Monday, May 2, 2011

ಪ್ರಶ್ನಿಸುವ ಸಂಸ್ಥೆಗಳ ಮೇಲೆಲ್ಲ ಕೆಂಗಣ್ಣು

ಭ್ರಷ್ಟಾಚಾರದ ನಿರ್ಮೂಲನೆಗಾಗಿ ‘ಅವತಾರವೆತ್ತಿ ಬರಲಿರುವ’ ಜನಲೋಕಪಾಲರ ನಿರೀಕ್ಷೆಯಲ್ಲಿ ದೇಶ ಮೈಮರೆತಿರುವಾಗಲೇ ಅದೇ ಉದ್ದೇಶಕ್ಕಾಗಿ ಬಹುಹಿಂದೆಯೇ ರಚನೆಗೊಂಡ ಸಂಸ್ಥೆಗಳಲ್ಲೊಂದಾದ ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ’ಯನ್ನು (ಪಿಎಸಿ) ದುರ್ಬಲಗೊಳಿಸುವ ಪ್ರಯತ್ನ ಪ್ರಾರಂಭವಾಗಿದೆ. ಇದು ಎರಡು ರಾಜಕೀಯ ಪಕ್ಷಗಳ ನಡುವಿನ ಸಂಘರ್ಷದಂತೆ ಮೇಲ್ನೋಟಕ್ಕೆ ಕಂಡರೂ ಇದರ ಆಳದಲ್ಲಿ ಪಿಎಸಿ ಸೇರಿದಂತೆ ತಮ್ಮನ್ನು ಪ್ರಶ್ನಿಸುವ ಅಧಿಕಾರ ಹೊಂದಿರುವ ಎಲ್ಲ ಸಂಸದೀಯ ಮತ್ತು ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ರಾಜಕಾರಣಿಗಳು ಹೊಂದಿರುವ ಅಸಹನೆಯನ್ನು ಕಾಣಬಹುದಾಗಿದೆ.
ಸಿಬಿಐನಿಂದ ಹಿಡಿದು ಸಿವಿಸಿಯಂತಹ ಸಂಸ್ಥೆಗಳ ವರೆಗೆ, ಸ್ಪೀಕರ್‌ನಿಂದ ಹಿಡಿದು ನ್ಯಾಯಮೂರ್ತಿಗಳ ಹುದ್ದೆ ವರೆಗೆ ಎಲ್ಲವೂ ರಾಜಕಾರಣಿಗಳಿಂದ ನಿರಂತರವಾಗಿ ಚಾರಿತ್ರ್ಯಹನನಕ್ಕೆ ಒಳಗಾಗುತ್ತಾ ಬಂದಿವೆ. ಈಗ ಪಿಎಸಿ ಸರದಿ.
ಜನತೆಯ ಆಶೋತ್ತರಗಳ ಪ್ರತೀಕವಾಗಿರುವ ಸಂಸತ್, ಕಾನೂನು ರಚನೆಯ ಜತೆಯಲ್ಲಿ ಕಾರ್ಯಾಂಗದ ಕಾರ್ಯನಿರ್ವಹಣೆಯ ಮೇಲೂ ಕಣ್ಣಿಡುತ್ತದೆ. ಈ ಹೊಣೆ ನಿರ್ವಹಣೆಯಲ್ಲಿ ಸಂಸತ್‌ಗೆ ಪ್ರಧಾನ ಪಾತ್ರವಾದರೆ ಸಂಸದೀಯ ಸಮಿತಿಗಳಿಗೆ ಪೋಷಕ ಪಾತ್ರ. ಮೂರು ಹಣಕಾಸು ಸಮಿತಿಗಳಾದ ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಅಂದಾಜು ಸಮಿತಿ ಮತ್ತು ಸಾರ್ವಜನಿಕ ಉದ್ಯಮಗಳ ಸಮಿತಿ; ಜತೆಗೆ, ವಿವಿಧ ವಿಷಯಗಳ ಮೇಲಿನ 15 ಸದನ ಸಮಿತಿ, 29 ಸಚಿವ ಖಾತೆಗಳ ಸಲಹಾ ಸಮಿತಿ ಹಾಗೂ ಹದಿನೇಳು ಇಲಾಖಾವಾರು ಸಮಿತಿಗಳು ಸೇರಿದಂತೆ ಒಟ್ಟು 64 ಸಂಸದೀಯ ಸಮಿತಿಗಳಿವೆ. ಇವುಗಳ ಜತೆಗೆ ಆಗಾಗ ಕೇಳಿಬರುವ ಆರೋಪಗಳ ತನಿಖೆಗೆ ಜಂಟಿ ಸದನ ಸಮಿತಿಯನ್ನು ರಚಿಸಲಾಗುತ್ತದೆ.
ಪ್ರಧಾನಪಾತ್ರ ವಹಿಸಬೇಕಾಗಿರುವ ಸಂಸತ್ ಇತ್ತೀಚೆಗೆ ತನ್ನ ಕಾರ್ಯನಿರ್ವಹಣೆಯಲ್ಲಿ ವಿಫಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೋಷಕ ಪಾತ್ರಗಳಾದ ಸಂಸದೀಯ ಸಮಿತಿಗಳ ಜವಾಬ್ದಾರಿ ಹೆಚ್ಚಿದೆ. ಇದಕ್ಕಾಗಿಯೇ ಇವುಗಳ ಮೇಲೆ ರಾಜಕಾರಣಿಗಳ ಕೆಂಗಣ್ಣು ಬಿದ್ದಿರುವುದು. ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನಗಳಲ್ಲಿಯೇ ಕೇಂದ್ರ ಸರ್ಕಾರದ ಸಂಘರ್ಷಾತ್ಮಕ ನಿಲುವನ್ನು ಪ್ರತಿಭಟಿಸಿ ಎನ್‌ಡಿಎ ಸಂಸದೀಯ ಸಮಿತಿಗಳನ್ನು ಬಹಿಷ್ಕರಿಸುವ ಬೆದರಿಕೆ ಹಾಕಿತ್ತು. ಈಗ ಯುಪಿಎ ಸದಸ್ಯರು ಪಿಎಸಿ ಅಧ್ಯಕ್ಷರನ್ನೇ ಕಿತ್ತುಹಾಕಲು ಹೊರಟಿದ್ದಾರೆ.
ರಾಷ್ಟ್ರೀಯ ಹಣಕಾಸು ವ್ಯವಹಾರದ ಮೇಲಿನ ಸಂಸದೀಯ ನಿಯಂತ್ರಣದ ಮೂಲಕವೇ ಕಾರ್ಯಾಂಗವನ್ನು ಶಾಸಕಾಂಗಕ್ಕೆ  ಉತ್ತರದಾಯಿಯನ್ನಾಗಿ ಮಾಡಲು ಸಾಧ್ಯ. ಈ ಸಂಸದೀಯ ನಿಯಂತ್ರಣಕ್ಕಾಗಿ ಇರುವ ಹಲವು ಸಾಧನಗಳಲ್ಲಿ ಮುಖ್ಯವಾದುದು ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ’. ಈ ಸಮಿತಿ ನಿಷ್ಪಕ್ಷಪಾತವಾಗಿ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಾರದು. ಭಾರತದಲ್ಲಿ ಸ್ವಾತಂತ್ರ್ಯಪೂರ್ವದಲ್ಲೇ ಪಿಎಸಿ ರಚನೆಯಾಗಿತ್ತು. 1921ರಲ್ಲಿ ಸ್ಥಾಪನೆಗೊಂಡ ಪಿಎಸಿಗೆ ಆಗಿನ ಗವರ್ನರ್ ಜನರಲ್ ಮಂಡಳಿಯ ಹಣಕಾಸು ಸದಸ್ಯರೇ ಅಧ್ಯಕ್ಷರಾಗಿದ್ದರು.
ಲೋಕಸಭಾಧ್ಯಕ್ಷರ ನಿಯಂತ್ರಣಕ್ಕೆ ಒಳಪಡಿಸಿದ ಪಿಎಸಿ ರಚನೆಗೊಂಡದ್ದು ಸಂವಿಧಾನ ರಚನೆಯಾದ ನಂತರ. ಈಗ ವಿವಾದಕ್ಕೆ ಸಿಲುಕಿರುವ ಪಿಎಸಿ ಅಧ್ಯಕ್ಷ ಸ್ಥಾನಕ್ಕೆ 1967ರವರೆಗೆ ಆಡಳಿತ ಪಕ್ಷದ ಸದಸ್ಯರೇ ನೇಮಕಗೊಳ್ಳುತ್ತಿದ್ದರು. ಆಶ್ಚರ್ಯವೆಂದರೆ ಈ ಸಂಪ್ರದಾಯ ತಪ್ಪಿಸಿ ಪಿಎಸಿ ಅಧ್ಯಕ್ಷ ಸ್ಥಾನಕ್ಕೆ ವಿರೋಧಪಕ್ಷದ ನಾಯಕರನ್ನು ಮೊದಲು ನೇಮಕಮಾಡಿದ್ದು ನಂತರದ ದಿನಗಳಲ್ಲಿ ವಿರೋಧಪಕ್ಷಗಳಿಂದ ಸರ್ವಾಧಿಕಾರಿ ಎಂದು ದೂಷಣೆಗೊಳಗಾದ ಆಗಿನ ಪ್ರಧಾನಿ ಇಂದಿರಾಗಾಂಧಿ. ಆ ರೀತಿ ನೇಮಕಗೊಂಡವರು ಹಿರಿಯ ಸಂಸದೀಯಪಟು ಎಂ.ಎಚ್.ಮಸಾನಿ. ಆಗಿನ ಲೋಕಸಭಾಧ್ಯಕ್ಷ ನೀಲಂ ಸಂಜೀವ ರೆಡ್ಡಿ ಅವರು ಮಸಾನಿಯವರ ಕಾರ್ಯಪಟುತ್ವ, ನಿಷ್ಪಕ್ಷಪಾತ ನಡವಳಿಕೆ ಮತ್ತು ಬದ್ಧತೆಯನ್ನು ಕೊಂಡಾಡಿರುವುದು ಲೋಕಸಭೆ ದಾಖಲೆಯಲ್ಲಿವೆ. ಮೊನ್ನೆ ಅದೇ ‘ಪಿಎಸಿಯ ಅಧ್ಯಕ್ಷರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದೇವೆ’ ಎಂದು ಬಹುಸಂಖ್ಯಾತ ಸದಸ್ಯರು ಕೂಗಾಡಿದ್ದಾರೆ. ಅಧ್ಯಕ್ಷರು ಪಟ್ಟುಹಿಡಿದು ಸಮಿತಿ ಅಂಗೀಕಾರ ನೀಡದ ಕರಡು ವರದಿಯನ್ನೇ ಲೋಕಸಭಾಧ್ಯಕ್ಷರಿಗೆ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಮಂಡಿಸಲಾಗುವ ಬಜೆಟ್‌ನ ನಂತರ ಜನತೆ ಕೂಡಾ ದೇಶದ ಆಯವ್ಯಯದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಬಹುಕೋಟಿ  ರೂಪಾಯಿ ಲೆಕ್ಕದ ಈ ಆರ್ಥಿಕ ವ್ಯವಹಾರ ಸಾಮಾನ್ಯ ಜನರ ತಲೆಗೆ ಹತ್ತುವುದು ಕೂಡಾ ಕಷ್ಟ. ಈ ಹಿನ್ನೆಲೆಯಲ್ಲಿಯೇ ಸಿಎಜಿ ಮತ್ತು ಪಿಎಸಿಯ ಪಾತ್ರ ಮಹತ್ವದ್ದು. ಬಜೆಟ್‌ನಲ್ಲಿ ನಿಗದಿಪಡಿಸಿದ ಅನುದಾನದ ಖರ್ಚಿನ ವಿವರವನ್ನು ಹೊಂದಿರುವ ಧನ ವಿನಿಯೋಗ ಲೆಕ್ಕಪತ್ರವನ್ನು ಸರ್ಕಾರದ ಪ್ರತಿಯೊಂದು ಇಲಾಖೆ ಸಂಸತ್‌ಗೆ ಸಲ್ಲಿಸಬೇಕಾಗುತ್ತದೆ.
ಈ ಲೆಕ್ಕಪತ್ರದ ಪರಿಶೋಧನೆ ನಡೆಸುವ ಮಹಾಲೇಖಪಾಲರು ಇಲಾಖಾವಾರು ವರದಿಗಳನ್ನು ತಯಾರಿಸಿ ಪಿಎಸಿಗೆ ಸಲ್ಲಿಸುತ್ತಾರೆ. ಸಂಸತ್‌ನ ಧನವಿನಿಯೋಗ ನಿಯಮಾವಳಿಗಳಿಗೆ ಅನುಗುಣವಾಗಿ ಸರ್ಕಾರಿ ಇಲಾಖೆಗಳು ಹಣ ಖರ್ಚು ಮಾಡಿವೆಯೇ ಎಂಬುದನ್ನು ಪರಿಶೀಲಿಸುವುದು ಪಿಎಸಿಯ ಕರ್ತವ್ಯ. ಸಿಎಜಿ ಮತ್ತು ಪಿಎಸಿ ಇಂತಹ ಪರಿಶೀಲನೆ ನಡೆಸುವಾಗಲೇ ಭ್ರಷ್ಟರ ಭಾನಗಡಿಗಳು ಹೊರಬೀಳುವುದು.
ವರದಿ ನೀಡುವವರೆಗೆ ಎಲ್ಲವೂ ಸರಿ. ನಂತರ? ಈಗಿನ ವಿವಾದವನ್ನೇ ಉದಾಹರಣೆಗಾಗಿ ತೆಗೆದುಕೊಂಡರೆ ಮುರಳಿ ಮನೋಹರ ಜೋಷಿ ಸಲ್ಲಿಸಿರುವ ವರದಿಯನ್ನು ಲೋಕಸಭಾಧ್ಯಕ್ಷರು ತಿರಸ್ಕರಿಸುವ ಎಲ್ಲ ಸಾಧ್ಯತೆಗಳಿವೆ. ಯಾಕೆಂದರೆ ಅದು ಸಮಿತಿಯ ಅಂಗೀಕಾರ ಇಲ್ಲದ ಕರಡು ವರದಿ. ಪಿಎಸಿಯ ಅಂತಿಮ ವರದಿಗಳೇ ಶೈತ್ಯಾಗಾರದಲ್ಲಿರುವಾಗ ಈ ಕರಡು ವರದಿಯನ್ನು ಕೇಳುವವರಾರು? ಸಂಸತ್‌ಗೆ ಐವತ್ತು ವರ್ಷ ತುಂಬಿದ್ದ ಸಂದರ್ಭದಲ್ಲಿ ಪಿಎಸಿ ವರದಿಗಳ ಬಗ್ಗೆ ಒಂದು ಸಮೀಕ್ಷೆ ನಡೆದಿತ್ತು. ಅದರ ಪ್ರಕಾರ ಏಳನೇ ಲೋಕಸಭೆಯಿಂದ ಹದಿಮೂರನೇ ಲೋಕಸಭೆಯ ವರೆಗಿನ ಅವಧಿಯಲ್ಲಿ ಪಿಎಸಿ ಮಾಡಿರುವ 6113 ಶಿಫಾರಸುಗಳಲ್ಲಿ ಸರ್ಕಾರ ಒಪ್ಪಿಕೊಂಡಿದ್ದು 3709 ಮಾತ್ರ.
ಮುಕ್ತ ಮಾರುಕಟ್ಟೆಯಿಂದ ಪಡೆಯುವ ಸಾಲದ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಪಿಎಸಿ ನಿರಂತರವಾಗಿ ಶಿಫಾರಸು ಮಾಡುತ್ತಾ ಬಂದ ಕಾರಣದಿಂದಾಗಿಯೇ 2000ನೇ ವರ್ಷದಲ್ಲಿ ‘ಹಣಕಾಸು ಜವಾಬ್ದಾರಿ ಮಸೂದೆ’ ಮಂಡನೆಯಾಗಿದ್ದು. ಲೋಕಸಭೆಯ ಅವಧಿಯಲ್ಲಿ ಸಾರ್ವಜನಿಕ ಉದ್ಯಮಗಳ ಷೇರುವಿಕ್ರಯದ ಬಗ್ಗೆ ನೀಡಿದ ವರದಿಯಲ್ಲಿ ಪಿಎಸಿ ‘ಈ ವ್ಯವಹಾರದಲ್ಲಿ ಪಾರದರ್ಶಕತೆಯ ಅವಶ್ಯಕತೆಯಿದ್ದು ಇದರಲ್ಲಿ ತೊಡಗಿರುವ ಅಧಿಕಾರಿಗಳ ಮೇಲೆ ಜವಾಬ್ದಾರಿಯನ್ನು ನಿಗದಿಗೊಳಿಸಬೇಕಾಗುತ್ತದೆ’ ಎಂದು ಹೇಳಿತ್ತು.
ಇದನ್ನು ಒಪ್ಪಿಕೊಂಡ ಆಗಿನ ಕೇಂದ್ರ ಸರ್ಕಾರ, ತನಿಖಾ ಸಮಿತಿಯನ್ನು ನೇಮಿಸಿತ್ತು. ವಸತಿ ಮಂಜೂರಾತಿಯಲ್ಲಿ ವಸತಿ ಸಚಿವರ ವಿವೇಚನಾಧಿಕಾರದ ದುರ್ಬಳಕೆ ತಡೆಯಬೇಕೆಂಬ ಪಿಎಸಿ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡು ಹೊಸ ನೀತಿಯೊಂದನ್ನು ರೂಪಿಸಿತ್ತು. ಇವು ಪಿಎಸಿ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡ ಕೆಲವು ಉದಾಹರಣೆಗಳು. ಇತ್ತೀಚಿನ ದಿನಗಳಲ್ಲಿ ಪಿಎಸಿ ಶಿಫಾರಸುಗಳನ್ನು ಒಪ್ಪಿಕೊಂಡಿದ್ದಕ್ಕಿಂತ ತಿರಸ್ಕರಿಸಿರುವುದೇ ಹೆಚ್ಚು. ಪಿಎಸಿ ದೊಡ್ಡಕುಳಗಳತ್ತ ಕಣ್ಣು ಹಾಕಿದಾಗೆಲ್ಲ ಪ್ರತಿರೋಧ ಎದುರಾಗುತ್ತದೆ. ಕಾರ್ಗಿಲ್ ಯುದ್ಧದ ಕಾಲದಲ್ಲಿ ನಡೆದ ಶವಪೆಟ್ಟಿಗೆ ಖರೀದಿ ಅವ್ಯವಹಾರವನ್ನು ಸಿಎಜಿ ಬಯಲುಗೊಳಿಸಿದರೂ ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಎನ್‌ಡಿಎ ಸರ್ಕಾರ ಬಿಟ್ಟುಕೊಡಲಿಲ್ಲ.
ಈಗ 2ಜಿ ತರಂಗಾಂತರದ ವ್ಯವಹಾರದಲ್ಲಿನ ಅಕ್ರಮದಲ್ಲಿ ಪ್ರಧಾನಿ ಕಾರ್ಯಾಲಯದ ಪಾತ್ರ ಉಲ್ಲೇಖಿಸಿದ ಕೂಡಲೇ ಪಿಎಸಿಯನ್ನೇ ಬರ್ಖಾಸ್ತುಗೊಳಿಸುವ ಪ್ರಯತ್ನ ನಡೆದಿದೆ.
ರಾಜ್ಯಗಳದ್ದೂ ಇದೇ ಸ್ಥಿತಿ. ಯಾವ ರಾಜ್ಯದಲ್ಲಿಯೂ ಪಿಎಸಿ ಕಾರ್ಯನಿರ್ವಹಣೆ ಸಮಾಧಾನಕರವಾಗಿಲ್ಲ. ಬಹಳಷ್ಟು ರಾಜ್ಯಗಳಲ್ಲಿ ಸರ್ಕಾರಿ ಇಲಾಖೆಗಳು ಬಜೆಟ್ ಅನುದಾನವನ್ನು ಮೀರಿ ಖರ್ಚು ಮಾಡಿವೆ. ಈ ಮಿತಿಮೀರಿದ ಖರ್ಚಿಗೆ ವಿಧಾನಮಂಡಲದ ಅಂಗೀಕಾರ ಅನಿವಾರ್ಯವಾದರೂ ಯಾರೂ ಆ ಬಗ್ಗೆ  ತಲೆಕೆಡಿಸಿಕೊಂಡಿಲ್ಲ. ಈ ಲೋಪವೇ ಹಣಕಾಸು ಅವ್ಯವಹಾರದ ಹಗರಣಗಳಿಗೆ ದಾರಿಮಾಡಿಕೊಡುತ್ತಿರುವುದು.

1987-88ರಿಂದ 1995-96ರ ವರೆಗೆ ಬಿಹಾರ ರಾಜ್ಯದ ಪಶುಸಂಗೋಪನಾ ಇಲಾಖೆ ಬಜೆಟ್ ನಿಗದಿಪಡಿಸಿದ್ದ ಅನುದಾನ ಮೀರಿ ಖರ್ಚು ಮಾಡುತ್ತಲೇ ಇತ್ತು. ಉದಾಹರಣೆಗೆ  1993-94 ರ ಅವಧಿಯಲ್ಲಿ ಬಜೆಟ್ ಅನುದಾನ 77 ಕೋಟಿ ರೂಪಾಯಿಗಳಾದರೆ ಖರ್ಚಾಗಿರುವುದು 199 ಕೋಟಿ ರೂಪಾಯಿ, 1995-96ರಲ್ಲಿ ಬಜೆಟ್ ಅನುದಾನ 82 ಕೋಟಿ ರೂಪಾಯಿಗಳಾದರೆ ಖರ್ಚಾಗಿರುವುದು 228 ಕೋಟಿ ರೂಪಾಯಿ. ಕೊನೆಗೊಂದು ದಿನ ಎಲ್ಲವೂ ಬಯಲಾಯಿತು. 1999ರ ಮಾರ್ಚ್ ತಿಂಗಳ ವರೆಗಿನ ಅವಧಿಯ ದಾಖಲೆಗಳ ಪ್ರಕಾರ ಬಜೆಟ್ ಮಿತಿಯನ್ನು ಮೀರಿ ರಾಜ್ಯಗಳಲ್ಲಿ ಖರ್ಚಾಗಿರುವ ಹಣದ ಮೊತ್ತ 93,000 ಕೋಟಿ ರೂಪಾಯಿ.
ರಾಜಕೀಯ ದಾಳಿಗಳನ್ನು ಸಮರ್ಥವಾಗಿ ಎದುರಿಸಲು ಪಿಎಸಿಗೆ ಸಾಧ್ಯವಾಗದೆ ಇರುವುದಕ್ಕೆ ಅದರ ರಚನೆಯಲ್ಲಿನ ದೋಷ ಮತ್ತು ಕಾರ್ಯನಿರ್ವಹಣೆಯಲ್ಲಿನ ಇತಿಮಿತಿಗಳೂ ಕಾರಣ. ಉದಾಹರಣೆಗೆ ಲೆಕ್ಕಪತ್ರವನ್ನು ಪರಿಶೀಲಿಸುವಾಗ ಸಂಬಂಧಿತ ಇಲಾಖೆಯ ಕಾರ್ಯದರ್ಶಿಗಳು ಪಿಎಸಿ ಮುಂದೆ ಹಾಜರಾಗಿ ಸಾಕ್ಷ್ಯ ನೀಡಬೇಕೆಂದು ಹೇಳುತ್ತದೆ ನಿಯಮ. ಆದರೆ ನಿರ್ದಿಷ್ಟ ಪ್ರಕರಣವನ್ನು ನಿರ್ವಹಿಸಿದ ಅಧಿಕಾರಿಗಳ ಸಾಕ್ಷ್ಯ ಕಡ್ಡಾಯ ಅಲ್ಲ. ಇದರಿಂದಾಗಿ ಅಧಿಕಾರಿಗಳ ಮೇಲೆ ಜವಾಬ್ದಾರಿಯನ್ನು ಹೊರಿಸಲು ಸಾಧ್ಯವಾಗುತ್ತಿಲ್ಲ. ಅಮೆರಿಕದಲ್ಲಿ ಅಧಿಕಾರಿಗಳು ಮಾತ್ರವಲ್ಲ, ಅವಶ್ಯಕ ಸಂದರ್ಭಗಳಲ್ಲಿ  ಸಾರ್ವಜನಿಕ ವ್ಯಕ್ತಿಗಳಿಂದಲೂ ಸಾಕ್ಷ್ಯ ಸಂಗ್ರಹಿಸಬಹುದಾಗಿದೆ. ಪಿಎಸಿ ವರದಿ ನೀಡುವಾಗ ಆಗುತ್ತಿರುವ ವಿಳಂಬಕ್ಕೆ ಇನ್ನೊಂದು ಕಾರಣ ಸಾವಿರಾರು ಪುಟಗಳ ಸಿಎಜಿ ವರದಿ. ಇದರ ಬದಲಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಮಹತ್ವದೆನಿಸಿದ ಪ್ರಕರಣಗಳ ಲೆಕ್ಕಪತ್ರಗಳ ವರದಿಯನ್ನಷ್ಟೇ ಸಿಎಜಿ ಸಲ್ಲಿಸಿದರೆ ಪಿಎಸಿ ಪರಿಶೀಲನೆಗೂ ಅನುಕೂಲವಾಗಬಹುದು ಎನ್ನುವ ಅಭಿಪ್ರಾಯ ಇದೆ.
ಪಿಎಸಿಯ ಕಾರ್ಯನಿರ್ವಹಣೆಯಲ್ಲಿನ ಮತ್ತೊಂದು ಸಮಸ್ಯೆ ವಿಳಂಬವಾಗಿ ಸಲ್ಲಿಸಲಾಗುವ ಲೆಕ್ಕಪತ್ರಗಳು. ಈಗ ವಿವಾದ ಸೃಷ್ಟಿಸಿರುವ 2ಜಿ ತರಂಗಾಂತರ ಹಗರಣ ನಡೆದಿದ್ದು 2007-2008ರ ಹಣಕಾಸು ವರ್ಷದಲ್ಲಿ. ಅಂದರೆ ಮೂರುವರ್ಷಗಳ ಹಿಂದಿನ ಲೆಕ್ಕಪತ್ರಗಳನ್ನು ಪಿಎಸಿ ಈಗ ಪರಿಶೀಲನೆ ನಡೆಸುತ್ತಿದೆ. ನಮ್ಮಲ್ಲಿನ ಪಿಎಸಿಗೆ ಬ್ರಿಟನ್ ಸಂಸತ್ ಮಾದರಿಯಾದರೂ ಅಲ್ಲಿನ ಎಲ್ಲ ನಿಯಮಾವಳಿಗಳನ್ನು ಇಲ್ಲಿ ಅಳವಡಿಸಲಾಗಿಲ್ಲ.

ಬ್ರಿಟನ್‌ನಲ್ಲಿ ಸರ್ಕಾರಿ ಇಲಾಖೆಗಳು ಪ್ರತಿವರ್ಷದ ಸೆಪ್ಟೆಂಬರ್ 30ರೊಳಗೆ ಲೆಕ್ಕಪತ್ರವನ್ನು ಸಿಎಜಿಗೆ ಸಲ್ಲಿಸುವುದು ಕಾನೂನು ಪ್ರಕಾರ ಕಡ್ಡಾಯ. ಮುಂದಿನ ಜನವರಿ ಅಂತ್ಯದೊಳಗೆ ದೃಢೀಕೃತ ಲೆಕ್ಕಪತ್ರವನ್ನು ಸಿಎಜಿ ಸಲ್ಲಿಸಬೇಕಾಗುತ್ತದೆ. ಆ ವರದಿಗಳನ್ನು ಎರಡು ತಿಂಗಳೊಳಗೆ ಪರಿಶೀಲನೆ ನಡೆಸಿ ಪಿಎಸಿ ತನ್ನ ವರದಿ ಸಲ್ಲಿಸಬೇಕೆಂಬ ನಿಯಮ ಇದೆ.
ಪಿಎಸಿಯ ಸುಧಾರಣೆ ನಡೆಯಬೇಕೆಂಬ ಕೂಗು ಬಹಳ ಕಾಲದಿಂದ ಕೇಳಿಬರುತ್ತಿದೆ. 
ಇದಕ್ಕೊಂದು ಸ್ಪಷ್ಟ ರೂಪು ನೀಡಿದ್ದು ನ್ಯಾಯಮೂರ್ತಿ ವೆಂಕಟಾಚಲಯ್ಯ ಅಧ್ಯಕ್ಷತೆಯ ಸಂವಿಧಾನ ಕಾರ್ಯನಿರ್ವಹಣೆಯ ಪುನರ್‌ಪರಿಶೀಲನೆಯ ರಾಷ್ಟ್ರೀಯ ಆಯೋಗ. ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯನ್ನು ಸಾಂವಿಧಾನಿಕ ಸಂಸ್ಥೆಯಾಗಿ ಪುನರ್‌ರಚಿಸಿ ಹಕ್ಕುಬಾಧ್ಯತೆಗಳನ್ನು ಸ್ಪಷ್ಟಪಡಿಸಬೇಕು, ಪಿಎಸಿಯ ಅಧಿಕಾರವಧಿಯನ್ನು ಲೋಕಸಭೆ ಮತ್ತು ವಿಧಾನಸಭೆಯ ರೀತಿಯಲ್ಲಿ ಐದು ವರ್ಷಗಳಿಗೆ ನಿಗದಿಗೊಳಿಸಬೇಕು ಹಾಗೂ ರಾಜ್ಯಸಭೆಯಲ್ಲಿರುವ ವ್ಯವಸ್ಥೆಯಂತೆ ಪ್ರತಿ ಎರಡು ವರ್ಷಗಳಿಗೊಮ್ಮೆ ಮೂರನೇ ಒಂದರಷ್ಟು ಸಮಿತಿ ಸದಸ್ಯರು ನಿವೃತ್ತರಾಗಿ ಹೊಸ ಸದಸ್ಯರ ನೇಮಕ ನಡೆಯಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಇದರ ಜತೆಗೆ ಸರ್ಕಾರಿ ಇಲಾಖೆಗಳು ಧನವಿನಿಯೋಗ ಲೆಕ್ಕಪತ್ರಗಳನ್ನು ಸಂಸತ್ ಮತ್ತು ವಿಧಾನಮಂಡಲಗಳಿಗೆ ಹಣಕಾಸು ವರ್ಷದ ಅಂತ್ಯದೊಳಗೆ  ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕು. ಒಂದೊಮ್ಮೆ ಬಜೆಟ್ ನಿಗದಿಪಡಿಸಿದ್ದ ಅನುದಾನದ ಮಿತಿ ಮೀರಿ ಖರ್ಚು ಮಾಡಿದ್ದರೆ ಅದಕ್ಕೆ ಆ ಹಣಕಾಸು ವರ್ಷದೊಳಗೆ ಅಂಗೀಕಾರ ಪಡೆಯಬೇಕು ಎಂಬ ಸಲಹೆಗಳು ಕೂಡಾ ಇವೆ. ಈ ರೀತಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಬಲವರ್ಧನೆ ನಡೆಸಬೇಕೆಂದು ಚರ್ಚೆ ನಡೆಯುತ್ತಿರುವಾಗಲೇ ಅದನ್ನು  ಇನ್ನಷ್ಟು ದುರ್ಬಲಗೊಳಿಸುವ ಪ್ರಯತ್ನ ಪ್ರಾರಂಭವಾಗಿದೆ. ಇದು ಸಂಚಲ್ಲದೆ ಮತ್ತೇನು?