Sunday, February 3, 2013

ಆಶಿಶ್ ನಂದಿ ಮಾತುಗಳಲ್ಲಿನ ಸತ್ಯವನ್ನು ಹುಡುಕುತ್ತಾ..

ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಸಾಮಾಜಿಕ ಚಿಂತಕ ಆಶಿಶ್ ನಂದಿ ಆಡಿದ್ದ ಮಾತುಗಳು ವಿವಾದಕ್ಕೀಡಾಗಿ ಭಿನ್ನ ರೂಪ, ಬಣ್ಣ, ವಾಸನೆಗಳನ್ನು ಪಡೆಯತೊಡಗಿವೆ. `ಅವರ ಮಾತುಗಳಲ್ಲಿನ ಆಯ್ದಭಾಗಗಳನ್ನಷ್ಟೆ ಹೆಕ್ಕಿ ತೆಗೆದು ಮುದ್ರಿಸಿದ ಮತ್ತು ಪ್ರಸಾರ ಮಾಡಿದ ಮಾಧ್ಯಮಗಳು ಕೂಡಾ ವಿವಾದಕ್ಕೆ ಕಾರಣ' ಎಂಬ ಆರೋಪ ಕೂಡಾ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಆ ದಿನ ನಡೆದ `ಆಲೋಚನೆಗಳ ಪ್ರಜಾಪ್ರಭುತ್ವ' ಎಂಬ ವಿಷಯದ ಮೇಲಿನ ಚರ್ಚೆಯಲ್ಲಿ ಆಶಿಶ್ ನಂದಿ ಮತ್ತು ಅವರ ಪ್ರತಿಕ್ರಿಯೆಗೆ ಸ್ಪೂರ್ತಿ ನೀಡಿತ್ತೆಂದು ಹೇಳಲಾದ ಪತ್ರಕರ್ತ ತರುಣ್ ತೇಜಪಾಲ್ ಅವರಾಡಿದ್ದ ಮಾತುಗಳೇನೆಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಇದಕ್ಕಾಗಿ ಚರ್ಚೆಯ ಕೊನೆಯಲ್ಲಿ ಇಬ್ಬರೂ ಆಡಿದ್ದ ಮಾತುಗಳ ಪೂರ್ಣ ಪಾಠ ಇಲ್ಲಿ ನೀಡಲಾಗಿದೆ:
ತರುಣ್ ತೇಜ್‌ಪಾಲ್: `..... ಭಾರತದಂತಹ ದೇಶದಲ್ಲಿ ಭ್ರಷ್ಟಾಚಾರ ಎನ್ನುವುದು ವರ್ಗ ಸಮಾನತೆಯ ಒಂದು ಸಾಧನ. ನನ್ನ ಮನೆಯ ಚಾಲಕ ಇಲ್ಲವೆ ಅಡಿಗೆಯವ ನಾನು ಪ್ರತಿನಿಧಿಸುವ ವರ್ಗದ ಮಕ್ಕಳ ಜತೆಯಲ್ಲಿಯೇ ಶಾಲೆಗೆ ಹೋಗಿ ಕಲಿಯುವಂತಹ ರೀತಿಯಲ್ಲಿ ನಾವು ದೇಶವನ್ನು ಕಟ್ಟಿಲ್ಲ. `ಎಲೀಟ್' ಮತ್ತು `ಪ್ರಿವಿಲೆಜ್ಡ್' ವರ್ಗಕ್ಕೆ ಸೇರಿದ್ದ ನಮ್ಮಂತಹವರು ತಮಗೆ ಅನುಕೂಲವಾಗುವಂತೆ ನಿಯಮಾವಳಿಗಳನ್ನು ರೂಪಿಸಿಕೊಂಡಿದ್ದೇವೆ. ಆದರೆ ಇನ್ನೊಂದು ಬದಿಯಲ್ಲಿರುವ ನೂರು ಕೋಟಿ ಜನವರ್ಗಕ್ಕೆ ಈ ನಿಯಮಗಳ ಮೂಲಕ ಭ್ರಷ್ಟ ವ್ಯವಸ್ಥೆಯಲ್ಲಿನ ಪಾಲನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಅವರು ಆ ನಿಯಮಗಳನ್ನೇ ಮುರಿಯತೊಡಗಿದ್ದಾರೆ.'
ಆಶಿಶ್ ನಂದಿ :` ಈ ಕತೆಯ ಬಹುಮುಖ್ಯ ಭಾಗವನ್ನು ಅವರು (ತೇಜ್‌ಪಾಲ್) ಹೇಳಲಿಲ್ಲ. ಅದನ್ನು ಕೇಳಿದರೆ ಆಘಾತವಾದೀತು. ಅದು ಘನತೆಗೆ ತಕ್ಕುದ್ದಲ್ಲ ಎಂದೂ ಅನಿಸಬಹುದು. ನನ್ನ ಮಟ್ಟಿಗೆ ಇದೊಂದು ಅಶ್ಲೀಲ ಹೇಳಿಕೆ. ಆದರೆ ಅತಿ ಹೆಚ್ಚಿನ ಸಂಖ್ಯೆಯ ಭ್ರಷ್ಟರು ಹಿಂದುಳಿದ ಜಾತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಎಲ್ಲಿಯವರೆಗೆ ಈ ಪರಿಸ್ಥಿತಿ ಮುಂದುವರಿಯುತ್ತದೋ ಅಲ್ಲಿಯವರೆಗೆ ಭಾರತದ ಪ್ರಜಾಪ್ರಭುತ್ವ ಸುರಕ್ಷಿತವಾಗಿರುತ್ತದೆ. ನಾನೊಂದು ಉದಾಹರಣೆ ಕೊಡುತ್ತೇನೆ. ಸಿಪಿಎಂ ಅಧಿಕಾರದಲ್ಲಿರುವವರೆಗೆ ಭಾರತದ ಅತ್ಯಂತ ಕಡಿಮೆ ಭ್ರಷ್ಟತೆಯ ರಾಜ್ಯ ಪಶ್ಚಿಮ ಬಂಗಾಳವಾಗಿತ್ತು. ಕಳೆದ 100 ವರ್ಷಗಳಲ್ಲಿ ಹಿಂದುಳಿದ ಜಾತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಯಾರೂ ಅಧಿಕಾರಕ್ಕೆ ಬಂದಿಲ್ಲ ಎಂಬುದನ್ನೂ ನಾನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಆದುದರಿಂದಲೇ ಅದೊಂದು ಸ್ವಚ್ಛ ರಾಜ್ಯ'
ತರುಣ್ ತೇಜಪಾಲ್ ಮಂಡಿಸಿದ್ದು ವರ್ಗ ಸಂಘರ್ಷದ ಒಂದು ಚರ್ವಿತಚರ್ವಣ ಥಿಯರಿ.  ಅವರು ಮಾತನಾಡಿದ್ದು `ವರ್ಗ'ಗಳ ಬಗ್ಗೆ. ಅವರೆಲ್ಲಿಯೂ `ಜಾತಿ'ಯ ಪ್ರಸ್ತಾವ ಮಾಡಿರಲಿಲ್ಲ.. ಈಗಿನ ಭ್ರಷ್ಟಾಚಾರ ಕೂಡಾ `ವರ್ಗ ಸಮಾನತೆಯ ಸಾಧನ' ಆಗುತ್ತಿದೆ ಎಂದು ಅವರು ಹೇಳಿದ್ದರೇ ಹೊರತು `ಜಾತಿ ಸಮಾನತೆ'ಯ ಸಾಧನವಾಗುತ್ತಿದೆ ಎಂದು ಹೇಳಿಲ್ಲ. ಭಯೋತ್ಪಾದನೆಯಂತೆ ಭ್ರಷ್ಟಾಚಾರಕ್ಕೂ ಜಾತಿ-ಧರ್ಮಗಳಿಲ್ಲ, ಅದೊಂದು ಪ್ರತ್ಯೇಕ ವರ್ಗ ಎನ್ನುವ ಜನಪ್ರಿಯ ಅಭಿಪ್ರಾಯವನ್ನೇ ಅವರ ಮಾತುಗಳು ಧ್ವನಿಸುತ್ತವೆ. ಆದರೆ ಅದಕ್ಕೆ ಪ್ರತಿಕ್ರಿಯಿಸಿದ್ದ ಆಶಿಶ್‌ನಂದಿ ನೇರವಾಗಿ ಕೈಹಾಕಿದ್ದು ಜಾತಿಮೂಲಕ್ಕೆ. ಅವರು ಭ್ರಷ್ಟಾಚಾರದ ಜತೆ ನಿರ್ದಿಷ್ಟವಾಗಿ ಕೆಲವು ಜಾತಿಗಳನ್ನು ಜೋಡಿಸಿದ್ದರು. ತರುಣ್ ಹೇಳಿದ್ದನ್ನು ಸರಿಯಾಗಿ ಗ್ರಹಿಸಲು ನಂದಿ ಸೋತರೇ ಇಲ್ಲವೇ, ಹೇಳಲೇಬೇಕೆಂದು ಮೊದಲೇ ಸಿದ್ದತೆ ಮಾಡಿಕೊಂಡಿದ್ದ ಅಭಿಪ್ರಾಯವನ್ನು ಮಂಡಿಸಲು ಅವರು ತರುಣ್ ಮಾತುಗಳನ್ನು ಬಳಸಿಕೊಂಡರೇ? ಈ ಪ್ರಶ್ನೆಗಳಿಗೆ ಉತ್ತರ ಏನೇ ಇರಲಿ, ಆಶಿಶ್‌ನಂದಿ ಎಡವಿರುವುದು ಸತ್ಯ. ಒಮ್ಮೆ ಮಾತ್ರ ಎಡವಿದ್ದಲ್ಲ ಅದರ ನಂತರ ನಡೆದ ವಾಗ್ವಾದಗಳಲ್ಲಿ ತನ್ನ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಾ, ನಿರಾಕರಿಸುತ್ತಾ, ಸ್ಪಷ್ಟೀಕರಿಸುತ್ತಾ ಮತ್ತೆ ಮತ್ತೆ ಎಡವುತ್ತಿದ್ದಾರೆ.
ತಮ್ಮ ಬರವಣಿಗೆಯಲ್ಲಿನ ಅಪರೂಪದ ಒಳನೋಟಗಳ ಮೂಲಕ ನಮ್ಮಂತಹ ಲಕ್ಷಾಂತರ ಕಿರಿಯ `ಏಕಲವ್ಯ'ರು ವೈಚಾರಿಕ ಸ್ಪಷ್ಟತೆಯನ್ನು ರೂಪಿಸಿಕೊಳ್ಳಲು ನೆರವಾದ `ಗುರು' ಆಶಿಶ್‌ದಾ. (ಕನ್ನಡದ ಬಹುಮುಖ್ಯ ಪ್ರತಿಭೆಯಾಗಿದ್ದ ಡಾ.ಡಿ.ಆರ್.ನಾಗರಾಜ್ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಪ್ರೋತ್ಸಾಹ ನೀಡಿದವರು ಆಶಿಶ್ ನಂದಿ ಎನ್ನುವುದು ಅವರ ಬಗೆಗಿನ ಪ್ರೀತಿ-ಅಭಿಮಾನವನ್ನು ಇಮ್ಮಡಿಗೊಳಿಸುತ್ತದೆ.). ಇಂತಹ ಹಿರಿಯ ಜೀವ ಈ ಇಳಿವಯಸ್ಸಿನಲ್ಲಿ ತನ್ನನ್ನು ಸಮರ್ಥಿಸಿಕೊಳ್ಳಲು ನಡೆಸುತ್ತಿರುವ ಪರದಾಟವನ್ನು ಕಂಡಾಗ ಮನಸ್ಸಿಗೆ ನೋವಾಗುತ್ತದೆ. ಅವರು ಜೈಲು ಶಿಕ್ಷೆ ಅನುಭವಿಸುವಂತಹ ಘೋರ ಅಪರಾಧವನ್ನೇನು ಮಾಡಿಲ್ಲ. ಈಗ ಆಶಿಶ್‌ನಂದಿ ಅವರ ತಲೆಕಡಿಯಲು ಕತ್ತಿಹಿರಿದು ನಿಂತಿರುವ ಜನವರ್ಗದ ಪರವಾಗಿಯೇ ಕಳೆದ 40 ವರ್ಷಗಳಲ್ಲಿ  ಅವರು ಬರೆದದ್ದು ಮತ್ತು ಮಾತನಾಡಿದ್ದು ಎಂಬುದನ್ನು ಅವರನ್ನು ಶಿಕ್ಷಿಸಲು ಹೊರಟಿರುವ ನಾಯಕರು ತಿಳಿದುಕೊಳ್ಳದೆ ಇರುವುದು ನೋವು ಮತ್ತು ವಿಷಾದದ ಸಂಗತಿ.
ಈಗ ನಡೆಯಬೇಕಾಗಿರುವುದು ಆಶಿಶ್‌ನಂದಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯದ ಬಗ್ಗೆ ಮುಕ್ತವಾದ ಚರ್ಚೆ ಮಾತ್ರ. `ಗುರುಭಕ್ತಿ'ಯ ಕಾರಣಕ್ಕಾಗಿ ಅವರಾಡಿದ ಮಾತುಗಳನ್ನು ಬಾಯಿಮುಚ್ಚಿಕೊಂಡು ಒಪ್ಪಿಕೊಳ್ಳುವುದು ಕೂಡಾ ಸರಿಯಾಗಲಾರದು.
ಭಿನ್ನಾಭಿಪ್ರಾಯಗಳನ್ನು ಮಾನ್ಯಮಾಡುತ್ತಲೇ ತನ್ನ ಸಿದ್ದಾಂತವನ್ನು ಕಟ್ಟಿಕೊಳ್ಳುತ್ತಾ ಬಂದ ಆಶಿಶ್‌ನಂದಿಯವರೂ ಈ ರೀತಿಯ `ರಿಯಾಯಿತಿ'ಯನ್ನು ಒಪ್ಪಲಾರರು ಕೂಡಾ. ಈ ಹಿನ್ನೆಲೆಯಲ್ಲಿ ಅವರನ್ನು ಕೇಳಬೇಕಾಗಿರುವ ಮೊದಲ ಪ್ರಶ್ನೆ- `ಒಬಿಸಿ, ಎಸ್‌ಸಿ ಮತ್ತು ಎಸ್‌ಟಿಗಳಲ್ಲೇ ಹೆಚ್ಚು ಭ್ರಷ್ಟರಿದ್ದಾರೆ' ಎಂದು ಹೇಳುವುದು `ಘನತೆಗೆ ತಕ್ಕುದ್ದಲ್ಲ' ಮತ್ತು ' ಎಂದು ನಿಮ್ಮ ಆತ್ಮಸಾಕ್ಷಿಗೆ ಅನಿಸಿದ ಮೇಲೆ ಆ ಮಾತನ್ನು ಯಾಕೆ ಹೇಳಿದಿರಿ? ಎರಡನೆಯ ಪ್ರಶ್ನೆ -  ಅಂತಹ ಗಂಭೀರ ಆರೋಪವನ್ನು ಮಾಡುವಾಗ ಅದನ್ನು ಸಾಬೀತುಪಡಿಸುವಂತಹ ಪುರಾವೆಗಳನ್ನು ಯಾಕೆ ಒದಗಿಸಲಿಲ್ಲ? ಮೂರನೆಯ ಪ್ರಶ್ನೆ- ಕೆಳವರ್ಗದ ಭ್ರಷ್ಟಾಚಾರದಿಂದ ಸಮಾನತೆ ಸಾಧ್ಯ ಮತ್ತು ಇದರಿಂದ ಪ್ರಜಾಪ್ರಭುತ್ವ ಸುರಕ್ಷಿತವಾಗಿರುತ್ತದೆ ಎಂದು ಹೇಳಿದ್ದನ್ನು ಹೇಗೆ ಸಮರ್ಥಿಸಿಕೊಳ್ಳುವಿರಿ?
ಆಶಿಶ್‌ನಂದಿ ಅವರು `ಅಪರಾಧಿ' ಸ್ಥಾನದಲ್ಲಿ ನಿಲ್ಲಿಸಿರುವ ವರ್ಗ ದೇಶದ ಜನಸಂಖ್ಯೆಯ ಶೇಕಡಾ 75ರಷ್ಟಾಗುವುದರಿಂದ ಸಹಜವಾಗಿಯೇ ಭ್ರಷ್ಟರ ಪ್ರಮಾಣವೂ ಆ ವರ್ಗದಲ್ಲಿ ಹೆಚ್ಚು ಎಂಬ ಕುತರ್ಕವನ್ನು ಮಂಡಿಸಲು ಸಾಧ್ಯ. ಆದರೆ ಭ್ರಷ್ಟಾಚಾರವನ್ನು ಅಳೆಯುವವರು ಗಮನಕ್ಕೆ ತೆಗೆದುಕೊಳ್ಳಬೇಕಾಗಿರುವುದು ಭ್ರಷ್ಟರ ಸಂಖ್ಯೆಯನ್ನಲ್ಲ, ಭ್ರಷ್ಟತೆಯ ಪ್ರಮಾಣವನ್ನು. ಕಳೆದ 65 ವರ್ಷಗಳ ದೇಶದ ರಾಜಕೀಯ ಕ್ಷೇತ್ರದಲ್ಲಿ ತೀರ್ಮಾನ ಕೈಗೊಳ್ಳುವಂತಹ ಸ್ಥಾನಗಳಲ್ಲಿ, ಅಂದರೆ ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವ ಪದವಿಗಳನ್ನು ಪಡೆದಿರುವ ಒಬಿಸಿ, ಎಸ್‌ಸಿ-ಎಸ್‌ಟಿಗಳ ಸಂಖ್ಯೆ ಎಷ್ಟು? ಶಾಸಕರು, ಜಿಲ್ಲಾ ಪಂಚಾಯತ್ ಸದಸ್ಯ, ಗ್ರಾಮಪಂಚಾಯತ್ ಸದಸ್ಯ ಮೊದಲಾದ ಸ್ಥಾನಗಳಲ್ಲಿ ಈ ವರ್ಗದ ಸಂಖ್ಯೆ ಹೆಚ್ಚಿರಬಹುದು (ರಾಜಕೀಯ ಮೀಸಲಾತಿಯ ಕಾರಣದಿಂದ), ಇವರಲ್ಲಿ ಭ್ರಷ್ಟರೂ ಇರಬಹುದು. ಆದರೆ ಒಬ್ಬ ಪ್ರಧಾನಿ,ಮುಖ್ಯಮಂತ್ರಿ ಇಲ್ಲವೇ ಸಚಿವರ ಭ್ರಷ್ಟಾಚಾರಕ್ಕೆ ಇಂತಹ ಕೆಳಹಂತದ ನೂರಾರು ಜನಪ್ರತಿನಿಧಿಗಳು ಮಾಡುವ ಭ್ರಷ್ಟಾಚಾರ ಸಮನಾಗಬಹುದೇ?
ಅದೇ ರೀತಿ ಆಡಳಿತ ಕ್ಷೇತ್ರದಲ್ಲಿ ಜವಾನ-ಕಾರಕೂನ ಹುದ್ದೆಗಳಲ್ಲಿ ಈ ವರ್ಗದ ಸಂಖ್ಯೆ ಹೆಚ್ಚಿರಬಹುದು. ಅವರಲ್ಲಿ ಒಂದಷ್ಟು ಮಂದಿ ಭ್ರಷ್ಟರೂ ಆಗಿರಬಹುದು. ಆದರೆ  ಪ್ರಮುಖ ತೀರ್ಮಾನ ಕೈಗೊಳ್ಳುವಂತಹ ಆಡಳಿತದ ಉನ್ನತ ಸ್ಥಾನಗಳಲ್ಲಿ ಈ ವರ್ಗದ ಪ್ರಾತಿನಿಧ್ಯ ಎಷ್ಟು? ಒಂದು ಸರ್ಕಾರಿ ಇಲಾಖೆಯ ಮುಖ್ಯಸ್ಥರಾಗಿರುವ ಅಧಿಕಾರಿ ಭ್ರಷ್ಟಾಚಾರದಿಂದ ಗಳಿಸುವ ಹಣಕ್ಕೆ, ಆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಜವಾನ-ಕಾರಕೂನರು ಲಂಚದ ರೂಪದಲ್ಲಿ ಪಡೆಯುತ್ತಿರುವ ಪುಡಿಗಾಸು ಸಮನಾಗಬಹುದೇ? ಇವೆಲ್ಲಕ್ಕಿಂತಲೂ ಮುಖ್ಯವಾಗಿ  ಮೇಲ್ಮಟ್ಟದಲ್ಲಿರುವವರು ಭ್ರಷ್ಟರಾದಾಗಲೇ ಭ್ರಷ್ಟಾಚಾರ ನಿಯಂತ್ರಣ ಮೀರಿ ಬೆಳೆಯುತ್ತಾ ಹೋಗುತ್ತದೆ ಎನ್ನುವ ಸರಳ ಸತ್ಯ ಆಶಿಶ್ ನಂದಿ ಅವರಿಗೆ ಯಾಕೆ ಹೊಳೆಯದೆ ಹೋಯಿತು ಎನ್ನುವುದು ಅಚ್ಚರಿ ಉಂಟುಮಾಡುತ್ತಿದೆ.
ಅವರ ಹೇಳಿಕೆಯ ಮೂರನೆಯ ಭಾಗ ಅರ್ಥಹೀನ ಮಾತ್ರ ಅಲ್ಲ ಅಪಾಯಕಾರಿ ಕೂಡಾ. ಶಿಕ್ಷಣ ಮತ್ತು ಉದ್ಯೋಗ ಸಮಾನತೆಯ ಪ್ರಮುಖ ಸಾಧನಗಳು ಎಂಬ ಅಭಿಪ್ರಾಯವನ್ನು ಬಹುತೇಕ ಸಮಾಜಶಾಸ್ತ್ರಜ್ಞರು ಒಪ್ಪಿಕೊಳ್ಳುತ್ತಾ ಬಂದಿದ್ದಾರೆ. ಇದಕ್ಕಾಗಿಯೇ ಅಲ್ಲವೇ, ಈ ಎರಡು ಕ್ಷೇತ್ರಗಳಲ್ಲಿ ಮೀಸಲಾತಿ ಜಾರಿಗೆ ತಂದಿರುವುದು. ಈ ಸಾಮಾನ್ಯ ಅಭಿಪ್ರಾಯವನ್ನೇ ಬುಡಮೇಲು ಮಾಡುವ ರೀತಿಯಲ್ಲಿ ಆಶಿಶ್‌ನಂದಿ ಅವರು `ಭ್ರಷ್ಟಚಾರ' ಎಂಬ ಹೊಸ ಸಾಧನವನ್ನು ಮುಂದಿಟ್ಟಿದ್ದಾರೆ. ಅಲ್ಲಿಗೆ ನಿಲ್ಲದೆ `ಭ್ರಷ್ಟಾಚಾರದ ಮೂಲಕ ಸಾಮಾಜಿಕ ಸಮಾನತೆ ಆಗ್ತಾ ಇರುವವರೆಗೆ ಪ್ರಜಾಪ್ರಭುತ್ವ ಸುರಕ್ಷಿತ' ಎಂಬ ತೀರ್ಮಾನವನ್ನು ಕೊಟ್ಟುಬಿಟ್ಟಿದ್ದಾರೆ. ಒಂದಷ್ಟು ಒಬಿಸಿ - ಎಸ್‌ಸಿ -ಎಸ್‌ಟಿಗಳು  ಭ್ರಷ್ಟಾಚಾರದಿಂದ ದುಡ್ಡು ಸಂಪಾದನೆ ಮಾಡುವುದರಿಂದ ಸಮಾನತೆ ಬರುತ್ತದೆ, ಪ್ರಜಾಪ್ರಭುತ್ವ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಅವರಲ್ಲಿ ಹೇಗೆ ಹುಟ್ಟಿಕೊಂಡಿತೋ ಗೊತ್ತಿಲ್ಲ. ಆದರೆ ಎಲ್ಲರಿಗೂ ಗೊತ್ತಿರುವ ಸತ್ಯ ಏನೆಂದರೆ ಭ್ರಷ್ಟರು ಕೇವಲ ಭ್ರಷ್ಟರಾಗಿರುವುದಿಲ್ಲ ಅವರು ಕಡು ಸ್ವಾರ್ಥಿಗಳಾಗಿರುತ್ತಾರೆ. ಮಾಯಾವತಿ-ಲಾಲು-ಮುಲಾಯಂ-ಕೋಡಾ ಅವರು ಭ್ರಷ್ಟಾಚಾರದ ಮೂಲಕ ಗಳಿಸಿದ್ದನ್ನು ಸಮಾನತೆಯನ್ನು ಸಾಧಿಸುವ  ಸದುದ್ದೇಶದಿಂದ ತಮ್ಮ ಜಾತಿ ಜನರಿಗೆ ಹಂಚಿಬಿಡುವಷ್ಟು ಮೂರ್ಖರಲ್ಲ. ಇಲ್ಲವೆ ಇವರ‌್ಯಾರೂ ತಾವು ಪ್ರತಿನಿಧಿಸುವ ಜಾತಿಗಳ ಜನರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅವರ ಜೀವನಮಟ್ಟದಲ್ಲಿ ಸುಧಾರಣೆ ಮಾಡಿದವರೂ ಅಲ್ಲ. ಅಧಿಕಾರ ಗಳಿಕೆಗಾಗಿ ಜಾತಿ ಹೆಸರಲ್ಲಿ ವೋಟ್‌ಬ್ಯಾಂಕ್ ಸೃಷ್ಟಿಸಿದವರು ಅಷ್ಟೇ.  ಉತ್ತರಪ್ರದೇಶ-ಬಿಹಾರಗಳಿಗೆ ಹೋಗಿ ಅಲ್ಲಿನ ಸಾಮಾನ್ಯ ಒಬಿಸಿ,ಎಸ್‌ಸಿ,ಎಸ್‌ಟಿಗಳ ಸ್ಥಿತಿಗತಿಯನ್ನು ಯಾರಾದರೂ ಕಣ್ಣಾರೆ ನೋಡಿದರೆ ಆಶಿಶ್‌ನಂದಿ ಥಿಯರಿಯಲ್ಲಿ ಎಷ್ಟೊಂದು ತೂತುಗಳಿವೆ ಎನ್ನುವುದು ಅರಿವಾಗಬಹುದು. ಹದಿನಾರು ವರ್ಷಗಳ ಕಾಲ `ಹಮಾರಾ ಲಲುವಾ' ಎಂದು ಎದೆಗಪ್ಪಿಕೊಂಡ ಬಿಹಾರದ ಒಬಿಸಿಗಳು ಯಾಕೆ ಲಾಲುಪ್ರಸಾದ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು? ಕಳೆದ ಚುನಾವಣೆಯಲ್ಲಿ ಮಾಯಾವತಿ ಅವರ ಸೋಲಿಗೆ ಏನು ಕಾರಣ? ಇವೆಲ್ಲವೂ ಗೊತ್ತಿದ್ದ ಆಶಿಶ್‌ನಂದಿ ಅವರು ಇಂತಹ ಬೀಸು ಹೇಳಿಕೆ ನೀಡಲು ಹೇಗೆ ಸಾಧ್ಯ?
ಹೆಚ್ಚು ಚರ್ಚೆಗೊಳಗಾಗದ ಅವರ ಹೇಳಿಕೆಯ ಕೊನೆಯ ಭಾಗ ಆಶಿಶ್ ನಂದಿ ಅವರ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತಿದೆ. `ಕಳೆದ ನೂರುವರ್ಷಗಳಲ್ಲಿ ಪಶ್ಚಿಮಬಂಗಾಳದಲ್ಲಿ ಒಬಿಸಿ, ಎಸ್‌ಸಿ, ಎಸ್‌ಟಿಗಳು ಅಧಿಕಾರಕ್ಕೆ ಬರದೆ ಇರುವುದರಿಂದಲೇ ಅದು ಭ್ರಷ್ಟಾಚಾರ ಮುಕ್ತ `ಸ್ವಚ್ಛ' ರಾಜ್ಯವಾಗಿ ಉಳಿದಿದೆ' ಎನ್ನುವ ಅವರ ಅಭಿಪ್ರಾಯ ತಿಳಿವಳಿಕೆಯ ಕೊರತೆಯಿಂದ ಆಗಿದ್ದರೆ ನಿರ್ಲಕ್ಷಿಸಿಬಿಡಬಹುದಿತ್ತು. ಆದರೆ ಆ ರಾಜ್ಯದ `ಮಣ್ಣಿನ ಮಗ'ನಾಗಿರುವ ಆಶಿಶ್‌ನಂದಿ ಅವರಿಗೆ ಉಳಿದವರೆಲ್ಲರಿಗಿಂತಲೂ ಆ ರಾಜ್ಯ ಚೆನ್ನಾಗಿ ಗೊತ್ತಿದೆ. ಮೊದಲನೆಯದಾಗಿ ಪಶ್ಚಿಮಬಂಗಾಳದ  ಶೇಕಡಾ 90ರಷ್ಟು ಎಡಪಕ್ಷಗಳ ಜನಪ್ರತಿನಿಧಿಗಳು ಪ್ರಾಮಾಣಿಕರೆನ್ನುವುದು ನಿರ್ವಿವಾದ. ಆದರೆ ಅಲ್ಲಿನ ಸಿಪಿಎಂ ಪದಾಧಿಕಾರಿಗಳ ಬಗ್ಗೆ ಇದೇ ರೀತಿಯ ಸರ್ಟಿಫಿಕೇಟ್ ನೀಡಲು ಸಾಧ್ಯವೇ? ಎಡರಂಗದ 32 ವರ್ಷಗಳ ಆಡಳಿತದ ಕಾಲದಲ್ಲಿ ಸಿಪಿಎಂನ ಶಕ್ತಿಶಾಲಿ ಹುದ್ದೆಯಾದ `ಲೋಕಲ್ ಕಮಿಟಿ ಸೆಕ್ರೆಟರಿ (ಎಲ್‌ಸಿಎಸ್)ಗಳಾಗಿ ಕೆಲಸ ಮಾಡಿದವರ ಆದಾಯವೃದ್ಧಿ ಬಗ್ಗೆ ಯಾರಾದರೂ ತನಿಖೆ ನಡೆಸಿದರೆ ಆಶಿಶ್‌ನಂದಿ ಅವರು ಹೇಳುವ `ಸ್ವಚ್ಛರಾಜ್ಯ'ದ ಬಣ್ಣಬಯಲಾಗಬಹುದು.
ಇವೆಲ್ಲಕ್ಕಿಂತಲೂ ಗಂಭೀರವಾದ ವಿಚಾರವನ್ನು ಆಶಿಶ್‌ನಂದಿ ಚರ್ಚೆಗೊಳಪಡಿಸಿಲ್ಲ. `ಭದ್ರಲೋಕ'ದವರೆಂದು ಕರೆಯಲಾಗುವ ಅಲ್ಲಿನ ಬ್ರಾಹ್ಮಣ ಜಮೀನ್ದಾರರು ಸ್ವಇಚ್ಛೆಯಿಂದ ಸಾವಿರಾರು ಎಕರೆ ಜಮೀನನ್ನು ಗೇಣಿದಾರರಿಗೆ ಬಿಟ್ಟುಕೊಟ್ಟಿರುವುದು ನಿಜ. ಆದರೆ ಭೂಮಿ ಮೇಲಿನ ಅಧಿಕಾರ ಕಳೆದುಕೊಂಡ ಅವರಿಗೆ ಬಯಸಿಯೋ, ಬಯಸದೆಯೋ ರಾಜಕೀಯ ಅಧಿಕಾರ ಕೈಗೆ ಸಿಕ್ಕಿದೆ. ಅದಿನ್ನೂ ಅವರ ಕೈಯಲ್ಲಿಯೇ `ಭದ್ರ'ವಾಗಿ ಉಳಿದಿದೆ. ಅದನ್ನು ಇನ್ನೂ ಕೆಳಗೆ ಬಿಟ್ಟುಕೊಟ್ಟಿಲ್ಲ. ಇಂದಿಗೂ ಅಲ್ಲಿನ ಎಡಪಕ್ಷಗಳ ಹಿರಿಯ ನಾಯಕರಲ್ಲಿ ಶೇಕಡಾ 90ರಷ್ಟು `ಭದ್ರಲೋಕ'ಕ್ಕೆ ಸೇರಿದವರು. ಶೇಕಡಾ 25ರಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಮರಿಗೆ ರಾಜಕೀಯವೂ ಸೇರಿದಂತೆ ಯಾವ ಕ್ಷೇತ್ರಗಳಲ್ಲಿ ಎಷ್ಟು ಪ್ರಾತಿನಿಧ್ಯ ಸಿಕ್ಕಿದೆ ಎನ್ನುವುದನ್ನು ಸಾಚಾರ್ ಸಮಿತಿ ಬಯಲು ಮಾಡಿದೆ.
ಒಬಿಸಿ, ಎಸ್‌ಸಿ, ಎಸ್‌ಟಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಅದೊಂದು `ಸ್ವಚ್ಛ ರಾಜ್ಯ' ಎಂಬ ಸರ್ಟಿಫಿಕೇಟ್ ನೀಡುವ ಆಶಿಶ್‌ನಂದಿ ಅವರಿಗೆ ಅಲ್ಲಿನ ಶೇಕಡಾ 75ರಷ್ಟು ಕುಟುಂಬಗಳ ಬಡತನ ಯಾಕೆ ಕಾಣುತ್ತಿಲ್ಲ?  ಕೊನೆಯದಾಗಿ ಒಬಿಸಿ, ಎಸ್‌ಸಿ, ಎಸ್‌ಟಿಗಳು ಅಧಿಕಾರಕ್ಕೆ ಬರದೆ ಇರುವುದರಿಂದಲೇ ಪಶ್ಚಿಮಬಂಗಾಳ ಸ್ವಚ್ಛವಾಗಿ ಉಳಿದಿದೆ ಎನ್ನುವುದು ನಿಜವಾಗಿದ್ದರೆ ಇಡೀ ಭಾರತ ಸ್ವಚ್ಛವಾಗಿ ಉಳಿಯಬೇಕಿತ್ತಲ್ಲಾ? ಯಾಕೆಂದರೆ ಕಳೆದ 65ವರ್ಷಗಳಲ್ಲಿ  ಒಬಿಸಿ, ಎಸ್‌ಸಿ,ಎಸ್‌ಟಿಗೆ ಸೇರಿದವರ‌್ಯಾರೂ ಪ್ರಧಾನಿಯಾಗಲೇ ಇಲ್ಲವಲ್ಲಾ?