Sunday, August 24, 2014

ಅನಂತಮೂರ್ತಿಯವರಿಗೆ ಭಾವಪೂರ್ಣ ಶೃದ್ಧಾಂಜಲಿ

   ಸಮಾಜದಲ್ಲಿ ದುಷ್ಟರಿಗಿಂತ ಸಜ್ಜನರ ಸಂಖ್ಯೆ ಹೆಚ್ಚು ಎನ್ನುವುದಕ್ಕೆ ಯಾವ ಗಣತಿಯನ್ನೂ ನಡೆಸಬೇಕಾಗಿಲ್ಲ. ಹಾಗಿಲ್ಲದೆ ಹೋಗಿದ್ದರೆ ನಮ್ಮ ಸಮಾಜ ನಾವೆಲ್ಲ ಬದುಕುವಷ್ಟು ಸಹನೀಯವಾಗುತ್ತಿರಲಿಲ್ಲ. ಆದರೆ ಬಹುಸಂಖ್ಯೆಯ ಸಜ್ಜನರು ಮೌನಧಾರಿಗಳು, ದುಷ್ಟರು ಮಾತ್ರ ಕೂಗುಮಾರಿಗಳು. ಈ ಕಾರಣದಿಂದಾಗಿಯೇ ಒಂದಷ್ಟು ಜಾಗೃತ ಸಜ್ಜನರಿಗೆ ನಾವು ಒಂಟಿ, ಅಸಹಾಯಕರು ಮತ್ತು ದುರ್ಬಲರು ಎಂದು ಅನಿಸಿಬಿಡುತ್ತದೆ. ಇದು ಹಲವಾರು ಬಾರಿ ಹತಾಶೆ, ಸಿನಿಕತೆ ಮತ್ತು ಅತಿರೇಕದ ನಿಲುವುಗಳಿಗೆ ಪ್ರೇರಣೆಯಾಗುತ್ತಿದೆ.
    ಮೊನ್ನೆ ಸಂಜೆ ಹೆಚ್ಚು ಕಡಿಮೆ ನನ್ನ ಕಣ್ಣೆದುರೇ ಯು.ಆರ್.ಅನಂತಮೂರ್ತಿಯವರು ಸಾವಿನೆಡೆಗೆ ಸರಿದುಹೋದಾಗ ನಮ್ಮ ಆತ್ಮಸಾಕ್ಷಿಯ ಒಂದು ಬಹುದೊಡ್ಡ ಭಾಗ ಕೂಡಾ ಹೊರಟುಹೋಯಿತು ಎಂದು ಅನಿಸಿ ನನ್ನೊಡಲು ವಿಲವಿಲನೆ ಒದ್ದಾಡಿದ್ದು ಈ ಕಾರಣಕ್ಕೆ. ತಾನಾಡಿದ ಮಾತು ತಮ್ಮ ವಿರೋಧಿಗಳನ್ನು ಕೆರಳಿಸುತ್ತದೆ, ಅವರು ತಮ್ಮನ್ನು ಮಾನಸಿಕವಾಗಿ ಕುಗ್ಗಿಸಲು ನಾನಾಬಗೆಯ ಹೀನತಂತ್ರಗಳನ್ನು ನಡೆಸುತ್ತಾರೆ ಎಂದು ಅನಂತಮೂರ್ತಿಯವರಿಗೆ ಗೊತ್ತಿತ್ತು. ಮಾನಸಿಕವಾದ ಹಿಂಸೆ ದೈಹಿಕವಾಗಿಯೂ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರಿಗೆ ತಿಳಿದಿತ್ತು. ಹಾಗಿದ್ದರೂ ಅವರು ವಿವಾದಗಳನ್ನು ಆಹ್ಹಾನಿಸಿಕೊಂಡೇ ಬದುಕಿದರು.
    ತಮ್ಮ ಹೇಳಿಕೆ ಕುರಿತಂತೆ ಸೃಷ್ಟಿಯಾಗಿರುವ ವಿವಾದದ ಬಗ್ಗೆ ಪತ್ರಕರ್ತರು ಪ್ರತಿಕ್ರಿಯೆ ಬಯಸಿದಾಗ ಅವರು ನನಗೆ ಪೋನ್ ಮಾಡುತ್ತಿದ್ದರು. ಅವರ ಅನಾರೋಗ್ಯದ ಸ್ಥಿತಿಯನ್ನು ನೋಡುತ್ತಾ ಬಂದ ನಾನು ‘
    ನಮ್ಮ ಸಜ್ಜನ ಮೌನಧಾರಿಗಳೇನು ಕೆಟ್ಟವರಲ್ಲ, ಅವರು ಊರ ಉಸಾಬರಿ ನಮಗ್ಯಾಕೆ? ಎನ್ನುವ ಮನೋಭಾವದವರು, ಯಾವುದೇ ವಿಷಯ-ಘಟನೆ-ಬೆಳವಣಿಗಳ ಬಗ್ಗೆ ಅವರಲ್ಲಿ ಸ್ವಂತದ್ದೊಂದು ಅಭಿಪ್ರಾಯ ಇರುವುದಿಲ್ಲ. ಈ ಆರೋಪ ನಮ್ಮ ಬಹಳಷ್ಟು ಸಾಹಿತಿಗಳು ಮುಖ್ಯವಾಗಿ ಇತ್ತೀಚಿನ ತಲೆಮಾರಿನ ಸಾಹಿತಿಗಳ ಬಗ್ಗೆಯೂ ಇದೆ. ಅನಂತಮೂರ್ತಿಯವರ ಸಾವು ‘ತುಂಬಿಕೊಳ್ಳಲಾಗದ ನಷ್ಟ’ ಎಂದು ಅನಿಸುವುದು ಈ ಕಾರಣಕ್ಕೆ.
    ಅನಂತಮೂರ್ತಿಯವರ ಸಾವಿನ ನಷ್ಟವನ್ನು ಭರಿಸುವುದಕ್ಕೆ ನಮ್ಮೆದುರು ಇರುವ ಏಕೈಕ ದಾರಿಯೆಂದರೆ ಸಜ್ಜನರೆನಿಸಿಕೊಂಡವರು ಮೌನದ ಕಂಬಳಿ ಕಿತ್ತೊಗೆದು ಮಾತನಾಡಲು ಶುರು ಮಾಡುವುದು. ಅನಂತಮೂರ್ತಿಯವರಂತೆಯೇ ಯಾವುದೇ ಟೀಕೆ-ಟಿಪ್ಪಣಿ, ಅಪಪ್ರಚಾರಕ್ಕೆ ಜಗ್ಗದೆ ತಮಗೆ ಸರಿ ಕಂಡದ್ದನ್ನು ಅಂಜದೆ, ಅಳುಕದೆ ಅಭಿವ್ಯಕ್ತಿಸುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಶ್ರದ್ದಾಂಜಲಿ. ಈ ಮೂಲಕವೇ ನಾವು ಅನಂತಮೂರ್ತಿಯವರನ್ನು ಜೀವಂತವಾಗಿಡಬೇಕಾಗಿದೆ, ಅವರಿಗಾಗಿ ಅಲ್ಲ, ನಮಗಾಗಿ.
    ಕೊನೆ ಕ್ಷಣ: ಸಾವಿನ ಎರಡು ದಿನಗಳ ಹಿಂದೆ ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ದೇಹದ ತುಂಬೆಲ್ಲಾ ನಳಿಕೆಗಳನ್ನು ಪೋಣಿಸಿಕೊಂಡು ಮಲಗಿದ್ದ ಅನಂತಮೂರ್ತಿಯವರು ನನ್ನ ಕೈ ಹಿಡಿದು ‘ಮೈ ಬಾಡಿ ಈಸ್ ಫೈಟಿಂಗ್ ದಿನೇಶ್’ ಎಂದರು. ಆಗಲೂ ಅವರಿಗೆ ಅವರ ‘ಮೈಂಡ್’ನ ಆರೋಗ್ಯದ ಬಗ್ಗೆ ವಿಶ್ವಾಸ ಇತ್ತು. ಮಾನಸಿಕ ಶಕ್ತಿ ಮೂಲಕವೇ ದೇಹಕ್ಕೆ ತಗಲಿರುವ ರೋಗವನ್ನು ಗೆಲ್ಲಬಹುದೆಂಬ ಆತ್ಮ ವಿಶ್ವಾಸವನ್ನು ಅವರು ಹೊಂದಿದ್ದರು. ಅದು ಗೊತ್ತಿದ್ದ ನಾನು ‘ಯುವರ ಮೈಂಡ್ ಈಸ್ ಫೈಟಿಂಗ್ ಸರ್’ ಎಂದೆ. ನನ್ನ ಅಂಗೈಯನ್ನು ಅಮುಕಿ ನಕ್ಕರು. ಜೀವಂತವಾಗಿ ಅವರನ್ನು ನೋಡಿದ್ದು ಅದೇ ಕೊನೆ. ಎರಡು ದಿನಗಳ ನಂತರ ಹೋದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಎಷ್ಟೇ ಅನಾರೋಗ್ಯದಿಂದಿರಲಿ, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಲೇ ಇರಲಿ, ಅವರಲ್ಲಿಗೆ ಹೋದಾಗ ಮಾತನಾಡದೆ ಎಂದೂ ನನ್ನನ್ನು ವಾಪಸ್ ಕಳುಹಿಸುತ್ತಿರಲಿಲ್ಲ. ಸಾವಿನ ಹಿಂದಿನ ದಿನ ಹೋಗಿದ್ದಾಗ ಮಾತ್ರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅದರ ನಂತರ ಕಣ್ಣು ತೆರೆಯಲೇ ಇಲ್ಲ. ಮೌನಹೊದ್ದು ಮಲಗಿದ್ದ ಅನಂತಮೂರ್ತಿಯವರನ್ನು ನಾನು ನೋಡಲೇ ಬಾರದಿತ್ತು. ನನ್ನೊಡನೆ ಮಾತನಾಡಿದ್ದ ಅನಂತಮೂರ್ತಿಯವರ ಭೇಟಿಯೇ ಕೊನೆಯದಾಗಬೇಕಿತ್ತು ಎಂದು ತೀವ್ರವಾಗಿ ಅನಿಸುತ್ತಿದೆ. ಮೌನಿ ಅನಂತಮೂರ್ತಿಯವರನ್ನು ನಾನು ಊಹಿಸಿಕೊಳ್ಳುವುದೂ ಸಾಧ್ಯ ಇಲ್ಲ..
    ಹೋಗ್ಲಿ ಬಿಡಿ ಸಾರ್, ವಿವಾದ ಬೆಳೆಸಲು ಹೋಗಬೇಡಿ, ಸುಮ್ಮನೆ ನಿಮಗೆ ಕಿರಿಕಿರಿ’ ಎನ್ನುತ್ತಿದ್ದೆ. ಆದರೆ ಮರುಕ್ಷಣದಲ್ಲಿಯೇ ಯಾವುದಾದರೂ ಟಿವಿ ಚಾನೆಲ್ ನಲ್ಲಿ ಅವರ ಸಂದರ್ಶನ ಪ್ರಸಾರವಾಗುತ್ತಿತ್ತು. ಇದು ಅನಂತಮೂರ್ತಿ. ಅವರ ಹೇಳಿಕೆಗಳನ್ನು ನೋಡಿ ಕೆಲವರು ಅವರನ್ನು ಪ್ರಚಾರಪ್ರಿಯರು ಎಂದು ಟೀಕಿಸಿದ್ದೂ ಉಂಟು. ಆದರೆ ಪ್ರಚಾರಪ್ರಿಯರು ತಮಗೆ ಹಿತವಾದುದೇ ಪ್ರಚಾರವಾಗಲಿ ಎಂದು ಬಯಸುತ್ತಾರೆ, ಯಾವ ಪ್ರಚಾರಪ್ರಿಯ ಅನಂತಮೂರ್ತಿಯವರಂತೆ ‘ಹೇಟ್ ಕ್ಯಾಂಪೇನ್’ಗೆ ತಮ್ಮನ್ನು ಒಡ್ಡಿಕೊಳ್ಳಲು ಇಷ್ಟಪಡುತ್ತಾರೆ?