವ ಅಭಿಪ್ರಾಯದಂತೆ ಕಲ್ಬುರ್ಗಿಯವರನ್ನು ಕೋಮುವಾದಿ ಹಂತಕರೇ ಹತ್ಯೆ ಮಾಡಿದ್ದರೆ ಅವರು ಸರತಿಯ ಸಾಲನ್ನು ಮುರಿದು ಮಾಡಿದ್ದಾರೆ ಎಂದಾಗುತ್ತದೆ. ಆದ್ದರಿಂದ ಗುಂಡು ಯಾರ ತಲೆಗೂ ಬೀಳಬಹುದು. ನನ್ನ ತಲೆಗೆ ಗುಂಡು ಬಿದ್ದರೆ ರಕ್ಷಣೆಗೆ ಕೂದಲೂ ಇಲ್ಲದಿರುವುದು ನನ್ನನ್ನು ಇನ್ನೂ Vulnerable ಮಾಡಿದೆ. ಭಯದಿಂದ ಗಡಗಡಗಡ ನಡುಗುತ್ತಿದ್ದೇನೆ

Friday, July 3, 2015

ಭಸ್ಮಾಸುರರನ್ನು ಸೃಷ್ಟಿಸುವುದು ಸುಲಭ ನಿಯಂತ್ರಿಸುವುದು ಕಷ್ಟ

ಘಟನೆ-1
ನಾನಿನ್ನೂ ಆರನೇ ತರಗತಿ ವಿದ್ಯಾರ್ಥಿ, ಉಡುಪಿ ತಾಲ್ಲೂಕಿನ ಹೆಜಮಾಡಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ.ಮುಂಬೈ ನೆಲದಿಂದ ನನ್ನನ್ನು ಕಿತ್ತು ತಂದು ಅಲ್ಲಿ ನೆಟ್ಟಿದ್ದರು. ಇನ್ನೂ ಬೇರು ಬಿಟ್ಟಿರಲಿಲ್ಲ, ಹೊಂದಿಕೊಳ್ಳಲು ಹೆಣಗಾಡುತ್ತಿದ್ದ ಕಾಲ.ಮುಂಬೈನಿಂದ ಬಂದವ ಎನ್ನುವ ಕಾರಣಕ್ಕೆ ನನ್ನ ಸಹಪಾಠಿಗಳ ಒಂದು ಗುಂಪು ನನ್ನನ್ನು ಗೋಳಾಡಿಸುತ್ತಿತ್ತು. ಅವರ ಪ್ರಮುಖ ಅಸ್ತ್ರವೆಂದರೆ ಅಶ್ಲೀಲ ಬೈಗುಳು. ಕುಂಡದ ಹೂವಿನಂತೆ ಬೆಳೆದಿದ್ದ ನಾನು ಅಲ್ಲಿಯವರೆಗೆ ಅಂತಹ ಬೈಗುಳಗಳನ್ನೇ ಕೇಳಿರಲಿಲ್ಲ. ಯಾರಿಗೂ ಹೇಳಿಕೊಳ್ಳಲಾಗದೆ ಖಿನ್ನತೆಗೊಳಗಾಗಿದ್ದ ನಾನು ಬಿಡುಗಡೆಯ ದಾರಿ ಎಂಬಂತೆ ವಾಪಸು ಕೊಡಲು ನಿರ್ಧರಿಸಿದೆ. ಅವರು ಹೇಳುತ್ತಿರುವ ಬೈಗುಳಗಳನ್ನೆಲ್ಲ ನೋಟ್ ಬುಕ್ ನಲ್ಲಿ ಬರೆದುಕೊಳ್ಳತೊಡಗಿದೆ. (ಹಳ್ಳಿ ಹುಡುಗರ ಬೈಗುಳು ಬಹಳ ಕ್ರಿಯೇಟಿವ್ ಆಗಿರುತ್ತೆ. ಅವುಗಳನ್ನೆಲ್ಲ ಇಲ್ಲಿ ಬರೆಯಲಾರೆ). ಆ ನೋಟ್ಸ್ ಇಟ್ಟುಕೊಂಡು ಹೊಸ ಬೈಗುಳಗಳನ್ನು ನಾನೇ ಸೃಷ್ಟಿ ಮಾಡತೊಡಗಿದೆ. (ಬಹುಷ: ನನ್ನ ಬರವಣಿಗೆಯ ಹವ್ಯಾಸ ಅಲ್ಲಿಂದಲೇ ಪ್ರಾರಂಭವಾಗಿರಬಹುದೇನೋ). ಸಂಪೂರ್ಣ ಸನ್ನದ್ಧನಾದ ನಂತರ ಧೈರ್ಯ ತಂದುಕೊಂಡು ನನಗೆ ಬೈದವರನ್ನು ಕೆಣಕಿ ಕೆಣಕಿ ನಾನೇ ಬೈಯ್ಯತೊಡಗಿದೆ. ಬೈಯ್ಯುತಾ ಹೋದಂತೆ ನನ್ನ ಬೈಗುಳ ಶಬ್ದಕೋಶ ಯಾವ ಪರಿಯಲ್ಲಿ ಬೆಳೆಯಿತೆಂದರೆ ಶಾಲೆಯಲ್ಲಿ ಅತ್ಯಂತ ಕೆಟ್ಟದಾಗಿ ಬೈಯ್ಯುವವರು ಯಾರೆಂದರೆ ಎಲ್ಲರೂ ನನ್ನ ಕಡೆ ತೋರಿಸುತ್ತಿದ್ದರು. ಪ್ರೈಮರಿ ಶಾಲೆ ಬಿಡುವ ಹೊತ್ತಿಗೆ ಆ ಹವ್ಯಾಸವನ್ನು ಬಿಟ್ಟುಬಿಟ್ಟೆ. ಅಷ್ಟರಲ್ಲಿ ನನಗೆ ಬೈಯ್ಯುತ್ತಿದ್ದವರೆಲ್ಲ ನನ್ನ ಗೆಳೆಯರಾಗಿಬಿಟ್ಟಿದ್ದರು.

ಘಟನೆ-2
ವಿವೇಕಾನಂದರ ಕುರಿತ ನನ್ನ ವಿವಾದಾತ್ಮಕ ಅಂಕಣ ಪ್ರಕಟವಾಗಿದ್ದ ಕಾಲ. ಅದು ಪ್ರಕಟವಾದ ದಿನದ ಬೆಳಿಗ್ಗೆ ಎಂಟರಿಂದ ಹೆಚ್ಚು ಕಡಿಮೆ ಮೂರು ದಿನಗಳ ಕಾಲ ನನ್ನ ಮೊಬೈಲ್ ರಿಂಗ್ ಆಗುವುದು ನಿಂತಿರಲಿಲ್ಲ. ಆಫ್ ಮಾಡಿಟ್ಟ ಮೊಬೈಲ್ ಅನ್ನು ರಾತ್ರಿ ಹನ್ನೆರಡು ಗಂಟೆಗೆ ಆನ್ ಮಾಡಿದರೂ ಯಾರಾದರೊಬ್ಬ ಕಾಲ್ ಮಾಡಿ ಬೈಯ್ಯುವವ. ಅಕ್ಕ, ಅಣ್ಣ, ಅಪ್ಪ, ಅಮ್ಮ, ಹೆಂಡತಿ,ಮಗಳು ಎಲ್ಲರನ್ನೂ ಸೇರಿಸಿ ಅಶ್ಲೀಲವಾಗಿ ಬೈಯ್ಯುತ್ತಿದ್ದರು. ಸಹಿಸಿಕೊಳ್ಳಲಿಕ್ಕಾಗದಂತಹ ಬೈಗುಳು. ಬೈಯ್ಯುತ್ತಿದ್ದವರೆಲ್ಲರೂ ಸಂಸ್ಕೃತಿ ಪ್ರಚಾರಕರು. ರೆಗ್ಯುಲರ್ ಆಗಿ ಈ ರೀತಿ ಕಾಲ್ ಮಾಡುತ್ತಿದ್ದ ಕೆಲವರ ನಂಬರ್ ಗಳನ್ನು ‘ಲೋಪರ್-1, -2 ಎಂದೆಲ್ಲ ಸೇವ್ ಮಾಡಿಟ್ಟುಕೊಂಡಿದ್ದೆ. ಅವರಲ್ಲಿ ಒಬ್ಬ ಹುಬ್ಬಳ್ಳಿಯ ಹುಡುಗ. ಬಾಲ್ಯದ ನನ್ನ ಗೆಳೆಯರ ನೆನೆಪಾಗುವ ರೀತಿಯಲ್ಲಿ ಬೈಯ್ಯುತ್ತಿದ್ದ. 
ನಾನು ಅಸಹಾಯಕ. ತಿರುಗಿ ಬೈಯ್ಯಬೇಕೆಂದರೂ ಎಲ್ಲಿ ಕೂತು ಬೈಯ್ಯಲಿ? ಮನೆಯಲ್ಲಿ ಆ ರೀತಿ ಬೈಯ್ಯುತ್ತಾ ಕೂತರೆ ನನ್ನ ಹೆಂಡತಿ ಮತ್ತು ಮಗಳು ‘ಇವರೂ ಹೀಗೇನಾ? ಎಂದು ನನ್ನನ್ನೇ ಸಂಶಯಿಸುತ್ತಿದ್ದರೋ ಏನೋ? ಆಫೀಸಿಗೆ ಹೋಗುವಾಗ ಬಸ್ ನಲ್ಲಿ ಬೈದರೆ ಸಹಪ್ರಯಾಣಿಕರೆಲ್ಲ ಹುಚ್ಚರೆಂದು ಅಂದುಕೊಳ್ಳುತ್ತಿದ್ದರೇನೋ? ಆಫೀಸಿನಲ್ಲಿಯೂ ಇಂತಹ ಕೆಲಸ ಮಾಡುವಂತಿರಲಿಲ್ಲ. ಬೈಯ್ಯುವುದನ್ನು ಏರು ದನಿಯಲ್ಲಿಯೇ ಮಾಡಬೇಕೇ ಹೊರತು ಪಿಸುಗುಟ್ಟುವಂತಿಲ್ಲ. ಬೈಯ್ಯುವುದು ಕೂಡಾ ನಮ್ಮಂತಹವರಿಗೆ ಕಷ್ಟ ಎನ್ನುವುದು ನನಗೆ ಆಗಲೇ ಗೊತ್ತಾಗಿದ್ದು.
ಕೊನೆಗೂ ಆ ಹುಡುಗನ ಕಾಟ ತಾಳಲಾರದೆ ಬೆಳಿಗ್ಗೆ ಆರು ಗಂಟೆಗೆ ವಾಕಿಂಗ್ ಹೊರಡುವವ ನಾಲ್ಕು ಗಂಟೆಗೆ ಹೊರಟೆ. ಅದಕ್ಕಿಂತ ಮೊದಲು ತುಳು,ಕನ್ನಡ,ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಏನೆಲ್ಲಾ ಬೈಯ್ಯಬಹುದು ಮತ್ತು ಹೇಗೆಲ್ಲಾ ಬೈಯ್ಯಬಹುದೆಂದು ನಾನು ಮನನ ಮಾಡಿಕೊಂಡು ತಯರಾಗಿದ್ದೆ. ಆ ದಿನ ನಾನು ವಾಕ್ ಮಾಡುವ ಮೈದಾನದಲ್ಲಿ ಯಾರಿನ್ನೂ ಬಂದಿರಲಿಲ್ಲ. ಮೈದಾನದ ಮಧ್ಯೆನಿಂತು ಹುಬ್ಬಳ್ಳಿಯ ‘ಲೋಫರ್ -1’ಗೆ ಪೋನ್ ಮಾಡಿದೆ. ಆತ ಪೋನ್ ಎತ್ತಿಕೊಂಡ ಕೂಡಲೇ ಆತನಿಗೆ ಮಾತನಾಡಲಿಕ್ಕೆ ಅವಕಾಶವೂ ಕೊಡದ ಹಾಗೆ ಎಲ್ಲ ಕೆಟ್ಟ,ಅಶ್ಲೀಲ ಪದಗಳನ್ನು ಉಗಿದುಬಿಟ್ಟೆ. ಅವನು ಸ್ವಲ್ಪ ಹೊತ್ತು ಪೋನ್ ಕಟ್ ಮಾಡಿ ಆನ್ ಮಾಡುವುದು ಮತ್ತೆ ನಾನು ಪೋನ್ ಮಾಡುವುದು ಸುಮಾರು ಒಂದು ಗಂಟೆ ಕಾಲ ನಡೆಯಿತು. ಅವನು ಹೆದರಿ ಮನೆಯಿಂದ ಹೊರಗೆ ಬಂದು ಬೈಕ್ ಸ್ಟಾರ್ಟ್ ಮಾಡಿ ಹೊರಟ.( ಆ ಶಬ್ದ ನನಗೆ ಕೇಳಿಸುತ್ತಿತ್ತು) ಯಾರದೋ ಮನೆಮುಂದೆ ಬೈಕ್ ನಿಲ್ಲಿಸಿ ಅವರೊಡನೆ ಮಾತನಾಡಿ ಪೋನ್ ಆಫ್ ಮಾಡಿದ. ಅದರ ನಂತರ ಆತ ನನಗೆ ಬೈದು ಪೋನ್ ಮಾಡಿಲ್ಲ. ಅಷ್ಟೊಂದು ಬೈದ ನಂತರ ನಾನೂ ನಿರಾಳವಾಗಿ ಬಿಟ್ಟೆ. ಆದರೆ ಯಾವುದಕ್ಕೋ ಕಲ್ಲೆಸೆಯಬಾರದು ಅಂತಾರಲ್ಲ, ಅಂತಹದ್ದನ್ನು ನಾನು ಯಾಕೆ ಮಾಡಿದೆ ಎಂದು ನನ್ನ ಬಗ್ಗೆಯೇ ಅಸಹ್ಯವೆನಿಸಿತು.

ನರೇಂದ್ರ ಮೋದಿಯವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಒಂದಕ್ಷರ ಯಾರೇ ಬರೆದರೂ ಹೆಣ್ಣು-ಗಂಡು, ಹಿರಿಯರು-ಕಿರಿಯರು ಯಾವುದನ್ನೂ ಲೆಕ್ಕಿಸದೆ ಅವರ ಭಕ್ತರ ಗುಂಪು ಅಶ್ಲೀಲವಾಗಿ ಬೈಯ್ಯುವುದು, ನಿಂದಿಸುವುದು, ಚಾರಿತ್ರ್ಯಹರಣ ಮಾಡುತ್ತಿರುವುದನ್ನು ನೋಡಿದಾಗ ಈ ಎರಡು ಘಟನೆಗಳು ನೆನಪಾಯಿತು. ಈ ಬೈಗುಳ ವೀರರೆಲ್ಲರೂ ವಿದ್ಯಾವಂತರು. ಇವರು ಭಿನ್ನಾಭಿಪ್ರಾಯಗಳನ್ನು ಸೈದ್ಧಾಂತಿಕವಾಗಿ ಚರ್ಚಿಸಲು ಬರುವುದಿಲ್ಲ. ಬರೀ ಬೈಗುಳು. ತಮಗೊಲ್ಲದವರನ್ನು ಚುಚ್ಚಿ ಸಂತೋಷ ಪಡುವ ವಿಕೃತಾನಂದರು. ಇತ್ತೀಚೆಗೆ ಯಾರಾದರೂ ಬೈದರೆ ಈತ ಮೋದಿ ಅಭಿಮಾನಿ ಇರಬಹುದೇನೋ ಎಂದು ಸಂಶಯ ಪಡುವಷ್ಟು ಮೋದಿ ಭಕ್ತರ ಹಾವಳಿ ಆವರಿಸಿಕೊಂಡುಬಿಟ್ಟಿದೆ. ಇಂತಹವರನ್ನು ಕಾನೂನಿನ ಮೂಲಕವೇ ಸರಿಪಡಿಸಬಹುದೇನೋ ಎಂಬ ಸಣ್ಣ ಆಸೆಯಿಂದ ನಾನು ಪೊಲೀಸರಿಗೆ ದೂರು ನೀಡಿದರೆ ‘ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ’ ಎಂದು ಗುಲ್ಲೆಬ್ಬಿಸಲಾಯಿತು. ಸ್ವತ: ನರೇಂದ್ರ ಮೋದಿಯವರು ಮಾತ್ರವಲ್ಲ, ಸಂಸದ ಪ್ರತಾಪ ಸಿಂಹ ಕೂಡಾ ತಮ್ಮ ವಿರುದ್ದ ಬರೆದವರ ವಿರುದ್ಧ ಸೆಕ್ಷನ್ 66 ಎ ಬಳಸಿಕೊಂಡು ದೂರು ನೀಡಿದ್ದನ್ನು ಅವರು ಮರೆತೇ ಬಿಟ್ಟಿದ್ದರು.
ಆದರೆ ಈ ರೀತಿ ಬರೆಯುವ ಮೂಲಕ ಜಗತ್ತಿನ ಮುಂದೆ ತಾವು ಬೆತ್ತಲಾಗುತ್ತಿದ್ದೇವೆ ಎನ್ನುವ ಅರಿವು ಈ ಮೋದಿ ಭಕ್ತರಿಗಿಲ್ಲ. ಇತ್ತೀಚೆಗೆ ಇವರಲ್ಲಿ ಕೆಲವರನ್ನು ನಾನು ಬ್ಲಾಕ್ ಮಾಡಿದ್ದೇನೆ. ಇನ್ನು ಕೆಲವರನ್ನು ಉಳಿಸಿಕೊಂಡಿದ್ದೇನೆ. ಮೋದಿಯವರಿಗೆ ಎಂತೆಂತಹ ಅಭಿಮಾನಿಗಳಿದ್ದಾರೆನ್ನುವುದು ಜಗತ್ತಿಗೆ ಗೊತ್ತಾಗಲಿ. ಇವರನ್ನೆಲ್ಲ ಬಳಸಿಕೊಂಡು ಅಧಿಕಾರಕ್ಕೆ ಬಂದ ನರೇಂದ್ರಮೋದಿಯವರು ಈಗ ಸೋಷಿಯಲ್ ಮೀಡಿಯಾದಲ್ಲಿರುವ ತನ್ನ ಅಭಿಮಾನಿಗಳಿಗೆ ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದ್ದನ್ನು ಓದಿ ಇದನ್ನು ಬರೆಯಬೇಕೆನಿಸಿತು. ತಮ್ಮ ಆರಾಧ್ಯ ದೈವದ ಮಾತಿಗೆ ಭಕ್ತರು ಹೇಗೆ ಪ್ರತಿಕ್ರಿಯಿಸುತ್ತಾರೆನ್ನುವುದನ್ನು ಕಾದು ನೋಡಬೇಕು. ಭಸ್ಮಾಸುರರನ್ನು ಸೃಷ್ಟಿಸುವುದು ಸುಲಭ ನಿಯಂತ್ರಿಸುವುದು ಕಷ್ಟ.