Friday, September 2, 2016

ಭಾಗ್ವತ್ ಅವರಿಗೆ ಅಭಿನಂದನೆಗಳು, ಜತೆಗೊಂದಿಷ್ಟು ಪ್ರಶ್ನೆಗಳು

ಇದು ನಾನು ಪ್ರಜಾವಾಣಿಯ ‘ದೆಹಲಿನೋಟ’ ಅಂಕಣದಲ್ಲಿ 23, ಮಾರ್ಚ್ 2009 ರಲ್ಲಿ ಬರೆದುದು. (ಮೋಹನ್ ಭಾಗವತ್ ಅವರು ಆರ್ ಎಸ್ ಎಸ್ ನ ನೂತನ ಸರಸಂಘಚಾಲಕರಾಗಿ ನೇಮಕಗೊಂಡ ಸಂದರ್ಭದಲ್ಲಿ) ಆರ್ ಎಸ್ ಎಸ್ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಇದರ ಓದು ಪ್ರಸ್ತುತ ಅನಿಸಿತು.
(ಭಕ್ತರು ಯಾಕೆ ನನ್ನನ್ನು ದ್ವೇಷಿಸುತ್ತಿದ್ದಾರೆ ಎನ್ನುವುದು ಗೊತ್ತಾಗಲಿ ಎನ್ನುವ ಒಳಉದ್ದೇಶವೂ ಹಳೆಯ ಅಂಕಣವನ್ನು ಹಂಚಿಕೊಳ್ಳುವುದರ ಹಿಂದೆ ಇದೆ ಎನ್ನುವುದನ್ನು ಒಪ್ಪಿಕೊಳ್ಳದಿದ್ದರೆ ಆತ್ಮವಂಚಕನಾಗುತ್ತೇನೆ)
ಭಾಗ್ವತ್ ಅವರಿಗೆ ಅಭಿನಂದನೆಗಳು, ಜತೆಗೊಂದಿಷ್ಟು ಪ್ರಶ್ನೆಗಳು
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂತನ ಸರಸಂಘಸಂಚಾಲಕರಾಗಿ ನೇಮಕಗೊಂಡ ಮೋಹನ್ ಮಧುಕರ್ ರಾವ್ ಭಾಗ್ವತ್ ಅವರಿಗೆ ಅಭಿನಂದನೆಗಳು.
ಹಿಂದೂಗಳೆಲ್ಲಾ ಒಂದೇ ಎನ್ನುವ ನಿಮ್ಮ ನಿಲುವು ಪ್ರಾಮಾಣಿಕವಾದುದೆಂದು ನಂಬಿರುವವರು ನಾವು. ಇದರಿಂದಾಗಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಕುಪ್ಪಹಳ್ಳಿಯರಾದ ಕೆ.ಎಸ್. ಸುದರ್ಶನ್ ಅವರನ್ನು ಪದಚ್ಯುತಿಗೊಳಿಸಿ ನೀವು ಆ ಸ್ಥಾನಕ್ಕೆ ಬಂದಿದ್ದೀರಿ ಎನ್ನುವ ಕಾರಣಕ್ಕೆ ನಿಮ್ಮ ಬಗ್ಗೆ ಕನ್ನಡಿಗರು ಆಗಿರುವ ನಮಗೇನೂ ದ್ವೇಷ ಇಲ್ಲ.
ಪೊದೆಮೀಸೆಯಿಂದ ಮಾತ್ರವಲ್ಲ ರೂಪದಲ್ಲಿ ಕೂಡ ಹೋಲಿಕೆ ಇರುವುದರಿಂದ ಸಂಘದ ಸ್ಥಾಪಕ ಕೇಶವರಾವ್ ಬಲಿರಾಮ್ ಹೆಡ್ಗೆವಾರ್ ಅವರಿಗೆ ನಿಮ್ಮನ್ನು ಹೋಲಿಸಲಾಗುತ್ತಿದೆ. ಸೈದ್ದಾಂತಿಕವಾಗಿಯೂ ನೀವು ಹೆಡ್ಗೆವಾರ್ ಅವರಿಗೆ ಸಮೀಪದವರೆಂಬ ಅಭಿಪ್ರಾಯ ಸಂಘದೊಳಗೆ ಇದೆ. ನಿಮ್ಮ ಪೂರ್ವಾಧಿಕಾರಿಗಳಾದ ಕೆ.ಎಸ್. ಸುದರ್ಶನ್, ಬಾಳಾಸಾಬ ದೇವರಸ್ ಮತ್ತು ರಜ್ಜು ಭಯ್ಯಾ ಸಂಘಕ್ಕೆ ಹೆಚ್ಚಿನ ‘ರಾಜಕೀಯ ಪಾತ್ರ’ ಬೇಕೆಂದು ಕೇಳುತ್ತಿದ್ದರಂತೆ. ಆದರೆ, ನೀವು ಮಾತ್ರ ಹೆಡ್ಗೆವಾರ್ ಅವರಂತೆ ರಾಜಕೀಯ ಜಂಜಾಟದಲ್ಲಿ ಸಂಘ ಸಿಗದೆ, ‘ಚಾರಿತ್ರ್ಯ ನಿರ್ಮಾಣ’ದ ಚಟವಟಿಕೆಗಳಲ್ಲಿ ತೊಡಗಬೇಕೆಂದು ಪ್ರತಿಪಾದಿಸುತ್ತಾ ಬಂದಿದ್ದೀರಿ. ಹೀಗಾಗಿಯೇ ನಿಮ್ಮ ಬಗ್ಗೆ ನಮಗೆ ವಿಶೇಷ ಗೌರವ. ಜೊತೆಯಲ್ಲಿ ಕೆಲವು ಪ್ರಶ್ನೆಗಳು.
೧. ಮೂಲಭೂತವಾಗಿ ಆರ್.ಎಸ್.ಎಸ್. ಎನ್ನುವುದು ಏನು? ಅದೊಂದು ಸಾಂಸ್ಕೃತಿಕ ಸಂಘಟನೆಯೇ? ಸಾಮಾಜಿಕ ಸೇವಾ ಸಂಸ್ಥೆಯೇ? ಸಾರ್ವಜನಿಕ ದತ್ತಿಯೇ? ಗುಪ್ತ ರಾಜಕೀಯ ಉದ್ದೇಶ ಹೊಂದಿರುವ ಕಾರ್ಯಕರ್ತರ ಕೂಟವೇ? ಇಲ್ಲವೇ, ಕೇವಲ ಹಿಂದೂ ಸಂಘಟನೆಯೇ. ೬೦ ವರ್ಷಗಳ ಹಿಂದೆ ಈ ಗೊಂದಲ ಮೂಡಿದ್ದರೆ ಅದು ಸಹಜ ಎನ್ನಬಹುದಿತ್ತು. ಆಗಿನ್ನೂ ನಿಮಗೊಂದು ಲಿಖಿತ ಸಂವಿಧಾನವೇ ಇರಲಿಲ್ಲ. ಆದರೆ, ಸಂಘಕ್ಕೊಂದು ಲಿಖಿತ ಸಂವಿಧಾನ ಸಿಕ್ಕ ನಂತರವೂ ಈ ಗೊಂದಲ ಬಗೆಹರಿದಿಲ್ಲ. ಸಂವಿಧಾನ ಮತ್ತು ನಿಮ್ಮ ಕಾರ್ಯಕರ್ತರ ಬಹಿರಂಗ ಹೇಳಿಕೆ-ನಡವಳಿಕೆಗಳಲ್ಲಿನ ವಿರೋಧಾಭಾಸಗಳೇ ಇದಕ್ಕೆ ಕಾರಣ. ಸಂಘಕ್ಕೆ ರಾಜಕೀಯ ಉದ್ದೇಶವಿಲ್ಲ. ಇದು ಶುದ್ಧವಾಗಿ ಸಾಂಸ್ಕೃತಿಕ ಚಟವಟಿಕೆಗಳಿಗೆ ಬದ್ಧವಾದ ಸಂಸ್ಥೆ ಎಂದು ಹೇಳುವ ನಿಮ್ಮ ಸಂವಿಧಾನ (ಪರಿಚ್ಛೇದ ೪) ಮುಂದುವರೆಯುತ್ತಾ, ...‘ಸದಸ್ಯರು ರಾಜಕೀಯ ಪಕ್ಷ ಸೇರಲು ಅಭ್ಯಂತರ ಇಲ್ಲ... ಮುಂದೊಂದು ದಿನ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲು ಆರ್.ಎಸ್.ಎಸ್. ಸ್ವತಂತ್ರವಾಗಿದೆ (ಪ್ಯಾರಾ ೧೦ ಮತ್ತು ೧೬) ಎಂಬ ಅಂಶವೂ ಇದರಲ್ಲಿದೆ. ಯಾವುದು ನಿಜ?
೨. ಸಾಂಸ್ಕೃತಿಕ ಸಂಘಟನೆಯಾಗಿದ್ದರೂ, ರಾಜಕೀಯ ಉದ್ದೇಶವನ್ನು ಪರೋಕ್ಷವಾಗಿ ವ್ಯಕ್ತಪಡಿಸಿರುವ ಸಂಘ ಇನ್ನೊಂದೆಡೆ ‘ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಬದ್ಧತೆಯನ್ನು ಸಾರುತ್ತದೆ’. ಆರ್.ಎಸ್.ಎಸ್. ಎನ್ನುವುದು ಸಾರ್ವಜನಿಕ ದತ್ತಿಯಾಗಿರುವುದರಿಂದ ಇದನ್ನು ಬಾಂಬೆ ದತ್ತಿ ಕಾಯ್ದೆಯಡಿ ನೊಂದಣೆ ಮಾಡಬೇಕೆಂದು ಜಂಟಿ ದತ್ತಿ ಆಯುಕ್ತರು ಹಿಂದೊಮ್ಮೆ ಸಂಘಕ್ಕೆ ನೋಟಿಸ್ ನೀಡಿದ್ದು ನಿಮಗೆ ನೆನಪಿರಬಹುದು. ಅದಕ್ಕೆ ಸಂಘದ ಆಗಿನ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಮತ್ತು ದೇವರಸ್ ಅವರ ಕಿರಿಯ ತಮ್ಮ ಭಾವುರಾವ್, ನಾಗ್ಪುರ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ. ’ನಮ್ಮದು ಧಾರ್ಮಿಕ ಇಲ್ಲವೇ, ಸಾರ್ವಜನಿಕ ದತ್ತಿ ಸಂಸ್ಥೆಯಲ್ಲ’. ಭರತವರ್ಷದಲ್ಲಿರುವವರೆಲ್ಲರನ್ನೂ ಸಾಂಸ್ಕೃತಿಕವಾಗಿ ಸಂಘಟಿಸುವ ಮೂಲಕ ಹಿಂದೂ ರಾಷ್ಟ್ರ ನಿರ್ಮಿಸುವುದು ನಮ್ಮ ಉದ್ದೇಶ ಎಂದು ಆ ಅರ್ಜಿಯಲ್ಲಿ ಹೇಳಲಾಗಿದೆ.
ಈ ಹಿಂದೂ ರಾಷ್ಟ್ರ ಎಂದರೆ ಏನು? ಈ ಪ್ರಶ್ನೆಗೆ ಸಂಘದ ಎರಡನೇ ಸರಸಂಘಸಂಚಾಲಕರಾಗಿದ್ದ ‘ಗುರೂಜಿ’ ಎಂದೇ ಪ್ರಸಿದ್ಧರಾಗಿರುವ ಮಾದವ ಸದಾಶಿವ ಗೋಲ್ವಾಲ್ವಕರ್ ಬರೆದಿರುವ we or Our Nationhood defined ಎಂಬ ವಿವಾದಾತ್ಮಕ ಪುಸ್ತಕದಲ್ಲಿ ಉತ್ತರ ನೀಡಿದ್ದರು. ‘ಭೂಗೋಳ, ಜನಾಂಗ, ಧರ್ಮ, ಸಂಸ್ಕೃತಿ ಮತ್ತು ಭಾಷೆಯ ಮೂಲಕ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ, ಆ ಪುಸ್ತಕದ ಜೊತೆ ತಮಗೆ ಸಂಬಂಧವೇ ಇಲ್ಲವೆಂದು ಆರ್.ಎಸ್.ಎಸ್. ಬಹಿರಂಗವಾಗಿ ಹೇಳಿಕೆ ನೀಡಿತ್ತು. ಮೂರುವರ್ಷಗಳ ಹಿಂದೆ ಪ್ರಕಟವಾದ ಗುರೂಜಿ ಬರಹಗಳ ಹನ್ನೆರಡು ಸಂಪುಟಗಳಲ್ಲಿಯೂ ಈ ಪುಸ್ತಕ ಸೇರಿರಲಿಲ್ಲ. ಆದ್ದರಿಂದ ಹಿಂದೂ ರಾಷ್ಟ್ರ ಕುರಿತ ಗುರೂಜಿ ಅಭಿಪ್ರಾಯ ನಿಮ್ಮದೆಂದು ಹೇಗೆ ಒಪ್ಪಿಕೊಳ್ಳುವುದು? ಹಾಗಿದ್ದರೆ, ನಿಮ್ಮ ಕಲ್ಪನೆಯ ಹಿಂದೂ ರಾಷ್ಟ್ರ ಯಾವುದು?
ಭರತವರ್ಷದಲ್ಲಿರುವವರೆಲ್ಲರೂ ಹಿಂದೂಗಳೆನ್ನುವುದು ನಿಮ್ಮ ಅಭಿಪ್ರಾಯವಾಗಿದ್ದರೆ, ಇಲ್ಲಿರುವ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಪಾರ್ಸಿಗಳೆಲ್ಲರೂ ಆ ವರ್ಗದಲ್ಲಿ ಸೇರಿದ್ದಾರೆಯೇ? ಅವರೆಲ್ಲರೂ ಸೇರಿದ್ದಾರೆ ಎನ್ನುವುದಾಗಿದ್ದರೆ, ಸದಸ್ಯತ್ವನ್ನು ಕೇವಲ ಹಿಂದೂ ಪುರುಷರಿಗಷ್ಟೇ ಸೀಮಿತಗೊಳಿಸಿರುವ ನಿಮ್ಮ ಸಂಘದ ಸಂವಿಧಾನ ಇದಕ್ಕೆ ಅಡ್ಡಿಯಾಗುವುದಿಲ್ಲವೇ?
೩. ಇಂತಹ ಸಂಕೀರ್ಣ ಪ್ರಶ್ನೆಗಳನ್ನು ಸಧ್ಯಕ್ಕೆ ಪಕ್ಕಕ್ಕಿಟ್ಟು, ಕೆಲವು ಸರಳ ಪ್ರಶ್ನೆಗಳತ್ತ ಗಮನಹರಿಸುವ. ಅಲ್ಪಸಂಖ್ಯಾತ ಕೋಮಿನ ಜನರನ್ನು ಒತ್ತಟ್ಟಿಗಿಟ್ಟಾದರೂ ನಿಮ್ಮ ಕಲ್ಪನೆಯಲ್ಲಿರುವ ‘ಹಿಂದೂ’ಗಳು ಯಾರೆಂದು ಸ್ಪಷ್ಟಪಡಿಸಲು ಸಾಧ್ಯವೇ? ಹಿಂದೂಗಳಲ್ಲಿಯೂ ಥರಾವರಿ ಜನರಿದ್ದಾರೆ. ಸಸ್ಯಹಾರಿಗಳಿದ್ದಾರೆ. ಮಾಂಸಹಾರಿಗಳಿದ್ದಾರೆ. ಮಾಂಸಹಾರಿಗಳಲ್ಲಿ ಕುರಿ-ಕೋಳಿ-ಮೀನು ಮಾತ್ರವಲ್ಲ, ಹಾವು-ಹಲ್ಲಿಗಳನ್ನು ತಿನ್ನುವವರೂ ಇದ್ದಾರೆ. ಅವರ ಆಹಾರ ಪದ್ದತಿಯ ಜತೆಯಲ್ಲಿಯೇ ಅವರನ್ನು ಒಪ್ಪಿಕೊಳ್ಳಲು ಸಾಧ್ಯವೇ? ನಿಮ್ಮ ರಾಷ್ಟ್ರೀಯ ಪದಾಧಿಕಾರಿಗಳಲ್ಲಿಯಾದರೂ ಯಾರಾದರೂ ಮಾಂಸಹಾರಿಗಳು, ಮಾರಮ್ಮ-ಕಾಳಮ್ಮ, ಜುಮಾದಿ, ಪಂಜುರ್ಲಿ ಭಕ್ತರು ಇದ್ದಾರೆಯೇ?
೪. ನಿಮ್ಮ ಕಲ್ಪನೆಯ ಹಿಂದೂ ದೇವರು ಯಾರು? ನಮ್ಮಲ್ಲಿರುವ ಬಹುಸಂಖ್ಯಾತ ದೇವರು ಮಾಂಸಹಾರಿಗಳು. ’ಹಿಂದುತ್ವದ ಪ್ರಯೋಗ ಶಾಲೆ’ ಎಂದೇ ನೀವು ಹೆಮ್ಮೆಯಿಂದ ಹೇಳಿಕೊಳ್ಳುವ ದಕ್ಷಿಣ ಕನ್ನಡದಲ್ಲಿ ರಾಮ, ಕೃಷ್ಣರ ದೇವಸ್ಥಾನಗಳಿಗಿಂತ ಹೆಚ್ಚಾಗಿ ಸಾನ-ಗರಡಿಗಳಿವೆ. ಅಲ್ಲಿರುವ ದೈವಗಳೆಲ್ಲವೂ ಮಾಂಸಹಾರಿಗಳು. ಅವುಗಳಲ್ಲಿ ಕೆಲವು ಮಧ್ಯಪಾನ ಪ್ರಿಯರು ಕೂಡ. ಅವುಗಳನ್ನು ನಿಮ್ಮ ಕಲ್ಪನೆಯ ಹಿಂದುತ್ವ ಒಪ್ಪಿಕೊಳ್ಳುತ್ತದೆಯೇ?
೫. ನಿಮ್ಮದು ಸಾಂಸ್ಕೃತಿಕ ಸಂಘಟನೆಯೆಂದು ಒಪ್ಪಿಕೊಳ್ಳುತ್ತಿದ್ದೀರಿ. ನಿಮ್ಮ ದೃಷ್ಟಿಯ ಸಂಸ್ಕೃತಿ ಯಾವುದು? ಹೆಣ್ಣುಮಕ್ಕಳು ಪಬ್ ಗಳಲ್ಲಿ ಹೋಗಿ ಕುಡಿಯುವುದು, ಉಣ್ಣುವುದು ನಿಮ್ಮ ಸಂಸ್ಕೃತಿ ಅಲ್ಲವೆಂದಾದರೆ, ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವ ಮೂಲಕ ಶಿಕ್ಷಿಸಹೊರಡುವುದು ಯಾವ ಸಂಸ್ಕೃತಿ? ಇಂತಹ ‘ಗೂಂಡಾಗಿರಿ ಸಂಸ್ಕೃತಿ’ಗೆ ನಿಮ್ಮ ಬೆಂಬಲ ಇಲ್ಲವೆಂದಾದರೆ, ನಿಮ್ಮ ನಾಯಕರಿಂದ ಅಧಿಕೃತ ಹೇಳಿಕೆಗಳು ಯಾಕೆ ಬರಲಿಲ್ಲ?. ಇಂತಹ ಅಸಭ್ಯ ಸಂಸ್ಕೃತಿಗೆ ಕಾರಣವಾದ ಮದ್ಯಮಾರಾಟವನ್ನೇ ನಿಷೇಧಿಸಲು ನಿಮ್ಮ ನಿಯಂತ್ರಣ ಇರುವ ಸರ್ಕಾರದ ಮೇಲೆ ಯಾಕೆ ಒತ್ತಡ ತರುತ್ತಿಲ್ಲ?. ಹಿಂದೂ ಧರ್ಮದ ಅನಿಷ್ಟ ಪದ್ದತಿಗಳಾದ ಸತಿಪದ್ದತಿ, ಬಾಲ್ಯವಿವಾಹ, ದೇವದಾಸಿ ಪದ್ದತಿ ವಿರುದ್ಧ ನಿಮ್ಮ ಸಂಘಟನೆ ಯಾಕೆ ದನಿ ಎತ್ತುತ್ತಿಲ್ಲ?.
೬. ನಿಮಗೆ ತಿಳಿದಿರುವಂತೆ ಹಿಂದೂ ಧರ್ಮವನ್ನು ಕಾಡುತ್ತಿರುವ ಮಹಾಪಿಡುಗು ಜಾತಿವ್ಯವಸ್ಥೆ. ಇದರ ನಾಶಕ್ಕಾಗಿ ನೀವು ಹಮ್ಮಿಕೊಂಡಿರುವ ಕಾರ್ಯಕ್ರಮಗಳೇನು? ಪ್ರತಿನಿತ್ಯ ದಲಿತರು ಮತ್ತು ಹಿಂದುಳಿದ ಜಾತಿಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಅವೆಲ್ಲವೂ ಹಿಂದೂಗಳಿಂದಲೇ ನಡೆಯುತ್ತಿವೆ. ಎಂದಾದರೂ ನಿಮ್ಮ ಸಂಘಟನೆಗಳ ಇದರ ವಿರುದ್ಧ ಬೀದಿಗೆ ಇಳಿದು ಕನಿಷ್ಠ ಪ್ರತಿಭಟನೆಯನ್ನಾದರೂ ಮಾಡಿದೆಯೇ? ಮೀಸಲಾತಿ, ಭೂಸುಧಾರಣೆ ಮೊದಲಾದ ಸಾಮಾಜಿಕ ನ್ಯಾಯದ ಪ್ರಶ್ನೆಗಳು ಎದುರಾದಾಗ ಮೌನದ ಚಿಪ್ಪು ಸೇರುತ್ತಿರುವುದು ಯಾಕೆ?.
೭. ಹಿಂದೂಗಳೆಲ್ಲರೂ ಒಂದು ಎನ್ನುತ್ತೀರಿ. ಆದರೆ, ಈಗಲೂ ದೇಶದ ನೂರಾರು ದೇವಸ್ಥಾನಗಳಲ್ಲಿ ಎಲ್ಲಾ ‘ಹಿಂದೂ’ಗಳಿಗೆ ಪ್ರವೇಶವಿಲ್ಲ. ದೇವರು ಮತ್ತು ಭಕ್ತರ ನಡುವೆ ಪೂಜಾರಿಗಳೇಕೆ? ಪೂಜಾರಿಗಳು ಇರುವುದೇ ಆಗಿದ್ದರೆ, ಕೇವಲ ಒಂದು ಜಾತಿಗೆ ಯಾಕೆ ಸೀಮಿತವಾಗಬೇಕು? ದೇವಸ್ಥಾನದಲ್ಲಿ ಪೂಜೆಗೆ, ಆಗಮಶಾಸ್ತ್ರದಲ್ಲಿ ಪರಿಣಿತಿ ಇದ್ದರೆ ಸಾಕು. ಆ ಬಗ್ಗೆ ತರಬೇತಿ ನೀಡುವ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲಾ ಜಾತಿಯವರಿಗೂ ಅಧಿಕಾರ ಯಾಕೆ ನೀಡಬಾರದು?. ನೂರು ವರ್ಷಗಳ ಹಿಂದೆಯೇ ಕೇರಳದಲ್ಲಿ ನಾರಾಯಣ ಗುರುಗಳು ಇದೇ ಉದ್ದೇಶಕ್ಕಾಗಿ ಸ್ಥಾಪಿಸಿದ ‘ಬ್ರಹ್ಮ ಸಂಘ’, ಈ ಕೆಲಸ ಮಾಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬೇಕಿಲ್ಲವೇ?
೮. ನಿಮ್ಮದು ರಾಜಕೀಯೇತರ ಸಂಸ್ಥೆ ಎಂದು ಹೇಳಿಕೊಳ್ಳುವ ನೀವು ಬಿಜೆಪಿಯ ಆಂತರಿಕ ವ್ಯವಹಾರದಲ್ಲಿ ಇಷ್ಟೊಂದು ಆಸಕ್ತಿ ವಹಿಸುತ್ತಿರುವುದು ಯಾಕೆ? ಬಿಜೆಪಿ ಪದಾಧಿಕಾರಿಗಳಲ್ಲಿ ನಿಮ್ಮದೇ ೨೦೦ ಪೂರ್ಣಾವಧಿ ಕಾರ್ಯಕರ್ತರಾಗಿದ್ದಾರೆ. ಅವರನ್ನು ಎರವಲು ಸೇವೆಯ ಮೂಲಕ ಕಳುಹಿಸಿರುವುದು ಯಾವ ಉದ್ದೇಶದಿಂದ?. ಲಾಲ್ಕೃಷ್ಣ ಅಡ್ವಾಣಿಯವರು ಜಿನ್ನಾ ವಿವಾದದ ಸುಳಿಯಲ್ಲಿ ಸಿಕ್ಕಾಗ ಅವರ ಮನೆಗೆ ತೆರಳಿ ಅವರು ರಾಜೀನಾಮೆ ನೀಡುವಂತೆ ಮಾಡಿ ವಿವಾದಕೆಕ ಮಂಗಳ ಹಾಡಿದವರು ನೀವೇ ಅಲ್ಲವೇ?. ನಂಬಿಕೆಯಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರಿಗಿಂತಲೂ ಹೆಚ್ಚು ಧರ್ಮಭೀರು ಆಗಿರುವ ಪ್ರಣಬ್ ಮುಖರ್ಜಿ, ಜ್ಯೋತಿಷ್ಯ ಶಾಸ್ತ್ರದ ಮೇಲಿನ ವಿಶ್ವಾಸದಲ್ಲಿ ಮುರುಳಿಮನೋಹರ್ ಜೋಷಿ ಅವರನ್ನೂ ಮೀರಿಸುವ ಎಚ್.ಡಿ. ದೇವೇಗೌಡರು ಹಿಂದೂಗಳಲ್ಲವೇ? ಕೇವಲ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ?
ರಾಮಮಂದಿರ ನಿರ್ಮಾಣ, ಸಂವಿಧಾನದ ೩೭೦ನೇ ಪರಿಚ್ಛೇದದ ರದ್ದತಿ ಮತ್ತು ಸಮಾನ ನಾಗರೀಕ ಸಂಹಿತೆ ಎಂಬ ನಿಮ್ಮದೇ ಕಾರ್ಯಸೂಚಿಯನ್ನು ಅಧಿಕಾರಗಳಿಕೆಗಾಗಿ ಶ್ಯೆತ್ಯಾಗಾರಕ್ಕೆ ಸೇರಿಸಿದ ಬಿಜೆಪಿ, ಅದನ್ನು ಒಪ್ಪದ ಕಾಂಗ್ರೆಸ್, ಕಮ್ಯೂನಿಷ್ಟ್, ಜೆ.ಡಿ.ಎಸ್. ಗಿಂತ ಹೇಗೆ ಭಿನ್ನ?.
೯. ಚಾರಿತ್ರ್ಯ ನಿರ್ಮಾಣದ ನಿಮ್ಮ ಗುರಿ ಸ್ವಾಗತಾರ್ಹ. ಆದರೆ, ರಾಜಕೀಯದಲ್ಲಿನ ಪಕ್ಷಾಂತರದ ಪಿಡುಗು, ಭ್ರಷ್ಟಾಚಾರ, ಅಪರಾಧಿಕರಣದ ಬಗ್ಗೆ ಯಾಕೆ ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗುತ್ತಿಲ್ಲ? ನಿಮ್ಮದೇ ಗರಡಿಯಲ್ಲಿ ಬೆಳೆದ ಅರುಣ ಜೇಟ್ಲಿ ಮತ್ತು ಯಾವುದೋ ಟೆಂಟ್ ವಾಲಾ ನಡುವಿನ ಜಗಳದಲ್ಲಿ ಯಾರ ಜೊತೆ ನಿಲ್ಲಬೇಕೆನ್ನುವುದರ ಬಗ್ಗೆ ಕೂಡ ಇನ್ನೊಂದು ಯೋಚನೆ ಮಾಡಬೇಕೆ?
೧೦. ನಿಮ್ಮ ವೈಯಕ್ತಿಕ ಅರ್ಹತೆಗಳ ಬಗ್ಗೆ ನಮಗೆ ಕಿಂಚಿತ್ತೂ ಅನುಮಾನಗಳಿಲ್ಲ. ಆದರೆ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು ನಾವು. ನಾವು ನಂಬಬಯಸುವ ಎಲ್ಲಾ ವ್ಯಕ್ತಿ-ಸಂಸ್ಥೆಗಳು ಆ ನಂಬಿಕೆಗೆ ಬದ್ಧವಾಗಿರಬೇಕೆಂಬ ಬಯಕೆ ನಮ್ಮದು. ಆರ್.ಎಸ್.ಎಸ್. ಹುಟ್ಟಿದಾಗಿನಿಂದ ಈವರೆಗೆ ಚುನಾವಣೆ ನಡೆದೇ ಇಲ್ಲ ಯಾಕೆ?.
ಇತೀ
ಹಿಂದೂಗಳು.

Monday, August 29, 2016

ಕೆಲವರು ನನ್ನನ್ನು ನೋಡುವ ದೃಷ್ಟಿ ಬದಲಾಗಿದೆ. ಅದಕ್ಕೆ ನಾನು ಹೊಣೆಯಲ್ಲ.

‘ದಿನೇಶ್, ನೀವು ಬದಲಾಗಿಬಿಟ್ಟಿದ್ದೀರಿ, ಪ್ರಜಾವಾಣಿಯಲ್ಲಿದ್ದಾಗ ನಾವು ನಿಮ್ಮ ಅಭಿಮಾನಿಗಳು, ಎಷ್ಟು ಚೆನ್ನಾಗಿ ಬರೆಯುತ್ತಿದ್ದೀರಿ. ಆದರೆ ಇತ್ತೀಚೆಗೆ ಯಾಕೋ ನೀವು ಬರೀ ಬಿಜೆಪಿ, ಆರ್ ಎಸ್ ಎಸ್, ಮೋದಿ ವಿರುದ್ಧವೇ ಮಾತನಾಡುತ್ತಿದ್ದೀರಿ, ಬರೆಯುತ್ತಿದ್ದೀರಿ.. ನೀವು ಕಾಂಗ್ರೆಸ್ ವಕ್ತಾರರಂತೆ ವರ್ತಿಸುತ್ತಿದ್ದೀರಿ. ಇದು ಸರಿ ಅಲ್ಲ ’ ಎಂದು ನನ್ನನ್ನು ಸ್ನೇಹಿತನೆಂದು ಹೇಳಿಕೊಳ್ಳುವವರಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿರುವುದನ್ನು ಕಳೆದ ಮೂರು ವರ್ಷಗಳಲ್ಲಿ ನಾನು ಕೇಳಿದ್ದೇನೆ. . ಮೂರು ದಶಕಗಳ ಕಾಲ ಪತ್ರಿಕಾವೃತ್ತಿಯಲ್ಲಿದ್ದ ನನಗೆ ಓದುಗರ ಋಣ ಇದೆ. ಆದ್ದರಿಂದ ಸಣ್ಣದೊಂದು ಸ್ಪಷ್ಟೀಕರಣ ನೀಡಬೇಕೆಂದು ಬಹಳ ದಿನಗಳಿಂದ ಅನಿಸುತ್ತಿತ್ತು. ಕೆಲವು ಗೆಳೆಯರು ಮುಖಪುಟದಲ್ಲಿ ನನ್ನ ಹಳೆಯ ಮುಖಗಳ (ಪೋಟೋಗಳ) ಅನಾವರಣ ನಡೆಸುತ್ತಿರುವ ಈ ಸಂದರ್ಭ,ಬದಲಾಗದ ನನ್ನೊಳಗಿನ ಆತ್ಮವನ್ನು ಬಿಚ್ಚಿಡಲು ಸರಿಯಾದ ಕಾಲ ಎಂದು ನನಗನಿಸಿದೆ.ನಾನು 1983ರಿಂದಲೇ ಪತ್ರಿಕಾ ವೃತ್ತಿಯಲ್ಲಿದ್ದರೂ ಅಧಿಕೃತವಾಗಿ ಪತ್ರಕರ್ತನಾಗಿದ್ದು 1984ರ ಸೆಪ್ಟೆಂಬರ್ 9ರಂದು. ಅದೇ ದಿನ ಮುಂಗಾರುಪತ್ರಿಕೆ ಬಿಡುಗಡೆಯಾಗಿದ್ದು. ಪತ್ರಿಕೆ ಸೇರುವಾಗಲೂ ವೈಚಾರಿಕವಾಗಿ ನಾನು ಇಂದಿನ ಹಾಗೆ ಇದ್ದರೂ ನನ್ನ ವಿಚಾರಗಳಿಗೆ ಸ್ಪಷ್ಟತೆಯನ್ನು ತಂದುಕೊಟ್ಟಿದ್ದು ಮುಂಗಾರು ಪತ್ರಿಕೆ. ನಾನು ಬದಲಾಗಿದ್ದೇನೆ ಎಂದು ಹೇಳುವವರು ಒಂದೋ ನನ್ನ ಪತ್ರಿಕಾ ಬರವಣಿಗೆಗಳನ್ನು ಮೊದಲಿನಿಂದಲೂ ಓದಿಲ್ಲ ಇಲ್ಲವೆ ಓದಿದ್ದರೂ ಉದ್ದೇಶಪೂರ್ವಕ ಅಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ.
ಬಿಜೆಪಿಯನ್ನೂ ಒಳಗೊಂಡ ಸಂಘಪರಿವಾರವನ್ನು ಸೈದ್ಧಾಂತಿಕವಾಗಿ ವೃತ್ತಿಯ ಮೊದಲ ದಿನದಿಂದಲೇ ನಾನು ವಿರೋಧಿಸುತ್ತಾ ಬಂದವನು. ವಾಜಪೇಯಿಯವರ ಅಸಹಾಯಕತೆ ಮತ್ತು ಅಡ್ವಾಣಿಯವರಿಗೆ ಪಕ್ಷದ ಮಟ್ಟದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಅನುಕಂಪದಿಂದ ಬರೆದಿದ್ದರೂ ಬಿಜೆಪಿ ಎನ್ನುವ ಪಕ್ಷವನ್ನು ಎಂದೂ ಸಮರ್ಥಿಸಿ ಬರೆದಿಲ್ಲ.
ಸನ್ಮಾನ್ಯ ನರೇಂದ್ರ ಮೋದಿಯವರ ಬಗ್ಗೆ 2002ರಿಂದ 2013 ರ ವರೆಗೆ ನಾನು ಬರೆದ ಅಂಕಣಗಳು, ಚುನಾವಣಾ ವರದಿಗಳು, ಪ್ರತ್ಯಕ್ಷದರ್ಶಿ ವರದಿಗಳು ನೂರಕ್ಕೂ ಹೆಚ್ಚು ಇರಬಹುದು. ಯಾವುದರಲ್ಲಿಯೂ ನಾನು ಮೋದಿಯವರನ್ನು ಸಮರ್ಥಿಸಿಲ್ಲ. ಗುಜರಾತ್ ಕೋಮುಗಲಭೆಯ ಪ್ರತ್ಯಕ್ಷದರ್ಶಿ ವರದಿಮಾಡಿದ್ದೆ. ಅವೆಲ್ಲವೂ ಮುಖ್ಯಮಂತ್ರಿಯಾಗಿ ಮೋದಿಯವರ ವೈಫಲ್ಯ ಮತ್ತು ಅವರ ಕೋಮುವಾದಿ ಮನಸ್ಸನ್ನು ಬಯಲುಮಾಡಿರುವಂತಹದ್ದು. ಅಲ್ಲಿನ ಅಭಿವೃದ್ಧಿಮಾದರಿ ಎಷ್ಟೊಂದು ಟೊಳ್ಳು ಎನ್ನುವುದನ್ನೂ ಕೂಡಾ ಬರೆದಿದ್ದೆ.
ಆದರೆ ಪತ್ರಕರ್ತನಾಗಿ ನಾನೆಂದೂ ಆತ್ಮವಂಚನೆ ಮಾಡಿಕೊಂಡು ಸುಳ್ಳು ಹೇಳಿಲ್ಲ, ಓದುಗರನ್ನು ತಪ್ಪುದಾರಿಗೆಳೆದಿಲ್ಲ. ಸುದ್ದಿಯ ವಿಷಯದಲ್ಲಿ ಪಕ್ಷಪಾತ ಮಾಡಿಲ್ಲ. ಇದು ನಾನು ಕೆಲಸಮಾಡಿದ ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಎಬಿವಿಪಿಯ ಹಳೆಯ ಸದಸ್ಯರನ್ನು ಕೇಳಿ ದೃಡಪಡಿಸಿಕೊಳ್ಳಬಹುದು. ಗುಜರಾತ್ ನ ಎರಡು ವಿಧಾನಸಭಾ ಚುನಾವಣೆಗಳು ಮತ್ತು ಒಂದು ಲೋಕಸಭಾ ಚುನಾವಣೆಯ ಸಮೀಕ್ಷೆ ನಡೆಸಿದ್ದೆ. ಆ ಚುನಾವಣೆಗಳಲ್ಲಿ ಮೋದಿಯವರದ್ದೇ ಮೇಲುಗೈ ಎಂದು ಬರೆದಿದ್ದೇನೆ. (ಆಸಕ್ತಿ ಇದ್ದವರು ಪ್ರಜಾವಾಣಿ ಆರ್ಕೈವ್ಸ್ ಗೆ ಹೋಗಿ ಓದಬಹುದು)
ಅಚ್ಚರಿಯ ಸಂಗತಿಯೆಂದರೆ ನಾನು ಆರ್ ಎಸ್ ಎಸ್, ಬಿಜೆಪಿ ಮತ್ತು ನರೇಂದ್ರಮೋದಿಯವರ ಕಟುಟೀಕಾಕಾರನಾಗಿದ್ದರೂ 2012ರ ಜನವರಿ 19ರ ವರೆಗೆ ಯಾವ ಬಿಜೆಪಿ ನಾಯಕರು,ಕಾರ್ಯಕರ್ತರು, ಬೆಂಬಲಿಗರು ನನ್ನನ್ನು ಬಹಿರಂಗವಾಗಿ ಟೀಕಿಸಿರಲಿಲ್ಲ, ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೆ ಯಾರೂ ಬೆದರಿಸಿ ಇಲ್ಲವೇ ಅವಾಚ್ಯವಾಗಿ ಪತ್ರ ಬರೆಯುವುದು, ಪೋನಿನಲ್ಲಿ ಕೆಟ್ಟದಾಗಿ ಬೈಯ್ಯುವುದು, ಸೋಷಿಯಲ್ ಮೀಡಿಯಾದಲ್ಲಿ ಗುದ್ದಿ ಓಡಿಹೋಗುವುದು-ಯಾವುದನ್ನೂ ಮಾಡಿಲ್ಲ.
ಆದರೆ 2012ರ ಜನವರಿ 19ರಂದು ವಿವೇಕಾನಂದರ ಬಗ್ಗೆ ನಾನು ಬರೆದ ಅಂಕಣದ ನಂತರ ಎಲ್ಲವೂ ಬದಲಾಗಿಹೋಯಿತು. ಇವೆಲ್ಲವನ್ನೂ ಪ್ರಾರಂಭಿಸಿದ್ದು, ಪ್ರಚೋದಿಸಿದ್ದು , ಸಂಚನ್ನು ಹೆಣೆದಿದ್ದು ಈಗ ರೇಪಿಸ್ಟ್ ಸ್ವಾಮಿಗಳು, ಕೊಲೆಗಡುಕರನ್ನು ಹುಡುಕಿಕೊಂಡು ಹೋಗಿ ಬೆಂಬಲಿಸುತ್ತಾ ಸುಳ್ಳು ಬೊಗಳುತ್ತಾ ಅಂಡಲೆಯುತ್ತಿರುವ ವಕ್ರಬುದ್ದಿಯ ಸುಳ್ಳುಕೋರ. ಈತನಬೆಂಬಲಕ್ಕೆ ನಿಂತವನು ಈಗ ಮಂಗಳೂರು ಜೈಲಲ್ಲಿದ್ದಾನೆ. ಈ ಕಿಡಿಗೇಡಿ ಜೋಡಿ ಆಗಲೇ ಮೋದಿಬ್ರಿಗೇಡ್ ಹೆಸರಲ್ಲಿ ಯುವಕ-ಯುವತಿಯರ ತಲೆಕೆಡಿಸಿ ಪುಂಡರ ತಂಡವನ್ನು ಕಟ್ಟಿತ್ತು. ಈ ಬ್ರಿಗೇಡಿಗಳು ಆರ್ ಎಸ್ ಎಸ್ ಶಾಖೆಗಳಲ್ಲಿ ತರಬೇತಿಹೊಂದಿದ ಸ್ವಯಂಸೇವಕರೂ ಅಲ್ಲ. ಅವರ ಜತೆಯಲ್ಲಿಯಾದರೂ ಕನಿಷ್ಠ ಒಂದು ಮಾತುಕತೆ-ಚರ್ಚೆ ಸಾಧ್ಯವಿತ್ತು. ಈ ಬ್ರಿಗೇಡಿಗಳ ತಲೆಯಲ್ಲಿ ಇರುವುದು ಸೆಗಣಿ. ಯಾವ ಧರ್ಮ,ಸಂಸ್ಕೃತಿ, ಇತಿಹಾಸದ ಪರಿಚಯವೂ ಇವರಿಗಿಲ್ಲ. ಅಶ್ಲೀಲವಾಗಿ ಬೈಯ್ಯುವುದಷ್ಟೇ ಬಂಡವಾಳ.
ನನ್ನನ್ನು ವಿರೋಧಿಸುತ್ತಿರುವವರ ಗ್ಯಾಂಗ್ ಗೆ ಒಬ್ಬ ಲೀಡರ್ ಇದ್ದಾನೆ. ಈ ಆತ್ಮವಂಚಕ ತಾನು ಪತ್ರಕರ್ತನಾಗಿದ್ದಾಗ, ಅನಂತಕುಮಾರ್, ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ಬಗ್ಗೆ ,ಬಿಜೆಪಿ ಬಗ್ಗೆ, ಪೇಜಾವರ ಮಠದ ಸ್ವಾಮಿಗಳ ಬಗ್ಗೆ ಮನಸಾರೆ ಟೀಕಿಸಿ, ನಿಂದಿಸಿ ಬರೆಯುತ್ತಿದ್ದ. ಪುರಾವೆ ಬೇಕಿದ್ದರೆ ಆತನೇ ಪ್ರಕಟಿಸಿದ ಪುಸ್ತಕಗಳು ಎಲ್ಲಾದರೂರದ್ದಿ ಅಂಗಡಿಯಲ್ಲಿ ಸಿಕ್ಕರೆ ಓದಿಕೊಳ್ಳಿ. ಇಷ್ಟೆಲ್ಲಾ ಆರ್ಭಟಿಸಿದ ಈತ ಕೊನೆಗೆ ಪತ್ರಕರ್ತನಾಗಿ ತಾನು ಟೀಕಿಸಿದ್ದ ನಾಯಕರ ಕಾಲಿಗೆ ಬಿದ್ದು ಸಂಸದನಾದ. ಈಗ ನಿರ್ಲಜ್ಜತೆಯಿಂದ ಅವರನ್ನೇ ಹಾಡಿಹೊಗಳುತ್ತಾ ಉಳಿದವರನ್ನು ಕಾಂಗ್ರೆಸ್ ಏಜಂಟರೆಂದು ಘೀಳಿಡುತ್ತಾ ಅಲೆಯುತ್ತಿದ್ದಾನೆ. ನಾನು ಇಂತಹವನಲ್ಲ.
ಹಾಗಿದ್ದರೆ ನೀವು ಕಾಂಗ್ರೆಸ್ ಪಕ್ಷವನ್ನು ಮೊದಲಿನಂತೆ ಟೀಕಿಸುತ್ತಿಲ್ಲವಲ್ಲಾ ಎಂಬ ಪ್ರಶ್ನೆಯನ್ನು ಯಾರಾದರೂ ಕೇಳಬಹುದು. ಇಂತಹ ಪ್ರಶ್ನೆ ಕೇಳಿದವರನ್ನು ನಾನು ಗೌರವಿಸುತ್ತೇನೆ. ವೈಯಕ್ತಿಕವಾಗಿ ನಾನು ಬಿಜೆಪಿ ಮತ್ತುಕಾಂಗ್ರೆಸ್ ನಿಂದ ಹೊರತಾದ ತೃತೀಯ ಶಕ್ತಿಯ ಪರವಾಗಿ ಇರುವವನು. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷ ಸೇರಿದಾಗ ವ್ಯಥೆಪಟ್ಟವನು. (ಇದನ್ನು ಆ ಸಂದರ್ಭದಲ್ಲಿ ಬರೆದಿದ್ದೇನೆ ಕೂಡಾ). ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ ನಾನು ಕಾಂಗ್ರೆಸ್ ಪರವಾಗಿಯೇ ನಿಂತವನು. ನರೇಂದ್ರಮೋದಿ ಮತ್ತು ಸೋನಿಯಾಗಾಂಧಿ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ ಸೋನಿಯಾಗಾಂಧಿ ಪರವಾಗಿ ಈಗಲೂ ನಿಲ್ಲುವವನು. ಸಿದ್ದರಾಮಯ್ಯ ಮತ್ತು ಬಿಜೆಪಿಯ ನಾಯಕರ ನಡುವಿನ ಆಯ್ಕೆ ಎದುರಾದಾಗ ಸಿದ್ದರಾಮಯ್ಯನವರ ಪರವಾಗಿಯೇ ನಿಲ್ಲುವವನು.
ಬಿಜೆಪಿ ಬಗ್ಗೆ ಯಾಕೆ ವಿರೋಧ ಎಂದು ಕೇಳುವವರಿಗೆ ನನ್ನದೊಂದು ಸರಳ ಉತ್ತರ ಇದೆ. ಇದೊಂದು ಸೈದ್ಧಾಂತಿಕ ಸಂಘರ್ಷ. ಆರ್ ಎಸ್ ಎಸ್ ನಿಯಂತ್ರಣದಿಂದ ಮುಕ್ತಗೊಂಡು ಬಿಜೆಪಿ ಒಂದು ಸಂವಿಧಾನಬದ್ಧ ರಾಜಕೀಯ ಪಕ್ಷವಾಗಿಯೇ ಕಾರ್ಯನಿರ್ವಹಿಸಲು ಶುರುಮಾಡಿದರೆ ಅದನ್ನು ಉಳಿದೆಲ್ಲ ರಾಜಕೀಯ ಪಕ್ಷಗಳ ಜತೆ ನಿಲ್ಲಿಸಿ ಒಳಿತು-ಕೆಡುಕುಗಳನ್ನು ಈಗಲೂ ಚರ್ಚಿಸಲು ನಾನು ಮುಕ್ತಮನಸ್ಸು ಹೊಂದಿದ್ದೇನೆ.
ಇದು ನನ್ನ ಹಿಂದಿನ, ಇಂದಿನ ಮತ್ತು ಮುಂದಿನ ನಿಲುವು. ಇದನ್ನು ಒಪ್ಪದವರೂ ಇರಬಹುದು, ಅವರ ಅಭಿಪ್ರಾಯದ ಬಗ್ಗೆ ನನಗೆ ಗೌರವ ಇದೆ. ಆದರೆ ಪತ್ರಕರ್ತನಾಗಿ ಮೊದಲ ಬಾರಿ ಪೆನ್ನು ಕೈಗೆತ್ತಿಕೊಂಡಾಗ ಸೈದ್ಧಾಂತಿಕವಾಗಿ ನಾನು ಹೇಗಿದ್ದೆನೋ ಈಗಲೂ ಹಾಗೆಯೇ ಇದ್ದೇನೆ. ಕೆಲವರು ನನ್ನನ್ನು ನೋಡುವ ದೃಷ್ಟಿ ಬದಲಾಗಿದೆ. ಅದಕ್ಕೆ ನಾನು ಹೊಣೆಯಲ್ಲ.