Monday, May 13, 2013

ಜಾತಿ ಮೀರಿ ಯೋಚನೆ ಮಾಡಿದ ರಾಜ್ಯದ ಮತದಾರ

ರ್ನಾಟಕದ ರಾಜಕಾರಣಿಗಳು ಮಾತ್ರವಲ್ಲ ಮತದಾರರೂ ಜಾತಿವಾದಿಗಳು ಎಂಬ ಅಭಿಪ್ರಾಯ ಇತ್ತೀಚಿನ ವರ್ಷಗಳಲ್ಲಿ ದೇಶದಾದ್ಯಂತ ಹರಡಿತ್ತು. ಇದನ್ನು ವಿಶ್ವಾಸಪೂರ್ವಕವಾಗಿ ನಿರಾಕರಿಸುವ ಸ್ಥಿತಿಯಲ್ಲಿ ಕನ್ನಡಿಗರೂ ಇರಲಿಲ್ಲ. ಸಾಮಾನ್ಯವಾಗಿ ಜಾತಿಯನ್ನೇ ಆಧರಿಸಿ ಹುಟ್ಟಿಕೊಂಡ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಇಂತಹದ್ದೊಂದು ಅಭಿಪ್ರಾಯ ಹುಟ್ಟಿಕೊಳ್ಳುವುದು ಸಹಜ.
ಉದಾಹರಣೆಗೆ ಉತ್ತರಪ್ರದೇಶ, ಬಿಹಾರ, ತಮಿಳುನಾಡು, ಆಂಧ್ರಪ್ರದೇಶ ಇತ್ಯಾದಿ. ಆದರೆ ಸಾಮಾನ್ಯವಾಗಿ ರಾಷ್ಟ್ರೀಯ ಪಕ್ಷಗಳ ಸರ್ಕಾರಗಳಿಗೆ `ಜಾತಿವಾದಿ ಸರ್ಕಾರ' ಎಂಬ ಹಣೆಪಟ್ಟಿ ಎಲ್ಲರೂ ಆಡಿಕೊಳ್ಳುವಂತೆ ಅಂಟಿಕೊಳ್ಳುವುದು ಕಡಿಮೆ. ಕರ್ನಾಟಕ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸದೆ ಸದಾ ರಾಷ್ಟ್ರೀಯ ಪಕ್ಷಗಳ ಪರವಾಗಿ ನಿಂತ ರಾಜ್ಯ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿಯೂ ಈ ಆರೋಪ ಕನ್ನಡಿಗರು ನಾಚಿಕೆಪಟ್ಟುಕೊಳ್ಳುವ ರೀತಿಯಲ್ಲಿ ಕೇಳಿಬಂತು. `ನಾವೆಲ್ಲ ಹಿಂದೂ, ಜಾತಿ ಮೀರಿ ನಾವೆಲ್ಲ ಒಂದು' ಎಂಬ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಬಂದ ಭಾರತೀಯ ಜನತಾ ಪಕ್ಷದ ಆಳ್ವಿಕೆಯ ಕಾಲದಲ್ಲಿಯೇ ಇದು ಜೋರಾಗಿ ಕೇಳಿಬಂದದ್ದು ವಿಪರ್ಯಾಸ.
ಇದಕ್ಕೆ ಕಾರಣಗಳು ಅನೇಕ. ಬಾಬ್ರಿ ಮಸೀದಿ ಧ್ವಂಸದ ನಂತರ ಎದ್ದ `ಹಿಂದುತ್ವ'ದ ಅಲೆಯ ಮೇಲೇರಿ ರಾಷ್ಟ್ರಮಟ್ಟದಲ್ಲಿ ಬಿಜೆಪಿ ರಾಜಕೀಯವಾಗಿ ಬೆಳೆಯುವ ಸೂಚನೆ ನೀಡಿದಾಗಲೂ 1994ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅದು ಗೆಲ್ಲಲು ಸಾಧ್ಯವಾಗಿದ್ದು 40 ಸ್ಥಾನಗಳನ್ನು ಮಾತ್ರ. ಅದರ ನಂತರದ ಚುನಾವಣೆಯಲ್ಲಿಯೂ ಬಿಜೆಪಿ ಪ್ರಯಾಸಪಟ್ಟು ನಾಲ್ಕು ಸ್ಥಾನಗಳನ್ನಷ್ಟೇ ಹೆಚ್ಚುವರಿಯಾಗಿ ಗಳಿಸಿತ್ತು. ಆಗಲೇ ಬಿಜೆಪಿ ನಾಯಕರು ಕರ್ನಾಟಕದಲ್ಲಿ `ಸೋಷಿಯಲ್ ಎಂಜಿನಿಯರಿಂಗ್' ಹೆಸರಲ್ಲಿ ಜಾತಿ ರಾಜಕಾರಣವನ್ನು ಬಹಿರಂಗವಾಗಿಯೇ ಪ್ರಾರಂಭಿಸಿದ್ದು. ಇದಕ್ಕಾಗಿ ಲಿಂಗಾಯತರಾದ ಬಿ.ಎಸ್.ಯಡಿಯೂರಪ್ಪನವರನ್ನು ನಾಯಕನಾಗಿ ಬಿಂಬಿಸಿದ್ದು. 1999ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ವೀರೇಂದ್ರ ಪಾಟೀಲರ ಪದಚ್ಯುತಿಯಿಂದಾಗಿ ಅಸಮಾಧಾನಕ್ಕೀಡಾದ ಲಿಂಗಾಯತರನ್ನು ಸೆಳೆಯುವ
ಯೋಚನೆ ಕೂಡಾ ಬಿಜೆಪಿಯದ್ದಾಗಿತ್ತು. 79 ಶಾಸಕರನ್ನು ಗೆಲ್ಲಿಸಿದ್ದ 2004ರ ವಿಧಾನಸಭಾ ಚುನಾವಣೆ ಬಿಜೆಪಿಯ ಜಾತಿ ರಾಜಕಾರಣದ ಲೆಕ್ಕಾಚಾರವನ್ನು ಇನ್ನಷ್ಟು ಗಟ್ಟಿಗೊಳಿಸಿತ್ತು. ಎಚ್.ಡಿ.ಕುಮಾರಸ್ವಾಮಿಯವರ ಮೇಲಿನ ವಚನಭ್ರಷ್ಟತೆಯ ಆರೋಪವನ್ನೇ ಪ್ರಧಾನ ಅಸ್ತ್ರವಾಗಿ ಬಳಸಿಕೊಂಡ 2008ರ ಚುನಾವಣೆಯಲ್ಲಿ ಕಣ್ಣಿಗೆ ರಾಚುವ ರೀತಿಯಲ್ಲಿ ಜಾತಿ ರಾಜಕಾರಣ ಮೆರೆದಾಡಿತು. `ಲಿಂಗಾಯತ ಯಡಿಯೂರಪ್ಪನವರಿಗೆ ಆಗಿರುವ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಮತ ಹಾಕಿ' ಎಂದು ನೇರವಾಗಿ ಹೇಳುವ ಮಟ್ಟಕ್ಕೆ ಬಿಜೆಪಿ ಚುನಾವಣಾ ಪ್ರಚಾರವನ್ನು ಕೊಂಡೊಯ್ದಿತ್ತು.
ರಾಜ್ಯದ ಮತದಾರರು ಮುಖ್ಯವಾಗಿ ಲಿಂಗಾಯತರು ಬಿಜೆಪಿಯ ಜಾತಿ ಕೂಗಿಗೆ ಓಗೊಟ್ಟರೇನೋ ಎಂದು ಅನುಮಾನ ಮೂಡಿಸುವ ರೀತಿಯಲ್ಲಿ ಫಲಿತಾಂಶವೂ ಹೊರಬಿತ್ತು. ಬಿಜೆಪಿ 110 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಅಲ್ಲಿಂದಲೇ ಬಿಜೆಪಿಯ ಅದರಲ್ಲೂ ಮುಖ್ಯವಾಗಿ ಬಿ.ಎಸ್.ಯಡಿಯೂರಪ್ಪ ಎಂಬ ನಾಯಕನ ಪತನ ಪ್ರಾರಂಭವಾಗಿದ್ದು. ಆ ಚುನಾವಣೆಯಲ್ಲಿ 59 ಲಿಂಗಾಯತ ಶಾಸಕರು ಆಯ್ಕೆಯಾಗಿದ್ದು ಮಾತ್ರವಲ್ಲ ಅವರಲ್ಲಿ 38 ಶಾಸಕರು ಬಿಜೆಪಿಗೆ ಸೇರಿದವರಾಗಿದ್ದರು. ಅಷ್ಟು ಮಾತ್ರವಲ್ಲ ಒಕ್ಕಲಿಗರು ಮತ್ತು ಮುಸ್ಲಿಮರನ್ನು ಹೊರತುಪಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (29), ಹಿಂದುಳಿದ ವರ್ಗ (16) ಹಾಗೂ ಬ್ರಾಹ್ಮಣ (9) ಶಾಸಕರು ಕೂಡಾ ಅತಿಹೆಚ್ಚಿನ ಸಂಖ್ಯೆಯಲ್ಲಿ ಆರಿಸಿಬಂದದ್ದು ಕೂಡಾ ಬಿಜೆಪಿಯಲ್ಲಿ. ಲಿಂಗಾಯತರು ಬಿಜೆಪಿಯಲ್ಲಿರುವ ಲಿಂಗಾಯತ ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕದೆ ಆ ಪಕ್ಷದಿಂದ ಸ್ಪರ್ಧಿಸಿದ್ದ ಅನ್ಯ ಜಾತಿಯ ಅಭ್ಯರ್ಥಿಗಳಿಗೂ ಮತಹಾಕಿದ್ದು ಇದರಿಂದ ಸ್ಪಷ್ಟ.
ತಮಗೆ ಅನುಕೂಲವಾಗಿರುವ `ಜನಾಭಿಪ್ರಾಯ'ದ ಕುದುರೆಯೇರಿ ಯಡಿಯೂರಪ್ಪನವರೂ ಹೊರಟರು. ಮುಖ್ಯಮಂತ್ರಿಯಾಗುವವರೆಗೆ ರಾಜಾರೋಷವಾಗಿ ತನ್ನನ್ನು ಲಿಂಗಾಯತ ನಾಯಕನೆಂದು ಬಿಂಬಿಸಿಕೊಳ್ಳದೆ ಇದ್ದ ಯಡಿಯೂರಪ್ಪ ನಿಧಾನವಾಗಿ ಆ ಕೆಲಸವನ್ನು ಶುರು ಮಾಡಿದ್ದರು. ಜಾತಿ ನಾಯಕರಾಗುವ ಮೂಲಕ ಯಡಿಯೂರಪ್ಪ ರಾಜಕೀಯ ಪ್ರವೇಶ ಮಾಡಿದವರಲ್ಲ. ಅಧಿಕಾರಕ್ಕೆ ಬರುವವರೆಗೆ ಅಂತಹ ಆರೋಪವೂ ಅವರ ಮೇಲೆ ಇರಲಿಲ್ಲ. ಆರ್‌ಎಸ್‌ಎಸ್‌ನ ನಿಷ್ಠಾವಂತ ಅನುಯಾಯಿಯಾಗಿದ್ದ ಅವರು ಅದು ಬಹಿರಂಗವಾಗಿ ಪ್ರತಿಪಾದಿಸುವ `ಜಾತಿಮೀರಿದ ಧರ್ಮ'ವನ್ನೇ ಹೆಚ್ಚು ನಂಬಿ ರಾಜಕಾರಣ ಮಾಡಿದವರು. ಆದರೆ ಕಳೆದ ಚುನಾವಣೆಯ ಫಲಿತಾಂಶ ಯಡಿಯೂರಪ್ಪನವರ ತಲೆಯನ್ನೂ ತಿರುಗಿಸಿಬಿಟ್ಟಿತು. ಅವರ ಹೃದಯದೊಳಗೆ ಜಾತಿ ಇತ್ತೋ ಇಲ್ಲವೋ ಆದರೆ ಬಹಿರಂಗವಾಗಿ ತಮ್ಮನ್ನು ಲಿಂಗಾಯತರ ನಾಯಕನಾಗಿಯೇ ಬಿಂಬಿಸಿಕೊಳ್ಳುವುದರಲ್ಲಿಯೇ ಯಡಿಯೂರಪ್ಪನವರು ಸಂಭ್ರಮಪಟ್ಟರು. ಇದರಿಂದ ರಾಜಕೀಯವಾಗಿ ಲಾಭವಾಗಲಿದೆ ಎಂಬ ಬೆಂಬಲಿಗರ ಮಾತನ್ನು ನಂಬಿಬಿಟ್ಟರು. ಅಗತ್ಯಕ್ಕಿಂತಲೂ ಹೆಚ್ಚಾಗಿ ವೀರಶೈವ ಮಠಗಳಿಗೆ ಭೇಟಿಕೊಟ್ಟರು. ರಾಜ್ಯದ ಬಜೆಟ್‌ನಲ್ಲಿ ಆ ಮಠಗಳಿಗೆ ಅನುದಾನವನ್ನು ಬೇಕಾಬಿಟ್ಟಿಯಾಗಿ ಹಂಚುವ ಕೆಟ್ಟಸಂಪ್ರದಾಯವನ್ನು ಪ್ರಾರಂಭಿಸಿದರು. ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಎದುರಾದಾಗ ಜಾತಿಯ ಗುರಾಣಿ ಬಳಸಿಕೊಂಡು ಬಚಾವಾಗುವ ಪ್ರಯತ್ನ ಪಟ್ಟರು. ಕೊನೆಗೆ ಅದೇ ಜಾತಿಯನ್ನು ನಂಬಿ ಸ್ವಂತ ಪಕ್ಷವನ್ನೂ ಕಟ್ಟಿದರು.
ಇದನ್ನೆಲ್ಲ ನೋಡುತ್ತಾ ಲಿಂಗಾಯತರಲ್ಲಿದ್ದ `ಪ್ರಜ್ಞಾವಂತ'ರೆನಿಸಿಕೊಂಡವರು ಕೂಡಾ ಜಾತಿ ಬಳಸಿಕೊಂಡೇ ಹೆಚ್ಚು ಖಾಸಗಿಯಾಗಿ, ಸ್ವಲ್ಪ ಬಹಿರಂಗವಾಗಿ ಯಡಿಯೂರಪ್ಪನವರನ್ನು ಸಮರ್ಥಿಸಿಕೊಳ್ಳತೊಡಗಿದರು. ಆ ಸಮಯದಲ್ಲಿಯೇ `ಬೇರೆ ಜಾತಿಗಳ ಮುಖ್ಯಮಂತ್ರಿಗಳು ಭ್ರಷ್ಟಾಚಾರ ಮಾಡಿಲ್ಲವೇ?' ಎಂಬ ನೀತಿಗೆಟ್ಟ ಸಮರ್ಥನೆಗಳು ಕೇಳಿಬರತೊಡಗಿದ್ದು. ಇಲ್ಲಿಯೇ ನಮ್ಮ ಅನೇಕ ಬುದ್ದಿಜೀವಿಗಳು, ಪ್ರೊಫೆಸರ್‌ಗಳು, ಪತ್ರಕರ್ತರು, ಸಮಾಜವಿಜ್ಞಾನಿಗಳು ಎಡವಿದ್ದು. ಇವರಲ್ಲಿ ಹೆಚ್ಚಿನವರು ಸಾಮಾನ್ಯ ಲಿಂಗಾಯತ ಮತದಾರರ ಅಂತರಾಳವನ್ನು ಅರಿತುಕೊಳ್ಳಲು ವಿಫಲರಾಗಿದ್ದರು. ಮನಸ್ಸಿನೊಳಗೆ ಎಷ್ಟೇ ಜಾತಿಪ್ರೀತಿ ಇದ್ದರೂ ಸಾಮಾನ್ಯವಾಗಿ ಯಾವ ವ್ಯಕ್ತಿ ಕೂಡಾ ತನ್ನನ್ನು ಜಾತಿವಾದಿ ಎಂದು ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ, ತಾನೊಬ್ಬ ಜಾತ್ಯತೀತ ಎಂದೇ ಹೇಳಿಕೊಳ್ಳುತ್ತಾನೆ. ಈ ನಡವಳಿಕೆಯನ್ನು ಆತ್ಮವಂಚನೆ ಎಂದೂ ಹೇಳಬಹುದು. ಆದರೆ ಸಜ್ಜನರೆಂದು ಅನಿಸಿಕೊಳ್ಳುವವರು ಕನಿಷ್ಠ ಇಷ್ಟರಮಟ್ಟಿಗೆ ಮುಜುಗರವನ್ನು ಇಟ್ಟುಕೊಳ್ಳಬೇಕಾಗುತ್ತದೆ.
ಕಳೆದ ಐದು ವರ್ಷಗಳಲ್ಲಿ ಅಸಹ್ಯಕರವಾಗಿ ವಿಜೃಂಭಿಸತೊಡಗಿದ್ದ ಜಾತಿಯ ಆವುಟವನ್ನು ನೋಡಿದ ನಂತರ ಲಿಂಗಾಯತರು ಮಾತ್ರವಲ್ಲ ಎಲ್ಲ ಜಾತಿಗಳ ಮತದಾರರಲ್ಲಿ ಇಂತಹದ್ದೊಂದು ಮುಜುಗರ ಹುಟ್ಟಿಕೊಂಡದ್ದು ನಿಜ. ಇದನ್ನು ಮೀರುವ ಪ್ರಯತ್ನವನ್ನು ಮತದಾರರು ಮಾಡಿರುವುದು 2013ರ ಫಲಿತಾಂಶದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದೆ. ಈ ಬಾರಿ ಗೆದ್ದಿರುವ 50 ಲಿಂಗಾಯತ ಶಾಸಕರಲ್ಲಿ 27 ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಬಿಜೆಪಿಯ ಪಾಲು ಕೇವಲ ಹತ್ತು. ಲಿಂಗಾಯತ ಮತದಾರರನ್ನೇ ನಂಬಿ ಪಕ್ಷ ಕಟ್ಟಿದ ಬಿ.ಎಸ್.ಯಡಿಯೂರಪ್ಪನವರು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿದ್ದು ಕೇವಲ ಆರು ಲಿಂಗಾಯತ ಶಾಸಕರನ್ನು. ಜಾತಿ ಮೀರಿದ ಮತದಾನವನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬೇಕಾದರೆ ರಾಜಕೀಯ ಪಕ್ಷಗಳು ಬಿಂಬಿಸಿದ್ದ ಮುಖ್ಯಮಂತ್ರಿ ಅಭ್ಯರ್ಥಿಗಳ ಜಾತಿಗಳನ್ನು ನೋಡಬೇಕು.
`ಲಿಂಗಾಯತ ಇಲ್ಲವೇ ಒಕ್ಕಲಿಗರ ನಾಯಕರ ನೇತೃತ್ವ ಇಲ್ಲದೆ ಇದ್ದರೆ ಅಧಿಕಾರಕ್ಕೆ ಬರಲು ಸಾಧ್ಯ ಇಲ್ಲ' ಎನ್ನುವ ಬಹುದೊಡ್ಡ `ಮಿಥ್' ಅನ್ನು ಕೂಡಾ ಈ ಚುನಾವಣೆ ಒಡೆದುಹಾಕಿದೆ. ಬಿಜೆಪಿ ಮತ್ತು ಕೆಜೆಪಿ ಕ್ರಮವಾಗಿ ಲಿಂಗಾಯತ ನಾಯಕರಾದ ಜಗದೀಶ ಶೆಟ್ಟರ್ ಮತ್ತು ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿಗಳಾಗಿ ಬಿಂಬಿಸಿದ್ದರೆ ಜೆಡಿ (ಎಸ್)ನ ಆಯ್ಕೆ ಎಚ್.ಡಿ.ಕುಮಾರಸ್ವಾಮಿ ಆಗಿದ್ದರು. ಕಾಂಗ್ರೆಸ್ ಪಕ್ಷ ತನ್ನ ಸಂಪ್ರದಾಯದಂತೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಇದ್ದರೂ ಓಟದಲ್ಲಿದ್ದವರು ಹಿಂದುಳಿದ ಜಾತಿಗೆ ಸೇರಿರುವ ಸಿದ್ದರಾಮಯ್ಯ ಮತ್ತು ದಲಿತರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ.ಪರಮೇಶ್ವರ್ ಎನ್ನುವುದು ಮತದಾರರಿಗೆ ಗೊತ್ತಿತ್ತು. ಚುನಾವಣೆಯ ಮೊದಲು ಮಾತ್ರವಲ್ಲ ಫಲಿತಾಂಶದ ನಂತರ ಕೂಡಾ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಬಿಂಬಿಸಿಕೊಂಡವರಲ್ಲಿಯೂ ಲಿಂಗಾಯತ ಜಾತಿಗೆ ಸೇರಿರುವ ಗಂಭೀರ ಅಭ್ಯರ್ಥಿಗಳು ಇರಲಿಲ್ಲ ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ಸಿದ್ದರಾಮಯ್ಯ ತಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮೊದಲ ದಿನದಿಂದಲೇ ಆತ್ಮವಂಚನೆ ಇಲ್ಲದೆ ಹೇಳಿಕೊಂಡು ಬಂದಿದ್ದರು. ಹೀಗಿದ್ದರೂ ಲಿಂಗಾಯತರನ್ನು ಮುಖ್ಯಮಂತ್ರಿ ಅಭ್ಯರ್ಥಿಗಳನ್ನಾಗಿ ಬಿಂಬಿಸಿದ್ದ ಬಿಜೆಪಿ ಮತ್ತು ಕೆಜೆಪಿ ಹಾಗೂ ಒಕ್ಕಲಿಗ ನಾಯಕನನ್ನು ಬಿಂಬಿಸಿದ್ದ ಜೆಡಿ (ಎಸ್) ಪಕ್ಷಗಳನ್ನು ರಾಜ್ಯದ ಜನತೆ ತಿರಸ್ಕರಿಸಿದ್ದು ಮಾತ್ರವಲ್ಲ ಕಾಂಗ್ರೆಸ್ ಪಕ್ಷವನ್ನು ಆರಿಸಿದ್ದನ್ನು ಐತಿಹಾಸಿಕ ಬದಲಾವಣೆ ಎನ್ನದೆ ಬೇರೇನು ಹೇಳಲು ಸಾಧ್ಯ?
ಕಳೆದ ಬಾರಿಯ ಫಲಿತಾಂಶಕ್ಕೆ ತದ್ವಿರುದ್ಧವಾಗಿ ಒಕ್ಕಲಿಗರನ್ನು ಹೊರತುಪಡಿಸಿ ಉಳಿದೆಲ್ಲ ಜಾತಿಗಳಿಗೆ ಸೇರಿದ ಅತೀ ಹೆಚ್ಚಿನ ಶಾಸಕರನ್ನು (ಪರಿಶಿಷ್ಟ ಜಾತಿ-17, ಪರಿಶಿಷ್ಟ ಪಂಗಡ-11, ಹಿಂದುಳಿದ ವರ್ಗ 27, ಮುಸ್ಲಿಮ್-9, ಬ್ರಾಹ್ಮಣ -5, ಕ್ರೈಸ್ತ-2, ಜೈನ-2 ) ಕಾಂಗ್ರೆಸ್ ಹೊಂದಿರುವುದು ಕೂಡಾ ವಿಶೇಷ. ಇದು ರಾಜ್ಯದ ಮತದಾರರು ಜಾತಿ ಮೀರಿದ ಪ್ರಜ್ಞಾವಂತಿಕೆಯಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಿರುವುದಕ್ಕೆ ಸಾಕ್ಷಿ. ಉದಾಹರಣೆಗೆ ಉತ್ತರಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಲಿಂಗಾಯತ ಶಾಸಕರು ಹೆಚ್ಚಿನಸಂಖ್ಯೆಯಲ್ಲಿ ಆರಿಸಿಬರಲು ಲಿಂಗಾಯತ ಮತದಾರರಲ್ಲದೆ ಬೇರೆ ಜಾತಿಗಳ ಮತದಾರರೂ ಹೇಗೆ ಕಾರಣವೋ, ಅದೇ ರೀತಿ ಲಿಂಗಾಯತೇತರ ಶಾಸಕರು ಉಳಿದ ಪಕ್ಷಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿಬರಲಿಕ್ಕೆ ಅವರವರ ಜಾತಿಯ ಮತದಾರರಲ್ಲದೆ ಲಿಂಗಾಯತರೂ ಮತಹಾಕಿದ್ದು ಕಾರಣ. ರಾಜ್ಯದ ಮತದಾರರು ತಮ್ಮ ಜಾತಿಯವರನ್ನೇ ಆಯ್ಕೆ ಮಾಡುವಾಗಲೂ ಅಭ್ಯರ್ಥಿಯ ಅರ್ಹತೆ ಮತ್ತು ಅವರು ಪ್ರತಿನಿಧಿಸುವ ಪಕ್ಷವನ್ನು ಆಧಾರವಾಗಿಟ್ಟುಕೊಂಡಿರುವುದು ಫಲಿತಾಂಶದ ವಿಶ್ಲೇಷಣೆಯಿಂದ ಗೊತ್ತಾಗುತ್ತದೆ.
ಈ ಚುನಾವಣೆಯಲ್ಲಿ ರಾಜ್ಯದ ಮತದಾರರು ಜಾತಿಯನ್ನು ಮಾತ್ರವಲ್ಲ ದುಡ್ಡಿನ ಆಮಿಷವನ್ನು ಕೂಡಾ ಮೀರಲು ಪ್ರಯತ್ನ ಮಾಡಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಹರಿದಿದ್ದ ದುಡ್ಡಿನ ಹೊಳೆಯಲ್ಲಿ ಮತದಾರರೂ ಕೊಚ್ಚಿಕೊಂಡು ಹೋಗಿದ್ದರು. ಫಲಿತಾಂಶ ಹೊರಬಿದ್ದ ನಂತರ ಪ್ರಾರಂಭವಾದ `ಆಪರೇಷನ್ ಕಮಲ'ಕ್ಕೆ ರಾಜಕಾರಣಿಗಳು ಮಾತ್ರವಲ್ಲ ಮತದಾರರೂ ಬಲಿಯಾಗಿದ್ದರು. ಪಕ್ಷಾಂತರಿ ಶಾಸಕರು ರಾಜೀನಾಮೆ ನೀಡಿ ಮಧ್ಯಂತರ ಚುನಾವಣೆ ಎದುರಿಸಲು ಹೊರಟ ಕಾರಣ ಪಕ್ಷಾಂತರ ನಿಷೇಧ ಕಾಯ್ದೆ ಕೂಡಾ ನಿಷ್ಪ್ರಯೋಜಕವಾಗಿತ್ತು. ಈ ಪಕ್ಷಾಂತರಿಗಳು ಎದುರಿಸಿದ ಮೊದಲ ಮಧ್ಯಂತರ ಚುನಾವಣೆಯಲ್ಲಿಯೇ ಮತದಾರರು ಸೋಲಿಸಿಬಿಟ್ಟಿದ್ದರೆ ರಾಜ್ಯದ ರಾಜಕಾರಣ ಈ ರೀತಿ ಅನೈತಿಕತೆಯ ಕೆಸರಲ್ಲಿ ಹೊರಳಾಡುತ್ತಿರಲಿಲ್ಲ. ಮತದಾರರ ಪ್ರತಿಕ್ರಿಯೆಯಿಂದ ಉತ್ತೇಜಿತರಾದ ಬಿಜೆಪಿ ನಾಯಕರು ಗಣಿಲೂಟಿಕೋರರ ದುಡ್ಡನ್ನುಬಳಸಿಕೊಂಡು `ಯಾರನ್ನಾದರೂ, ಯಾವುದನ್ನಾದರೂ ಖರೀದಿಸಿಬಿಡಬಹುದು' ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದರು. ಇದರಿಂದಾಗಿಯೇ ಅಗತ್ಯ ಇಲ್ಲದಿದ್ದರೂ ಶಾಸಕರ `ಖರೀದಿ' ನಡೆದದ್ದು. ಕೆಲವೇ ಕೆಲವು ಮಂದಿ ಆಡುತ್ತಿರುವ ಈ ದುಡ್ಡಿನ ಆಟವನ್ನು ದೂರದಲ್ಲಿ ನಿಂತು ನೋಡುತ್ತಿದ್ದ ಜನ ಅಸಹಾಯಕರಾಗಿದ್ದರು. ಇದಕ್ಕೆ ಕೊನೆಯೇ ಇಲ್ಲವೇ ಎಂದು ಅವರ ಮನಸ್ಸು ರೋದಿಸುತ್ತಿತ್ತೋ ಏನೋ?.
ಆಗಲೇ ಬದಲಾವಣೆಯ ಬಿರುಗಾಳಿ ಬೀಸಲಾರಂಭಿಸಿದ್ದು. ಈಗಿನದ್ದು ಆಗಿನ ಬದಲಾವಣೆಯ ಮುಂದುವರಿದ ಭಾಗ. ಗಣಿಲೂಟಿ ಮಾಡಿದ ಆರೋಪ ಎದುರಿಸುತ್ತಿದ್ದ ಸಚಿವರು ಮಾತ್ರವಲ್ಲ ಸಾಕ್ಷಾತ್ ಮುಖ್ಯಮಂತ್ರಿಗಳೇ ಜೈಲಿಗೆ ಹೋದದ್ದು, ಅಧಿಕಾರವನ್ನು ಕಳೆದುಕೊಂಡದ್ದು... ಎಲ್ಲವೂ ನಡೆದುಹೋಯಿತು. ಇದರ ತಾರ್ಕಿಕ ಅಂತ್ಯ ಎಂಬಂತೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣವಾಗಿ ಮಣ್ಣುಮುಕ್ಕಿ ಬಿಟ್ಟಿದೆ. ಕೇವಲ ಐದು ವರ್ಷಗಳ ಕಿರುಅವಧಿಯಲ್ಲಿ ರಾಜ್ಯದ ಜನತೆ ರಾಜಕಾರಣದ ಈ ಏಳು-ಬೀಳುಗಳಿಗೆ ಸಾಕ್ಷಿಯಾಗಿದ್ದಾರೆ. `ತಪ್ಪು ಮಾಡಿದವರಿಗೆ ಶಿಕ್ಷೆ ಆಗಿಯೇ ಆಗುತ್ತದೆ' ಎಂಬ ಸಾಮಾನ್ಯ ಜನರ ಮುಗ್ಧ ನಂಬಿಕೆ ಹುಸಿಯಾಗಲಿಲ್ಲ. ರಾಜ್ಯದ ಪ್ರಜ್ಞಾವಂತ ಮತದಾರರು ಜಾತಿಯ ದೌರ್ಬಲ್ಯ, ದುಡ್ಡಿನ ಆಮಿಷವನ್ನು ಮೀರಿ ಹೊಸ ಕರ್ನಾಟಕವೊಂದನ್ನು ತೆರೆದಿಟ್ಟಿದ್ದಾರೆ. ಬದಲಾವಣೆಯ ಹೊಸ್ತಿಲಲ್ಲಿ ರಾಜ್ಯ ನಿಂತಿದೆ, ಅದೇ ದಾರಿಯಲ್ಲಿ ಅದನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಸಿದ್ದರಾಮಯ್ಯನವರ ಮೇಲಿದೆ.