Monday, January 26, 2015

ಹಿಂದೆ ಬರೆದಿದ್ದ ಸ್ವಾಮಿ ವಿವೇಕಾನಂದರ ಅಂಕಣ ಕುರಿತು..

‘ The Monk as Man- The
unknown life of Swami Vivekananda’
ಎರಡು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಸ್ವಾಮಿ ವಿವೇಕಾನಂದರ ಮನುಷ್ಯ ಮುಖದ ಬಗ್ಗೆ ಬರೆದ ಅಂಕಣದ ಸತ್ಯಾಸತ್ಯತೆಯನ್ನು ಕೆಲವರು ಪ್ರಶ್ನಿಸುತ್ತಾ ಬಂದಿದ್ದಾರೆ. ನನ್ನ ಅಂಕಣದಲ್ಲಿಯೇ ಅವರ ಪ್ರಶ್ನೆಗೆ ಉತ್ತರ ಇದೆ. ಆದರೆ ಈ ರೀತಿ ಪ್ರಶ್ನಿಸುವವರಲ್ಲಿ ಬಹಳಷ್ಟು ಮಂದಿ ಆ ಅಂಕಣವನ್ನು ಓದಿಲ್ಲ. ಓದಿಯೂ ವಿರೋಧಿಸಿದವರಿಗೆ ಇದ್ದ ದುರುದ್ದೇಶ ಸ್ಪಷ್ಟವಾಗಿತ್ತು. ಎಷ್ಟೋ ಅಮಾಯಕ ಯುವಕರಿಗೆ ಕೆಲವು ಕಿಡಿಗೇಡಿಗಳು ಅಂಕಣದ ಆಯ್ದಭಾಗಗಳನ್ನಷ್ಟೇ ಕಳುಹಿಸಿ ಪ್ರಚೋದಿಸಿದ್ದಾರೆ. ನನ್ನ ಅಂಕಣವನ್ನು ಅರ್ಥಮಾಡಿಕೊಳ್ಳಲಾಗದ ಮೂಢಮತಿಗಳಿಗೆ ಇನ್ನಷ್ಟು ವಿವರಣೆಯ ಅಗತ್ಯ ಇರಬಹುದೆಂದು ಇನ್ನೊಂದು ಲೇಖನ ಪ್ರಜಾವಾಣಿಯಲ್ಲಿಯೇ ಬರೆದಿದ್ದೆ. (ಇದನ್ನೇ ಸೂಲಿಬೆಲೆಯಂತಹ ಪ್ರಚೋದನಕಾರಿಗಳು ಕ್ಷಮೆಯಾಚನೆ ಎಂದು ಸುಳ್ಳು ಬೊಗಳುತ್ತಿದ್ದಾರೆ) ಅದರ ನಂತರ ವಿರೋಧಿಸುವವರ ಬತ್ತಳಿಕೆ ಖಾಲಿಯಾಗಿ ಮೌನವಾಗಿದ್ದರು. ಈಗ ಮತ್ತೆ ಅಂಕಣ ಚರ್ಚೆಗೀಡಾಗಿದೆ. ಈ ಹಿನ್ನೆಲೆಯಲ್ಲಿ ಅಂಕಣಕ್ಕೆ ಆಧಾರವಾಗಿದ್ದ ಪುಸ್ತಕ ಮತ್ತು ಲೇಖಕನ ಬಗ್ಗೆ ಎಲ್ಲರೂ ಇನ್ನಷ್ಟು ತಿಳಿದುಕೊಳ್ಳುವ ಅಗತ್ಯ ಇದೆ ಎಂದು ನನಗನಿಸಿ ಒಂದಿಷ್ಟು ಮಾಹಿತಿಯನ್ನು ಕೊಡುತ್ತಿದ್ದೇನೆ.
ಖ್ಯಾತ ಬಂಗಾಳಿ ಲೇಖಕ ಮಣಿ ಸಂಕರ್ ಮುಖರ್ಜಿ ಅವರು 2003ರಲ್ಲಿ ‘ಅಚೆನಾ ಅಜೆನಾ ವಿವೇಕಾನಂದ’ (ಅಪರಿಚಿತ, ಅಪ್ರಕಟಿತ ವಿವೇಕಾನಂದ) ಎಂಬ ಪುಸ್ತಕವನ್ನು ಬಂಗಾಳಿಯಲ್ಲಿ ಬರೆದಿದ್ದರು. ಇದರ ಲಕ್ಷಾಂತರ ಪ್ರತಿಗಳು ಮಾರಾಟವಾಗಿದ್ದವು. ಮಣಿಸಂಕರ್ ಮುಖರ್ಜಿ ಬಂಗಾಳಿಯ ಖ್ಯಾತ ಕಾದಂಬರಿಕಾರ. ಅವರ ಎರಡು ಕಾದಂಬರಿಗಳಾದ ‘ಸೀಮಾಬದ್ಧ’ ಮತ್ತು ‘ಜನ ಅರಣ್ಯ’ ಎಂಬ ಎರಡು ಕಾದಂಬರಿಗಳನ್ನು ಸತ್ಯಜಿತ್ ರೇ ಚಲನಚಿತ್ರ ಮಾಡಿದ್ದರು. ತನ್ನ ಹನ್ನೊಂದನೆ ವಯಸ್ಸಿನಲ್ಲಿಯೇ ವಿವೇಕಾನಂದರ ಪ್ರಭಾವಕ್ಕೊಳಗಾಗಿದ್ದೆ ಎಂದು ಹೇಳಿಕೊಂಡಿರುವ ಮುಖರ್ಜಿ ವರ್ಷಗಳ ಕಾಲ ಕಷ್ಟಪಟ್ಟು ನಡೆಸಿದ ಸಂಶೋಧನೆಯ ಫಲ ಈ ಪುಸ್ತಕ.
ಇದು ಮುಖ್ಯವಾಗಿ ವಿವೇಕಾನಂದರ ಖಾಸಗಿ ಬದುಕಿಗೆ ಸಂಬಂಧಿಸಿದ್ದು. ಒಬ್ಬ ಮನುಷ್ಯನಾಗಿ ವಿವೇಕಾನಂದರು ಹೇಗಿದ್ದರು? ಸನ್ಯಾಸಿಯಾಗುವ ಮೊದಲು ಮತ್ತು ನಂತರ ಅವರ ಜೀವನದಲ್ಲಿ ತಾಯಿಯ ಪಾತ್ರ ಏನಿತ್ತು? ಕುಟುಂಬದ ಹಿರಿಯ ಮಗನ ಜವಾಬ್ದಾರಿ ಮತ್ತು ಸನ್ಯಾಸಿಯ ಕರ್ತವ್ಯಗಳ ನಡುವಿನ ಅವರ ತಾಕಲಾಟಗಳೇನಿತ್ತು? ಪಶ್ಚಿಮದ ರಾಷ್ಟ್ರಗಳಿಗೆ ಹೋಗಿ ವೇದಾಂತ ಮತ್ತು ಬಿರಿಯಾನಿಯನ್ನು ಪ್ರಚಾರ ಮಾಡಲು ಅವರಿಗೆ ಪ್ರೇರಣೆ ಏನಿತ್ತು? ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ ದೀರ್ಘಕಾಲ ನಡೆದ ಕಾನೂನಿನ ಸಮರ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿ ಅಕಾಲ ಸಾವಿಗೆ ಕಾರಣವಾಯಿತೇ? ಅವರಿಗೆ ಯಾವುದೆಲ್ಲ ಕಾಯಿಲೆಗಳಿದ್ದವು? ಅದಕ್ಕೆ ಅವರು ಯಾವ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು? ಅವರು ಪದವಿ ಶಿಕ್ಷಣದಲ್ಲಿ ಬೇರೆಬೇರೆ ವಿಷಯಗಳಿಗೆ ಪಡೆದ ಅಂಕಗಳೆಷ್ಟು? ಅವರ ಸೋದರರ ಜತೆಗಿನ ಸಂಬಂಧ ಹೇಗಿತ್ತು? ಅವರ ಇಷ್ಟದ ಪಲ್ಯ, ಹಣ್ಣು ಯಾವುದಾಗಿತ್ತು? ಅವರ ಎಷ್ಟು ಎತ್ತರ ಇದ್ದರು? ಅವರಿಗೆ ಎರಡನೆ ಹೃದಯಾಘಾತ ಎಲ್ಲಿ ಆಗಿತ್ತು?- ಮುಖ್ಯವಾಗಿ ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮಣಿಸಂಕರ್ ಮುಖರ್ಜಿ ಈ ಪುಸ್ತಕ ಬರೆದಿದ್ದರು,
ತನ್ನ ಬರವಣಿಗೆಗಾಗಿ ಓದಿದ ಪುಸ್ತಕಗಳು ಮತ್ತು ಸಂದರ್ಶಿಸಿದ ವ್ಯಕ್ತಿಗಳ ಪಟ್ಟಿಯನ್ನೂ ಅವರು ನೀಡಿದ್ದಾರೆ.
1. ಬಂಗಾಳಿ ಮತ್ತು ಇಂಗ್ಲೀಷ್ ನಲ್ಲಿರುವ ವಿವೇಕಾನಂದರ ಸಂಪೂರ್ಣ ಕೃತಿ ಸಂಪುಟ, (ಡಾ.ಬೇನಿ ಶಂಕರ್ ಶರ್ಮಾ ಮತ್ತು ಮೇರಿ ಲೂಯಿಸ್ ಬರ್ಕ್ ಅವರ ಸಂಶೋಧನೆಯ ಫಲವಾಗಿ ಬಂಗಾಳಿಗಿಂತಲೂ ಇಂಗ್ಲಿಷ್ ನಲ್ಲಿ ಹೆಚ್ಚು ವಿಸ್ತೃತವಾದ ಮಾಹಿತಿ ಇದೆ. ಮೇರಿ ಬರ್ಕ್ ಅವರು ‘ವಿವೇಕಾನಂದ ಇನ್ ದಿವೆಸ್ಟ್: ನ್ಯೂ ಡಿಸ್ಕವರೀಸ್ ಎನ್ನುವ ಆರು ಸಂಪುಟಗಳ ಪುಸ್ತಕ ಮಾಹಿತಿಗಳ ಗಣಿ ಎಂದು ಮುಖರ್ಜಿ ಹೇಳಿದ್ದಾರೆ).
2. ಸ್ವಾಮಿ ವಿವೇಕಾನಂದರ ಸೋದರ ಮಹೇಂದ್ರನಾಥ್ ದತ್ತಾ ಬರೆದಿರುವ ಸುಮಾರು 90 ಪುಸ್ತಕಗಳು ಮತ್ತು ಇನ್ನೊಬ್ಬ ಸೋದರ ಡಾ.ಭೂಪೇಂದ್ರನಾಥ ದತ್ತಾ ಬರೆದ ಪುಸ್ತಕಗಳು.
3. ಸ್ವಾಮಿ ಶಾರದಾನಂದ ಬರೆದ ಶ್ರೀ ರಾಮಕೃಷ್ಣ ಲೀಲಾಪ್ರಸಂಗ
4. ಸೋದರಿ ನಿವೇದಿತಾ ಬರೆದ ಲೇಖನಗಳು
5. ಸ್ವಾಮಿ ಗಂಭೀರಾನಂದ ಬರೆದಿರುವ ಯುಗನಾಯಕ ವಿವೇಕಾನಂದ ಪುಸ್ತಕ
6. ಪ್ರಮಥನಾಥ ಬಸು ಬರೆದಿರುವ ದಿ ಲೈಫ್ ಆಫ್ ಸ್ವಾಮಿ ವಿವೇಕಾನಂದ ಪುಸ್ತಕ
7. ಬ್ರಹ್ಮಚಾರಿ ಅಕ್ಷಯ ಚೈತನ್ಯ ಬರೆದಿರುವ ಲೇಖನಗಳು
8. ಶೈಲೇಂದ್ರನಾಥ್ ಧರ್ ಬರೆದಿರುವ ‘ಎ ಕಾಂಪ್ರೆನ್ಸಿವ್ ಬಯಾಗ್ರಫಿ ಆಫ್ ವಿವೇಕಾನಂದ’
9. ಚಿತ್ರಗುಪ್ತ ಬರೆದಿರುವ ಕಾನೂನಿಗೆ ಸಂಬಂಧಿಸಿದ ಲೇಖನಗಳು
10. ಬ್ರಹ್ಮಬೋದಿನಿ ಮತ್ತು ಪ್ರಬುದ್ಧ ಭಾರತದ ಹಳೆಯ ಸಂಚಿಕೆಗಳು
11. ಉದ್ಭದನ್ ಮತ್ತು ಶ್ರೀ ಶಾರದಾ ಮಠ ಪ್ರಕಟಿಸುತ್ತಿರುವ ನಿಬೋದಾತ ಪತ್ರಿಕೆ
-ಈ ಪುಸ್ತಕಗಳನ್ನಲ್ಲದೆ ವಿವೇಕಾನಂದರ ಬಗ್ಗೆ ಪ್ರಕಟವಾಗಿರುವ 200 ಪುಸ್ತಕಗಳನ್ನು ತಾನು ಓದಿದ್ದೇನೆ. ಇದರ ಜತೆಗೆ ರಾಮಕೃಷ್ಣ ಮಿಷನ್ ನ ಸ್ವಾಮಿ ರಮಾನಂದ, ವಿಶಾಖಾನಂದ ಮತ್ತು ಶರ್ಬಾಗಾನಂದ, ರಾಮಕೃಷ್ಣ ಸಾಂಸ್ಕೃತಿಕ ಕೇಂದ್ರದ ಗೋಪ ಬಸು ಹೀಗೆ ವಿವೇಕಾನಂದರ ಬಗ್ಗೆ ತಿಳಿದಿರುವ, ಸಂಶೋಧನೆ ಮಾಡಿರುವ ನೂರಾರು ವ್ಯಕ್ತಿಗಳ ಜತೆ ಚರ್ಚಿಸಿದ್ದೇನೆ. ವಿವೇಕಾನಂದರ ಕಲಿತಿರುವ ಶಾಲೆಗಳ ದಾಖಲೆಗಳನ್ನು ಪರಿಶೀಲಿಸಿದ್ದೇನೆ, ಅವರಿಗೆ ಚಿಕಿತ್ಸೆ ನೀಡಿರುವ ಆಸ್ಪತ್ರೆಗಳಿಗೆ ಹೋಗಿ ಮಾಹಿತಿ ಪಡೆದಿದ್ದೇನೆ ಎಂದು ಮಣಿಸಂಕರ್ ಮುಖರ್ಜಿ ತಿಳಿಸಿದ್ದಾರೆ.
ಒಬ್ಬ ಲೇಖಕ ಸುಮಾರು 250 ಪುಟಗಳ ಪುಸ್ತಕ ಬರೆಯಲು ಇಷ್ಟೊಂದು ತಯಾರಿ ನಡೆಸಿರುವ ಪ್ರಸಂಗಗಳು ಇರಬಹುದಾದರೂ ಅದು ಅಪರೂಪ. 2003ರಲ್ಲಿ ಪ್ರಕಟವಾಗಿದ್ದ ಈ ಬಂಗಾಳಿ ಪುಸ್ತಕದ ಜನಪ್ರಿಯತೆಯನ್ನು ಗಮನಿಸಿದ ಪೆಂಗ್ವಿನ್ ಪ್ರಕಾಶನದವರು ಇದರ ಇಂಗ್ಲಿಷ್ ಅನುವಾದವನ್ನು 2011ರಲ್ಲಿ ಪ್ರಕಟಿಸಿದರು. ಅದರ ಹೆಸರು ‘ The Monk as Man- The unknown life of Swami Vivekananda’
ಮಣಿಸಂಕರ್ ಮುಖರ್ಜಿ ಅವರ ಬಂಗಾಳಿ ಪುಸ್ತಕ ಪಶ್ಚಿಮ ಬಂಗಾಳದಲ್ಲಿ ವಿವಾದವನ್ನೇನಾದರೂ ಹುಟ್ಟು ಹಾಕಿತ್ತೇ ಎಂದು ಅಂಕಣವನ್ನು ಬರೆಯುವ ಮುನ್ನ ದೆಹಲಿಯಲ್ಲಿದ್ದಾಗ ನನಗೆ ಪರಿಚಿತರಾಗಿದ್ದ ಕೆಲವು ಬಂಗಾಳಿ ಪತ್ರಕರ್ತರನ್ನು ಕೇಳಿದ್ದೆ. ಅಂತಹದ್ದೇನೂ ನಡೆದಿಲ್ಲ ಎಂದು ಅವರು ತಿಳಿಸಿದ್ದರು. ನನ್ನ ಅಂಕಣ ವಿವಾದ ಸೃಷ್ಟಿಸಿದಾಗ ಮತ್ತೆ ದೆಹಲಿಯಲ್ಲಿ ನನಗೆ ಸಹದ್ಯೋಗಿಯಾಗಿದ್ದ ಪತ್ರಕರ್ತೆಯೊಬ್ಬರನ್ನು ಕೇಳಿದ್ದೆ. ಆಕೆ ಹೇಳಿದ್ದ ಒಂದು ಪ್ರಸಂಗ ಸ್ವಾರಸ್ಯಕರವಾಗಿದೆ. ವಿವೇಕಾನಂದರು ತನ್ನ ಕೊನೆಯ ದಿನಗಳಲ್ಲಿ ಸಹಚರರನ್ನು ಕರೆದು ‘ನಾನು ಸತ್ತ ನಂತರ ನೀವು ನನ್ನ ಪೋಟೊ ಇಟ್ಟು ಊದುಕಡ್ಡಿ ಹಚ್ಚಿ ದೇವರುಮಾಡುತ್ತಿರೆಂದು ನನಗೆ ಗೊತ್ತು. ಅಂಹತದ್ದೇನಾದರೂ ಮಾಡಿದರೆ ದೆವ್ವವಾಗಿ ಬಂದು ನಿಮ್ಮ ತಲೆ ಒಡೆದುಹಾಕುತ್ತೇನೆ’’ ಎಂದಿದ್ದರಂತೆ.
ದೆವ್ವಗಳಿರುವುದೇ ನಿಜವಾಗಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅಲ್ವೇ?