Monday, June 20, 2011

ಜನಲೋಕಪಾಲ ಸರ್ವರೋಗಕ್ಕೆ ಪರಿಹಾರವೇ?

ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ವಿಫಲಗೊಂಡಿದೆ ಎಂದು ಇಲ್ಲಿಯವರೆಗೆ `ಕಾಡಿನವರು~ ಮಾತ್ರ ಹೇಳುತ್ತಿದ್ದರು, ಈಗ `ನಾಡಿನವರು~ ಕೂಡಾ ಹೇಳತೊಡಗಿದ್ದಾರೆ.
ಹದಿನಾಲ್ಕು ರಾಜ್ಯಗಳಲ್ಲಿ ಹಾದುಹೋಗಿರುವ ಮತ್ತು ದೇಶದ ಶೇಕಡಾ 40ರಷ್ಟು ಪ್ರದೇಶದಲ್ಲಿ ವ್ಯಾಪಿಸಿರುವ `ರೆಡ್ ಕಾರಿಡಾರ್~ನಲ್ಲಿ `ಕಾಡಿನವರ ಸರ್ಕಾರ~ ಇದೆ.
ಅಲ್ಲಿರುವ ದೇಶದ ಶೇಕಡಾ 35ರಷ್ಟು ಜನ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ.
ತಲೆಮಾರುಗಳಿಂದ ಅಭಿವೃದ್ಧಿ ವಂಚಿತರಾಗಿರುವ ಈ ಶೋಷಿತ ಜನಸಮುದಾಯ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದರೆ ಅದು ಸಹಜ. ಆಶ್ಚರ‌್ಯವೆಂದರೆ  ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ಚುನಾವಣೆಯಲ್ಲಿ ಮತಚಲಾಯಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿರುವ ಮತ್ತು ಅವರಿಂದ ಆಯ್ಕೆಗೊಂಡಿರುವ `ನಾಡಿನವರು~ ಕೂಡಾ `ಕಾಡಿನವರ~ ಭಾಷೆಯಲ್ಲಿಯೇ ಮಾತನಾಡುತ್ತಿರುವುದು.
ಇದಕ್ಕೆ ಇತ್ತೀಚಿನ ಉದಾಹರಣೆ- ಸಂವಿಧಾನದ ಪ್ರಮುಖ ಅಂಗವಾಗಿರುವ ನ್ಯಾಯಾಂಗದ ಮೇಲೆ ನಂಬಿಕೆ ಕಳೆದುಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ದೇವರ ಮೇಲೆ ಆಣೆ ಮಾಡಲು ಹೊರಟಿರುವುದು.
ಅಲ್ಲಿಗೆ ಕಳೆದ 60 ವರ್ಷಗಳಿಂದ ನಾವು ಒಪ್ಪಿಕೊಂಡಿರುವ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ರೋಗಗ್ರಸ್ತವಾಗಿದೆ ಎಂದು ಬಹು ಸಂಖ್ಯಾತ ಜನ ಒಪ್ಪಿಕೊಂಡಂತಾಯಿತು. ಆ ಬಗ್ಗೆ ವಿವಾದಗಳಿಲ್ಲ. ವಿವಾದ ಇರುವುದು ಇದಕ್ಕೆ ನೀಡಬೇಕಾದ ಚಿಕಿತ್ಸೆ ಬಗ್ಗೆ.
ಕಾಡಿನಲ್ಲಿರುವ ಮಾವೋವಾದಿಗಳ ಪ್ರಕಾರ ಇದು ಚಿಕಿತ್ಸೆ ಮೀರಿದ ರೋಗ. `ಈಗಿನ ವ್ಯವಸ್ಥೆಯನ್ನು ನಾಶಮಾಡಿದರೆ ಮಾತ್ರ ಹೊಸ ವ್ಯವಸ್ಥೆ ಹುಟ್ಟಲು ಸಾಧ್ಯ. ಅದನ್ನೇ ನಾವು ಬಂದೂಕಿನ ಮೂಲಕ ಮಾಡಲು ಹೊರಟಿದ್ದೇವೆ~ ಎನ್ನುತ್ತಾರೆ ಅವರು.

ಇದನ್ನು ಕಾಂಗ್ರೆಸಿಗರು, ಮಾರ್ಕ್ಸಿಸ್ಟರು, ಸೋಷಿಯಲಿಸ್ಟರು, ಉದಾರವಾದಿಗಳು, ಸಂಪ್ರದಾಯವಾದಿಗಳು ಮಾತ್ರವಲ್ಲ, ಬಹು ಸಂಖ್ಯೆಯ ಜನಸಮುದಾಯ ಕೂಡಾ ಒಪ್ಪುವುದಿಲ್ಲ. ಹಾಗಿದ್ದರೆ ಇದಕ್ಕೇನು ಚಿಕಿತ್ಸೆ? ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಜನಪ್ರಿಯ ಔಷಧಿಯ ಹೆಸರು `ಲೋಕಪಾಲ ಮಸೂದೆ~.
ಇದು ಸರ್ವರೋಗ ನಿವಾರಕ ಎಂದು ಅದರ ತಯಾರಕರು ಹೇಳಿಕೊಳ್ಳದಿದ್ದರೂ ಹಾಗೆಂದು ಅದರ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದಾರೆ. ಇಂತಹ ಪ್ರಚಾರದಿಂದಾಗಿ ಜನತೆಯಲ್ಲಿನ ನಿರೀಕ್ಷೆ ಕೂಡಾ ಆಕಾಶದೆತ್ತರಕ್ಕೆ ಏರಿದೆ.
ಒಂದೊಮ್ಮೆ ನಾಗರಿಕ ಸಮಿತಿ ರಚಿಸಿರುವ ಜನಲೋಕಪಾಲ ಮಸೂದೆಯನ್ನು ಯಥಾವತ್ತಾಗಿ ಸಂಸತ್ ಅಂಗೀಕರಿಸಿ ಕಾನೂನಿನ ರೂಪ ನೀಡಿದರೆ ಸಾರ್ವಜನಿಕ ಜೀವನದಲ್ಲಿನ ಭ್ರಷ್ಟಾಚಾರದ ಮೂಲೋತ್ಪಾಟನೆಯಾಗುವುದೇ? ಪ್ರಜಾಪ್ರಭುತ್ವಕ್ಕೆ ತಗಲಿರುವ ರೋಗ ವಾಸಿಯಾಗುವುದೇ? ಈ ಬಗ್ಗೆ ಅನುಮಾನಿಸುವುದಕ್ಕೆ ಕಾರಣಗಳಿವೆ.
ಮೊದಲನೆಯದಾಗಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ಕೂರುತ್ತೇನೆಂದು ಹೇಳಿದ ದಿನದಿಂದ ಇಲ್ಲಿಯವರೆಗೆ ನಡೆಯುತ್ತಿರುವ ಚರ್ಚೆಯೆಲ್ಲವೂ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಸುತ್ತಲೇ ಗಿರ್ಕಿ ಹೊಡೆಯುತ್ತಿದೆ. ಬಹುಮುಖ್ಯವಾದ ಎರಡು ಕ್ಷೇತ್ರಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಯಾಕೋ ಚರ್ಚೆ ನಡೆಯುತ್ತಿಲ್ಲ.

ಈ ಎರಡರಲ್ಲಿ ಮೊದಲನೆಯದು ಕಾರ್ಪೋರೇಟ್ ಕ್ಷೇತ್ರ, ಎರಡನೆಯದು ಧಾರ್ಮಿಕ ಕ್ಷೇತ್ರ. ನಮ್ಮೆಲ್ಲ ಚರ್ಚೆ ನಡೆಯುತ್ತಿರುವುದು ಲಂಚ ಸ್ವೀಕರಿಸುತ್ತಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳ ಬಗ್ಗೆ. ಇವರಿಬ್ಬರಿಗೂ ಲಂಚ ಸ್ವೀಕರಿಸಿಯಷ್ಟೇ ಗೊತ್ತು ವಿನಾ ಲಂಚ ಕೊಟ್ಟು ಗೊತ್ತಿಲ್ಲ. ಆದರೆ  ಇವರಿಗೆ ಲಂಚ ಕೊಡುವವರು ಯಾರು ಮತ್ತು ಅವರು ಯಾಕೆ ಕೊಡುತ್ತಿದ್ದಾರೆ? ಯಾರೂ ಕೇಳುತ್ತಿಲ್ಲ.
ನೈತಿಕ ದೃಷ್ಟಿಯಿಂದ ಲಂಚ ಸ್ವೀಕರಿಸಿದ್ದಕ್ಕಿಂತ ಲಂಚ ಕೊಡುವುದು ಸ್ವಲ್ಪ ಸಣ್ಣ ಪ್ರಮಾಣದ ಅಪರಾಧವಾಗಿರಬಹುದು. ಆದರೆ ಅದರ ಪರಿಣಾಮ? ಸಚಿವರು ಮತ್ತು ಉನ್ನತಾಧಿಕಾರಿಗಳ ಮಟ್ಟದಲ್ಲಿ ಲಂಚ ನೀಡುವವನು ಹಳ್ಳಿಯ ಬಡಬೋರೇಗೌಡ ಅಲ್ಲ, ಅವನು ಖಂಡಿತವಾಗಿಯೂ ಒಬ್ಬ ಉದ್ಯಮಿಯಾಗಿರುತ್ತಾನೆ.
ಇಲ್ಲಿಯವರೆಗೆ ಬಯಲಾಗಿರುವ ಯಾವ ಹಗರಣವನ್ನು ತೆಗೆದುಕೊಂಡರೂ ಅದರಲ್ಲಿ ಉದ್ಯಮಿಗಳ ಪ್ರಮುಖ ಪಾತ್ರವನ್ನು ಕಾಣಬಹುದು. ಒಬ್ಬ ಉದ್ಯಮಿ ಹತ್ತುಕೋಟಿ ರೂಪಾಯಿ ಲಂಚ ನೀಡಿ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟ ಉಂಟುಮಾಡುವಂತಹ ಅಕ್ರಮ ವ್ಯವಹಾರ ನಡೆಸಿ ಸಾವಿರಾರು ಕೋಟಿ ರೂಪಾಯಿ ಲಾಭ ಪಡೆದಿರುತ್ತಾನೆ.
ಇದಕ್ಕೆ ಉತ್ತಮ ಉದಾಹರಣೆ 2ಜಿ ತರಂಗಾಂತರ ಹಗರಣ. ಇದರಲ್ಲಿ ಭಾಗಿಯಾಗಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಅತ್ಯಧಿಕವೆಂದರೆ  ಒಂದೆರಡು ಸಾವಿರಕೋಟಿ ಲಂಚ ಪಡೆದಿರಬಹುದು, ಆದರೆ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ ಅಂದಾಜು 1.76 ಲಕ್ಷ ಕೋಟಿ ರೂಪಾಯಿ ಅಲ್ಲವೇ? ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಿರುವ, ಬ್ಯಾಂಕ್ ಸಾಲ ಮುಳುಗಿಸಿರುವ, ಲಂಚ ಕೊಟ್ಟು ಸರ್ಕಾರದ ನೀತಿಗಳನ್ನೇ ಬದಲಾಯಿಸಿರುವ ಆರೋಪ ಹೊತ್ತ ನೂರಾರು ಉದ್ಯಮಿಗಳು ನಮ್ಮ ನಡುವೆ ಇದ್ದಾರೆ.
ಬಹಳಷ್ಟು ಉದ್ಯಮಿಗಳು ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲವನ್ನು ಮಾತ್ರವಲ್ಲ, ದೇಣಿಗೆಯನ್ನೂ ನೀಡಿದ್ದಾರೆ. ಅಣ್ಣಾ ಹಜಾರೆ ಅವರ ಸತ್ಯಾಗ್ರಹಕ್ಕಾಗಿ ಸಂಗ್ರಹ ಮಾಡಿದ ಹಣದ ಮೊತ್ತ 82.88 ಲಕ್ಷ ರೂಪಾಯಿ, ಅದರಲ್ಲಿ ಉದ್ಯಮಿಗಳಿಂದ ಸಂಗ್ರಹವಾದ ದೇಣಿಗೆಯ ಒಟ್ಟು ಮೊತ್ತ 46.50 ಲಕ್ಷ ರೂಪಾಯಿ.ಅಂದರೆ ಸತ್ಯಾಗ್ರಹಕ್ಕೆ ಖರ್ಚಾದ ಹಣದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಹಣ ನೀಡಿದವರು ಉದ್ಯಮಿಗಳು.

ಭ್ರಷ್ಟಾಚಾರದ ವಿರುದ್ಧದ ಹೋರಾಟದ ಗಮನವನ್ನು ಸಂಪೂರ್ಣವಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಕಡೆ ಕೇಂದ್ರೀಕರಿಸಿ ತಮ್ಮ ಕಡೆ ಯಾರೂ ಕಣ್ಣು ಹಾಯಿಸದಂತೆ ಮಾಡುವುದು ಇದರ ಹಿಂದಿನ ಹುನ್ನಾರವೇ?
ಚರ್ಚೆಯಾಗದೆ ಉಳಿದಿರುವ ಎರಡನೇ ಕ್ಷೇತ್ರ ಧಾರ್ಮಿಕ ಕೇಂದ್ರಗಳದ್ದು. ಕಳೆದೆರಡು ದಿನಗಳಲ್ಲಿ ದಿವಂಗತ ಸತ್ಯಸಾಯಿ ಬಾಬಾ ಅವರ ಖಾಸಗಿ ಕೋಣೆಯಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಹಾಗೂ ನಗದು ಹಣ ಪತ್ತೆಯಾಗಿರುವುದೇ ದೊಡ್ಡ ಸುದ್ದಿ. ಇವೆಲ್ಲವೂ ಅಕ್ರಮವಾಗಿ ಕೂಡಿಟ್ಟದ್ದಲ್ಲವೇ?
ಸಂಬಳಕ್ಕೆ ದುಡಿಯುವ ಒಬ್ಬ ಸಾಮಾನ್ಯ ನೌಕರ ತನ್ನ ಗಳಿಕೆಯ ಮೂರನೇ ಒಂದರಷ್ಟು ಭಾಗವನ್ನು ವರಮಾನ ತೆರಿಗೆಯಾಗಿ ಪಾವತಿಸದಿದ್ದರೆ ನೋಟಿಸ್ ನೀಡುವ ವರಮಾನ ತೆರಿಗೆ ಇಲಾಖೆಯ ಕಣ್ಣಿಗೆ ಸಾಯಿಬಾಬಾ ಅವರಲ್ಲಿದ್ದ ಅಕ್ರಮ ಗಳಿಕೆ ಕಣ್ಣಿಗೆ ಬಿದ್ದಿರಲಿಲ್ಲವೇ?
ದೇಶದ ಪ್ರಧಾನಿಯಿಂದ ಹಿಡಿದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವರೆಗೆ ಎಲ್ಲರನ್ನೂ ಭಕ್ತರಾಗಿ ಹೊಂದಿರುವ ಸಾಯಿಬಾಬಾ ಅವರನ್ನು ಮುಟ್ಟುವ ಧೈರ‌್ಯವಾದರೂ ಅವರಿಗೆಲ್ಲಿಂದ ಬರಬೇಕಿತ್ತು?
ಇದು ಸಾಯಿಬಾಬಾ ಒಬ್ಬರ ಕತೆಯಲ್ಲ, ನಮ್ಮ ಅನೇಕ `ದೇವ ಮಾನವರ~ ಕಪಾಟುಗಳಲ್ಲಿಯೂ `ಅಸ್ಥಿಪಂಜರ~ಗಳಿರುವ ಗುಮಾನಿ ಇದೆ. ಸರಿಯಾಗಿ ತನಿಖೆ ನಡೆಸಿದರೆ ನಮ್ಮ ಬಹುತೇಕ ಧಾರ್ಮಿಕ ಕೇಂದ್ರಗಳಲ್ಲಿಯೂ ಈ ರೀತಿಯ ಅಕ್ರಮ ಸಂಪತ್ತು ಸಂಗ್ರಹ ಬಯಲಾಗಬಹುದು.
ರಾಜಕಾರಣಿಗಳು ಕೂಡಾ ತಮ್ಮ ಅಕ್ರಮ ಗಳಿಕೆಯನ್ನು ಬಚ್ಚಿಡಲು ಮಠ-ಮಂದಿರಗಳೇ ಸುರಕ್ಷಿತ ಸ್ಥಳ ಎಂದು ಕಂಡುಕೊಂಡಿದ್ದಾರೆ. ಬಹಳಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿಧಿ ದಕ್ಷಿಣದ ಒಂದು ಪ್ರಸಿದ್ಧ ಮಠದಲ್ಲಿತ್ತಂತೆ.

ರಾಜ್ಯದ ಇನ್ನೊಬ್ಬ ಹಿರಿಯ ರಾಜಕಾರಣಿ ಮತ್ತು ಅವರ ಜಾತಿಯ ಮಠದ ಸ್ವಾಮೀಜಿಗಳ ನಡುವಿನ ಜಗಳಕ್ಕೂ ಅಕ್ರಮವಾಗಿ ಕೂಡಿಟ್ಟಿರುವ ಹಣವೇ ಕಾರಣ ಎಂದು ಬಲ್ಲವರು ಹೇಳುತ್ತಾರೆ.

ಮಠ-ಮಂದಿರಗಳಿಗೆ ಬಹಳಷ್ಟು ಸಮೀಪ ಇರುವ ರಾಜ್ಯ ಈಗಿನ ಆಡಳಿತಾರೂಢ ಪಕ್ಷದ ನಾಯಕರ ಮೇಲೂ ಇಂತಹದ್ದೇ ಆರೋಪಗಳಿವೆ. ಇದು ಕೇವಲ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಸೀಮಿತವಾಗಿಲ್ಲ.
ಮಸೀದಿ ಮತ್ತು ಚರ್ಚುಗಳಿಗೆ ವಿದೇಶದಿಂದ ಹೇರಳವಾಗಿ ಬರುವ ಹಣಕ್ಕೆ ಸಂಬಂಧಿಸಿದಂತೆಯೂ ಅಕ್ರಮ ಸಂಗ್ರಹದ ಆರೋಪ ಇದೆ. ಲೋಕಪಾಲ ಮಸೂದೆ ಬಗ್ಗೆ ಚರ್ಚೆ ನಡೆಸುವಾಗ ಸರ್ಕಾರ ಮತ್ತು ನಾಗರಿಕ ಸಮಿತಿ ಕೂಡಿಯೇ ಧಾರ್ಮಿಕ ಕ್ಷೇತ್ರಕ್ಕೆ ವಿನಾಯಿತಿ ನೀಡಿದಂತಿದೆ.
ಜನಲೋಕಪಾಲ ಮಸೂದೆಯ ಬಗ್ಗೆ ಇರುವ ಇನ್ನೊಂದು ಸಾಮಾನ್ಯ ಭಿನ್ನಾಭಿಪ್ರಾಯ -ಅದು ಕೇಳುತ್ತಿರುವ `ಸರ್ವಾಧಿಕಾರ~ದ ಬಗ್ಗೆ.
ಪ್ರಧಾನ ಮಂತ್ರಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ತನ್ನ ವ್ಯಾಪ್ತಿಗೆ ಒಳಪಡಿಸಬೇಕು. ಇದರ ಜತೆಯಲ್ಲಿ ಸಂಸತ್‌ನೊಳಗಿನ ಸಂಸದರ ನಡವಳಿಕೆಯನ್ನು ಕೂಡಾ ತನಿಖೆ ಮಾಡುವಂತಹ ಅಧಿಕಾರ ಇರಬೇಕು, ಕೇಂದ್ರ ತನಿಖಾದಳ (ಸಿಬಿಐ) ಮತ್ತು ಕೇಂದ್ರ ಜಾಗೃತ ಆಯೋಗಗಳನ್ನು (ಸಿವಿಸಿ) ಕೂಡಾ ತನ್ನ ಅಧೀನಕ್ಕೆ ಒಪ್ಪಿಸಬೇಕು...ಹೀಗೆ ಎಲ್ಲ ಅಧಿಕಾರವನ್ನು ಲೋಕಪಾಲರಿಗೆ ನೀಡಬೇಕು ಎಂದು ನಾಗರಿಕ ಸಮಿತಿ ಕೇಳುತ್ತಿದೆ.
ಪ್ರಜಾಪ್ರಭುತ್ವದ ಮೂಲ ಸಿದ್ಧಾಂತ ಅಧಿಕಾರ ವಿಕೇಂದ್ರೀಕರಣವೇ ಹೊರತು ಕೇಂದ್ರೀಕರಣ ಅಲ್ಲ. ಯಾವುದೇ ವ್ಯಕ್ತಿ ಇಲ್ಲವೇ ಸಂಸ್ಥೆಯಲ್ಲಿ ಅಧಿಕಾರ ಕೇಂದ್ರೀಕರಣವಾಗಬಾರದು ಎಂದು ಹೇಳುತ್ತದೆ ಪ್ರಜಾಪ್ರಭುತ್ವ. ಇದು ಸಂವಿಧಾನದ ಆಶಯ ಕೂಡಾ ಹೌದು.
ಎಲ್ಲವನ್ನೂ ಲೋಕಪಾಲರ ಸುಪರ್ದಿಗೆ ಒಪ್ಪಿಸುವುದರ ಬದಲಿಗೆ ಇದ್ದ ಜಾಗದಲ್ಲಿಯೇ ಅವುಗಳು ಇನ್ನಷ್ಟು ಸ್ವತಂತ್ರವಾಗಿ ಮತ್ತು ಕ್ಷಮತೆಯಿಂದ ಕಾರ‌್ಯನಿರ್ವಹಿಸುವಂತೆ ಮಾಡಬೇಕಾಗಿದೆ. ಇದಕ್ಕಾಗಿ ಬೇರೇನೂ ಮಾಡಬೇಕಾಗಿಲ್ಲ.
ಸರ್ಕಾರಿಯಾ ಆಯೋಗ, ರಾಷ್ಟ್ರೀಯ ಸಂವಿಧಾನ ಕಾರ‌್ಯನಿರ್ವಹಣೆಯ ಪುನರ್‌ಪರಿಶೀಲನಾ ಆಯೋಗ ಮತ್ತು ಚುನಾವಣಾ ಆಯೋಗದ ಶಿಫಾರಸುಗಳು ಮತ್ತು ಕಾಲಕಾಲಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ಜಾರಿಗೆ ತಂದರೆ ಸಾಕು.
ಇವುಗಳಲ್ಲಿ ಅತೀ ತುರ್ತಾಗಿ ನಡೆಯಬೇಕಾಗಿರುವುದು ಚುನಾವಣಾ ಸುಧಾರಣೆ. ಪ್ರಾಮಾಣಿಕರು, ಸಜ್ಜನರು, ಜನಪರ ಕಾಳಜಿ ಉಳ್ಳವರು ಚುನಾವಣಾ ರಾಜಕೀಯಕ್ಕೆ ಇಳಿಯಲಾಗದ ಸ್ಥಿತಿಯೇ ಭಾರತದ ಸಂಸದೀಯ ಪ್ರಜಾಪ್ರಭುತ್ವಕ್ಕೆ ತಗಲಿರುವ ರೋಗಕ್ಕೆ ಮೂಲ ಕಾರಣ.
ಕ್ರಿಮಿನಲ್ ಹಿನ್ನೆಲೆಯ 150 ಸದಸ್ಯರು ಮತ್ತು 300 ಕೋಟ್ಯಧಿಪತಿ ಸದಸ್ಯರನ್ನೊಳಗೊಂಡ ಈಗಿನ ಲೋಕಸಭೆ ತಮ್ಮ ಕೊರಳಿಗೆ ಉರುಳಾಗಲಿರುವ ಲೋಕಪಾಲ ಮಸೂದೆಗೆ ಕಣ್ಣುಮುಚ್ಚಿ ಅಂಗೀಕಾರ ನೀಡಬಹುದೆಂದು ತಿಳಿದುಕೊಂಡವರು ಮೂರ್ಖರು ಅಷ್ಟೆ.

ಇದು ಗೊತ್ತಿದ್ದೂ  ಉಪವಾಸ ಸತ್ಯಾಗ್ರಹದ ಮೂಲಕ ಏಕಾಏಕಿ ಸರ್ಕಾರವನ್ನು ಮಣಿಸುತ್ತೇವೆಂದು ಹೊರಡುವುದು ವ್ಯರ್ಥ ದೇಹ ದಂಡನೆಯಾಗಬಹುದೇ ಹೊರತು ಯಶಸ್ಸಿನ ಫಲ ಸಿಗಲಾರದು.
ಮೊದಲು ನಡೆಯಬೇಕಾಗಿರುವುದು ಭ್ರಷ್ಟಾಚಾರವನ್ನು ತಡೆಯುವ ಪ್ರಯತ್ನ, ಭ್ರಷ್ಟರನ್ನು ಶಿಕ್ಷಿಸುವುದು ನಂತರದ ಕೆಲಸ. ಈ ಹಿನ್ನೆಲೆಯಲ್ಲಿ ಭ್ರಷ್ಟರನ್ನು ಶಿಕ್ಷಿಸಲು ಲೋಕಪಾಲರನ್ನು ನೇಮಿಸುವ ಮೊದಲು ಭ್ರಷ್ಟರ ಹುಟ್ಟಿಗೆ ಕಾರಣವಾಗಿರುವ ವ್ಯವಸ್ಥೆಯ ಸುಧಾರಣೆಯ ಬಗ್ಗೆ ನಾಗರಿಕ ಸಮಿತಿ ಯೋಚಿಸಬೇಕಾಗಿತ್ತು.
ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಒಂದು ಸ್ವಚ್ಛ, ಪ್ರಾಮಾಣಿಕ ಮತ್ತು ಸೇವಾನಿಷ್ಠ ಸಂಸದರನ್ನೊಳಗೊಂಡ ಸಂಸತ್ ರಚನೆಗೊಳ್ಳುವಂತೆ ಮಾಡಬೇಕಾಗಿತ್ತು.
ಇದು ಅಸಾಧ್ಯವಾದ ಕೆಲಸ ಅಲ್ಲ. ಈಗಿನ ಪ್ರಜಾಪ್ರತಿನಿಧಿ ಕಾಯಿದೆ ಪ್ರಕಾರ ನ್ಯಾಯಾಲಯಗಳಲ್ಲಿ ಮೇಲ್ಮನವಿ ಇತ್ಯರ್ಥಕ್ಕೆ ಬಾಕಿ ಇರುವ ವರೆಗೆ ಎಂತಹ ಘನಘೋರ ಅಪರಾಧಿ ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ.
ಚುನಾವಣಾ ಕಾನೂನಿನಲ್ಲಿರುವ ಈ ಲೋಪದ ನಿವಾರಣೆಗಾಗಿಯೇ ಚುನಾವಣಾ ಆಯೋಗ ಪ್ರಮುಖ ಸುಧಾರಣಾ ಕ್ರಮವನ್ನು ಶಿಫಾರಸು ಮಾಡಿದೆ. `ಐದು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಅರ್ಹವಾಗಿರುವ ಅಪರಾಧಗಳಲ್ಲಿ ಆರೋಪಿಯಾಗಿರುವವರು, ಒಂದೊಮ್ಮೆ ಆ ಪ್ರಕರಣದ ತೀರ್ಪಿನ ವಿರುದ್ದದ ಮೇಲ್ಮನವಿ ಇತ್ಯರ್ಥಕ್ಕೆ ಬಾಕಿ ಇದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ~ ಎನ್ನುತ್ತದೆ ಈ ಸುಧಾರಣಾ ಕ್ರಮ.
ಇದೊಂದು ಜಾರಿಯಾದರೆ ಈಗಿನ ಲೋಕಸಭೆಯಲ್ಲಿರುವ ಸುಮಾರು 150 ಕ್ರಿಮಿನಲ್ ಹಿನ್ನೆಲೆಯ ಸದಸ್ಯರು ಜಾಗ ಖಾಲಿ ಮಾಡಬೇಕಾಗುತ್ತದೆ. ಮುಂದಿನ ಚುನಾವಣೆಗಳಲ್ಲಿ ಒಂದಷ್ಟು ಸಜ್ಜನರು ಸಂಸತ್ ಪ್ರವೇಶಿಸುವ ಪ್ರಯತ್ನ ಮಾಡಬಹುದು. ಆಗ ಮಾತ್ರ ಜನಪರವಾದ ಕಾನೂನುಗಳ ರಚನೆ ಮತ್ತು ಅನುಷ್ಠಾನವನ್ನು ನಿರೀಕ್ಷಿಸಲು ಸಾಧ್ಯ.