Monday, October 6, 2014

ಡಿ.ಉಮಾಪತಿ ಅವರ ಕುರಿತು ಒಂದಿಷ್ಟು..

ಅತೀವವಾದ ಸಂಕೋಚ ಮತ್ತು ಹಿಂಜರಿಕೆ, ತನಗಾದ ಅನ್ಯಾಯವನ್ನು ಪ್ರತಿಭಟಿಸಲಾಗದಷ್ಟೂ ಔದಾರ್ಯ, ವಿರೋಧಿಗಳ ಮನಸ್ಸನ್ನು ನೋಯಿಸಲು ಇಷ್ಟಪಡದಷ್ಟು ವಿನಯವಂತಿಕೆ ಮೊದಲಾದ ತಮ್ಮ ಸಹಜ ಸ್ವಭಾವಗಳನ್ನೆಲ್ಲ ಪಕ್ಕಕ್ಕಿಟ್ಟು ಉಮಾಪತಿಯವ
ರು ದಿಟ್ಟತನದಿಂದ ಬರೆಯುತ್ತಿರುವುದನ್ನು ಕಂಡು ಸ್ನೇಹಿತನಾದ ನನಗೆ ಉಕ್ಕಿ ಬರುತ್ತಿರುವ ಸಂತೋಷವನ್ನು ತಡೆದುಕೊಳ್ಳಲಿಕ್ಕಾಗದೆ ಈ ಎರಡು ಸಾಲುಗಳನ್ನು ಬರೆಯುತ್ತಿರುವೆ. ನಾನು ಮತ್ತು ಉಮಾಪತಿ ದೆಹಲಿಯಲ್ಲಿ ಒಂಭತ್ತು ವರ್ಷಗಳ ಕಾಲ ಹೆಚ್ಚು ಕಡಿಮೆ ಜತೆಜತೆಯಲ್ಲಿಯೇ ಕಳೆದವರು. ದೆಹಲಿ ಬದುಕಿನ ಏಕಾಂಗಿತನ, ವೃತ್ತಿ ಬದುಕಿನ ಸಂಕಟಗಳು, ಕೌಟುಂಬಿಕ ಬದುಕಿನ ತಾಪತ್ರಯಗಳನ್ನೆಲ್ಲ ಮುಚ್ಚಿಟ್ಟುಕೊಳ್ಳದೆ ಹಂಚಿಕೊಂಡು ಇದ್ದವರು.
ವೃತ್ತಿ ಬಗೆಗಿನ ಬದ್ದತೆ, ಸಮಾಜದ ಬಗೆಗಿನ ಕಾಳಜಿ, ಸರಳತೆ, ಪ್ರಾಮಾಣಿಕತೆಯಲ್ಲಿ ನಮಗಿಬ್ಬರಿಗೂ ಹೆಚ್ಚಿನ ವ್ಯತ್ಯಾಸವಿಲ್ಲದಿದ್ದರೂ, ಉಮಾಪತಿಯವರ ಕನ್ನಡ ಭಾಷೆಯ ಮೇಲಿನ ಹಿಡಿತ,ಕನ್ನಡ ಸಾಹಿತ್ಯವೂ ಸೇರಿದಂತೆ ಅವರ ಓದಿನ ಹರವು ಮತ್ತು ಗ್ರಹಣ ಶಕ್ತಿಗೆ ನಾನು ಸಾಟಿಯಲ್ಲ. ನ್ಯಾಯಾಲಯಗಳ ಕಲಾಪ ವರದಿಯಲ್ಲಿ ಬಹುಷ: ಕನ್ನಡದ ಮಟ್ಟಿಗೆ ಅವರೇ ನಂಬರ್ ಒನ್,ಟು, ತ್ರಿ ಎಲ್ಲ. ಇದು ಎಷ್ಟೋ ಬಾರಿ ನನ್ನಲ್ಲಿ ಸಣ್ಣ ಅಸೂಯೆಯನ್ನೂ ಹುಟ್ಟಿಸಿದ್ದಿದೆ. ಇದು ನಾನು ಹೆಚ್ಚು ಓದುವಂತೆ ಮತ್ತು ನನ್ನ ಗ್ರಹಣ ಶಕ್ತಿಯನ್ನು ಇನ್ನಷ್ಟು ಹರಿತಗೊಳಿಸಲು ಪ್ರಯತ್ನಿಸುವಂತೆ ಪ್ರೇರೇಪಿಸಿದೆ. ಇದರಿಂದ ವೃತ್ತಿಯಲ್ಲಿ ಮುಖ್ಯವಾಗಿ ದೆಹಲಿಯ ನನ್ನ ವೃತ್ತಿ ಜೀವನದಲ್ಲಿ ನಾನೊಂದಿಷ್ಟು ಸಾಧನೆ ಮಾಡಿದ್ದರೆ ಅದರಲ್ಲಿ ಉಮಾಪತಿಯವರ ಪರೋಕ್ಷ ಪಾಲಿದೆ.
ಆದರೆ ಉಮಾಪತಿಯವರು ವರದಿ ಮಾಡುವುದನ್ನು ಬಿಟ್ಟರೆ ಲೇಖನ-ಅಂಕಣಗಳ ಸ್ವತಂತ್ರ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿಲ್ಲ ಎನ್ನುವುದು ನನಗೆ ಅವರ ಬಗ್ಗೆ ಇದ್ದ ಏಕೈಕ ಅಸಮಾಧಾನವಾಗಿತ್ತು. ಕನ್ನಡ ಪ್ರಭವನ್ನು ತೊರೆದು ವಿಜಯಕರ್ನಾಟಕಕ್ಕೆ ಸೇರಿದ ನಂತರ ಇದ್ದಕ್ಕಿದ್ದ ಹಾಗೆ ಅವರು ಎಲ್ಲ ಕಡಿವಾಣಗಳನ್ನು ಕಿತ್ತೊಗೆದವರಂತೆ, ಮುಕ್ತವಾಗಿ, ದಿಟ್ಟತನದಿಂದ ಬರೆಯುತ್ತಿರುವುದು ಕಂಡು ಅವರ ಬಗೆಗಿನ ಸಣ್ಣ ಅಸಮಾಧಾನವೂ ತೊಲಗಿ ಪ್ರೀತಿ ಇಮ್ಮಡಿಯಾಗಿದೆ.
ಬಹಳ ದಿನಗಳಿಂದ ಇದನ್ನೆಲ್ಲ ಬರೆಯಬೇಕೆಂದುಕೊಂಡವನು ಇಂದು ವಿಜಯ ಕರ್ನಾಟಕದ ಅವರ ಅಂಕಣ ಓದಿದ ನಂತರ ಬರೆಯಲೇ ಬೇಕೆನಿಸಿತು. ನನ್ನ ಯುವ ಪತ್ರಕರ್ತ ಮಿತ್ರರು ಅನೇಕ ಬಾರಿ ‘ನಮಗೆಲ್ಲಿದ್ದಾರೆ ರೋಲ್ ಮಾಡೆಲ್’ಗಳು? ಎಂದು ನನ್ನನ್ನು ಅಣಕಿಸುತ್ತಿರುತ್ತಾರೆ. ಅವರಿಗೆ ನನ್ನ ಪ್ರಾಮಾಣಿಕ ಉತ್ತರ: ಡಿ.ಉಮಾಪತಿ.