Monday, May 9, 2011

ಒಸಾಮ ಸತ್ತರೆ ನಾವ್ಯಾಕೆ ಕುಣಿಯಬೇಕು?

ಮನುಷ್ಯನ ರೋಷಕ್ಕೆ ಬೆಂಕಿಯ ಶಕ್ತಿ ಇದ್ದಿದ್ದರೆ ಕಳೆದ ಒಂದು ವಾರದ ಅವಧಿಯಲ್ಲಿ ಪಾಕಿಸ್ತಾನ ಸುಟ್ಟು ಬೂದಿಯಾಗಿ ಹೋಗಬೇಕಾಗಿತ್ತು. ಪಾಕಿಸ್ತಾನದಲ್ಲಿದ್ದ ಪಾತಕಿ ಒಸಾಮ ಬಿನ್ ಲಾಡೆನ್‌ನನ್ನು ಅಮೆರಿಕದ ‘ಸೀಲ್’ಗಳು ಹೊಡೆದುರುಳಿಸಿದ ಮರುಕ್ಷಣದಲ್ಲಿಯೇ ನಮ್ಮಲ್ಲಿನ ‘ದೇಶಪ್ರೇಮಿ’ಗಳ ರೋಮರೋಮಗಳು ನಿಮಿರಿ ನಿಂತುಬಿಟ್ಟಿವೆ.

‘ಯುದ್ಧ ಘೋಷಿಸಿ’ ‘ಬಾಂಬು ಹಾಕಿ’, ‘ತಲೆ ಕಡಿದು ತನ್ನಿ’ ಎಂದೆಲ್ಲಾ ವೀರಾವೇಶದ ಚೀತ್ಕಾರಗಳು ಪ್ರತಿದಿನ ಕೇಳುತ್ತಲೇ ಇವೆ. ಆಶ್ಚರ್ಯವೆಂದರೆ ಈ ರೀತಿಯ ವೀರಾವೇಶದ ಸಲಹೆಗಳನ್ನು ನೀಡುವವರಲ್ಲಿ ‘ಭಯೋತ್ಪಾದಕರ ಕೈಹಿಡಿದು ಕರೆದುಕೊಂಡು ಹೋಗಿ ತಾಲಿಬಾನಿಗಳಿಗೆ ಒಪ್ಪಿಸಿದ’ ಪಕ್ಷದ ‘ದೇಶಪ್ರೇಮಿ’ಗಳೂ ಇದ್ದಾರೆ. ನಮ್ಮಲ್ಲಿ ಮಾತ್ರವಲ್ಲ, ಅಮೆರಿಕದ ಜನತೆಗೂ ‘ದೇಶಪ್ರೇಮ’ದ ಸಮೂಹ ಸನ್ನಿ ಹಿಡಿದುಬಿಟ್ಟಿದೆ. ಆ ದೇಶದ ಅಧ್ಯಕ್ಷ ಬರಾಕ್ ಒಬಾಮ ಈಗ ಎಲ್ಲರ ಕೊಂಡಾಟದ ನಾಯಕ.
ಒಸಾಮ ಬಿನ್ ಲಾಡೆನ್ ಸಾವಿನಿಂದ ವಿಶ್ವಕ್ಕೆ ಆಗಲಿರುವ ಲಾಭ-ನಷ್ಟಗಳೇನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು, ಆದರೆ ಆತನ ಸಾವಿನಿಂದಾಗಿ ತಕ್ಷಣಕ್ಕೆ ವಿಶ್ವದ ಇಬ್ಬರು ನಾಯಕರಿಗೆ ಲಾಭವಾಗಿದೆ. ಒಬ್ಬರು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಇನ್ನೊಬ್ಬರು ಭಾರತದ ಪ್ರಧಾನಿ ಮನಮೋಹನ್ ಸಿಂಗ್. ದೀರ್ಘಾವಧಿಯ ಸಾಲದ ಬಾಧೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗದಿಂದಾಗಿ ಅಮೆರಿಕನರು ಭ್ರಮನಿರಸನದತ್ತ ಸಾಗುತ್ತಿದ್ದಾಗಲೇ ಒಬಾಮ ಅವರಿಗೆ ಒಸಾಮ ಸಾವು ಜೀವದಾನ ಮಾಡಿದೆ.
ಅಮೆರಿಕದ ಪತ್ರಿಕೆಗಳು ಆಗಲೇ ಪೈಪೋಟಿಗೆ ಬಿದ್ದು ಒಬಾಮ ಅವರನ್ನು ಹಾಡಿ ಹೊಗಳತೊಡಗುತ್ತಿವೆ. ಭಾರತದಲ್ಲಿ ಭ್ರಷ್ಟಾಚಾರದ ಹಗರಣಗಳ ಭೂತ ಪ್ರಧಾನಿ ಕಾರ್ಯಾಲಯದ ಬಾಗಿಲನ್ನು ಬಡಿಯುತ್ತಿದ್ದಾಗಲೇ ಸ್ಫೋಟಗೊಂಡ ಒಸಾಮ ಸಾವಿನ ಸುದ್ದಿ ಜನರ ದೇಶಪ್ರೇಮವನ್ನು ಬಡಿದೆಬ್ಬಿಸಿದೆ. ಇದರಿಂದಾಗಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಒಂದಷ್ಟು ದಿನ ನಿಶ್ಚಿಂತೆಯಾಗಿರಬಹುದು. ಇಷ್ಟೇನಾ ಒಸಾಮ ಸಾವಿನ ಪರಿಣಾಮ?
ಹೌದು, ಸದ್ಯಕ್ಕೆ ಕಾಣುವುದಿಷ್ಟೆ. ಒಸಾಮನನ್ನು ಸಾಯಿಸುವುದೇನು ಬಂತು? ಅಲ್‌ಖೈದಾ ಸಂಘಟನೆಯ ಪಾಲಿಗೆ ಒಸಾಮ ಸತ್ತು ಬಹಳ ದಿನಗಳಾಗಿ ಹೋಗಿತ್ತು ಎನ್ನುವ ಸುದ್ದಿ ನಿಧಾನವಾಗಿ ಸೋರಿ ಹೊರಬರುತ್ತಿದೆ. ಅಲ್‌ಖೈದಾ ಸಂಘಟನೆಯೊಳಗೆ ಭುಗಿಲೆದ್ದಿರುವ ಅಧಿಕಾರದ ಸಂಘರ್ಷ ಲಾಡೆನ್‌ನನ್ನು ಅಪ್ರಸ್ತುತ ಮಾಡಿತ್ತು.
ಇನ್ನಷ್ಟು ದಿನಗಳು ಕಳೆದಿದ್ದರೆ ಸಂಗಾತಿಗಳೇ ಆತನನ್ನು ಮುಗಿಸಿಬಿಡುತ್ತಿದ್ದರೇನೋ? ಈ ಹಿನ್ನೆಲೆಯಿಂದಾಗಿಯೇ ಒಸಾಮ ಸುಳಿವನ್ನು ಅಮೆರಿಕನರಿಗೆ ಸಂಘಟನೆಯೊಳಗಿನ ನಾಯಕರೇ ನೀಡಿರಬಹುದೆಂಬ ಗುಮಾನಿ ಹುಟ್ಟಿಕೊಂಡಿರುವುದು. ಒಸಾಮ ಇನ್ನಷ್ಟು ದಿನ ಬದುಕಿದ್ದರೂ ಆತನಿಂದಾಗಿ ಮುಸ್ಲಿಂ ಭಯೋತ್ಪಾದನೆ ಆಕಾಶದೆತ್ತರಕ್ಕೆ ಬೆಳೆಯುತ್ತಿರಲಿಲ್ಲ, ಆತನ ಸಾವಿನಿಂದ ಅದು ಪಾತಾಳಕ್ಕೆ ಇಳಿದು ಸಮಾಧಿಯಾಗುವುದೂ ಇಲ್ಲ.
ಈಗ 34ಕ್ಕೂ ಹೆಚ್ಚು ದೇಶಗಳಲ್ಲಿ ಅಲ್‌ಖೈದಾ ನೆಲೆಗಳಿವೆ. ನೇರವಾಗಿ ಪ್ರವೇಶಿಸಲು ಸಾಧ್ಯ ಇಲ್ಲದ ದೇಶಗಳಲ್ಲಿನ ಸ್ಥಳೀಯ ಇಸ್ಲಾಂ ಭಯೋತ್ಪಾದಕ ಸಂಘಟನೆಗಳ ಜತೆ ಅದು ಸಂಬಂಧ ಸ್ಥಾಪಿಸಿಕೊಂಡಿದೆ. ಈಗ ಅಲ್‌ಖೈದಾಕ್ಕೆ ಒಸಾಮನ ಹೆಸರಷ್ಟೇ ಬೇಕು. ಈ ನಡುವೆ ಸಂಘಟನೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪೈಪೋಟಿಗೆ ಇಳಿದಿರುವ ಅಲ್‌ಖೈದಾದ ಎರಡನೇ ಸಾಲಿನ ನಾಯಕರು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಭಯೋತ್ಪಾದನೆಯನ್ನು ತೀವ್ರಗೊಳಿಸುವ ಅಪಾಯವೂ ಇದೆ.
ಒಸಾಮ ಜೀವಂತವಾಗಿದ್ದುಕೊಂಡು ಏನೆಲ್ಲ ಮಾಡಲು ಸಾಧ್ಯ ಇತ್ತೋ, ಅವುಗಳನ್ನೆಲ್ಲ ಅಲ್‌ಖೈದಾ ಅಸ್ತಿತ್ವಕ್ಕೆ ಬಂದ 23 ವರ್ಷಗಳಲ್ಲಿ ಆತ ಮಾಡಿ ಬಿಟ್ಟಿದ್ದಾನೆ. ಆತ ಅಮೆರಿಕದ ಬೆನ್ನು ಹತ್ತಿಯೇ ಹದಿನೆಂಟು ವರ್ಷಗಳು ಕಳೆದಿವೆ. 9/11 ದಾಳಿಯ ಎಂಟು ವರ್ಷ ಮೊದಲು 1993ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಭಯೋತ್ಪಾದಕರ ಮೊದಲ ದಾಳಿ ನಡೆದಿತ್ತು.
ಈಗ ಅಮೆರಿಕದ ಪೊಲೀಸರ ವಶದಲ್ಲಿರುವ ಆ ದಾಳಿಯ ರೂವಾರಿ ರಮ್ಜಿ ಯುಸೂಫ್ ಕೂಡಾ ಒಸಾಮ ಬಿನ್ ಲಾಡೆನ್ ಶಿಷ್ಯ. ಕೈಸನ್ನೆಯಿಂದಲೇ ಒಂದು ದೇಶವನ್ನು ನೆಲಸಮ ಮಾಡಿಬಿಡಬಲ್ಲಂತಹ ದೈತ್ಯ ಶಕ್ತಿಯ, ಇದಕ್ಕಾಗಿ ಎಂದೂ ಮುಗಿಯದ ಅಕ್ಷಯ ಸ್ವರೂಪಿ ಸಂಪನ್ಮೂಲವನ್ನು ವ್ಯಯಿಸಬಲ್ಲ ಶ್ರೀಮಂತಿಕೆಯ, ಬೆರಳತುದಿಯಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹಿಡಿದುಕೊಂಡಿರುವ, ಮನಸ್ಸುಮಾಡಿದರೆ ನಮ್ಮ ಮಲಗುವ ಕೋಣೆಯೊಳಗೂ ಇಣುಕಬಲ್ಲ ಗುಪ್ತಚರ ಸಾಮರ್ಥ್ಯ ಹೊಂದಿರುವ ದೇಶಕ್ಕೆ ಒಬ್ಬ ಭಯೋತ್ಪಾದಕನನ್ನು ಕೊಂದು ಹಾಕಲು ಹದಿನೆಂಟು ವರ್ಷಗಳು ಬೇಕಾಯಿತೇ?
ಈ ಹದಿನೆಂಟು ವರ್ಷಗಳಲ್ಲಿ ಭಯೋತ್ಪಾದನೆ ಮತ್ತು ಅದರ ವಿರುದ್ಧದ ಕಾರ್ಯಾಚರಣೆಯಲ್ಲಿ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಂಡಿರುವುದಕ್ಕೆ ಯಾರು ಹೊಣೆ? ಅಮೆರಿಕ ಅಲ್ಲವೇ? ಅಮೆರಿಕದ ವೀರಗಾಥೆಯನ್ನು ಇತಿಹಾಸದ ಪುಟಗಳಲ್ಲಿ ವರ್ಣರಂಜಿತವಾಗಿ ದಾಖಲಿಸಲು ಹೊರಟವರು ಅದೇ ಇತಿಹಾಸ ಕೇಳುವ ಈ ಪ್ರಶ್ನೆಗೂ ಉತ್ತರಿಸಬೇಕಾಗುತ್ತದೆ.
ಅಮೆರಿಕದ ಈ ವೈಫಲ್ಯ ಮತ್ತು ಸ್ವಭಾವ ಸಹಜ ಧೂರ್ತತನದಿಂದಾಗಿ ಉಳಿದ ಎಲ್ಲ ದೇಶಗಳಿಗಿಂತ ಹೆಚ್ಚು ಕಷ್ಟ ನಷ್ಟ ಅನುಭವಿಸಿದ್ದು ಭಾರತ ಎನ್ನುವುದನ್ನು ಹೇಗೆ ಮರೆಯಲು ಸಾಧ್ಯ? ಆಫ್ಘಾನಿಸ್ತಾನದಲ್ಲಿ ಸೋವಿಯತ್ ರಷ್ಯಾ ನಡೆಸಿದ ದುಸ್ಸಾಹಸ ಸೋಲಿನಲ್ಲಿ ಕೊನೆಗೊಂಡ ನಂತರದ ಅವಧಿಯ ವಿದ್ಯಮಾನಗಳನ್ನು ನೋಡುತ್ತಾ ಬಂದರೆ ಪಾಕಿಸ್ತಾನಕ್ಕಿಂತ ದೊಡ್ಡ ಶತ್ರುವಾಗಿ ಅಮೆರಿಕವೇ ನಮಗೆ ಕಾಣಿಸುತ್ತದೆ.
ಮೊದಲನೆಯದಾಗಿ, ಸೋವಿಯತ್ ರಷ್ಯಾವನ್ನು ಸೋಲಿಸುವ ಮೂಲಕ ಭಾರತ ಬಹುವಾಗಿ ನೆಚ್ಚಿಕೊಂಡಿದ್ದ ಮಿತ್ರರಾಷ್ಟ್ರವನ್ನು ಅಮೆರಿಕ ಕಿತ್ತುಕೊಂಡಿತು. ಇದರಿಂದಾಗಿ ಭಾರತೀಯ ಉಪಖಂಡದಲ್ಲಿ ಅಮೆರಿಕದ ಅಟ್ಟಹಾಸಕ್ಕೆ ಇದಿರಾಡುವವರೇ ಇಲ್ಲದಂತಾಯಿತು. ಎರಡನೆಯದಾಗಿ, ಭಾರತದ ನೆಲದಲ್ಲಿ ರಕ್ತದೋಕುಳಿ ನಡೆಸುತ್ತಿರುವ ಭಯೋತ್ಪಾದಕರನ್ನು ಸೃಷ್ಟಿಸಿದ್ದು ಕೂಡಾ ಅಮೆರಿಕವೇ.
ಸೋವಿಯತ್ ರಷ್ಯಾವನ್ನು ಮಣಿಸುವ ಉದ್ದೇಶ ಸಾಧಿಸಿದ ನಂತರ ಅಮೆರಿಕ ಆಫ್ಘಾನಿಸ್ತಾನದಿಂದ ಜಾಗ ಖಾಲಿ ಮಾಡಿತು. ಇದರಿಂದಾಗಿ ಬಾಡಿಗೆ ಬಂಟರಾಗಿದ್ದ ಮುಜಾಹಿದ್‌ಗಳು ಒಮ್ಮಿಂದೊಮ್ಮೆಲೇ ನಿರುದ್ಯೋಗಿಗಳಾಗಿ ಹೋದರು.
ಕೊಲೆಗಡುಕರನ್ನು ಸೃಷ್ಟಿಸಿ ಕೆಲಸ ಮುಗಿದ ಮೇಲೆ ಅವರು ಸಾಮಾನ್ಯ ಮನುಷ್ಯರಂತೆ ಜೀವನ ಸಾಗಿಸಬೇಕೆಂದು ನಿರೀಕ್ಷಿಸುವುದು ಮೂರ್ಖತನ.
ಈ ನಿರುದ್ಯೋಗಿ ಮುಜಾಹಿದ್‌ಗಳಲ್ಲಿ ಒಂದಷ್ಟು ಮಂದಿ ತಾಲಿಬಾನ್ ಕಟ್ಟಲು ತೊಡಗಿಕೊಂಡರೆ ಉಳಿದವರಿಗೆ ಪಾಕಿಸ್ತಾನ ಕಾಶ್ಮೀರದಲ್ಲಿ ‘ಸ್ವಾತಂತ್ರ್ಯ ಹೋರಾಟ’ದ ಉದ್ಯೋಗ ಕಲ್ಪಿಸಿಕೊಟ್ಟಿತು. ಇದರ ಪರಿಣಾಮವಾಗಿಯೇ 1989ರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಉಲ್ಬಣಗೊಂಡಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದಕರ ತರಬೇತಿ ಶಿಬಿರಗಳು ತಲೆ ಎತ್ತಿದ್ದು ಮತ್ತು ಗಡಿ ನುಸುಳುವಿಕೆಯ ಪ್ರಮಾಣ ಹೆಚ್ಚಿದ್ದು. ಇದು ಅಮೆರಿಕದ ಆಗಿನ ಅಧ್ಯಕ್ಷ ರೋನಾಲ್ಡ್ ರೇಗನ್ ಭಾರತಕ್ಕೆ ನೀಡಿದ ‘ಕೊಡುಗೆ’.
9/11 ದಾಳಿಯ ನಂತರ ಅಮೆರಿಕದ ಪ್ರೇರಣೆಯಿಂದ ವಿಶ್ವಸಂಸ್ಥೆ ‘ಭಯೋತ್ಪಾದನೆಯ ವಿರುದ್ಧ ಜಾಗತಿಕ ಸಮರ’ ಘೋಷಿಸಿದಾಗ ಉಳಿದೆಲ್ಲ ದೇಶಗಳಿಗಿಂತ ಹೆಚ್ಚಿನ ನಿರೀಕ್ಷೆ ಇದ್ದದ್ದು ಭಾರತಕ್ಕೆ. ‘ಭಯೋತ್ಪಾದಕರನ್ನು ಮಾತ್ರವಲ್ಲ, ಅವರ ಆಶ್ರಯದಾತರನ್ನೂ ನಾಶಮಾಡುತ್ತೇವೆ’ ಎಂದು ಅಮೆರಿಕ ಅಧ್ಯಕ್ಷರು ಗುಡುಗಿದಾಗ ಸಹಜವಾಗಿಯೇ ಭಾರತಕ್ಕೆ ಖುಷಿಯಾಗಿತ್ತು. ಪಾಕಿಸ್ತಾನವನ್ನು ಬಗ್ಗಿಸಲು ಇದೇ ಸುವರ್ಣಾವಕಾಶ ಎಂಬ ನಿರೀಕ್ಷೆ ಗರಿ ಕೆದರಿತ್ತು. ಆದರೆ ನಂತರ ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆಗಳು ನಡೆದು ಹೋದವು.
ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ ಭಾರತ ಅಲ್ಲ, ಪಾಕಿಸ್ತಾನ ಅಮೆರಿಕದ ಸಂಗಾತಿಯಾಗಿ ಹೋಯಿತು. ಆ ಎರಡೂ ದೇಶಗಳಿಗೆ ಅವುಗಳದ್ದೇ ಆಗಿರುವ ಸ್ವಾರ್ಥಪರ ಉದ್ದೇಶಗಳಿದ್ದವು. ಇವುಗಳ ನಡುವೆ ಒಂಟಿಯಾಗಿದ್ದು ಭಾರತ. ಅಮೆರಿಕದ ಸಮರಕ್ಕೆ ಭಾರತ ಘೋಷಿಸಿದ್ದು ಬೇಷರತ್ ಬೆಂಬಲ. ಆದರೆ ಪಾಕಿಸ್ತಾನದ್ದು ಷರತ್ತುಬದ್ದ ಬೆಂಬಲ.
ಈ ಸಮರದಲ್ಲಿ ಭಾರತ ಮತ್ತು ಇಸ್ರೇಲ್‌ಗಳನ್ನು ಸೇರಿಸಿಕೊಳ್ಳಬಾರದೆಂಬುದು ಅವುಗಳಲ್ಲೊಂದು ಷರತ್ತು. ಅಮೆರಿಕ ಅದಕ್ಕೆ ಒಪ್ಪಿಕೊಳ್ಳುವುದರ ಜತೆಗೆ ಆ ದೇಶಕ್ಕೆ ಭಾರಿ ಪ್ರಮಾಣದ ಆರ್ಥಿಕ ಮತ್ತು ಮಿಲಿಟರಿ ನೆರವನ್ನು ಒದಗಿಸಿತು. ಆರ್ಥಿಕ ದಿಗ್ಬಂಧನ ಮತ್ತು ಸೇನಾ ಆಡಳಿತದ ವೈಫಲ್ಯದಿಂದಾಗಿ ಕುಸಿದುಹೋಗಿದ್ದ ಪಾಕಿಸ್ತಾನ ಈ ನೆರವಿನಿಂದ ಚೇತರಿಸಿಕೊಂಡದ್ದು ಮಾತ್ರವಲ್ಲ, ಸೇನಾಬಲವನ್ನೂ ವೃದ್ಧಿಸಿಕೊಂಡಿತು. ಇದರ ಬಿಸಿ ತಗಲಿದ್ದು ಭಾರತಕ್ಕೆ.

ಆಫ್ಘಾನಿಸ್ತಾನದಲ್ಲಿ ಅಂದಾಜು 60 ಸಾವಿರ ತಾಲಿಬಾನ್ ಹೋರಾಟಗಾರರು ಇದ್ದಿರಬಹುದೆಂಬ ಅಂದಾಜು ಮಾಡಲಾಗಿತ್ತು.  ಪಾಕಿಸ್ತಾನದ ಐಎಸ್‌ಐ ಸಾಕುತ್ತಿದ್ದ ಈ ಜೆಹಾದಿಗಳೆಲ್ಲ ಅಮೆರಿಕದ ಕಾರ್ಯಾಚರಣೆಯಲ್ಲಿ ಸತ್ತಿರಲಾರರು. ಹಾಗಿದ್ದರೆ ಅಲ್ಲಿಂದ ಕಾಲುಕಿತ್ತ ಅವರೆಲ್ಲ ಎಲ್ಲಿ ಹೋದರು? ಪಾಕಿಸ್ತಾನ ಅವರನ್ನು ಭಾರತದ ಮೇಲೆ ಛೂ ಬಿಟ್ಟಿರುವುದರಲ್ಲಿ ಅನುಮಾನವೇ ಇಲ್ಲ.
ಅಮೆರಿಕದ ಜತೆ ಕೈಜೋಡಿಸಿದ್ದನ್ನು ವಿರೋಧಿಸುತ್ತಿದ್ದ ತಮ್ಮ ದೇಶದ ‘ಮಿಲಿಟರಿ-ಮದರಸಾ-ಮುಲ್ಲಾ’ ಕೂಟವನ್ನು ಒಲಿಸಿಕೊಳ್ಳಲು ಮುಷರಫ್ ಕಾಶ್ಮೀರದಲ್ಲಿನ ‘ಸ್ವಾತಂತ್ರ್ಯ ಹೋರಾಟ’ಕ್ಕೆ ಇನ್ನಷ್ಟು ಕುಮ್ಮಕ್ಕು ನೀಡುತ್ತಾ ಬಂದರು. 9/11ರ ನಂತರ ಅಮೆರಿಕದಲ್ಲಿ ಯಾವುದೇ ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿ ನಡೆದಿಲ್ಲ. ಆದರೆ ಆ ದೇಶದ ಕರೆಗೆ ಓಗೊಟ್ಟು ಬೆಂಬಲ ಘೋಷಿಸಿರುವ ದೇಶಗಳಲ್ಲಿ ಭಯೋತ್ಪಾದನೆ ನಿಂತಿಲ್ಲ. ಇವುಗಳ ಪೈಕಿ ದೊಡ್ಡ ಬಲಿಪಶು ಭಾರತ.
ಇವೆಲ್ಲದರ ಅರಿವಿದ್ದರೂ, ಇಂದಿಗೂ ಕಾಶ್ಮೀರದಲ್ಲಿ ನಡೆಯುತ್ತಿರುವುದು ಗಡಿಯಾಚೆಗಿನ ಭಯೋತ್ಪಾದನೆ ಎಂದು ಹೇಳಲು ಅಮೆರಿಕ ಸಿದ್ಧ ಇಲ್ಲ. ಭಾರತದಲ್ಲಿ ನಡೆದಿರುವ ಭಯೋತ್ಪಾದಕ ಚಟುವಟಿಕೆಗಳ ಆರೋಪಿಗಳಿಗೆ ಪಾಕಿಸ್ತಾನ ಆಶ್ರಯ ನೀಡಿದೆ.
ಅವರಲ್ಲಿ ಮುಂಬೈ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ನಿಂದ ಹಿಡಿದು, ಮುಂಬೈನ ತಾಜ್‌ಹೊಟೇಲ್ ಮೇಲೆ ದಾಳಿಯ ರೂವಾರಿ ಹಫೀಜ್ ಶಹೀದ್ ವರೆಗೆ 20ಕ್ಕೂ ಹೆಚ್ಚು ಮಂದಿ ಪಾತಕಿಗಳಿದ್ದಾರೆ. ಒಸಾಮ ರೀತಿಯಲ್ಲಿ ಇವರ್ಯಾರೂ ಅಡಗುತಾಣಗಳಲ್ಲಿಲ್ಲ. ಎಲ್ಲರೂ ರಾಜಾರೋಷವಾಗಿ ಪಾಕಿಸ್ತಾನದ ನಗರಗಳಲ್ಲಿ ಸುತ್ತಾಡುತ್ತಿದ್ದಾರೆ. ಇವರ ಅಪರಾಧದ ವಿವರಗಳೆಲ್ಲವೂ ಅಮೆರಿಕದ ಮುಂದೆ ಇದೆ.
ಅಮೆರಿಕ ನಡೆಸುತ್ತಿರುವ ಭಯೋತ್ಪಾದಕರ ವಿರುದ್ಧದ ಜಾಗತಿಕ ಸಮರ ಪ್ರಾಮಾಣಿಕತೆಯಿಂದ ಕೂಡಿದ್ದರೆ ಈ ಪಾತಕಿಗಳನ್ನು ಯಾಕೆ ಕೈಕಾಲು ಕಟ್ಟಿ ಸಮುದ್ರಕ್ಕೆ ಎಸೆಯಲಿಲ್ಲ? ‘ಅಮೆರಿಕದ ಎದುರು ಪಾಕಿಸ್ತಾನದ ಬಣ್ಣ ಬಯಲಾಗಿದೆ.ಇನ್ನೂ ಅದರ ಆಟ ನಡೆಯಲಾರದು. ನೋಡ್ತಾ ಇರಿ, ಅಮೆರಿಕ ಹೇಗೆ ಪಾಕಿಸ್ತಾನವನ್ನು ಮಣಿಸಲಿದೆ’ ಎಂದು ಹೇಳುವ ಮುಗ್ಧರು ಈಗಲೂ ನಮ್ಮಲ್ಲಿದ್ದಾರೆ.
ಅಂತಹದ್ದೇನೂ ಆಗಲಾರದು. ಪಾಕಿಸ್ತಾನ ಮತ್ತು ಅಮೆರಿಕದ ಸಂಬಂಧ ಹಿಂದಿನಂತೆಯೇ ಮುಂದುವರಿಯಲಿದೆ. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿರುವ ಸೇನೆಯಲ್ಲಿ ಒಂದಷ್ಟು ಭಾಗವನ್ನು ಅಮೆರಿಕ ವಾಪಸು ಕರೆಸಿಕೊಳ್ಳಬಹುದು, ಆದರೆ ಪೂರ್ತಿ ಜಾಗ ಖಾಲಿ ಮಾಡಿಕೊಂಡು ಹೋಗಲಾರದು. ‘ತೊಲಗಿ ಹೋಗಿ’ ಎನ್ನುವ ಸ್ಥಿತಿಯಲ್ಲಿ ಎರಡೂ ದೇಶಗಳೂ ಇಲ್ಲ. ಹೊರಟು ಹೋಗುವುದು ಅಮೆರಿಕಕ್ಕೂ ಬೇಕಾಗಿಲ್ಲ. ಅದಕ್ಕೆ ಮಧ್ಯ ಏಷ್ಯಾದ ಮೇಲಿನ ನಿಯಂತ್ರಣಕ್ಕೆ ನೆಲೆ ಬೇಕು. ತನ್ನ ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಮಾರುಕಟ್ಟೆ ಬೇಕು, ಸೂಪರ್ ಪವರ್ ಆಗಿ ಬೆಳೆಯುತ್ತಿರುವ ಚೀನಾವನ್ನು ಹದ್ದುಬಸ್ತಿನಲ್ಲಿಡಬೇಕು.
ಇದಕ್ಕಾಗಿ ಭಾರತದಂತಹ ಪ್ರಬಲ ಪ್ರಜಾತಾಂತ್ರಿಕ ದೇಶವನ್ನು ‘ಗುಲಾಮಿ ರಾಷ್ಟ್ರ’ವನ್ನಾಗಿ ಮಾಡಿಕೊಳ್ಳುವುದು ಸಾಧ್ಯ ಆಗಲಾರದು. ಈ ಉದ್ದೇಶ ಸಾಧನೆಗಾಗಿ ದುರ್ಬಲ ಪಾಕಿಸ್ತಾನ ಅಲ್ಲದೆ ಬೇರೆ ಯಾವ ದೇಶ ಸಿಕ್ಕೀತು? ಇಂತಹ ವ್ಯವಸ್ಥೆಯಲ್ಲಿ ಒಸಾಮನಂತಹ ನೂರು ಭಯೋತ್ಪಾದಕರು ಸತ್ತರೂ ಭಾರತದ ನೆಲದಲ್ಲಿ ಶಾಂತಿ ನೆಲೆಸಲಾರದು. ಅದು ಸಾಧ್ಯವಾಗಬೇಕಾದರೆ ಭಯೋತ್ಪಾದಕರನ್ನು ಸೃಷ್ಟಿಸುತ್ತಿರುವ ವ್ಯವಸ್ಥೆ  ನಾಶವಾಗಬೇಕು. ಪಾಕಿಸ್ತಾನದ ತಲೆಮೇಲೆ ಅಮೆರಿಕದ ಅಭಯಹಸ್ತ ಇರುವವರೆಗೆ ಇದು ಸಾಧ್ಯವಾಗಲಾರದು.