Monday, August 1, 2011

ನಾಯಕ ಬದಲಾದರು, ವ್ಯವಸ್ಥೆ ಬದಲಾಗುವುದೇ?

ಬಿ.ಎಸ್.ಯಡಿಯೂರಪ್ಪನವರು ಹೀಗೇಕಾದರು ಎಂದು ಯಾರೂ ಅಚ್ಚರಿ ಪಡಬೇಕಾಗಿಲ್ಲ, ಅವರಿದ್ದದ್ದೇ ಹೀಗೆ. ತೊಂಬತ್ತರ ದಶಕದಲ್ಲಿ ಭಾರತೀಯ ಜನತಾ ಪಕ್ಷ ಯಡಿಯೂರಪ್ಪನವರನ್ನು ತಮ್ಮ ನಾಯಕನೆಂದು ಬಿಂಬಿಸಿದ್ದಾಗಲೂ, ಆ ಆಯ್ಕೆಗೆ ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಸಕಲ ಅಂಗಸಂಸ್ಥೆಗಳು ಬೆಂಬಲದ ಜಯಘೋಷ ಮಾಡಿದ್ದಾಗಲೂ ಮತ್ತು ವೀರಶೈವ ಮಠಗಳು ತಮ್ಮ ನಾಯಕನೆಂದು ಆಶೀರ್ವಾದ ಮಾಡಿದ್ದಾಗಲೂ ಅವರು ಹೀಗೆಯೇ ಇದ್ದರು.

ಅಧಿಕಾರಕ್ಕೆ ಬಂದು ಯಡಿಯೂರಪ್ಪನವರು ಹೀಗಾಗಿದ್ದಲ್ಲ. ಹೌದು, ಈಗ ಹೆಚ್ಚುವರಿಯಾಗಿ ಒಂದಷ್ಟು ಭ್ರಷ್ಟಾಚಾರದ ಆರೋಪಗಳನ್ನು ಅವರು ಎದುರಿಸುತ್ತಿರಬಹುದು. ಹಿಂದೆ ಯಾಕೆ ಭ್ರಷ್ಟರಾಗಿರಲಿಲ್ಲ ಎನ್ನುವ ಪ್ರಶ್ನೆಗೆ ಆಗ ಅವಕಾಶ ಇರಲಿಲ್ಲ ಎನ್ನುವುದಷ್ಟೇ ಸರಳವಾದ ಉತ್ತರ.
ಕರ್ನಾಟಕದ ರಾಜಕೀಯವನ್ನು ಅಧ್ಯಯನ ಮಾಡುವವರ‌್ಯಾರಿಗೂ ಬ್ರಿಟಿಷ್ ವಿದ್ವಾಂಸ ಜೇಮ್ಸ ಮ್ಯಾನರ್ ಅಪರಿಚಿತ ಹೆಸರೇನಲ್ಲ. ಲಂಡನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್‌ಡ್ ಸ್ಟಡಿಯಲ್ಲಿ ಬೋಧನೆ ಮಾಡುತ್ತಿರುವ ಜೇಮ್ಸ ಮ್ಯಾನರ್ ಕಳೆದ 40 ವರ್ಷಗಳಿಂದ ಕರ್ನಾಟಕದ ರಾಜಕೀಯವನ್ನು ವಿಶೇಷವಾಗಿ ಅಧ್ಯಯನ ಮಾಡುತ್ತಾ ಬಂದವರು.
ಈ ಬಗ್ಗೆ ಹಲವಾರು ಪುಸ್ತಕಗಳನ್ನು ಮತ್ತು ನೂರಾರು ಲೇಖನಗಳನ್ನು ಅವರು ಬರೆದಿದ್ದಾರೆ. ಹೆಚ್ಚುಕಡಿಮೆ ಪ್ರತಿವರ್ಷ ಅವರು ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಇಂತಹ ಜೇಮ್ಸ ಮ್ಯಾನರ್ 1994ರಲ್ಲಿ ಬೆಂಗಳೂರಿಗೆ ಬಂದಿದ್ದಾಗ ಬಿಜೆಪಿಯ ಇಬ್ಬರು ಯುವ ಕಾರ‌್ಯಕರ್ತರನ್ನು ಭೇಟಿಯಾಗಿದ್ದರು.
`ಎಕಾನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ~ಯ ಇತ್ತೀಚಿನ ತನ್ನ ಲೇಖನದಲ್ಲಿ ಅವರು ಹದಿನೈದು ವರ್ಷಗಳ ಹಿಂದಿನ ತಮ್ಮ ಭೇಟಿಯ ಅನುಭವ ಮೆಲುಕುಹಾಕಿದ್ದಾರೆ.
`....ಆಗಷ್ಟೇ ಕೊನೆಗೊಂಡಿದ್ದ ಚುನಾವಣೆಯಲ್ಲಿ ಬಿಜೆಪಿ ತನ್ನ ಬಲವರ್ಧನೆ ಮಾಡಿಕೊಂಡಿದ್ದ ಕಾಲ ಅದು.
ಇಂತಹ ಸ್ಥಿತಿಯಲ್ಲಿ ಈ ಇಬ್ಬರು ಯುವ ಕಾರ್ಯಕರ್ತರು ಆಶಾವಾದದಿಂದ ತುಂಬಿ ತುಳುಕುತ್ತಿರಬಹುದೆಂದು ನಿರೀಕ್ಷಿಸಿದ್ದೆ. ಆದರೆ ಅವರು ಪ್ರಾರಂಭದಿಂದಲೇ ವ್ಯಾಕುಲರಾಗಿದ್ದರು. ಅವರ ಮುಖದಲ್ಲಿ ಬಚ್ಚಿಟ್ಟುಕೊಳ್ಳಲಾಗದ ವಿಷಣ್ಣತೆ ಇತ್ತು.
ಮಾತನಾಡುತ್ತಾ ಹೋದಂತೆ ಅವರು ಇನ್ನಷ್ಟು ಚಿಂತಾಕ್ರಾಂತರಾದಂತೆ ಕಂಡರು. ಅವರು ಒಂದೇ ಸಮನೆ ತಮ್ಮ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ದೂರುಗಳನ್ನು ಹೇಳುತ್ತಾ ಹೋದರು....~ ಎಂದು ಅವರು ತಮ್ಮ ಲೇಖನ ಪ್ರಾರಂಭಿಸುತ್ತಾರೆ.

ಆ ಯುವಕಾರ್ಯಕರ್ತರ ಮಾತುಗಳಲ್ಲೇ ಅವರಾಡಿದ್ದನ್ನು ಕೇಳಿ:`...ಅವರು ದುರಹಂಕಾರಿ, ಯಾರ ಮಾತನ್ನೂ ಕೇಳುವುದಿಲ್ಲ. ಪಕ್ಷದ ಬಲವರ್ಧನೆಗಾಗಿ ಬಳಸಿಕೊಳ್ಳಬಹುದಾದ ಅವಕಾಶಗಳು ಮತ್ತು ಪಕ್ಷದ ಬಲ ಕುಂದಲು ಕಾರಣವಾಗಬಹುದಾದ ತಪ್ಪುಗಳ ಬಗ್ಗೆ ನೀಡುವ ಮಾಹಿತಿಗಳನ್ನು ಅವರು ನಿರ್ಲಕ್ಷಿಸುತ್ತಾರೆ.
ಆದ್ದರಿಂದ ಹಲವಾರು ಬಾರಿ ರಾಜಕೀಯ ಅನುಕೂಲಗಳಿಂದ ಪಕ್ಷ ವಂಚಿತವಾಗಬೇಕಾಯಿತು. ಪ್ರತಿಬಾರಿ ಅವರು ತಪ್ಪು ನಿರ್ಧಾರಗಳಿಂದಾಗಿ ಮುಜುಗರಕ್ಕೊಳಗಾಗುತ್ತಾರೆ  ಮತ್ತು ಯಾರದ್ದೋ ಸಂಚಿಗೆ ಬಲಿಯಾಗುತ್ತಾರೆ.

ಅವರೊಬ್ಬ ಬುದ್ಧಿವಂತ, ಆದರೆ ಸರಿಯಾದ ರಾಜಕೀಯ ನಿರ್ಧಾರ ಕೈಗೊಳ್ಳಲಾಗದ ನಾಯಕನೆಂದು ನಾವು ತಿಳಿದುಕೊಂಡಿದ್ದೆವು. ಆದರೆ, ಮಾಡುವ ತಪ್ಪುಗಳನ್ನು ನೋಡುತ್ತಾ ಬಂದಾಗ ಅವರು ಅಷ್ಟೇನೂ ಬುದ್ಧಿವಂತರಲ್ಲ ಎಂದು ಅರಿವಾಯಿತು.
ಅಷ್ಟು ಮಾತ್ರವಲ್ಲ, ಅವರೊಬ್ಬ ಪ್ರಜಾಪ್ರಭುತ್ವ ವಿರೋಧಿ. ಪಕ್ಷದ ಸಹೋದ್ಯೋಗಿಗಳ ಮಾತುಗಳಿಗೆ ಕಿವಿಗೊಡುವುದಿಲ್ಲ. ಕಾಂಗ್ರೆಸ್ ಮತ್ತು ಜನತಾ ಪಕ್ಷಗಳಿಗಿಂತ ಹೆಚ್ಚು ಪ್ರಜಾಸತ್ತಾತ್ಮಕವಾಗಿರುವ ಬಿಜೆಪಿಯಲ್ಲಿ ಈ ನಡವಳಿಕೆ ಗಂಭೀರ ಸ್ವರೂಪದ ಅಪರಾಧ.
ಪಕ್ಷದ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತಗಳನ್ನು ಅವರು ಲಕ್ಷಿಸುವುದಿಲ್ಲ. ಪಕ್ಷ ರೂಪಿಸುವ ಕಾರ್ಯತಂತ್ರಗಳನ್ನು ಅವರು ಒಪ್ಪುವುದಿಲ್ಲ. ಯಾರಾದರೂ ಅವರನ್ನು ಪ್ರಶ್ನಿಸಿದರೆ ಸಿಟ್ಟಾಗುತ್ತಾರೆ. ಎದುರಾಳಿಯ ಮಾತನ್ನು ತನ್ನ ವಾದದ ಮೂಲಕ ಎದುರಿಸುವುದಿಲ್ಲ, ಕೂಗಾಡಿ ಬಾಯಿ ಮುಚ್ಚಿಸುತ್ತಾರೆ...~
`..ಭಿನ್ನ ಪಕ್ಷ ಎಂಬ ಹೆಗ್ಗಳಿಕೆಯ ಬಿಜೆಪಿಯ ನಾಯಕನೊಬ್ಬನಿಂದ ನಾವು ನಿರೀಕ್ಷಿಸಿದ್ದ ಸಜ್ಜನಿಕೆ ಮತ್ತು ತಾಳ್ಮೆಯ ನಡವಳಿಕೆಯನ್ನು ನಮಗೆ ಕಾಣಲಾಗುತ್ತಿಲ್ಲ. ಅವರು ಸೂಕ್ಷ್ಮವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವಾಸ್ತವವನ್ನು ಎದುರಿಸುವುದಿಲ್ಲ, ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ.
ಅಸಾಧ್ಯವಾದುದನ್ನು ಸಾಧ್ಯಮಾಡಲು ಪ್ರಯತ್ನಿಸುತ್ತಾರೆ. ಅದು ಸಾಧ್ಯವಾಗದೆ ಇದ್ದಾಗ ಇತರರನ್ನು ಬೈದು ಯಾರಿಗೂ ತಿಳಿಸದೆ ಇನ್ನೊಂದು ಅಡ್ಡಾದಿಡ್ಡಿ ದಾರಿ ಹಿಡಿಯುತ್ತಾರೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಕೆಟ್ಟುಹೋಗುತ್ತದೆ.
ಅಧಿಕಾರ ಒಬ್ಬ `ದಡ್ಡ~ ನಾಯಕನ ಕೈಯಲ್ಲಿ ಕೇಂದ್ರೀಕೃತವಾಗಿರುವ ಅಪಾಯಕಾರಿ ಪರಿಸ್ಥಿತಿ ಇದು. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ...~ಇಷ್ಟು ಹೇಳಿದ ನಂತರ ಇಬ್ಬರಲ್ಲಿ ಒಬ್ಬ ಯುವಕ ಬಿಕ್ಕಿಬಿಕ್ಕಿ ಅಳತೊಡಗಿದನಂತೆ. `...ಕರ್ನಾಟಕದ ರಾಜಕೀಯವನ್ನು ಕಳೆದ ನಲ್ವತ್ತು ವರ್ಷಗಳಿಂದ ಅಧ್ಯಯನ ಮಾಡುತ್ತಾ ಬಂದ ನಾನು ಈ ರೀತಿ ಒಂದು ಪಕ್ಷದ ಕಾರ್ಯಕರ್ತ ತನ್ನದೇ ಪಕ್ಷದ ನಾಯಕನ ಬಗ್ಗೆ ಹತಾಶೆಗೊಂಡು ಕಣ್ಣೀರು ಹಾಕಿದ್ದನ್ನು ನೋಡಿಲ್ಲ...~ ಎನ್ನುತ್ತಾರೆ ಜೇಮ್ಸ ಮ್ಯಾನರ್ ಆ ಲೇಖನದಲ್ಲಿ.

ಇದನ್ನು ಓದಿದ ಮೇಲೆ ಯಡಿಯೂರಪ್ಪನವರು ಹೀಗ್ಯಾಕಾದರು ಎಂದು ಯಾರೂ ಕೇಳಲಾರರು. ಅವರು ಹೀಗೆಯೇ ಇದ್ದರು.ಹೀಗಿದ್ದರೂ ಅವರನ್ನು ತನ್ನ ನಾಯಕನೆಂದು ಬಿಜೆಪಿ ಯಾಕೆ ಬಿಂಬಿಸಿತು? ಸಂಘ ಪರಿವಾರ ಯಾಕೆ ಬೆಂಬಲ ಧಾರೆ ಎರೆಯಿತು? ವೀರಶೈವ ಮಠಗಳು ಅವರನ್ನು ಜಾತಿ ನಾಯಕನಾಗಿ ಯಾಕೆ ಬೆಳೆಸಿದವು? ಯಾವ ದಾರಿಯಾದರೂ ಸರಿ, ಗುರಿ ತಲುಪುವುದಷ್ಟೇ ಮುಖ್ಯ ಎಂದು ತಿಳಿದುಕೊಂಡ ಬಿಜೆಪಿಗೆ ಅಧಿಕಾರ ಬೇಕಿತ್ತು.
ತನ್ನ ಗುಪ್ತಕಾರ್ಯಸೂಚಿಯ ಅನುಷ್ಠಾನಕ್ಕಾಗಿ ಸಂಘ ಪರಿವಾರಕ್ಕೆ ತನ್ನ ಮಾತು ಕೇಳುವ ಮುಖ್ಯಮಂತ್ರಿ ಬೇಕಿತ್ತು. ಆಗಲೇ `ಧರ್ಮ~ದ ಹಾದಿಯಿಂದ `ಅರ್ಥ~ದ ಹಾದಿಗೆ ಹೊರಳುತ್ತಿದ್ದ ವೀರಶೈವ ಮಠಗಳಿಗೆ ತಮ್ಮ ಧಾರ್ಮಿಕ ಸಾಮ್ರಾಜ್ಯದ ವಿಸ್ತರಣೆಗೆ ನೆರವಾಗಬಲ್ಲ ಜಾತಿ ನಾಯಕನೊಬ್ಬ ಬೇಕಿತ್ತು.

ಆಗ ಎಲ್ಲರ ಕಣ್ಣಿಗೆ ಕಂಡದ್ದು ಯಡಿಯೂರಪ್ಪ. ಅವರು ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರು, ಜಾತಿಯಿಂದ ಲಿಂಗಾಯತರು, ಸ್ವಭಾವದಲ್ಲಿ ಹೋರಾಟ ಮನೋಭಾವದವರು. ಬೇರೇನು ಬೇಕು?
ಈಗ ಒಮ್ಮಿಂದೊಮ್ಮೆಲೇ ಯಡಿಯೂರಪ್ಪನವರು ಎಲ್ಲರಿಗೂ ಖಳನಾಯಕರಂತೆ ಕಾಣುತ್ತಿದ್ದಾರೆ. ಯಡಿಯೂರಪ್ಪನವರ ನಿರ್ಗಮನದಿಂದ ಕರ್ನಾಟಕವನ್ನು ಆವರಿಸಿಕೊಂಡಿರುವ ಎಲ್ಲ ಅನಿಷ್ಟಗಳು ನಿವಾರಣೆಯಾಗಬಹುದೆನ್ನುವ ರೀತಿಯಲ್ಲಿ ಪ್ರಚಾರ ನಡೆಯುತ್ತಿದೆ.
ಆದರೆ, `ಮನುಷ್ಯ ವ್ಯವಸ್ಥೆಯ ಕೂಸು~ ಎನ್ನುವ ಸತ್ಯ ತಿಳಿದುಕೊಂಡವರ‌್ಯಾರೂ ಯಡಿಯೂರಪ್ಪನವರ ನಿರ್ಗಮನದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಾರರು. ಜನಪರ ಕಾಳಜಿಯ ಹೋರಾಟಗಾರನಾಗಿ ರಾಜಕೀಯ ಪ್ರವೇಶಿಸಿದ ಯಡಿಯೂರಪ್ಪನವರು ರಾಜ್ಯ ಕಂಡ ಅತೀ ಭ್ರಷ್ಟ, ಅಸಮರ್ಥ ಮತ್ತು ಜಾತಿವಾದಿ ಮುಖ್ಯಮಂತ್ರಿ ಎಂಬ ಆರೋಪಗಳ ಹೊರೆ ಹೊತ್ತು ನಿರ್ಗಮಿಸುವಂತಾಗಲು ಕಾರಣವಾದ ವ್ಯವಸ್ಥೆ ಇನ್ನೂ ಜೀವಂತವಾಗಿದೆ.
ಹೊಸ ನಾಯಕನ ಆಯ್ಕೆಯಲ್ಲಿ ಕೂಡಾ ಅದೇ ಹಳೆಯ ವ್ಯವಸ್ಥೆಯದ್ದೇ ಮುಖ್ಯ ಪಾತ್ರ. ಹೊಸ ನಾಯಕ ಕೂಡಾ  ಹಳೆಯ ವ್ಯವಸ್ಥೆಯ ಕೂಸಾಗಿ ಬಿಟ್ಟರೆ ಬದಲಾವಣೆ ಹೇಗೆ ನಿರೀಕ್ಷಿಸಲು ಸಾಧ್ಯ?
ಈ ವ್ಯವಸ್ಥೆಯ ಮೊದಲ ಘಟಕ-ಭಾರತೀಯ ಜನತಾ ಪಕ್ಷ. ಒಂದು ಸ್ವತಂತ್ರ, ಪರಿಪೂರ್ಣ ರಾಜಕೀಯ ಪಕ್ಷವಾಗಿ ಬೆಳೆಯಲು ಸಾಧ್ಯವಾಗದೆ ಹೋಗಿದ್ದೇ ಈ ಪಕ್ಷದ ಮೂಲ ಸಮಸ್ಯೆ. ಪಕ್ಷ ಏನಿದ್ದರೂ ಮುಖವಾಡ, ಅದರ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ನಿಜವಾದ ಮುಖ.
ಇಲ್ಲಿ ಪಕ್ಷಕ್ಕಿಂತಲೂ ಮುಖ್ಯವಾದುದು ಮಾತೃಸಂಸ್ಥೆಯ ಮೇಲಿನ ನಿಷ್ಠೆ. ಪಕ್ಷವನ್ನು ಧಿಕ್ಕರಿಸಿಯೂ ಇಲ್ಲಿ ಬದುಕುಳಿಯಬಹುದು, ಆದರೆ ಸಂಘ ಪರಿವಾರವನ್ನಲ್ಲ. ಅಟಲಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿಯವರಂತಹವರು ನಿರ್ಣಾಯಕ ಸ್ಥಾನದಲ್ಲಿರುವಷ್ಟು ದಿನ ತಮ್ಮ ವ್ಯಕ್ತಿತ್ವದ ಬಲದಿಂದ ಪಕ್ಷಕ್ಕೆ ಒಂದಿಷ್ಟು ಆತ್ಮಗೌರವ ತುಂಬಿದ್ದರು.
ಅವರ ನಿರ್ಗಮನದ ನಂತರ ಅದೊಂದು ದುರ್ಬಲ ಮತ್ತು ಪರಾವಲಂಬಿ ಪಕ್ಷ. ಅಲ್ಲಿ ಮುಖ್ಯಮಂತ್ರಿಗಳಿಂದ ಹಿಡಿದು ರಾಜ್ಯ, ರಾಷ್ಟ್ರೀಯ ಅಧ್ಯಕ್ಷರವರೆಗೆ ಯಾರು ಏನಾಗಬೇಕೆಂಬುದನ್ನು ನಿರ್ಧರಿಸುವುದು ಪಕ್ಷ ಅಲ್ಲವೇ ಅಲ್ಲ, ಅದು ಸಂಘದ ನಾಯಕರು.
ಪಕ್ಷದ ಈ ದೌರ್ಬಲ್ಯ ಅರಿತವರು ಅದರ ಆದೇಶಕ್ಕೆ ಎಷ್ಟು ಬೆಲೆ ಕೊಡಬಹುದು? ಪಕ್ಷದ ಸಂಸದೀಯ ಮಂಡಳಿಯ ನಿರ್ಣಯವನ್ನು ಅನುಷ್ಠಾನಕ್ಕೆ ತರಲಾಗದೆ ಬಿಜೆಪಿ ವರಿಷ್ಠರು ಮೂರು ದಿನಗಳ ಕಾಲ ದೇಶದ ಮುಂದೆ ನಗೆಪಾಟಲಿಗೀಡಾಗಿದ್ದು ಇದೇ ಕಾರಣಕ್ಕೆ. ಈಗಲೂ ಸಂಘ ಪರಿವಾರದ ಆಯ್ಕೆಗೆ ಮೊಹರು ಒತ್ತುವುದಷ್ಟೇ ಪಕ್ಷದ ಕೆಲಸ.
ವ್ಯವಸ್ಥೆಯ ಎರಡನೇ ಘಟಕ-ಸಂಘ ಪರಿವಾರ. ಸಮಸ್ತ ಹಿಂದೂ ಸಮುದಾಯದ ಹಿತಚಿಂತನೆ ನಡೆಸುವವರು ನಾವೆಂದು ಹೇಳಿಕೊಳ್ಳುತ್ತಿರುವ ಈ ಪರಿವಾರದ ನಾಯಕರು ರಾಜಕೀಯದ ಪ್ರಶ್ನೆ ಬಂದಾಗ ಮಾತ್ರ ಬಿಜೆಪಿ ಜತೆ ನಿಲ್ಲುತ್ತಾರೆ.
ಬಿಕ್ಕಟ್ಟುಗಳು ಎದುರಾದಾಗ  ಪ್ರಶ್ನಿಸಿದರೆ  `ಅದು ಸಂಪೂರ್ಣವಾಗಿ ಪಕ್ಷಕ್ಕೆ ಬಿಟ್ಟ ವಿಚಾರ. ಅದರಲ್ಲಿ ನಾವು ತಲೆಹಾಕುವುದಿಲ್ಲ~ ಎನ್ನುತ್ತಾರೆ. ಹಾಗ್ದ್ದಿದರೆ ಬಿಜೆಪಿಯ ಕೋರ್ ಕಮಿಟಿಯಲ್ಲಿ ಆರ್‌ಎಸ್‌ಎಸ್ ಪ್ರತಿನಿಧಿಗಳಿಗೇನು ಕೆಲಸ? ಕಾಂಗ್ರೆಸ್, ಜೆಡಿ (ಎಸ್)ನ ಕೋರ್ ಕಮಿಟಿಯಲ್ಲಿಯೂ ಅವರಿದ್ದಾರೇನು? ವಾಸ್ತವ ಏನೆಂದರೆ ಈಗಲೂ ಆರ್‌ಎಸ್‌ಎಸ್ ರಿಮೋಟ್ ಕಂಟ್ರೋಲ್ ಮೂಲಕ ಬಿಜೆಪಿಯ ನೀತಿ  ನಿರ್ಧಾರಗಳನ್ನು ನಿಯಂತ್ರಿಸುತ್ತಿದೆ.

ಇದರ ನಾಯಕರು ಮಹಮ್ಮದ್ ಅಲಿ ಜಿನ್ನಾ ಬಗ್ಗೆ ಅಡ್ವಾಣಿಯವರು ನೀಡಿದ ಸಣ್ಣ ಹೇಳಿಕೆಗಾಗಿ ಅವರ ತಲೆದಂಡ ಪಡೆಯುತ್ತಾರೆ, ಜಸ್ವಂತ್‌ಸಿಂಗ್ ಬರೆದ ಪುಸ್ತಕದಲ್ಲಿ ಜಿನ್ನಾ ಪರವಾದ ಅಭಿಪ್ರಾಯ ಇದೆ ಎನ್ನುವ ಕಾರಣಕ್ಕಾಗಿ ಪಕ್ಷದಿಂದಲೇ ಅವರ ಉಚ್ಚಾಟನೆಯಾಗುವಂತೆ ಮಾಡುತ್ತಾರೆ.
ಆದರೆ ತಮ್ಮದೇ ಪರಿವಾರದ ಮುಖ್ಯಮಂತ್ರಿ ವಿರುದ್ಧ ಲೋಕಾಯುಕ್ತ ನೀಡಿರುವ ವರದಿ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಇದೆಂಥ ಆತ್ಮವಂಚನೆ? ಯಡಿಯೂರಪ್ಪ ರಾಜೀನಾಮೆ ಮತ್ತು ಹೊಸ ಮುಖ್ಯಮಂತ್ರಿಯ ಆಯ್ಕೆಯ ಪ್ರಕ್ರಿಯೆ ಕಗ್ಗಂಟಾಗಲು ಕೂಡಾ ಕರಾವಳಿ ಮತ್ತು ಉತ್ತರ ಕರ್ನಾಟಕದ ಆರ್‌ಎಸ್‌ಎಸ್ ನಾಯಕರ ನಡುವಿನ ಭಿನ್ನಾಭಿಪ್ರಾಯ ಕಾರಣವೆನ್ನಲಾಗಿದೆ.

ಕೊನೆಗೂ ಈ ನಾಯಕರೇ ಹೊಸ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ನಿರ್ಧರಿಸಲಿದ್ದಾರೆ. ಈ ಬಾರಿ ಕರಾವಳಿ ಆರ್‌ಎಸ್‌ಎಸ್ ಕೈಮೇಲಾದರೆ ಆಶ್ಚರ್ಯ ಇಲ್ಲ.  ಶಾಸಕರ ಅಭಿಪ್ರಾಯ ಸಂಗ್ರಹ, ಶಾಸಕಾಂಗ ಪಕ್ಷದ ಸಭೆ -ಇವೆಲ್ಲ ಸಾರ್ವಜನಿಕರ ಗಮನಕ್ಕಾಗಿ ನಡೆಯುತ್ತಿರುವ ನಾಟಕ ಅಷ್ಟೇ.
ವ್ಯವಸ್ಥೆಯ ಮೂರನೇ ಘಟಕ-ವೀರಶೈವ ಮಠಗಳು. ಈ ಮಠಗಳ ಒಂದಷ್ಟು ಸ್ವಾಮಿಗಳು ಮೊದಲು ಯಡಿಯೂರಪ್ಪನವರ ಬೆಂಬಲಕ್ಕೆ ನಿಂತರು. ಈಗ ಮುಂದಿನ ಮುಖ್ಯಮಂತ್ರಿ ಸ್ಥಾನ ಲಿಂಗಾಯತರಿಗೇ ನೀಡಬೇಕೆಂದು ಹೇಳುತ್ತಿರುವುದು ಮಾತ್ರವಲ್ಲ, ಅಭ್ಯರ್ಥಿ ಯಾರೆಂಬುದನ್ನೂ ಸೂಚಿಸುತ್ತಿದ್ದಾರೆ.
ಅವರು ಸೂಚಿಸುತ್ತಿರುವ ಅಭ್ಯರ್ಥಿಗಳು ಸಮರ್ಥರೇ ಇರಬಹುದು. ಆದರೆ ಅವರು ಮಠಗಳ ಅಭ್ಯರ್ಥಿಯಾಗಿ ಕಾಣಿಸಿಕೊಳ್ಳಬೇಕೇ? ತಾವು ಬೆಂಬಲಿಸಿಕೊಂಡು ಬಂದ ಮುಖ್ಯಮಂತ್ರಿಯ ವಿರುದ್ಧ ಲೋಕಾಯುಕ್ತ ಮಾಡಿರುವ ಗಂಭೀರ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ಹೋಗದೆ ನುಣುಚಿಕೊಳ್ಳುತ್ತಿರುವ ಈ ಸ್ವಾಮಿಗಳಿಗೆ ಹೊಸ ಮುಖ್ಯಮಂತ್ರಿ ಸ್ಥಾನಕ್ಕೆ ತನ್ನ ಅಭ್ಯರ್ಥಿಗಳನ್ನು ಸೂಚಿಸುವ ನೈತಿಕತೆಯಾದರೂ ಎಲ್ಲಿದೆ?
ಭಾರತೀಯ ಜನತಾ ಪಕ್ಷ ಇಷ್ಟೊಂದು ದುರ್ಬಲಗೊಳ್ಳದೆ ಸ್ವಂತ ನಿರ್ಧಾರ ಕೈಗೊಳ್ಳುವಷ್ಟು ಶಕ್ತಿ ಹೊಂದಿದ್ದರೆ,  ಆ ಪಕ್ಷದ ಜುಟ್ಟು ಕೈಯಲ್ಲಿಟ್ಟುಕೊಳ್ಳದೆ ಅದನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಂಘ ಪರಿವಾರ ಅವಕಾಶ ನೀಡಿದ್ದರೆ ಮತ್ತು ಎಲ್ಲವನ್ನೂ ಜಾತಿಯ ಕನ್ನಡಕದಲ್ಲಿ ನೋಡಲು ಹೋಗದೆ ತಪ್ಪು-ಸರಿಗಳ ನಿರ್ಣಯವನ್ನು ಜಾತ್ಯತೀತವಾಗಿ ಕೈಗೊಳ್ಳುವ ದಿಟ್ಟತನವನ್ನು ವೀರಶೈವ ಮಠಗಳು ತೋರಿದ್ದರೆ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಪರಿಸ್ಥಿತಿ ಖಂಡಿತ ಬರುತ್ತಿರಲಿಲ್ಲ. ತಪ್ಪುಗಳನ್ನು ತಿದ್ದಿಕೊಂಡು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದರು.