Monday, March 30, 2015

ಗಂಡ-ಹೆಂಡತಿಯರಿದ್ದ ಹಾಗೆ, ಯಾರುಮೇಲು? ಯಾರು ಕೀಳು?


( ನನ್ನ ತಪ್ಪನ್ನು ಎತ್ತಿತೋರಿಸಿದವರು ಬಿಟಿವಿನಲ್ಲಿರುವ ಪತ್ರಕರ್ತ ಶ್ರೀನಾಥ ಬೆಳಚಿಕ್ಕನಹಳ್ಳಿ. ಅವರೇ ಇಚ್ಚೆ ಪಟ್ಟಿರುವ ಕಾರಣ ಹೆಸರು ಹೇಳಿದ್ದೇನೆ. ಇವರನ್ನು ಹಿಂದೊಮ್ಮೆ ಕುಪ್ಪಳ್ಳಿಯಲ್ಲಿ ಭೇಟಿ ಮಾಡಿದ್ದನ್ನು ಅವರೇ ನೆನಪುಮಾಡಿಕೊಟ್ಟರು. ಡೆಸ್ಕ್ ಜರ್ನಲಿಸ್ಟ್ ಗಳ ಬಗೆಗಿನ ನನ್ನ ಅವಸರದ ಅಭಿಪ್ರಾಯಕ್ಕೆ ಮೊದಲು ಅವರೆಲ್ಲರ ಕ್ಷಮೆಕೋರುತ್ತೇನೆ.)
    ವರದಿಗಾರರು ಮತ್ತು ಡೆಸ್ಕ್ ಜರ್ನಲಿಸ್ಟ್ ಗಳ ನಡುವಿನ ಶೀತಲ ಸಮರಕ್ಕೆ ಪತ್ರಿಕೋದ್ಯಮದಷ್ಟೇ ದೀರ್ಘವಾದ ಇತಿಹಾಸ ಇದೆ. ಇವರಿಬ್ಬರದ್ದು ಒಂದು ರೀತಿಯಲ್ಲಿ ಸಾಂಪ್ರದಾಯಿಕ ಗಂಡ-ಹೆಂಡತಿಯರಂತಹ ಪಾತ್ರ. ಗಂಡ ಹೊರಗೆ ಹೋಗಿ ಸಂಪಾದನೆ ಮಾಡಿ ಬರುವವ, (ಸುದ್ದಿ ಸಂಪಾದನೆ ರೀತಿ) ಹೆಂಡತಿ ಮನೆಯಲ್ಲಿದ್ದು ಅಡಿಗೆ ಮಾಡುವವಳು (ಪತ್ರಿಕೆಯನ್ನು ರೂಪಿಸುವ ರೀತಿ). ಇವರಲ್ಲಿ ಯಾರೊಬ್ಬರು ಮುಷ್ಕರ ಹೂಡಿದರೆ ಸಂಸಾರ ಬಂದ್. ಇವರಲ್ಲಿ ಯಾರು ಮೇಲು ಯಾರು ಕೀಳು ಎನ್ನುವುದನ್ನು ಹೇಳಲಾಗುತ್ತದೆಯೇ? ಅರ್ಥಮಾಡಿಕೊಂಡರೆ ಇಬ್ಬರು ಸಮಾನರು, ಅಪಾರ್ಥಮಾಡಿಕೊಂಡರೆ ಗಲಾಟೆ ಸಂಸಾರ. ಇದೇ ರೀತಿ ವರದಿಗಾರರು ಮತ್ತು ಡೆಸ್ಕ್ ಪತ್ರಕರ್ತರ ಪಾತ್ರಗಳನ್ನು ನಟ ಮತ್ತು ನಿರ್ದೇಶಕರ ಪಾತ್ರಗಳಿಗೂ ಹೋಲಿಸಬಹುದು.
     ವರದಿಗಾರರ ನೆತ್ತಿ ಮೇಲಿರುವ ದೊಡ್ಡ ಕೋಡು ಎಂದರೆ ಅವರಿಗೆ ಸಿಗುವ ಬೈಲೈನ್ ಗಳು. ಹಿಂದಿನಂತಲ್ಲ, ಇತ್ತೀಚೆಗೆ ಬೈಲೈನ್ ಗಳು ಬೇಕಾಬಿಟ್ಟಿಯಾಗಿ ಸಿಗುತ್ತವೆ. ಈಗಿನ ಕಾಲದಲ್ಲಿ ವರದಿಗಾರ ಮುಖರಹಿತ ಪತ್ರಕರ್ತನಲ್ಲ, ಅವರಲ್ಲಿ ಎಷ್ಟೋ ಮಂದಿ ಸೆಲೆಬ್ರಿಟಿಗಳು. ಅವರಿಗೆ ಜನಸಂಪರ್ಕ, ಓದುಗರ ಮೆಚ್ಚುಗೆ ಎಲ್ಲವೂ ಲಭ್ಯ. ಸಂಬಳದ ಜತೆಗೆ ಅವರಿಗೆ ಜನಪ್ರಿಯತೆ ಬೋನಸ್ ರೂಪದಲ್ಲಿ ಬರುತ್ತದೆ. ಈ ಭಾಗ್ಯ ಡೆಸ್ಕ್ ನವರಿಗಿಲ್ಲ.ವರದಿಗಾರರ ಯಶಸ್ವಿ ಅನಿಸಿಕೊಳ್ಳಲು ಬರವಣಿಗೆಯ ಶಕ್ತಿ ಜತೆ ಆತನಿಗಿರುವ ಸುದ್ದಿಮೂಲಗಳ ಸಂಪರ್ಕ ಮುಖ್ಯ. ಬರವಣಿಗೆ ಕೈಹಿಡಿಯದೆ ಇದ್ದರೂ ಸುದ್ದಿ ಸಂಗ್ರಹದ ಸಾಮರ್ಥ್ಯದ ಮೂಲಕವೇ ಜನಪ್ರಿಯ ವರದಿಗಾರರಿದ್ದವರಿದ್ದಾರೆ. ಎರಡನ್ನೂ ಮೈಗೂಡಿಸಿಕೊಂಡವರು ಹೆಚ್ಚು ಜನಪ್ರಿಯರಾಗುತ್ತಾರೆ.
   ಡೆಸ್ಕ್ ಪತ್ರಕರ್ತರೇನಿದ್ದರೂ ತೆರೆಯ ಹಿಂದಿನ ಕಲಾವಿದರು. ಅವರೆಷ್ಟೇ ಚೆನ್ನಾಗಿ ಕೆಲಸಮಾಡಿದರೂ ಜನಪ್ರಿಯತೆಯೇನಿದ್ದರೂ ಕಚೇರಿಗೆ ಸೀಮಿತ. ವರದಿಯೊಂದನ್ನು ತಿದ್ದಿ ತೀಡಿ ಹೊಸ ಅಂಶಗಳ ಜತೆ ಅಪ್ ಡೇಟ್ ಮಾಡಿ ಆಕರ್ಷಕ ತಲೆಬರಹಕೊಟ್ಟು ಪ್ರಕಟಿಸುವ ಇಂತಹ ಉಪಸಂಪಾದಕನನ್ನು ಗುರುತಿಸುವವರು ಕಡಿಮೆ. ಮೆಚ್ಚುಗೆ ಹರಿದುಹೋಗುವುದು ವರದಿಗಾರರ ಕಡೆಗೆ. ಡೆಸ್ಕ್ ನಲ್ಲಿರುವವರಿಗೆ ಜನಸಂಪರ್ಕದ ಅಗತ್ಯ ಇರುವುದಿಲ್ಲ. ಆದರೆ ಅವರು ವರದಿಗಾರರಿಗಿಂತಲೂ ಬುದ್ದಿವಂತರಾಗಿರಬೇಕಾಗುತ್ತದೆ. ಅವರಿಗೆ ಸುದ್ದಿಯ ಹಿನ್ನೆಲೆ-ಮುನ್ನೆಲೆ ಗೊತ್ತಿರಬೇಕು. ಈ ಬಲದಿಂದ ಸುದ್ದಿಯಮಹತ್ವವನ್ನು ತೀರ್ಮಾನಿಸುವ ಶಕ್ತಿಯನ್ನು ಆತ ಬೆಳೆಸಿಕೊಳ್ಳಬೇಕು. ವ್ಯಾಕರಣದ ಮೂಲಪಾಠಗಳನ್ನು ತಿಳಿದಿರಬೇಕು. ಭಾಷಾಂತರಕ್ಕೆ ಬೇಕಾದಷ್ಟು ಇಂಗ್ಲೀಷ್ ಜ್ಞಾನ ಇರಬೇಕು. ಇದರ ಜತೆಗೆ ತಂತ್ರಜ್ಞಾನದ ಅರಿವು ಇರಬೇಕು.
      ಒಂದೊಂದು ಪತ್ರಿಕೆಯಲ್ಲಿ ಒಂದೊಂದು ರೀತಿಯ ವ್ಯವಸ್ಥೆ ಇರುತ್ತದೆ. ರಾಷ್ಟ್ರಮಟ್ಟದ ಇಂಗ್ಲೀಷ್ ಪತ್ರಿಕೆಗಳಲ್ಲಿ ಡೆಸ್ಕ್ ಗೆ ವರದಿಗಾರರ ವಿಭಾಗಕ್ಕೆ ಕೊಡುವಷ್ಟೇ ಮಹತ್ವ ನೀಡುತ್ತಾರೆ. ಎಷ್ಟೋ ಬಾರಿ ವರದಿಗಾರರು ಪೋನಿನಲ್ಲಿ ಸುದ್ದಿಯ ಮುಖ್ಯಾಂಶಗಳನ್ನು ಕೊಟ್ಟುಬಿಟ್ಟರೆ, ಉಪಸಂಪಾದಕ ಒಂದು ಚಂದದ ವರದಿ ಸಿದ್ದ ಪಡಿಸಿಬಿಡುತ್ತಾನೆ. ಕನ್ನಡದ ಮಟ್ಟಿಗೆ ಇನ್ನೂ ಈ ವ್ಯವಸ್ಥೆ ಎಲ್ಲ ಕಡೆ ಬಂದ ಹಾಗಿಲ್ಲ. ಭಾಷಾ ಪತ್ರಿಕೋದ್ಯಮದೊಳಗಿನ ವ್ಯವಸ್ಥೆಯಲ್ಲಿ ವರದಿಗಳನ್ನು ವರದಿಗಾರರು ಅಂತಿಮ ರೂಪದಲ್ಲಿ ಕೊಡಬೇಕೆಂದು ಡೆಸ್ಕ್ ಬಯಸುತ್ತದೆ. ‘ನಿಮ್ಮ ವರದಿಗಳನ್ನು ತಿದ್ದಿಕೊಂಡು ಕೂರಲು ನಮಗೆ ಸಮಯ ಇಲ್ಲ. ಬೇರೆ ಕೆಲಸಗಳಿರುತ್ತವೆ’ ಎಂದು ಉಪಸಂಪಾದಕರು ಗದರಿಸುತ್ತಿರುತ್ತಾರೆ. ಅದು ನಿಜ ಕೂಡಾ, ಬದಲಾದ ತಂತ್ರಜ್ಞಾನದ ಯುಗದಲ್ಲಿ ಪೇಜಿನೇಷನ್ ಹೊಣೆ ಕೂಡಾ ಉಪಸಂಪಾದಕನ ತಲೆಗೆ ಕಟ್ಟಲಾಗಿದೆ. ಜತೆಗೆ ಏಜನ್ಸಿಕಾಪಿಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡುವ ಕೆಲಸವೂ ಇರುತ್ತದೆ. ಜತೆಗೆ ಅವರ ತಲೆಮೇಲೆ ಡೆಡ್ ಲೈನ್ ಕತ್ತಿ ತೂಗುತ್ತಿರುತ್ತದೆ.
      ಸಮಸ್ಯೆಯೇನೆಂದರೆ, ಬಹಳಷ್ಟು ಡೆಸ್ಕ್ ಪತ್ರಕರ್ತರಿಗೆ ವರದಿಗಾರರ ಬಗ್ಗೆ ಸಣ್ಣ ಅಸೂಯೆ ಇರುತ್ತದೆ.ಈ ವರದಿಗಾರರೆಲ್ಲರೂ ಬೆಳಿಗ್ಗೆ ಮುಖ್ಯಮಂತ್ರಿಯವರ ಜತೆ ಬ್ರೇಕ್ ಫಾಸ್ಟ್ ಮಾಡಿ, ಮಧ್ಯಾಹ್ನ ಜತೆ ಸಚಿವರ ಜತೆ ಲಂಚ್ ಮಾಡಿ, ರಾತ್ರಿ ಅಧಿಕಾರಿಗಳ ಜತೆ ಡಿನ್ನರ್ ಮಾಡುತ್ತಾ ಮಜಾಮಾಡುತ್ತಿದ್ದಾರೆ ಎನ್ನುವಂತಹ ಕಪೋಲಕಲ್ಪಿತ ಆರೋಪಗಳೂ ಕೂಡಾ ಈ ಅಸೂಯೆಗೆ ಕಾರಣ. ಎಲ್ಲ ಸಂದರ್ಭಗಳಲ್ಲಿ ಇದು ನಿಜ ಅಲ್ಲ. ವರದಿಗಾರರಿಗೆ ರಾಜಕಾರಣಿಗಳ,ಅಧಿಕಾರಿಗಳ ಪರಿಚಯ ಇರುತ್ತದೆ. ಇವರೆಲ್ಲ ಭಾರೀ ಪವರ್ ಪುಲ್ ಎನ್ನುವ ಸಾಮಾನ್ಯ ಅಭಿಪ್ರಾಯ ಡೆಸ್ಕ್ ನಲ್ಲಿದ್ದವರಿಗೆ ಇರುತ್ತದೆ. ಎಲ್ಲ ವರದಿಗಾರರು ತಮ್ಮನ್ನು ಮಾರಿಕೊಂಡಿರುವುದಿಲ್ಲ, ಒಬ್ಬ ವರದಿಗಾರ ಸಾರ್ವಜನಿಕ ವ್ಯಕ್ತಿ. ತಾನು ಬರೆದ ವರದಿ ಮರುದಿನ ಪ್ರಕಟವಾಗದೆ ಇದ್ದರೆ,ಇಲ್ಲವೇ ನಿರ್ದಯವಾದ ಕತ್ತರಿ ಪ್ರಯೋಗಕ್ಕೆ ಈಡಾದರೆ ಮರುದಿನ ಮುಖ ಎತ್ತಿ ಓಡಾಡುವುದು ಆತನನ್ನು ಮುಜುಗರಕ್ಕೀಡುಮಾಡುತ್ತದೆ.
     ಇಷ್ಟು ಮಾತ್ರವಲ್ಲ, ವರದಿಗಾರರಿಗಿರುವ ರಿಸ್ಕ್ ಡೆಸ್ಕ್ ಪತ್ರಕರ್ತರಿಗಿಲ್ಲ. ಪ್ರಭುತ್ವ ಮತ್ತು ಅಪರಾಧ ಜಗತ್ತಿನಿಂದ ಸಾವು-ನೋವಿಗೀಡಾದವರಲ್ಲಿ ಬಹುಪಾಲು ವರದಿಗಾರರೇ ಎಂಬುದನ್ನು ಕೂಡಾ ಮರೆಯಬಾರದು. ವರದಿಗಾರರಿಗೆ ಡೆಸ್ಕ್ ನಲ್ಲಿರುವ ಪತ್ರಕರ್ತರ ಬಗ್ಗೆ ಒಂದು ರೀತಿಯ ತಿರಸ್ಕಾರ ಇರುತ್ತದೆ. ಇವರಿಗೆಲ್ಲಿ ಬರೆಯಲು ಬರುತ್ತೆ?, ಇವರೇನಿದ್ದರೂ ನಾವು ಕೊಟ್ಟದ್ದನ್ನು ತುಂಬಿ ಪೇಜ್ ಮಾಡುವ ಗುಮಾಸ್ತರು, ಜತೆಯಲ್ಲಿ ಅಸೂಯೆಯಿಂದ ನಿರ್ದಯವಾಗಿ ಸುದ್ದಿಯನ್ನು ಕತ್ತರಿಸಿ ಎಸೆಯುವವರು ಎನ್ನುವ ಸಿಟ್ಟು ವರದಿಗಾರರರಲ್ಲಿರುತ್ತದೆ. ಈ ಪರಸ್ಪರ ಆರೋಪಗಳಲ್ಲಿ ಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಸತ್ಯಾಂಶ ಇದೆ.
     ಹೆಚ್ಚಿನ ಪತ್ರಿಕೆಗಳಲ್ಲಿ ಡೆಸ್ಕ್ ಎನ್ನುವುದು ನಿರ್ಲಕ್ಷಿತ ವಿಭಾಗ. ಇದಕ್ಕೆ ಮುಖ್ಯಕಾರಣ ಹೊಸದಾಗಿ ಪತ್ರಿಕೆಗೆ ಸೇರುವವರು ನಾನು ಡೆಸ್ಕ್ ನಲ್ಲಿ ಕೆಲಸಮಾಡುತ್ತೇನೆಂದು ಹೇಳಿದವರನ್ನು ನಾನು ನೋಡಿದ್ದು ಅಪರೂಪ. ಎಲ್ಲರಿಗೂ ವರದಿಗಾರರಾಗುವ, ಅದರಲ್ಲೂ ರಾಜಕೀಯ ವರದಿಗಾರರಾಗುವ ತವಕ. ಸಾಮಾನ್ಯವಾಗಿ ವರದಿಗಾರನಾಗಿ ಸರಿಯಾಗಿ ಕೆಲಸ ಮಾಡದಿದ್ದರೆ ಇಲ್ಲವೆ ಏನಾದರೂ ಭಾನಗಡಿ ಮಾಡಿದರೆ, ಸಂಪಾದಕರು ಅಂತಹವರನ್ನು ಡೆಸ್ಕ್ ಗೆ ಎತ್ತಿ ಹಾಕಿ ಎಂದು ಹೇಳುವುದೂ ಉಂಟು. ಇದರಿಂದಾಗಿ ಡೆಸ್ಕ್ ನಲ್ಲಿರುವವರು ಎಂದರೆ ಒಲ್ಲದ ಕೆಲಸ ಮಾಡುವವರು ಮತ್ತು ಶಿಕ್ಷೆಗೊಳಗಾದವರು ಎನ್ನುವ ಅಭಿಪ್ರಾಯ ಸಹಜವಾಗಿ ಮೂಡುತ್ತದೆ. ಬಹಳಷ್ಟು ಪತ್ರಿಕೆಗಳಲ್ಲಿ ಪರಸ್ಪರ ವರ್ಗಾವಣೆಗಳಿಲ್ಲ. (ಪ್ರಜಾವಾಣಿಯಂತಹ ಕೆಲವು ಪತ್ರಿಕೆಗಳಲ್ಲಿದೆ.)
ಸಾಮಾನ್ಯವಾಗಿ ಸಮಾಜ ಒಂದಿಷ್ಟು ವರದಿಗಾರರು ಮತ್ತು ಟಿವಿ ಆ್ಯಂಕರ್ ಗಳನ್ನು ನೋಡಿ ಪತ್ರಕರ್ತರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತದೆ. ಇಂತಹ ಟೀಕಾಕಾರರ ಮಾತುಗಳನ್ನು ಕೇಳಿದಾಗೆಲ್ಲ ನೋವಾಗುತ್ತದೆ, ಡೆಸ್ಕ್ ಪತ್ರಕರ್ತರ ಬಗ್ಗೆ ಅನುಕಂಪ ಮೂಡುತ್ತದೆ. ಅವರು ತಾವು ಮಾಡದ ತಪ್ಪಿಗಾಗಿ ನೇಣುಗಂಬದ ಎದುರು ನಿಂತ ನಿರಪರಾಧಿಗಳು. ಪತ್ರಿಕೆ ಇಲ್ಲವೆ ಟಿವಿ ಕಚೇರಿಗಳಲ್ಲಿರುವ ಒಟ್ಟು ಸಿಬ್ಬಂದಿಯಲ್ಲಿ ವರದಿಗಾರರ ಸಂಖ್ಯೆ ಶೇಕಡಾ ಹತ್ತರಿಂದ ಇಪ್ಪತ್ತರಿಷ್ಟಿರಬಹುದು. ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಸದಾ ಸುದ್ದಿಯಲ್ಲಿರುವವರು ಇದೇ ವರದಿಗಾರರು.
    ಸಮಾಜದ ಕಣ್ಣಲ್ಲಿ ಭ್ರಷ್ಟರೆನಿಸಿಕೊಂಡ ಪತ್ರಕರ್ತರ ಪಟ್ಟಿಯನ್ನು ನೋಡಿ. ಅವರಲ್ಲಿ ಮುಕ್ಕಾಲು ಪಾಲು ವರದಿಗಾರರಾಗಿರುತ್ತಾರೆ. ಉಳಿದ ಪಾಪದ ಪಾಲನ್ನು ಒಂದಿಷ್ಟು ಸಂಪಾದಕರೆನಿಸಿಕೊಂಡವರು ಮತ್ತು ಡೆಸ್ಕ್ ಪತ್ರಕರ್ತರು ಹಂಚಿಕೊಂಡಿರುವುದನ್ನು ಕಾಣಬಹುದು. ಆದರೆ ಕಚೇರಿಯೊಳಗೆ ಇರುವ ಮುಕ್ಕಾಲು ಪಾಲು ಪತ್ರಕರ್ತರು ಕೇವಲ ಸಂಬಳವನ್ನು ನಂಬಿಕೊಂಡು ಬದುಕುವವರು. ಇವರಲ್ಲಿ ಹೆಚ್ಚಿನವರು ಪ್ರಜ್ಞಾಪೂರ್ವಕವಾಗಿ ಪ್ರಾಮಾಣಿಕತೆಯಿಂದು ಬದುಕಬೇಕೆಂದು ನಿರ್ಧಾರ ಮಾಡಿದವರು. ಇನ್ನು ಕೆಲವರು ಕೆಟ್ಟುಹೋಗಲು ಅವಕಾಶ ಇಲ್ಲದೆ ಒಳ್ಳೆಯವರಾಗಿ ಉಳಿದುಕೊಂಡವರೂ ಇರಬಹುದು. ವಿಪರ್ಯಾಸವೆಂದರೆ ಈ ಬಹುಸಂಖ್ಯಾತ ಪತ್ರಕರ್ತರ ಹೆಸರು ‘ಜಿ ಕೆಟಗರಿ’ ಇಲ್ಲವೇ ಇನ್ನಾವುದೋ ಕೆಟಗರಿಯ ಸೈಟ್ ಫಲಾನುಭವಿಗಳ ಪಟ್ಟಿಯಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಅದೇ ರೀತಿ ಪತ್ರಕರ್ತರ ಪ್ರಾಮಾಣಿಕತೆ, ವೃತ್ತಿನಿಷ್ಠೆಯನ್ನು ಆಧರಿಸಿ ನೀಡುವ ರಾಜ್ಯೋತ್ಸವ ಇಲ್ಲವೆ ಮಾಧ್ಯಮ ಅಕಾಡೆಮಿಯ ಪ್ರಶಸ್ತಿವಿಜೇತರ ಪಟ್ಟಿಯಲ್ಲಿಯೂ ಇವರ ಹೆಸರು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಎರಡೂ ಕಡೆಗಳಲ್ಲೂ ಮೆರೆದಾಡುವವರು ವರದಿಗಾರರು. ಆರೋಪಗಳಿಗೆ ಇಬ್ಬರೂ ತಲೆಕೊಡಬೇಕಾಗುತ್ತದೆ, ಮನ್ನಣೆ-ಮಾನ್ಯತೆ ಮಾತ್ರ ವರದಿಗಾರರಿಗೆ ಹೆಚ್ಚು. ಇದು ದುರಂತ.