Saturday, July 2, 2016

ಮುಂಗಾರು ಪತ್ರಿಕೆ: `ಓದುಗರೊಂದಿಗೆ ಸಂಪಾದಕ'

ಮುಂಗಾರು ಪತ್ರಿಕೆಯ ಸಂಪಾದಕರಾಗಿ ವಡ್ಡರ್ಸೆ ರಘುರಾಮ ಶೆಟ್ಟಿಯವರು ನಡೆಸಿದ್ದ ಹಲವಾರು ಪ್ರಯೋಗಗಳಲ್ಲಿ ಅವರು ಆಗಾಗ ಬರೆಯುತ್ತಿದ್ದ ‘ಓದುಗರೊಂದಿಗೆ ಸಂಪಾದಕ’ ಎನ್ನುವ ಅವರ ಅಂಕಣವೂ ಒಂದು. ಓದುಗರಿಂದ ಬಂದ ಪತ್ರಗಳನ್ನು ಓದಿ ಅವುಗಳಲ್ಲಿನ ಸಾಮಾನ್ಯ ದೂರುಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದರು. ತನ್ನ ಮತ್ತು ಓದುಗನ ನಡುವಿನ ಸಂವಹಣದ ಸೇತುವೆಯನ್ನು ಗಟ್ಟಿಗೊಳಿಸುತ್ತಾ ಹೋಗುವವನೇ ನಿಜವಾದ ಪತ್ರಕರ್ತ ಎನ್ನುವುದನ್ನು ನಾನು ಕಲಿತದ್ದೇ ಈ ಪ್ರಯೋಗದಿಂದ. ವಿವೇಕಾನಂದರ ಬಗ್ಗೆ ನಾನು ಬರೆದ ಅಂಕಣದ ಬಗ್ಗೆ ಕೆಲವು ಕೋಮುವಾದಿಗಳು ವಿವಾದವನ್ನು ಸೃಷ್ಟಿಸಿದಾಗ ನನ್ನ ಆಶಯವನ್ನು ಓದುಗರಿಗೆ ಇನ್ನಷ್ಟು ಸ್ಪಷ್ಟಗೊಳಿಸಲು ಮತ್ತೊಂದು ಲೇಖನಬರೆದಿದ್ದೆ. ಅಲ್ಲಿಯೂ ಈ ಮಾತನ್ನು ಪ್ರಸ್ತಾಪಿಸಿದ್ದೆ. (ಆ ಎರಡನೇ ಲೇಖನವನ್ನು ‘ ಕ್ಷಮೆಯಾಚನೆ’ ಎಂದು ಈಗ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಲಜ್ಜೆ ಇಲ್ಲದೆ ಸಮರ್ಥಿಸುತ್ತಾ ತಿರುಗುತ್ತಿರುವ ಚಕ್ರವರ್ತಿ ಸೂಲಿಬೆಲೆ ಎನ್ನುವ ಸುಳ್ಳುಕೋರ ಹೇಳಿಕೊಂಡು ಅಡ್ಡಾಡುತ್ತಿದ್ದಾನೆ)
ಬಾಬರಿ ಮಸೀದಿ ಧ್ವಂಸದ ನಂತರ ದಕ್ಷಿಣ ಕನ್ನಡ ಕೋಮುವಾದದ ಪ್ರಯೋಗಶಾಲೆಯಾಗಿ ಬದಲಾಗಿರುವುದು ಎಂದು ಬಹಳಷ್ಟು ಮಂದಿ ತಿಳಿದುಕೊಂಡಿದ್ದಾರೆ. ಆದರೆ 1985ರಲ್ಲಿಯೇ ಇದು ಶುರುವಾಗಿತ್ತು. ಸಾರಾ ಅಬೂಬಕರ್ ಮತ್ತು ಪೋಲಂಕಿ ರಾಮಮೂರ್ತಿಯವರ ಮೇಲೆ ಸಾರ್ವಜನಿಕವಾಗಿಯೇ ದಾಳಿ ನಡೆದದ್ದು ಆ ಕಾಲದಲ್ಲಿ.ಅವೆ ತಮಗೊಪ್ಪದ ವಿಚಾರಗಳನ್ನು ಬರೆಯುವವರ ಮೇಲೆ ಶಾಬ್ದಿಕ ಅತ್ಯಾಚಾರ ನಡೆಸುತ್ತಿದ್ದ ಭಕ್ತರು ಆಗಲೇ ಹುಟ್ಟಿಕೊಂಡಿದ್ದರು. ವಡ್ಡರ್ಸೆಯವರು ಇದರಿಂದ ಮಾನಸಿಕವಾಗಿ ನೊಂದು ಹೋಗಿದ್ದರು. ಇವೆಲ್ಲವೂ ಈ ಹಳೆಯ ಅಂಕಣ ಓದಿದರೆ ನಿಮಗೆ ಅರ್ಥವಾಗುತ್ತದೆ.
ಕೆಲವು ವರ್ಷಗಳ ನಂತರ ಮಹಾತ್ಮಗಾಂಧೀಜಿ ಬರೆದಿರುವ ‘ಹಿಂದ್ ಸ್ವರಾಜ್ಯ’ ಪುಸ್ತಕ ಓದಿದಾಗ ನನಗೆ ಮತ್ತೆ “ಓದುಗರೊಂದಿಗೆ ಸಂಪಾದಕ’ ಅಂಕಣ ನೆನೆಪಾಗಿತ್ತು. ಇಂತಹದ್ದೊಂದು ಅಂಕಣವನ್ನು ಬರೆಯುವಂತೆ ಪ್ರಜಾವಾಣಿ ಸಂಪಾದಕರಾದ ಕೆ.ಎನ್.ಶಾಂತಕುಮಾರ್ ಅವರಿಗೂ ಹೇಳಿದ್ದೆ. ಅವರು ಆಗ “ಓದುಗ ಸಂಪಾದಕ’ ನನ್ನು ನೇಮಿಸುವ ಬಗ್ಗೆ (ದಿ.ಹಿಂದೂ ಪತ್ರಿಕೆಯಲ್ಲಿದ್ದ ಹಾಗೆ) ಒಲವು ತೋರಿದ್ದರು. ನನ್ನ ಆಸೆ ಕೈಗೂಡಲಿಲ್ಲ, ಅವರ ಆಸೆಯಾದರೂ ಈಡೇರಲಿ.
ಇದನ್ನೆಲ್ಲ ಬರೆಯುತ್ತಿದ್ದ ಹಾಗೆ ನಾನು ಪತ್ರಕರ್ತರನ್ನು ಉದ್ದೇಶಿಸಿ ಮಾಡಿದ ನೂರಾರು ಭಾಷಣಗಳ ಟಿಪ್ಪಣಿಗಳು ನೆನೆಪಾಗುತ್ತಿವೆ. ಅವೆಲ್ಲವನ್ನು ಪ್ರಶ್ನೋತ್ತರ ರೂಪದಲ್ಲಿ ‘ಓದುಗರೊಂದಿಗೆ ಸಂಪಾದಕ’ ಎಂಬ ಶೀರ್ಷಿಕೆಯಲ್ಲಿ ಪುಸ್ತಕವನ್ನು ಪ್ರಕಟಿಸಬಾರದೇಕೆ ಎಂದು ಯೋಚಿಸುತ್ತಿದ್ದೇನೆ. ಹಾಗೆಂದಾಗ ನನ್ನ ಓದುವ ಕೋಣೆಯಲ್ಲಿ ಪ್ರಕಟಣೆಯ ಭಾಗ್ಯ ಕಾಣದೆ ರಾಶಿಬಿದ್ದಿರುವ ಸಾವಿರದಷ್ಟಿರುವ ಅಂಕಣಗಳು, ಲೇಖನಗಳು ಅಣಕಿಸುತ್ತಿವೆ. ಪ್ರಕಾಶಕರು ಕಾಡುತ್ತಿದ್ದಾರೆ, ನನಗ್ಯಾಕೋ ಮನಸ್ಸಾಗುತ್ತಿಲ್ಲ.
ಅವೆಲ್ಲ ಇರಲಿ ಮೊದಲು ಕೆಳಗಿರುವ ವಡ್ಡರ್ಸೆಯವರ ಅಂಕಣ ಓದಿ.
------------------------------------------------------------------------------

ನಿಮ್ಮೂರಿನವನಾದುದು ನನ್ನಪರಾಧವಾಗಬಾರದಲ್ಲ?
1956ರ ಮೇ ತಿಂಗಳ ಅದೊಂದು ಸುದಿನ; ಅಂದು ಜೋಗಜಲಪಾತದ ಮಹಾತ್ಮಾ ಗಾಂಧಿ ಜಲ ವಿದ್ಯುದಾಗರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಬಾರಿಗೆ ಜಲವಿದ್ಯುತ್ ಪೂರೈಕೆಯ ಸಡಗರದ ಸಮಾರಂಭವೊಂದರ ಏರ್ಪಾಡಾಗಿತ್ತು. ಅಂದಿನ ಮೈಸೂರು ಸಂಸ್ಥಾನದ ಕೊಡುಗೆಯಾದ ಜಲವಿದ್ಯುತ್ತನ್ನು, ಉದ್ಯಮಶೀಲರೆನ್ನಿಸಿಕೊಂಡ ದಕ್ಷಿಣ ಕನ್ನಡದ ಜನತೆಗೆ ವಿಧಿವತ್ತವಾಗಿ ಒಪ್ಪಿಸಲು ಅಲ್ಲಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಬಂದಿದ್ದರು.
ಕುಲಶೇಖರದಲ್ಲಿ ನಿರ್ಮಿತವಾಗಿದ್ದ ವಿದ್ಯುತ್ ವಿತರಣೆ ಜಾಲದಲ್ಲಿ ಗುಂಡಿಯೊತ್ತಿದ. ಕನ್ನಡಕ್ಕೆ ಜೋಗದ ಜಲವಿದ್ಯುತ್ ಹರಿಯಗೊಟ್ಟ ಕೆಂಗಲ್ ಹನುಮಂತಯ್ಯ ಒಂದು ಮಾರ್ಮಿಕವಾದ ಮಾತನಾಡಿದ್ದರು. “ನಿಮ್ಮ ಕೃತು ಶಕ್ತಿಗೆ ಚಾಲನೆ ಕೊಡಬಲ್ಲ ವಿದ್ಯುಚ್ಛಕ್ತಿಯನ್ನು ನಾವು ಕೊಟ್ಟಿದ್ದೇವೆ. ಇನ್ನು ಮೇಲೆ ನಿಮ್ಮ ಬುದ್ಧಿಶಕ್ತಿ. ಘಟ್ಟದ ಮೆಟ್ಟಲನ್ನೇರಿ ಬಯಲು ಸೀಮೆಗೆ ಹರಿದು ಅಲ್ಲಿನ ಜನರ ಬದುಕಿಗೆ ಹೊಸ ಚೇತನ ಕೊಡಬೇಕು” ಎಂಬ ಆಶಯವನ್ನವರು ಮುಂದಿಟ್ಟಿದ್ದರು.
ಆಗ ತಾನೇ ಪತ್ರಿಕಾ ವೃತ್ತಿಗೆ ಸೇರಿದ ನಾನು, “ನವಭಾರತ” ಪತ್ರಿಕೆಗೆ ವರದಿ ಮಾಡಲು ಅಂದಿನ ಸಮಾರಂಭಕ್ಕೆ ಹೋಗಿದ್ದೆ. ಹನುಮಂತಯ್ಯನವರ ಅರ್ಥವತ್ತಾದ ಮಾತನ್ನು ಹೇಳಿ ನನ್ನ ಮೈ ನವಿರೆದ್ದಿತು. ರಾಜಕಾರಣಿಯೊಬ್ಬರಿಂದ ಸುಂದರ ಶೈಲಿಯ ಕನ್ನಡ ಭಾಷಣ ನಾನು ಕೇಳಿದ್ದು ಅದೇ ಮೊದಲು. ಅದಕ್ಕಿಂತ ಮಿಗಿಲಾಗಿ, ಕೆಂಗಲ್ ಅವರು ತಮ್ಮ ಭಾಷಣದಲ್ಲಿ ದಕ್ಷಿಣ ಕನ್ನಡದ ಉದ್ಯಮ ಶೀಲ, ವಿಚಾರವಂತ ಹಾಗೂ ಬುದ್ಧಿವಂತ ಜನ ಸಮೂಹದ ಒಂದು ಆಕರ್ಷಕ ವಾಕ್ಚಿತ್ರ ಬಿಡಿಸಿದ್ದರು. ಇನ್ನು ಕೆಲವೇ ತಿಂಗಳಲ್ಲಿ (1951 ನವೆಂಬರ್ 1) ವಿಸ್ತ್ರತ ಕನ್ನಡ ನಾಡಿಗೆ ಸೇರಲಿರುವ ದಕ್ಷಿಣ ಕನ್ನಡಿಗರ ಬುದ್ಧಿಬಲಕ್ಕೆ ಸಿಗಲಿರುವ ವಿಶಾಲ ಭೂಮಿಕೆಯ ಚಿತ್ರವನ್ನೂ ಕೆಂಗಲ್ ಬಿಡಿಸಿದ್ದರು.
ಮೇಲಂತಸ್ತಿನ ಜಿಲ್ಲೆ
ಅಂದಿನವರೆಗೆ ದೂರದ ಮದ್ರಾಸು ಪ್ರಾಂತ್ಯದ ಒಂದು ಬಿಡಿ ಭಾಗವಾಗಿದ್ದರೂ ದಕ್ಷಿಣ ಕನ್ನಡ ಜಿಲ್ಲೆ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮೇಲಂತಸ್ತಿನಲ್ಲೇ ಇತ್ತು. ಕನ್ನಡ ನಾಡಿಗೆ ಸೇರಿದ ಮೇಲೆ ಈ ಜಿಲ್ಲೆಯ ಮುನ್ನಡೆಗೆ ಹೊಸ ಆಯಾಮ ಬರುವುದೆಂಬುದು ಆಗ ಎಲ್ಲರ ನಿರೀಕ್ಷೆಯಾಗಿತ್ತು.
ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನಡೆಯ ದಾಪುಗಾಲು ಹಾಕುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ ಕನ್ನಡನಾಡಿನ ಅಭಿಮಾನದ ಕಳಶವಾಗುವುದೆಂಬ ನಿರೀಕ್ಷೆಯಲ್ಲಿ ಎದೆಯುಬ್ಬಿದವರಲ್ಲಿ ನಾನೂ ಒಬ್ಬ. ಯಾಕೆಂದರೆ ನಾಡಿನ ಇತರ ಜಿಲ್ಲೆಗಳ ಜನ ಮೆಚ್ಚುವ ಎಲ್ಲ ಗುಣಗಳೂ ನಮ್ಮಲ್ಲಿದ್ದುವು. ಆಡಳಿತದಲ್ಲಿ ಲಂಚಗುಳಿತನವೆಂಬುದು ಕಿಂಚಿತ್ತೂ ಇಲ್ಲಿರಲಿಲ್ಲ. ಸಾರ್ವಜನಿಕ ಮುಖಂಡರು ಇಲ್ಲಿ ಸ್ವಚ್ಚತೆಗೆ ಹೆಸರಾಗಿದ್ದರು. ವಿದ್ಯಾರ್ಥಿ ಸಮೂಹ ಪ್ರತಿಭೆಯ ಆಗರವಾಗಿತ್ತು. ಆದರ್ಶ ಅಧ್ಯಾಪಕರ ದೊಡ್ಡ ಪಟ್ಟಿಯೇ ಇಲ್ಲಿತ್ತು. ವಿದ್ಯಾವಂತ ಯುವಕರು ಪುಸ್ತಕ ಪ್ರಿಯರಾಗಿದ್ದರು. ವಿಚಾರವಂತಿಕೆ ಬೆಳೆಸಿಕೊಂಡಿದ್ದರು. ಚಿತ್ರ ಮಂದಿರಗಳ ಮುಂದೆ ಕ್ಯೂ ನಿಲ್ಲುವುದು ಆಪಮಾನಕಾರಿಯೆಂದು ಆಗಿನ ಯುವಕರು ತಿಳಿದಿದ್ದರು. ಕನ್ನಡ ನಾಡಿನ ಇತರ ಯಾವ ಭಾಗದಲ್ಲೂ ಇಲ್ಲದಷ್ಟು ತೀವ್ರವಾದ ಕಾರ್ಮಿಕ ಚಳುವಳಿ ಇಲ್ಲಿ ಬೇರುಬಿಟ್ಟಿತ್ತು. ಇಲ್ಲಿನ ರಾಜಕೀಯದಲ್ಲಿ ಸಮಾಜವಾದಿಗಳು ಸಕ್ರಿಯರಾಗಿದ್ದರು. ಮದ್ಯಪಾನ ಮಹಾಪರಾಧವೆಂಬ ಭಾವನೆ ಈ ಜಿಲ್ಲೆಯಲ್ಲಿ ವ್ಯಾಪಕವಾಗಿತ್ತು. ಮೋಸ ವಂಚನೆ ಮಾಡಿ ಅಥವಾ ಇನ್ನಿತರ ವಾಮಾಚಾರಗಳಿಂದ ಹಣಗಳಿಸುವವರು ಸಾರ್ವಜನಿಕರ ತಿರಸ್ಕಾರಕ್ಕೆ ಈಡಾಗುತ್ತಿದ್ದರು.
ಮೌಲ್ಯದ ನೆಲೆ ಇತ್ತು
ಇಂತ ಮೌಲ್ಯಗಳ ನೆಲೆಯಲ್ಲಿ ನಿಂತು ಮುನ್ನಡೆಯುತ್ತಿದ್ದ ಜಿಲ್ಲೆಗೆ ಸೇರಿದವನು ನಾನೆಂಬ ಹೆಮ್ಮೆ ನನಗಾಗ ಇತ್ತು. ಪತ್ರಿಕಾ ವೃತ್ತಿ ಅವಲಂಬನೆಯಲ್ಲಿ ನಾನು 1957ರಲ್ಲಿ ಬೆಂಗಳೂರಿಗೆ ಹೋದಾಗ ಅಲ್ಲಿನ ಪತ್ರಕರ್ತರ ಮುಂದೆ ನಮ್ಮ ಜಿಲ್ಲೆಯ ರಾಜಕೀಯ ಮಹತ್ವ ಮತ್ತು ಅದರ ಗುಣ ವೈಶಿಷ್ಟ್ಯಗಳ ಬಗ್ಗೆ ಉದ್ದುದ್ದ ವ್ಯಾಖ್ಯಾನ ಮಾಡುತ್ತಿದ್ದೆ. ಮೊದ-ಮೊದಲು ಬೆಂಗಳೂರಿನ ಪತ್ರಕರ್ತರಿಗೆ ಇದನ್ನು ಅಲ್ಲಗಳೆಯಲಾಗುತ್ತಿರಲಿಲ್ಲ. ಆದರೆ ಕ್ರಮೇಣ ವಿಧಾನಸಭೆಯಲ್ಲಿ ಈ ಜಿಲ್ಲೆಯ ಪ್ರತಿನಿಧಿಗಳಲ್ಲಿ ಬಹುಮಂದಿ ತೊದಲಲು ಆರಂಭಿಸಿದರು. ಸಂಸದೀಯ ಪಟ್ಟುತ್ವದ ಲೋಪ ಜಿಲ್ಲೆಯ ಬಹುಮಂದಿ ಶಾಸಕರಲ್ಲಿ ಎದ್ದು ಕಂಡಿತು. ದಿವಂಗತರಾದ ಎ.ಬಿ.ಶೆಟ್ಟಿ ಮತ್ತು ಬಿ.ವೈಕುಂಠ ಬಾಳಿಗರನ್ನು ಬಿಟ್ಟರೆ ಈ ಜಿಲ್ಲೆಯ ಬೇರೆ ಯಾರೂ ಬೆಂಗಳೂರಿನ ಪತ್ರಕರ್ತರ ಮೇಲೆ ತಮ್ಮ ಬುದ್ಧಿಬಲದ ಮುದ್ರೆಯೊತ್ತಲಿಲ್ಲ.
ಇತ್ತೀಚಿನ ವರ್ಷಗಳಲ್ಲಿ ವಿಧಾನ ಮಂಡಲದಲ್ಲಿ ಜಿಲ್ಲೆಯ ಪ್ರತಿನಿಧಿಗಳ ತೊದಲು ನುಡಿಗಳು ಹೆಚ್ಚಾದಾಗ ಬೆಂಗಳೂರಿನ ನನ್ನ ಪತ್ರಕರ್ತ ಗೆಳೆಯರು “ನಿನ್ನ ಜಿಲ್ಲೆಯ ಜನ ಏನು ಬುದ್ಧಿವಂತರಯ್ಯಾ !” ಅಂತ ಗೇಲಿ ಮಾಡುತ್ತಿದ್ದರು.
ರಾಜಕೀಯ ವ್ಯವಸ್ಥೆಯಲ್ಲಿ ಜನ ಪ್ರತಿನಿಧಿಗಳ ಗುಣಮಟ್ಟ ಕಳಪೆಯಾದಾಗ ಈ ಪ್ರದೇಶದ ರಾಜಕೀಯ ಮಹತ್ವ ಕುಂದುತ್ತದೆ. ಹೀಗೆ ರಾಜಕೀಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅವನತಿ ನಿಧಾನವಾಗಿ ಆಗುತ್ತಲೇ ಬಂದಿದೆ. ಯಾಕೆ ಹೀಗಾಗುತ್ತಿದೆ? ವಿಚಾರವಂತರು ಮತ್ತು ಸುಜ್ಞಾನಿಗಳನ್ನು ರಾಜಕೀಯದಲ್ಲಿ ಬೆಳೆಸುವ ಪ್ರಜ್ಞೆ ಈ ಜಿಲ್ಲೆಯಲ್ಲಿ ಯಾಕ್ಕಿಲ್ಲವಾಯಿತು? ಎಂಬ ಪ್ರಶ್ನೆಗಳು ಆಗಾಗ ನನ್ನನ್ನು ಕಾಡಿಸುತ್ತಿದ್ದವು. ಇದಕ್ಕೆ ಉತ್ತರ ಹುಡುಕುವುದು ನನ್ನ ಕೈಲಾಗದ ಕೆಲಸವಾಗಿತ್ತು. ಎಳೆಯನಾಗಿದ್ದಾಗ ಗೊತ್ತು-ಗುರಿ ಇಲ್ಲದೆ ಬದುಕಿನ ಅಂದಗೆಡಿಸಿಕೊಂಡ ನನಗೆ, ಬೆಂಗಳೂರಿನಲ್ಲಿ ಪತ್ರಿಕಾ ವೃತ್ತಿಯಲ್ಲಿ ನೆಲೆಯೂರಿ ಬೆಳೆಯ ಬೇಕಾದ ದೊಡ್ಡ ಹೊಣೆ ಇತ್ತು.
ಹೀಗೆ ಬೆಂಗಳೂರಿನಲ್ಲಿ ಪತ್ರಕರ್ತನಾಗಿ ವ್ಯಕ್ತಿತ್ವವನ್ನು ರೂಪಿಸಿಕೊಂಡ ಒಂದು ಹಂತದಲ್ಲಿ, ಸ್ವತಂತ್ರ ಬದುಕಿನ ಬಯಕೆ ಮೂಡಿತು. ಇಪ್ಪತ್ತನಾಲ್ಕು ವರ್ಷಗಳ ಕಾಲ ನಾನು ದುಡಿದು ಬೆಳೆದ ಡೆಕನ್ ಹೆರಾಲ್ಡ್- ಪ್ರಜಾವಾಣಿ ಸಂಸ್ಥೆಗೆ ರಾಜೀನಾಮೆ ಕೊಟ್ಟು 1983ರ ಸೆಪ್ಟಂಬರ್ನಲ್ಲಿ ಮುಂಗಾರು ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದೆ. ಈ ಹೊಸ ಸಂಸ್ಥೆಯ ದಿನ ಪತ್ರಿಕೆಯನ್ನು ನನ್ನ ಜಿಲ್ಲೆಯ ಕೇಂದ್ರವಾದ ಮಂಗಳೂರಿನಿಂದಲೇ ಆರಂಭಿಸಬೇಕೆಂದು ತೀರ್ಮಾನಿಸಿದೆ. ನಾನು ಈ ಜಿಲ್ಲೆಯವನಾದರೂ ಪತ್ರಕರ್ತನಾಗಿ ನಾನು ಈ ಹೆಚ್ಚು ಪರಿಚಿತನಾಗಿರುವುದು ನಾಡಿನ ಬಯಲು ಸೀಮೆಯಲ್ಲಿ. ನನ್ನ ಓದುಗ ಬಳಗವಿರುವುದೂ ಅಲ್ಲಿಯೇ ಹೆಚ್ಚು. ಇದೆಲ್ಲ ನನಗೆಗೊತ್ತಿತ್ತು. ಆದರೂ ಮಾನವ ಚೈತನ್ಯದ ಮಹಾ ಸಾಗರದಂತಿರುವ ಈ ಕಡಲ ತೀರದ ಜಿಲ್ಲೆಯಲ್ಲಿ ಚಿಂತನೆಯ ಮಳೆ ಸುರಿಸಿ ಜನ ಶಕ್ತಿಯ ಬೆಳೆ ತೆಗೆಯಬೇಕೆಂದು ನನ್ನ ಕಲ್ಪನೆಯಾಗಿತ್ತು. ಅದಕ್ಕೆ ಹದವಾದ ಮನೋಭೂಮಿಕೆ ಮೂವತ್ತು ವರ್ಷಗಳ ಹಿಂದೆ ಇಲ್ಲಿತ್ತು.
ವಾಣಿಜ್ಯಮಯ
ಅದೆಲ್ಲಾ ಈಗ ಕಳೆದು ಹೋದ ಮಾತು. ನಿನ್ನ ಜಿಲ್ಲೆಯ ಜೀವನ ಈಗ ವಾಣಿಜ್ಯ ಮಯವಾಗಿದೆ ಎಂದು ನನಗೆ ಮೊದಲು ಹೇಳಿದವರು, ಇಲ್ಲಿನ ರೋಶನಿ ನಿಲಯದಲ್ಲಿ ಸಮಾಜ ವಿಜ್ಞಾನದ ಪ್ರಾಧ್ಯಾಪಕರಾಗಿರುವ ಡಾ|| ಜಿ.ಆರ್. ಕೃಷ್ಣ . ಇವರು ಆಂಧ್ರ ಪ್ರದೇಶದವರು. ಪ್ರಸಿದ್ಧ ರಾಜಕಾರಣಿ ಪ್ರೊ|| ಎಸ್.ಜಿ ರಂಗ ಅವರ ಸೋದರ ಸಂಬಂಧಿ. ಸಮಾಜ ಶಾಸ್ತ್ರವನ್ನ ಆಳವಾಗಿ ಅಭ್ಯಾಸ ಮಾಡಿದ ಕೆಲವೇ ಜನರಲ್ಲಿ ಇವರೊಬ್ಬರು. ತಮ್ಮ ಪಾಂಡಿತ್ಯಕ್ಕೆ ವಿಶ್ವಮನ್ನಣೆ ಪಡೆದವರು.
1984ರ ಜನವರಿಯ ಅದೊಂದು ದಿನ ನಾನವರನ್ನು ಸಂಧಿಸಿ ನನ್ನ ಮುಂಗಾರು ಯೋಜನೆಯ ಕುರಿತು ಮಾತನಾಡಿದೆ. ಕಳೆದ ಹದಿನೈರು ವರ್ಷಗಳಿಂದ ಮಂಗಳೂರಿನಲ್ಲೇ ಡಾ|| ಜಿ.ಆರ್. ಕೃಷ್ಣ, ಈ ಜಿಲ್ಲೆಯ ಜನರನ್ನು ಮತ್ತು ಅದರ ಬದುಕುನ್ನು ಇಂದು ಅವರಿಸಿರುವ ವಾಣಿಜ್ಯ ಮೌಲ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವಂತೆ ಕಂಡಿತು. ಮಂಗಳೂರಿನಿಂದ ಮುಂಗಾರು ಹೊರಡಿಸಬೇಕೆಂಬ ನನ್ನಾಸೆಗೆ ಅವರು ತಣ್ಣೀರೆರಚಲಿಲ್ಲ. ಆದರೆ ವಾಣಿಜ್ಯ ದೃಷ್ಟಿಯೊಂದೇ ಇಲ್ಲಿ ಯಶಸ್ವಿಯಾದೀತು ಎಂಬ ಸೂಚನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜನಜೀವನ ಇಂದು ಪೂರ್ಣವಾಗಿ ವಾಣಿಜ್ಯಮಯವಾಗಿದೆ. ಈ ದೇಶದಲ್ಲಿಂದು ಮಹಾಪೀಡೆ ಎನ್ನಿಸಿಕೊಂಡಿರುವ ವಿದ್ಯೆಯ ವ್ಯಾಪಾರ ಆರಂಭವಾದುದು ಇಲ್ಲಿಯೇ. ರಾಜಕೀಯಕ್ಕೂ ವಾಣಿಜ್ಯ ಗಣನೆ ಬಂದಿದೆ. ಗಂಡು ಹೆಣ್ಣಿನ ಮಾನವೀಯ ಸಂಬಂಧವೂ ಕೂಡಾ ಇಲ್ಲಿ ವಾಣಿಜ್ಯ ವಸ್ತುವಾಗಿದೆ. ಜಿಲ್ಲೆಯ ಪ್ರೌಢ ಕಲೆಯಾದ ಯಕ್ಷಗಾನವೂ ವ್ಯಾಪಾರದ ಡೇರೆಯಲ್ಲಿ ಸಿಕ್ಕಿ ನಶಿಸುತ್ತಿದೆ. ಆದ್ದರಿಂದ ನೀವು ಹೊರಡಿಸುವ ಪತ್ರಿಕೆ ಈ ವ್ಯಾಪಾರಿ ಸೂತ್ರಕ್ಕೆ ಸಲ್ಲುವಂತಿರಬೇಕು, ಎಂದು ನನಗವರು ಹೇಳಿದ್ದರು.
ವಾಣಿಜ್ಯಮಯವಾಗಿರುವ ಜಿಲ್ಲೆಯ ಜನ ಜೀವನಕ್ಕೆ ಅವರು ಹಲವು ನಿದರ್ಶನಗಳನ್ನಿತ್ತರು. ಅವರ ಅಭಿಪ್ರಾಯದಲ್ಲಿ, ಈ ಜಿಲ್ಲೆಯಲ್ಲಿ ಕಮ್ಯೂನಿಸ್ಟ್ ಕಾರ್ಮಿಕ ಚಳವಳಿಯ ನೆಲೆ ತಪ್ಪಿದ್ದುದಕ್ಕೂ ಇದೇ ಕಾರಣ. ಇಲ್ಲಿನ ಸಭೆ ಸಮಾರಂಭಗಳು ಅಥವಾ ಶಾಲಾ ವಾರ್ಷಿಕೋತ್ಸಗಳಿಗೆ ಹಣವಂತರು ಅಥವಾ ಬ್ಯಾಂಕ್ ಅಧಿಕಾರಿಗಳನ್ನೇ ಮುಖ್ಯ ಅತಿಥಿಗಳಾಗಿ ಕರೆಯುವುದೇ ಈಗೊಂದು ಫ್ಯಾಷನ್ ಆಗಿರುವುದುನ್ನು ಪ್ರಸ್ತಾಪಿಸಿದರು. ಬುದ್ಧಿಗೆ ಇಲ್ಲೀಗ ಬೆಲೆ ಇಲ್ಲದಾಗುತ್ತಿದೆಯೆಂದರು.
ಡಾ. ಕೃಷ್ಣ ಒಬ್ಬ ಸಮಾಜ ವಿಜ್ಞಾನಿ ಅವರ ಮಾತಿಗೆ ಬಹಳ ತೂಕವಿದೆ. ಅದನ್ನು ಕಿವಿಗೊಟ್ಟು ಕೇಳುವವರಿಲ್ಲವೆಂದು ಅವರು ಕೊರಗಿದವರು. ನಿಮ್ಮ ಜಿಲ್ಲೆಯ ಜನ ಬುದ್ಧಿ ಬಲದ ನೆಲೆ ಇಲ್ಲದೆ ಕಟ್ಟುತ್ತಿರುವ ಭೌತಿಕ ಸೌಧ, ಪರಿವರ್ತನೆಯ ಬಿರುಗಾಳಿಯಲ್ಲೊಂದು ದಿನ ಬಿದ್ದು ಹೋಗಲಿದೆ ಎಂದು ಎಚ್ಚರಿಸಿದರು.
ಅನಂತರ ನಾನು ಮತ್ತು ಅವರು ಆಗಾಗ ಸೇರಿ ಪ್ರಚಲಿತ ಸಮಾಜ ಮತ್ತು ಅದರಲ್ಲಿ ಪತ್ರಿಕೆಗಳ ಪಾತ್ರ ಎನ್ನುವ ಕುರಿತು. ಚರ್ಚಿಸಿದ್ದೆವು. ಪರಿವರ್ತನಾ ಶೀಲವಾದ ಭಾರತೀಯ ಸಮಾಜದಲ್ಲಿ ಪತ್ರಿಕೆ ಒಂದು ಸಾಧನ. ಅದು ಒಂದು ತತ್ವಕ್ಕೆ ಬದ್ಧವಾಗಿರಬೇಕು. ಈ ತತ್ವ ಪ್ರತಿಪಾದನೆ ಕೆಲವರಿಗೆ ಮೆಚ್ಚಿಕೆ ಆಗಬಹುದು. ಅನೇಕರು ಇದರಿಂದ ರೊಚ್ಚಿಗೇಳಬಹುದು ಇಂತಹ ವಿಭಿನ್ನ ಪ್ರತಿಕ್ರಿಯೆಗಳಿಂದಲೂ ಪತ್ರಿಕೆ ತನ್ನ ಉದ್ದೇಶ ಸಾಧನೆ ಮಾಡಿದೆಯೆಂದು ತಿಳಿಯಬೇಕಾಗುತ್ತದೆ. ಇದರಿಂದ ಜನಸಮೂಹದಲ್ಲಿ ವಿಚಾರವಂತಿಕೆಯನ್ನು ಬೆಳೆಸಿದಂತಾಗುತ್ತದೆ. ಎಲ್ಲರಿಗೂ ಸಲ್ಲು-ಉಪಚಾರದ-ಆತ್ಮವಂಚನೆ ವಾಣಿಜ್ಯ ವಸ್ತುವಾಗಿ ಪತ್ರಿಕಾ ವೃತ್ತಿ ಉಳಿಯಬೇಕಾಗಿಲ್ಲ ಎಂಬ ತೀರ್ಮಾನಕ್ಕೆ ಬಂದೆವು.
ಅನೇಕರು ರೊಚ್ಚು
ನಮ್ಮ ಕಲ್ಪನೆಯ “ಮುಂಗಾರು” ಆರಂಭವಾಗಿ ಈಗ ಆರು ತಿಂಗಳು ಕಳೆಯಿತು. ನಾವು ಮೊದಲ ಕಲ್ಪಿಸಿದ ರೀತಿಯಲ್ಲೇ ನಮ್ಮ ವೃತ್ತಿ ನೀತಿಯನ್ನು ಉಳಿಸಿಕೊಂಡು ಬಂದಿದ್ದೇವೆ. ನಮ್ಮ ನೀತಿಯನ್ನು ಕೆಲವರು ಮೆಚ್ಚಿದ್ದರೆ, ಅನೇಕರು ರೊಚ್ಚಿ ಗೆದ್ದಿದ್ದಾರೆ. ಇಲ್ಲಿಯೂ ಕೂಡಾ ಒಂದು ಸ್ವಾರಸ್ಯದ ಸಂಗತಿಯೆಂದರೆ-ನಮ್ಮ ನೀತಿಯನ್ನು ಹೆಚ್ಚಾಗಿ ಮೆಚ್ಚಿರುವವರು ಕೊಡಗು, ಹಾಸನ, ಚಿಕ್ಕಮಂಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನತೆ. ಓದುಗರ ಸಂಖ್ಯೆಯಲ್ಲಿ ಈ ಜಿಲ್ಲೆಗಳದು ಅರ್ಧಪಾಲು; ಉಳಿದರ್ಧ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಡೆಗಳಲ್ಲಿಯೂ ನಮ್ಮ ನಿಲುವನ್ನು ಒಪ್ಪದವರಿದ್ದಾರೆ. ಇದನ್ನು ನಾವು ನಿರೀಕ್ಷಿಸಿಯೂ ಇದ್ದೇವೆ. ನಮ್ಮ ನೀತಿಯನ್ನು ಒಪ್ಪದಿರುವ ಅನೇಕ ಓದುಗರು ನಮ್ಮನ್ನು ಗೌರವದಿಂದ ಕಂಡಿದ್ದಾರೆ.
ಆದರೆ ನನ್ನ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿರುವ ಒಂದು ಅಂಶ ಕಲ್ಯಾಣಪುರ ಹೊಳೆಯಿಂದಾಚೆಗಿನಕೆಲವರು ಓದುಗರು ನನ್ನ ಮೇಲೆ ವೈಯಕ್ತಿಕವಾಗಿ ಸುರಿದ ಬೈಗುಳದ ಮೆಳೆ. ಹೀಗೆ ನನ್ನನ್ನು ಹೀನಾಯವಾಗಿ ನಿಂದಿಸಿ ಪತ್ರ ಬರೆದವರು ಒಂದೇ ವರ್ಗಕ್ಕೆ ಸೇರಿದವರೆಂಬುದೂ ಗಮನಾರ್ಹ.
ಪ್ರಶ್ನಾವಳಿ
ಹೆಸರು ಹಾಕದೆ ವಿಳಾಸ ಕೊಡದೆ ಹೀಗೆ ಬೈದಿರುವವರಿಗೆ ವೈಯಕ್ತಿಕವಾಗಿ ಉತ್ತರ ಕೊಡುವುದು ಸಾಧ್ಯವಿಲ್ಲದ ಮಾತು. ಇದರ ಮೇಲಿಗೆ, ನಾವು ಇತ್ತೀಚಿಗೆ ಓದುಗರ ಅಭಿಪ್ರಾಯ ಸಂಗ್ರಹಕ್ಕೆ ಒಂದು ಪ್ರಶ್ನಾವಳಿಯನ್ನು ಕಳಿಸಿದ್ದೇವೆ. ಅದರಲ್ಲಿಯೂ ಕೂಡ ನಮ್ಮ ನಿಲುವನ್ನು ಉಗ್ರವಾಗಿ ಖಂಡಿಸಿದವರಲ್ಲಿ ಕಲ್ಯಾಣಪುರ ಹೊಳೆಯಿಂದಾಚೆಗಿನವರೇ ಹೆಚ್ಚು.
ಪ್ರಶ್ನಾವಳಿಗೆ ಬಂದಿರುವ ಎಲ್ಲ ಅಭಿಪ್ರಾಯಗಳನ್ನೂ ಗೌರವದಿಂದ ಕಾಣಬೇಕೆಂಬುದು ನನ್ನಿಚ್ಛೆ. ಇದರಲ್ಲಿ ಹೆಚ್ಚಿನವರು “ ಮುಂಗಾರು” ಕಾಂಗೈ ಮುಖವಾಣಿ ಎಂದು ಟೀಕಿಸಿದ್ದಾರೆ. ಬಂಗಾರಪ್ಪನ ಪ್ರಚಾರದ ಪತ್ರಿಕೆಯೆಂದು ಖಂಡಿಸಿದ್ದಾರೆ ಮಾನ್ಯ ಓದುಗರ ಈ ಆಪಾದನೆಗಳಿಗೆ ವಿವರಣೆ ಕೊಡಬೇಕಾದ ನೈತಿಕ ಹೊಣೆ ನನ್ನ ಮೇಲಿದೆ. ನಾನು ಮುಂಗಾರು ಪತ್ರಿಕೆಯ ಸಂಸ್ಥಾಪಕ ನಾಗಿರಬಹುದು. ಸಂಪಾದಕನೂ ಆಗಿದ್ದೇನೆ. ಅಂದ ಮಾತ್ರಕ್ಕೆ ಅದು ನನ್ನ ಸ್ವಂತ ಸೊತ್ತಾಗುವುದಿಲ್ಲ. ಇದು ಓದುಗರ ಪತ್ರಿಕೆ. ಓದುಗರನೊಡನೆ ಮನಬಿಚ್ಚಿ ಮಾತನಾಡ ಬೇಕಾದುದು ನನ್ನ ಕರ್ತವ್ಯ. ತತ್ವಕ್ಕೆ ಬದ್ದನಾದ ಒಬ್ಬ ಪತ್ರಕರ್ತನಾಗಿ ಯಾವುದೇ ಮುಚ್ಚು ಮರೆಯಿಲ್ಲದೆ ಈ ಕರ್ತವ್ಯವನ್ನು ನಿರ್ವಹಿಸುತ್ತೇನೆ. ಪ್ರತಿಯೊಂದು ಟೀಕೆಗೂ ಬಿಡಿ ಬಿಡಿಯಾಗಿ ಉತ್ತರ ಕೊಡಬೇಕೆಂದು ನನ್ನಾಸೆ.
(‘ಮುಂಗಾರು’ ಕಾಂಗೈ ಪಕ್ಷದ ಮುಖವಾಣಿಯೇ? ಎಂಬ ಪ್ರಶ್ನೆಗೆ ಮಂಗಳವಾರದ ಸಂಚಿಕೆಯಲ್ಲಿ ಉತ್ತರಿಸುತ್ತೇನೆ.- ಸಂ)
**********

No comments:

Post a Comment