ಕಾಂಗ್ರೆಸ್ ಪಕ್ಷದಲ್ಲಿ ಭಟ್ಟಂಗಿತನ ಮಾಡಲು ಹೋಗಿ ಪೇಚಿಗೆ ಸಿಕ್ಕಿಹಾಕಿಕೊಂಡವರ ದೊಡ್ಡ ಪಟ್ಟಿ ಇದೆ. ಕೇಂದ್ರ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಅವರು ಇದನ್ನೇ ಮಾಡಲು ಹೋಗಿ ಭಾರತೀಯ ಜನತಾ ಪಕ್ಷದ ಕೈಗೆ ಬಡಿಗೆ ಕೊಟ್ಟು ಹೊಡೆಸಿಕೊಳ್ಳುತ್ತಿದ್ದಾರೆ. ಪತ್ರಿಕೆಗಳ ಮೇಲೆ ನಿತ್ಯ ಕಣ್ಣಾಡಿಸುವ ಇಲ್ಲವೆ ಟಿವಿ ಸುದ್ದಿಗಳಿಗೆ ಕಿವಿಕೊಡುವ ಯಾರೂ ಕೂಡಾ ಸುಶೀಲ್‌ಕುಮಾರ್ ಶಿಂಧೆ ಅವರಾಡಿದ್ದ ಮಾತುಗಳು `ಸುದ್ದಿ ಸ್ಪೋಟ' ಇಲ್ಲವೆ, `ಬ್ರೇಕಿಂಗ್‌ನ್ಯೂಸ್' ಎಂದು ಖಂಡಿತ ಹೇಳಲಾರರು.
ಎರಡು ವರ್ಷಗಳ ಹಿಂದೆ ದೇಶದ ಎಲ್ಲ ಪತ್ರಿಕೆಗಳ ಪುಟ-ಪುಟಗಳಲ್ಲಿ `ಹಿಂದೂ ಭಯೋತ್ಪಾದನೆ' ಬಗ್ಗೆ ಸುದ್ದಿ ಮತ್ತು ವಿಶ್ಲೇಷಣೆಗಳು ಪ್ರಕಟವಾಗಿವೆ. ಟಿವಿಗಳ ಪ್ರೈಮ್‌ಟೈಮ್‌ನಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆದಿದೆ. ಆದರೆ ಶಿಂಧೆ ಅವರು ದೇಶದ ಗೃಹಸಚಿವರಾಗಿ ಇದನ್ನು ಪ್ರಸ್ತಾಪಿಸಿದ ರೀತಿ ಮತ್ತು ಸಂದರ್ಭ ಸರಿಯಾಗಿರಲಿಲ್ಲ. ವೇದಿಕೆ ಮೇಲಿದ್ದ ಪಕ್ಷದ ನಾಯಕಿ ಮತ್ತು ಯುವರಾಜನನ್ನು ಮೆಚ್ಚಿಸಲೆಂಬಂತೆ ಶಿಂಧೆ ಎಚ್ಚರತಪ್ಪಿ ಮಾತನಾಡಿದ್ದಾರೆ. ತಾನು ಕಾಂಗ್ರೆಸ್ ಪಕ್ಷದ ನಾಯಕ ಮಾತ್ರ ಅಲ್ಲ, ಭಾರತ ಸರ್ಕಾರದ ಒಬ್ಬ ಜವಾಬ್ದಾರಿಯುತ ಸಚಿವ ಕೂಡಾ ಹೌದು ಎನ್ನುವುದನ್ನು ಮರೆತು ನಾಲಿಗೆ ಸಡಿಲ ಬಿಟ್ಟಿದ್ದಾರೆ.
ಶಿಂಧೆ ಅವರ ಮಾತುಗಳಲ್ಲಿನ ಎರಡು ಹೊಸ ಸಂಗತಿಗಳೇನೆಂದರೆ, ಇದೇ ಮೊದಲ ಬಾರಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ನೇರವಾಗಿ ಹಿಂದೂ ಭಯೋತ್ಪಾದನೆಯ ಜತೆ ಜೋಡಿಸಿದ್ದು ಮತ್ತು ಈ ಎರಡು ಸಂಘಟನೆಗಳು ತರಬೇತಿ ಶಿಬಿರಗಳನ್ನು ನಡೆಸುತ್ತಿವೆ ಎಂದು ಆರೋಪಿಸಿದ್ದು. ಈ ಆರೋಪಗಳನ್ನು ಪುರಾವೆ ಸಹಿತ ಸಾಬೀತುಪಡಿಸುವುದು ಗೃಹಸಚಿವರಿಗೂ ಕಷ್ಟದ ಕೆಲಸ. ಅವರು `ಹಿಂದೂ ಭಯೋತ್ಪಾದನೆ' ಎಂದು ಹೆಸರಿಸಿದ್ದರಲ್ಲಿಯೂ ಹೊಸದೇನಿಲ್ಲ.`ಮುಸ್ಲಿಮ್ ಭಯೋತ್ಪಾದನೆ' ಎಂದ ಕೂಡಲೇ ಎಲ್ಲ ಮುಸ್ಲಿಮರು ಹೇಗೆ ಭಯೋತ್ಪಾದಕರಾಗುವುದಿಲ್ಲವೊ, ಹಾಗೆಯೇ `ಹಿಂದೂ ಭಯೋತ್ಪಾದನೆ' ಎಂದ ಕೂಡಲೇ ಎಲ್ಲ ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯ ಇಲ್ಲ ಎನ್ನುವುದು ಸರಳ ಸತ್ಯ. ಈಗ `ಹಿಂದೂ ಇಲ್ಲವೇ ಕೇಸರಿ ಭಯೋತ್ಪಾದನೆ' ಎಂದು ಕರೆಯುವುದನ್ನು ವಿರೋಧಿಸುತ್ತಿರುವ ಸಂಘ ಪರಿವಾರದ ನಾಯಕರು ಕಳೆದೆರಡು ದಶಕಗಳಲ್ಲಿ ಎಷ್ಟು ಬಾರಿ `ಮುಸ್ಲಿಮ್ ಭಯೋತ್ಪಾದನೆ' ಎಂದು ಹೇಳಿರುವುದನ್ನು ಲೆಕ್ಕಹಾಕಬೇಕು.
`ಹಿಂದೂ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಆರೋಪಿಗಳಾಗಿರುವವರು ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಜತೆ ಸಂಬಂಧ ಹೊಂದಿದ್ದರು' ಎಂದಷ್ಟೇ ಶಿಂಧೆ ಹೇಳಿದ್ದರೆ ಅವರ ವಿರೋಧಿಗಳ ಕೈಗೆ ಈಗಿನ ಬಡಿಗೆ ಸಿಗುತ್ತಿರಲಿಲ್ಲ. ಬಿಜೆಪಿ, ಆರ್‌ಎಸ್‌ಎಸ್ ಮಾತ್ರ ಅಲ್ಲ, ಕಾಂಗ್ರೆಸ್ ಇಲ್ಲವೆ ಸಿಪಿಐ-ಸಿಪಿಎಂ ಪಕ್ಷಗಳ ಸದಸ್ಯರಾಗಿದ್ದವರು ಕೂಡಾ ದಿಢೀರನೇ ಭಯೋತ್ಪಾದಕರಾಗಿ ಬದಲಾಗಿಬಿಟ್ಟರೆ ಆ ಪಕ್ಷಗಳನ್ನು ಹೊಣೆ ಮಾಡುವುದು ಸರಿಯಾಗಲಾರದು. ಆದರೆ ಇತರ ಪಕ್ಷಗಳಂತೆ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಹಿಂದೂ ಭಯೋತ್ಪಾದನೆಯ ಆರೋಪಕ್ಕೊಳಗಾದವರ ಜತೆಗಿನ ಸಂಬಂಧವನ್ನು ಖಡಾಖಂಡಿತವಾಗಿ ನಿರಾಕರಿಸುವುದು ಕಷ್ಟ. ಇದಕ್ಕೆ ಕಾರಣಗಳಿವೆ.
2002ರಿಂದ 2008ರ ವರೆಗಿನ ಅವಧಿಯಲ್ಲಿ ಮಹಾರಾಷ್ಟ್ರ ಮತ್ತು ನೆರೆಯ ರಾಜ್ಯಗಳಲ್ಲಿ ಹಲವಾರು ಬಾಂಬು ಸ್ಫೋಟಗಳು ನಡೆದಿದ್ದವು. ಈ ಎಲ್ಲ ಪ್ರಕರಣಗಳಲ್ಲಿ ಪೊಲೀಸರಿಂದ ಮೊದಲು ಬಂಧನಕ್ಕೊಳಗಾಗಿದ್ದವರು ಮುಸ್ಲಿಮ್ ಯುವಕರು. 2006ರಲ್ಲಿ ನಾಂದೇಡ್‌ನ ಆರ್‌ಎಸ್‌ಎಸ್ ಸದಸ್ಯರೊಬ್ಬರ ಮನೆಯಲ್ಲಿ ಬಾಂಬು ತಯಾರಿಸುತ್ತಿದ್ದಾಗ ನಡೆದ ಸ್ಫೋಟ ಮೊದಲ ಬಾರಿಗೆ ಪೊಲೀಸರು ಮುಸ್ಲಿಮರನ್ನು ಬಿಟ್ಟು ಇತರರ ಕಡೆ ಕಣ್ಣುಹರಿಸಲು ಕಾರಣವಾಯಿತು.
ಈ ನಡುವೆ 2008ರ ಸೆಪ್ಟೆಂಬರ್ 29ರಂದು ಮಾಲೆಗಾಂವ್‌ನಲ್ಲಿ ನಡೆದ ಬಾಂಬು ಸ್ಫೋಟ ಆರು ಮಂದಿಯನ್ನು ಬಲಿತೆಗೆದುಕೊಂಡು ಬಿಟ್ಟಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ ಕರ್ಕರೆ ನೇತೃತ್ವದ `ಭಯೋತ್ಪಾದನಾ ನಿಗ್ರಹ ದಳ' (ಎಟಿಎಸ್) ಹತ್ತು ಮಂದಿ `ಹಿಂದೂ'ಗಳನ್ನು ಬಂಧಿಸಿದಾಗಲೇ ಮೊದಲ ಬಾರಿ `ಹಿಂದೂ ಭಯೋತ್ಪಾದನೆ'ಯ ಹೆಸರು ಹುಟ್ಟಿಕೊಂಡದ್ದು. ಅಲ್ಲಿಯವರೆಗೆ `ಮುಸ್ಲಿಮ್ ಭಯೋತ್ಪಾದಕರು' ಎಂದು ಸಲೀಸಾಗಿ ಹೇಳುತ್ತಿದ್ದ ಬಿಜೆಪಿ ಕೂಡಾ ನಂತರದ ದಿನಗಳಲ್ಲಿ ಭಯೋತ್ಪಾದನೆಗೆ ಜಾತಿ-ಧರ್ಮ ಇಲ್ಲ ಎನ್ನುವ ಉದಾರವಾದಿ ನಿಲುವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದು.
ಎಟಿಎಸ್‌ನಿಂದ ಬಂಧನಕ್ಕೀಡಾದವರಲ್ಲಿ ಬಿಜೆಪಿಯ ಮಹಿಳಾ ಘಟಕ ದುರ್ಗಾವಾಹಿನಿಯ ಮಾಜಿ ಸದಸ್ಯೆ ಪ್ರಾಗ್ನಾ ಠಾಕೂರ್, ಸೇವೆಯಲ್ಲಿದ್ದ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ನಿವೃತ್ತ ಸೇನಾಧಿಕಾರಿ ಮೇಜರ್ ರಮೇಶ್ ಉಪಾಧ್ಯಾಯ ಮತ್ತು ಸ್ವಯಂಘೋಷಿತ ಸ್ವಾಮಿ ದಯಾನಂದ ಪಾಂಡೆ ಮೊದಲಾದವರಿದ್ದರು. ಇವರೆಲ್ಲರೂ ವೀರ ಸಾವರ್ಕರ್ ಸಿದ್ಧಾಂತದ ಪ್ರೇರಣೆಯಿಂದ ಪುಣೆಯಲ್ಲಿ ಸ್ಥಾಪನೆಗೊಂಡ `ಅಭಿನವ ಭಾರತ'ದ ಸದಸ್ಯರಾಗಿದ್ದವರು. ಇದು ಬಯಲಾದ ಕೂಡಲೇ ಸಂಘ ಪರಿವಾರದ ಸದಸ್ಯರು ಪೊಲೀಸ್ ಅಧಿಕಾರಿ ಹೇಮಂತ ಕರ್ಕರೆ ಮೇಲೆ ಎರಗಿ ಬಿದ್ದಿದ್ದರು. ಇದರಿಂದ ಮಾನಸಿಕ ಕ್ಲೇಶಕ್ಕೆ ಒಳಗಾಗಿದ್ದ ಸ್ಥಿತಿಯಲ್ಲಿಯೇ ಕರ್ಕರೆ ಅವರು 26/11ರ ಭಯೋತ್ಪಾದಕರನ್ನು ಎದುರಿಸಲು ಹೋಗಿ ಪ್ರಾಣ ಕಳೆದುಕೊಳ್ಳಬೇಕಾಯಿತು.
ಇವೆಲ್ಲದರ ಹೊರತಾಗಿಯೂ ಬಿಜೆಪಿಯ ಆಗಿನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಜನಾಥ್‌ಸಿಂಗ್ ಅವರು ಜೈಲಿಗೆ ಹೋಗಿ ಪ್ರಾಗ್ನಾ ಠಾಕೂರ್ ಮತ್ತಿತರರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಬಂದಿದ್ದರು. ( ಆದುದರಿಂದ ರಾಜನಾಥ್ ಸಿಂಗ್ ಅವರ ಈಗಿನ ಆಕ್ರೋಶಕ್ಕೆ ಅಚ್ಚರಿ ಪಡಬೇಕಾಗಿಲ್ಲ). ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಭೇಟಿಯಾಗಿ ಈ ಆರೋಪಿಗಳನ್ನು ಪೊಲೀಸರು ಮಾನವೀಯವಾಗಿ ನಡೆಸಿಕೊಳ್ಳಬೇಕೆಂದು ಮನವಿ ಮಾಡಿದ್ದರು.
ನಿಜ, ಪ್ರಾಗ್ನಾ ಠಾಕೂರ್ ಮತ್ತಿತರರು ಈಗಲೂ ಕೇವಲ ಆರೋಪಿಗಳು, ಒಬ್ಬ ಆರೋಪಿಗೆ ನಿರಪರಾಧಿತನವನ್ನು ಸಾಬೀತುಪಡಿಸಲು ಕಾನೂನುಬದ್ಧವಾಗಿ ಇರುವ ಅವಕಾಶಗಳನ್ನು ನೀಡಲೇಬೇಕು. ನ್ಯಾಯಾಲಯ ತೀರ್ಪು ನೀಡುವ ಮೊದಲೇ ಅವರನ್ನು ಅಪರಾಧಿಗಳೆಂದು ಘೋಷಿಸುವುದು ತಪ್ಪು. ಈ ಕಾರಣದಿಂದಲೇ ಅವರು ಪೊಲೀಸರಿಗೆ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆ ನ್ಯಾಯಾಲಯದಲ್ಲಿ ಸ್ವೀಕಾರಾರ್ಹ ಅಲ್ಲವಾದ ಕಾರಣ ಯಾರೂ ಗಂಭೀರವಾಗಿ ಸ್ವೀಕರಿಸಲಿಲ್ಲ.
ಆದರೆ ಮೆಕ್ಕಾ ಮಸೀದಿ ಬಾಂಬು ಸ್ಫೋಟದ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಅವರು 2010ರ ಡಿಸೆಂಬರ್ 18ರಂದು ದೆಹಲಿಯ ತೀಸ್‌ಹಜಾರ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆ `ಹಿಂದೂ ಭಯೋತ್ಪಾದನೆ' ಬಗ್ಗೆ ಅಲ್ಲಿಯ ವರೆಗೆ ಕಂಡು ಕೇಳರಿಯದ ಹಲವಾರು ಮುಖಗಳನ್ನು ಬಯಲುಗೊಳಿಸಿತ್ತು. `2006 ಮತ್ತು 2008ರಲ್ಲಿ ಮಾಲೆಗಾಂವ್, 2007ರಲ್ಲಿ ಸಂಜೋತಾ ಎಕ್ಸ್‌ಪ್ರೆಸ್, ಜೈಪುರದ ಅಜ್ಮೀರ್ ಷರೀಫ್ ದರ್ಗಾ ಮತ್ತು ಹೈದರಾಬಾದ್‌ನ ಮೆಕ್ಕಾಮಸೀದಿಗಳಲ್ಲಿ ಬಾಂಬು ಸ್ಫೋಟ ನಡೆಸಿದ್ದು ಆರ್‌ಎಸ್‌ಎಸ್ ಜತೆ ಸಂಬಂಧ ಹೊಂದಿದ್ದ ಹಿಂದೂ ಸಂಘಟನೆಗಳ ಸದಸ್ಯರು' ಎಂದು ಅವರು ತನ್ನ 48 ಪುಟಗಳ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಸೀಮಾನಂದ ಸಾಮಾನ್ಯ ಹಿಂದೂ ನಾಯಕರಲ್ಲ, ಅವರು ಆರ್‌ಎಸ್‌ಎಸ್‌ನ ನಿಷ್ಠಾವಂತ ಕಾರ್ಯಕರ್ತ. ಬಾಲ್ಯದಿಂದಲೇ ಸಂಘದ ಜತೆಯಲ್ಲಿದ್ದ ಅಸೀಮಾನಂದ ಗುಜರಾತ್‌ನ ಡಾಂಗ್ ಜಿಲ್ಲೆಯಲ್ಲಿ ಗುಡ್ಡಗಾಡು ಜನಾಂಗದ ಕಲ್ಯಾಣಕ್ಕಾಗಿ `ಶಬರಿಧಾಮ' ನಡೆಸುತ್ತಿದ್ದರು. ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್, ಆರ್‌ಎಸ್‌ಎಸ್‌ನ ಹಿಂದಿನ ಸರಸಂಘ ಚಾಲಕ ಕೆ.ಎಸ್.ಸುದರ್ಶನ್, ಈಗಿನ ಸರಸಂಘಚಾಲಕ ಮೋಹನ್ ಭಾಗವತ್ ಸೇರಿದಂತೆ ಸಂಘ ಪರಿವಾರದ ಜತೆ ಅಸೀಮಾನಂದರು ನಿಕಟ ಸಂಪರ್ಕ ಹೊಂದಿದ್ದರು. ಅವರ ಜತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಮಾಲೆಗಾಂವ್ ಬಾಂಬು ಸ್ಫೋಟದ ನಂತರ ರಚನೆಗೊಂಡ ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ ಕರ್ಕರೆ ಅವರು ಕಷ್ಟಪಟ್ಟು ಕೇವಲ ಎರಡೇ ತಿಂಗಳ ಅವಧಿಯಲ್ಲಿ 1400 ಪುಟಗಳ ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಆ ವರದಿಯ ಗತಿ ಏನಾಗಿದೆ ಎನ್ನುವುದನ್ನು ಮಹಾರಾಷ್ಟ್ರದವರೇ ಆಗಿರುವ ಗೃಹಸಚಿವರು ಹೇಳಬೇಕು. `ಆರ್‌ಎಸ್‌ಎಸ್‌ನ ಪ್ರಚಾರಕ ರಾಮಚಂದ್ರ ಕಲ್ಸಾಂಗ್ರ ಮತ್ತು ರಾಮಚಂದ್ರ ಡಾಂಗೆ ಅವರು ಬಾಂಬುಸ್ಫೋಟಗಳ ರೂವಾರಿಗಳು' ಎಂದು ಕರ್ಕರೆ ತನ್ನ ವರದಿಯಲ್ಲಿ ತಿಳಿಸಿದ್ದಾರೆ. ಕರ್ಕರೆ ನಂತರ ಎಟಿಎಸ್ ಮುಖ್ಯಸ್ಥರಾಗಿದ್ದ ರಘುವಂಶಿ, ಅವರಿಬ್ಬರನ್ನು ಬಂಧಿಸಲು ಹೋಗದೆ ಆರೋಪಪಟ್ಟಿಯಲ್ಲಿ ಹೆಸರು ಉಲ್ಲೇಖಿಸಿ ಜಾರಿಕೊಂಡಿದ್ದಾರೆ.
ಅಜ್ಮೀರ್ ಬಾಂಬು ಸ್ಫೋಟಕ್ಕೆ ಸಂಬಂಧಿಸಿದಂತೆ ರಾಜಸ್ತಾನದ ಪೊಲೀಸರು ದೇವೇಂದ್ರ ಗುಪ್ತಾ ಮತ್ತು ಲೋಕೇಶ್ ಶರ್ಮಾ ಎಂಬ ಇಬ್ಬರು ಆರ್‌ಎಸ್‌ಎಸ್ ಪ್ರಚಾರಕರನ್ನು ಬಂಧಿಸಿದ್ದರು. ಇವರಿಬ್ಬರೂ ಸಿಬಿಐಗೆ ನೀಡಿರುವ ಹೇಳಿಕೆಗಳಲ್ಲಿ `ಮಾಲೆಗಾಂವ್, ಸಂಜೋತಾ ಎಕ್ಸ್‌ಪ್ರೆಸ್, ಅಜ್ಮೀರ್ ಮತ್ತು ಹೈದರಾಬಾದ್‌ನ ಮೆಕ್ಕಾ ಮಸೀದಿ ಬಾಂಬು ಸ್ಫೋಟ ಪ್ರಕರಣಗಳಲ್ಲಿ ಆರ್‌ಎಸ್‌ಎಸ್‌ನ ಕೇಂದ್ರ ಸಮಿತಿ ಸದಸ್ಯರಾದ ಇಂದ್ರೇಶ್‌ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ' ಎಂದು ಹೇಳಿದ್ದಾರೆ. ಇಂದ್ರೇಶ್ ಕುಮಾರ್ ಪಾತ್ರದ ಬಗ್ಗೆ ಅಸೀಮಾನಂದರ ತಪ್ಪೊಪ್ಪಿಗೆ ಇನ್ನಷ್ಟು ಬೆಳಕು ಚೆಲ್ಲುತ್ತದೆ.
ಕುತೂಹಲದ ಸಂಗತಿಯೆಂದರೆ ಭಯೋತ್ಪಾದನೆಯ ಜತೆ ಹಿಂದೂ ಸಂಘಟನೆಗಳ ಸಂಬಂಧದ ಸುಳಿವು ಸಿಕ್ಕಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಕಾಲದಲ್ಲಿ. ಆದರೆ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಏನು ಮಾಡಿದೆ? ಈ ನಿಷ್ಕ್ರಿಯತೆ ಬಗ್ಗೆ ಅಚ್ಚರಿಪಡಬೇಕಾಗಿಲ್ಲ. ಸಂಜೋತಾ ಎಕ್ಸ್‌ಪ್ರೆಸ್ ಬಾಂಬು ಸ್ಫೋಟದಲ್ಲಿ ಹಿಂದೂ ಮೂಲಭೂತವಾದಿಗಳ ಕೈವಾಡದ ಬಗ್ಗೆ ತನಿಖೆ ನಡೆಸುತ್ತಿದ್ದ ಹರಿಯಾಣದ ವಿಶೇಷ ತನಿಖಾದಳ ಇನ್ನೇನು ಆರೋಪಿಗಳನ್ನು ಬಂಧಿಸಲು ಸಿದ್ಧತೆ ನಡೆಸುತ್ತಿದ್ದಾಗಲೇ ಹಠಾತ್ತನೆ ತನಿಖೆಯನ್ನು ಸ್ಥಗಿತಗೊಳಿಸಲಾಗಿತ್ತು. ಆ ಕಾಲದಲ್ಲಿ ಪ್ರಧಾನಿ ಆಂತರಿಕ ಭದ್ರತೆಯ ಸಲಹೆಗಾರರಾಗಿದ್ದ ಎಂ.ಕೆ.ನಾರಾಯಣನ್ ಅವರ ಸೂಚನೆ ಮೇರೆಗೆ ಇದು ನಡೆದಿತ್ತು ಎಂಬ ಸುದ್ದಿ ಪತ್ರಿಕೆಗಳಲ್ಲಿ ಚರ್ಚೆಯಾಗಿತ್ತು. `ದೇಶದಲ್ಲಿ ಭಯೋತ್ಪಾದನೆಯ ಕೃತ್ಯಗಳು ನಡೆದಾಗೆಲ್ಲ ಅದಕ್ಕೆ ಪಾಕಿಸ್ತಾನವನ್ನೇ ಸರ್ಕಾರ ಹೊಣೆ ಮಾಡುತ್ತಾ ಬರುತ್ತಿರುವಾಗ, ಈಗ ಹಠಾತ್ತನೇ ಹಿಂದೂ ಭಯೋತ್ಪಾದಕರ ಕೈವಾಡ ಇದೆ ಎಂದು ಹೇಳುವುದು ಸರಿಯಾಗಲಾರದು' ಎಂದು ಎಂ.ಕೆ.ನಾರಾಯಣನ್ ಅಭಿಪ್ರಾಯ ಪಟ್ಟಿದ್ದರಂತೆ.
ಈ ಎಲ್ಲ ಮಾಹಿತಿ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಅವರ ಮೇಜಿನ ಮೇಲೆ ಇದೆ. ಅವರು ಮಾಡಬೇಕಾಗಿರುವುದು ಬಹಳ ಸರಳವಾದ ಕೆಲಸ. ಮುಸ್ಲಿಮ್ ಭಯೋತ್ಪಾದನೆಯ ಜತೆಯಲ್ಲಿ ಹಿಂದೂ ಭಯೋತ್ಪಾದನೆಗೆ ಸಂಬಂಧಿಸಿದ ತನಿಖೆಯನ್ನು ಕೂಡಾ ತ್ವರಿತಗತಿಯಲ್ಲಿ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು. ಭಯೋತ್ಪಾದನೆಯಲ್ಲಿ ಹಿಂದೂ ಇಲ್ಲವೇ ಮುಸ್ಲಿಮ್ ನಾಯಕರು ಭಾಗಿಯಾಗಿದ್ದರೆ, ಅವರೆಷ್ಟೇ ಪ್ರಭಾವಶಾಲಿಯಾಗಿದ್ದರೂ ಅಂತಹವರ ಪಾತ್ರವನ್ನು ಬಯಲುಗೊಳಿಸಬೇಕು. ಯಾವುದಾದರೂ ಪಕ್ಷ ಇಲ್ಲವೇ ಸಂಘಟನೆ ಇಂತಹ ಕುಕೃತ್ಯಗಳಿಗೆ ಪ್ರತ್ಯಕ್ಷ ಇಲ್ಲವೆ ಪರೋಕ್ಷ ಬೆಂಬಲ ನೀಡುತ್ತಿದ್ದರೆ ಅಂತಹ ಸಂಘಟನೆಗಳ ಮೇಲೆ ನಿಷೇಧ ಹೇರಬೇಕು. ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗದೆ ಇದ್ದರೆ ಜೈಲಲ್ಲಿ ಕೊಳೆಯುತ್ತಿರುವ ನಿರಪರಾಧಿ ಹಿಂದೂ ಮತ್ತು ಮುಸ್ಲಿಮ್ ಆರೋಪಿಗಳನ್ನು ಬಿಡುಗಡೆಗೊಳಿಸಬೇಕು.
ತನಗೊಪ್ಪಿಸಿರುವ ಈ ಕೆಲಸವನ್ನು ನಿಷ್ಠೆಯಿಂದ ಮಾಡುವ ಬದಲಿಗೆ ಕಾಂಗ್ರೆಸ್ ಅಧ್ಯಕ್ಷರ ಸೆರಗಿನ ಮರೆಯಲ್ಲಿ ನಿಂತು ಹಾದಿಹೋಕರ ರೀತಿಯಲ್ಲಿ ಶಿಂಧೆ ಮಾತನಾಡುವುದು ಅವರು ಹೊಂದಿರುವ ಗೃಹಸಚಿವ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ. ಈ ರೀತಿ ಬಾಯಿಬಡುಕರ ರೀತಿಯಲ್ಲಿ ಮಾತನಾಡುವುದೇ ಅವರಿಗೆ ಇಷ್ಟವೆಂದಾದರೆ ಮತ್ತು ಇದರಿಂದಲೇ ರಾಜಕೀಯವಾಗಿ ತನಗೆ ಅನುಕೂಲವಾಗಲಿದೆ ಎಂದು ಅವರು ತಿಳಿದುಕೊಂಡಿದ್ದರೆ ಗೌರವದಿಂದ ಸಚಿವ ಸ್ಥಾನ ಬಿಟ್ಟುಕೊಟ್ಟು ಪಕ್ಷದ ವಕ್ತಾರರಾಗಿ ಇದೇ ರೀತಿ ಬಾಯ್ತುಂಬಾ ಮಾತನಾಡುತ್ತಾ ದೇಶ ಸುತ್ತಿಕೊಂಡು ಇರಬಹುದು. ಜನ ತೀರ್ಮಾನಕ್ಕೆ ಬರುತ್ತಾರೆ.