Monday, October 31, 2011

ನಿನ್ನೆ ದುಬೆ, ಇಂದು ಕುಲಕರ್ಣಿ, ನಾಳೆ ಯಾರು?

ಪರಮಾಪ್ತರು ಸಂಕಷ್ಟಕ್ಕೀಡಾದಾಗ ಎಂತಹ ಉಕ್ಕಿನ ಮನುಷ್ಯರೂ ಕುಗ್ಗಿಹೋಗುತ್ತಾರೆ. ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿಯವರದ್ದು ಇದೇ ಸ್ಥಿತಿ. ತಮಗೆ ರಾಜಕೀಯ ಸಲಹೆಗಾರ, ಮಾರ್ಗದರ್ಶಕ, ಗೆಳೆಯ ಎಲ್ಲವೂ ಆಗಿದ್ದ ಸುಧೀಂದ್ರ ಕುಲಕರ್ಣಿ ಅವರ ಬಂಧನದ ದು:ಖ ಬಹುಷ: ಅಡ್ವಾಣಿಯವರನ್ನು ಸಹಿಸಲಾಗದಷ್ಟು ಘಾಸಿಗೊಳಿಸಿದೆ.
ಈ ಕಾರಣದಿಂದಾಗಿಯೇ `ವೋಟಿಗಾಗಿ ನೋಟು ಪ್ರಕರಣದಲ್ಲಿ ಸುಧೀಂದ್ರ ಕುಲಕರ್ಣಿ ಮತ್ತು ಬಿಜೆಪಿ ಸಂಸದರು ಆರೋಪಿಗಳೆಂದಾದರೆ ನಾನೂ ಆರೋಪಿ, ನನ್ನನ್ನೂ ಬಂಧಿಸಿ~ ಎಂದು ಅವರು ಭಾವಾವೇಶದಿಂದ ಲೋಕಸಭೆಯಲ್ಲಿ ಗುಡುಗಿದ್ದು. ಅವರ ಈಗಿನ `ಜನಚೇತನ ಯಾತ್ರೆ~ಗೆ ಈ ಘಟನೆಯೂ ಒಂದು ಪ್ರೇರಣೆ ಎನ್ನಲಾಗುತ್ತಿದೆ.
 ವೈಯಕ್ತಿಕವಾಗಿ ನಾನೂ ಬಲ್ಲ ಕನ್ನಡಿಗರಾದ ಸುಧೀಂದ್ರ ಕುಲಕರ್ಣಿ  ಆಳವಾದ ಅಧ್ಯಯನ ಮತ್ತು ವಿಸ್ತಾರವಾದ ಅನುಭವ ಹೊಂದಿರುವ ಸಜ್ಜನ ಪತ್ರಕರ್ತ. ರಾಜಕೀಯದ ಮೋಹಪಾಶಕ್ಕೆ ಸಿಲುಕದೆ ಇದ್ದಿದ್ದರೆ ಅವರು ಈಗ ಯಾವುದಾದರೂ ರಾಷ್ಟ್ರೀಯ ದಿನಪತ್ರಿಕೆಯ ಸಂಪಾದಕರ ಕುರ್ಚಿಯಲ್ಲಿರುತ್ತಿದ್ದರು.
ಖಂಡಿತ ಅವರ ಸ್ಥಾನ ಸೆರೆಮನೆಯಲ್ಲ. ಮೇಲ್ನೋಟದಲ್ಲಿಯೇ  ಕುಲಕರ್ಣಿ ಬಂಧನದಲ್ಲಿನ ವಿರೋಧಾಭಾಸ ಕಾಣುತ್ತಿದೆ. `ವಿಶ್ವಾಸ ಮತಗಳಿಸಲು ದುಡ್ಡುಕೊಟ್ಟು ಮತ ಖರೀದಿ ಮಾಡಿದ್ದಾರೆ ಎಂಬ ಆರೋಪಕ್ಕೊಳಗಾದವರು ನಿಶ್ಚಿಂತೆಯಾಗಿ ಅಧಿಕಾರದಲ್ಲಿದ್ದಾರೆ, ಇದನ್ನು ಬಯಲು ಮಾಡಲು ಹೊರಟವರು ಜೈಲಿನಲ್ಲಿದ್ದಾರೆ~ ಎಂಬ ಬಿಜೆಪಿ ನಾಯಕರ ಹೇಳಿಕೆ, `ಸೀಟಿ ಊದುವವರಿಗೆ (ವಿಷಲ್ ಬ್ಲೋವರ್ಸ್‌) ರಕ್ಷಣೆ  ಬೇಕು ಎನ್ನುವ ಅಡ್ವಾಣಿ ಅವರ ಕಳಕಳಿ, ಕುಲಕರ್ಣಿಯವರಿಗೆ ಆಗಿರುವ ಅನ್ಯಾಯ ಎಲ್ಲವೂ ಅರ್ಥಮಾಡಿಕೊಳ್ಳುವಂತಹದ್ದೇ. ಆದರೆ....
ಸರಿಯಾಗಿ ಹತ್ತು ವರ್ಷಗಳ ಹಿಂದೆ ಲಾಲ್‌ಕೃಷ್ಣ ಅಡ್ವಾಣಿ ಮತ್ತು ಅವರ ಪಕ್ಷದ ನಾಯಕರ ನಡೆ-ನುಡಿಗಳೆರಡೂ ಹೀಗಿರಲಿಲ್ಲವಲ್ಲಾ? ತೆಹೆಲ್ಕಾದ ತನಿಖಾ ತಂಡ ಆಗಿನ ಎನ್‌ಡಿಎ ಸರ್ಕಾರದ ರಕ್ಷಣಾ ಇಲಾಖೆಯೊಳಗಿನ ಹಗರಣಗಳ ಬೆನ್ನತ್ತಿ `ಕುಟುಕು ಕಾರ‌್ಯಾಚರಣೆ~ಯ ಮೂಲಕ ಹಿರಿಯ ಸೇನಾಧಿಕಾರಿಗಳು, ರಾಜಕಾರಣಿಗಳು ಮತ್ತು ದಲ್ಲಾಳಿಗಳ ಭ್ರಷ್ಟ ಮುಖಗಳನ್ನು ಬಯಲು ಮಾಡಿತ್ತು.
ತೆಹೆಲ್ಕಾ ರಹಸ್ಯವಾಗಿ ಚಿತ್ರೀಕರಿಸಿದ್ದ ಭ್ರಷ್ಟರ ಮುಖಗಳು 2001ರ ಮಾರ್ಚ್ ಹದಿಮೂರರಂದು ಟಿವಿ ಚಾನೆಲ್‌ಗಳಲ್ಲಿ ಬಿತ್ತರಗೊಂಡಾಗ ದೇಶದ ಜನ ಬೆಚ್ಚಿಬಿದ್ದಿದ್ದರು.
ಸೇನಾಧಿಕಾರಿಗಳು ಹೆಣ್ಣು ಮತ್ತು ಹೆಂಡಕ್ಕಾಗಿ ರಕ್ಷಣಾ ಇಲಾಖೆಯನ್ನೇ ಮಾರಾಟಕ್ಕಿಡಲು ಹೊರಟಿದ್ದನ್ನು, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಮನೆಯಲ್ಲಿಯೇ ದಲ್ಲಾಳಿಗಳು ವ್ಯವಹಾರ ಕುದುರಿಸುತ್ತಿರುವುದನ್ನು, ಬಿಜೆಪಿಯ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರು ಲಂಚ ಸ್ವೀಕರಿಸುತ್ತಿರುವುದನ್ನು ದೇಶದ ಜನ ಕಣ್ಣಾರೆ ನೋಡಿದರೂ ನಂಬಲಾಗದೆ ಕಣ್ಣುಜ್ಜಿಕೊಂಡಿದ್ದರು.
ಒತ್ತಡಕ್ಕೆ ಸಿಕ್ಕಿ ಜಾರ್ಜ್ ಫರ್ನಾಂಡಿಸ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದರು, ಬಯಲಾದ ಹಗರಣಗಳ ತನಿಖೆಗೆ ನ್ಯಾಯಮೂರ್ತಿ ವೆಂಕಟಸ್ವಾಮಿ ನೇತೃತ್ವದ ಆಯೋಗವನ್ನೂ ಎನ್‌ಡಿಎ ಸರ್ಕಾರ ರಚಿಸಿತ್ತು.
ವಿಚಿತ್ರವೆಂದರೆ ಹಗರಣಗಳ ಬಗ್ಗೆ ಮಾತ್ರವಲ್ಲ ತೆಹೆಲ್ಕಾ ಕಾರ‌್ಯಾಚರಣೆಯ `ಉದ್ದೇಶ~ವನ್ನೂ ತನಿಖೆ ಮಾಡಲು ಎನ್‌ಡಿಎ ಸರ್ಕಾರ ಆದೇಶ ನೀಡಿತ್ತು. ಅದರ ನಂತರದ ಸುಮಾರು ಮೂರುವರ್ಷಗಳ ಕಾಲ ಎನ್‌ಡಿಎ ಸರ್ಕಾರ ತೆಹೆಲ್ಕಾ ಸಂಸ್ಥೆಗೆ ನೀಡಿದ್ದ ಕಿರುಕಳ ತುರ್ತುಪರಿಸ್ಥಿತಿಯ ದಿನಗಳಲ್ಲಿ ಇಂದಿರಾಗಾಂಧಿ ಪತ್ರಿಕೆಗಳ ಮೇಲೆ ನಡೆಸಿದ್ದ ದಾಳಿಯನ್ನು ನೆನೆಪಿಸುವಂತಿತ್ತು.
ಸಂಸ್ಥೆಯಲ್ಲಿ ಬಂಡವಾಳ ಹೂಡಿದವರ ಮನೆಮೇಲೆ ವರಮಾನ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದರು, ಸೆಬಿ, ಅನುಷ್ಠಾನ ನಿರ್ದೇಶನಾಲಯ ಹೀಗೆ ಸರ್ಕಾರದ ಹಲವಾರು ಇಲಾಖೆಗಳು ಒಟ್ಟಾಗಿ ತೆಹೆಲ್ಕಾದ ಮೇಲೆ ಎರಗಿ ಬಿದ್ದಿದ್ದವು, ಅದರಲ್ಲಿದ್ದ ಕೆಲವು ಪತ್ರಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಿ ಜೈಲಿಗೆ ತಳ್ಳಲಾಗಿತ್ತು, ಉಳಿದವರು ಪ್ರಾಣ ಬೆದರಿಕೆ ಎದುರಿಸುತ್ತಿದ್ದರು, ಸಂಸ್ಥೆ ದಿವಾಳಿಯಾಗಿತ್ತು. ತೆಹೆಲ್ಕಾ ಟೇಪ್‌ನ ವಿಶ್ವಾಸಾರ್ಹತೆಯನ್ನು ಮತ್ತೆಮತ್ತೆ ಪ್ರಶ್ನಿಸಲಾಯಿತು.
ಆಯೋಗ ತೆಹೆಲ್ಕಾ ಪರವಾಗಿಯೇ ವರದಿ ನೀಡಲಿರುವ ಗುಮಾನಿ ಬಂದಾಗ ಅದನ್ನು ಬರ್ಖಾಸ್ತುಗೊಳಿಸಿ ಮತ್ತೊಂದನ್ನು ರಚಿಸಲಾಯಿತು. ಮೂರುವರ್ಷಗಳ ನಂತರ ಹೊಸ ತನಿಖಾ ಆಯೋಗವನ್ನು ಕೂಡಾ ರದ್ದು ಮಾಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಯಿತು. ಅದರ ನಂತರ ಏನಾಯಿತೆಂದು ಯಾರಿಗೂ ಗೊತ್ತಿಲ್ಲ.
ತಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡಿದೆ ಎನ್ನುವ ಒಂದೇ ಕಾರಣಕ್ಕೆ ಎನ್‌ಡಿಎ ಸರ್ಕಾರ ಈ ರೀತಿ ಮಾಧ್ಯಮ ಸಂಸ್ಥೆಯೊಂದರ ವಿರುದ್ದ ಸೇಡು ತೀರಿಸಿಕೊಳ್ಳುತ್ತಿರುವಾಗ ಲಾಲ್‌ಕೃಷ್ಣ ಅಡ್ವಾಣಿ ಗೃಹಸಚಿವರಾಗಿದ್ದರು. ಈಗ `ಸೀಟಿ ಊದುವವರ~ ರಕ್ಷಣೆಯ ಬಗ್ಗೆ ಭಾಷಣಮಾಡುತ್ತಿರುವ ಅರುಣ್ ಜೇಟ್ಲಿ ತೆಹೆಲ್ಕಾ ವಿರುದ್ದದ ನ್ಯಾಯಾಂಗ ಹೋರಾಟದ ಮುಂಚೂಣಿಯಲ್ಲಿದ್ದರು.

ಭ್ರಷ್ಟಾಚಾರದ ಹಗರಣಗಳನ್ನು ಬಯಲು ಮಾಡುವುದು `ದೇಶದ್ರೋಹದ ಕೆಲಸ~ವೆಂದು ಆಗ ಇವರೆಲ್ಲರ ಅಭಿಪ್ರಾಯವಾಗಿತ್ತು, ಇದು `ಎನ್‌ಡಿಎ ವಿರುದ್ದದ ದೊಡ್ಡ ಸಂಚು~ ಎಂದೇ ಎಲ್ಲರೂ ವ್ಯಾಖ್ಯಾನ ಮಾಡುತ್ತಿದ್ದರು.

ಹೀಗಿರುವಾಗ ಯಾವ ನೈತಿಕ ಬಲದಿಂದ ಅಡ್ವಾಣಿಯವರು ಈಗ  `ಕುಟುಕು ಕಾರ‌್ಯಾಚಾರಣೆ~ಯಲ್ಲಿ ಭಾಗಿಯಾಗಿದ್ದ ಸ್ನೇಹಿತ ಸುಧೀಂದ್ರ ಕುಲಕರ್ಣಿ ಮತ್ತು ಪಕ್ಷದ ಸಂಸದರನ್ನು  ಸಮರ್ಥನೆ ಮಾಡಿಕೊಳ್ಳಲು ಸಾಧ್ಯ?
ಹೋಗ್ಲಿಬಿಡಿ, ತೆಹೆಲ್ಕಾಕ್ಕೇನೋ ದುಷ್ಟ ಉದ್ದೇಶ ಇದ್ದಿರಬಹುದೆಂದು ಅಂದುಕೊಳ್ಳೋಣ. ಸತ್ಯೇಂದ್ರ ದುಬೆ ಎಂಬ 31 ವರ್ಷದ ಐಐಟಿ ಪದವೀಧರ ಏನು ಅನ್ಯಾಯ ಮಾಡಿದ್ದರು? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಡೆಪ್ಯುಟಿ ಜನರಲ್ ಮ್ಯಾನೆಜರ್ ಆಗಿದ್ದ ದುಬೆ ತನ್ನ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಬಗ್ಗೆ ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರಿಗೆ ರಹಸ್ಯ ಪತ್ರ ಬರೆದಿದ್ದರು. ಪ್ರಾಣ ಭಯ ಇರುವುದರಿಂದ ತನ್ನ ಹೆಸರನ್ನು ಬಹಿರಂಗಪಡಿಸಬಾರದೆಂದು ಪತ್ರದಲ್ಲಿ ವಿನಂತಿಯನ್ನೂ ಮಾಡಿದ್ದರು.
ಆದರೆ ಆ ಪತ್ರ ಪ್ರಧಾನಿ ಕಾರ‌್ಯಾಲಯದಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹೋಗಿ ಕೊನೆಗೆ ಯಾರ ಕೈಗೆ ಸಿಗಬಾರದಿತ್ತೋ ಅವರಿಗೆ ಸಿಕ್ಕಿತು. ಪತ್ರ ಬರೆದ ಹದಿನಾರನೇ ದಿನ ಸತ್ಯೇಂದ್ರ ದುಬೆ ಅವರನ್ನು ಗಯಾದ ಬೀದಿಯಲ್ಲಿ ಹಾಡಹಗಲೇ ಹತ್ಯೆ ಮಾಡಿದ್ದರು.
ಅದಾದ ನಂತರ ಭುಗಿಲೆದ್ದ ಸಾರ್ವಜನಿಕ ಆಕ್ರೋಶ ಕಂಡು ಸುಪ್ರೀಂಕೋರ್ಟ್ `ಸಾರ್ವಜನಿಕ ಹಿತಾಸಕ್ತಿ ಬಹಿರಂಗ ಮತ್ತು ರಕ್ಷಣಾ ಗೊತ್ತುವಳಿ~ಯನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು. ಇದರ ಅನುಷ್ಠಾನದ ಹೊಣೆಯನ್ನು ಕೇಂದ್ರ ಜಾಗೃತ ಆಯೋಗಕ್ಕೆ ವಹಿಸಿಕೊಟ್ಟಿತ್ತು.
ಆದರೆ ಅದಾದ ಒಂದು ವರ್ಷದ ನಂತರ ಭಾರತೀಯ ತೈಲನಿಗಮದ ಮ್ಯಾನೇಜರ್ ಆಗಿದ್ದ ಕೋಲಾರದ ಮಂಜುನಾಥ ಷಣ್ಮುಗಂ ಎಂಬ ಐಐಎಂ ಪದವೀಧರನನ್ನು ಉತ್ತರಪ್ರದೇಶದಲ್ಲಿ ಹತ್ಯೆ ಮಾಡಲಾಯಿತು. ಪೆಟ್ರೋಲ್ ಕಲಬೆರಕೆಯಲ್ಲಿ ತೊಡಗಿದ್ದ ದುಷ್ಕರ್ಮಿಗಳ ವಿರುದ್ದ ದನಿ ಎತ್ತಿದ್ದೇ ಆ ಯುವಕನ ಪ್ರಾಣಕ್ಕೆ ಮುಳುವಾಯಿತು.

ಮತ್ತೆ `ಸೀಟಿ ಊದುವವರ~ ರಕ್ಷಣೆಯ ಕೂಗೆದ್ದಿತ್ತು. 2001ರ ಕಾನೂನು ಆಯೋಗ ಮಾಡಿರುವ ಶಿಫಾರಸಿಗೆ ಅನುಗುಣವಾಗಿ ಕಾಯಿದೆ ರೂಪಿಸುವುದಾಗಿ ಎನ್‌ಡಿ ಸರ್ಕಾರ ಆಶ್ವಾಸನೆಯನ್ನೂ ನೀಡಿತ್ತು.
ಅದು ಅಧಿಕಾರ ಕಳೆದುಕೊಂಡಿತೇ ವಿನ: ಆಶ್ವಾಸನೆ ಈಡೇರಿಸಲೇ ಇಲ್ಲ. ಅಡ್ವಾಣಿ, ಜೇಟ್ಲಿ, ಸುಷ್ಮಾಸ್ವರಾಜ್ ಎಲ್ಲರೂ ಸೇರಿ `ಸೀಟಿ ಊದುವವರ~ ರಕ್ಷಣಾ ಕಾಯಿದೆಯೊಂದನ್ನು ಆಗ ಜಾರಿಗೆ ತಂದಿದ್ದರೆ ಬಹುಷ: ಸುಧೀಂದ್ರ ಕುಲಕರ್ಣಿಯವರು ಇಂದು ಜೈಲಿನಲ್ಲಿ ಇರುತ್ತಿರಲಿಲ್ಲವೇನೋ?
ಭ್ರಷ್ಟರೇ ಬಹುಸಂಖ್ಯೆಯಲ್ಲಿರುವುದು ನಿಜವಾದರೂ ಪ್ರಾಮಾಣಿಕರಿಗೇನು ಸಮಾಜದಲ್ಲಿ ಕೊರತೆ ಇಲ್ಲ. ಆದರೆ ಅವರು ಯಾವತ್ತೂ ಅಲ್ಪಸಂಖ್ಯಾತರು. ಇಲಾಖೆಗಳಿಗೆ ಸಂಬಂಧಿಸಿದ ಅವ್ಯವಹಾರದಲ್ಲಿ ಸಹೋದ್ಯೋಗಿಗಳ ಪಾತ್ರವೂ ಇರುವುದರಿಂದ ಮೊದಲ ಶತ್ರುಗಳು ಅವರೇ ಆಗಿರುತ್ತಾರೆ.  ಮೊದಲು `ಸೀಟಿ ಊದುವವರ~ ವಿರುದ್ಧ ಅಪಪ್ರಚಾರ ನಡೆಯುತ್ತದೆ. ಅದರ ನಂತರ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತದೆ.

ಇವೆಲ್ಲದರ ನಡುವೆ ಅವರನ್ನು ಒಂಟಿಯಾಗಿ ಮಾಡುವ ಪ್ರಯತ್ನ ನಡೆಯುತ್ತದೆ. ಈ ತಂತ್ರಗಳ ಮೂಲಕವೇ ಅವರನ್ನು `ತಮ್ಮ ದಾರಿಗೆ ತರುವ~ ಪ್ರಯತ್ನ ನಡೆಯುತ್ತದೆ. ಇದಕ್ಕೆ ಕೆಲವರು ಶರಣಾಗಿ ಬದುಕುವ ದಾರಿ ಕಂಡುಕೊಳ್ಳುತ್ತಾರೆ. `ದಾರಿಗೆ ಬರದವರು~ ಒಂದೋ ಮೂಲೆ ಗುಂಪಾಗುತ್ತಾರೆ ಇಲ್ಲವೇ ಮಸಣದ ಹಾದಿ ಹಿಡಿಯುತ್ತಾರೆ.
ನಕಲಿ ಛಾಪಾ ಕಾಗದ ಹಗರಣದ ಸುಳಿವನ್ನು ಮೊದಲು ನೀಡಿದ್ದ ಮಹಾರಾಷ್ಟ್ರದ ಸ್ಟಾಂಪ್ಸ್ ಸುಪರಿಂಟೆಂಡೆಂಟ್ ರಾಧೇಶ್ಯಾಮ್ ಮೋಪಾಲ್‌ವಾಲ್, ಮುಂಬೈನ ಅಕ್ರಮ ಕಟ್ಟಡಗಳ ವಿರುದ್ದ ಸಮರಸಾರಿದ ಜಿ.ಎಸ್. ಖೈರ್ನಾರ್, 26 ವರ್ಷಗಳ ಸೇವಾವಧಿಯಲ್ಲಿ 26 ಬಾರಿ ವರ್ಗಾವಣೆಯ ಶಿಕ್ಷೆಗೊಳಗಾದ ಪುಣೆಯ ಮುನ್ಸಿಪಲ್ ಕಮಿಷನರ್ ಅರುಣ್ ಭಾಟಿಯಾ... ಹೀಗೆ  ಅನ್ಯಾಯ,ಅಕ್ರಮಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬಯಲಿಗೆಳೆದ `ಸೀಟಿ ಊದುವವರು~ ಎಲ್ಲೋ ಮೂಲೆಗುಂಪಾಗಿ ಹೋಗಿದ್ದಾರೆ.
ದುಬೆ, ಮಂಜುನಾಥ್ ಮಾತ್ರವಲ್ಲ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಭ್ರಷ್ಟರನ್ನು ಬಯಲುಗೊಳಿಸಲು ಹೊರಟ ಭೋಪಾಲದ ಶೆಹಲಾ ಮಸೂದ್, ಗುಜರಾತ್‌ನ ಅಮಿತ್ ಜೆಟ್ವಾ, ಪುಣೆಯ ಸತೀಶ್ ಶೆಟ್ಟಿ, ಮಹಾರಾಷ್ಟ್ರದ ದತ್ತಾತ್ರೇಯ ಪಾಟೀಲ್, ಆಂಧ್ರಪ್ರದೇಶದ ಸೋಲಾ ರಂಗರಾವ್-ಇವರಲ್ಲಿ ಯಾರೂ ಈಗ ಬದುಕಿ ಉಳಿದಿಲ್ಲ. ಎಲ್ಲರೂ ಭ್ರಷ್ಟರ ಕೈಯಿಂದಲೇ ಪ್ರಾಣ ಕಳೆದುಕೊಂಡಿದ್ದಾರೆ.
ಲೋಕಪಾಲರ ನೇಮಕಕ್ಕೆ ಒತ್ತಾಯಿಸಿ ಅಣ್ಣಾಹಜಾರೆ ತಂಡ ಚಳುವಳಿ ಪ್ರಾರಂಭಿಸಿದ ನಂತರ ಮತ್ತೊಮ್ಮೆ `ಸೀಟಿ ಊದುವವರ~ ರಕ್ಷಣೆಯ ಕಾನೂನಿನ ಚರ್ಚೆ ಪ್ರಾರಂಭವಾಗಿದೆ. ಅಣ್ಣಾ ತಂಡ ರಚಿಸಿರುವ `ಜನಲೋಕಪಾಲ ಮಸೂದೆ~ಯಲ್ಲಿ `ಸೀಟಿ ಊದುವವರ ರಕ್ಷಣೆಯೂ ಸೇರಿದೆ.
ಆದರೆ ಸರ್ಕಾರದ `ಲೋಕಪಾಲ ಮಸೂದೆ~ಯಲ್ಲಿ ಅದು ಸೇರಿಲ್ಲ. ಇದನ್ನು ಪ್ರತ್ಯೇಕವಾಗಿ ಜಾರಿಗೆ ತರುವುದಾಗಿ ಹೇಳಿ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಕೂಡಾ ಮಂಡನೆಯಾಗಿದೆ.
`ಅಧಿಕಾರ ದುರುಪಯೋಗ, ಭ್ರಷ್ಟಾಚಾರ ನಿರೋಧ ಕಾಯಿದೆ ಇಲ್ಲವೇ ಭಾರತೀಯ ದಂಡಸಂಹಿತೆಯಲ್ಲಿ ವ್ಯಾಖ್ಯಾನಿಸಲಾದ ಅಪರಾಧ ಮತ್ತು ದುರಾಡಳಿತ- ಈ ಮೂರು ಅಂಶಗಳಿಗೆ ಸಂಬಂಧಿಸಿದ ದೂರುಗಳನ್ನು `ಸೀಟಿ ಊದುವವರ ರಕ್ಷಣಾ ಮಸೂದೆಯಲ್ಲಿ ಸೇರಿಸಲಾಗಿದೆ.
ಇದರಲ್ಲಿಯೂ ಕಾರ್ಪೋರೇಟ್ ಕ್ಷೇತ್ರದಲ್ಲಿನ `ಸೀಟಿ ಊದುವವರನ್ನು~ ಸೇರಿಸಲಾಗಿಲ್ಲ. ಎರಡನೆ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲಿ ಕಾರ್ಪೋರೇಟ್ ಕ್ಷೇತ್ರವನ್ನೂ ಕಾಯ್ದೆಯ ವ್ಯಾಪ್ತಿಗೆ ತರಬೇಕೆಂದು ಶಿಫಾರಸು ಮಾಡಿತ್ತು.
ಇದರ ಬಗ್ಗೆ ಅಣ್ಣಾತಂಡವೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಮೌನವಾಗಿವೆ.
ಭಾರತದಲ್ಲಿ ಮಾತ್ರವಲ್ಲ, ನಾಲ್ಕು ದೇಶಗಳನ್ನು ಹೊರತುಪಡಿಸಿದರೆ ಬೇರೆಲ್ಲೂ `ಸೀಟಿ ಊದುವವರ~ ರಕ್ಷಣೆಗಾಗಿ ಕಾನೂನು ಇಲ್ಲ. 1989ರಲ್ಲಿ ಅಮೆರಿಕಾ ಮೊದಲ ಬಾರಿ ಈ ಕಾನೂನು ರೂಪಿಸಿತ್ತು.
ಅದರ ನಂತರ ಬ್ರಿಟನ್, ಅಸ್ಟೇಲಿಯಾ ಮತ್ತು ನ್ಯೂಜಿಲೇಂಡ್‌ಗಳು ಹಿಂಬಾಲಿಸಿದವು. ಈ ಕಾನೂನು ಇರುವ ಕಾರಣಕ್ಕಾಗಿಯೇ ಎನ್ರಾನ್ ಸಂಸ್ಥೆಯ ತಪ್ಪು ಲೆಕ್ಕಪತ್ರವನ್ನು ಬಯಲಿಗೆಳೆದ ಅದರ ಉಪಾಧ್ಯಕ್ಷ ಶೆರ‌್ರಾನ್ ವಾಟ್ಕಿನ್ಸ್, 9/11 ದಾಳಿ ನಡೆಸಿದ ಭಯೋತ್ಪಾದಕರ ಸುಳಿವಿನ ಮುನ್ಸೂಚನೆ ನಿರ್ಲಕ್ಷಿಸಿದ್ದನ್ನು ಪತ್ರಬರೆದು ಬಹಿರಂಗಗೊಳಿಸಿದ ಎಫ್‌ಬಿಐ ಅಟಾರ್ನಿ ಕೊಲೀನ್ ರೌಲೆ, ವರ್ಲ್ಡ್‌ಕಾಮ್ ಸುಮಾರು 3.8 ಬಿಲಿಯನ್ ಡಾಲರ್‌ನಷ್ಟು ನಷ್ಟವನ್ನು ಮುಚ್ಚಿಹಾಕಿದ್ದನ್ನು ನಿರ್ದೇಶಕ ಮಂಡಳಿಗೆ ತಿಳಿಸಿ ಸುದ್ದಿ ಮಾಡಿದ ಸಿಂಥಿಯಾ ಕೂಪರ್ ಅಮೆರಿಕಾದಲ್ಲಿ  `ತಾರಾಮೌಲ್ಯ~ ಗಳಿಸುವಷ್ಟು ಜನಪ್ರಿಯರು.
ವಿಕಿಲೀಕ್ಸ್‌ನ ಮೂಲಕ ಅಮೆರಿಕ ಸರ್ಕಾರದ ರಹಸ್ಯ ದಾಖಲೆಗಳು ಬಹಿರಂಗವಾಗಲು ಕೂಡಾ ಅನಾಮಿಕ `ಸೀಟಿ ಊದುವವರು~ ಕಾರಣ.
ಆದರೆ ಭಾರತದಲ್ಲಿ  ಇವರಿಗೆ ಯಾವ ರಕ್ಷಣೆಯೂ ಇಲ್ಲ, ಬದಲಿಗೆ ಕಿರುಕುಳ, ಜೈಲು, ಸಾವು-ನೋವುಗಳ ಕೊಡುಗೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಯವರ  ಭ್ರಷ್ಟಾಚಾರದ ವಿರುದ್ಧ ದೂರು ದಾಖಲು ಮಾಡಿರುವ ಇಬ್ಬರು ವಕೀಲರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ವಿರುದ್ದವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೆಳೆಯ ಸುಧೀಂದ್ರ ಕುಲಕರ್ಣಿ ಅವರಿಗಾಗಿ ಕಣ್ಣೀರು ಸುರಿಸುತ್ತಿರುವ ಲಾಲ್‌ಕೃಷ್ಣ ಅಡ್ವಾಣಿಯವರು ಇದಕ್ಕೇನನ್ನುತ್ತಾರೆ?