Monday, December 12, 2011

ಬಳ್ಳಾರಿ ರಿಪಬ್ಲಿಕ್ ವಿಸ್ತರಣೆಗೆ ಶ್ರೀರಾಮುಲು ನಾಯಕತ್ವ?

ಭಾರತದಲ್ಲಿ ಜಾತ್ಯತೀತ ನಾಯಕರಾಗುವುದು ಬಹಳ ಸುಲಭದ ಕೆಲಸ. ಮೊದಲು ಬಿಜೆಪಿಯಲ್ಲಿದ್ದು ಜಾತ್ಯತೀತರನ್ನೆಲ್ಲ ವಿರೋಧಿಸಬೇಕು, ನಂತರ ಆ ಪಕ್ಷವನ್ನು ವಿರೋಧಿಸಿ ಹೊರಗೆ ಬರಬೇಕು. ಅಲ್ಲಿಗೆ ಅವರು ಪ್ರಶ್ನಾತೀತ ಜಾತ್ಯತೀತ ನಾಯಕರು.
ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದ ರಾಜಕಾರಣದಲ್ಲಿ ನಮ್ಮ ಹಲವಾರು ತಥಾಕಥಿತ ಸೆಕ್ಯುಲರ್ ನಾಯಕರ ನಡವಳಿಕೆಯನ್ನು ಗಮನಿಸಿದರೆ ಅದರಲ್ಲಿ ಇಂತಹ ಆತ್ಮವಂಚನೆಯ ರಾಜಕೀಯವನ್ನು ಕಾಣಬಹುದು.
ಗುಜರಾತ್‌ನ  `ಕೋಮುವಾದಿ~ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಎದುರಾಗಿ ಕಾಂಗ್ರೆಸ್ ತಂದು ನಿಲ್ಲಿಸಿದ್ದು ಶಂಕರ್‌ಸಿಂಗ್ ವಘೇಲಾ ಎಂಬ ಬಿಜೆಪಿಯ ಮಾಜಿ ನಾಯಕನನ್ನು.

ಮಹಾರಾಷ್ಟ್ರದಲ್ಲಿ ಬಾಳ ಠಾಕ್ರೆ ಮತ್ತು ಕುಟುಂಬಕ್ಕೆ ಸವಾಲು ಹಾಕುತ್ತಿರುವವರು ಈಗ ಕಾಂಗ್ರೆಸ್‌ನಲ್ಲಿರುವ ಶಿವಸೇನೆಯ ಮಾಜಿ ನಾಯಕ ಸಂಜಯ್ ನಿರುಪಮ್. ಗುಜರಾತ್, ಮಹಾರಾಷ್ಟ್ರಗಳಲ್ಲಿ ಈಗಲೂ ಈ ವಲಸೆ ನಡೆಯುತ್ತಲೇ ಇದೆ.

ಇಷ್ಟು ಮಾತ್ರವಲ್ಲ, ಈಗಿನ ಜಾತ್ಯತೀತರ ಶಿಬಿರದಲ್ಲಿರುವ ಮಾಯಾವತಿ, ಎಂ.ಕರುಣಾನಿಧಿ, ಚಂದ್ರಬಾಬು ನಾಯ್ಡು, ನವೀನ್ ಪಟ್ನಾಯಕ್, ರಾಮ್‌ವಿಲಾಸ್ ಪಾಸ್ವಾನ್, ಎಚ್.ಡಿ.ಕುಮಾರಸ್ವಾಮಿ ಮೊದಲಾದವರೆಲ್ಲರೂ ಬಿಜೆಪಿಯ `ಕೋಮುವಾದದ ರಾಜಕೀಯ~ದಲ್ಲಿ ಮುಳುಗಿ ಎದ್ದು ಬಂದವರೇ ಆಗಿದ್ದಾರೆ.
ಇವರಲ್ಲಿ ಯಾರೂ ಕೂಡಾ ಮತ್ತೆ ಬಿಜೆಪಿ ತೆಕ್ಕೆಗೆ ಹೋಗಿ ಬೀಳಲಾರರು ಎಂಬ ಬಗ್ಗೆ ಖಾತರಿ ಇಲ್ಲ. ಸದ್ಯಕ್ಕೆ ಇವರೆಲ್ಲ ಜಾತ್ಯತೀತರು. ಈ ಗುಂಪಿಗೆ ಕರ್ನಾಟಕದ ಕೊಡುಗೆ ಬಳ್ಳಾರಿಯ ಶ್ರಿರಾಮುಲು.
ಬಳ್ಳಾರಿ ಉಪಚುನಾವಣೆಯ ಗೆಲುವಿನಲ್ಲಿ ಕೆಲವರು ಸೆಕ್ಯುಲರ್ ನಾಯಕನೊಬ್ಬ ಉದಯವನ್ನು, ಇನ್ನು ಕೆಲವರು ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ ಭಾಗ್ಯವಿಧಾತನ ಅವತಾರವನ್ನು ಕಾಣತೊಡಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಾತ್ಯತೀತ ಜನತಾದಳಕ್ಕೆ ಶ್ರಿರಾಮುಲು ಅವರನ್ನು ಸ್ವಾಗತಿಸಲು ಆರತಿತಟ್ಟೆ ಹಿಡಿದುಕೊಂಡು ಕಾಯುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿಯೇತರ `ಅಹಿಂದ~ ನಾಯಕರು ಬಿಜೆಪಿಯ `ಲಂಕೆಯನ್ನು ಧ್ವಂಸ~ ಮಾಡಲು ಹೊರಟಿರುವ ಶ್ರಿರಾ(ಮ)ಮುಲು ಸೇನೆಗೆ ಭರ್ತಿಯಾಗಲು ಸರತಿಯ ಸಾಲಲ್ಲಿ ನಿಂತಿದ್ದಾರೆ. ರಾಜ್ಯದ ಸೆಕ್ಯುಲರ್  ಮತ್ತು `ಅಹಿಂದ~ ನಾಯಕರ ಸದ್ಯದ ಕಣ್ಮಣಿ ಶ್ರಿರಾಮುಲು.
ಬಿಜೆಪಿಯ ಸಂಗದಲ್ಲಿದ್ದ ರಾಷ್ಟ್ರೀಯ ನಾಯಕರು ಅದರಿಂದ ಹೊರಗೆ ಬಂದಾಗ ಹೇಳಿಕೊಳ್ಳಲಿಕ್ಕಾದರೂ ಸರಿಯಾದ ಕಾರಣಗಳನ್ನು ಇಟ್ಟುಕೊಂಡಿದ್ದರು. ಶ್ರಿರಾಮುಲು ಬಿಜೆಪಿ ತೊರೆಯಲು ಏನು ಕಾರಣ? ಹಿಂದಿನ ಮೂರು ವರ್ಷಗಳಲ್ಲಿ ನಡೆಸದ ಕೋಮುವಾದಿ ಚಟುವಟಿಕೆಗಳನ್ನು ಬಿಜೆಪಿ ಕಳೆದೆರಡು ತಿಂಗಳಲ್ಲಿ ನಡೆಸಿದೆಯೇ?
ಹಿಂದುಳಿದ ಜಾತಿ ಜನರಿಗೆ ಇತ್ತೀಚೆಗೆ ಏನಾದರೂ ಅನ್ಯಾಯ ಮಾಡಿದೆಯೇ? ದಲಿತರ ಮೇಲೆ ದೌರ್ಜನ್ಯ ಪ್ರಾರಂಭಿಸಿದೆಯೇ?  ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಪ್ರಾರಂಭ ಮಾಡಿದ ಮೊದಲ ಕೆಲಸ ಹಿಂದುಳಿದ ವರ್ಗಗಳ ಆಯೋಗದ ಮೇಲೆ ದಾಳಿ.

ಅದರ ಅಧ್ಯಕ್ಷರಾಗಿದ್ದ ಸಿ.ಎಸ್.ದ್ವಾರಕನಾಥ್ ಅವರನ್ನು ಕಿತ್ತುಹಾಕಲು ನಿರಂತರವಾಗಿ ಅದು ಪ್ರಯತ್ನ ನಡೆಸಿತು. ರಾಜ್ಯದಲ್ಲಿ ಜಾತಿಗಣತಿ ನಡೆಸಲಿಕ್ಕಾಗಿ ಕೇಂದ್ರ ಸರ್ಕಾರ ಅನುದಾನ ನೀಡಿದರೂ ಆ ಕೆಲಸ ಪ್ರಾರಂಭಿಸಲು ಅವಕಾಶವನ್ನೇ ನೀಡಲಿಲ್ಲ. ದ್ವಾರಕಾನಾಥ್ ಅವರು ಕಷ್ಟಪಟ್ಟು ತಯಾರಿಸಿದ ವರದಿಯ ಗತಿ ಏನಾಯಿತೋ ಗೊತ್ತಿಲ್ಲ.
ಇವೆಲ್ಲವೂ ನಡೆಯುತ್ತಿರುವಾಗ ಶ್ರಿರಾಮುಲು ಬಳ್ಳಾರಿ ಮತ್ತು ಬೆಂಗಳೂರು ನಡುವೆ ಹೆಲಿಕಾಪ್ಟರ್‌ನಲ್ಲಿ ಹಾರಾಡುತ್ತಾ ಬಿಜೆಪಿಯಲ್ಲಿಯೇ ಇದ್ದರಲ್ಲವೇ? ಅವರೆಂದಾದರೂ ಇದರ ವಿರುದ್ಧ ದನಿ ಎತ್ತಿದ್ದರೇ? ಈಗ ಪ್ರತಿನಿಧಿಸಲು ಹೊರಟ `ಅಹಿಂದ~ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ರಾಜೀನಾಮೆ ಕೊಡಲು ಮುಂದಾಗಿದ್ದರೇ?

ಕನಿಷ್ಠ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಡೆಸ್ನಾನದ ಮೇಲೆ ಹೇರಲಾದ ನಿಷೇಧವನ್ನು ಬಿಜೆಪಿ ಸರ್ಕಾರ ವಾಪಸು ಪಡೆದುದನ್ನಾದರೂ ಶ್ರೀರಾಮುಲು ಎಲ್ಲಾದರೂ ವಿರೋಧಿಸಿದ್ದಾರೆಯೇ?
ಹಾಗಿದ್ದರೆ ಅವರು ಬಿಜೆಪಿ ತೊರೆಯಲು ಏನು ಕಾರಣ? ಶ್ರಿರಾಮುಲು ಅವರೇ ಹೇಳಿಕೊಂಡ ಕಾರಣ- ಲೋಕಾಯುಕ್ತ ವರದಿಯಲ್ಲಿನ ಆರೋಪಿಗಳ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡ ನಂತರ ಅವರನ್ನು ಸಂಪುಟದಿಂದ ಕೈಬಿಟ್ಟದ್ದು.

ಇದರಿಂದ ಜಾತ್ಯತೀತ ಮೌಲ್ಯದ ಮಾನಭಂಗ ಹೇಗಾಯಿತೋ, ರಾಜ್ಯದ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ ಸ್ವಾಭಿಮಾನಕ್ಕೆ ಹೇಗೆ ಧಕ್ಕೆಯಾಯಿತೋ, ಅವರು ಇದ್ದಕ್ಕಿದ್ದಂತೆ ವಾಲ್ಮೀಕಿ, ಏಕಲವ್ಯ, ಕರ್ಣ ಮೊದಲಾದ ಪುರಾಣಪುರುಷರ ಅಪರವತಾರ ಹೇಗಾದರೋ ಗೊತ್ತಾಗುತ್ತಿಲ್ಲ.
ಒಂದೊಮ್ಮೆ ಶ್ರಿರಾಮುಲು ಅವರ ಈಗಿನ ಜಾತ್ಯತೀತ ರಾಜಕೀಯ ನಿಲುವು ಪ್ರಾಮಾಣಿಕವಾದುದು ಎಂದೇ ತಿಳಿದುಕೊಂಡರೂ ಅವರ ಮೇಲಿನ ಅಕ್ರಮ ಗಣಿಗಾರಿಕೆಯ ಆರೋಪಗಳನ್ನು ಹೇಗೆ ಮನ್ನಿಸಲು ಸಾಧ್ಯ?

ನಗ್ನ ಸತ್ಯ ಏನೆಂದರೆ ಶ್ರಿರಾಮುಲು ಅವರು ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯಶೆಟ್ಟಿ ಮೊದಲಾದವರಂತೆ ಒಬ್ಬ ಕಳಂಕಿತರು, ಭ್ರಷ್ಟಾಚಾರದ ಆರೋಪಗಳನ್ನು ತಲೆಮೇಲೆ ಹೊತ್ತುಕೊಂಡವರು.
ಬಿಜೆಪಿಯನ್ನು ತೊರೆದು ಹೊರಬಂದ ಮಾತ್ರಕ್ಕೆ ಇವರಿಗೆ ಮೆತ್ತಿಕೊಂಡ ಭ್ರಷ್ಟಾಚಾರದ ಕಳಂಕ ಏಕಾಏಕಿ ತೊಡೆದುಹೋಗಲಾರದು. ಬಳ್ಳಾರಿಯ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡಿದ ಮತ್ತು ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡಿದ ಆರೋಪದಿಂದ ಮುಕ್ತಿ ಪಡೆಯಲಾರರು.
ದೇಶದ ಜಾತ್ಯತೀತ ಮತ್ತು `ಅಹಿಂದ~ ನಾಯಕರು ಕೂಡಾ ಮಾಡುತ್ತಾ ಬಂದಿರುವುದು ಇದೇ ತಪ್ಪನ್ನು. ಲಾಲುಪ್ರಸಾದ್ ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಾಗೆಲ್ಲ ಅದು ಜಾತ್ಯತೀತ ನಾಯಕನೊಬ್ಬನನ್ನು ದಮನಮಾಡುವ ಕೋಮುವಾದಿಗಳ ಸಂಚು ಎಂದೇ ಆರೋಪಿಸುತ್ತಿದ್ದರು.

ಮುಲಾಯಂ ಸಿಂಗ್, ಮಾಯಾವತಿ ಸೇರಿದಂತೆ ಬಹುತೇಕ ಸೆಕ್ಯುಲರ್ ಭ್ರಷ್ಟರು  ಒಂದು ಸಂದರ್ಭದಲ್ಲಿ ತಮ್ಮ ಹುಳುಕನ್ನು ಬಚ್ಚಿಡಲು ಈ ಆರೋಪ ಮಾಡುತ್ತಾ ಬಂದಿದ್ದಾರೆ. ಇದನ್ನು ನೋಡಿದರೆ ಕೋಮುವಾದ ಮಾತ್ರವಲ್ಲ, ಭ್ರಷ್ಟಾಚಾರ ಹೆಚ್ಚಾಗಲು ಕೂಡಾ ಬಿಜೆಪಿ ಕಾರಣ ಎನ್ನಬಹುದೇನೋ?

ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಿದರೆ ಕರ್ನಾಟಕ ಕೋಮುವಾದದ ಬೆಂಕಿಯಲ್ಲಿ ಸುಟ್ಟುಹೋಗಲಿದೆ ಎಂಬ ಕಾರಣವನ್ನೇ ತನ್ನ ವಚನಭಂಗಕ್ಕೆ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಲ್ಲವೇ? ಆ ಮೂಲಕ ಜಾತ್ಯತೀತನೆಂಬ ಕಿರೀಟವನ್ನು ಮರಳಿ ಮುಡಿಗೇರಿಸಿಕೊಂಡದ್ದಲ್ಲವೇ?
ಭ್ರಷ್ಟಾಚಾರದ ಭಾಗವಾಗಿರುವ ಅಕ್ರಮ ಗಣಿಗಾರಿಕೆಯಿಂದ ಪ್ರಜ್ಞಾಪೂರ್ವಕವಾಗಿ ದೂರ ಸರಿಯುವ ಪಶ್ಚಾತ್ತಾಪದ ಆಶಯವನ್ನು ತೋರಿಕೆಗಾಗಿಯಾದರೂ ಶ್ರಿರಾಮುಲು ವ್ಯಕ್ತಪಡಿಸಿದ್ದರೆ ಅವರ ಹಿಂದೆ ಹೊರಟವರಿಗೆ ಕನಿಷ್ಠ ಗೌರವವಾದರೂ ಇರುತ್ತಿತ್ತು.

ಈಗಲೂ ಶ್ರಿರಾಮುಲು ಅವರ ನಿಷ್ಠೆ ತನ್ನ ಮತದಾರರರು ಇಲ್ಲವೇ ಬೆಂಬಲಿಗರಾದ ಜಾತ್ಯತೀತ ನಾಯಕರ ಮೇಲೆ ಅಲ್ಲ, ಅದು ಅಕ್ರಮ ಗಣಿಗಾರಿಕೆಯ ಪ್ರಮುಖ ಆರೋಪಿ ಜನಾರ್ದನ ರೆಡ್ಡಿಯವರ ಮೇಲೆ.
ಚುನಾವಣೆಯಲ್ಲಿ ಗೆದ್ದ ಮರುಕ್ಷಣದಲ್ಲಿ ಅವರು ಸ್ಮರಿಸಿಕೊಂಡದ್ದು ಅಂಬೇಡ್ಕರ್ ಇಲ್ಲವೇ ದೇವರಾಜ ಅರಸು ಅವರನ್ನಲ್ಲ. ಈ ಭೂಮಿ ಇರುವಷ್ಟು ದಿನ ರಾಜ್ಯದ ಹಿಂದುಳಿದ ಜಾತಿ ಜನ ಕೃತಜ್ಞರಾಗಬೇಕಾಗಿರುವ ಲಕ್ಷ್ಮಣ ಜಿ. ಹಾವನೂರು ಅವರನ್ನೂ ಅಲ್ಲ. ಅವರು ಸ್ಮರಿಸಿಕೊಂಡದ್ದು ಜನಾರ್ದನ ರೆಡ್ಡಿಯವರನ್ನು.

`ಜನಾರ್ದನ ರೆಡ್ಡಿಯವರ ಸಲಹೆಯನ್ನು ಪಡೆದು ನನ್ನ ಮುಂದಿನ ರಾಜಕೀಯದ ನಿರ್ಧಾರ ಕೈಗೊಳ್ಳುತ್ತೇನೆ~ ಎಂದಲ್ಲವೇ ಚುನಾವಣೆಯಲ್ಲಿ ಗೆಲುವಿನ ಮರುಕ್ಷಣದಲ್ಲಿ ಶ್ರಿರಾಮುಲು ಹೇಳಿದ್ದು.
`ಸೆರೆಮನೆಯಲ್ಲಿರುವ ಒಬ್ಬ ವಿಚಾರಣಾಧೀನ ಕೈದಿಯ ಮಾರ್ಗದರ್ಶನದಲ್ಲಿ ರಾಜಕೀಯ ಮಾಡುತ್ತೇನೆ~ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಅಕ್ರಮ ಗಣಿಗಾರಿಕೆಯ ಆರೋಪಿ ಶ್ರಿರಾಮುಲು ಅವರನ್ನು ನಾಯಕನೆಂದು ಒಪ್ಪಿಕೊಳ್ಳುವುದಾದರೆ, ನಾಳೆ ಬಿಜೆಪಿಯ ಶಾಸಕರು ಕೂಡಿ ಭ್ರಷ್ಟಾಚಾರದ ಆರೋಪಗಳನ್ನು ಇನ್ನೂ ಎದುರಿಸುತ್ತಿರುವ ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಯಾವ ನೈತಿಕತೆಯ ಮೇಲೆ ವಿರೋಧಿಸಲು ಸಾಧ್ಯ?
`ಯಾವ ರಾಜಕಾರಣಿ ಭ್ರಷ್ಟನಾಗಿರಲಿಲ್ಲ~ ಎಂದು ಶ್ರಿರಾಮುಲು ಅಭಿಮಾನಿಗಳು ಕೇಳಬಹುದು. ಹಿಂದುಳಿದ ವರ್ಗಗಳ ನಾಯಕನೆಂದು ಹೇಳುವ ದೇವರಾಜ ಅರಸು ಅವರು ಭ್ರಷ್ಟಾಚಾರ ನಡೆಸಿಲ್ಲವೇ ಎಂದು ಉಡಾಫೆಯಾಗಿ ಕೇಳಿ ಬಾಯಿಮುಚ್ಚಿಸುವ ಪ್ರಯತ್ನವನ್ನೂ ಕೆಲವರು ಮಾಡುತ್ತಿದ್ದಾರೆ.
ಜಾತಿಯ ಬಲ ಇಲ್ಲದ ಅರಸು ಭ್ರಷ್ಟಾಚಾರಕ್ಕೆ ಕೈ ಹಾಕಬೇಕಾಗಿ ಬಂದದ್ದು ಭ್ರಷ್ಟ ಶಾಸಕರ ಬೆಂಬಲವನ್ನು ಉಳಿಸಿಕೊಳ್ಳಲಿಕ್ಕಾಗಿ ಮತ್ತು ಅದರ ಮೂಲಕ ಗಳಿಸುವ ರಾಜಕೀಯ ಅಧಿಕಾರದಿಂದ ಭೂ ಸುಧಾರಣೆ, ಮೀಸಲಾತಿ, ಜೀತಪದ್ಧತಿ ನಿರ್ಮೂಲನೆ, ಋಣ ಪರಿಹಾರ, ಮಲಹೊರುವ ಪದ್ಧತಿ ನಿಷೇಧದಂತಹ ಸಾಮಾಜಿಕ ನ್ಯಾಯದ ಕಾರ‌್ಯಕ್ರಮಗಳನ್ನು ಅನುಷ್ಠಾನಗೊಳಿಸಲಿಕ್ಕಾಗಿ.

ಆ ಶಾಸಕರು (ಅವರಲ್ಲಿ ಹೆಚ್ಚಿನವರು ಹಿಂದುಳಿದ ಜಾತಿಯವರು) ಭ್ರಷ್ಟರಾಗದೆ ಇದ್ದಿದ್ದರೆ ಅರಸು ಖಂಡಿತ ಭ್ರಷ್ಟರಾಗುತ್ತಿರಲಿಲ್ಲ. ಅರಸು ವೈಯಕ್ತಿಕವಾಗಿ ಭ್ರಷ್ಟರಾಗಿದ್ದರು ಎನ್ನುವುದಕ್ಕೆ ಗ್ರೋವರ್ ಆಯೋಗಕ್ಕೂ ಪುರಾವೆಗಳು ಸಿಗಲಿಲ್ಲ ಎನ್ನುವುದನ್ನು ನಮ್ಮ ಅನೇಕ ಇತಿಹಾಸಕಾರರು ಮತ್ತು ರಾಜಕೀಯ ವಿಶ್ಲೇಷಕರು ಮರೆತೇ ಬಿಡುತ್ತಾರೆ.

ನಿಜ, ರಾಜಕಾರಣಿಗಳು ಆಗಲೂ ಭ್ರಷ್ಟರಾಗಿದ್ದರು, ಈಗಲೂ ಅದಕ್ಕೆ ಹೊರತಲ್ಲ.. ಆದರೆ, ಅವರು ಭ್ರಷ್ಟರಾದರೆ ಅವರನ್ನು ನಿವಾರಿಸಿಕೊಳ್ಳಲು ಚುನಾವಣೆಯ ಅಸ್ತ್ರ ಇದೆ. ಆದರೆ ಈ ಅಸ್ತ್ರ ಪ್ರಯೋಗ ಮಾಡಬೇಕಾದ ಮತದಾರರೇ ಭ್ರಷ್ಟರಾದರೇ?
ಕರ್ನಾಟಕ ರಾಜಕಾರಣಕ್ಕೆ `ಬಳ್ಳಾರಿ ರಿಪಬ್ಲಿಕ್~ನ ಮಹಾ ಕೊಡುಗೆ ಇದು. ಅದು ಬಳ್ಳಾರಿ ಮಾತ್ರವಲ್ಲ, ರಾಜ್ಯದ ಮತದಾರರನ್ನೇ ಭ್ರಷ್ಟಗೊಳಿಸಲು ಹೊರಟಿದೆ. ಚುನಾವಣೆ ಕಾಲದಲ್ಲಿ ಹಿಂದೆಯೂ ಹಣ-ಹೆಂಡ ಹಂಚಲಾಗುತ್ತಿತ್ತು.

ಆದರೆ, ಅದನ್ನು ಕೊಟ್ಟವರಿಗೆಲ್ಲ, ಅದನ್ನು ಪಡೆದವರು ಮತಹಾಕುತ್ತಾರೆ ಎನ್ನುವ ಖಾತರಿ ಇರಲಿಲ್ಲ. ಯಾಕೆಂದರೆ ಆ ಆಮಿಷಗಳು ಒಂದು ದಿನದ ಮೋಜು-ಜೂಜಿಗಷ್ಟೇ ಸಾಕಾಗುತ್ತಿತ್ತು. ಆದರೆ, ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ಮತದಾರರಿಗೆ ಒಡ್ಡಲಾಗುತ್ತಿರುವ ಆಮಿಷಗಳಿಗೆ ಮಿತಿಯೇ ಇಲ್ಲದಂತಾಗಿದೆ.

ಬಳ್ಳಾರಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶವೊಂದನ್ನು ಹೊರತುಪಡಿಸಿದರೆ ಬೇರೆ ಯಾವ ರಾಜ್ಯದಲ್ಲಿಯೂ ಚುನಾವಣಾ ಕಾಲದಲ್ಲಿ ಈ ರೀತಿಯ ಹಣದ ಹೊಳೆ ಹರಿದಿಲ್ಲ. `ಆಪರೇಷನ್ ಕಮಲ~ ಎಂಬ ಅನೈತಿಕ ರಾಜಕಾರಣವೇ `ಬಳ್ಳಾರಿ ರಿಪಬ್ಲಿಕ್~ನ ಕಪ್ಪುಹಣದಿಂದಲೇ ಪ್ರಾರಂಭವಾಗಿದ್ದಲ್ಲವೇ?
ಕಳೆದ ವಿಧಾನಸಭಾ ಚುನಾವಣಾ ಕಾಲದಲ್ಲಿ ಹಂಪಿ ವಿಶ್ವವಿದ್ಯಾಲಯ ಪ್ರಾಧ್ಯಾಪಕರೊಬ್ಬರು ಮನೆಕೆಲಸದಾಕೆ ಬರುತ್ತಿಲ್ಲ ಎಂದು ಒದ್ದಾಡುತ್ತಿದ್ದರು. ಚುನಾವಣಾ ಕಾಲದಲ್ಲಿ ಹತ್ತು ದಿನ ರಜೆ ಹಾಕಿ ಆಕೆ ಪ್ರಚಾರಕ್ಕೆ ಹೋಗಿದ್ದಳಂತೆ.

ಮತದಾನದ ಮರುದಿನ ಬಂದ ಆಕೆ `ಹತ್ತು ದಿನಗಳಲ್ಲಿ ನಾವು ನಾಲ್ಕು ಮಂದಿ 30 ಸಾವಿರ ರೂಪಾಯಿ ದುಡಿದೆವು, ಇನ್ನು ಮುಂದೆಯೂ ಅಣ್ಣಾವ್ರ ದುಡ್ಡು ಕೊಡುತ್ತೇನೆ ಎಂದಿದ್ದಾರೆ ~ ಎಂದು ಹೇಳಿದಳಂತೆ. ಅವಳಂತಹವರ ನಂಬಿಕೆಯೇನು ಹುಸಿಯಾಗಿಲ್ಲ.
ಬಳ್ಳಾರಿ ಜಿಲ್ಲೆಯನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುವವರು ಕೇವಲ ಶಾಸಕರಲ್ಲ, ಅವರೆಲ್ಲ ಆಧುನಿಕ `ರಾಬಿನ್ ಹುಡ್~ಗಳು. ಮಗಳ ಮದುವೆಗೆ, ಮಗನ ಓದಿಗೆ, ಗಂಡನ ಕಾಯಿಲೆಗೆ ದುಡ್ಡು ಕೇಳಲು ಹೋದರೆ ಸಾಮಾನ್ಯವಾಗಿ ಅವರು ಬರಿಗೈಯಲ್ಲಿ ಹಿಂದಕ್ಕೆ ಕಳುಹಿಸುವುದಿಲ್ಲ.
ರಾಜ್ಯದ ಬೊಕ್ಕಸಕ್ಕೆ ದ್ರೋಹವೆಸಗಿ ಅಕ್ರಮ ಗಣಿಗಾರಿಕೆಯಿಂದ ಸಂಪಾದನೆ ಮಾಡಿದ ನೂರಾರು ಕೋಟಿ ರೂಪಾಯಿ ಹಣದಲ್ಲಿ ಒಂದಷ್ಟು ಸಾವಿರ ರೂಪಾಯಿಗಳನ್ನು ನಮಗೆ ಹಂಚಲಾಗುತ್ತಿದೆ ಎಂದು ಈ ಮುಗ್ಧ ಮತದಾರರಿಗೆ ಗೊತ್ತಿಲ್ಲ.

ಗೊತ್ತಿದ್ದರೂ ಅದರ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. `ರಸ್ತೆ, ಶಾಲೆ, ಆಸ್ಪತ್ರೆ ಯಾರಿಗೆ ಬೇಕ್ರಿ? ಅವರು ಕೊಟ್ಟಿದ್ದಾರೆ, ನೀವೇನು ಕೊಡ್ತೀರಿ?~ ಎಂದು ಮತದಾರರೇ ಕೈಚಾಚಿ ನಿಂತರೆ, ಅಲ್ಲಿಗೆ ಪ್ರಜಾಪ್ರಭುತ್ವದ ತಿಥಿ. ಇದನ್ನೇ `ಬನಾನ ರಿಪಬ್ಲಿಕ್~ ಎನ್ನುವುದು.
ರಾಜ್ಯದ ಜಾತ್ಯತೀತ ಮತ್ತು ಅಹಿಂದ ನಾಯಕರು ಈಗ `ಬನಾನ ರಿಪಬ್ಲಿಕ್~ನ ಸಾಮ್ರಾಜ್ಯವನ್ನು `ಸ್ವಾಭಿಮಾನಿ ನಾಯಕ~ನ ನೇತೃತ್ವದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸುವ ಅವಸರದಲ್ಲಿದ್ದಾರೆ. ಅವಸರದ ಕೆಲಸ ಯಾವತ್ತೂ ಅಪಘಾತಕ್ಕೆ ದಾರಿ ಎಂದು ಇವರಿಗೆ ಹೇಳುವವರು ಯಾರು?