Sunday, March 8, 2015

ಮಾಧ್ಯಮ ಕ್ಷೇತ್ರದ ಕೊನೆಯ ‘ಕಸುಬುದಾರ ಸಂಪಾದಕ’

ಲಂಕೇಶ್ ಅವರ 80ನೇ ಹುಟ್ಟುಹಬ್ಬದ ದಿನವೇ ‘ಇಂಗ್ಲೀಷ್ ನ ಲಂಕೇಶ್ ‘ ಎಂದು ನನ್ನಂತಹವರು ತಿಳಿದುಕೊಂಡಿದ್ದ ಸಂಪಾದಕ ವಿನೋದ್ ಮೆಹ್ತಾ ನಮ್ಮನಗಲಿದ್ದಾರೆ. ಅವರಲ್ಲೊಂದು ಪಾಪ ನಿವೇದನೆ ಮಾಡುವುದಿತ್ತು. ಕೊನೆಗೂ ಅದಕ್ಕೆ ಅವಕಾಶ ಸಿಗಲಿಲ್ಲ. ನನ್ನ ವಯಸ್ಸಿನ ಪತ್ರಕರ್ತರೆಲ್ಲರೂ ಲಂಕೇಶ್ ಪತ್ರಿಕೆಯನ್ನು ಓದುತ್ತಾ ಬೆಳೆಯಲು ಪ್ರಯತ್ನಪಟ್ಟವರು. ಇದಕ್ಕಿಂತ ಮೊದಲು ವಿದ್ಯಾರ್ಥಿ ದಿನಗಳಲ್ಲಿಯೇ ಭಾರತದ ಪ್ಲೇ ಬಾಯ್ ಎಂದೇ ಬಣ್ಣಿಸಲಾಗುತ್ತಿದ್ದ ‘ಡೆಬೋನೇರ್’ ಪತ್ರಿಕೆಯ ಹಳೆಯ ಪ್ರತಿಗಳನ್ನು ಕದ್ದುಮುಚ್ಚಿ ಓದುತ್ತಿದ್ದರೂ ಅದರ ಸಂಪಾದಕ ವಿನೋದ್ ಮೆಹ್ತಾ ಎನ್ನುವುದು ಗೊತ್ತಿರಲಿಲ್ಲ.

ವಿನೋದ್ ಮೆಹ್ತಾ ನನ್ನ ಓದಿನ ಲೋಕ ಪ್ರವೇಶಿಸಿದ್ದು ಆಕಸ್ಮಿಕವಾಗಿ. ನಾನಾಗ ಮುಂಗಾರು ಪತ್ರಿಕೆಯಲ್ಲಿ ಸುದ್ದಿ ಸಂಪಾದಕನಾಗಿದ್ದೆ. ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಭಾನುವಾರದ ದಿನ ಸುದ್ದಿಗೆ ಬರ ಇರುತ್ತದೆ.ಅಂತಹದ್ದೊಂದು ಚಿಂತಾಕ್ರಾಂತ ಸ್ಥಿತಿಯಲ್ಲಿ ಮಂಗಳೂರಿನ ನ್ಯೂಸ್ ಪೇಪರ್ ಸ್ಟಾಲ್ ನಲ್ಲಿ ‘ಸಂಡೇ ಆಬ್ಸರ್ವರ್ ‘ಕಣ್ಣಿಗೆ ಬಿತ್ತು. ಪುಟ ತಿರುಗಿಸಿದರೆ ಎಲ್ಲೆಲ್ಲೂ ‘ exclusive ವರದಿಗಳು. ಕಚೇರಿಗೆ ಬಂದವನೇ ಒಂದೆರಡನ್ನು ಕದ್ದು ಕನ್ನಡಕ್ಕೆ ಭಟ್ಟಿ ಇಳಿಸಿದ್ದೆ. ಅದರ ನಂತರ ಪ್ರತಿ ಭಾನುವಾರ ಅದೊಂದು ಸಂಪ್ರದಾಯವಾಗಿತ್ತು. ಅವರು ಸಂಡೇ ಆಬ್ಸರ್ವರ್ ಬಿಟ್ಟಾಗ ಬಹಳ ಬೇಸರವಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರು ‘ದಿ ಇಂಡಿಯನ್ ಪೋಸ್ಟ್ ‘ ಎಂಬ ಇನ್ನೊಂದು ಪತ್ರಿಕೆ ಪ್ರಾರಂಭಿಸಿದ್ದರಿಂದ ನಮ್ಮ ಭಾನುವಾರದ ಸುದ್ದಿಗೆ ತತ್ವಾರ ಬರಲಿಲ್ಲ. ಅಲ್ಲಿಂದಲೂ ಬಿಟ್ಟುಹೋದ ಮೆಹ್ತಾ ‘ದಿ ಇಂಡಿಪೆಂಡೆಂಟ್’ ಪ್ರಾರಂಭಿಸಿದರು. ಅದು ಬಹಳ ಕಾಲ ಉಳಿಯಲಿಲ್ಲ.
ಮಂಗಳೂರಿನಲ್ಲಿ ಈ ಪತ್ರಿಕೆಗಳ ಪ್ರಸಾರವೇ 50ರ ಆಜುಬಾಜಿನಲ್ಲಿದ್ದರಿಂದ ವರದಿಯ ಮೂಲ ಯಾವುದು ಎಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ನಮ್ಮಲ್ಲಿ ಮುಂಬೈ, ದೆಹಲಿ ಡೇಟ್ ಲೈನ್ ನಲ್ಲಿ ಪ್ರಸಾರವಾಗುತ್ತಿದ್ದ ‘ exclusive ವರದಿಗಳಿಗೆ ಓದುಗರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಒಂದಷ್ಟು ದಿನ ಪ್ರತಿಸ್ಪರ್ಧಿ ಪತ್ರಿಕೆಗಳು ಕೂಡಾ ಬೇಸ್ತು ಬಿದ್ದದ್ದು ನಿಜ. ವಿನೋದ್ ಮೆಹ್ತಾ ಬದುಕಿದ್ದಾಗಲೇ ಭೇಟಿಯಾಗಿ ಸಾರಿ ಕೇಳಬೇಕೆಂದಿದ್ದೆ, ಆಗಲಿಲ್ಲ, ಅದಕ್ಕಾಗಿ ಈಗ ಆಕಾಶಕ್ಕೆ ಮುಖಮಾಡಿ ‘ ಈ ಕಳ್ಳನನ್ನು ಕ್ಷಮಿಸಿ’ ಎಂದು ಹೇಳುತ್ತಿರುವೆ.
ಆದರೆ ಈ ಕಳ್ಳಾಟದಲ್ಲಿ ನಾನು ವಿನೋದ್ ಮೆಹ್ತಾ ಅವರ ಅಭಿಮಾನಿಯಾಗಿಬಿಟ್ಟಿದ್ದೆ. ಡೆಬೋನೇರ್, ಸಂಡೇ ಆಬ್ಸರ್ವರ್, ದಿ ಇಂಡಿಯನ್ ಪೋಸ್ಟ್, ಇಂಡಿಪೆಂಡೆಂಟ್’ ಕೊನೆಗೆ ಔಟ್ ಲುಕ್ ಪತ್ರಿಕೆಗಳ ವರೆಗೆ ಅವರ ಜತೆ ನನ್ನ ಪಯಣವೂ ಸಾಗಿ ಬಂದಿತ್ತು. ಈಗ ಇದ್ದಕ್ಕಿದ್ದ ಹಾಗೆ ನಮ್ಮನ್ನು ಅಗಲಿ ಹೋಗಿದ್ದಾರೆ. ಸಂಪಾದಕರ ಸ್ಥಾನವನ್ನು ಮ್ಯಾನೇಜರ್ ಗಳು ಆಕ್ರಮಿಸಿಕೊಳ್ಳುತ್ತಿರುವುದನ್ನು ನೋಡಿದರೆ ‘ಕಸುಬುದಾರ ಸಂಪಾದಕ’ ಎಂಬ ಕಿರೀಟ ವಿನೋದ್ ಮೆಹ್ತಾ ಅವರ ತಲೆಮೇಲೆಯೇ ಶಾಶ್ವತವಾಗಿ ಉಳಿದುಬಿಡುತ್ತೋ ಏನೋ? ಅದಕ್ಕೆ ಅವರು ಸಂಪೂರ್ಣ ಅರ್ಹರು ಕೂಡಾ.

1 comment:

  1. ಅಂತಹ ಕಸುಬುದಾರಿಕೆ ಈಗ ಮೊದಲಿಗಿಂತ ತುಂಬಾ ಅತ್ಯಗತ್ಯವಾಗಿದೆ. ಅದೇ ಅದಕ್ಕಾಗಿ, ಆ ಕನಸಿಗಾಗಿ ನಿತ್ಯ ಹೋರಾಡುವ ಕೆಲವು ಮನಸುಗಳು ಇನ್ನೂ ನಮ್ಮ ಮಧ್ಯೆ ಇವೆ ಅನ್ನುವುದೇ ಈ ಹೊತ್ತಿನಲ್ಲಿ ಸಮಾಧಾನ ಪಡುವ ಸಂಗತಿ.
    ಮೆಹ್ತಾ ಹಾದಿಯಲ್ಲಿ ಆಲೋಚಿಸುತ್ತ..
    ಆ ಜೀವಕ್ಕೆ ನಮನಗಳು
    -ಗವಿಸಿದ್ಧ ಹೊಸಮನಿ

    ReplyDelete