Monday, November 7, 2011

ಹಾದಿ ತಪ್ಪುತ್ತಿರುವ ಭ್ರಷ್ಟಾಚಾರ ವಿರೋಧಿ ಚಳವಳಿ

..ಎಲ್ಲಿಯವರೆಗೆ ಅಣ್ಣಾ ಹಜಾರೆ ಮತ್ತು ಸಂಗಡಿಗರು ಅಧಿಕಾರ ರಾಜಕಾರಣದ ಮೋಹಪಾಶಕ್ಕೆ ಕೊರಳೊಡ್ಡದೆ ಹೋರಾಟ ಮುಂದುವರಿಸಿಕೊಂಡು ಹೋಗುತ್ತಾರೋ, ಅಲ್ಲಿಯವರೆಗೆ ಜನ ಬೆಂಬಲ ಅವರ ಹಿಂದೆ ಇರಬಹುದು.
ನೇರವಾಗಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಇಲ್ಲವೇ ಸಾಂಕೇತಿಕ ಸ್ಪರ್ಧೆ, ಹೊರಗಿನ ಬೆಂಬಲ, ಸಜ್ಜನರ ಪರ ಪ್ರಚಾರ ಮೊದಲಾದ ಪರೋಕ್ಷ ಕ್ರಮಗಳ ಮೂಲಕ ಅವಸರದ ರಾಜಕೀಯ ಪ್ರವೇಶದ ದೌರ್ಬಲ್ಯಕ್ಕೆ ಬಲಿಯಾದರೆ ಮತ್ತೊಂದು ಸುತ್ತಿನ ಭ್ರಮನಿರಸನಕ್ಕೆ ಜನತೆ ಸಿದ್ಧವಾಗಬೇಕಾಗಬಹುದು.
ಯಾಕೆಂದರೆ ಪರ್ಯಾಯ ರಾಜಕೀಯ ಸಂಘಟನೆಗೆ ಬೇಕಾದ ತಯಾರಿ ಮತ್ತು ಶಕ್ತಿ ಈ ಹೋರಾಟಗಾರರಲ್ಲಿ ಇದ್ದಂತಿಲ್ಲ.
ರಾಜಕೀಯ ಪಕ್ಷಗಳು ಕೂಡಾ ಈ ಒಂದು ತಪ್ಪು ಹೆಜ್ಜೆಗಾಗಿ ಕಾಯುತ್ತಿರುವಂತೆ ಕಾಣುತ್ತಿದೆ~ ಎಂದು ಏಳು ತಿಂಗಳ ಹಿಂದೆ ಈ ಅಂಕಣದಲ್ಲಿ (`ರಾಜಕೀಯದಿಂದ ದೂರ ಇದ್ದಷ್ಟು ದಿನ ಇವರು ನಮ್ಮಣ್ಣ~) ಬರೆದಾಗ ಕೆಲವು ಅಣ್ಣಾ ಬೆಂಬಲಿಗರು `ಅಷ್ಟೊಂದು ಸಿನಿಕರಾಗುವುದು ಬೇಡ~ ಎಂದಿದ್ದರು.
ಅವರಲ್ಲಿ ಕೆಲವರಿಗಾದರೂ ಅಣ್ಣಾ ಹಜಾರೆ ಅವರು ಈಗ ನಿರಾಶೆ ಉಂಟು ಮಾಡಿರಬಹುದು.
ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ದ ಹೋರಾಟ ಪ್ರಾರಂಭಿಸಿದಾಗ ಪ್ರಮುಖವಾಗಿ ಎರಡು ಕಾರಣಗಳಿಂದಾಗಿ ಜನಬೆಂಬಲ ಹರಿದು ಬಂದಿತ್ತು. ಮೊದಲನೆಯದಾಗಿ ಸಾರಾಸಗಟಾಗಿ ರಾಜಕಾರಣಿಗಳನ್ನು ದ್ವೇಷಿಸುವಷ್ಟು ರಾಜಕೀಯದ ಬಗ್ಗೆ ಜನರು ಹೊಂದಿರುವ ತಿರಸ್ಕಾರ.
ಎರಡನೆಯದಾಗಿ ಭ್ರಷ್ಟಾಚಾರದ ವಿರುದ್ಧದ ಸಾರ್ವಜನಿಕ ಆಕ್ರೋಶ. ಈ ಪರಿಸ್ಥಿತಿಯಲ್ಲಿ ಪ್ರವೇಶ ಮಾಡಿದ ಅಣ್ಣಾಹಜಾರೆ ಜನರ ಕಣ್ಣಿಗೆ ತಮ್ಮನ್ನು ಸಂಕಷ್ಟಗಳಿಂದ ಪಾರು ಮಾಡಲು ಬಂದ ಅವತಾರ ಪುರುಷನಂತೆ ಕಂಡಿದ್ದರು.
ಯಾಕೆಂದರೆ ಅಣ್ಣಾ ಹಜಾರೆ ರಾಜಕಾರಣಿಯಾಗಿರಲಿಲ್ಲ ಮತ್ತು ಪ್ರಾಮಾಣಿಕರಾಗಿದ್ದರು. ಇದು ಏಳು ತಿಂಗಳ ಹಿಂದಿನ ಕತೆ, ಈಗಲೂ ಅವರು ಅಂದಿನ ಅಣ್ಣಾ ಆಗಿಯೇ ಉಳಿದಿದ್ದಾರೆಯೇ? ಅವರ ಅಭಿಮಾನಿಗಳಿಗೂ ಉತ್ತರಿಸುವುದು ಕಷ್ಟ.

ರಾಜಕಾರಣಿಗಳನ್ನು ವಿರೋಧಿಸುತ್ತಲೇ ಅಣ್ಣಾ ಹಜಾರೆ ರಾಜಕಾರಣಿಯಾದಂತಿದೆ ಮತ್ತು ಇತರರ ವಿರುದ್ಧ ಬಳಸುತ್ತಿದ್ದ ಪ್ರಾಮಾಣಿಕತೆಯ ಕತ್ತಿ ಜತೆಯಲ್ಲಿದ್ದವರ ಕತ್ತು ಕುಯ್ಯತೊಡಗಿದೆ.
ಜನಪ್ರಿಯತೆಯಿಂದ ಸಾರ್ಥಕ್ಯದ ಭಾವನೆ ಮೂಡುವುದರಿಂದ ಅದು ವೈಯಕ್ತಿಕವಾಗಿ ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ಸಾಧ್ಯವಾಗದೆ ಹೋದರೆ ಬಹಳ ಅಪಾಯಕಾರಿ.
ಸಂಭಾಳಿಸಿಕೊಳ್ಳಲಾಗದ ಜನಪ್ರಿಯತೆಯ ವ್ಯಸನಕ್ಕೆ ಬಲಿಯಾಗಿ ಎಲ್ಲವನ್ನೂ ಕಳೆದುಕೊಂಡವರೂ ಇದ್ದಾರೆ. ಭಾರತದಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಬಹುತೇಕ ದೇಶಗಳ ಸಾರ್ವಜನಿಕ ಜೀವನದಲ್ಲಿ ಜನಪ್ರಿಯರಾದವರನ್ನು ರಾಜಕೀಯಕ್ಕೆ ಎಳೆದು ತರುವ ಪ್ರಯತ್ನವನ್ನು ಅಭಿಮಾನಿ ಬಳಗ ಮಾಡುತ್ತಾ ಬಂದಿದೆ.
ಅವರ ಜನಪ್ರಿಯತೆಯನ್ನು ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳಲಿಕ್ಕಾಗಿ ಪಟ್ಟಭದ್ರ ರಾಜಕಾರಣಿಗಳೂ ಇದಕ್ಕೆ ಕುಮ್ಮಕ್ಕು ನೀಡುತ್ತಿರುತ್ತಾರೆ. ಪ್ರಮುಖವಾಗಿ ಸಮಾಜ ಸೇವಕರು, ಚಿತ್ರನಟರು, ಕ್ರೀಡಾಪಟುಗಳು, ಉದ್ಯಮಿಗಳೆಲ್ಲ ಈ ಗುಂಪಲ್ಲಿ ಬರುತ್ತಾರೆ.
ಇವರಲ್ಲಿ ಕೆಲವರು ಯಶಸ್ವಿಯೂ ಆಗಿದ್ದಾರೆ, ಆದರೆ ಗುಂಡಿಗೆ ಬಿದ್ದವರೇ ಹೆಚ್ಚು. ಅಣ್ಣಾ ಹಜಾರೆ ವಿಷಯದಲ್ಲಿಯೂ ಇದು ನಡೆದಿದೆ.
ಕಳೆದ ಏಪ್ರಿಲ್‌ನಲ್ಲಿ ಮೊದಲ ಉಪವಾಸ ಕೈಬಿಟ್ಟ ಮರುಕ್ಷಣವೇ ಅವರನ್ನು ಮುತ್ತಿಕೊಂಡ ಪತ್ರಕರ್ತರು `ನೀವು ರಾಜಕೀಯ ಪ್ರವೇಶ ಮಾಡುತ್ತೀರಾ? ನೀವು ಪ್ರಧಾನಮಂತ್ರಿಯಾಗಬೇಕೆಂದು ಜನ ಬಯಸಿದರೆ ಏನು ಮಾಡುತ್ತೀರಿ?~ ಎಂಬ ಪ್ರಶ್ನೆಗಳನ್ನು ಕೇಳಿದ್ದರು.
ರಾಜಕೀಯದಲ್ಲಿ ತಮಗೆ ಆಸಕ್ತಿ ಇಲ್ಲವೇ ಇಲ್ಲ ಎಂದು ಆ ಕ್ಷಣದಲ್ಲೇನೋ ಅಣ್ಣಾಹಜಾರೆ ತಲೆಕೊಡವಿಬಿಟ್ಟರು. ಆದರೆ ಅವರ ಅಕ್ಕಪಕ್ಕದಲ್ಲಿರುವ ತಲೆಗೆ ಆಗಲೇ ರಾಜಕೀಯದ ಗುಂಗಿಹುಳ ಪ್ರವೇಶ ಮಾಡಿಬಿಟ್ಟಿತ್ತು.
ಭ್ರಷ್ಟಾಚಾರದ ವಿರುದ್ದದ ಹೋರಾಟಕ್ಕೆ ದೇಶದಾದ್ಯಂತ ವ್ಯಕ್ತವಾದ ಜನಬೆಂಬಲ, ಮಾಧ್ಯಮಗಳಲ್ಲಿ, ಮುಖ್ಯವಾಗಿ 24ಗಂಟೆಗಳ ಸುದ್ದಿ ಚಾನೆಲ್‌ಗಳಲ್ಲಿ ನೀಡಲಾದ ಪ್ರಚಾರ, `ಅಣ್ಣಾ ಎಂದರೆ ಇಂಡಿಯಾ~ ಎನ್ನುವಂತಹ ಮೂರ್ಖ ಘೋಷಣೆಗಳು, `ಅಣ್ಣಾ ಸಂಸತ್‌ಗಿಂತಲೂ ದೊಡ್ಡವರು~ ಎನ್ನುವ ಅಪ್ರಬುದ್ಧ ಹೇಳಿಕೆಗಳು - ಎಂತಹ ಸಂಯಮಿಯ ಮನಸ್ಸೂ ಕೂಡಾ ಆಚೀಚೆ ಹೊಯ್ದಾಡಲು ಸಾಕು. ಇವತ್ತು `ಇಮೇಜ್ ಬಿಲ್ಡಿಂಗ್~ ಎನ್ನುವುದು ಬಹಳ ಜನಪ್ರಿಯ ದಂಧೆ.
ಅಣ್ಣಾ ಹಜಾರೆ ಜತೆಯಲ್ಲಿದ್ದವರು ಬಹಳ ವ್ಯವಸ್ಥಿತವಾಗಿ ಈ ಕೆಲಸ ಮಾಡುತ್ತಾ ಬಂದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಿಧಾನವಾಗಿ ಅಣ್ಣಾ ಹಜಾರೆ ಹೋರಾಟವಾಗಿ ಪರಿವರ್ತನೆಗೊಳ್ಳುತ್ತಾ ಬಂದದ್ದು, ಎಲ್ಲರ ಮೈಮೇಲೆ `ಐ ಯಾಮ್ ಅನ್ನಾ~ ಎಂಬ ಘೋಷಣೆಗಳು ಕಾಣಿಸಲಾರಂಭಿಸಿದ್ದು ಇವೆಲ್ಲವೂ ಈ ಪ್ರಯತ್ನದ ಭಾಗ.
ಆದರೆ ನಾಮಬಲದಿಂದಲೇ ರಾಜಕೀಯದಲ್ಲಿ ಯಶಸ್ವಿಯಾಗುವ ಕಾಲ ಎಂದೋ ಕಳೆದುಹೋಗಿದೆ. ಯಶಸ್ವಿ ರಾಜಕಾರಣ ಮಾಡಲು ಬದ್ಧ ಕಾರ್ಯಕರ್ತರ ಪಡೆ ಮತ್ತು ಸಂಪನ್ಮೂಲ ಬೇಕಾಗುತ್ತದೆ.

ವಾರಂತ್ಯದ ರಜೆಗಳನ್ನು ಉಪವಾಸ ಶಿಬಿರದಲ್ಲಿ ಕಳೆದುಕೊಳ್ಳುವುದೇ ಸಮಾಜಸೇವೆ ಎಂದು ತಿಳಿದುಕೊಂಡ ಬೆಂಬಲಿಗರನ್ನು ಕಟ್ಟಿಕೊಂಡು ರಾಜಕೀಯ ಮಾಡಲಾಗುವುದಿಲ್ಲ.
ಚುನಾವಣಾ ಸುಧಾರಣೆಯಾಗದ ಹೊರತು, ರಶೀದಿ ಕೊಟ್ಟು ಸಂಗ್ರಹಿಸುವ ದೇಣಿಗೆಯ ದುಡ್ಡಿನಿಂದ ಈಗಾಗಲೇ ಬೇರು ಬಿಟ್ಟಿರುವ ರಾಜಕೀಯ ಪಕ್ಷಗಳನ್ನು ಎದುರಿಸಲು ಸಾಧ್ಯವೂ ಇಲ್ಲ.
ರಾಜಕೀಯದ ಈ ವಾಸ್ತವ ಅಣ್ಣಾ ತಂಡಕ್ಕೆ ಖಂಡಿತ ಗೊತ್ತಿದೆ. ಅದಕ್ಕಾಗಿ ಅವರು `ಹವ್ಯಾಸಿ ರಾಜಕಾರಣ~ವನ್ನು ಪ್ರಾರಂಭಿಸಿದ್ದಾರೆ. ಯಾವುದೋ ಒಂದು ಚುನಾವಣೆಯಲ್ಲಿ ಒಂದು ಪಕ್ಷದ ವಿರುದ್ಧ ಪ್ರಚಾರ ಮಾಡಿ ಒಬ್ಬ ಅಭ್ಯರ್ಥಿಯನ್ನು ಸೋಲಿಸಲು ಪ್ರಯತ್ನಿಸುವುದು.
ಆ ಗೆಲುವೇ ತಮ್ಮ ಗೆಲುವು, ತಮ್ಮ ಬೇಡಿಕೆಗೆ ಸಿಕ್ಕ ಜನಮನ್ನಣೆ ಎಂದು ಹೇಳಿಕೊಂಡು ತಿರುಗಾಡುವುದು- ಇದು ಸದ್ಯಕ್ಕೆ ಅಣ್ಣಾ ತಂಡದ ಕಾರ್ಯತಂತ್ರ. ಆದರೆ ರಾಜಕಾರಣ ಎನ್ನುವುದು ಪೂರ್ಣಾವಧಿ ವೃತ್ತಿ, ಅದು ಹವ್ಯಾಸ ಅಲ್ಲ.

ಹವ್ಯಾಸಿ ರಾಜಕಾರಣಿಗಳನ್ನು ಜನ ಒಪ್ಪುವುದೂ ಇಲ್ಲ, ಯಾಕೆಂದರೆ ಅದು ಕರ್ತವ್ಯ ನಿರ್ವಹಣೆಯ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಇಲ್ಲದ ರಾಜಕಾರಣ.
ಹಿಸ್ಸಾರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ತಾವು ಕಾರಣ ಎಂದು ಹೇಳಿಕೊಳ್ಳುತ್ತಿರುವ ಅಣ್ಣಾ ತಂಡ, ಅಲ್ಲಿ ಗೆದ್ದಿರುವ ಕುಲದೀಪ್ ವೈಷ್ಣೋವಿ ಅವರ ನಡವಳಿಕೆಗೆ ಉತ್ತರದಾಯಿಯಾಗುವುದೇ? `ಇಲ್ಲ~ ಎಂದಾದರೆ ಇದು ಪಲಾಯನವಾದವಾಗುವುದಿಲ್ಲವೇ? ಅದಕ್ಕಿಂತಲೂ ಹೆಚ್ಚಾಗಿ ಜನದ್ರೋಹವಾಗುವುದಿಲ್ಲವೇ?
ಅಣ್ಣಾ ಹಜಾರೆ ಅವರ ಅನಿಶ್ಚಿತ ನಿಲುವುಗಳಿಗೆ ಕೂಡಾ `ಹವ್ಯಾಸಿ ರಾಜಕಾರಣ~ ನೀಡುವ ಸ್ವಾತಂತ್ರ್ಯ ಕಾರಣ.
ಹಿಸ್ಸಾರ್ ಉಪಚುನಾವಣೆಯ ನಂತರ  ಅಣ್ಣಾ ಅವರು ದಿಢೀರ್ ಜ್ಞಾನೋದಯವಾದವರಂತೆ `ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುವುದಿಲ್ಲ~ ಎಂದು ಬಿಟ್ಟರು. ದೆಹಲಿಗೆ ಬಂದವರೇ ಮತ್ತೆ ಕಾಂಗ್ರೆಸ್ ವಿರುದ್ಧದ ಪ್ರಚಾರದ ಹಳೆ ಬೆದರಿಕೆಯನ್ನೇ ಪುನರುಚ್ಚರಿಸಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಂದ ಹಿಡಿದು ಇತ್ತೀಚಿಗೆ ತಮ್ಮದೇ ತಂಡದ ಸದಸ್ಯರಾದ ಪ್ರಶಾಂತ್ ಭೂಷಣ್ ವರೆಗೆ ಕಳೆದ ಆರು ತಿಂಗಳಲ್ಲಿ ಅಣ್ಣಾ ಹಜಾರೆ ಅವರು ನೀಡುತ್ತಾ ಬಂದ ಹೇಳಿಕೆಗಳನ್ನು ಗಮನಿಸುತ್ತಾ ಬಂದರೆ ಉದ್ದಕ್ಕೂ ಗೊಂದಲಕಾರಿ ನಿಲುವುಗಳನ್ನು ಕಾಣಬಹುದು.

ಕ್ಷಣಕ್ಕೊಮ್ಮೆ ಬಣ್ಣ ಬದಲಾಯಿಸುವ ರಾಜಕಾರಣಿಗಳಿಂದ ರೋಸಿಹೋದ ಜನರಿಗೆ ಅಣ್ಣಾ ಅವರಲ್ಲಿಯೂ ಅದೇ ಬಣ್ಣಗಳು ಕಂಡರೆ ಅವರನ್ನೂ ಹಳೆಯ ರಾಜಕಾರಣಿಗಳ ಗುಂಪಿಗೆ ಸೇರಿಸಿಬಿಡುವ ಅಪಾಯ ಇದೆ, ಹಾಗಾಗುತ್ತಿದೆ.
ಇದರಿಂದ ಈಗಾಗಲೇ ಭ್ರಷ್ಟಾಚಾರ ವಿರೋಧಿ ಚಳವಳಿಗೆ ಹಾನಿಯೂ ಆಗಿದೆ, ಇದು ಅಣ್ಣಾತಂಡಕ್ಕೆ ಗೊತ್ತಾಗಬೇಕು, ಅಷ್ಟೆ.ಇದರ ಜತೆಗೆ ಅಣ್ಣಾ ಹಜಾರೆಯವರು ಝಳಪಿಸುತ್ತಾ ಬಂದ ಪ್ರಾಮಾಣಿಕತೆಯ ಕತ್ತಿ ಜತೆಯಲ್ಲಿದ್ದವರ ಕತ್ತನ್ನೇ ಕುಯ್ಯತೊಡಗಿದೆ.
ಹಣದ ಮೊತ್ತ ಇಲ್ಲವೇ ಉದ್ದೇಶದ ದೃಷ್ಟಿಯಿಂದ ಅರವಿಂದ ಕೇಜ್ರಿವಾಲ್ ಮತ್ತು ಕಿರಣ್ ಬೇಡಿ ವಿರುದ್ಧ ಕೇಳಿ ಬಂದ ಆರೋಪಗಳು ಅಷ್ಟೊಂದು ಗಂಭೀರವಾದವೇನೂ ಅಲ್ಲ.

ಆದರೆ  ಸಾರ್ವಜನಿಕ ಜೀವನದಲ್ಲಿರಬೇಕಾದ ಪ್ರಾಮಾಣಿಕತೆಯ ಮಟ್ಟವನ್ನು ಇಷ್ಟೊಂದು ಎತ್ತರಕ್ಕೆ ಏರಿಸಿಟ್ಟವರು ಅದೇ ಮಟ್ಟದ ಪ್ರಾಮಾಣಿಕತೆಯನ್ನು ಪಾಲಿಸಿಕೊಂಡು ಬರಬೇಕಾಗುತ್ತದೆ.
ಚುನಾಯಿತ ಪ್ರತಿನಿಧಿಯೊಬ್ಬ ಮಾತಿನಲ್ಲಿ ಮಾತ್ರವಲ್ಲ, ಯೋಚನೆಯಲ್ಲಿಯೂ ಪ್ರಾಮಾಣಿಕವಾಗಿರಬೇಕೆಂದು ಬಯಸುತ್ತದೆ ಅಣ್ಣಾ ತಂಡ.
ಇದಕ್ಕಾಗಿಯೇ ಅಲ್ಲವೇ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸುತ್ತೇವೆ ಎಂದು ಪ್ರಧಾನಿ ಸಾರ್ವಜನಿಕವಾಗಿ ಹೇಳಿದರೂ ನಂಬದೆ ಲಿಖಿತ ಹೇಳಿಕೆಗಾಗಿ ಒತ್ತಾಯಿಸಿದ್ದು.
ತೆರಿಗೆ ವಂಚನೆಯನ್ನು ಚಿತ್ರನಟನೋ, ಕೇಜ್ರಿವಾಲಾನೋ ಯಾರು ಮಾಡಿದರೂ ಅಪರಾಧವೇ. ತಾನು ತಪ್ಪನ್ನು ಮಾಡಿಲ್ಲ, ವರಮಾನ ತೆರಿಗೆ ಇಲಾಖೆಯೇ ದುರುದ್ದೇಶದಿಂದ ವರ್ತಿಸಿದೆ ಎನ್ನುವುದು ಅರವಿಂದ್ ಕೇಜ್ರಿವಾಲಾ ಅವರ ವಾದವಾಗಿದ್ದರೆ ಬಾಕಿ ಉಳಿಸಿಕೊಂಡಿರುವುದನ್ನು ಪಾವತಿ ಮಾಡದೆ ಅನ್ಯಾಯದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಿತ್ತು.
ಕಾನೂನಿನಲ್ಲಿ ಪರಿಣತಿ ಹೊಂದಿರುವ ಕೇಜ್ರಿವಾಲಾ ಅವರಿಗೆ ಇದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಬಾಕಿ ಪಾವತಿಸುವುದೆಂದರೆ ತಪ್ಪನ್ನು ಒಪ್ಪಿಕೊಂಡಂತಲ್ಲವೇ? ಹಾಗಿದ್ದರೆ ತನ್ನಿಂದ ತಪ್ಪಾಗಿದೆ ಎಂದಾದರೂ ಹೇಳಬಹುದಿತ್ತಲ್ಲವೇ?
ಇಷ್ಟು ಮಾತ್ರವಲ್ಲ, ಜನಲೋಕಪಾಲ ಚಳವಳಿಗಾಗಿ ಸಂಗ್ರಹಿಸಿದ್ದ ಹಣದಲ್ಲಿ ಸುಮಾರು 70-80 ಲಕ್ಷ ರೂಪಾಯಿಗಳನ್ನು ತಮ್ಮ `ಸಾರ್ವಜನಿಕ ಹಿತಾಸಕ್ತಿ ಸಂಶೋಧನಾ ಸಂಸ್ಥೆ~ಗೆ ವರ್ಗಾಯಿಸಿದ್ದಾರೆ ಎಂಬ ಆರೋಪ ಕೂಡಾ ಕೇಜ್ರಿವಾಲಾ ಅವರ ಮೇಲಿದೆ. ಈ ಸಂಸ್ಥೆಯಲ್ಲಿ ಅಣ್ಣಾ ತಂಡದ ಯಾರೂ ಸದಸ್ಯರಾಗಿಲ್ಲ.
 ಕಿರಣ್ ಬೇಡಿಯವರದ್ದೂ ಇನ್ನೊಂದು  ಕತೆ. ಕಡಿಮೆ ಟಿಕೆಟ್ ದರದ ವಿಭಾಗದಲ್ಲಿ ವಿಮಾನ ಪ್ರಯಾಣ ಮಾಡಿ ಉಳಿಸಿದ ದುಡ್ಡನ್ನು ತಾನು ನಡೆಸುತ್ತಿರುವ ಸರ್ಕಾರೇತರ ಸಂಸ್ಥೆಗೆ ದೇಣಿಗೆಯಾಗಿ ನೀಡುವುದು ಒಳ್ಳೆಯ ಕೆಲಸ.
ಆದರೆ ಸರಳ ಜೀವಿ ಅಣ್ಣಾ ಹಜಾರೆಯವರ ಅನುಯಾಯಿ ಎಂದು ಹೇಳಿಕೊಳ್ಳುತ್ತಿರುವ ಕಿರಣ್ ಬೇಡಿ ಅವರಿಂದ ಒಂದು ಭಾಷಣ ಮಾಡಿಸಬೇಕಾದರೆ ಪ್ರಯಾಣಕ್ಕಾಗಿಯೇ 39ಸಾವಿರ ರೂಪಾಯಿ ಖರ್ಚು ಮಾಡಬೇಕಾಗಿದೆಯೆಂಬುದು ನಿಜಕ್ಕೂ ಅಚ್ಚರಿಯ ಸುದ್ದಿ.
ಅದೂ ಅಲ್ಲದೆ, ಕಿರಣ್ ಬೇಡಿಯವರು ತನ್ನ ಸರ್ಕಾರೇತರ ಸಂಸ್ಥೆಗೆ ಹಣ ಸಂಗ್ರಹಿಸಲು ಪ್ರಯಾಣವೆಚ್ಚವನ್ನು ಅಧಿಕವಾಗಿ ವಸೂಲಿ ಮಾಡಿರುವುದು ತನ್ನಂತೆಯೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇಂದೋರ್‌ನ `ಅಭ್ಯಾಸ್ ಮಂಡಳ್~ನಿಂದ ಎನ್ನುವುದು ಗಮನಾರ್ಹ.
ಕಿರಣ್ ಬೇಡಿಯವರ ಭಾಷಣದಿಂದ ಅಲ್ಲಿನ ಸಮಾಜಕ್ಕೆ ಏನು ಸೇವೆ ಆಗಿದೆಯೋ ಗೊತ್ತಿಲ್ಲ, ಆದರೆ ಆ ಭಾಷಣ ಮಾಡದಿದ್ದರೆ ಉಳಿಯುತ್ತಿದ್ದ ಕನಿಷ್ಠ 50 ಸಾವಿರ ರೂಪಾಯಿಗಳಿಂದ ಆ ಸಂಸ್ಥೆ ಸಮಾಜಕ್ಕೆ ಒಂದಷ್ಟು ಸೇವೆ ಮಾಡಲು ಸಾಧ್ಯವಾಗುತ್ತಿತ್ತೋ ಏನೋ?
ಇವೆಲ್ಲವೂ ಸಣ್ಣ ವಿಚಾರಗಳು ನಿಜ, ಆದರೆ ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳ ನಡವಳಿಕೆಯಲ್ಲಿನ ಪ್ರಾಮಾಣಿಕತೆಯ ಬಗ್ಗೆ ಇಷ್ಟೊಂದು ಸೂಕ್ಷ್ಮವಾಗಿರುವ ಅಣ್ಣಾ ತಂಡದ ಸದಸ್ಯರು ಅದನ್ನು ಪಾಲಿಸುವುದು ಬೇಡವೇ?
ತಮ್ಮ ವಿರುದ್ಧದ ಆರೋಪಗಳೆಲ್ಲವೂ ದುರುದ್ದೇಶದಿಂದ ಕೂಡಿದ್ದು ಎಂದು ಕೇಜ್ರಿವಾಲಾ ಮತ್ತು ಬೇಡಿ ಹೇಳುತ್ತಲೇ ಬಂದಿದ್ದಾರೆ. ಹಾಗಿದ್ದರೆ ಅಣ್ಣಾ ತಂಡದಿಂದ ಹೊರಬಿದ್ದಿರುವ ರಾಜಿಂದರ್‌ಸಿಂಗ್ ಮತ್ತು ಪಿ.ವಿ.ರಾಜಗೋಪಾಲ್ ಹಾಗೂ ಈಗಲೂ ತಂಡದಲ್ಲಿರುವ

ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಈ ಇಬ್ಬರು ಸದಸ್ಯರ ಬಗ್ಗೆ ವ್ಯಕ್ತಪಡಿಸಿರುವ ಭಿನ್ನಾಭಿಪ್ರಾಯ ಮತ್ತು ಅಸಮಾಧಾನವನ್ನೂ ಹಾಗೆಯೇ ತಳ್ಳಿಹಾಕಲು ಸಾಧ್ಯವೇ? `ಸಾಧ್ಯ ಇಲ್ಲ~ ಎಂದಾದರೆ ದೇಶದ ಕೋಟ್ಯಂತರ ಸಾಮಾನ್ಯ ಜನ ಈಗಲೂ ಅಪಾರವಾದ ಭರವಸೆ ಇಟ್ಟುಕೊಂಡಿರುವ ಚಳವಳಿಯ ತಂಡವನ್ನು ಪುನರ್‌ರಚಿಸಿ ಅದನ್ನು ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಿಯನ್ನಾಗಿ ಮಾಡಲು ಅಣ್ಣಾ ಹಜಾರೆಯವರು ಮುಂದಾಗಬೇಕು.
ಇದನ್ನು ಮಾಡಬೇಕಾದಾಗ ಒಂದಷ್ಟು ತಲೆ ಉರುಳಿಸಬೇಕಾಗಿ ಬಂದರೆ ಅದಕ್ಕೂ ಹಿಂಜರಿಯಬಾರದು. ವಿಳಂಬ ಮಾಡಿದರೆ ಅನಾಹುತವಾದೀತು.