Saturday, November 15, 2014

ಮೂಡಬಿದಿರೆಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ ಕುರಿತು..

ತಿಂಗಳ ಹಿಂದೆ ಮೂಡಬಿದರೆಯಿಂದ ಮೋಹನ್ ಆಳ್ವ ಪೋನ್ ಮಾಡಿ ‘ನುಡಿಸಿರಿ’ಗೆ ಬರಬೇಕೆಂದು ಆಹ್ಹಾನಿಸಿದ್ದರು. ಇದು ಅವರು ನನಗೆ ಸತತವಾಗಿ ಮೂರನೇ ಬಾರಿ ನೀಡುತ್ತಿರುವ ಆಹ್ಹಾನ. ಕಳೆದ ಬಾರಿ ಮಂಗಳೂರಿನಲ್ಲಿ ನಡೆದ ‘ಜನನುಡಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾನು ಆಳ್ವರ ಬಗ್ಗೆ ಅವರಿಗಿಷ್ಟವಾಗದ ಮಾತುಗಳನ್ನು ಆಡಿದ್ದೆ. ಹೀಗಿದ್ದರೂ ಅವರೇ ಈ ಬಾರಿ ಪೋನ್ ಮಾಡಿ ಆಹ್ಹಾನಿಸಿರುವುದರ ಉದ್ದೇಶ ಅವರ ವಿಶಾಲ ಹೃದಯವನ್ನು ಪರಿಚಯಿಸುವುದೇ? ಸಾಮ-ದಾನ-ಭೇದ-ದಂಡದ ತಂತ್ರವೇ? ಇಲ್ಲವೇ ನಮ್ಮ ಹುಡುಗರು ತಮಾಷೆ ಮಾಡುತ್ತಿರುವಂತೆ ‘ಮೂಡಬಿದರೆ ಜಿಲೇಬಿ’ ಬಗ್ಗೆ ಆಸೆ ಹುಟ್ಟಿಸಿ ನನ್ನ ಸಂಯಮವನ್ನು ಪರೀಕ್ಷಿಸುವುದೇ? ನನಗೆ ಗೊತ್ತಿಲ್ಲ. ಏನಿದ್ದರೂ ಅವರ ಸೌಜನ್ಯದ ನಡವಳಿಕೆಗೆ ಥ್ಯಾಂಕ್ಸ್ ಹೇಳಲೇ ಬೇಕು.
ಹಿರಿಯ ಕವಿ ಸಿದ್ದಲಿಂಗಯ್ಯ, ಸಮಾಜವಾದಿ ಚಿಂತಕ ನಟರಾಜ ಹುಳಿಯಾರ್, ಇಷ್ಟದ ಹಾಡುಗಾರ ಜನ್ನಿ ಮೊದಲಾದ ಸ್ನೇಹಿತರಿಗೆ ನುಡಿಸಿರಿಯಲ್ಲಿ ಭಾಗವಹಿಸುತ್ತಿರುವ ಸುದ್ದಿ ಗೊತ್ತಾಯಿತು. ಆ ರೀತಿ ಭಾಗವಹಿಸುವ ಪೂರ್ಣ ಸ್ವಾತಂತ್ಯ್ರ ಅವರಿಗಿದೆ. ಅದನ್ನು ಪ್ರಶ್ನಿಸಲು ನಾವು ಯಾರು? ಆದರೆ ಕರಾವಳಿಯಲ್ಲಿ ಬೆಳೆಯುತ್ತಿರುವ ಕೋಮುವಾದದ ಬಗ್ಗೆ ಚರ್ಚೆ ನಡೆದಾಗ ಅಲ್ಲಿನ ‘ಒಳಗಿರುವ’ ಜಾತ್ಯತೀತರನ್ನು, ‘ಹೊರಗಿರುವ’ ಜಾತ್ಯತೀತರು ಪ್ರಶ್ನಿಸುವುದು ಮಾತ್ರ ಅಲ್ಲ, ಗೇಲಿಯೂ ಮಾಡುತ್ತಿರುತ್ತಾರೆ. ‘ಏನ್ರಿ ನೀವೆಲ್ಲ ಇದ್ದೂ ದಕ್ಷಿಣ ಕನ್ನಡದಲ್ಲಿ ಈ ರೀತಿಯ ಕೋಮುವಾದಿ ಚಟುವಟಿಕೆ ಬೆಳೆಯುತ್ತಿದೆಯಲ್ಲಾ?’ ಎಂದು ನನ್ನನ್ನೇ ಅನೇಕ ‘ಹೊರಗಿನ’ ಜಾತ್ಯತೀತರು ಮೂದಲಿಸುವ ದನಿಯಲ್ಲಿ ಪ್ರಶ್ನಿಸಿದ್ದುಂಟು.
ಇನ್ನು ಮುಂದೆ ಈ ರೀತಿ ಪ್ರಶ್ನಿಸುವ ಅಧಿಕಾರವನ್ನು ನನ್ನ ಕೆಲವು ಸ್ನೇಹಿತರಾದರೂ ಕಳೆದುಕೊಂಡಿರುವುದರಿಂದ ಈ ಮೂದಲಿಕೆಯ ಹಿಂಸೆಯಾದರೂ ಒಂದಿಷ್ಟು ಕಡಿಮೆಯಾಗಬಹುದೆಂಬ ಸಣ್ಣ ಸಮಾಧಾನ ನನಗೆ. ಇದರ ಜತೆಯಲ್ಲಿಯೇ ಬರಿ ಕಣ್ಣಿಗೆ ಕಾಣುವ ಕೆಲವು ಸತ್ಯಗಳು ಒಳಗಣ್ಣು ಇರುವ ನಮ್ಮ ಸ್ನೇಹಿತರಿಗೆ ಕಾಣುತ್ತಿಲ್ಲವಲ್ಲ ಎಂಬ ಸಣ್ಣ ಬೇಸರವೂ ಇದೆ. ಕೋಮುವಾದದ ದಾಳಿಯಲ್ಲಿ ಸೇನಾಪತಿಗಳು ತೆರೆಯಮರೆಯಲ್ಲಿರುತ್ತಾರೆ, ಅವರು ತೆರೆಯ ಮುಂದೆ ಬರುವಾಗ ಸಮಾಜ ಸುಧಾರಕರು, ಸಾಹಿತ್ಯ ಪ್ರೇಮಿಗಳು, ಆಧ್ಯಾತ್ಮಿಕ ಪುರುಷರು, ನಡೆದಾಡುವ ದೇವರುಗಳು ಆಗಿರುತ್ತಾರೆ.
ಇವರೇ ತೆರೆಯ ಹಿಂದೆ ಹೋಗಿ ನಿಂತು ಅಮಾಯಕ ಬಡ, ಹಿಂದುಳಿದ, ದಲಿತ ಯುವಕರನ್ನು ಕಾಲಾಳುಗಳಾಗಿ ಬಳಸಿ ಯುದ್ಧಕ್ಕೆ ದೂಡುತ್ತಾರೆ. ಸಾವು-ನೋವು ಅವರಿಗೆ, ಯುದ್ದದ ಗೆಲುವಿನ ಲಾಭ ಇವರಿಗೆ. ಕೋಮುವಾದದ ಈ ಜನಪ್ರಿಯ ಮೊಡೆಸ್ ಅಪರೆಂಡಿಯನ್ನು ನಮ್ಮಲ್ಲಿ ಅನೇಕರಿಗೆ ಇನ್ನೂ ಗೊತ್ತಾಗುತ್ತಿಲ್ಲವಲ್ಲಾ? ಇಲ್ಲ ಗೊತ್ತಿದ್ದೂ ಈ ರೀತಿ ಮಾಡುತ್ತಿದ್ದಾರೆಯೇ? ಕೋಮುವಾದದ ಮೂಲೋತ್ಪಾಟನೆಗೆ ಬದ್ಧರೆಂದು ಹೇಳಿಕೊಳ್ಳುವವರೆಲ್ಲರೂ ಮೊದಲು ತೆರೆಯಮರೆಯ ಮುಖಗಳನ್ನು ಅನಾವರಣಗೊಳಿಸಬೇಕೇ ವಿನ? ಬೀದಿಯಲ್ಲಿ ಬಡಿದಾಡುತ್ತಿರುವವರನ್ನು ದೂರುತ್ತಾ ಕೂರುವುದಲ್ಲ.
ಇಷ್ಟೆಲ್ಲ ಯಾಕೆ ಹೇಳಬೇಕಾಯಿತೆಂದರೆ ಮೂಡಬಿದರೆಗೆ ನಾನು ನನ್ನ ಅನೇಕ ಸ್ನೇಹಿತರಂತೆ ‘ಹೊರಗಿನವ’ನಲ್ಲ, ‘ಒಳಗಿನವ’. ನನ್ನೂರು ಮಟ್ಟು, ಮೂಲ್ಕಿ-ಮೂಡಬಿದರೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಒಂದು ಸಣ್ಣ ಕುಗ್ರಾಮ. ಈ ಕಾರಣದಿಂದಾಗಿಯೇ ಮೂಡಬಿದರೆಯ ರಾಜಕೀಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳು ಬಹುಷ: ಸಿದ್ದಲಿಂಗಯ್ಯ, ಹುಳಿಯಾರ್, ಜನ್ನಿ ಮೊದಲಾದ ಸ್ನೇಹಿತರಿಗಿಂತ ನನಗೆ ಸ್ವಲ್ಪ ಹೆಚ್ಚು ಗೊತ್ತು. ಇಂತಹ ವಿಷಯಗಳಲ್ಲಿ ಅಜ್ಞಾನಿಯಾಗಿರುವುದೇ ಒಳ್ಳೆಯದು ಎಂದು ಎಷ್ಟೋ ಬಾರಿ ನನಗನಿಸಿದೆ. ಹಾಳು ಜ್ಞಾನ ಎನ್ನುವುದು ಶಾಪ, ನಿದ್ದೆಗೆಡಿಸುತ್ತಾ ಇರುತ್ತದೆ.