Monday, February 28, 2011

ಗೋಧ್ರಾ ಹತ್ಯಾಕಾಂಡದ ತೀರ್ಪು ಹುಟ್ಟಿಸಿರುವ ಪ್ರಶ್ನೆಗಳು

ಗೋಧ್ರಾ ರೈಲು ಹತ್ಯಾಕಾಂಡದ ಬಗ್ಗೆ ಗುಜರಾತ್‌ನ ವಿಶೇಷ ತ್ವರಿತ ನ್ಯಾಯಾಲಯ ನೀಡಿರುವ ತೀರ್ಪನ್ನು ಹೇಗೆಂದು ಅರ್ಥಮಾಡಿಕೊಳ್ಳುವುದು. ಅಪರಾಧಿಗಳಿಗೆ ಶಿಕ್ಷೆಯಾಯಿತೆಂದೇ? ನಿರಪರಾಧಿಗಳು ಬಿಡುಗಡೆಯಾದರೆಂದೇ? ಕೀವು ತುಂಬಿದ ವ್ರಣದಂತೆ ಕಳೆದ ಒಂಬತ್ತು ವರ್ಷಗಳಿಂದ ಒಳಗಿಂದೊಳಗೆ ಹಿಂದೂ- ಮುಸ್ಲಿಂ ಸಮುದಾಯಗಳೆರಡನ್ನೂ ಹಿಂಸಿಸುತ್ತಿದ್ದ  ಒಂದು ಗಾಯವಾದರೂ ಕೊನೆಗೂ ಗುಣವಾಯಿತೆಂದೇ? ಸಾಮಾನ್ಯವಾಗಿ ನ್ಯಾಯಾಲಯದ ತೀರ್ಪುಗಳು ಪ್ರಕರಣವೊಂದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರದಂತಿರುತ್ತವೆ.
ಆದರೆ ಗುಜರಾತ್ ವಿಶೇಷ ತ್ವರಿತ ನ್ಯಾಯಾಲಯದ ತೀರ್ಪಿನ ನಂತರವೂ ಬಹಳಷ್ಟು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ. ಇದಕ್ಕಿಂತಲೂ ಮುಖ್ಯವಾಗಿ ಹಿಂದೆ ಸುಪ್ರೀಂ ಕೋರ್ಟಿನಿಂದಲೂ ಟೀಕೆಗೊಳಗಾಗಿದ್ದ ಮತ್ತು ‘ಪೂರ್ವಗ್ರಹಪೀಡಿತ, ರಾಜಕೀಯ ಪ್ರೇರಿತ ಮತ್ತು ಅಡ್ಡಕಸುಬಿ’ ಎಂಬ ಆರೋಪ ಹೊತ್ತಿರುವ ಗುಜರಾತ್ ಪೊಲೀಸ್ ಇಲಾಖೆಯ ಬಗ್ಗೆ ಇನ್ನಷ್ಟು ಸಂಶಯ ಮೂಡುವಂತಾಗಿದೆ.
ಕರಸೇವಕರನ್ನೊಳಗೊಂಡಂತೆ 59 ಪ್ರಯಾಣಿಕರ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆಗಿಂತಲೂ ಉಗ್ರವಾದ ಶಿಕ್ಷೆಯೇನಾದರೂ ಇದ್ದರೆ ಅದು ಕೂಡಾ ಕಡಿಮೆಯೇ. ಆದರೆ ಈಗ ಅಪರಾಧಿಗಳೆನಿಸಿಕೊಂಡವರೆಲ್ಲರೂ ತಪ್ಪಿತಸ್ಥರೇ? ಅಪರಾಧಿಗಳೆಲ್ಲರಿಗೂ ಶಿಕ್ಷೆಯಾಗಿದೆಯೇ? ಬಿಡುಗಡೆಯಾಗಿರುವವರೆಲ್ಲ ನಿರಪರಾಧಿಗಳೇ? ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳಲು  ಕಾರಣಗಳಿವೆ.
ಮೊದಲನೆಯದಾಗಿ ಗುಜರಾತ್ ಪೊಲೀಸರು ಪ್ರಾರಂಭದಲ್ಲಿ ಸಲ್ಲಿಸಿದ್ದ ಆರೋಪಪಟ್ಟಿಯ ಪ್ರಕಾರ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದ ಆರೋಪಿಗಳ ಸಂಖ್ಯೆ 135, ಅವರಲ್ಲಿ 22 ಮಂದಿ ಕಳೆದ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದಾರೆ. ಒಂದಿಬ್ಬರು ಸತ್ತಿದ್ದಾರೆ. ಇನ್ನು ಒಂದಷ್ಟು ಮಂದಿಯನ್ನು ಹಿಂದೆಯೇ ಬಿಡುಗಡೆ ಮಾಡಲಾಗಿದೆ.
ಉಳಿದವರಲ್ಲಿ 64 ಮಂದಿ 8-9 ವರ್ಷ ಜೈಲಲ್ಲಿದ್ದು ಈಗ ಖುಲಾಸೆಗೊಂಡಿದ್ದಾರೆ. ಕೊನೆಗೆ ಅಪರಾಧಿ ಸ್ಥಾನದಲ್ಲಿ ಉಳಿದುಕೊಂಡಿದ್ದು ಕೇವಲ 31 ಮಂದಿ. ಈ ಎಲ್ಲ ಆರೋಪಿಗಳ ವಿರುದ್ಧ ಪೊಲೀಸರು ಪ್ರಾರಂಭದಲ್ಲಿ ಪೋಟಾ ಕಾಯಿದೆಯಡಿಯೂ ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ ಮೂರು ವರ್ಷಗಳ ನಂತರ ಅವುಗಳನ್ನು ಪರಿಶೀಲಿಸಿದ ಕೇಂದ್ರ ಪರಿಶೀಲನಾ ಸಮಿತಿ, ಅದರಲ್ಲಿನ ಯಾವ ಆರೋಪವೂ ಪೋಟಾ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ವರದಿ ನೀಡಿದ್ದ ಕಾರಣ ಅವುಗಳನ್ನು ಕೈಬಿಡಲಾಗಿತ್ತು.
ಸದ್ಯಕ್ಕೆ ಖುಲಾಸೆಗೊಂಡ 64 ಮಂದಿ ತಮಗೆ ಸಿಕ್ಕ ಹೊಸ ಸ್ವಾತಂತ್ರ್ಯದ ಸಂಭ್ರಮದಲ್ಲಿರುವುದು ನಿಜ (ಎರಡೂ ಕಡೆಯವರೂ ಮೇಲ್ಮನವಿ ಸಲ್ಲಿಸುವುದು ಖಾತರಿಯಾಗಿರುವ ಕಾರಣ ಈ ಸಂತಸ ಕೂಡಾ  ಶಾಶ್ವತವಾದುದೇನಲ್ಲ). ಆದರೆ ಒಬ್ಬ ವ್ಯಕ್ತಿಯ ಅಪರಾಧ- ನಿರಪರಾಧಗಳನ್ನು ಸಾಬೀತುಪಡಿಸಲು ಒಂಬತ್ತು ವರ್ಷಗಳು ಬೇಕೇ? ಅದೂ ತನ್ನ ಉತ್ತಮ ಆಡಳಿತಕ್ಕಾಗಿ ನಂಬರ್ ಒನ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವವರ ರಾಜ್ಯದಲ್ಲಿ. ಗುಜರಾತ್ ಪೊಲೀಸರ ಕಾರ್ಯನಿರ್ವಹಣೆ ಬಗ್ಗೆ ಸಾಕ್ಷಾತ್ ಸುಪ್ರೀಂ ಕೋರ್ಟ್  ಅಪನಂಬಿಕೆ ವ್ಯಕ್ತಪಡಿಸಿದೆ. ನಿವೃತ್ತರಾದ ಹಿರಿಯ ನ್ಯಾಯಮೂರ್ತಿಗಳ ನೇತೃತ್ವದ ಮಾನವ ಹಕ್ಕುಗಳ ಸಂಘಟನೆಗಳು ಕೂಡಾ ಅಲ್ಲಿನ ಪೊಲೀಸರ ವಿರುದ್ದ ‘ಆರೋಪಪಟ್ಟಿ’ ಸಲ್ಲಿಸಿವೆ. ಗೋಧ್ರಾ ಹತ್ಯಾಕಾಂಡದ ಆರೋಪಿಗಳಲ್ಲಿ 45 ಮಂದಿ ಈ ತನಿಖೆಯ ಬಗ್ಗೆ ಲಿಖಿತ ಹೇಳಿಕೆಯಲ್ಲಿ  ಸಂಶಯ ವ್ಯಕ್ತಪಡಿಸಿದ್ದರು. ತನಿಖೆಯೇ ಹೀಗಾದರೆ?
ಎರಡನೆಯದಾಗಿ ಪ್ರಮುಖ ಆರೋಪಿಗಳಾದ ಮೌಲ್ವಿ ಸಯೀದ್ ಉಮರ್ಜಿ ಮತ್ತು ನಗರಸಭೆಯ ಮಾಜಿ ಅಧ್ಯಕ್ಷ ಮೊಹಮ್ಮದ್ ಅಬ್ದುಲ್ಲಾ ಕಲೋಟಾ ಅವರನ್ನು ಖುಲಾಸೆಗೊಳಿಸಲಾಗಿದೆ. ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬಂಧಿತ 94 ಆರೋಪಿಗಳಲ್ಲಿ ಅಲ್ಲಿನ ಸಮಾಜದಲ್ಲಿ ಗಣ್ಯರೆನಿಸಿಕೊಂಡವರು ಇದ್ದದ್ದು ಇವರಿಬ್ಬರೇ ಎನ್ನುವುದು ಗಮನಾರ್ಹ. ಉಳಿದವರಲ್ಲಿ ಹೆಚ್ಚಿನವರು ಸ್ಥಳೀಯ ಪೊಲೀಸ್‌ಠಾಣೆಯಲ್ಲಿ ಹಳೆಯ ಕ್ರಿಮಿನಲ್ ಚಟುವಟಿಕೆಯ ದಾಖಲೆ ಹೊಂದಿದ್ದವರು.
ಸಾಮಾನ್ಯವಾಗಿ ಇಂತಹವರು ವೈಯುಕ್ತಿಕ ಮಟ್ಟದ ದುಷ್ಕೃತ್ಯಗಳನ್ನು ಏಕಾಂಗಿಗಳಾಗಿ ಎಸಗಬಲ್ಲರು. ಆದರೆ ಗೋಧ್ರಾಹತ್ಯಾಕಾಂಡದಂತಹ ದೊಡ್ಡಮಟ್ಟದ ದುಷ್ಕೃತ್ಯವನ್ನು ನಾಯಕನಿಲ್ಲದೆ ಇಂತಹ ಅಡ್ಡಕಸುಬಿ ದುಷ್ಕರ್ಮಿಗಳು ನಡೆಸಲು ಸಾಧ್ಯವೇ? ಹಾಗಿದ್ದರೆ ಅವರಿಗೊಬ್ಬ ಗ್ಯಾಂಗ್ ಲೀಡರ್ ಇರಬೇಕಲ್ಲ? ಅವನು ಯಾರು? ಎಲ್ಲಿದ್ದಾನೆ? ಕಳೆದ ಒಂಬತ್ತು ವರ್ಷಗಳಿಂದ ಈ ಪ್ರಶ್ನೆಗೆ ಉತ್ತರ ಹುಡುಕಲು ಗುಜರಾತ್ ಪೊಲೀಸರಿಗೆ ಸಾಧ್ಯವಾಗಿಲ್ಲ.
ಗೋಧ್ರಾ ಘಟನೆಯ ಒಂದು ವರ್ಷದ ನಂತರ ಮೌಲ್ವಿ ಸಯೀದ್ ಉಮರ್ಜಿ ಅವರನ್ನು ಬಂಧಿಸಿದಾಗ ಗೋಧ್ರಾ ಮಾತ್ರವಲ್ಲ, ಇಡೀ ಗುಜರಾತ್‌ನ ಮುಸ್ಲಿಮರು ಆಘಾತಕ್ಕೀಡಾಗಿದ್ದರು. ವೃತ್ತಿಯಲ್ಲಿ ಮರದ ವ್ಯಾಪಾರಿಯಾಗಿರುವ ಉಮರ್ಜಿ ಗೋಧ್ರಾ ಪ್ರದೇಶದ ದೇವ್‌ಬಂದಿ- ತಬ್ಲೀಗ್ ಜಮಾತ್ ಚಳವಳಿಯ ಪ್ರಮುಖ ನಾಯಕ. ಆರೋಪಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗಾಂಚಿ ಮುಸ್ಲಿಮರು ಈ ಸಂಘಟನೆಯ ಬೆಂಬಲಿಗರು. ಬಂಧಿತ ಆರೋಪಿಗಳಲ್ಲಿಯೂ ಬಹಳಷ್ಟು ಮಂದಿ ಈ ಸಂಘಟನೆಯ ಜತೆಯಲ್ಲಿ ಸಂಪರ್ಕ ಹೊಂದಿದ್ದವರು. ಈ ಸಂಬಂಧದಿಂದಾಗಿಯೇ ಉಮರ್ಜಿ ದೇಶ- ವಿದೇಶಗಳಿಂದ ಹಣ ಸಂಗ್ರಹಿಸಿ  ಗೋಧ್ರಾ ಘಟನೆಯ ಆರೋಪಿಗಳ ಕುಟುಂಬಕ್ಕೆ ನೀಡುತ್ತಿದ್ದರು. ಗೋಧ್ರಾ ಘಟನೆಯ ನಂತರ ಅಲ್ಲಿ ಶಾಂತಿ ಸ್ಥಾಪನೆಗೆ ಅವರು ಓಡಾಡಿದ್ದರು, ಮುಖ್ಯಮಂತ್ರಿ ನರೇಂದ್ರಮೋದಿ ಗೋಧ್ರಾಕ್ಕೆ ಭೇಟಿ ನೀಡಿದಾಗಲೂ ಜತೆಯಲ್ಲಿದ್ದರು.
ಇಂತಹ ಉಮರ್ಜಿ ಒಂದು ಹೀನಕೃತ್ಯದ ಹಿಂದಿನ ಸಂಚುಕೋರ ಎಂದು ಪೊಲೀಸರು ಹೇಳಿದಾಗ ಗುಜರಾತ್ ಬೆಚ್ಚಿಬಿದ್ದಿತ್ತು. ತನಿಖೆಯ ಕಾಲದಲ್ಲಿ ಪೊಲೀಸರು ಸೋರಿಬಿಡುತ್ತಿದ್ದ ಮಾಹಿತಿ ಆಧರಿಸಿ ಪತ್ರಿಕೆಗಳು ಮಾಡುವ ವರದಿಗಳು ಮೌಲ್ವಿ ಸಯೀದ್ ಉಮರ್ಜಿ ಅವರನ್ನು ಅಂತರರಾಷ್ಟ್ರೀಯ ಮಟ್ಟದ ಭಯೋತ್ಪಾದಕನಂತೆ ಚಿತ್ರಿಸಿತ್ತು. ತಾಲಿಬಾನ್ ನಾಯಕ ಉಮರ್ ಅಬ್ದುಲ್ಲಾ ಜತೆ ಉಮರ್ಜಿ ಸಂಪರ್ಕ ಹೊಂದಿದ್ದರೆಂಬ ವದಂತಿಯೂ ಹರಡಿತ್ತು. ಇವರ ಬಂಧನಕ್ಕೆ ಕಾರಣವಾಗಿದ್ದು ಬಂಧಿತ ಜಬೀರ್ ಬಿನಾಯಮಿನ್ ಬೆಹೆರಾ ತಪ್ಪೊಪ್ಪಿಗೆಯಲ್ಲಿ ನೀಡಿದ್ದ ಮಾಹಿತಿ.
‘ಗೋಧ್ರಾ ಹತ್ಯಾಕಾಂಡದ ಹಿಂದಿನ ದಿನ 2002ರ ಫೆಬ್ರುವರಿ 26ರಂದು ರಾತ್ರಿ 9.30 ಗಂಟೆಗೆ ರೈಲ್ವೆನಿಲ್ದಾಣದ ಪಕ್ಕದಲ್ಲಿಯೇ ಇರುವ ಅಮನ್ ಅತಿಥಿಗೃಹದಲ್ಲಿ ಸಂಚಿನ ರೂವಾರಿಗಳು ಸೇರಿದ್ದರು. ಅಲ್ಲಿಗೆ ತಮ್ಮ ಸಹಚರರನ್ನು ಕಳುಹಿಸಿ ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿಯನ್ನೇ ಗುರಿಯಾಗಿಸಿಕೊಂಡು ಬೆಂಕಿ ಹಚ್ಚುವಂತೆ ತಿಳಿಸಿದ್ದರು’ ಎಂದು ಆ ಸಭೆಯಲ್ಲಿದ್ದ ಬೆಹೆರಾ ಪೊಲೀಸರಿಗೆ ತಿಳಿಸಿದ್ದೇ ಉಮರ್ಜಿ ಬಂಧನಕ್ಕೆ ಕಾರಣ. ಈಗ ನ್ಯಾಯಾಲಯ ಮುಖ್ಯ ಆರೋಪಿಯಾಗಿದ್ದ ಉಮರ್ಜಿ ಅವರನ್ನು ಆರೋಪದಿಂದ ಖುಲಾಸೆಗೊಳಿಸಿದೆ. ಆದರೆ ‘ಗೋಧ್ರಾ ಹತ್ಯಾಕಾಂಡ ಅಪಘಾತ ಅಲ್ಲ, ಪೂರ್ವಯೋಜಿತ ಸಂಚು’ ಎಂದು ತೀರ್ಪು ನೀಡಿದೆ. ಮುಖ್ಯ ಸಂಚುಕೋರನೆಂಬ ಆರೋಪ ಹೊತ್ತ ಉಮರ್ಜಿಯ ಖುಲಾಸೆಯಿಂದಾಗಿ ಗೋಧ್ರಾ ಹತ್ಯಾಕಾಂಡ ಸಂಚಿನ ಫಲ ಎನ್ನುವುದಕ್ಕೆ ಇದ್ದ ಪ್ರಬಲ ಸಮರ್ಥನೆಯೊಂದು ದುರ್ಬಲಗೊಂಡಂತಾಗಲಿಲ್ಲವೇ?
ಮೂರನೆಯದಾಗಿ ಗೋಧ್ರಾ ಹತ್ಯಾಕಾಂಡದ ಬಗ್ಗೆ ನಡೆದ ಮೂರು ಬಗೆಯ ತನಿಖೆ ಸೃಷ್ಟಿಸಿರುವ ಗೊಂದಲ. ಅಪರಾಧಗಳನ್ನು ಮುಚ್ಚಿಹಾಕಲು ಸ್ವತಂತ್ರ ಭಾರತದ ರಾಜಕಾರಣಿಗಳು ಕಂಡುಕೊಂಡ ಸುಲಭದ ಉಪಾಯ ಎಂದರೆ ಒಂದೇ ಪ್ರಕರಣದ ಬಗ್ಗೆ ಹಲವು ಬಗೆಯ ತನಿಖೆಗಳಿಗೆ ಅವಕಾಶ ಮಾಡಿಕೊಡುವುದು (ಇತ್ತೀಚಿನ ಉದಾಹರಣೆ 2ಜಿ ತರಂಗಾಂತರ ಹಗರಣ). ಈ ತನಿಖಾ ಸಂಸ್ಥೆಗಳು ಪರಸ್ಪರ ವಿರೋಧಾಭಾಸಗಳಿಂದ ಕೂಡಿರುವ ವರದಿಗಳನ್ನು ನೀಡಿ ಗೊಂದಲದ ವಾತಾವರಣವನ್ನು ನಿರ್ಮಿಸುತ್ತದೆ. ಅಷ್ಟರಲ್ಲಿ ಅನ್ಯಾಯಕ್ಕೀಡಾದವರಲ್ಲಿ ದಣಿವು ಕಾಣಿಸಿಕೊಳ್ಳುವುದರಿಂದ ಅವರಲ್ಲಿ ಹೋರಾಟದ ಉತ್ಸಾಹ ಉಳಿದಿರುವುದಿಲ್ಲ, ಸಾಮಾನ್ಯ ಜನತೆಯ ನೆನೆಪಿನ ಶಕ್ತಿಯೂ ಕುಂದಿರುತ್ತದೆ. ‘ಆದದ್ದು ಆಗಿಹೋಯಿತು. ಹಳೆಯದನ್ನು ಕೆದಕುವುದು ಬೇಡ, ಮುಂದಿನ ದಾರಿ ನೋಡುವ’ ಎನ್ನುವ ಬುದ್ಧಿಮಾತುಗಳು ಎಲ್ಲೆಡೆ ಕೇಳತೊಡಗುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ಇವುಗಳಲ್ಲೆದರ ನಡುವೆ ಸತ್ಯ ಎಲ್ಲೋ ಮರೆಯಾಗಿ ಬಿಡುತ್ತದೆ.
ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಗೊಂಡ ಸಿಬಿಐ ಮಾಜಿ ನಿರ್ದೇಶಕ ರಾಘವನ್ ನೇತೃತ್ವದ ವಿಶೇಷ ತನಿಖಾದಳಕ್ಕಿಂತ ಮೊದಲು ಎರಡು ಆಯೋಗಗಳು ಗೋಧ್ರಾ ಹತ್ಯಾಕಾಂಡದ ತನಿಖೆ ನಡೆಸಿದ್ದವು. ಮೊದಲನೆಯದು ಗುಜರಾತ್ ಸರ್ಕಾರವೇ ನೇಮಿಸಿದ್ದ ನ್ಯಾಯಮೂರ್ತಿಗಳಾದ ಜಿ.ಟಿ. ನಾನಾವತಿ ನೇತೃತ್ವದ ತನಿಖಾ ಆಯೋಗ. 2008ರಲ್ಲಿ ವರದಿ ನೀಡಿದ ಈ ಆಯೋಗ ‘ಗೋಧ್ರಾ ಹತ್ಯಾಕಾಂಡ ಒಂದು ಪೂರ್ವನಿಯೋಜಿತ ಸಂಚು, ಅದು ಅಪಘಾತ ಅಲ್ಲ’ ಎಂದು ಹೇಳಿತ್ತು. ಗೋಧ್ರಾ ಘಟನೆಯ ನಂತರ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಯ ನಿಯಂತ್ರಣದಲ್ಲಿ ಮುಖ್ಯಮಂತ್ರಿ ನರೇಂದ್ರಮೋದಿಯವರಿಂದ ಕರ್ತವ್ಯ ಚ್ಯುತಿ ನಡೆದಿದೆ ಎಂಬ ಆರೋಪವನ್ನು ಕೂಡಾ ನಾನಾವತಿ ಆಯೋಗ ತಳ್ಳಿಹಾಕಿತ್ತು.
ಆದರೆ ನಾನಾವತಿ ಆಯೋಗ ಕಾರ್ಯನಿರ್ವಹಿಸುತ್ತಿದ್ದ ಕಾಲದಲ್ಲಿಯೇ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರು  ನ್ಯಾಯಮೂರ್ತಿ ಯು.ಸಿ.ಬ್ಯಾನರ್ಜಿ ನೇತೃತ್ವದ ತನಿಖಾ ಆಯೋಗವನ್ನು ರಚಿಸಿದ್ದರು. 2005ರಲ್ಲಿ ವರದಿ ನೀಡಿದ ಬ್ಯಾನರ್ಜಿ ಅವರು,  ‘ರೈಲಿಗೆ ಹತ್ತಿಕೊಂಡ ಬೆಂಕಿ ಸಂಚಿನ ಫಲ ಅಲ್ಲ, ಅದೊಂದು ಅಪಘಾತ’ ಎಂದು ಹೇಳಿದ್ದರು. ಆದರೆ ಆ ಆಯೋಗವನ್ನು ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಲಾಲುಪ್ರಸಾದ್ ರಚಿಸಿದ್ದರು ಎನ್ನುವ ಕಾರಣಕ್ಕೆ ನ್ಯಾಯಮೂರ್ತಿ ಬ್ಯಾನರ್ಜಿ ವರದಿಯನ್ನು ಟೀಕಿಸಿದವರೇ ಹೆಚ್ಚು.
ಆದರೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಇಂತಹದ್ದೊಂದು ದೊಡ್ಡ ದುರಂತದ ಬಗ್ಗೆ ಆ ಕಾಲದ ರೈಲ್ವೆ ಸಚಿವ ನಿತೀಶ್‌ಕುಮಾರ್ ಯಾಕೆ ತನಿಖೆಗೆ ಆದೇಶ ನೀಡಿಲ್ಲ ಎನ್ನುವುದು ಈಗಲೂ ನಿಗೂಢವಾಗಿಯೇ ಉಳಿದಿದೆ. ಈ ವಿವಾದಗಳಿಂದಾಗಿ ಕೊನೆಗೆ ಗುಜರಾತ್ ಹೈಕೋರ್ಟ್ ಕೂಡಾ ತೀರ್ಪು ನೀಡಿ ‘ಬ್ಯಾನರ್ಜಿ ಆಯೋಗದ ರಚನೆಯೇ ಸಂವಿಧಾನ ವಿರೋಧಿ’ ಎಂದು ಹೇಳಿತ್ತು. ಈ ಕಾರಣದಿಂದಾಗಿ ಬ್ಯಾನರ್ಜಿ ಆಯೋಗದ ತನಿಖಾ ವರದಿಯನ್ನೂ ಯಾರೂ ಚರ್ಚೆಗೆ ಎತ್ತಿಕೊಳ್ಳದಿದ್ದರೂ, ಅದು ಗೋಧ್ರಾ ಹತ್ಯಾಕಾಂಡದ ಕಾರಣಗಳ ಬಗ್ಗೆ ಒಂದಷ್ಟು ಗೊಂದಲಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು.
ಗೋಧ್ರಾ ಹತ್ಯಾಕಾಂಡವನ್ನು ಸಂಚು ಎಂದು ಹೇಳಿದ ವಿಶೇಷ ನ್ಯಾಯಾಲಯದ ತೀರ್ಪು ಒಂದು ರೀತಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಪಾಲಿನ ಗೆಲುವು. ಆಶ್ಚರ್ಯವೆಂದರೆ ಮೋದಿ ಅವರು ಈ ಗೆಲುವನ್ನು ಕುಣಿದಾಡಿ ಆಚರಿಸಿದ ಹಾಗೆ ಕಾಣಲಿಲ್ಲ. ಈ ತೀರ್ಪು ಬಗ್ಗೆ ಕಾಟಾಚಾರದ ಪ್ರತಿಕ್ರಿಯೆ ನೀಡಿ ಅವರು ಮೌನ ತಾಳಿದ್ದಾರೆ. ಯಾಕೆ? ವಿಶೇಷ ತನಿಖಾದಳ ಗೋಧ್ರಾವನ್ನೂ ಒಳಗೊಂಡಂತೆ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ಆರು ಪ್ರಮುಖ ಪ್ರಕರಣಗಳ ತನಿಖೆ ನಡೆಸಿದೆ. ಇತ್ತೀಚೆಗೆ ಇಂಗ್ಲಿಷ್ ವಾರಪತ್ರಿಕೆಯೊಂದು ಮಾಡಿರುವ ‘ಸ್ಕೂಪ್’ ವರದಿ ಪ್ರಕಾರ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳಲ್ಲಿ ನರೇಂದ್ರಮೋದಿಯವರು ಅಪರಾಧಿ ಎಂದು  ಎಸ್‌ಐಟಿ ಅಭಿಪ್ರಾಯಪಟ್ಟಿದೆಯಂತೆ.
ದಾಖಲೆಗಳ ನಾಶ, ಕೋಮುದ್ವೇಷ ಪ್ರಚೋದಿಸುವ ಭಾಷಣ, ಗಲಭೆಯ ಸಮಯದಲ್ಲಿ ಪೊಲೀಸ್ ನಿಯಂತ್ರಣಾ ಕೊಠಡಿಯಲ್ಲಿ ಅಕ್ರಮವಾಗಿ ಸೇರಿಕೊಂಡು ಆದೇಶ ನೀಡುತ್ತಿದ್ದ ಸಚಿವರು, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸಂಘ ಪರಿವಾರದ ಸದಸ್ಯರ ನೇಮಕ, ನಿಷ್ಪಕ್ಷಪಾತ ನಿಲುವಿನ ಪೊಲೀಸ್ ಅಧಿಕಾರಿಗಳಿಗೆ ಕಿರುಕುಳ... ಇವು ತನಿಖೆಯಿಂದ ಎಸ್‌ಐಟಿ ಕಂಡುಕೊಂಡ ಮೋದಿಯವರ ‘ಅಪರಾಧ’ಗಳಂತೆ. ಸದ್ಯಕ್ಕೆ ಕಳೆದ ವರ್ಷದ ಮೇ 12 ರಂದು ಎಸ್‌ಐಟಿ ಸಲ್ಲಿಸಿದ್ದ 600 ಪುಟಗಳ ಈ ವರದಿ ಸುಪ್ರೀಂ ಕೋರ್ಟ್‌ನ ಕಪಾಟಿನಲ್ಲಿ ಭದ್ರವಾಗಿದೆ.
ಪತ್ರಿಕೆಯಲ್ಲಿನ ವರದಿ ನಿಜವಾಗಿದ್ದರೆ ಮೋದಿ ಅವರ ಕಷ್ಟದ ದಿನಗಳು ಪ್ರಾರಂಭವಾಗಲಿವೆ. ಗೋಧ್ರಾ ಹತ್ಯಾಕಾಂಡದ ಬಗ್ಗೆ ಎಸ್‌ಐಟಿ ವರದಿ ಆಧರಿತ ತೀರ್ಪನ್ನು ಒಪ್ಪಿಕೊಂಡ ನಂತರ ಅದೇ ವರದಿ ಆಧರಿತ ಬೇರೆ ತೀರ್ಪನ್ನೂ ಒಪ್ಪಿಕೊಳ್ಳಲೇಬೇಕಲ್ಲಾ? ಈ ವರದಿಯಲ್ಲಿರುವದೇನಾದರೂ ನರೇಂದ್ರ ಮೋದಿಯವರಿಗೂ ಗೊತ್ತಾಗಿ ಅವರು ಮೌನವಾಗಿದ್ದಾರೆಯೇ?