Monday, March 7, 2011

ಎಡರಂಗದಿಂದ ಕಲಿಯುವುದೂ ಸಾಕಷ್ಟಿದೆ

ಕಳೆದೆರಡು ವರ್ಷಗಳ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದರೆ ಪಶ್ಚಿಮ ಬಂಗಾಳದ ಮತದಾರರು ಆಗಲೇ ನಿರ್ಧಾರ ಮಾಡಿಮುಗಿಸಿದಂತೆಯೇ ಕಾಣುತ್ತಿದೆ. ಆದ್ದರಿಂದ ಮುಂದಿನ ತಿಂಗಳು ಆ ರಾಜ್ಯದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಡಪಕ್ಷಗಳಿಗೆ ಗೆಲ್ಲುವುದು ಎಷ್ಟು ಕಷ್ಟವೋ, ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಸೋಲುವುದು ಅಷ್ಟೇ ಕಷ್ಟ.
ಆದರೆ ರಾಜಕೀಯ ಪಕ್ಷಗಳು ಒಮ್ಮೊಮ್ಮೆ ಸುಲಭದ ಗೆಲುವನ್ನು ಕೈಬಿಟ್ಟು ಕಷ್ಟದ ಸೋಲಿನ ಹಿಂದೆ ಓಡುವುದುಂಟು. ಭಾವಾವೇಶಕ್ಕೆ ಒಳಗಾಗಿ ಅನೇಕ ಬಾರಿ ರಾಜಕೀಯ ಎಡವಟ್ಟುಗಳನ್ನು ಮಾಡಿಕೊಂಡಿರುವ ಮಮತಾಬ್ಯಾನರ್ಜಿಯವರಿಂದ ಇಂತಹದ್ದೊಂದು ಹರಾಕಿರಿ ನಡೆಯಲು ಸಾಧ್ಯವೇ ಇಲ್ಲ ಎಂದು ಧೈರ್ಯದಿಂದ ಹೇಳುವಂತಿಲ್ಲ. ಅಲ್ಲದೆ ರಾಜಕೀಯ ಪ್ರಜ್ಞಾವಂತಿಕೆಯಲ್ಲಿ ತಮಗೆ ತಾವೇ ಸಾಟಿಯಾಗಿರುವ ಬಂಗಾಳಿಗಳು ಅಚ್ಚರಿ ನೀಡುವ ಸಣ್ಣ ಸಾಧ್ಯತೆಯೂ ಇದೆ. ಇಂತಹ ಅನಿರೀಕ್ಷಿತ ಬೆಳವಣಿಗೆಗಳು ನಡೆಯದೆ ಹೋದರೆ ಮೂವತ್ತನಾಲ್ಕು ವರ್ಷಗಳಷ್ಟು ಸುದೀರ್ಘ ಕಾಲಾವಧಿಯಲ್ಲಿ ಎಡಪಕ್ಷಗಳು ಪಶ್ಚಿಮಬಂಗಾಳದಲ್ಲಿ ಕಟ್ಟಿ ನಿಲ್ಲಿಸಿರುವ ‘ಕೆಂಪುಕೋಟೆ’ ಇನ್ನೆರಡು ತಿಂಗಳಲ್ಲಿ ಕುಸಿದುಬೀಳಲಿದೆ.  ಕಾಳಿಘಾಟ್‌ನ ‘ಗುಡಿಸಲ ರಾಣಿ’ ಮಮತಾ ಬ್ಯಾನರ್ಜಿ ಕೊಲ್ಕೊತ್ತಾದ ರೈಟರ್ಸ್‌ ಕಟ್ಟಡ ಪ್ರವೇಶಿಸಲಿದ್ದಾರೆ.
ವ್ಯಕ್ತಿ ಇರಲಿ, ಸಂಸ್ಥೆ ಇರಲಿ, ಸೋಲು ಬಹಳ ಕ್ರೂರವಾದುದು. ಸೋತವರ ಮೇಲೆ ಯಾರೂ ಹೂವಿನ ಮಳೆ ಸುರಿಸುವುದಿಲ್ಲ, ಕಲ್ಲೆಸೆಯುವವರೇ ಹೆಚ್ಚು. ಆದರೆ ಪಾಠ ಕಲಿಯಬೇಕಾಗಿರುವುದು ಸೋಲಿನಿಂದಲೇ ಹೊರತು ಗೆಲುವಿನಿಂದ ಅಲ್ಲ. ಸುಮಾರು ಮೂರುವರೆ ದಶಕಗಳಷ್ಟು ಕಾಲ ರಾಜ್ಯಭಾರ ಮಾಡಿದ ಪಶ್ಚಿಮಬಂಗಾಳದ ಎಡಪಕ್ಷಗಳು, ರಾಜಕೀಯವನ್ನು ನೋಡುವ, ಮಾಡುವ ಮತ್ತು ಅನುಭವಿಸುವ ವಿಧಾನವನ್ನೇ ಬದಲಾಯಿಸಿದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯ ಇಲ್ಲ. ರಾಜಕೀಯಕ್ಕೆ ಸಂಬಂಧಿಸಿದ  ಹಲವಾರು ಸಾಮಾನ್ಯ ವ್ಯಾಖ್ಯಾನ ಮತ್ತು ತೀರ್ಮಾನಗಳು ಕೂಡಾ ಸುಳ್ಳೆಂದು ಅಲ್ಲಿನ ಎಡರಂಗ ಮತ್ತೆಮತ್ತೆ ಸಾಬೀತುಪಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ಬೇರೆ ಯಾವ ರಾಜ್ಯಗಳ ನೆಲದಲ್ಲಿ ನಿಂತು ನೋಡಿದರೂ ಪಶ್ಚಿಮ ಬಂಗಾಳ ಭಾರತದಲ್ಲಿ ಇಲ್ಲವೇ ಇಲ್ಲವೇನೋ, ಅದು ಪ್ರತ್ಯೇಕವಾದ ದೇಶವೇನೋ ಎಂದು ಅನಿಸುವಷ್ಟು ಆ ರಾಜ್ಯದ ರಾಜಕೀಯ ಭಿನ್ನವಾಗಿದೆ.
ಕಳೆದ ಅರ್ವತ್ತು ವರ್ಷಗಳಲ್ಲಿ ದೇಶದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಭ್ರಷ್ಟಾಚಾರ, ಕೋಮುವಾದ ಮತ್ತು ಆಡಳಿತ ವಿರೋಧಿ ಅಲೆಗಳಂತಹ ಮೂರು ಸಂಗತಿಗಳು ಪ್ರಮುಖವಾಗಿ ಚರ್ಚೆಗೊಳಪಟ್ಟಿವೆ. ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಿದ್ದು ಕೂಡಾ ಈ ಸಂಗತಿಗಳು. ಆದರೆ ಎಡರಂಗ ಅಧಿಕಾರಕ್ಕೆ ಬಂದ ನಂತರ ಆ ರಾಜ್ಯದಲ್ಲಿ ಇಲ್ಲಿಯ ವರೆಗೆ ನಡೆದ ಆರು ವಿಧಾನಸಭಾ ಚುನಾವಣೆಗಳಲ್ಲಿ ಎಂದೂ ಈ ಮೂರು ಸಂಗತಿಗಳು ಮುಖ್ಯಚರ್ಚೆಯ ಭಾಗ ಆಗಿರಲೇ ಇಲ್ಲ. ಈ ಬಾರಿಯೂ ಆಡಳಿತ ವಿರೋಧಿ ಅಲೆಯ ಸಾಧ್ಯತೆಯ ಹೊರತಾಗಿ ಉಳಿದೆರಡು ಸಂಗತಿಗಳು ಚರ್ಚೆಯಲ್ಲಿ ಇಲ್ಲ. ಪ್ರಾಮಾಣಿಕತೆ ಮತ್ತು ಜಾತ್ಯತೀತತೆಯ ವಿಷಯದಲ್ಲಿ ಯಾರೂ ಅನುಮಾನ ಪಡದಂತಹ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ಮಮತಾ ಬ್ಯಾನರ್ಜಿಯವರು ಕೂಡಾ ಎಡರಂಗ ಸರ್ಕಾರ ಭ್ರಷ್ಟಗೊಂಡಿದೆ ಇಲ್ಲವೇ ಕೋಮುವಾದದ ರಾಜಕೀಯ ಮಾಡುತ್ತಿದೆ ಎಂದು ಆರೋಪ ಮಾಡುತ್ತಿಲ್ಲ ಎನ್ನುವುದು ಗಮನಾರ್ಹ.
ಭ್ರಷ್ಟರಾಗದೆ ರಾಜಕೀಯ ಮಾಡಲು ಸಾಧ್ಯವೇ ಇಲ್ಲ ಎನ್ನುವ ಸಾಮಾನ್ಯ ಅಭಿಪ್ರಾಯ ಉತ್ತರದಿಂದ ದಕ್ಷಿಣದ ವರೆಗೆ ಎಲ್ಲ ರಾಜ್ಯಗಳಲ್ಲೂ ಹಬ್ಬಿದೆ. ಇದೇ ಅಭಿಪ್ರಾಯ ಪೂರ್ವದಿಂದ ಪಶ್ಚಿಮದ ವರೆಗಿನ ರಾಜ್ಯಗಳಲ್ಲಿಯೂ ಇದೆ ಎಂದು ಹೇಳುವ ಹಾಗೆ ಇಲ್ಲ, ಯಾಕೆಂದರೆ ಪೂರ್ವದಲ್ಲಿ ಪಶ್ಚಿಮಬಂಗಾಳ ಇದೆ. ಆ ರಾಜ್ಯದ ಎಡರಂಗದ ರಾಜಕೀಯ ದೇಶದಲ್ಲಿನ ಈ ಸಾಮಾನ್ಯ ಅಭಿಪ್ರಾಯ ತಪ್ಪೆಂದು ಕಳೆದ ಮೂವತ್ತನಾಲ್ಕು ವರ್ಷಗಳಿಂದ ಸಾಬೀತುಮಾಡಿಕೊಂಡು ಬಂದಿದೆ. ಅಧಿಕಾರಕ್ಕೆ ಬರಬೇಕಾಗಿಲ್ಲ, ಶಾಸಕರಾದ ತಿಂಗಳ ಅವಧಿಯಲ್ಲಿಯೇ ಭ್ರಷ್ಟಾಚಾರದ ಆರೋಪಗಳು ಕೇಳಲಾರಂಭಿಸುವ ಈಗಿನ ದಿನಮಾನದಲ್ಲಿ ಇಷ್ಟೊಂದು ಕಾಲ ಅಧಿಕಾರದಲ್ಲಿದ್ದೂ ತನ್ನ ಶಾಸಕರು, ಸಂಸದರ ಮೇಲೆ ಭ್ರಷ್ಟಾಚಾರದ ಕಳಂಕ ಅಂಟದಂತೆ ನೋಡಿಕೊಂಡಿರುವುದು ಯಾವುದೇ ರಾಜಕೀಯ ಪಕ್ಷದ ಪಾಲಿಗೆ ಸುಲಭದ ಕೆಲಸ ಅಲ್ಲ.
ಹಾಗಿದ್ದರೆ ಪಶ್ಚಿಮಬಂಗಾಳದಲ್ಲಿ ಭ್ರಷ್ಟಾಚಾರ ಇಲ್ಲವೇ? ವಿಚಿತ್ರವೆಂದರೆ ಸಾಮಾನ್ಯವಾಗಿ ಪಕ್ಷವೊಂದು ಅಧಿಕಾರಕ್ಕೆ ಬಂದರೆ ಮೊದಲು ಭ್ರಷ್ಟರಾಗುವುದು ಆ ಪಕ್ಷದ ಜನಪ್ರತಿನಿಧಿಗಳು. ತಹಶೀಲ್ದಾರ್ ಕಚೇರಿಯಿಂದ ವಿಧಾನಸೌಧದ ವರೆಗೆ ಎಲ್ಲೆಲ್ಲೂ ಅವರೇ ಅಧಿಕಾರ ಚಲಾಯಿಸುವುದರಿಂದ ಹೋದಲ್ಲೆಲ್ಲ ಭ್ರಷ್ಟತೆಯ ಅವಕಾಶದ ಕಿಂಡಿಗಳನ್ನು ಅವರು ಕೊರೆಯುತ್ತಾ ಇರುತ್ತಾರೆ. ಇದೇ ಕಳ್ಳ ಕಿಂಡಿಯಲ್ಲಿ ಕೈಹಾಕಿ ಪಕ್ಷದಲ್ಲಿ ಅವರ ಹಿಂಬಾಲಕರಾಗಿರುವವರು ಸಿಕ್ಕಿದಷ್ಟನ್ನು ಬಾಚಿಕೊಳ್ಳುತ್ತಾರೆ. ಪಶ್ಚಿಮಬಂಗಾಳದ ರಾಜಕೀಯ ಇದಕ್ಕಿಂತ ಸಂಪೂರ್ಣ ಭಿನ್ನ. ಅಲ್ಲಿ ಭ್ರಷ್ಟಾಚಾರದ ಆರೋಪಗಳು ಇರುವುದು ಶಾಸಕರು ಇಲ್ಲವೇ ಸಂಸತ್ ಸದಸ್ಯರ  ಮೇಲಲ್ಲ, ಅದು ಪಕ್ಷದ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳ ಮೇಲೆ. ನೇಮಕಾತಿ, ವರ್ಗಾವಣೆ,  ಫಲಾನುಭವಿಗಳ ಆಯ್ಕೆ ಮೊದಲಾದ ಎಲ್ಲ ವಿಷಯಗಳಲ್ಲಿ ನಿರ್ಧಾರ ಈ ಪದಾಧಿಕಾರಿಗಳದ್ದೇ ಆಗಿರುವುದರಿಂದ ಒಂದಷ್ಟು ಭ್ರಷ್ಟತೆಯ ಕೆಸರು ಅವರ ಕೈಗೆ ಅಂಟಿಕೊಳ್ಳುತ್ತದೆ. ಹೀಗಿದ್ದರೂ ಅಲ್ಲಿ ದೊಡ್ಡ ಹಗರಣಗಳು ಕೇಳಿ ಬಂದೇ ಇಲ್ಲ.
ಭ್ರಷ್ಟಾಚಾರವನ್ನು ಹೊರತುಪಡಿಸಿದರೆ ಕೋಮುವಾದ ದೇಶದ ರಾಜಕೀಯದಲ್ಲಿ ಬಹುಚರ್ಚಿತ ವಿಷಯ. ತೊಂಭತ್ತರ ದಶಕದ ನಂತರದ ದಿನಗಳಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ನಡೆದ ಅನೇಕ ರಾಜಕೀಯ ಬದಲಾವಣೆಗಳಲ್ಲಿ ಕೋಮುವಾದ ನಿರ್ಣಾಯಕ ಪಾತ್ರ ವಹಿಸಿದೆ. ಸ್ವಾತಂತ್ರ್ಯ ಸಿಕ್ಕಿದ ಮೊದಲ ದಿನಗಳನ್ನು ಹೊರತುಪಡಿಸಿದರೆ ಪಶ್ಚಿಮಬಂಗಾಳದಲ್ಲಿ ನಡೆದೇ ಇಲ್ಲವೆನ್ನುವಷ್ಟು ಕೋಮುಗಲಭೆಗಳ ಸಂಖ್ಯೆ ಕಡಿಮೆ. ಕಾಶ್ಮೆರ (67%) ಮತ್ತು ಅಸ್ಸಾಂ (31%)  ನಂತರ ಅತ್ಯಂತ ಹೆಚ್ಚು ಮುಸ್ಲಿಮ್ ಜನಸಂಖ್ಯೆ ಹೊಂದಿರುವ ರಾಜ್ಯ ಪಶ್ಚಿಮ ಬಂಗಾಳ (25.3%). ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 15ರಷ್ಟು ಮುಸ್ಲಿಮರು ಆ ರಾಜ್ಯದಲ್ಲಿದ್ದಾರೆ. ಶೇ 50ಕ್ಕಿಂತ ಹೆಚ್ಚು ಮುಸ್ಲಿಮರಿರುವ ಕನಿಷ್ಠ ಮೂರು ಜಿಲ್ಲೆಗಳು ಅಲ್ಲಿವೆ. ಹೀಗಿದ್ದರೂ ಬಾಬ್ರಿಮಸೀದಿ ಧ್ವಂಸದ ನಂತರದ ದಿನಗಳಲ್ಲಿಯೂ ಪಶ್ಚಿಮಬಂಗಾಳ ಶಾಂತವಾಗಿತ್ತು.
ಇವೆಲ್ಲದರ ಹೊರತಾಗಿಯೂ ದಶಕಗಳ ಕಾಲ ಎಡಪಕ್ಷಗಳ ಕಟ್ಟಾ ಬೆಂಬಲಿಗರಾಗಿದ್ದ ಮುಸ್ಲಿಮರು ಇತ್ತೀಚೆಗೆ ಯಾಕೆ ಮಮತಾ ಬ್ಯಾನರ್ಜಿ ಅವರ ಪಕ್ಷದ ಕಡೆ ಹೋಗುತ್ತಿದ್ದಾರೆ? ಇದಕ್ಕೆ ತಕ್ಷಣದ ಉತ್ತರ ನಂದಿಗ್ರಾಮದ ವಿವಾದದಲ್ಲಿದೆ. ವಿಶೇಷ ಆರ್ಥಿಕ ವಲಯಕ್ಕಾಗಿ ಸರ್ಕಾರ ಭೂಸ್ವಾಧೀನಕ್ಕೆ ಮುಂದಾಗಿದ್ದ ನಂದಿಗ್ರಾಮದಲ್ಲಿ ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವುದರಿಂದ ಎಡಪಕ್ಷಗಳ ಬಗ್ಗೆ ಅವರ ಆಕ್ರೋಶ ಸಹಜವಾದುದು. ಆದರೆ ಈ ರೀತಿ ಪಕ್ಷನಿಷ್ಠೆಯನ್ನು ಬದಲಾಯಿಸಿಕೊಂಡವರು ಕೂಡಾ ಎಡಪಕ್ಷಗಳನ್ನು ಕೋಮುವಾದಿಗಳೆಂದು ಹೇಳುತ್ತಿಲ್ಲ. ‘ಭದ್ರತೆ ನೀಡಿದ್ದು ನಿಜ, ಆದರೆ ಅವಕಾಶ ನೀಡಲಿಲ್ಲ’ ಎನ್ನುವುದೇ ಎಡಪಕ್ಷಗಳ ಬಗ್ಗೆ ಅಲ್ಲಿರುವ ಮುಸ್ಲಿಮರಲ್ಲಿರುವ ಸಾಮಾನ್ಯ ಅತೃಪ್ತಿ.
ಎಡಪಕ್ಷಗಳು ಮುಸ್ಲಿಮ್ ಬೆಂಬಲ ಕಳೆದುಕೊಳ್ಳಲು ಇದೇ ಪ್ರಮುಖ ಕಾರಣ. ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರು ಕಾಲುಭಾಗದಷ್ಟಿದ್ದರೂ ಸರ್ಕಾರಿ ನೌಕರಿಯಲ್ಲಿ ಅವರ ಪಾಲು ಕೇವಲ ಶೇಕಡಾ ಎರಡು ಮಾತ್ರ. ಶೈಕ್ಷಣಿಕವಾಗಿಯೂ ಅಲ್ಲಿನ ಮುಸ್ಲಿಮರು  ಹಿಂದುಳಿದಿದ್ದಾರೆ. ಎಡಪಕ್ಷಗಳು ಈಗಲೂ ನೆಲೆ ಉಳಿಸಿಕೊಂಡಿರುವುದು ಮುಸ್ಲಿಮ್ ಬಾಹುಳ್ಯ ಇರುವ ಪಶ್ಚಿಮಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ. ಆದರೆ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಉಳಿದೆಲ್ಲ ರಾಜ್ಯಗಳಂತೆ ಈ ಎರಡೂ ರಾಜ್ಯಗಳಲ್ಲಿ ಮುಸ್ಲಿಮರು ಹಿಂದೆ ಇದ್ದಾರೆ. ಸಿಪಿಎಂನ ನೀತಿ ನಿರೂಪಣೆಯ ಉನ್ನತಾಧಿಕಾರದ ಸಮಿತಿಯಾದ ಪಾಲಿಟ್‌ಬ್ಯೂರೋದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ಇಲ್ಲ.
ಈ ರೀತಿ ಭ್ರಮನಿರಸನಕ್ಕೊಳಗಾದ ಮುಸ್ಲಿಮರಿಗೆ ಸರಿಯಾದ ಸಮಯಕ್ಕೆ ಮಮತಾ ಬ್ಯಾನರ್ಜಿ ಎಂಬ ನಾಯಕಿ ಕಾಣಿಸಿಕೊಂಡಿದ್ದಾರೆ. ಸುಮಾರು 27 ವರ್ಷಗಳ ರಾಜಕೀಯ ಜೀವನದಲ್ಲಿ ಮಮತಾ ಬ್ಯಾನರ್ಜಿ ಎಂದೂ ಕೋಮುವಾದಿ ಎಂಬ ಆರೋಪಕ್ಕೆ ಒಳಗಾಗಿಲ್ಲ.  ಕಾಂಗ್ರೆಸ್ ಬಿಟ್ಟ ನಂತರ ಒಂದಷ್ಟು ದಿನ ಬಿಜೆಪಿ ಜತೆ ಸೇರಿಕೊಂಡರೂ ರಾಜಕೀಯ ಲಾಭಕ್ಕಾಗಿ ಹಿಂದೂ-ಮುಸ್ಲಿಮರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರಲಿಲ್ಲ, ಮಿತ್ರಪಕ್ಷಕ್ಕೂ ಅದಕ್ಕೆ ಅವಕಾಶ ನೀಡಿರಲಿಲ್ಲ. ತಸ್ಲಿಮಾ ನಸ್ರೀನ್‌ಗೆ ಆಶ್ರಯ ನೀಡಿದ್ದ ಕಾರಣಕ್ಕೆ ಒಂದಷ್ಟು ದಿನ ಕೋಮುಗಲಭೆ ನಡೆದರೂ ಅದನ್ನು ರಾಜಕೀಯವಾಗಿ ದುರ್ಬಳಕೆ ಮಾಡಲು ಅವರು ಹೋಗಲಿಲ್ಲ. ಇವೆಲ್ಲದರ ಜತೆಗೆ ನಂದಿಗ್ರಾಮವನ್ನು ಉಳಿಸಿಕೊಟ್ಟದ್ದೇ ಮಮತಾ  ಎಂಬ ಕೃತಜ್ಞತೆ ಕೇವಲ ಆ ಊರಲ್ಲಿ ಮಾತ್ರ ಅಲ್ಲ, ಇಡೀ ರಾಜ್ಯದ ಮುಸ್ಲಿಮರಲ್ಲಿದೆ.
ಹನ್ನೊಂದು ವರ್ಷಗಳ ಹಿಂದೆ ಜ್ಯೋತಿಬಸು ಅವರು ಅಧಿಕಾರ ತ್ಯಾಗಮಾಡಿದ್ದ ಕಾಲದಲ್ಲಿಯೇ ಆಡಳಿತ ವಿರೋಧಿ ಅಲೆ ಸಣ್ಣಗೆ ಎದ್ದಿತ್ತು. ಎಡರಂಗಕ್ಕೆ ಭದ್ರಬುನಾದಿ ಹಾಕಿಕೊಟ್ಟ ಜ್ಯೋತಿಬಸು ಅವರ ಕ್ರಾಂತಿಕಾರಿ ಕಾರ್ಯಕ್ರಮವಾದ ಉಳುವವನಿಗೆ ಭೂಮಿಯ ಒಡೆತನ ನೀಡುವ ‘ಬರ್ಗಾ ಕಾರ್ಯಚರಣೆ’ಯ ನೆನಪು ಆಗಲೇ ಜನಮನದಲ್ಲಿ ನಿಧಾನವಾಗಿ ಮರೆಗೆ ಸರಿದು ಅಲ್ಲಿ ಹೊಸ ಸಮಸ್ಯೆಗಳು ಹುಟ್ಟಿಕೊಂಡಿದ್ದವು. ‘ಬರ್ಗಾ ಕಾರ್ಯಾಚರಣೆ’ಯ ನಂತರ ಗಣನೀಯವಾಗಿ ಹೆಚ್ಚಿದ್ದ ಕೃಷಿ ಇಳುವರಿ ಇತ್ತಿಚಿನ ವರ್ಷಗಳಲ್ಲಿ ಇಳಿಮುಖವಾಗತೊಡಗಿತ್ತು. ಇದರಿಂದಾಗಿ ದುಡಿಯುವ ಕೈಗಳಿಗಿಂತ ಉಣ್ಣುವ ಕೈಗಳು ಹೆಚ್ಚಾಗತೊಡಗಿದ್ದವು. ಕೈಗಾರಿಕೆಗಳೆಲ್ಲ ರೋಗಗ್ರಸ್ತವಾದ ನಂತರ ಅಲ್ಲಿ ಉದ್ಯೋಗಾವಕಾಶವೇ ಇಲ್ಲದಂತಾಗಿದೆ.
ಈ ವಾಸ್ತವ ಜ್ಯೋತಿಬಸು ಅವರಿಗೆ ಅರಿವಾಗಿಯೇ ಅಧಿಕಾರದ ಕೊನೆಯ ದಿನಗಳಲ್ಲಿ ಅವರು ಸುಧಾರಣೆಯ ಹಾದಿ ಹಿಡಿದದ್ದು. ಆದರೆ ಅದನ್ನೇ ಉತ್ತರಾಧಿಕಾರಿಯಾದ ಬುದ್ದದೇವ ಭಟ್ಟಾಚಾರ್ಯ ಅವರು ಬಿರುಸಿನಿಂದ ಪ್ರಾರಂಭಿಸಿದಾಗ ಜನ ತಿರುಗಿಬೀಳತೊಡಗಿದ್ದರು. ‘ರೈತರು  ಮಿತ್ರರು, ಉದ್ಯಮಿಗಳು ಶತ್ರು’ ಎಂದು ಪಾಠ ಹೇಳುತ್ತಾ ಬಂದ ಪಕ್ಷವೇ ಶತ್ರುಗಳ ಜತೆ ಸೇರಿಕೊಂಡಿದ್ದನ್ನು ಜನ ಸಹಿಸದಾದರು.  ಕಳೆದ 3 ದಶಕಗಳಲ್ಲಿ ಪಶ್ಚಿಮ ಬಂಗಾಳದ ಎಡಪಕ್ಷಗಳಿಗೆ ನಿಷ್ಠರಾಗಿದ್ದ ಮತದಾರರ ಒಂದು ತಲೆಮಾರು ಬದಲಾಗಿರುವುದೂ ಇದಕ್ಕೆ ಕಾರಣ.
 ಈ ಬದಲಾವಣೆ ಪಕ್ಷದ ಪದಾಧಿಕಾರಿಗಳ ಮಟ್ಟದಲ್ಲಿಯೂ ಆಗಿದೆ. ಈಗಿನ ಪದಾಧಿಕಾರಿಗಳಲ್ಲಿ ಹೆಚ್ಚಿನವರು ವಿರೋಧಪಕ್ಷವಾಗಿದ್ದ ದಿನಗಳಲ್ಲಿ ಜತೆಯಲ್ಲಿದ್ದವರಲ್ಲ. ಇವರೆಲ್ಲ ಪಕ್ಷ ಅಧಿಕಾರಕ್ಕೆ ಬಂದ ನಂತರ ಸೇರಿಕೊಂಡವರು. ಹೋರಾಟದ ಅನುಭವವೇ ಇಲ್ಲದ ಇವರಿಗೆ ಅಧಿಕಾರ ಇಲ್ಲದ ಬದುಕಿಗೆ ಹೊಂದಿಕೊಳ್ಳುವುದು ಕಷ್ಟದ ಕೆಲಸ. ಆದ್ದರಿಂದಲೆ ದಶಕಗಳ ಕಾಲ ಮರುಪ್ರಶ್ನಿಸದೆ ಬೆಂಬಲಿಸುತ್ತಾ ಬಂದ ಮತದಾರನ ನಿಷ್ಠೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಈ ಹೊಸತಲೆಮಾರು ಅಭದ್ರತೆಯಿಂದ ನರಳಾಡುತ್ತದೆ.
ಕೈ ಬಿಟ್ಟು ಹೋಗುತ್ತಿರುವ ಬೆಂಬಲದ ನೆಲೆಯನ್ನು ಉಳಿಸಿಕೊಳ್ಳಲು ಈ ಹತಾಶ ನಾಯಕರು ಹಿಡಿದದ್ದು ಪ್ರಜಾಸತ್ತಾತ್ಮಕ ಹಾದಿಯನ್ನಲ್ಲ, ಸರ್ವಾಧಿಕಾರಿ ಬಳಸುವ ಹಿಂಸಾತ್ಮಕ ಹಾದಿ. ಇದರಿಂದಾಗಿ ಆಕ್ರೋಶಗೊಂಡ ಜನ ತಿರುಗಿಬಿದ್ದಿದ್ದಾರೆ. ಈ ತಪ್ಪು ಕಾರ್ಯತಂತ್ರವೇ ಮಮತಾ ಬ್ಯಾನರ್ಜಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿರುವುದು. ಆದರೆ ಸಂಘಟನೆಯ ಜಾಲ, ಕಾರ್ಯಕ್ರಮ, ಎರಡನೇ ಸಾಲಿನ ನಾಯಕತ್ವ, ಇವೆಲ್ಲಕ್ಕಿಂತಲೂ ಹೆಚ್ಚಾಗಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಪಕ್ಷದ ಏಕೈಕ ನಾಯಕಿಯಾಗಿರುವ ಮಮತಾ ಬ್ಯಾನರ್ಜಿ ಪ್ರಯಾಸಪಟ್ಟು ಪಶ್ಚಿಮ ಬಂಗಾಳವನ್ನು ಗೆದ್ದುಕೊಂಡರೂ ಎಷ್ಟು ಕಾಲ ಉಳಿಸಿಕೊಳ್ಳಬಲ್ಲರು ಎನ್ನುವುದೇ ಈಗ ಉಳಿದಿರುವ ಕುತೂಹಲ.