Monday, August 6, 2012

ರಾಜಕೀಯದ ಬೋನಿಗೆ ಬಿದ್ದ `ಚಳವಳಿ ಹುಲಿ' August 06, 2012

ನಮ್ಮ ನಡುವಿನ ಭ್ರಷ್ಟರಾಜಕಾರಣಿಗಳಿಗೆ ಹೋಲಿಸಿದರೆ ಅಣ್ಣಾ ತಂಡದ ಸದಸ್ಯರು ಪ್ರಾಮಾಣಿಕರು ಮತ್ತು ಯೋಗ್ಯರು. ಅವರ ಮೇಲೆ ಕೆಲವು ಆರೋಪಗಳು ಇವೆ, ನಿಜ. ಇವೆಲ್ಲವೂ ಈ ದೇಶದ ಬಹುಸಂಖ್ಯಾತ ಪ್ರಜೆಗಳು ಒಂದಲ್ಲ ಒಂದು ಸಂದರ್ಭದಲ್ಲಿ ಬಲಿಯಾಗುವ ಸಾಮಾನ್ಯ ದೌರ್ಬಲ್ಯಗಳು. 

ಇವೆಲ್ಲದರ ಹೊರತಾಗಿಯೂ ಅಣ್ಣಾ ಹಜಾರೆ ರಾಜಕೀಯ ಪಕ್ಷ ಕಟ್ಟಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತಕ್ಕೆ ಬೇಕಾಗಿರುವ 272  ಪ್ರಾಮಾಣಿಕ ಸದಸ್ಯರನ್ನು ಗೆಲ್ಲಿಸಿ ಕೇಂದ್ರದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ರಚಿಸಲು ಸಾಧ್ಯವಾದರೆ...ಅದಕ್ಕಿಂತ ದೊಡ್ಡ ಭಾಗ್ಯ ಭಾರತೀಯರಿಗೆ ಇನ್ನೇನು ಬೇಕು? ಆದರೆ ಇದು ಸಾಧ್ಯವೇ ಎನ್ನುವುದಷ್ಟೇ ಪ್ರಶ್ನೆ.

ಹುಲಿಯಾಗಿರಲಿ, ಇಲಿಯಾಗಿರಲಿ ಯಾವುದೂ ಕೂಡಾ ತನ್ನನ್ನು ಹಿಡಿಯಲಿಕ್ಕಾಗಿಯೇ ಬೋನು ಇಟ್ಟಿದ್ದಾರೆ ಎಂದು ಗೊತ್ತಿದ್ದೂ ಅದರಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಕ್ಷಿಪ್ರ ಅವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧದ ಜಾಗೃತಿ ಮೂಲಕ ದೇಶದಲ್ಲಿ ಸಂಚಲನ ಉಂಟುಮಾಡಿದ್ದ ಅಣ್ಣಾ ಚಳವಳಿ ಎಂಬ `ಹುಲಿ`ಯನ್ನು ರಾಜಕೀಯದ ಬೋನಿಗೆ ಹಾಕಲು ಯುಪಿಎ ಸರ್ಕಾರ ಒಂದು ವರ್ಷದಿಂದ ಸತತವಾಗಿ ಪ್ರಯತ್ನ ಮಾಡುತ್ತಿತ್ತು. 

ಇದಕ್ಕಾಗಿ `ರಾಜಕೀಯಕ್ಕೆ ಇಳಿದು ನೋಡಿ`, `ಚುನಾವಣೆಯಲ್ಲಿ ಸ್ಪರ್ಧಿಸಿ ನೋಡಿ` ಎಂದು ಕೇಂದ್ರ ಸಚಿವರು ಅಣ್ಣಾತಂಡವನ್ನು ಕೆಣಕುತ್ತಲೇ ಇದ್ದರು. ಇದರಿಂದ ಪ್ರಚೋದನೆಗೊಳಗಾದವರಂತೆ ಅಣ್ಣಾತಂಡದ ಕೆಲವು ಸದಸ್ಯರು ಹಿಸ್ಸಾರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿ, ಹೆಚ್ಚುಕಡಿಮೆ ಬೋನಿನ ಹತ್ತಿರಹೋಗಿ ಒಳಗೆ ಬೀಳದೆ ತಪ್ಪಿಸಿಕೊಂಡಿದ್ದರು. 

ಈಗ `ಚಳವಳಿಯ ಹುಲಿ` ಬೋನಿಗೆ ಬಿದ್ದಿದೆ. ಇದರಿಂದ ಆಡಳಿತಾರೂಢ ಯುಪಿಎಗೆ ಮಾತ್ರವಲ್ಲ, ಬಹಿರಂಗವಾಗಿ ಅಣ್ಣಾ ಚಳವಳಿಯನ್ನು ಬೆಂಬಲಿಸುತ್ತಾ, ಆಂತರ್ಯದಲ್ಲಿ ಅದನ್ನು ದ್ವೇಷಿಸುತ್ತಾ ಇದ್ದ ವಿರೋಧಪಕ್ಷಗಳಿಗೂ ಖುಷಿಯಾಗಿದೆ. ಬೋನಿನಲ್ಲಿ ಬಿದ್ದಿರುವುದು ಗೊತ್ತಿಲ್ಲದಂತೆ `ಚಳವಳಿಯ ಹುಲಿ` ಮಾತ್ರ `ಭ್ರಷ್ಟ ರಾಜಕಾರಣಿಗಳ ಎದೆ ಸೀಳುತ್ತೇನೆ` ಎಂದು ಆರ್ಭಟಿಸುತ್ತಿದೆ. 

ಬೋನಿಗೆ ಬಿದ್ದಿರುವ ಹುಲಿಗೆ ಯಾರು ಹೆದರುತ್ತಾರೆ? ರಾಜಕೀಯವನ್ನು `ಫಟಿಂಗರ ಕೊನೆಯ ತಾಣ` ಎಂದು ಹೇಳುತ್ತಾ ಬಂದಿರುವ ಅಣ್ಣಾ ತಂಡ ಈಗ ಅದೇ ತಾಣವನ್ನು ಅರಸಿಕೊಂಡು ಬಂದ ಹಾಗಾಗಿದೆ. ಇನ್ನು ಮುಂದೆ ಅವರು `ಫಟಿಂಗರ` ಸಮಕ್ಕೆ ನಿಂತು ಸೆಣಸಾಡಬೇಕಾಗಿದೆ.

ರಾಜಕೀಯ ಪಕ್ಷವಾಗಿ ನೋಂದಣಿ ಮಾಡಿಕೊಂಡ ದಿನದಿಂದಲೇ ಅಣ್ಣಾ ತಂಡ ತನ್ನ ಮೊದಲ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಅಣ್ಣಾತಂಡ ದೇಶದ ಜನತೆಯ ಕಣ್ಣಮುಂದೆ ಮೂಡಿಸಿರುವ `ಆದರ್ಶ ಸ್ವರೂಪಿ ರಾಜಕೀಯ ಪಕ್ಷ`ವನ್ನು ನಿರ್ವಹಿಸಲು ನಿಸ್ವಾರ್ಥ, ಪ್ರಾಮಾಣಿಕ ಮತ್ತು ಸೇವಾನಿಷ್ಠ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಬೇಕಾಗುತ್ತಾರೆ. 

ಈ ಕೆಲಸಕ್ಕಾಗಿ ಅಣ್ಣಾ ಹಜಾರೆಯವರ ರೀತಿಯಲ್ಲಿಯೇ ಚುನಾವಣೆಯಲ್ಲಿ ಸ್ಪರ್ಧಿಸದೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಎಷ್ಟು ಮಂದಿ ಮುಂದೆ ಬರಬಹುದು? ದೇಶಪ್ರೇಮ ಸಾಬೀತುಪಡಿಸಲು ವಾರಾಂತ್ಯದ ರಜೆಯ ಕಾಲದಲ್ಲಿ ಉಪವಾಸ ಸತ್ಯಾಗ್ರಹದ ಶಿಬಿರಕ್ಕೆ ಬಂದು ಜೈಕಾರ ಹಾಕಿದರೆ ಸಾಕು ಎಂದು ತಿಳಿದುಕೊಂಡವರು ತಮ್ಮ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು `ದೇಶಸೇವೆ`ಗೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆಯೇ? ರಾಜಕೀಯ ಪಕ್ಷವೆಂದರೆ ಹನ್ನೊಂದು ಮಂದಿಯ ಕ್ರಿಕೆಟ್ ತಂಡ ಅಲ್ಲ, ಬೀದಿಯಲ್ಲಿದ್ದವರೆನ್ನೆಲ್ಲ ಸೇರಿಸಿಕೊಳ್ಳುವ ಗಣೇಶೋತ್ಸವ ಸಮಿತಿಯೂ ಅಲ್ಲ. 

ಅದರಲ್ಲಿ ಎಲ್ಲ ಜಾತಿ, ಧರ್ಮ, ವರ್ಗ ಮತ್ತು ಪ್ರದೇಶಗಳಿಗೆ ಪ್ರಾತಿನಿಧ್ಯ ಇರಬೇಕಾಗುತ್ತದೆ. ಪ್ರಾತಿನಿಧ್ಯ ಎಂದರೆ ಮೀಸಲಾತಿ ಅಲ್ಲ, ಅದು ಸಮಾನ ಅವಕಾಶ. ಇಂತಹ ಪ್ರಾತಿನಿಧ್ಯ ಅಣ್ಣಾತಂಡದಲ್ಲಿ ಇಲ್ಲ ಎನ್ನುವುದು ಕೂಡಾ ಅದರ ವಿರುದ್ಧದ ಒಂದು ಆರೋಪ.

ಅಣ್ಣಾತಂಡದ ಎರಡನೆಯ ಪರೀಕ್ಷೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಎದುರಾಗಲಿದೆ. ಸಂಸತ್‌ನೊಳಗೆ ಕಾಲಿಡುವ ಸದಸ್ಯರ ಅರ್ಹತೆ ಮತ್ತು ಪ್ರಾಮಾಣಿಕತೆ ಬಗ್ಗೆ ಅಣ್ಣಾ ತಂಡ ಕಳೆದ ಒಂದು ವರ್ಷದ ಅವಧಿಯಲ್ಲಿ  ಸಾರ್ವಜನಿಕ ವೇದಿಕೆ ಮತ್ತು ಟಿವಿ ಸ್ಟುಡಿಯೋಗಳಲ್ಲಿ ಗಂಟೆಗಟ್ಟಲೆ ಭಾಷಣ ಬಿಗಿದಿದೆ. 

ಆಡಿದ್ದನ್ನು ಮಾಡಿತೋರಿಸಬೇಕಾದರೆ ಅವರು ಈಗ `22 ಕ್ಯಾರೆಟ್` ಶುದ್ಧದ 543 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ. ಅಣ್ಣಾಹಜಾರೆ ಅವರಿಗೆ ಚಳವಳಿ ಕಾಲದಲ್ಲಿ ತನ್ನ ಅಕ್ಕಪಕ್ಕದಲ್ಲಿ ನಿಲ್ಲಿಸಿಕೊಳ್ಳಲು ಸರಿಯಾಗಿ ನಾಲ್ಕು ಪ್ರಾಮಾಣಿಕ ಕಾರ್ಯಕರ್ತರು ಸಿಕ್ಕಿಲ್ಲ.
 
ಈಗ ಇದ್ದವರ ಮೇಲೆಯೂ ಆರೋಪಗಳಿರುವಾಗ ಪ್ರಾಮಾಣಿಕ ಅಭ್ಯರ್ಥಿಗಳನ್ನು ಎಲ್ಲಿಂದ ತರುತ್ತೀರಿ? ಅಂತಹವರನ್ನು ಸೃಷ್ಟಿ ಮಾಡಲು ಅಣ್ಣಾಹಜಾರೆ `ಬ್ರಹ್ಮ`ನೂ ಅಲ್ಲ, ಹೊರಗಿನಿಂದ ಆಮದು ಮಾಡಿಕೊಳ್ಳಲು ಅವರು ಸರಕೂ ಅಲ್ಲ. ಅಣ್ಣಾತಂಡ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯ ಮಟ್ಟವನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ದು ನಿಲ್ಲಿಸಿರುವ ಕಾರಣ, ನಾಳೆ  ಮಾಧ್ಯಮದವರು ಸೇರಿದಂತೆ ಸಾರ್ವಜನಿಕರು ದುರ್ಬೀನು ಹಿಡಿದುಕೊಂಡು ಅಣ್ಣಾ ಪಕ್ಷದವರ ಜಾತಕ ಜಾಲಾಡಿಸುತ್ತಾರೆ.

ಮೂರನೆಯ ಪರೀಕ್ಷೆಯನ್ನು ಚುನಾವಣೆಯ ಖರ್ಚಿಗೆ ದುಡ್ಡು ಹೊಂದಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಅಣ್ಣಾತಂಡ ಎದುರಿಸಬೇಕಾಗುತ್ತದೆ.  ಆಯೋಗದ ನಿಯಮದ ಪ್ರಕಾರ ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿ 25 ಲಕ್ಷ ರೂಪಾಯಿ ಮತ್ತು ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿ 10 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಖರ್ಚು ಮಾಡುವ ಹಾಗಿಲ್ಲ. 

ಕಳೆದ 25 ವರ್ಷಗಳಲ್ಲಿ ಯಾವುದಾದರೂ ಅಭ್ಯರ್ಥಿ ಈ ಮಿತಿಯೊಳಗೆ ಹಣ ಖರ್ಚು ಮಾಡಿ ಗೆದ್ದ ಉದಾಹರಣೆಗಳು ಇವೆಯೇ? ಕ್ರೂರ ವಾಸ್ತವವನ್ನು ಒಪ್ಪಿಕೊಂಡು ಅಣ್ಣಾಪಕ್ಷದ ಅಭ್ಯರ್ಥಿಗಳು  ಆಯೋಗ ವಿಧಿಸಿರುವ ಮಿತಿಯನ್ನು ಮೀರಿ ಖರ್ಚು ಮಾಡಿದರೆ ಈಗ ಭ್ರಷ್ಟಾಚಾರದ ಕೆಸರಲ್ಲಿ ಮುಳುಗಿರುವ ರಾಜಕಾರಣಿಗಳಿಗೂ ಇವರಿಗೂ ಏನು ವ್ಯತ್ಯಾಸ ಉಳಿಯಲಿದೆ? 

ನಾಲ್ಕನೆಯ ಪರೀಕ್ಷೆ ಎದುರಾಗಲಿರುವುದು ರಾಜಕೀಯ ಪಕ್ಷದ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಸಂದರ್ಭದಲ್ಲಿ. ಇಲ್ಲಿಯವರೆಗೆ ಅಣ್ಣಾತಂಡದ ಏಕೈಕ ಕಾರ್ಯಕ್ರಮ- ಜನಲೋಕಪಾಲರ ನೇಮಕ. ಇದರ ಜತೆಯಲ್ಲಿ ಇತ್ತೀಚೆಗೆ ಕೇಂದ್ರದ 14 ಸಚಿವರ ವಿರುದ್ಧ ತನಿಖೆ ನಡೆಯಬೇಕೆಂಬ ಇನ್ನೊಂದು ಬೇಡಿಕೆ ಸೇರಿಸಿಕೊಂಡಿದೆ. 

ಇವೆರಡನ್ನು ಬಿಟ್ಟರೆ ಚುನಾವಣಾ ಸುಧಾರಣೆ, ಭೂಸ್ವಾಧೀನ ಕಾಯಿದೆಯಲ್ಲಿ ಬದಲಾವಣೆ ಮೊದಲಾದ ವಿಷಯಗಳು ಆಗಾಗ ಭಾಷಣಗಳಲ್ಲಿ ಪ್ರಸ್ತಾಪವಾಗುತ್ತಿದ್ದವು ಅಷ್ಟೆ. ಜನಲೋಕಪಾಲರ ನೇಮಕದ ಒಂದು ಕಾರ್ಯಸೂಚಿಯನ್ನು ಇಟ್ಟುಕೊಂಡು ರಾಜಕೀಯ ಪಕ್ಷವನ್ನು ಕಟ್ಟಲಾಗುವುದಿಲ್ಲ.
 
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ, ಅಸ್ಸಾಂನಿಂದ ಮಹಾರಾಷ್ಟ್ರದ ವರೆಗೆ ನೂರಾರು ಸಮಸ್ಯೆಗಳಿವೆ. ಅವುಗಳೆಲ್ಲವೂ ಕಾನೂನಿನ ಮೂಲಕವೇ ಇತ್ಯರ್ಥಗೊಳ್ಳುವಂತಹದ್ದಲ್ಲ, ಅವುಗಳಲ್ಲಿ ಕೆಲವು ಬಿಕ್ಕಟ್ಟುಗಳ ಬಗ್ಗೆ  ಸೈದ್ಧಾಂತಿಕ ನಿಲುವು ಮುಖ್ಯವಾಗುತ್ತದೆ.

ಮೀಸಲಾತಿ, ಮಾವೋವಾದಿ ಚಟುವಟಿಕೆ, ಕಾಶ್ಮೆರದಲ್ಲಿನ ಭಯೋತ್ಪಾದನೆ, ಈಶಾನ್ಯ ರಾಜ್ಯದ ಪ್ರತ್ಯೇಕತಾವಾದಿಗಳು, ಅಲ್ಪಸಂಖ್ಯಾತರು, ದಲಿತರು, ರೈತರು, ಕಾರ್ಮಿಕರು, ಜಲ-ನೆಲ-ಭಾಷೆಯ ತಂಟೆ ತಕರಾರುಗಳು...ಇಂತಹ ನೂರಾರು ಸಮಸ್ಯೆಗಳ ಬಗ್ಗೆ ತನ್ನ ನಿಲುವನ್ನು ರಾಜಕೀಯ ಪಕ್ಷ ಸ್ಪಷ್ಟಪಡಿಸಬೇಕಾಗುತ್ತದೆ. 

ಕಳೆದ 3-4 ದಶಕಗಳ ದೇಶದ ಇತಿಹಾಸವನ್ನು ನೋಡಿದರೆ ಎರಡು ಪ್ರಮುಖ ವಿಷಯಗಳು ನಮ್ಮ ರಾಜಕೀಯವನ್ನು ಪ್ರಭಾವಿಸುತ್ತಾ ಮತ್ತು ಅದರ ದಿಕ್ಕು-ದೆಸೆ ಬದಲಾಯಿಸುತ್ತಾ ಬಂದುದನ್ನು ಕಾಣಬಹುದು. ಮೊದಲನೆಯದು ಭ್ರಷ್ಟಾಚಾರ, ಎರಡನೆಯದು ಅಷ್ಟೇ ಮಹತ್ವದ ವಿಷಯವಾದ ಕೋಮುವಾದ.
 
ಈ ಎರಡನೆ ವಿಷಯದ ಬಗ್ಗೆ ಪ್ರಾರಂಭದಿಂದಲೂ ಅಣ್ಣಾ ತಂಡದ್ದು ಎಡೆಬಿಡಂಗಿ ನಿಲುವು. ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಬಗ್ಗೆ ಪರ ಇಲ್ಲವೆ ವಿರುದ್ಧದ ಸ್ಪಷ್ಟ ನಿಲುವನ್ನು ಕೈಗೊಳ್ಳಲು ಈ ವರೆಗೂ ಸಾಧ್ಯವಾಗಲಿಲ್ಲ ಎನ್ನುವುದು ಇದಕ್ಕೆ ನಿದರ್ಶನ. ಇಷ್ಟು ಮಾತ್ರವಲ್ಲ, ಕಾಶ್ಮೆರದ ಉಗ್ರಗಾಮಿಗಳ ಬಗೆಗಿನ ಪ್ರಶಾಂತ್ ಭೂಷಣ್ ನಿಲುವನ್ನು ಅಣ್ಣಾಹಜಾರೆ ಅವರೇ ಒಪ್ಪಿಕೊಳ್ಳುವುದಿಲ್ಲ. 

ಯೋಗಗುರು ರಾಮದೇವ್ ಪ್ರತಿಪಾದಿಸುತ್ತಿರುವ ಆರ್ಥಿಕ ನೀತಿಯನ್ನು ಅರವಿಂದ್ ಕೇಜ್ರಿವಾಲ್ ಒಪ್ಪಲಾರರು, ಕಿರಣ್ ಬೇಡಿ ಹೇಳುತ್ತಿರುವ ಯಾವ ವಿಚಾರವನ್ನೂ ತಂಡದಲ್ಲಿ ಯಾರೂ ಒಪ್ಪುವುದಿಲ್ಲ. ಇರುವ ನಾಲ್ಕುಮಂದಿಯಲ್ಲಿಯೇ ಈ ರೀತಿಯ ಭಿನ್ನಾಭಿಪ್ರಾಯಗಳಿರುವಾಗ ಪಕ್ಷಕ್ಕೆ ಎಲ್ಲಿಂದ ಸೈದ್ಧಾಂತಿಕ ಸ್ಪಷ್ಟತೆ ಬರಲು ಸಾಧ್ಯ?
ಐದನೆಯ ಪರೀಕ್ಷೆ ಎದುರಾಗಲಿರುವುದು ಅಣ್ಣಾತಂಡದ ಕಾರ್ಯಶೈಲಿಯ ವಿಷಯದಲ್ಲಿ. 

ಈಗಿನ ನಮ್ಮ ರಾಜಕೀಯ ಪಕ್ಷಗಳನ್ನು ಬಾಧಿಸುತ್ತಾ ಬಂದಿರುವುದು ಕೇವಲ ಭ್ರಷ್ಟಾಚಾರ ಅಲ್ಲ. ವ್ಯಕ್ತಿಪೂಜೆ, ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಹೈಕಮಾಂಡ್ ಸಂಸ್ಕೃತಿ, ಸರ್ವಾಧಿಕಾರಿ ಧೋರಣೆ, ಗುಪ್ತಕಾರ್ಯಸೂಚಿ ಇತ್ಯಾದಿ ರೋಗಗಳೂ ರಾಜಕೀಯ ಪಕ್ಷಗಳ ಮೇಲಿನ ಜನರ ನಂಬಿಕೆ ಕಡಿಮೆಯಾಗಲು ಕಾರಣ. 

ಕಳೆದ ಒಂದುವರ್ಷದ ಅವಧಿಯ ಅಣ್ಣಾತಂಡದ ಕಾರ್ಯಶೈಲಿಯನ್ನು ನೋಡಿದರೆ ಈ ಎಲ್ಲ ರೋಗಗಳ ಸೋಂಕು ಅದಕ್ಕೂ ತಗಲಿದ ಹಾಗಿದೆ. `ಅಣ್ಣಾ ಎಂದರೆ ಇಂಡಿಯಾ`, `ಐ ಯಾಮ್ ಅಣ್ಣಾ`, `ಅಣ್ಣಾ ಸಂಸತ್‌ಗಿಂತ ದೊಡ್ಡವರು` ಇತ್ಯಾದಿ ಘೋಷಣೆ ಅಣ್ಣಾ ಬೆಂಬಲಿಗರ ಮನಸ್ಸಿನ ಆಳದಲ್ಲಿರುವ ವ್ಯಕ್ತಿಪೂಜೆಯ ದೌರ್ಬಲ್ಯವನ್ನು ತೋರಿಸುತ್ತದೆ. 

ಅಣ್ಣಾತಂಡದ ಬೆರಳೆಣಿಕೆಯ ಸದಸ್ಯರೇ ಕೂಡಿ ಚಳವಳಿಯ ರೂಪುರೇಖೆ ಬಗ್ಗೆ ತೀರ್ಮಾನ ಕೈಗೊಂಡು ಇತರರ ಮೇಲೆ ಹೇರುತ್ತಿರುವುದನ್ನು ವಿರೋಧಿಸಿ ಪ್ರಾರಂಭದಲ್ಲಿ ಜತೆಗಿದ್ದ ಹಲವು ಸದಸ್ಯರು ಬಿಟ್ಟುಹೋಗಿದ್ದರು. 

ಎಷ್ಟೋ ಬಾರಿ ದೆಹಲಿಯಲ್ಲಿರುವ ಅಣ್ಣಾತಂಡದ ನಾಲ್ಕೈದು ಸದಸ್ಯರು ಕೂಡಿಕೈಗೊಳ್ಳುವ ತೀರ್ಮಾನಕ್ಕೆ ಬೆಂಗಳೂರಿನಲ್ಲಿರುವ ನಿವೃತ್ತನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆಯವರು ವಿರೋಧ ವ್ಯಕ್ತಪಡಿಸಿದ್ದುಂಟು. ಹಲವು ಬಾರಿ ಅಣ್ಣಾಹಜಾರೆಯವರೂ ಅಸಮಾಧಾನ ವ್ಯಕ್ತಪಡಿಸಿದ್ದರು. 

ಅಣ್ಣಾಹಜಾರೆಯವರ ಸರ್ವಾಧಿಕಾರಿ ಧೋರಣೆಯ ಕಾರ್ಯಶೈಲಿ ಈಗ ಲೋಕಪ್ರಸಿದ್ಧ, ಅವರ ಕರ್ಮಭೂಮಿಯಾಗಿರುವ ರಾಳೆಗಣಸಿದ್ದಿಗೆ ಹೋದರೆ ಇದರ ಪ್ರತ್ಯಕ್ಷದರ್ಶನ ಮಾಡಿಕೊಂಡು ಬರಬಹುದು. `ಮರಕ್ಕೆ ಕಟ್ಟಿ ಹೊಡೆದು ಬುದ್ದಿ ಕಲಿಸುವ` ಅಣ್ಣಾ ಮಾರ್ಗ, ಮನಪರಿವರ್ತನೆಯ ಮೂಲಕ ಸುಧಾರಣೆಯನ್ನು ತರುವ ಗಾಂಧಿಮಾರ್ಗಕ್ಕಿಂತ ಭಿನ್ನವಾದುದು. 

ಸಾಮಾನ್ಯವಾಗಿ ರಾಜಕೀಯ ನಾಯಕನ ವೈಯಕ್ತಿಕ ಗುಣಾವಗುಣಗಳು ಪಕ್ಷದ ನೀತಿ-ನಿರ್ಧಾರಗಳ ಮೇಲೂ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷ ಕಟ್ಟುವ ತೀರ್ಮಾನ ಪ್ರಕಟಿಸಿದ ತಕ್ಷಣ ಎದುರಾಗಿರುವ ದೊಡ್ಡ ಆರೋಪ ಗುಪ್ತಕಾರ್ಯಸೂಚಿಯದ್ದು. ಒಂದು ಸಾಮಾಜಿಕ ಚಳವಳಿಯಾಗಿ ಬೆಳೆಯುತ್ತಾ ಬಂದ ಅಣ್ಣಾ ಚಳವಳಿ ರಾಜಕೀಯ ಪಕ್ಷದ ರೂಪಧಾರಣೆ ಮಾಡಿರುವುದು ಕೇವಲ ಆಕಸ್ಮಿಕವೇ, ಇದಕ್ಕೆ ಬೇರೆ ಏನಾದರೂ ಒತ್ತಡಗಳಿತ್ತೇ? ಇಲ್ಲವೆ ಇವೆಲ್ಲವೂ ಪೂರ್ವನಿಯೋಜಿತ ಕಾರ್ಯತಂತ್ರವೇ? ಎನ್ನುವ ಪ್ರಶ್ನೆಗಳು ಎದ್ದಿವೆ. 

ಇಂತಹದ್ದೊಂದು ಗುಪ್ತಕಾರ್ಯಸೂಚಿಯನ್ನು ಅವರು ಮೊದಲೇ ಹೊಂದಿದ್ದರು ಎಂಬ ಆರೋಪಗಳು ಕೂಡಾ ಕೇಳಿಬರುತ್ತಿವೆ. ಇದು ಸುಳ್ಳೇ ಇರಬಹುದು, ಆದರೆ ಚುನಾವಣಾ ಕಣದಲ್ಲಿ ನಿಂತು ಬೇರೆ ಪಕ್ಷಗಳ ವಿರುದ್ಧ, ಉದಾಹರಣೆಗೆ ಬಿಜೆಪಿ ವಿರುದ್ಧ `ಗುಪ್ತಕಾರ್ಯಸೂಚಿ`ಯ ಆರೋಪ ಮಾಡಿದಾಗ ಪ್ರತಿಯಾಗಿ ಅವರೂ ಈ ಆರೋಪ ಮಾಡಬಹುದಲ್ಲವೇ?

ಕೊನೆಯದಾಗಿ ಮಾಧ್ಯಮಗಳು ಒಡ್ಡುವ ಪರೀಕ್ಷೆಯನ್ನೂ ಅಣ್ಣಾತಂಡ ಎದುರಿಸಬೇಕಾಗಿದೆ. ಮಾಧ್ಯಮಗಳೇ ಅಣ್ಣಾಚಳವಳಿಯನ್ನು ಈಗಿನ ಮಟ್ಟಕ್ಕೆ ಒಯ್ದು ನಿಲ್ಲಿಸಿದ್ದು ಎಂಬ ಆರೋಪ ಇದೆ. ಮಾಧ್ಯಮದ ಅತಿಅವಲಂಬನೆ ಹೇಗೆ ತಿರುಗುಬಾಣ ಆಗಬಹುದು ಎನ್ನುವುದಕ್ಕೂ ಈ ಚಳವಳಿ ಒಳ್ಳೆಯ ಉದಾಹರಣೆ. 


ಅಣ್ಣಾಹಜಾರೆ ಅವರ ಎರಡು ಉಪವಾಸಗಳು ಮತ್ತು ಅದಕ್ಕೆ ಪೂರ್ವಭಾವಿಯಾಗಿ ನಡೆದ ಚಟುವಟಿಕೆಗಳನ್ನು ಮಾಧ್ಯಮಗಳು ಮುಖ್ಯವಾಗಿ ಟಿವಿ ಚಾನೆಲ್‌ಗಳು ದಿನದ ಇಪ್ಪತ್ತನಾಲ್ಕು ಗಂಟೆ ಕಾಲ ಪ್ರಸಾರ ಮಾಡಿ ಜನಪ್ರಿಯಗೊಳಿಸಿದ್ದು ನಿಜ. ಆದರೆ ಆ `ಮಧುಚಂದ್ರ`ದ ದಿನಗಳು ಈಗ ಮುಗಿದುಹೋಗಿವೆ. 

ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ನಂತರ ಮಾಧ್ಯಮ ರಂಗವನ್ನು ಕೂಡಾ ಅಣ್ಣಾತಂಡ ತನ್ನ ಶತ್ರುಗಳ ಪಟ್ಟಿಯಲ್ಲಿ ಸೇರಿಸಿಕೊಂಡು ಬಿಟ್ಟಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಷ್ಟೇ ಪೈಪೋಟಿಯಿಂದ ಮಾಧ್ಯಮಗಳು ನೂರು ಕಣ್ಣುಗಳನ್ನು ಬಿಟ್ಟುಕೊಂಡು ನಿಂತಿವೆ. ಇದನ್ನು ಎದುರಿಸಲು ಅಣ್ಣಾತಂಡ ಮೈಯೆಲ್ಲ ಕಣ್ಣಾಗಿ ಇರಬೇಕಾಗುತ್ತದೆ.