Tuesday, July 28, 2015

‘ಕಲಾಮ್ ಕ್ಷಿಪಣಿ’ ಹೊರಟಿದ್ದು ವಾಜಪೇಯಿ ಬತ್ತಳಿಕೆಯಿಂದ..


ಎ.ಪಿ.ಜೆ. ಅಬ್ದುಲ್ ಕಲಾಮ್ ಅವರು ದೇಶದ 11ನೇ ರಾಷ್ಟ್ರಪತಿಯಾಗಲು ಪ್ರಮುಖ ಕಾರಣಕರ್ತರಾದ ನಾಯಕನೊಬ್ಬನನ್ನು ಸಾವಿನ ಸೂತಕದ ಸಮಯದಲ್ಲಿ ಹೆಚ್ಚಿನವರು ಮರೆತಿದ್ದಾರೆ. ಆ ನಾಯಕನ ಹೆಸರು ಅಟಲ ಬಿಹಾರಿ ವಾಜಪೇಯಿ. ಕೆ.ಆರ್.ನಾರಾಯಣನ್ ಅವರ ಉತ್ತರಾಧಿಕಾರಿ ಯಾರೆಂಬ ಚರ್ಚೆ ಪ್ರಾರಂಭವಾದಾಗ ಅಬ್ದುಲ್ ಕಲಾಮ್ ಅವರ ಹೆಸರನ್ನು ಮೊದಲು ಸೂಚಿಸಿದ್ದವರು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್. ಆದರೆ ಆಗಲೇ ಬಿಜೆಪಿಯೊಳಗಡೆ ಕೃಷ್ಣಕಾಂತ್ ಹೆಸರು ಚರ್ಚೆಯಲ್ಲಿತ್ತು. ಅವರ ಹೆಸರು ಬಿದ್ದುಹೋದಾಗ ಕೇಳಿಬಂದಿದ್ದ ಹೆಸರು ಪಿ.ಸಿ.ಅಲೆಗ್ಸಾಂಡರ್ ಅವರದ್ದು. ಅಲೆಗ್ಸಾಂಡರ್ ಹೆಸರನ್ನು ಸೂಚಿಸಿದ್ದವರು ಆಗಿನ ಪ್ರಧಾನಿಯ ‘ನೀಲಿಕಣ್ಣಿನ ಹುಡುಗ’ ಪ್ರಮೋದ್ ಮಹಾಜನ್. ಅವರು ಆಗಲೇ ಅಲೆಗ್ಸಾಂಡರ್ ಹೆಸರಿನ ಬಗ್ಗೆ ಶಿವಸೇನಾ ನಾಯಕ ಬಾಳ್ ಠಾಕ್ರೆ ಒಪ್ಪಿಗೆ ಪಡೆದೇ ಬಿಟ್ಟಿದ್ದರು. ರಾಷ್ಟ್ರಪತಿ ಸ್ಥಾನದಲ್ಲಿ ಒಬ್ಬ ಕ್ರಿಶ್ಚಿಯನ್ ನನ್ನು ಕೂರಿಸಿಬಿಟ್ಟರೆ ಮುಂದೊಂದು ದಿನ ಸೋನಿಯಾಗಾಂಧಿ ಪ್ರಧಾನಿಯಾಗುವುದನ್ನು ತಪ್ಪಿಸಬಹುದು ಎನ್ನುವ ಲೆಕ್ಕಾಚಾರ ಮಹಾಜನ್ ಮತ್ತು ಠಾಕ್ರೆ ಅವರಲ್ಲಿತ್ತು. ಆದರೆ ವಾಜಪೇಯಿ ತಲೆಯಲ್ಲಿದ್ದದ್ದು ಬೇರೆಯೇ ಲೆಕ್ಕಾಚಾರ. ಆ ಕಾಲದಲ್ಲಿ ಎನ್ ಡಿ ಎ ಮೇಲೆ ಬಿಗಿ ಹಿಡಿತ ಹೊಂದಿದ್ದ ಚಂದ್ರಬಾಬು ನಾಯ್ಡು ಅವರನ್ನು ಕರೆಸಿದ್ದ ವಾಜಪೇಯಿ ಅಬ್ದುಲ್ ಕಲಾಮ್ ಹೆಸರನ್ನು ಸೂಚಿಸಿ ಒಪ್ಪಿಗೆಯನ್ನೂ ಪಡೆದುಬಿಟ್ಟರು.

ಈ ಮೂಲಕ ಒಂದು ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ಉದ್ದೇಶ ವಾಜಪೇಯಿ ಅವರಿಗಿತ್ತು. ಮೊದಲನೆಯದಾಗಿ ಗುಜರಾತ್ ಕೋಮುಗಲಭೆಯಿಂದಾಗಿ ಎನ್ ಡಿಎಗೆ ಗಟ್ಟಿಯಾಗಿ ಅಂಟಿಕೊಂಡಿದ್ದ ಕೋಮುವಾದಿ ಸರ್ಕಾರ ಎನ್ನುವ ಕಳಂಕವನ್ನು ತೊಡೆದುಹಾಕುವ ಉದ್ದೇಶ ವಾಜಪೇಯಿ ಅವರಿಗಿತ್ತು. ಎರಡನೆಯದಾಗಿ ನರೇಂದ್ರ ಮೋದಿ ಅವರ ರಾಜೀನಾಮೆ ಪಡೆಯಲು ಹೊರಟಿದ್ದವರಿಗೆ ತಮ್ಮ ಸಹದ್ಯೋಗಿಗಳ ವಿರೋಧದಿಂದಾಗಿ ಸಾಧ್ಯವಾಗದೆ ಅವಮಾನವಾಗಿತ್ತು. ರಾಷ್ಟ್ರಪತಿ ಸ್ಥಾನಕ್ಕೆ ತನ್ನದೇ ಅಭ್ಯರ್ಥಿಯನ್ನು ಸೂಚಿಸುವ ಮೂಲಕ ತನ್ನ ಸ್ಥಾನದ ಬಲವನ್ನು ತೋರಿಸುವ ಉದ್ದೇಶವೂ ಅವರಿಗಿತ್ತು. ಮೂರನೆಯದಾಗಿ ಬಿಜೆಪಿ ಮುಸ್ಲಿಮ್ ವಿರೋಧಿ ಪಕ್ಷ ಎಂದು ಆರೋಪಿಸುವವರಿಗೆ ಉತ್ತರವನ್ನೂ ನೀಡುವ ಉದ್ದೇಶವೂ ವಾಜಪೇಯಿ ಅವರಿಗಿತ್ತು. (ಇದೇ ರೀತಿ ವಾಜಪೇಯಿ ಅವರು ಬಂಗಾರು ಲಕ್ಷ್ಮಣ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಬಿಜೆಪಿ ಬ್ರಾಹ್ಮಣ-ಬನಿಯಾ ಪಕ್ಷವೆಂಬ ಕಳಂಕವನ್ನು ತೊಡೆದುಹಾಕುವ ಪ್ರಯತ್ನವನ್ನೂ ಮಾಡಿದ್ದರು. ಮುಂದೇನಾಯಿತು ಎನ್ನುವುದು ಇತಿಹಾಸ).
ನಾಲ್ಕನೆಯದಾಗಿ ಮುಸ್ಲಿಮ್ ಅಭ್ಯರ್ಥಿಯನ್ನು ಸೂಚಿಸುವ ಮೂಲಕ ಕಾಂಗ್ರೆಸ್ ಪಕ್ಷ ಕೂಡಾ ಅವರನ್ನು ವಿರೋಧಿಸಲಾಗದೆ ಬೆಂಬಲಿಸಲೇಬೇಕಾದ ರಾಜಕೀಯ ಅನಿವಾರ್ಯತೆಯನ್ನು ಸೃಷ್ಟಿಸುವ ರಾಜಕೀಯ ಲೆಕ್ಕಚಾರವೂ ಚತುರ ರಾಜಕಾರಣಿ ವಾಜಪೇಯಿ ಅವರಿಗಿತ್ತು.
ಈ ಎಲ್ಲ ಕಾರಣಗಳಿಂದಾಗಿ ವಾಜಪೇಯಿ ಅವರು ಅಬ್ದುಲ್ ಕಲಾಮ್ ಹೆಸರನ್ನು ಸೂಚಿಸಿದಾಗ ಸಹದ್ಯೋಗಿಗಳ ಬಾಯಿ ಬಂದಾಗಿತ್ತು. ಸಹಮತ ಮೂಡಿಸಲು ವಾಜಪೇಯಿ ಅವರು ಮೊದಲು ಪ್ರಮೋದ್ ಮಹಾಜನ್ ಅವರನ್ನು ಬಾಳ್ ಠಾಕ್ರೆ ಅವರಲ್ಲಿಗೆ ಕಳುಹಿಸಿಕೊಟ್ಟರು. ನಂತರ ಮಹಾಜನ್ ಅವರನ್ನೇ ಕಲಾಮ್ ಅವರ ಚುನಾವಣಾ ಏಜಂಟ್ ಮಾಡಿದರು. ಅಬ್ದುಲ್ ಕಲಾಮ್ ಅವರನ್ನು ಒಪ್ಪಿಸುವ ಜವಾಬ್ದಾರಿಯನ್ನು ವಾಜಪೇಯಿ ಅವರು ಚಂದ್ರಬಾಬು ಅವರಿಗೆ ನೀಡಿದ್ದರು. ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಕೂಡಾ ಬೆಂಬಲ ವ್ಯಕ್ತಪಡಿಸಿತ್ತು. (ಅಲೆಗ್ಸಾಂಡರ್ ಹೆಸರು ತಪ್ಪಿಹೋಗಿ ಸೋನಿಯಾಗಾಂಧಿ ಪ್ರಧಾನಿಯಾಗುವ ಅವಕಾಶ ಜೀವಂತವಾಗಿ ಉಳಿಯಿತಲ್ಲ ಎನ್ನುವ ಸಮಾಧಾನ ಕಾಂಗ್ರೆಸ್ ನಾಯಕರದ್ದು). ಆದರೆ ಎಡಪಕ್ಷಗಳು ಮಾತ್ರ ಬೆಂಬಲ ನೀಡಲಿಲ್ಲ. ಕೊನೆಗೆ ವಾಜಪೇಯಿ ಅವರ ಬತ್ತಳಿಕೆಯಿಂದ ಹೊರಟ ‘ಕಲಾಮ್ ಕ್ಷಿಪಣಿ’ ಗುರಿ ತಲುಪಿತ್ತು.

Sunday, July 26, 2015

ಹರೇಕಳ ಹಾಜಬ್ಬ

ಗಳಿಕೆಯ ಎಷ್ಟು ಪಾಲನ್ನು ದಾನ ನೀಡುತ್ತೀರಿ ಎನ್ನುವುದರ ಮೇಲೆ ತ್ಯಾಗದ ಪ್ರಮಾಣ ನಿರ್ಧಾರವಾಗುತ್ತದೆ. ಮುಖೇಶ್ ಅಂಬಾನಿಯಂತೆ ದಿನಕ್ಕೆ ೧೧,೦೦೦ ಕೋಟಿ ರೂಪಾಯಿ ಗಳಿಸಿ ಹತ್ತಾರು ಕೋಟಿ ದಾನಮಾಡಿದರೇನು ಬಂತು, ನಿಜವಾದ ದಾನದ ಧರ್ಮ ಹರೇಕಳ ಹಾಜಬ್ಬ ಅವರದ್ದು. ಹಣ್ಣು ಮಾರುತ್ತಿರುವ ಅವರ ದಿನದ ಆಧಾಯ ೧೦೦ರಿಂದ ೧೨೦ ರೂಪಾಯಿ. ಅದರಲ್ಲಯೇ ಒಂದಷ್ಟು ದುಡ್ಡನ್ನೂ ಉಳಿಸಿ ಹಾಜಬ್ಬ ತನ್ನೂರಿನಲ್ಲಿ ಶಾಲೆ ತೆರೆದಿದ್ದಾರೆ. ಹಾಜಪ್ಪ ಅವರಿಗೆ ಸಮನಾದ ದಾನಿ ಎಂದು ಮುಖೇಶ್ ಅಂಬಾನಿ ಅನಿಸಿಕೊಳ್ಳಬೇಕಾದರೆ ಅವರು ಪ್ರತಿದಿನ ಹೆಚ್ಚುಕಡಿಮೆ ೧೧೦೦೦ ಕೋಟಿ ರೂಪಾಯಿ ದಾನ ನೀಡಬೇಕಾಗುತ್ತದೆ.
ಇಂತಹ ಹಾಜಪ್ಪ ಅವರ ಸಾಧನೆಯ ಗಾಥೆಯನ್ನೊಳಗೊಂಡ ಪುಸ್ತಕವನ್ನು ಇಸ್ಮತ್ ಪಜೀರ್ ಬರೆದಿದ್ದಾರೆ. ಇದರ ಇಂಗ್ಲೀಷ್ ಅನುವಾದವನ್ನು ನಿನ್ನೆ ಮಂಗಳೂರಿನಲ್ಲಿ ನಾನು ಬಿಡುಗಡೆ ಮಾಡಿದೆ. ಹಾಜಪ್ಪ ಅವರನ್ನು ಕಂಡು ಧನ್ಯನಾದೆ.