Friday, January 8, 2016

ಪ್ರತಿಕ್ರಿಯಿಸಲು ಮೂರು ಕಾರಣ

ಪ್ರಿಯ ಪ್ರೇಮ ಶೇಖರ್ ಅವರೆ,
ಬೊಳುವಾರು ಅವರ ಹಳೆಯ ಲೇಖನದ ಬಗ್ಗೆ ಪ್ರತಿಕ್ರಿಯಿಸಲು ಎರಡು ದಿನ ತೆಗೆದುಕೊಂಡಿರುವ ನೀವು ಕೊನೆಗೂ ಮೂಲ ಲೇಖನವನ್ನು ಓದದೆ ತಮ್ಮೆಲ್ಲ ಶಬ್ದ ಭಂಡಾರವನ್ನು ನನ್ನ ಹೀಯಾಳಿಕೆ, ತೆಗಳಿಕೆ ಮತ್ತು ಬುದ್ದಿವಾದ ನೀಡಲು ಹಾಗೂ ಪರಿವಾರದ ಹಳೆಯ ಸರಕುಗಳನ್ನು ರಿಸೈಕಲ್ ಮಾಡಲು ಬರಿದುಮಾಡಿದ್ದೀರಿ.ನಿಮ್ಮಲ್ಲಿದ್ದಿರಬಹುದಾದ ಜ್ಞಾನ ಭಂಡಾರವನ್ನು ಬಳಸಿಯೇ ಇಲ್ಲ.
-ಇಷ್ಟು ಹೇಳಿ ಸುಮ್ಮನಾಗಬಹುದಿತ್ತೋ ಏನೋ?
ಆದರೆ ನಿಮ್ಮ ಹಿರಿತನಕ್ಕೆ ಸೂಕ್ತ ಗೌರವ ಕೊಡಬೇಕಾದುದು ನನ್ನ ಧರ್ಮ. ಪ್ರತಿಕ್ರಿಯಿಸಲು ಹೊಸದಾಗಿ ಓದಬೇಕಾದುದು ಏನೂ ಇಲ್ಲ. ಬರೆಯಲು ಸಮಯ ಬೇಕು. ಪುರುಸೊತ್ತು ಮಾಡಿಕೊಂಡು ನಿಮಗೆ ಪ್ರೇಮಪೂರ್ವಕವಾಗಿಯೇ ಉತ್ತರಿಸುತ್ತೇನೆ. ನಮಸ್ಕಾರ
Date: 05-01-2016
---------------------------------------------------------------------------------------------------------------------------------
Date: 07-01-2016
ಪ್ರೀತಿಯ ಪ್ರೇಮಶೇಖರ್, ನಿಮ್ಮ ಸ್ಟೇಟಸ್ ಗೆ ಪ್ರತಿಕ್ರಿಯಿಸಬೇಕೇ ಬೇಡವೇ ಎಂಬ ಬಗ್ಗೆ ನಾನೂ ಗೊಂದಲದಲ್ಲಿದ್ದೆ. ಇದಕ್ಕೆ ಮೂರು ಕಾರಣಗಳು:
1. ನಮ್ಮ ಚರ್ಚೆಗೆ ಕಾರಣವಾಗಿರುವ ಬೊಳುವಾರು ಲೇಖನವನ್ನು ನೀವು ಓದಿಲ್ಲ, ಯಾಕೆಂದರೆ ಅದರ ಪ್ರತಿ ನಿಮ್ಮಲ್ಲಿಲ್ಲ, ನನ್ನನ್ನು ಕೇಳಿದ್ದರೆ ಅದನ್ನು ಕಳಿಸಿಕೊಡುತ್ತಿದ್ದೆ. ಅದನ್ನು ಓದಿ ಅರಗಿಸಿಕೊಂಡು ನೀವೇ ಇತರರಿಗೆ ಬೋದಿಸುತ್ತಿರುವಂತೆ ‘ಅರಿವಿನ ವಿಕಾಸ ಮಾಡಿಕೊಂಡು’ ಸಾವಧಾನವಾಗಿ ಪ್ರತಿಕ್ರಿಯಿಸಬಹುದಿತ್ತು. ಆದರೆ ನಿಮಗೆಷ್ಟು ಅವಸರವಿತ್ತೆಂದರೆ ನಾನು ಅಂಟಿಸಿದ್ದ ಒಂದು ಪುಟದ ಪೋಟೋ ಪ್ರತಿಯ ಅಸ್ಪಷ್ಟ ಸಾಲುಗಳನ್ನು ಓದಿ ನೀವು ವಾಗ್ವಾದದ ಅಂಗಳಕ್ಕೆ ಹಾರಿಬಿಟ್ಟಿದ್ದೀರಿ. ಇದರಿಂದಾಗಿ ಸ್ಪರ್ಧೆ ಯಾವುದೆಂದು ಗೊತ್ತಿಲ್ಲದೆ ಅಖಾಡಕ್ಕೆ ಹಾರಿ ಎಡವಿಬಿಟ್ಟ ಕುಸ್ತಿಪಟುವಿನಂತೆ ನೀವು ಕಾಣುತ್ತಿದ್ದೀರಿ. ಒಂದು ಅವಕಾಶ ಸಿಕ್ಕಿತಲ್ಲಾ, ಏನಾದರೂ ಮಾಡಿ ಈ ನನ್ಮಗನಿಗೆ ಗುದ್ದಿ ಬಿಡಬೇಕು, ಈ ಮೂಲಕ ಪ್ರಚಾರ ಗಿಟ್ಟಿಸಿಕೊಂಡು ಈತನನ್ನು ವಿನಾಕಾರಣ ದ್ವೇಷಿಸುವ ಪಡ್ಡೆ ಹುಡುಗರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕು ಎನ್ನುವ ಕಿಡಿಗೇಡಿತನದ ಆಲೋಚನೆಯೊಂದು ನಿಮ್ಮ ಪ್ರತಿಕ್ರಿಯೆಯಲ್ಲಿ ನಾನು ಕಂಡೆ. ಅದರಲ್ಲಿ ನೀವು ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದೀರಿ. ಇಂತಹ ಯಶಸ್ಸು ಇನ್ನಷ್ಟು ನಿಮ್ಮ ಪಾಲಾಗಲಿ. ಯಾವುದನ್ನೂ ಬಚ್ಚಿಟ್ಟುಕೊಳ್ಳದೆ ನಿಮ್ಮನ್ನು ನೀವು ಇಷ್ಟುಚೆನ್ನಾಗಿ ಪರಿಚಯಿಸಿಕೊಂಡಿರುವಾಗ ನಾನೇನು ಪ್ರತಿಕ್ರಿಯಿಸಲಿ?
2. ಬೊಳುವಾರು ಬರೆದಿರುವುದು ಇಸ್ಲಾಂ ಹೇಗೆ ಪ್ರಪಂಚದಾದ್ಯಂತ ಪಸರಿಸಿತು ಎಂಬ ವಿಷಯದ ಮೇಲಿನ ಸಂಶೋಧನಾತ್ಮಕ ಪ್ರಬಂದ ಅಲ್ಲ. ‘ ಮುಸ್ಲಿಮನೆಂಬ ಪೂರ್ವಗ್ರಹದ ಕನ್ನಡಕವನ್ನು ಕಿತ್ತುಹಾಕಿ ಇತರರಂತೆ ನನ್ನನ್ನೂ ನಿಮ್ಮವನಂತೆ ಕಾಣಿರಿ’ ಎಂದು ಬೇಡಿಕೊಳ್ಳುತ್ತಿರುವ ಸಾಮಾನ್ಯ ‘ಮಹಮ್ಮದ’ ನ ಮನಸ್ಸಿನ ತಳಮಳ ಅದು. “ ....ಸೋಮನಾಥ ದೇವಾಲಯವನ್ನು ಆರ್ಥಿಕ ದಾಹದಿಂದ ಸೂರೆಗೈದ ಘಜನಿ ಮಹಮ್ಮದನನ್ನು ಮೂರ್ತಿ ಭಂಜಕನೆಂದು, ಹಿಂದೂ ಧರ್ಮದ ವಿರೋಧಿಯೆಂದು ವೈಭವೀಕರಿಸುತ್ತಾ, ಘಜನಿ ಎನ್ನುವುದು ಮರವೋ, ಕುದುರೆಯೋ ಎಂದು ಗೊತ್ತಿರದ ಬಡ ಬೀಡಿಕಾರ್ಮಿಕನ ಮಗ ‘ಮಹಮ್ಮದ’ ನನ್ನು ಕೂಡಾ ತೋಳಕುರಿಮರಿ ನೀರು ನ್ಯಾಯದಲ್ಲಿ ಇಂದಿನ ಮುಂದಿನ ಎಲ್ಲ ತಲೆಮಾರುಗಳನ್ನು ಮೋಸ ಗೊಳಿಸುತ್ತಿದ್ದಾರೆ...’’ ಎನ್ನುವ ಸಾಲುಗಳೇ ‘ಮುಸ್ಲಿಮನಾಗಿರುವುದೆಂದರೆ’ ಲೇಖನ ಎತ್ತಿದ್ದ ಮೂಲ ಪ್ರಶ್ನೆ. ಇದಕ್ಕೆ ನೀವು ಉತ್ತರಿಸಿಲ್ಲ.
ನೀವೇ ಬರೆದಂತೆ ಇಸ್ಲಾಂ ಕತ್ತಿ ಹಿಡಿದುಕೊಂಡೇ ಧರ್ಮ ಪ್ರಸಾರ ಮಾಡಿತೆಂದು ಒಪ್ಪಿಕೊಳ್ಳುವ. ನೀವು ಏನು ಮಾಡಬೇಕೆಂದಿದ್ದೀರಿ? ನಿಮಗೆ ಪರಿಚಯವೇ ಇಲ್ಲದ ‘ಮಹಮ್ಮದ’ ನನ್ನು ಬಿಟ್ಟುಬಿಡಿ, ನಿಮ್ಮ ಗೆಳೆಯರಾದ ಬೊಳುವಾರು ಇಲ್ಲವೇ ಜೆ ಎನ್ ಯು ನಲ್ಲಿ ನಿಮ್ಮ ರೂಮ್ ಮೇಟ್ ಆಗಿದ್ದ ಮುಜಫರ್ ಅಸ್ಸಾದಿ ಅವರ ತಲೆ ಕಡಿಯುತ್ತೀರಾ? ಇಂತಹ ಮನಸ್ಥಿಯವರ ಜತೆ ಏನು ಚರ್ಚೆ ಮಾಡಲಿ?
3. ಇಸ್ಲಾಂ ಧರ್ಮದ ಪ್ರಸಾರದ ಬಗ್ಗೆ ನೀವು ಹೇಳಿರುವುದರಲ್ಲಿ ಸಾಸಿವೆಯಷ್ಟಾದರೂ ಹೊಸತಿದೆಯೇ? ಹತ್ತು ಕಡಿಮೆ ನೂರು ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರು ಇದನ್ನೇ ಹೇಳುತ್ತಾ ಬಂದಿದ್ದಾರೆ. ಅದಕ್ಕಿಂತ ಮೊದಲು ಅದನ್ನು ಹಿಂದೂ ಮಹಸಭಾದ ನಾಯಕರು ಹೇಳಿದ್ದರು. ಅವರು ಹೇಳದಿರುವ ಒಂದು ಸಾಲು ನಿಮ್ಮ ಬರಹದಲ್ಲಿ ಎಲ್ಲಿದೆ ಎಂದು ತಿಳಿಸಿ? ಹೊಸ ಅರಿವಿನ ಬೆಳಕು ತಪ್ಪಿಯೂ ಒಳಸೂಸಬಾರದೆಂಬ ಹಟದಿಂದ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿಕೊಂಡು ಹಳೆಯ ಕಂತೆ ಪುರಾಣಗಳನ್ನು ಉರುಹಾಕಿಕೊಂಡು ಕೂತಿರುವವರ ಜತೆ ಚರ್ಚೆ ನಡೆಸಿ ಯಾರಿಗಾದರೂ ಏನು ಲಾಭ?
ಈ ಮೂರು ಕಾರಣಗಳಿಗಾಗಿ ಪ್ರತಿಕ್ರಿಯಿಸುವುದೇ ಬೇಡ ಎಂದಾಗಿತ್ತು. ಆದರೆ ನಮ್ಮ ಯುವಸಮುದಾಯದ ಬಹುದೊಡ್ಡ ಭಾಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಅವರಲ್ಲಿ ಹೆಚ್ಚಿನವರು ಕುರುಡು ಭಕ್ತರು. ಸೂತ್ರಧಾರಿಗಳು ಹೇಳಿದಂತೆ ಕುಣಿಯುತ್ತಿರುವ ಪಾತ್ರಧಾರಿಗಳು. ಅವರೆಲ್ಲ ಮೆಳ್ಳೆಗಣ್ಣಿನ ಇತಿಹಾಸಕಾರರು ಹೇಳಿರುವುದೇ ನಿಜ ಎಂದು ತಿಳಿದು ಅದನ್ನೇ ಉರುಹೊಡೆದು ತಮ್ಮ ಆಯುಧಗಳನ್ನಾಗಿ ಮಾಡಿಕೊಂಡು ಕಂಡಕಂಡವರ ಮೇಲೆ ಎರಗುವವರು. ಕನಿಷ್ಠ ಅಂತಹವರಲ್ಲಿ ಕೆಲವರದ್ದಾದರೂ ಅರಿವಿನ ವಿಕಾಸವಾಗಲಿ ಎನ್ನುವುದಕ್ಕಾಗಿಯಾದರೂ ಪ್ರತಿಕ್ರಿಯಿಸಬೇಕೆಂದು ಅನಿಸಿತು. ನನ್ನ ಪ್ರತಿಕ್ರಿಯೆಗಾಗಿ ನಿಮ್ಮ ಚಡಪಡಿಕೆ ಕೂಡಾ ನನ್ನ ನಿರ್ಧಾರದ ಬದಲಾವಣೆಗೆ ಕಾರಣ.
ನೇರವಾಗಿ ವಿಷಯಕ್ಕೆ ಬರೋಣ ಅಂತಿದ್ದೆ. ಆದರೆ ನಿಮ್ಮ ಉತ್ತರದಲ್ಲಿದ್ದ ಪೀಠಿಕೆಯನ್ನು ನಿರ್ಲಕ್ಷಿಸಿದ್ದರೆ ನಿಮ್ಮ ಹಿರಿತನವನ್ನು ಅಗೌರವಿಸಿದಂತಾಗುತ್ತದೆ ಎಂದು ಮೊದಲು ಅದಕ್ಕೆ ಪ್ರತಿಕ್ರಿಯಿಸುವೆ. ನಿಜ ಹೇಳಬೇಕೆಂದರೆ ‘ ನಿಮ್ಮ ಓದು ಸೀಮಿತ ‘ ಎಂಬ ನನ್ನ ಬಗೆಗಿನ ನಿಮ್ಮ ತೀರ್ಪು ಓದಿದಾಗ ಹೆಚ್ಚೇನೂ ಓದದ ನನ್ನಜ್ಜನ ನೆನಪಾಯಿತು. ಆತ ಮಾತುಮಾತಿಗೆ ‘’ನಿನಗೇನೋ ಗೊತ್ತೋ? ನಾನು...’’ ಎಂದೇ ಮಾತು ಪ್ರಾರಂಭಿಸುತ್ತಿದ್ದದ್ದು. ಈ ಹಿರೀಕ ಏನೋ ನನಗೆ ಗೊತ್ತಿಲ್ಲದ್ದನ್ನು ಹೇಳುತ್ತಾನೆ ಎಂದು ಬೊಗಸೆಯೊಡ್ಡಿ ನಿಂತರೆ ಅದು ಖಾಲಿ ಖಾಲಿ. 50-60 ವರ್ಷಗಳಿಂದ ಹೇಳುತ್ತಾ ಬಂದುದನ್ನೇ ಅವನು ರಿಸೈಕಲ್ ಮಾಡುತ್ತಿದ್ದ.
ನಿಜ ಹೇಳಬೇಕೆಂದರೆ ನೀವು ಅಂಕಣಕಾರ ಪ್ರೇಮಶೇಖರ ಎಂದು ನನಗೆ ಗೊತ್ತಿರಲಿಲ್ಲ. ಪತ್ರಿಕೆಗಳಿಗೆ ಬರೆಯುವವರಿಗೆ ನಾವೆಲ್ಲ ಸೆಲೆಬ್ರೆಟಿಗಳು, ಹೆಸರು ಕೇಳಿದ ಕ್ಷಣ ಜನ ಗುರುತಿಸುತ್ತಾರೆ ಎಂಬ ಭ್ರಮೆ ಇರುತ್ತದೆ. ವಾಸ್ತವದಲ್ಲಿ ಹಾಗಿರುವುದಿಲ್ಲ ಎನ್ನುವುದನ್ನು ಸುಮಾರು ಮೂರು ದಶಕಗಳ ವೃತ್ತಿ ಅನುಭವದಿಂದ ಹೇಳುತ್ತಿದ್ದೇನೆ. ಜನರಿಗೆ ನಮ್ಮಂತಹವರನ್ನು ನೆನಪಲ್ಲಿಟ್ಟುಕೊಳ್ಳಲು ಪುರುಸೊತ್ತಿರುವುದಿಲ್ಲ. ಪಾಪ ಅವರಿಗೆ ತಲೆಕೆಡಿಸಿಕೊಳ್ಳಲು ಅವರದ್ದೇ ಸುಖ-ದು:ಖಗಳಿರುತ್ತವೆ. ನನ್ನ ಹೆಸರಿನ ಮಟ್ಟು ತೆಗೆದು ಗೂಗಲ್ ಗೆ ಹಾಕಿದರೆ ಅದೇ ಹೆಸರಿನ ನೂರು ಹೆಸರು ಬರುತ್ತದೆ. ನಿಮ್ಮದು ಅದೇ ರೀತಿಯ ಸಾಮಾನ್ಯ ಹೆಸರು.
ನಿಮ್ಮ ಪ್ರತಿಕ್ರಿಯೆಯನ್ನು ನಾನು ಓದಿದ್ದು ನಿಮ್ಮ ಸ್ಟೇಟಸ್ ನಲ್ಲಿಯಲ್ಲ. ಯಾರೋ ಮೋಹನಗೌಡ ಎಂಬವರೊಬ್ಬರು ಅದನ್ನು ತಮ್ಮ ಪ್ರತಿಕ್ರಿಯೆಯಲ್ಲಿ ಅಂಟಿಸಿಕೊಂಡಿದ್ದರು. ಕೊನೆಯಲ್ಲಿ ಪ್ರೇಮಶೇಖರ ಎಂದಿತ್ತು. ನನಗೆ ನೀವು ಬರೆದ ವಿಷಯವಷ್ಟೇ ಪ್ರಮುಖವಾಗಿದ್ದ ಕಾರಣ ನಿಮ್ಮ ಹೆಸರಿನ ಸಂಶೋಧನೆಗೆ ಹೋಗಲಿಲ್ಲ, ಬೇಸರವಾಗಿದ್ದರೆ ಕ್ಷಮಿಸಿ. ನಾನು ಲೇಖಕನ ವ್ಯಕ್ತಿತ್ವವನ್ನು ಆತನ ಲೇಖನಗಳ ಮೂಲಕವೇ ಅರ್ಥಮಾಡಿಕೊಳ್ಳುತ್ತಾ ಬಂದವನು, ಹೆಸರು, ಅದಕ್ಕಿರುವ ಬಾಲ-ಬಿರುದಾವಳಿಗಳ ಮೂಲಕ ಅಲ್ಲ. ಕೆಲವರು ಇರುವುದು ಒಂದು ರೀತಿ, ಬರೆಯುವುದೇ ಇನ್ನೊಂದು ರೀತಿ. ನೀವು ಅವರ ಸಾಲಿಗೆ ಸೇರಿದವರಲ್ಲ ಎಂದು ನಾನು ನಂಬಿದ್ದೇನೆ.
ನಿಮ್ಮ ಪ್ರತಿಕ್ರಿಯೆ ಓದಿದ ನಂತರ ನಿಮ್ಮ ಅಪೇಕ್ಷೆಯಂತೆ ನೀವು ಯಾರೆಂದು ತಿಳಿದುಕೊಳ್ಳಲು ಪ್ರಯತ್ನಿಸಿದೆ. ಆಗ ನನಗೆ ತಿಳಿದುಬಂದುದ್ದೆಲ್ಲವನ್ನೂ ಹೇಳಿ ನಿಮ್ಮ ಮನಸ್ಸಿಗೆ ನೋಯಿಸುವುದು ನನಗೆ ಇಷ್ಟ ಇಲ್ಲ. ನನ್ನ ಗೆಳೆಯರಾದ ಮುಜಫರ್ ಅಸ್ಸಾದಿ, ಅಶೋಕ ಶೆಟ್ಟರ್ , ಡೆಕ್ಕನ್ ಹೆರಾಲ್ಡ್ ನ ಕೆ.ಸುಬ್ರಹ್ಮಣ್ಯ ಮೊದಲಾದವರೆಲ್ಲರೂ ನಿಮಗೂ ಗೆಳೆಯರು ಎಂಬುದನ್ನು ತಿಳಿದುಕೊಂಡೆ. ಅವರೆಲ್ಲರ ಜತೆ ನಾನು ನಿಮ್ಮ ಬಗ್ಗೆ ಚರ್ಚಿಸಲು ಹೋಗಲಿಲ್ಲ. ಆದರೆ ಪಾಂಡಿಚೇರಿಯಲ್ಲಿ ನಿಮ್ಮ ಶಿಷ್ಯನಾಗಿದ್ದೆ ಎಂದು ಹೇಳಿಕೊಂಡವನೊಬ್ಬ ಫೇಸ್ ಬುಕ್ ನಲ್ಲಿ ಮೆಜೆಜ್ ಕಳಿಸಿದ್ದ. ಅವನು ವ್ಯಕ್ತಪಡಿಸಿರುವ ನೋವು, ಆಕ್ರೋಶ ಗುರುವೆನಿಸಿಕೊಂಡ ಯಾರಿಗೂ ಶೋಭೆ ತರುವಂತಹದ್ದಲ್ಲ. ಆ ಮೇಲೆ ನಿಮ್ಮ ಬರವಣಿಗೆಗಳನ್ನೂ ಒಂದಷ್ಟು ತಿರುವಿಹಾಕಿದೆ. ಗೌರಿ ಎನ್ನುವ ಒಬ್ಬ ಹೆಣ್ಣುಮಗಳನ್ನು ‘ಗೋರಿ’ ಎಂದು ಗೇಲಿಮಾಡುವ ವಿಕೃತಿ ಬಗ್ಗೆ ಏನು ಹೇಳಲಿ?
ನಿಮ್ಮ ಇನ್ನೊಂದು ಪ್ರಶ್ನೆ/ಸಲಹೆಗೆ ಕೂಡಾ ಉತ್ತರಿಸಬೇಕಾಗಿದೆ. ಇದನ್ನು ಬಹಳಷ್ಟು ಖಾಂಜಿಪೀಂಜಿಗಳು ಆಗಾಗ ಕೇಳುತ್ತಿರುತ್ತಾರೆ.. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವ ಮಾಧ್ಯಮ ಸಲಹೆಗಾರರು ದನದ ಮಾಂಸ ತಿನ್ನುತ್ತಾರೆ ಎಂದು ಶಾಸಕ ಸಿ.ಟಿ.ರವಿ ವಿಧಾನಸಭೆಯಲ್ಲಿಯೇ ಹೇಳಿದ್ದರು. ಅವರೇನೋ ಆಗಾಗ ಇಂತಹ ಜೋಕ್ ಮಾಡುತ್ತಿರುತ್ತಾರೆ. ತಿಳಿದವರಾದ ನೀವು ಹೇಳಿ, ಸರ್ಕಾರದ ಸಂಬಳ ಪಡೆಯುತ್ತಿರುವವರು ಬಾಯಿಮುಚ್ಚಿಕೊಂಡಿರಬೇಕು, ದನದ ಮಾಂಸ ತಿನ್ನುವುದಿರಲಿ, ಅದರ ಬಗ್ಗೆ ಮಾತನಾಡಬಾರದು ಎಂದು ಸಂವಿಧಾನದ ಯಾವ ಪರಿಚ್ಛೇದ ಇಲ್ಲವೇ ಅಪರಾಧ ದಂಡ ಸಂಹಿತೆಯ ಯಾವ ಸೆಕ್ಷನ್ ಹೇಳಿದೆ? ಇದನ್ನು ನೀವು ತಿಳಿಸಿದರೆ ನಾನು ಸ್ವಯೀಚ್ಚೆಯಿಂದ ಗಲ್ಲುಗಂಬಕ್ಕೇರುತ್ತೇನೆ.
ನಮ್ಮ ಸಚಿವರು ಕೂಡಾ ಜನತೆಯ ತೆರಿಗೆಯ ಹಣದಿಂದ ಸಂಬಳ-ಸೌಲಭ್ಯ ಪಡೆದುಕೊಳ್ಳುವವರು. ನಿಮ್ಮ ಲಾಜಿಕ್ ಪ್ರಕಾರ ಅವರು ಕೂಡಾ ಒಂದು ಪಕ್ಷದ ವಿರುದ್ದ ಇಲ್ಲ ಪರ ಮಾತನಾಡಬಾರದೇ? ಹಿಂದಿನ ಸರ್ಕಾರ ನೇಮಿಸಿದ್ದ ಸೆನೆಟ್, ಅಕಾಡೆಮಿಕ್ ಕೌನ್ಸಿಲರ್ ಸದಸ್ಯರಾಗಿದ್ದವರು, ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಮುಜುಗರ ಇಲ್ಲದ ಅಧಿಕಾರ ಅನುಭವಿಸುತ್ತಾ ಯಾವ ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದರೋ ಅದೇ ಸರ್ಕಾರವನ್ನು ಸಾರ್ವಜನಿಕವಾಗಿ ಹಿಗ್ಗಾ ಮುಗ್ಗಾ ಬೈಯ್ಯುತ್ತಿದ್ದಾರಲ್ಲಾ ಅದು ಯಾವ ನೈತಿಕತೆಯ ಸಂಹಿತೆಯಲ್ಲಿ ಬರುತ್ತೆ? ಧಾರ್ಮಿಕ ಸಾಮರಸ್ಯವನ್ನು ಕೆಡಿಸುವುದೇ ತಮ್ಮ ಉದ್ಯೋಗ ಮಾಡಿಕೊಂಡಿರುವ ಕೇಸರಿ ಪಡೆಯ ನಾಯಕರ ಅಕ್ಕಪಕ್ಕದಲ್ಲಿ ಪೋಲಿಸ್ ಇಲಾಖೆ ನೀಡಿರುವ ಅಂಗರಕ್ಷಕರಿದ್ದಾರಲ್ಲಾ ಅವರಿಗೆ ಯಾರ ತೆರಿಗೆ ಹಣದಿಂದ ಸಂಬಳ ಕೊಡುತ್ತಿರುವುದು ಸ್ವಾಮಿ? ಫೇಸ್ ಬುಕ್ ನಲ್ಲಿ ಕೆಲವು ಪಡ್ಡೆ ಹುಡುಗರು ಟಿಆರ್ ಪಿಗಾಗಿ ಏನೇನೋ ಮಕ್ಕಳ ಕತೆ ಬರೆಯುತ್ತಿರುತ್ತಾರೆ ಅದನ್ನು ನಿಮ್ಮಂತಹವರು ಗಂಭೀರವಾಗಿ ತೆಗೆದುಕೊಳ್ಳುವುದೇ?
ಈಗ ನಿಮ್ಮ ಪ್ರತಿಕ್ರಿಯೆಯ ಕೇಂದ್ರಕ್ಕೆ ಬರುತ್ತೇನೆ. ಅರೆ, ಆಗಲೇ 800 ಶಬ್ದಗಳಾಗಿವೆ. ಒಂದೇ ಗುಟುಕಿಗೆ ಓದಿ ಅರಗಿಸಿಕೊಳ್ಳುವುದು ನಿಮಗೂ ಕಷ್ಟ. ಮುಂದಿನದ್ದನ್ನು ಎರಡನೆ ಕಂತಿನಲ್ಲಿ ಬರೆಯುತ್ತೇನೆ. (ಸದ್ಯ ಮುಖ್ಯಮಂತ್ರಿಗಳ ‘ತಲೆಕೆಡಿಸುವ’ ಸಲಹೆಗಳನ್ನು ತುರ್ತಾಗಿ ನೀಡಬೇಕಾಗಿದೆ) ಸದ್ಯಕ್ಕೆ ಇದನ್ನು ಓದಿರಿ. ನೀವು ಮುಂಬೈನಲ್ಲಿದ್ದೀರಿ ಎಂದು ನಿಮ್ಮ ಗೆಳೆಯ ಅಶೋಕ್ ಶೆಟ್ಟರ್ ಬರೆದಿರುವುದನ್ನು ಓದಿದೆ.. ನಾನು ಅಲ್ಲಿಯೇ ಹುಟ್ಟಿದವನು. ನನಗೆ ಅಲ್ಲಿ ಒಂದಿಷ್ಟು ಗೆಳೆಯರಿದ್ದಾರೆ. ಸಹಾಯ ಬೇಕಿದ್ದರೆ ತಿಳಿಸಿ. ವೈಯಕ್ತಿಕ ಸ್ನೇಹ ಬೇರೆ, ಸೈದ್ಧಾಂತಿಕ ಜಗಳ ಬೇರೆ. ಸದ್ಯದಲ್ಲಿಯೇ ನಿಮ್ಮ ಓದಿಗಾಗಿ ನನ್ನ ಪ್ರತಿಕ್ರಿಯೆಯ ಎರಡನೆ ಕಂತು ನಿಮ್ಮನ್ನು ತಲುಪಲಿದೆ. ನಮಸ್ಕಾರ.

Sunday, January 3, 2016

ಅಪರಾಧ ಸಿದ್ದವಾಗುವ ತನಕ ಆರೋಪಿ ಅಪರಾಧಿಯೆನ್ನಿಸಲಾರ

ಬೊಳುವಾರು ಅವರ ಹಳೆಯ ಲೇಖನವೊಂದನ್ನು ಉಲ್ಲೇಖಿಸಿ ನಾನು ಬರೆದ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಪ್ರೇಮಶೇಖರ ಎಂಬವರು (ಇವರ್ಯಾರು ಎಂದು ನಿಜಕ್ಕೂ ನನಗೆ ಗೊತ್ತಿಲ್ಲ) ‘ಮೂವತ್ತಾಲ್ಕು ವರ್ಷಗಳಲ್ಲಿ ನೇತ್ರಾವತಿಯಲ್ಲಿ ಸಾಕಷ್ಟು ನೀರು ಹರಿದಿದೆ..ಬೊಳುವಾರು ಅವರು ಬೆಳೆಯುತ್ತಾ ಹೋಗಿದ್ದಾರೆ.. ಅದನ್ನು ಓದಿದವರು ಅದನ್ನೇ ಪವಿತ್ರಗ್ರಂಥವೆಂದು ಇಂದಿಗೂ ನಂಬಿಬಿಟ್ಟಿದ್ದಾರೆ. ಅದರಾಚೆಗೆ ಬೆಳೆಯುವ ಪ್ರಯತ್ನವನ್ನೇ ಅವರು ಮಾಡಿಲ್ಲ. ತಾವೂ ಬೆಳೆಯಲಿಲ್ಲ,ಕರ್ನಾಟಕವನ್ನೂ ಬೆಳೆಯಲು ಬಿಡುತ್ತಿಲ್ಲ, ಬೊಳುವಾರರನ್ನು ಅಂದಿನ ದಿನಗಳಿಗೆ ಕಟ್ಟಿಹಾಕಲು ನೋಡುತ್ತಿದ್ದಾರೆ..... ಎಂದೆಲ್ಲ ಬರೆದಿದ್ದಾರೆ. ಇದನ್ನು ಮೋಹನ ಗೌಡ ಎನ್ನುವವರು ನನ್ನ ವಾಲ್ ಗೆ ಅಂಟಿಸಿದ್ದಾರೆ.
ಅವರ ಬಡಬಡಿಕೆ ಬಗ್ಗೆ ತೀರ್ಮಾನ ಕೈಗೊಳ್ಳುವ ಮೊದಲು ಬೊಳುವಾರು ಬರೆದಿದ್ದ ಲೇಖನದ ಕೆಲವು ಸಾಲುಗಳನ್ನು ಓದಿರಿ:
- ಕಾನೂನು ಶಾಸ್ತ್ರದಲ್ಲಿ ಅಪರಾಧ ಸಿದ್ದವಾಗುವ ತನಕ ಆರೋಪಿ ಅಪರಾಧಿಯೆನ್ನಿಸಲಾರ, ಆದರೆ ಭಾರತದಲ್ಲಿ ಆಕಸ್ಮಿಕವಾಗಿ ಹುಟ್ಟಿ ಬದುಕನ್ನು ಅನಿವಾರ್ಯವಾಗಿ ಎದುರಿಸಬೇಕಾಗಿರುವ ಪ್ರತಿಯೊಬ್ಬಮುಸ್ಲಿಮನೂ ತನ್ನ ನಿರಪರಾಧಿ ಸಾಬೀತಾಗುವ ತನಕ ಅಪರಾಧಿಯೇ ಆಗಿ ಉಳಿಯಬೇಕಾಗಿದೆ.
- ಮುಸ್ಲಿಮರು ಜನ್ಮತ: ಕ್ರೂರಿಗಳು, ಪ್ರತಿಯೊಂದು ಮನೆಯಲ್ಲೂ ಮಾರಕ ಆಯುಧಗಳಿವೆ, ಪ್ರತಿಯೊಂದು ಮಸೀದಿಯೂ ಶಸ್ತ್ರಾಗಾರ, ಮುಸ್ಲಿಮರೆಲ್ಲ ನಾಲ್ಕು ಮದುವೆಯಾಗಿ ನಲವತ್ತು ಮಕ್ಕಳನ್ನು ಹುಟ್ಟಿಸುತ್ತಾರಾದ್ದರಿಮದ ಅವರ ಜನಸಂಖ್ಯೆ ಅಧಿಕವಾಗುತ್ತದೆ. ಅವರು ಕುಟುಂಬ ಯೋಜನೆಗೆ ತಯಾರಾಗಿಲ್ಲ, ರಾಷ್ಟ್ರೀಯ ಜನಪ್ರವಾಹದೊಂದಿಗೆ ಬೆರೆಯುವುದಿಲ್ಲ. ಅವರು ಪಾಕಿಸ್ತಾನದ ಏಜಂಟರು. ಭಾರತ ಪಾಕಿಸ್ತಾನ ವಿರುದ್ಧ ಹಾಕಿಯಲ್ಲಿ ಸೋತಾಗ ರೇಡಿಯೋಗೆ ಹೂಮಾಲೆ ಹಾಕಿದರು ಇತ್ಯಾದಿ ಪುಟಗಟ್ಟಲೆ ಬರೆಯಬಹುದಾದ ಸಂದಿಗ್ದತೆಯಿಂದ ಭಾರತೀಯ ಮುಸ್ಲಿಮನು ಸಣ್ಣವನಾಗುವುದು ಅನಿವಾರ್ಯವಾಗಿದೆ.
- ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕಪಟ್ಟವೇರಿ ದವರೆಲ್ಲ ಮೇಲ್ವರ್ಗದಿಂದ ಬಂದವರು (ಅಂಬೇಡ್ಕರ್,ರಾಮ್ ಮೊದಲಾದವರು ಕೆಲವು ಅಪವಾದಗಳು, ಅಪವಾದಗಳು ವಾದವನ್ನು ಬಲಪಡಿಸುತ್ತದೆ). ಎಲ್ಲ ಕಾಲದಲ್ಲಿ ಮತ್ತು ಎಲ್ಲ ದೇಶಗಳಲ್ಲಿ ನಡೆದುಬಂದ ಸಂಪ್ರದಾಯ ಇದು. ರಾಜರುಗಳನ್ನು ಮೆಚ್ಚಿಕೊಳ್ಳುವವರು, ನೆಚ್ಚಿಕೊಳ್ಳುವವರು ಮತ್ತು ವಿರೋಧಿಸುವವರು ಕೂಡಾ ಮೇಲ್ವರ್ಗದಿಂದಲೇ ಬಂದವರಾಗಿರುತ್ತಾರೆ....ವಿದ್ಯೆ,ಬುದ್ದಿವಂತಿಕೆಗಳನ್ನು ತಮ್ಮ ಗುತ್ತಿಗೆಯನ್ನಾಗಿ ಮಾಡಿಕೊಳ್ಳುವ ಮೇಲ್ವರ್ಗದವರಿಗೆ ಯಾವುದೇ ಕಠಿಣ ಶ್ರಮ ಅಸಾಧ್ಯವಾಗಿರುವುದರಿಂದ ಅವರಿಗೆ ರಾಜಾಶ್ರಯ, ರಾಜನಂಟು, ಬದುಕಿನ ಅನಿವಾರ್ಯತೆಯೂ ಆಗಿರುತ್ತದೆ.
- ಭಾರತಕ್ಕೆ ಬ್ರಿಟಿಷರು ವ್ಯಾಪಾರಕ್ಕಾಗಿ (ಬ್ರಿಟಿಷರು ಭಾರತಕ್ಕೆ ವ್ಯಾಪಾರದ ನಿಮಿತ್ತ ಬಂದವರೆಂದೂ, ಮುಸ್ಲಿಮರು ಆಕ್ರಮಣ ಮಾಡಿದವರೆಂದೂ ಬರೆದಿರುವ ಚರಿತ್ರೆ ಪುಸ್ತಕಗಳನ್ನೇ ನಮ್ಮ ಮಕ್ಕಳು ಓದುತ್ತಿದ್ದಾರೆ) ಬಂದಾಗ ಅವರಿಗೆ ದುಂಬಾಲು ಬಿದ್ದು ಸರಕಾರಿ ಕೆಲಸಗಳನ್ನು ದಕ್ಕಿಸಿಕೊಂಡು ಐ ಎ ಎಸ್ ಆಗಿ ವಿದೇಶಗಳಲ್ಲಿ ತಮ್ಮ ಮಕ್ಕಳನ್ನು ಬಾರ್ ಅಟ್ ಲಾ ಓದಿಸಿದವರೂ ಭಾರತದೊಳಗೆ ಇಸ್ಲಾಂ ಆಕ್ರಮಣ ಮಾಡಿದಾಗ ಅವರ ಬೆನ್ನುಬಿದ್ದು ಪದವಿಯ ಆಸೆಗಾಗಿ ಮತಾಂತರಗೊಂಡು, ದಿವಾನರುಗಳಾಗಿ, ಜಮೀನ್ದಾರರಾಗಿ ಮೆರೆದವರೂ ಇದೇ ಮೇಲ್ವರ್ಗದ ಮಂದಿಗಳು ಮಾತ್ರ......
- ಭಾರತದ ಮುಸ್ಲಿಮರು ವಿಭಜನೆಯ ಪಿಂಡದ ಹೊರೆಯೊಂದಿಗೆ ಉಳಿಯಬೇಕೆಂದು ಬಯಸುವ ರಾಜಕೀಯ ಹಿಂದೂವಾದಿಗಳು ಚರಿತ್ರೆಯ ಪುಟಗಳನ್ನು ತಮ್ಮ ಕಣ್ಣಿನ ಅಳತೆಯಲ್ಲಿಯೇ ಓದುತ್ತಾ ಭಾಷ್ಯ ಬರೆಯುತ್ತಿದ್ದಾರೆ. ‘ಹಿಂದೂ’ ಎಂಬ ಪದವನ್ನು ಒಂದು ಜಾತಿಯ ಪದವಲ್ಲ, ಒಂದು ಪ್ರಾದೇಶಿಕ ಪದ ಎಂಬೀತ್ಯಾದಿ ಬರೆಯುತ್ತಾ ಎರಡು ಪ್ಯಾರಾ ಬರೆಯುವುದರಲ್ಲಿಯೇ ಗಲಿಬಿಲಿಗೊಂಡು ಗೊಂದಲದಲ್ಲಿಯೇ ಮುಕ್ತಾಯಗೊಳಿಸುತ್ತಾರೆ.
- ‘ನೀನು ಮಸೀದಿಗೆ ಹೋಗುವುದೇ ಇಲ್ವಾ?’ ಎಂಬ ಪ್ರಶ್ನೆಯಲ್ಲಿಯೇ ಖುಷಿಗೊಳ್ಳುವ ಗೆಳೆಯ ಗೋಪಾಲ ಅವನ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ಬಹಳ ಜೋಪಾನವಾಗಿ ತಂದುಕೊಡುತ್ತಾನೆ....’ಇಷ್ಟೆಲ್ಲ ಮಾತನಾಡುವ ನೀನು ನಿನ್ನ ತಾಯಿಯ ಹೆಣವನ್ನು ಮಸೀದಿಗೆ ಯಾಕೆ ಕೊಂಡುಹೋಗಿ ದಪನಮಾಡಿದೆ ಎಂದು ನನ್ನೊಡನೆ ಪ್ರಶ್ನಿಸಿದ ಸುರೇಶ ಕಿಣಿಯೊಡನೆ ‘ಮತ್ತೇನುಮಾಡಬೇಕು?’ ಎಂದು ಪ್ರಶ್ನಿಸಿದರೆ ಸ್ಮಶಾನದಲ್ಲಿ ಸುಡಬೇಕಿತ್ತು ಎನ್ನುತ್ತಾನೆ.
- ಮುಸ್ಲಿಮನು ರಾಷ್ಟ್ರೀಯವಾದಿ ಆಗುವುದೆಂದರೆ ‘ಹಿಂದು’ ಆಗುವುದುಮಾತ್ರ . ಇಂತಹ ಸಣ್ಣ ಯೋಚನೆಯ ಹಿಂದೂಗಳದ್ದೇ ದೊಡ್ಡ ಗುಂಪಾಗಿರುವುದರಿಂದಲೇ ದೇಶದ ಮುಸ್ಲಿಮರು ಮತ್ತಷ್ಟು ಜಾತಿಯವಾದಿಯಾಗುತ್ತಾರೆ. ಹತ್ತರಲ್ಲಿ ಹನ್ನೊಂದಾಗದಿದ್ದರೆ, ಎರಡು ಕಡೆಗಳಿಂದಲೂ ಉಗಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.
- ಗಜನಿ ವಿಗ್ರಹಗಳನ್ನು ಒಡೆದದ್ದು ಸೋಮನಾಥನ ಮೇಲಿನ ವೈರದಿಂದಲ್ಲ, ಅದರೊಳಗಿದ್ದ ಮಣಗಟ್ಟಲೆ ಬಂಗಾರವನ್ನು ದೋಚಲಿಕ್ಕಾಗಿ ಹಾಗೂ ಅಂದು ಗಜನಿಯ ಸೈನ್ಯದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರು ಎನ್ನುವುದು ಇತಿಹಾಸದ ನಿಜಸಂಗತಿಗಳು.
- ಇಷ್ಟೆಲ್ಲ ಹೇಳಿದ ಮಹಮದರು ಕೊನೆಗೆ ‘’ ರಾಷ್ಟ್ರೀಯ ಜನಪ್ರವಾಹದಿಂದ ಮುಸ್ಲಿಮರು ಹೊರಗುಳಿಯಬೇಕಾಗಿ ಬಂದಿರುವ ನಮ್ಮ ದೇಶದ ವ್ಯವಸ್ಥೆ ಬಗ್ಗೆ ವಸ್ತುನಿಷ್ಠ ಚರ್ಚೆ ನಡೆಸುವುದಕ್ಕೆ ಅನುಕೂಲವಾಗಬಲ್ಲ ಕೆಲವು ಪ್ರಾಮಾಣಿಕ ನಿಜಗಳನ್ನು ಹೇಳಲು ಪ್ರಯತ್ನಿಸಿದ್ದೇನೆ ಅಷ್ಟೆ. ಮುಂದಿನ ತಲೆಮಾರು ಕೂಡಾ ನಮ್ಮಂತೆ ಮೋಸ ಹೋಗದಿರಲು ನಾವೇನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಬೇಕು’’ ಎಂದು ಲೇಖನವನ್ನು ಕೊನೆಗೊಳಿಸುತ್ತಾರೆ.
ಪ್ರೇಮಶೇಖರ ಅವರೇ, ನಿಮ್ಮಲ್ಲಿ ಲೇಖನ ಇದ್ದರೆ ಮತ್ತೊಮ್ಮೆ ಓದಿ. ಯಾವುದು ಬದಲಾಗಿದೆ? ಮುಸ್ಲಿಮರನ್ನು ಹಿಂದುತ್ವವಾದಿಗಳು ನೋಡುವ ಯಾವ ದೃಷ್ಟಿ ಬದಲಾಗಿದೆ ಎಂದು ಒಂದೊಂದಾಗಿ ಹೇಳಿಬಿಡಿ. ನೀವಂತೂ ಬದಲಾಗಿದಂತೆ ಕಾಣುವುದಿಲ್ಲ. ಇನ್ನೂ ಪುರಾವೆಗಳು ಬೇಕಿದ್ದರೆ ನಿಮ್ಮ ನಾಯಕರುಗಳ ಭಾಷಣಗಳನ್ನು ಕೇಳಿ ಇಲ್ಲವೆ ನಿಮ್ಮ ಗುಂಪಿನ ಗೆಳೆಯರ ಫೇಸ್ ಬುಕ್ ವಾಲ್ಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಯಾವುದು ಬದಲಾಗಿದೆ?
ಹೌದು, ಆ ಲೇಖನದ ಲೇಖಕರು ಬದಲಾಗಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂಬ ಅನುಮಾನವನ್ನು ಗೆಳೆಯರು ವ್ಯಕ್ತಪಡಿಸುತ್ತಿರುವುದು ನಿಜ. ಅದಕ್ಕಲ್ಲವೇ ಈ ಚರ್ಚೆ ನಡೆಯುತ್ತಿರುವುದು. ಸೂಕ್ಷ್ಮವಾಗಿ ನೋಡಿದರೆ ಅಂತಹದ್ದೊಂದು ಸೂಚನೆ ಆ ಲೇಖನದಲ್ಲಿಯೂ ಕಾಣುತ್ತದೆ.