Thursday, April 9, 2015

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ‘ರೋಗ ಪತ್ತೆ ವಿಧಾನ’ವಿದ್ದಂತೆ: ದಿನೇಶ್ ಅಮಿನ್ ಮಟ್ಟು


 ಬೆಂಗಳೂರು: ಏ, 9:- ಜಾತಿ ಎನ್ನುವ ರೋಗಕ್ಕೆ ಮೀಸಲಾತಿ ಒಂದು ಚಿಕಿತ್ಸಾ ವಿಧಾನವಾದರೆ ಜಾತಿ ಗಣತಿ ರೋಗ ಪತ್ತೆ ವಿಧಾನ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಶ್ರೀ ದಿನೇಶ್ ಅಮಿನ್ ಮಟ್ಟು ಅವರು ಅಭಿಪ್ರಾಯಪಟ್ಟರು.
ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು ನಗರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಗಾಂಧಿ ಸ್ಮಾರಕ ನಿಧಿ ಇವರ ಸಹಯೋಗದೊಂದಿಗೆ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.
ಸರ್ಕಾರ ಹಮ್ಮಿಕೊಂಡಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ ಕಾರಣ ಯಾವುದೇ ಪಕ್ಷ ಅಥವಾ ರಾಜಕಾರಣಿ ಅಲ್ಲ; ಸಂವಿಧಾನ, ಶಾಸಕಾಂಗ ಹಾಗೂ ಕಾರ್ಯಾಂಗ. ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ವೈಜ್ಞಾನಿಕವಾಗಿ ಅಂಕಿ ಅಂಶಗಳ ಸಂಗ್ರಹಣೆಗಾಗಿ ಈ ಸಮೀಕ್ಷೆ ನಡೆಯುತ್ತಿದೆ. ಭಾರತ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ನಡೆಸುವ ಜನಗಣತಿಯಲ್ಲಿ ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಮಾಹಿತಿ ಲಭ್ಯವಿರುತ್ತವೆ. ಆದರೆ ಹಿಂದುಳಿದ ವರ್ಗದವರ ಮಾಹಿತಿ ದೊರೆಯುವುದಿಲ್ಲ. ಇದರಿಂದ ಹಿಂದುಳಿದ ಜಾತಿಗಳ ಜನರ ಅಭಿವೃದ್ಧಿಗಾಗಿ ಯೋಜನೆ ರೂಪಿಸಲು ತೊಡಕಾಗುತ್ತದೆ. ಆರ್ಥಿಕ ಬಲ ತುಂಬುವುದರಿಂದ ಜಾತೀಯತೆಯ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಅವರು ತಿಳಿಸಿದರು.
ಸರ್ಕಾರದ ಸೌಲಭ್ಯಗಳ ಸದ್ಬಳಕೆ ಮೀಸಲಾತಿಯ ದುರುಪಯೋಗ ತಡೆಯುವುದು ಹಾಗೂ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಒದಗಿಸುವ ಉದ್ದೇಶಗಳಿಗೆ ಅಗತ್ಯವಿರುವ ನಿಖರ ಮಾಹಿತಿ ಈ ವೈಜ್ಞಾನಿಕ ಸಮೀಕ್ಷೆಯಿಂದ ದೊರೆಯುತ್ತದೆ. ಆದ್ದರಿಂದ ಎಲ್ಲರೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿಖರ ಮಾಹಿತಿ ನೀಡಿ ಅರ್ಹರಿಗೆ ಅಭಿವೃದ್ಧಿ ಕಾರ್ಯಕ್ರಮಗಳ ಫಲ ದೊರೆಯುವಂತಾಗಲು ಸಹಕರಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶ್ರೀ ಹೆಚ್.ಕಾಂತರಾಜ ಅವರು ಮಾತನಾಡಿ ಜಾತಿ ನಮ್ಮ ಶತ್ರು, ಆದರೆ ಅದನ್ನು ಓಡಿಸಲು ಶತ್ರು ಯಾರೆಂದು ಅರಿಯುವುದು ಮುಖ್ಯವಾದ್ದರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅತ್ಯಂತ ಮಹತ್ವಪೂರ್ಣವಾದದ್ದು, ಸಮಾನತೆಯ ಅನುಷ್ಠಾನಕ್ಕೆ ಈ ಸಮೀಕ್ಷೆಗೆ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ಪ್ರತಿಪಾದಿಸಿದರು.
ಸಮೀಕ್ಷೆಯನ್ನು ಅತ್ಯಂತ ವೈಜ್ಞಾನಿಕವಾಗಿ ನಡೆಸಲಾಗುತ್ತಿದ್ದು, ಯಾವ ಸಮುದಾಯದವರಿಗೂ ತೊಂದರೆ ಇಲ್ಲ. ಇದು ವಾಸ್ತವಿಕ ಅಂಕಿ ಅಂಶಗಳನ್ನು ಕ್ರೋಢೀಕರಿಸುವ ಕಾರ್ಯಕ್ರಮ ಎಂದು ಅವರು ಸ್ಪಷ್ಟಪಡಿಸಿದರು. ಸಮೀಕ್ಷೆಯಲ್ಲಿ ಸಂಪೂರ್ಣ ಮಾಹಿತಿ ನೀಡುವಂತೆ ನಾಡಿನ ಜನತೆಗೆ ಮನವಿ ಮಾಡಿದ ಅವರು ಮಾಹಿತಿ ಅಪೂರ್ಣವಾದಲ್ಲಿ ಅಂತಹ ಅಂಶಗಳ ಮರು ಪರಿಶೀಲನೆ, ಚರಿತ್ರೆ ಅರಿತು ವಿಚಾರಣೆ ಮಾಡುವ ಅಧಿಕಾರ ಆಯೋಗಕ್ಕಿದೆ ಎಂದು ಅವರು ವಿವರಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ಮಾಜಿ ಅಧ್ಯಕ್ಷ ಡಾ: ಸಿ.ಎಸ್.ದ್ವಾರಕನಾಥ್ ಅವರು ಮಾತನಾಡಿ ಜಾತಿ ಮೂಲದ ಬಡತನಕ್ಕೆ ಪರಿಹಾರ ಕಂಡುಕೊಳ್ಳಲು ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಸಹಕಾರಿ ಎಂದು ನುಡಿದರು. ಸಮೀಕ್ಷೆ ಮೂಲಕ ಸರ್ಕಾರದ ಸೌಲಭ್ಯಗಳಿಂದ, ಮೀಸಲಾತಿಯಿಂದ ವಂಚಿತರಾದ ಸಮುದಾಯಗಳಿಗೆ ಆದ ಅನ್ಯಾಯವನ್ನು ಸರಿಪಡಿಸಲು ಸಾಧ್ಯವಿದೆ. ಹಲವಾರು ಜಾತಿಗಳು ತಮ್ಮ ಅಸ್ಥಿತ್ವ ಕಂಡುಕೊಳ್ಳಲು ಸಹ ಈ ಸಮೀಕ್ಷೆ ನೆರವಾಗಲಿದೆ. 1931ರ ನಂತರ ಜಾತಿವಾರು ಗಣತಿ ನಡೆದಿಲ್ಲ. ನ್ಯಾಯಾಲಯಗಳಲ್ಲಿ ಮೀಸಲಾತಿ ವಿರೋಧಿ ತೀರ್ಪುಗಳು ಬರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಳಿ ನಿಖರ ಮಾಹಿತಿ ಇಲ್ಲದಿರುವುದೇ ಕಾರಣ ಎಂದು ಅವರು ತಿಳಿಸಿದರು. ಈ ಸಮೀಕ್ಷೆಯನ್ನು ಅತ್ಯಂತ ವೈಜ್ಞಾನಿಕವಾಗಿ ರೂಪಿಸಲಾಗಿದ್ದು, ಎಲ್ಲರೂ ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಬೆಂಬಲಿಸುವಂತೆ ಮನವಿ ಮಾಡಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಬೆಟ್ಟಸ್ವಾಮಿ ಹಾಗೂ ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಶ್ರೀ ನಾಗರಾಜ್ ಅವರು ಉಪಸ್ಥಿತರಿದ್ದರು. ಬೆಂಗಳೂರು ನಗರ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಶ್ರೀ ಪುಟ್ಟರಾಜು ಅವರು ಸ್ವಾಗತಿಸಿದರು. ಸಹಾಯಕ ನಿರ್ದೇಶಕರಾದ ಶ್ರೀಮತಿ ಎಂ.ಸಹನಾ ವಂದಿಸಿದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಡಾ: ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸಮೀಕ್ಷೆಯ ಪ್ರಚಾರಕ್ಕಾಗಿ ಸಿದ್ಧಪಡಿಸಲಾದ ಪ್ರಚಾರ ವಾಹನಕ್ಕೆ ಶ್ರೀ ಹೆಚ್.ಕಾಂತರಾಜ ಮತ್ತು ಶ್ರೀ ಡಾ:ಸಿ.ಎಸ್.ದ್ವಾರಕನಾಥ್ ಅವರು ಚಾಲನೆ ನೀಡಿದರು.
(ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ)

ದಾವಣಗೆರೆ : ದೇವನಗರಿ ಕಲಾವೈಭವ ಜಿಲ್ಲಾ ಉತ್ಸವದ ಸರ್ವಗೋಷ್ಠಿಗಳ ಉದ್ಘಾಟನೆ


ವಿಚಾರಗೋಷ್ಠಿಯಲ್ಲಿ ದಿನೇಶ್‌ ಅಮೀನ್‌ಮಟ್ಟು ಆತಂಕ

ಸಂಸ್ಕೃತಿ ಹೆಸರಲ್ಲಿ ಅಭಿಪ್ರಾಯ ಹೇರಿಕೆ


ದಾವಣಗೆರೆ: ಕಮ್ಯುನಿಸ್ಟ್‌ ಚಳವಳಿ, ಸಮಾಜವಾದಿ ಚಳವಳಿ ಹಾಗೂ ಕೈಗಾರೀಕರಣವನ್ನು ಜತೆಯಲ್ಲಿಟ್ಟು ನೋಡಲು ಸಾಧ್ಯವಿಲ್ಲ. ಆದರೆ, ದಾವಣಗೆರೆ ಮಾತ್ರ ಇವೆಲ್ಲವನ್ನೂ ಜತೆಯಲ್ಲಿಟ್ಟುಕೊಂಡೇ ಅಭಿವೃದ್ಧಿ ಹೊಂದಿದ ವಿಶಿಷ್ಟ ಜಿಲ್ಲೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ಮಟ್ಟು ಅಭಿಪ್ರಾಯಪಟ್ಟರು.
ನಗರದ ಹೈಸ್ಕೂಲ್‌ ಮೈದಾನದಲ್ಲಿ ಬುಧವಾರ ‘ದೇವನಗರಿ ಕಲಾವೈಭವ’ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಸರ್ವಗೋಷ್ಠಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಸಂಸ್ಕೃತಿ ಬಹು ಚರ್ಚಿತ ವಿಚಾರ. ಸಂಸ್ಕೃತಿಯನ್ನು ರಕ್ಷಿಸುವ ನೆಪದಲ್ಲಿ ಒಂದುವರ್ಗ ಬಲವಂತವಾಗಿ ಜನರ ಮೇಲೆ ಅವರ ಅಭಿಪ್ರಾಯಗಳನ್ನು ಹೇರುವ ಕೆಲಸ ಮಾಡುತ್ತಿದೆ. ಉಡುಗೆ–ತೊಡುಗೆ, ಆಹಾರ ಪದ್ಧತಿ, ಜೀವನ ಶೈಲಿ ಎಲ್ಲವೂ ನಮ್ಮ ಇಷ್ಟಕ್ಕೆ ಅನುಸಾರವಾಗಿ ಇರಬೇಕೇ ಹೊರತು, ಬೇರೆಯವರ ಹಸ್ತಕ್ಷೇಪ ಇರಬಾರದು. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
‘ಏಕ ಸಂಸ್ಕೃತಿ ಹೆಸರಲ್ಲಿ ಮತ್ತೊಂದು ಧರ್ಮವನ್ನು ಹೀಗಳೆಯುವ, ಅಸಮಾನತೆ ಸಾರುವ, ಅಸ್ಪ್ರುಶ್ಯತೆಯನ್ನು ಎತ್ತಿಹಿಡಿಯುವ, ಕಂದಾಚಾರ, ಮೌಢ್ಯಗಳನ್ನು ತುಂಬುವ  ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿವೆ. ನಮ್ಮದು ನೂರಾರು ಜಾತಿಗಳ, ಲಕ್ಷಾಂತರ ಆಚರಣೆಗಳ, ಬಹುಸಂಸ್ಕೃತಿ ಇರುವ ದೇಶ. ಅವಗಳನ್ನು ಎಂದಿಗೂ ನಾಶಮಾಡುವ ಕೆಲಸಕ್ಕೆ ಕೈಹಾಕಬಾರದು. ಸಂಸ್ಕೃತಿ ಅನುಕರಣೆ ವ್ಯಕ್ತಿಯ ವೈಯಕ್ತಿಕ ವಿಚಾರವಾಗಬೇಕು ಎಂದು ಅವರು ಪ್ರತಿಪಾದಿಸಿದರು.
ಆಧುನಿಕ ಸಂಸ್ಕೃತಿ ಎಂಬ ಪರಿಕಲ್ಪನೆ ಇಂದು ನಿಜವಾದ ಅರ್ಥ ಕಳೆದುಕೊಂಡಿದೆ. ಯುವಜನತೆ, ಜೀನ್ಸ್‌ ಹಾಕುವುದು, ಮಿನಿ, ಮಿಡಿ ಧರಿಸುವುದು, ಬಾರ್, ಪಬ್‌ಗಳಿಗೆ ಹೋಗುವುದು, ನಟ, ನಟಿಯರನ್ನು ಅನುಕರಿಸುವುದೇ ಆಧುನಿಕ ಸಂಸ್ಕೃತಿ ಎಂದು ನಂಬಿದ್ದಾರೆ. ವ್ಯಕ್ತಿಯ ಆಲೋಚನೆಗಳಲ್ಲಿ ಆಧುನಿಕತೆ ಇದ್ದಾಗ ಮಾತ್ರ ಅದು ಆಧುನಿಕ ಸಂಸ್ಕೃತಿಯಾಗುತ್ತದೆ. ನಮ್ಮ ಉಡುಗೆ ತೊಡುಗೆ, ಆಹಾರ ಪದ್ಧತಿ ಬಗ್ಗೆ ನಮಗೆ ಕೀಳರಿಮೆ ಇರಬಾರದು ಎಂದು ಅಮೀನ್‌ಮಟ್ಟು ಕಿವಿಮಾತು ಹೇಳಿದರು.
ಬಂಡಾಯ ಸಾಹಿತಿ ಆರ್‌.ಜಿ.ಹಳ್ಳಿ ನಾಗರಾಜ್‌ ಮಾತನಾಡಿ, ಪಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ಬದುಕಿನ ಅನಿವಾರ್ಯ ಭಾಗವಾಗಿವೆ. ಪುಟ್ಟ ಮೊಬೈಲ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ. ವಿಶ್ವವೇ ಒಂದು ಹಳ್ಳಿ ಎಂಬ ಪರಿಕಲ್ಪನೆಯಲ್ಲಿ ನಾವು ಬದುಕುತ್ತಿದ್ದೇವೆ. ಜಾಗತೀಕರಣ ಫಲವಾಗಿ ನಗರ ಹಾಗೂ ಹಳ್ಳಿಗಳ ಮಧ್ಯೆ ವ್ಯತ್ಯಾಸ ಇಲ್ಲವಾಗಿದೆ ಎಂದರು.
ಒಂದು ಜಿಲ್ಲೆಯ ಹಿರಿಮೆ ವೈಭವದ, ಶ್ರೀಮಂತ ಬದುಕಿನ ಮೇಲೆ ಅವಲಂಬಿತವಾಗಿರುವುದಿಲ್ಲ. ಕಲೆ, ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಟ್ಟಿನಲ್ಲಿ ದಾವಣಗೆರೆ ಶ್ರೀಮಂತ ಕಲೆಗಳ ತವರಾಗಿದ್ದು, ಅದನ್ನು ಪೋಷಿಸಿ ಬೆಳೆಸಿಕೊಂಡುಹೋಗುವ ಕೆಲಸ ಮಾಡಬೇಕು ಎಂದರು.
‘ಜಿಲ್ಲೆಯ ಅಭಿವೃದ್ಧಿ ಮುನ್ನೋಟ’ ಎಂಬ ವಿಷಯದ ಬಗ್ಗೆ ಮಾತನಾಡಿದ ದಾವಣಗೆರೆ ವಿವಿ ಪ್ರಾಧ್ಯಾಪಕ ಡಾ.ಕೆ.ಬಿ.ರಂಗಪ್ಪ, ದಾವಣಗೆರೆ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಶೇ 65ರಷ್ಟು ಮಂದಿ ಕೃಷಿ ಅವಲಂಬಿಸಿದ್ದಾರೆ. ಭತ್ತ ಹಾಗೂ ಮೆಕ್ಕೆಜೋಳ ಇಲ್ಲಿನ ಪ್ರಮುಖ ಬೆಳೆಯಾಗಿದ್ದು ರಾಷ್ಟ್ರದ ಆಹಾರ ಭದ್ರತೆಗೆ ಜಿಲ್ಲೆಯ ಕೊಡುಗೆ ದೊಡ್ಡದು ಎಂದರು.
ಜಾಗತೀಕರಣದ ಪ್ರಭಾವದಿಂದ ಬೌದ್ಧಿಕ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಿದ್ದು, ಜಿಲ್ಲೆಯಲ್ಲಿ 4 ಎಂಜಿನಿಯರಿಂಗ್‌, 2 ಮೆಡಿಕಲ್‌, 2 ಡೆಂಟಲ್‌, 4 ಪಾಲಿಟೆಕ್ನಿಕ್‌ ಕಾಲೇಜು, 15 ವ್ಯಾಪಾರ ನಿರ್ವಹಣಾ ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸುವ ಮೂಲಕ ಜಿಲ್ಲೆಗೆ ಖ್ಯಾತಿ ತಂದಿದ್ದಾರೆ ಎಂದರು.
‘ಜಿಲ್ಲೆಯ ಸಾಹಿತ್ಯ–ಸಮಾಜ–ಸಾಂಸ್ಕೃತಿಕ’ ಒಳನೋಟ ಕುರಿತು ದಾವಣಗೆರೆ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ.ಎಂ.ಮಂಜಪ್ಪ ಮಾತನಾಡಿ, ಜನಪದ ಪ್ರೀತಿಯನ್ನು ಅಪ್ಪಿಕೊಳ್ಳುವಂತಹ ಕೆಲಸ  ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉತ್ಸವಗಳು ಗ್ರಾಮೀಣ ಭಾಗಗಳಲ್ಲೂ ನಡೆಯಲಿ, ಜಗಳೂರು, ಹರಪನಹಳ್ಳಿಯಲ್ಲಿ  ಜನಪದ ಸಾಹಿತ್ಯ ಶ್ರೀಮಂತವಾಗಿದೆ. ಪ್ರಸ್ತುತ ಇಲ್ಲಿನ ದೊಡ್ಡಾಟ ಕಲೆ ನಶಿಸುತ್ತಿದ್ದು, ಯಕ್ಷಗಾನದಂತಹ ಕಲೆಯನ್ನು ವೈಭವೀಕರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ದೊಡ್ಡಾಟ ಕಲೆಗೆ ಮರುಜೀವ ಕೊಡುವಕೆಲಸವಾಗಬೇಕು ಎಂದು ಪ್ರತಿಪಾದಿಸಿದರು. ರಾಮಚಂದ್ರಪ್ಪ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ ಕುಮಾರ್‌, ಕಸಾಪ ಗೌರವ ಕಾರ್ಯದರ್ಶಿ ಬಾಮಾ ಬಸವರಾಜಯ್ಯ, ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
(ಕೃಪೆ: ಪ್ರಜಾವಾಣಿ 09/04/2015)
-----------------------------------------------------------------------------------------------------------------------------

ದಾಖಲಾಗದ ಗಿರಿಣಿ ಕಾರ್ಮಿಕರ ನೋವು
.ಗಿರಿಜಾ ವೇದಿಕೆ, ದಾವಣಗೆರೆ 

ಸಂಸ್ಕೃತಿ ಎನ್ನುವುದು ಆಯ್ಕೆ ಆಗಬೇಕು. ಆದರೆ ಸಂಸ್ಕತಿಯನ್ನು ನಿಯಂತ್ರಿಸುವ ಒಂದು ಗುಂಪು ಹುಟ್ಟಿಕೊಂಡಿದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ಹೇಳಿದರು. 

ಜಿಲ್ಲಾಡಳಿತದಿಂದ ಆರಂಭವಾದ ದೇವನಗರಿ ಕಲಾ ವೈಭವ ದಾವಣಗೆರೆ ಜಿಲ್ಲಾ ಉತ್ಸವದ ಮೊದಲ ದಿನ ಬುಧವಾರ ಆಯೋಜಿಸಿದ್ದ 'ದಾವಣಗೆರೆ ಜಿಲ್ಲೆ ಸಮಕಾಲೀನ ಸಂದರ್ಭಗಳು' ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು. 

ಪ್ರಾಚೀನ ಮತ್ತು ಆಧುನಿಕ ಸಂಸ್ಕೃತಿ ನಡುವೆ ಸಂಘರ್ಷ ನಡೆದಿದೆ. ಸಂಸ್ಕೃತಿ ಯನ್ನು ಬಲವಂತವಾಗಿ ಹೇರಿದರೆ ಯಾರೂ ಇಷ್ಟ ಪಡುವುದಿಲ್ಲ. ನೈತಿಕ ಪೋಲಿಸ್‌ಗಿರಿ ಹೆಸರಲ್ಲಿ ಡಿಕ್ಟೇಟ್ ಮಾಡುವುದು 

ನಡೆದಿದೆ. ನಿಷೇಧ, ನಿರ್ಬಂಧದ ಮೂಲಕ ನಮ್ಮ ಸಂಸ್ಕೃತಿ ಕಿತ್ತುಕೊಳ್ಳುವ ಮತ್ತು ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಧಾರ್ಮಿಕ ಚಳವಳಿ ಜತೆಯಲ್ಲಿಯೇ ಪ್ರತಿಭಟನಾ ಚಳವಳಿಯೂ ನಡೆದಿದೆ. ಇದರಲ್ಲಿ ಬಸವ ಚಳವಳಿ ಕೂಡ ಒಂದು. ಸುಧಾರಕರು ಹೊಸ ಸಂಸ್ಕೃತಿ ಕಟ್ಟುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಏಕ ಸಂಸ್ಕೃತಿ ಯಾವಾಗಲೂ ಜನ ವಿರೋಧಿ ಎಂದರು. 

ಆಶಯ ನುಡಿಗಳನ್ನಾಡಿದ ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಶರವೇಗದಲ್ಲಿ ಓಡುತ್ತಿದೆ. ಈ ವೇಗ ಕೆಲ ಅನುಕೂಲಗಳನ್ನು ಕಲ್ಪಿಸಿದರೂ ಅಷ್ಟೇ ಅನಾಹುತಗಳನ್ನೂ ಸೃಷ್ಟಿಸಿದೆ. ಒಂದೆಡೆ ಸಮಾಜ ಆರೋಗ್ಯದಿಂದ ಅನಾರೋಗ್ಯದ ಕಡೆ ಸಾಗುತ್ತಿದೆ. ಇದಕ್ಕೆ ದಾವಣಗೆರೆ ಕೂಡ ಹೊರತಲ್ಲ. ಈ ಜಾಗತೀಕರಣದಿಂದ ತಲ್ಲಣಗಳು, ಸವಾಲುಗಳು ಸೃಷ್ಟಿಯಾಗಿವೆ. ಭಯೋತ್ಪಾದನೆ, ಕೋಮುವಾದ ಹೆಚ್ಚುತ್ತಿದೆ ಎಂದರು. 

ಜಿಲ್ಲೆಯ ಅಭಿವೃದ್ಧಿ ಮನ್ನೋಟ ಕುರಿತು ವಿಷಯ ಮಂಡಿಸಿದ ಪ್ರಾಧ್ಯಾಪಕ ಡಾ.ಕೆ.ಬಿ.ರಂಗಪ್ಪ, ನೈಸರ್ಗಿಕ ಸಂಪನ್ಮೂಲಗಳ ಜತೆ ರಸ್ತೆ, ಸಾರಿಗೆ ವ್ಯವಸ್ಥೆ ಹೊಂದಿರುವ ಜಿಲ್ಲೆ ಅಭಿವೃದ್ಧಿಯ ಸಾಮರ್ಥ್ಯ ಹೊಂದಿದೆ ಎಂದು ಪ್ರತಿಪಾದಿಸಿದರು. 

ಇಂದು ಕೃಷಿ ವೆಚ್ಚ ಹೆಚ್ಚಳದಿಂದಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದು ಸಾಲಕ್ಕೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇನ್ನೊಂದೆಡೆ ಕೃಷಿಯೇತರ ಬಳಕೆ ಹಿಗ್ಗುತ್ತಿದ್ದು ಭೂಮಿಯ ಸಟ್ಟಾ ವ್ಯಾಪಾರ ನಡೆಯುತ್ತಿದೆ. ಇದರಿಂದ ಆಹಾರ ಭದ್ರತೆಗೆ ಆತಂಕ ಬಂದೊದಗಿದೆ ಎಂದು ಹೇಳಿದರು. 

ಜಿಲ್ಲೆಯ ಸಾಂಸ್ಕೃತಿಕ ಒಳ ನೋಟಗಳು ಕುರಿತು ಪ್ರಾಧ್ಯಾಪಕ ಡಾ.ಎಂ.ಮಂಜಪ್ಪ, ಹೊಸದಾಗಿ ಅಸ್ತಿತ್ವಕ್ಕೆ ಬಂದ ಜಿಲ್ಲೆಯಲ್ಲಿ ಹರಪನಹಳ್ಳಿ, ಜಗಳೂರು ಸೇರಿದಂತೆ ಎಲ್ಲರನ್ನು ಒಳಗೊಂಡ ಸಾಂಸ್ಕೃತಿಕ ಸಂಬಂಧ ಬೆಸೆಯುವ ಕೆಲಸ ಆಗಬೇಕಿದೆ ಎಂದರು. 

ದಾವಣಗೆರೆ ದೊಡ್ಡಾಟ, ಸಣ್ಣಾಟ, ರಂಗ ಚುಟುವಟಿಕೆಗಳಿಗೆ ಕ್ರಿಯಾಶೀಲವಾಗಿದ್ದ, ಕಲೆ ಪೋಷಿಸಿದ ಊರು. ಇಂದು ದೊಡ್ಡಾಟ, ಸಣ್ಣಾಟ ಹೋಗಿ ಯಕ್ಷಗಾನ ವಿಜೃಂಭಿಸುತ್ತಿದೆ. ಈ ಬಗ್ಗೆ ಚಿಂತನೆ ನಡೆಯಬೇಕು. ಇಲ್ಲಿನ ಜವಳಿ ಗಿರಣಿಗಳಿಗೆ ಬೀಗ ಬಿದ್ದ ನಂತರ ಬೀದಿಗೆ ಬಿದ್ದ ಕಾರ್ಮಿಕರ ನೋವು, ಸಂಕಟಗಳನ್ನು ಜಿಲ್ಲೆಯ ಸಾಹಿತ್ಯ ದಾಖಲಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪ್ರಾದೇಶಿಕ ಅಸಮತೋಲನ ಇಂದಿಗೂ ಮುಂದುವರಿದಿದೆ. ಇಲ್ಲಿನ ಗಾಂಧಿನಗರದಲ್ಲಿ ಬದುಕಲು ಕೂಡ ಸಾಧ್ಯವಿಲ್ಲದ ಸ್ಥಿತಿಯಿದೆ. ಬೀದಿಗೆ ಬಿದ್ದ ಕಾರ್ಮಿಕರ ಬದುಕಿನ ಬಗ್ಗೆ ಸಮಾಜ ಮಾತನಾಡಲಿಲ್ಲ. ಈಗಲಾದರೂ ಈ ಜನರ ನೋವು, ಸಂಕಟವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. 

ಡಿಸಿ ಎಸ್.ಟಿ.ಅಂಜನ್‌ಕುಮಾರ್, ಸಿಇಒ ಎಸ್.ಬಿ.ಬೊಮ್ಮನಹಳ್ಳಿ, ಡಾ.ಎಚ್.ವಿಶ್ವನಾಥ್, ಬಾ.ಮ. ಬಸವರಾಜಯ್ಯ ಇತರರು ಇದ್ದರು. 

*** ಪ್ರಗತಿಪರರು ಮಾಡುವ ತಪ್ಪು ಪ್ರಗತಿಪರರು ತಪ್ಪು ಮಾಡುತ್ತಿದ್ದಾರೆ, ನಾಸ್ತಿಕ ಆಗಿರಬೇಕು, ಯಾವುದೇ ಧರ್ಮದ ಬಂಧನದಲ್ಲಿರಬಾರದು ಎಂದೆಲ್ಲಾ ಹೇಳುತ್ತಿದ್ದಾರೆ. ನಾವು ಈ ರೀತಿ ವರ್ತಿಸಿದರೆ ಅಪ್ಪ-ಅಮ್ಮನೇ ಮನೆಗೆ ಬಿಟ್ಟುಕೊಳ್ಳುವುದಿಲ್ಲ.
ಹಾಗಾಗಿ ಈ ರೀತಿ ಹೇಳುವುದರಿಂದ ಸುಧಾರಣೆ ಸಾಧ್ಯವಿಲ್ಲ. ಇವರು ಲೋಹಿಯಾ ಚಿಂತನೆ ಗಮನಿಸಬೇಕು.ಅವರು ಕಡೇ ದಿನಗಳಲ್ಲಿ ರಾಮಚರಿತ ಪಠಿಸುತ್ತಿದ್ದರು ಎಂದು ದಿನೇಶ್‌ಅಮಿನ್‌ಮಟ್ಟು ಹೇಳಿದರು. 

*** ತಾರತಮ್ಯ ಪ್ರತಿಧ್ವನಿ ಗೋಷ್ಠಿಯಲ್ಲಿ ಎಲ್ಲ ಅತಿಥಿಗಳು ದಾವಣಗೆರೆಯ ಹಿಂದಿನ ಕಾರ್ಮಿಕ ಚಳವಳಿಯ ವೈಭವ ನೆನಪಿಸಿಕೊಂಡಿದ್ದು ವಿಶೇಷ. ಸಂವಾದದಲ್ಲೂ ಹರಪನಹಳ್ಳಿ, ಜಗಳೂರು ತಾಲೂಕುಗಳ ಅಭಿವೃದ್ಧಿ ತಾರತಮ್ಯ ಈಗಲೂ ಮುಂದುವರಿದಿದೆ. ಮಾನಸಿಕವಾಗಿ ಒಂದಾಗುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂಬ ಹಕ್ಕೊತ್ತಾಯ ಮಂಡಿಸಿದರು.
(ಕೃಪೆ : ವಿಜಯ ಕರ್ನಾಟಕ 09/04/2015)