Monday, June 6, 2011

ರಾಜಕೀಯ ಮೈದಾನದಲ್ಲಿ ಎಡವಿಬಿದ್ದ ಯೋಗಗುರು

ಯೋಗಗುರು ಬಾಬಾ ರಾಮ್‌ದೇವ್ ಅವರ ಜತೆ ಉಪವಾಸದಲ್ಲಿ ಪಾಲ್ಗೊಳ್ಳಲು ಹೋಗಿದ್ದ ಸಾವಿರಾರು ಸಂಖ್ಯೆಯ ಬೆಂಬಲಿಗರು ಎರಡು ಬಗೆಯ ನೋವಿನಿಂದ ನರಳುತ್ತಿರಬಹುದು.
ಒಂದು ಯುಪಿಎ ಸರ್ಕಾರ ನಡೆಸಿದ್ದ ಪೊಲೀಸ್ ಕಾರ‌್ಯಾಚರಣೆಯಿಂದಾಗಿ ದೇಹದ ಮೇಲೆ ಆಗಿರುವ ಗಾಯದ ನೋವು. ಇನ್ನೊಂದು ತಾವು ದೇವರೆಂದೇ ಬಗೆದಿರುವ ಯೋಗಗುರು, ತಾನು ಉಪವಾಸ ಕೈಬಿಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗುಟ್ಟಾಗಿ ಪತ್ರ ಕೊಡುವ ಮೂಲಕ ಮಾಡಿದ ವಿಶ್ವಾಸಘಾತದಿಂದ ಮನಸ್ಸಿಗಾದ ನೋವು.
ದೇಹದ ಮೇಲೆ ಆಗಿರುವ ನೋವಿನಷ್ಟು ಸುಲಭದಲ್ಲಿ ಮನಸ್ಸಿನ ಮೇಲಿನ ಗಾಯ ಗುಣವಾಗುವುದಿಲ್ಲ ಎಂದು ಹೇಳುತ್ತಾರೆ. ಬಾಬಾ ತನ್ನ ಯಾವ ಯೋಗಶಕ್ತಿಯ ಮೂಲಕ ಈ ನೋವನ್ನು ಶಮನಮಾಡಿ ಬೆಂಬಲಿಗರನ್ನು ಒಲಿಸಿಕೊಳ್ಳಲಿದ್ದಾರೆ ಎನ್ನುವುದನ್ನು ನೋಡಲು ಕೆಲವು ದಿನ ಕಾಯಬೇಕು.
ಯಾರದು ದೊಡ್ಡ ತಪ್ಪು ಎಂದು ತೀರ್ಮಾನಿಸುವುದು ಸ್ವಲ್ಪ ಕಷ್ಟ. ಆದರೆ ಒಬ್ಬ ಆರೋಪಿಯಿಂದ ಪ್ರಾಮಾಣಿಕತೆಯ ನಡವಳಿಕೆಯನ್ನು ನಿರೀಕ್ಷಿಸಲು ಸಾಧ್ಯವಾಗದು. ಆದರೆ ಆತನ ವಿರುದ್ಧ ನಿಂತವರು ಮಾತ್ರ ಅಪ್ರಾಮಾಣಿಕರಾಗಬಾರದು.

ಇಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವುದು ಕೇಂದ್ರದ ಯುಪಿಎ ಸರ್ಕಾರ. ತನ್ನನ್ನು ರಕ್ಷಿಸಿಕೊಳ್ಳಲು ಯಾವುದೇ ಬಗೆಯ ಹೀನಕೃತ್ಯ ಎಸಗಲು ಹಿಂಜರಿಯದಿರುವುದು ಆರೋಪಿಯ ಸಹಜ ಸ್ವಭಾವ.
ಆದ್ದರಿಂದ ಬಾಬಾ ರಾಮ್‌ದೇವ್ ಅವರ ಆಮರಣ ಉಪವಾಸ ಸತ್ಯಾಗ್ರಹವನ್ನು ಭಂಗಗೊಳಿಸಲು ಯುಪಿಎ ಸರ್ಕಾರ ಸಂಚು ಮಾಡಿದ್ದರಲ್ಲಿ ಆಶ್ಚರ‌್ಯವೇನಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿ ಆತ್ಮವಿಶ್ವಾಸವನ್ನು ಕಳೆದುಕೊಂಡು ಹತಾಶೆಗೀಡಾದ ಸರ್ಕಾರ ಮಾತ್ರ ಇಂತಹ ಬರ್ಬರಕೃತ್ಯ ನಡೆಸಲು ಸಾಧ್ಯ.
ಇತ್ತೀಚೆಗೆ ಅಣ್ಣಾ ಹಜಾರೆ ಅವರ ಉಪವಾಸವನ್ನು ತಡೆಯಲು ಇದೇ ಸರ್ಕಾರ ನಡೆಸಿದ್ದ ಕರಾಮತ್ತುಗಳೇನು, ಲೋಕಪಾಲ ಮಸೂದೆ ರಚನೆಯ ಪ್ರಯತ್ನದ ಹಾದಿ ತಪ್ಪಿಸಲು ಅದು ಏನು ಮಾಡುತ್ತಿದೆ ಎನ್ನುವುದು ದೇಶದ ಜನರಿಗೆಲ್ಲ ಈಗ ತಿಳಿದಿದೆ.

ಇವೆಲ್ಲವೂ ಗೊತ್ತಿದ್ದೂ ಇಂತಹ ಸರ್ಕಾರದ ಜತೆ ವ್ಯವಹರಿಸುವಾಗ ಸ್ವಲ್ಪ ಎಚ್ಚರದಿಂದ ಇರುವುದು ಬೇಡವೇ? ಮಾನಸಿಕ ಒತ್ತಡದಿಂದ ಪಾರಾಗಲು ಯೋಗ ಮಾಡಿ ಎಂದು ಉಪದೇಶ ನೀಡುವ ಯೋಗಗುರು `ನಾನು ಒತ್ತಡಕ್ಕೆ ಸಿಕ್ಕಿ ಆ ಪತ್ರ ಬರೆದುಕೊಟ್ಟೆ~ ಎಂದು ಹೇಳಿದರೆ, ಅವರು ಹೇಳಿದ್ದನ್ನೆಲ್ಲ ನಂಬಿರುವ ಅನುಯಾಯಿಗಳು ಏನು ಮಾಡಬೇಕು?
ಇಂತಹ ವಿವಾದಗಳು ಬಾಬಾ ರಾಮ್‌ದೇವ್ ಪಾಲಿಗೆ ಹೊಸದೇನಲ್ಲ, ಅವರ ಜನಪ್ರಿಯತೆಯ ಸೌಧ ದಿನದಿಂದ ದಿನಕ್ಕೆ ಎತ್ತರಕ್ಕೆ ಏರುತ್ತಿರುವ ಜತೆಯಲ್ಲಿಯೇ ವಿವಾದಗಳ ಹುತ್ತ ಕೂಡಾ ಪಕ್ಕದಲ್ಲಿ ಬೆಳೆಯುತ್ತಿದೆ.
ಕಪ್ಪುಹಣದ ವಿರುದ್ಧ ಯೋಗಗುರು ಬಾಬಾ ರಾಮ್‌ದೇವ್ ಎತ್ತಿರುವ ದನಿ ಸರಿಯಾಗಿಯೇ ಇದೆ. ಕಳೆದ 8-9 ತಿಂಗಳುಗಳಲ್ಲಿ ದೇಶಾದ್ಯಂತ ಪ್ರವಾಸ ಮಾಡಿ ಕಪ್ಪುಹಣದ ವಿರುದ್ಧ ಜನರನ್ನು ಸಂಘಟಿಸಿರುವ ಅವರ ಶ್ರಮ ಕೂಡಾ ಮೆಚ್ಚುವಂತಹದ್ದೇ ಆಗಿದೆ.
ಇವೆಲ್ಲವನ್ನು ಸುಮ್ಮನೆ ನೋಡುತ್ತಾ ಕಾಲಹರಣ ಮಾಡುತ್ತಿದ್ದ ಕೇಂದ್ರ ಸರ್ಕಾರವನ್ನು ಮಣಿಸಲು ಅವರು ಕೈಗೊಂಡಿರುವ ಆಮರಣ ಉಪವಾಸ ಕೂಡಾ ದೇಶಕ್ಕೆ ಹೊಸತೇನಲ್ಲ. ಅದರ ಬಲದಿಂದಲೇ ಅಲ್ಲವೇ ನಾವು ಬ್ರಿಟಿಷರ ಗುಲಾಮಗಿರಿಯಿಂದ ಬಿಡುಗಡೆ ಪಡೆದು ಸ್ವತಂತ್ರರಾಗಿದ್ದು.
ಇಂತಹ ಶಕ್ತಿಶಾಲಿ ಅಸ್ತ್ರವನ್ನು ಬಾಬಾ ರಾಮ್‌ದೇವ್ ಪ್ರಯೋಗಿಸಿದ್ದರಲ್ಲಿಯೂ ತಪ್ಪೇನಿಲ್ಲ. ಇವಿಷ್ಟೇ ಬಾಬಾ ರಾಮ್‌ದೇವ್ ಆಗಿದ್ದರೆ ಇಡೀ ದೇಶ ಅವರ ಕಾಲಿಗೆ ಬೀಳಬೇಕು. ಆದರೆ `ಬಾಬಾ ರಾಮ್‌ದೇವ್ ಅಂದರೆ ಇಷ್ಟೇ ಅಲ್ಲ~ ಎನ್ನುವ ಗುಮಾನಿಯೇ ಅವರ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ.
ಮೊದಲನೆಯದು ಅವರ ರಾಜಕೀಯ ನಿಲುವು. ಕಳೆದ ವರ್ಷ ಬಾಬಾ ರಾಮ್‌ದೇವ್ ಅವರು ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಉದ್ದೇಶವನ್ನು ಬಹಿರಂಗಪಡಿಸಿದ್ದರು. ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಅವರು ಘೋಷಿಸಿದ್ದರು. ಇದರಲ್ಲಿಯೂ ತಪ್ಪೇನಿಲ್ಲ. ಅವರ ಇತ್ತೀಚಿನ ಯೋಗ ಶಿಬಿರಗಳಲ್ಲಿ ಯೋಗಕ್ಕಿಂತ ಹೆಚ್ಚು ದೇಶದ ರಾಜಕೀಯದ ಬಗ್ಗೆಯೇ ಅವರು ಹೆಚ್ಚು ಚರ್ಚಿಸುತ್ತಿದ್ದರು.
ಎಲ್ಲ ಪಕ್ಷಗಳು ಭ್ರಷ್ಟಗೊಂಡಿರುವ ವರ್ತಮಾನದ ಸ್ಥಿತಿಯಲ್ಲಿ ಹೊಸ ಬಗೆಯ ರಾಜಕೀಯದ ಅಗತ್ಯ ಇದ್ದ ಕಾರಣ ಆ ಚರ್ಚೆ ಕೂಡಾ ಪ್ರಸ್ತುತವಾಗಿತ್ತು. ಈ ಎಲ್ಲ ಪ್ರಯತ್ನಗಳು ರಾಜಕೀಯ ಪಕ್ಷವೊಂದರ ಸ್ಥಾಪನೆಯಲ್ಲಿ ತಾರ್ಕಿಕ ಅಂತ್ಯ ಕಾಣಬಹುದೆಂದು ಅವರ ಲಕ್ಷಾಂತರ ಅನುಯಾಯಿಗಳು ಮತ್ತು ಅಭಿಮಾನಿಗಳು ನಿರೀಕ್ಷಿಸಿದ್ದರು.

ಆದರೆ ಇದ್ದಕ್ಕಿದ್ದಂತೆ ಒಂದು ದಿನ `ನಾನು ರಾಜಕೀಯ ಪಕ್ಷ ಸ್ಥಾಪನೆ ಮಾಡುವುದಿಲ್ಲ, ಯುವಜನರ ಸಂಘಟನೆ ಕಟ್ಟುತ್ತೇನೆ~ ಎಂದು ಘೋಷಿಸಿದರು. ಕೊನೆಗೆ ಎರಡನ್ನೂ ಕೈಬಿಟ್ಟು ಉಪವಾಸ ಸತ್ಯಾಗ್ರಹ ನಡೆಸಲು ಹೊರಟರು. ಈ ಬದಲಾದ ನಿಲುವಿನ ಹಿಂದಿನ ಲೆಕ್ಕಾಚಾರ ಏನು? ಹೊಸಪಕ್ಷದ ಬದಲಿಗೆ ಯಾವುದಾದರೂ ಹಳೆಯ ಪಕ್ಷವನ್ನು ಬೆಂಬಲಿಸುವ ಯೋಚನೆಯೇನಾದರೂ ಅವರಲ್ಲಿದೆಯೇ?
ಎರಡನೆಯದು ಅವರು ಆರಿಸಿಕೊಂಡ ಉಪವಾಸ ಸತ್ಯಾಗ್ರಹದ ಮಾರ್ಗ. ಅಶ್ಚರ‌್ಯವೆಂದರೆ ಸಮಾಜ ಸೇವಕ ಅಣ್ಣಾ ಹಜಾರೆ ಅವರು ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವ ವರೆಗೆ ಬಾಬಾ ರಾಮ್‌ದೇವ್ ಎಂದೂ ಉಪವಾಸ ಸತ್ಯಾಗ್ರಹದ ಬಗ್ಗೆ ಮಾತನಾಡಿರಲಿಲ್ಲ.
ಬಹುಶಃ ಅಂತಹದ್ದೊಂದು ಉದ್ದೇಶ ಅವರಲ್ಲಿತ್ತು ಎಂದು ಗೊತ್ತಿದ್ದರೆ ಅಣ್ಣಾ ಹಜಾರೆ ಅವರು ಪ್ರತ್ಯೇಕವಾಗಿ ಉಪವಾಸ ಕೂರುತ್ತಿರಲಿಲ್ಲವೇನೋ? ಇಬ್ಬರೂ ಕೂಡಿ ಉಪವಾಸ ಕೂತಿದ್ದರೆ ಭ್ರಷ್ಟಾಚಾರದ ವಿರುದ್ಧ ಸಿಡಿದು ನಿಂತಿರುವ ಜನ ಎರಡು ಶಿಬಿರಗಳಲ್ಲಿ ಹಂಚಿಹೋಗುತ್ತಿರಲಿಲ್ಲವೇನೋ? ಬಾಬಾ ರಾಮ್‌ದೇವ್ ಅವರ ಕೆಲವು ಬೇಡಿಕೆಗಳು ಲೋಕಪಾಲ ಮಸೂದೆಯ ವ್ಯಾಪ್ತಿಯಲ್ಲಿಯೇ ಬರುವುದರಿಂದ ಅದು ಅಂತಿಮ ರೂಪ ಪಡೆಯುವ ವರೆಗಾದರೂ ಅವರು ಕಾಯಬಹುದಿತ್ತು.

ಆದರೆ ಬಾಬಾ ರಾಮ್‌ದೇವ್ ಅವಸರದಲ್ಲಿದ್ದರು. ಯಾಕೆ? ಮೈತುಂಬಾ ಬಟ್ಟೆ ಧರಿಸಿರುವ ಅಣ್ಣಾಹಜಾರೆ ಎದುರು ಅರೆಬೆತ್ತಲೆಯಾಗಿರುವ ಯೋಗಗುರುವನ್ನು ಕಾಡಿದ ಅಭದ್ರತೆಯಾದರೂ ಯಾವುದು? ಭ್ರಷ್ಟಾಚಾರದ ವಿರುದ್ಧದ ಹೋರಾಟದ ನಾಯಕತ್ವ ಕೈತಪ್ಪಿ ಹೋಗಬಹುದೆಂಬ ಹತಾಶೆಯಿಂದ ಅವರು ಪೈಪೋಟಿಗಿಳಿದರೇ?
ಮೂರನೆಯದು ಅವರ ಸ್ನೇಹಿತರ ಬಳಗ. ಒಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಆತನ ಸ್ನೇಹಿತರ ಬಗ್ಗೆ ತಿಳಿದುಕೊಂಡರೆ ಸಾಕು ಎನ್ನುತ್ತಾರೆ. ಅಣ್ಣಾ ಹಜಾರೆ ಅವರ ಸ್ನೇಹಿತರು ಯಾರು ಎನ್ನುವುದು ಇಡೀ ದೇಶಕ್ಕೆ ಗೊತ್ತು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಹಿರಿಯ ವಕೀಲರಾದ ಶಾಂತಿಭೂಷಣ್ ಮತ್ತು ಪ್ರಶಾಂತ್ ಭೂಷಣ್, ಅರವಿಂದ ಕೇಜ್ರಿವಾಲಾ, ಕಿರಣ್‌ಬೇಡಿ, ಸ್ವಾಮಿ ಅಗ್ನಿವೇಶ್...ಇವರೆಲ್ಲ ದೇಶದ ಜನಕ್ಕೆ ಪರಿಚಿತರು.
ಆದರೆ ಬಾಬಾ ರಾಮ್‌ದೇವ್ ಸ್ನೇಹಿತರು ಯಾರು? ಅವರ‌್ಯಾಕೆ ಬಹಿರಂಗವಾಗಿ ಜತೆಯಲ್ಲಿ ಕಾಣಿಸುತ್ತಿಲ್ಲ. ಬಿಜೆಪಿಯ ಮಾಜಿ ಐಡಲಾಗ್ ಗೋವಿಂದಾಚಾರ್ಯ ಇಲ್ಲವೇ ಸಂಘ ಪರಿವಾರದ ಹಿತಚಿಂತಕ ಎಸ್.ಗುರುಮೂರ್ತಿ ಅವರು ಉಪವಾಸದ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿಲ್ಲ.
ಪ್ರಾಂತೀಯ ಸಂಚಾಲಕರಿಗೆ ಪತ್ರಬರೆದು ಬಾಬಾ ರಾಮ್‌ದೇವ್ ಉಪವಾಸದಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಿರುವ ಆರ್‌ಎಸ್‌ಎಸ್ ಸರಸಂಘಚಾಲಕರೂ ಕೂಡಾ ರಾಮ್‌ದೇವ್ ಅವರನ್ನು ಬೆಂಬಲಿಸಿ ಬೀದಿಗೆ ಇಳಿದಿಲ್ಲ. ಆದರೆ ಇದ್ದಕ್ಕಿದ್ದಂತೆಯೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿ ಸಾಧ್ವಿ ರಿತಂಬರ ಉಪವಾಸದ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಅಣ್ಣಾಹಜಾರೆ ಅವರ ಕೆಲವು ಸಂಗಾತಿಗಳೂ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿರಬಹುದು. ಆದರೆ ಅವರೆಲ್ಲ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯವಾಗಿರುವವರು, ಜನರ ಕಣ್ಣ ಮುಂದೆ ಇರುವವರು. ಅಣ್ಣಾ ಹಜಾರೆ ಅವರಿಗೆ ತನ್ನ ಸಂಗಡಿಗರ ಆಯ್ಕೆಯಲ್ಲಿ ಸ್ಪಷ್ಟತೆ ಇತ್ತು. ತಪ್ಪಾಗಿದ್ದನ್ನು ತಿದ್ದಿಕೊಳ್ಳುವ ವಿನಯವಂತಿಕೆಯೂ ಇತ್ತು (ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಬೆಂಬಲಿಸಿ ಮಾತನಾಡಿದ ಅವರು ಅಲ್ಲಿ ಹೋಗಿ ಕಣ್ಣಾರೆ ಕಂಡ ನಂತರ ನಿಲುವು ಬದಲಾಯಿಸಿದರು).

ಅವರು ಯಾವ ರಾಜಕಾರಣಿಯನ್ನೂ ಹತ್ತಿರ ಬಿಟ್ಟುಕೊಳ್ಳಲಿಲ್ಲ. ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರೇ ನಿರಾಶೆಯಿಂದ ಹಿಂದಿರುಗಿ ಹೋಗಬೇಕಾಯಿತು. ಆದರೆ ಬಾಬಾ ರಾಮ್‌ದೇವ್ ಅವರಿಗೆ ಒಂದೋ ತಮ್ಮ ಸಂಗಾತಿಗಳ ಆಯ್ಕೆ ಬಗ್ಗೆ ಸ್ಪಷ್ಟತೆ ಇಲ್ಲ, ಇಲ್ಲವೇ ಅವರಲ್ಲೊಂದು ರಹಸ್ಯ ಅಜೆಂಡಾ ಇದೆ. ಹೀಗೆ ಅಲ್ಲದೆ ಇದ್ದರೆ ಅವರು ಯಾಕೆ ತನ್ನನ್ನು ಬೆಂಬಲಿಸುತ್ತಿರುವ ಗಣ್ಯರನ್ನು ಬೆನ್ನಹಿಂದೆ ಬಚ್ಚಿಟ್ಟುಕೊಳ್ಳುತ್ತಿದ್ದಾರೆ?

ನಾಲ್ಕನೆಯದು ಸಂಘಪರಿವಾರದ ಜತೆಗಿನ ಸಂಬಂಧ. ಆರ್‌ಎಸ್‌ಎಸ್, ವಿಶ್ವಹಿಂದು ಪರಿಷತ್, ಬಿಜೆಪಿ ಇಲ್ಲವೇ ಸಂಘಪರಿವಾರಕ್ಕೆ ಸೇರಿರುವ ಇನ್ನಾವುದೋ ಸಂಘಟನೆಯ ಜತೆ  ಗುರುತಿಸಿಕೊಳ್ಳುವುದು ತಪ್ಪೇನಲ್ಲ. ಇವುಗಳಲ್ಲಿ ಯಾವುದೂ ದೇಶದ್ರೋಹದ ಆರೋಪವನ್ನು ಎದುರಿಸುತ್ತಿಲ್ಲ. ಇವುಗಳು ಭಯೋತ್ಪಾದಕ ಸಂಘಟನೆಗಳೂ ಅಲ್ಲ.
ಆದರೆ ಒಂದು ಸಂಘಟನೆಯ ಜತೆ ಗುರುತಿಸಿಕೊಂಡ ನಂತರ ಅದರ ಸಿದ್ದಾಂತದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಆರ್‌ಎಸ್‌ಎಸ್ ಸಿದ್ಧಾಂತವನ್ನು ಬಾಬಾ ರಾಮ್‌ದೇವ್ ಒಪ್ಪುವುದಾಗಿದ್ದರೆ ಬಹಿರಂಗವಾಗಿ ಅದನ್ನು ಘೋಷಿಸಬೇಕಿತ್ತು.
ಆರ್‌ಎಸ್‌ಎಸ್ ತನ್ನ ಕಾರ‌್ಯಕ್ರಮಗಳಲ್ಲಿ ಒಬ್ಬ ಮೌಲ್ವಿಯನ್ನೋ, ಪಾದ್ರಿಯನ್ನೋ ವೇದಿಕೆಯಲ್ಲಿ ತಂದು ನಿಲ್ಲಿಸಿ ಭಾಷಣ ಮಾಡಿಸುವುದಿಲ್ಲ. ಅಷ್ಟರಮಟ್ಟಿಗೆ ಅದಕ್ಕೆ ಸೈದ್ಧಾಂತಿಕ ಸ್ಪಷ್ಟತೆ ಇದೆ. ಬಾಬಾ ರಾಮ್‌ದೇವ್ ಅವರಿಗೆ ಹಿಂದುತ್ವ ಬ್ರಿಗೇಡ್‌ನ ಬೆಂಬಲವೂ ಬೇಕು, ಜಾತ್ಯತೀತ ಎನ್ನುವು ಹಣೆಪಟ್ಟಿಯೂ ಬೇಕು. ಇದು ಹೇಗೆ ಸಾಧ್ಯ?
ಐದನೆಯದು ಅವರ ಆಸ್ತಿ. ಬಾಬಾ ರಾಮ್‌ದೇವ್ ಗಳಿಸಿರುವ ಆಸ್ತಿಯ ಮೊತ್ತ ಎಷ್ಟೆಂದು ಅವರಿಗಾದರೂ ನಿಖರವಾಗಿ ಗೊತ್ತಿದೆಯೋ ಇಲ್ಲವೋ? ಜನರ ಬಾಯಲ್ಲಿ ಈ ಲೆಕ್ಕಾಚಾರ ಒಂದು ಸಾವಿರ ಕೋಟಿಯಿಂದ ಹತ್ತುಸಾವಿರ ಕೋಟಿ ರೂಪಾಯಿಗಳ ವರೆಗೆ ಹರಿದಾಡುತ್ತಿದೆ. ಇವೆಲ್ಲವೂ ಕಳೆದ ಹದಿನೈದು ವರ್ಷಗಳ ಸಂಪಾದನೆ.

ದುಡ್ಡು ಸಂಪಾದನೆ ಮಾಡುವುದು ಅಪರಾಧ ಅಲ್ಲವೇ ಅಲ್ಲ. ಆದರೆ ದುಡ್ಡು ಗಳಿಸುವುದೇ ವೃತ್ತಿ ಮಾಡಿಕೊಂಡವರು ಸಮಾಜಸೇವಕ ಎಂದು ಅನಿಸಿಕೊಳ್ಳುವುದಿಲ್ಲ, ಆತನೊಬ್ಬ ವ್ಯಾಪಾರಿ ಅಷ್ಟೆ. ಆದರೆ ಬಾಬಾ ರಾಮ್‌ದೇವ್ ಅವರದು ದ್ವಿಪಾತ್ರ. ಅವರು ಯೋಗ ಶಿಬಿರ ಮತ್ತು ಔಷಧಿ ಮಾರಾಟದಿಂದಲೇ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಸಂಪಾದನೆ ಮಾಡುತ್ತಾರೆ.

ಸಾವಿರಾರು ಎಕರೆ ಜಮೀನು ಖರೀದಿಸಿದ್ದಾರೆ, ಖಾಸಗಿ ವಿಮಾನದಲ್ಲಿ ಓಡಾಡುತ್ತಾರೆ.ಪ್ರಾರಂಭದ ದಿನಗಳಲ್ಲಿ ಪವಾಡಗಳನ್ನು ಮಾಡುತ್ತಾ ವಿವಾದಕ್ಕೆ ಸಿಲುಕಿದ್ದ ಸತ್ಯಸಾಯಿಬಾಬಾ ಸಾಯುವ ಹೊತ್ತಿಗೆ ಎಲ್ಲರ ಅಭಿಮಾನಕ್ಕೆ ಪಾತ್ರವಾಗಿದ್ದು ಅವರು ಪ್ರಾರಂಭಿಸಿದ ಸಾಮಾಜಿಕ ಸೇವಾ ಕಾರ‌್ಯಗಳಿಂದಾಗಿ.
ಅಂತಹ ಯಾವುದೇ ಒಂದು ಯೋಜನೆಯನ್ನು ಬಾಬಾ ರಾಮ್‌ದೇವ್ ಪ್ರಾರಂಭಿಸಿದಂತಿಲ್ಲ. ತನ್ನದೆನ್ನುವುದನ್ನು ಏನನ್ನೂ ಇಟ್ಟುಕೊಳ್ಳದೆ ಫಕೀರನಂತೆ ಬದುಕುತ್ತಿರುವ ಅಣ್ಣಾ ಹಜಾರೆ ಜತೆಯಲ್ಲಿ ನಿಂತಿರುವ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯನಾಗಿರುವ ಬಾಬಾ ರಾಮ್‌ದೇವ್ ಅವರನ್ನು ಏನೆಂದು ಕರೆಯುವುದು?

ಸಮಾಜಸೇವಕನೆಂದೇ? ಸರ್ವಸಂಗ ಪರಿತ್ಯಾಗಿ ಬೈರಾಗಿಯೆಂದೇ?
ಕೊನೆಯದಾಗಿ ಅವರ ಎಡೆಬಿಡಂಗಿತನದ ಹೇಳಿಕೆಗಳು. ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹಕ್ಕೆ ಮಣಿದು ಲೋಕಪಾಲ ಮಸೂದೆ ರಚನೆಗೆ ಸಮಿತಿ ರಚಿಸಿದಾಗ ಅದರಲ್ಲಿದ್ದ ನಾಗರಿಕ ಸಮಿತಿ ಸದಸ್ಯರ ಬಗ್ಗೆ ಮೊದಲು ಅಪಸ್ವರ ಎತ್ತಿದ್ದು ಬಾಬಾ ರಾಮ್‌ದೇವ್.

ಶಾಂತಿಭೂಷಣ್ ಮತ್ತು ಅವರ ಮಗ ಪ್ರಶಾಂತ್ ಭೂಷಣ್ ಇಬ್ಬರೂ ಸದಸ್ಯರಾಗಿದ್ದನ್ನು ಅವರು ಟೀಕಿಸಿದರು. ಒಂದೆಡೆ ಲೋಕಪಾಲ ಮಸೂದೆಯ ವ್ಯಾಪ್ತಿಯಲ್ಲಿ ಪ್ರಧಾನಿಯವರನ್ನೂ ಸೇರಿಸಲು ನಾಗರಿಕ ಸಮಿತಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರೆ, ಇನ್ನೊಂದೆಡೆ ಬಾಬಾ ರಾಮ್‌ದೇವ್ ಅದಕ್ಕೆ ವಿರುದ್ದವಾದ ಹೇಳಿಕೆ ನೀಡಿ ಸರ್ಕಾರದ ಬೆಂಬಲಕ್ಕೆ ನಿಂತರು. ಸಂವಿಧಾನದಿಂದ ಹಿಡಿದು ಸಲಿಂಗಕಾಮಿಗಳ ವರೆಗೆ ಅವರು ನೀಡಿರುವ ಹಲವಾರು ಹೇಳಿಕೆಗಳು ವಿವಾದ ಸೃಷ್ಟಿಸಿವೆ. ಇದು ಒಬ್ಬ ಸಮರ್ಥ ನಾಯಕನ ಲಕ್ಷಣ ಅಲ್ಲ.
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಮತದಾನವಷ್ಟೇ ರಹಸ್ಯ, ಉಳಿದೆಲ್ಲವೂ ಬಹಿರಂಗವಾಗಿ ನಡೆಯಬೇಕು. ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಈ ವ್ಯವಸ್ಥೆಯ ಜೀವಾಳ. ಜನರ ನಂಬಿಕೆ ಗಳಿಸಲು ಇದು ಅಗತ್ಯ. ಬಾಬಾ ರಾಮ್‌ದೇವ್ ಅವರ ನಡೆ-ನುಡಿಯಲ್ಲಿ ಇದರ ಕೊರತೆ ಇದೆ.