Showing posts with label ದಿ ಹಿಂದೂ. Show all posts
Showing posts with label ದಿ ಹಿಂದೂ. Show all posts

Sunday, March 5, 2017

ಭಾರತದಲ್ಲಿ ಮುದ್ರಣ ಮಾಧ್ಯಮ

ಮುದ್ರಣ ಮಾಧ್ಯಮವನ್ನು 'ಮುಳುಗುತ್ತಿರುವ ಹಡಗು' ಎಂದೇ ವಿಶ್ವದಾದ್ಯಂತ ಬಣ್ಣಿಸಲಾಗುತ್ತಿದೆ. ಭಾರತದಲ್ಲಿ ಮಾತ್ರ ಮುದ್ರಣ ಮಾಧ್ಯಮ ಶೇಕಡಾ ೮ ದರದಲ್ಲಿ ಬೆಳೆಯುತ್ತಿದೆ.
ಇಲ್ಲಿನ ಭಾಷಾ ಮಾಧ್ಯಮದ ವಿಸ್ತಾರ ಮತ್ತು ನವಸಾಕ್ಷರರ ಮೊದಲ ಓದು ಭಾಷಾಮಾಧ್ಯಮದಿಂದಲೇ ಶುರುವಾಗುವುದು ಇದಕ್ಕೆ ಕಾರಣಗಳು. ಆದರೆ ಭಾರತದಲ್ಲಿ ಕೂಡಾ ಇಂಗ್ಲೀಷ್ ಮುದ್ರಣ ಮಾಧ್ಯಮ ಅದರ ಮೇಲ್ಮಜಲನ್ನು ಮುಟ್ಟಿಬಿಟ್ಟಿರುವಂತೆ ಕಾಣುತ್ತಿದೆ. ಪ್ರಪಂಚದಾದ್ಯಂತ ನಡೆದಿರುವಂತೆ ಇಲ್ಲಿಯೂ ಇಂಗ್ಲೀಷ್ ಪತ್ರಿಕೆಗಳ ಓದುಗರು Online ಆಗುತ್ತಿರುವುದು ಇದಕ್ಕೆ ಕಾರಣ. ಇದರಲ್ಲಿ ಬಹುಸಂಖ್ಯೆಯಲ್ಲಿರುವವರು ಯುವ ಓದುಗರು. ಈ ಓದುಗ ವರ್ಗವನ್ನು ಆಕರ್ಷಿಸಲು ಇಂಗ್ಲೀಷ್ ದಿನಪತ್ರಿಕೆಗಳು ಕೂಡಾ ಜನಪ್ರಿಯ ಸಿನೆಮಾ, ಲೈಫ್ ಸ್ಟೈಲ್, ಸೆಕ್ಸ್, ರಿಲೇಷನ್ಸ್, ಊಟ-ತಿಂಡಿ, ಹೊಟೇಲ್-ಮಾಲ್ ಗಳ ಬಗೆಗಿನ ಸುದ್ದಿಯ ಪ್ರಮಾಣವನ್ನು ಹೆಚ್ಚಿಸುತ್ತಿವೆ.
ಈ ಹಿನ್ನೆಲೆಯಲ್ಲಿ 'ದಿ ಹಿಂದೂ' ಪತ್ರಿಕೆಯನ್ನು ಓದುತ್ತಿದ್ದಾಗಲೆಲ್ಲ ' ಇದು ಮುಳುಗುತ್ತಿರುವ ಹಡಗನ್ನು ಉಳಿಸಲು ಹೋರಾಡುತ್ತಿರುವ ವಯಸ್ಸಾದ ನಾವಿಕ' ಎಂದು ಅನಿಸುತ್ತಲೇ ಇತ್ತು. ಇತ್ತೀಚೆಗೆ ವಿನ್ಯಾಸದ ಆವರಣ ಮಾತ್ರವಲ್ಲ ಮಾಹಿತಿಯ ಹೂರಣವನ್ನೂ ಬದಲಾಯಿಸಿಕೊಂಡು, ವಿಸ್ತರಿಸಿಕೊಂಡು ಬರುತ್ತಿರುವ 'ದಿ ಹಿಂದು' ಕಂಡು ಖುಷಿಯಾಗುತ್ತಿದೆ, ಅದರ ಬಗ್ಗೆ ಪ್ರೀತಿ ಹೆಚ್ಚಾಗಿದೆ. ಭರವಸೆಯ ಸಣ್ಣ ಬೆಳಕು ಕಾಣತೊಡಗಿದೆ. ಇಂದಿನ ' ದಿ ಹಿಂದೂ' ಪತ್ರಿಕೆಯ ಪುಟಗಳ ಸಂಖ್ಯೆ ೫೨. ಜಾಹೀರಾತು ಪುಟಗಳ ಸಂಖ್ಯೆ ಅತಿಕಡಿಮೆ. ಪೂರ್ತಿ ಓದಲು ಇಡೀ ಭಾನುವಾರ ಬೇಕು.
ನೀವು ಯಾವ ಪತ್ರಿಕೆ ಓದಬೇಕು, ಓದಬಾರದು ಎನ್ನುವ ಸಲಹೆಯನ್ನು ನೀಡುವ ಅಧಿಕಪ್ರಸಂಗತನ ನಾನು ಮಾಡುವುದಿಲ್ಲ. ಆದರೆ ನೀವು ಓದುತ್ತಿರುವುದನ್ನು ಓದಿ, ಓದುವ ಪತ್ರಿಕೆಗಳಲ್ಲಿ 'ದಿ ಹಿಂದೂ' ಇಲ್ಲದೆ ಇದ್ದರೆ ದಯವಿಟ್ಟು ಅದನ್ನ ಸೇರಿಸಿಕೊಳ್ಳಿ. ಇದು ನಾವು ಬಯಸುವ ಮಾಧ್ಯಮವನ್ನು, ಮಾಧ್ಯಮ ಧರ್ಮವನ್ನು ಉಳಿಸಲು, ಬೆಳೆಸಲು ನಮ್ಮ ಕೊಡುಗೆಯಾಗಬಹುದು.