Monday, August 29, 2016

ಕೆಲವರು ನನ್ನನ್ನು ನೋಡುವ ದೃಷ್ಟಿ ಬದಲಾಗಿದೆ. ಅದಕ್ಕೆ ನಾನು ಹೊಣೆಯಲ್ಲ.

‘ದಿನೇಶ್, ನೀವು ಬದಲಾಗಿಬಿಟ್ಟಿದ್ದೀರಿ, ಪ್ರಜಾವಾಣಿಯಲ್ಲಿದ್ದಾಗ ನಾವು ನಿಮ್ಮ ಅಭಿಮಾನಿಗಳು, ಎಷ್ಟು ಚೆನ್ನಾಗಿ ಬರೆಯುತ್ತಿದ್ದೀರಿ. ಆದರೆ ಇತ್ತೀಚೆಗೆ ಯಾಕೋ ನೀವು ಬರೀ ಬಿಜೆಪಿ, ಆರ್ ಎಸ್ ಎಸ್, ಮೋದಿ ವಿರುದ್ಧವೇ ಮಾತನಾಡುತ್ತಿದ್ದೀರಿ, ಬರೆಯುತ್ತಿದ್ದೀರಿ.. ನೀವು ಕಾಂಗ್ರೆಸ್ ವಕ್ತಾರರಂತೆ ವರ್ತಿಸುತ್ತಿದ್ದೀರಿ. ಇದು ಸರಿ ಅಲ್ಲ ’ ಎಂದು ನನ್ನನ್ನು ಸ್ನೇಹಿತನೆಂದು ಹೇಳಿಕೊಳ್ಳುವವರಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿರುವುದನ್ನು ಕಳೆದ ಮೂರು ವರ್ಷಗಳಲ್ಲಿ ನಾನು ಕೇಳಿದ್ದೇನೆ. . ಮೂರು ದಶಕಗಳ ಕಾಲ ಪತ್ರಿಕಾವೃತ್ತಿಯಲ್ಲಿದ್ದ ನನಗೆ ಓದುಗರ ಋಣ ಇದೆ. ಆದ್ದರಿಂದ ಸಣ್ಣದೊಂದು ಸ್ಪಷ್ಟೀಕರಣ ನೀಡಬೇಕೆಂದು ಬಹಳ ದಿನಗಳಿಂದ ಅನಿಸುತ್ತಿತ್ತು. ಕೆಲವು ಗೆಳೆಯರು ಮುಖಪುಟದಲ್ಲಿ ನನ್ನ ಹಳೆಯ ಮುಖಗಳ (ಪೋಟೋಗಳ) ಅನಾವರಣ ನಡೆಸುತ್ತಿರುವ ಈ ಸಂದರ್ಭ,ಬದಲಾಗದ ನನ್ನೊಳಗಿನ ಆತ್ಮವನ್ನು ಬಿಚ್ಚಿಡಲು ಸರಿಯಾದ ಕಾಲ ಎಂದು ನನಗನಿಸಿದೆ.ನಾನು 1983ರಿಂದಲೇ ಪತ್ರಿಕಾ ವೃತ್ತಿಯಲ್ಲಿದ್ದರೂ ಅಧಿಕೃತವಾಗಿ ಪತ್ರಕರ್ತನಾಗಿದ್ದು 1984ರ ಸೆಪ್ಟೆಂಬರ್ 9ರಂದು. ಅದೇ ದಿನ ಮುಂಗಾರುಪತ್ರಿಕೆ ಬಿಡುಗಡೆಯಾಗಿದ್ದು. ಪತ್ರಿಕೆ ಸೇರುವಾಗಲೂ ವೈಚಾರಿಕವಾಗಿ ನಾನು ಇಂದಿನ ಹಾಗೆ ಇದ್ದರೂ ನನ್ನ ವಿಚಾರಗಳಿಗೆ ಸ್ಪಷ್ಟತೆಯನ್ನು ತಂದುಕೊಟ್ಟಿದ್ದು ಮುಂಗಾರು ಪತ್ರಿಕೆ. ನಾನು ಬದಲಾಗಿದ್ದೇನೆ ಎಂದು ಹೇಳುವವರು ಒಂದೋ ನನ್ನ ಪತ್ರಿಕಾ ಬರವಣಿಗೆಗಳನ್ನು ಮೊದಲಿನಿಂದಲೂ ಓದಿಲ್ಲ ಇಲ್ಲವೆ ಓದಿದ್ದರೂ ಉದ್ದೇಶಪೂರ್ವಕ ಅಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ.
ಬಿಜೆಪಿಯನ್ನೂ ಒಳಗೊಂಡ ಸಂಘಪರಿವಾರವನ್ನು ಸೈದ್ಧಾಂತಿಕವಾಗಿ ವೃತ್ತಿಯ ಮೊದಲ ದಿನದಿಂದಲೇ ನಾನು ವಿರೋಧಿಸುತ್ತಾ ಬಂದವನು. ವಾಜಪೇಯಿಯವರ ಅಸಹಾಯಕತೆ ಮತ್ತು ಅಡ್ವಾಣಿಯವರಿಗೆ ಪಕ್ಷದ ಮಟ್ಟದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಅನುಕಂಪದಿಂದ ಬರೆದಿದ್ದರೂ ಬಿಜೆಪಿ ಎನ್ನುವ ಪಕ್ಷವನ್ನು ಎಂದೂ ಸಮರ್ಥಿಸಿ ಬರೆದಿಲ್ಲ.
ಸನ್ಮಾನ್ಯ ನರೇಂದ್ರ ಮೋದಿಯವರ ಬಗ್ಗೆ 2002ರಿಂದ 2013 ರ ವರೆಗೆ ನಾನು ಬರೆದ ಅಂಕಣಗಳು, ಚುನಾವಣಾ ವರದಿಗಳು, ಪ್ರತ್ಯಕ್ಷದರ್ಶಿ ವರದಿಗಳು ನೂರಕ್ಕೂ ಹೆಚ್ಚು ಇರಬಹುದು. ಯಾವುದರಲ್ಲಿಯೂ ನಾನು ಮೋದಿಯವರನ್ನು ಸಮರ್ಥಿಸಿಲ್ಲ. ಗುಜರಾತ್ ಕೋಮುಗಲಭೆಯ ಪ್ರತ್ಯಕ್ಷದರ್ಶಿ ವರದಿಮಾಡಿದ್ದೆ. ಅವೆಲ್ಲವೂ ಮುಖ್ಯಮಂತ್ರಿಯಾಗಿ ಮೋದಿಯವರ ವೈಫಲ್ಯ ಮತ್ತು ಅವರ ಕೋಮುವಾದಿ ಮನಸ್ಸನ್ನು ಬಯಲುಮಾಡಿರುವಂತಹದ್ದು. ಅಲ್ಲಿನ ಅಭಿವೃದ್ಧಿಮಾದರಿ ಎಷ್ಟೊಂದು ಟೊಳ್ಳು ಎನ್ನುವುದನ್ನೂ ಕೂಡಾ ಬರೆದಿದ್ದೆ.
ಆದರೆ ಪತ್ರಕರ್ತನಾಗಿ ನಾನೆಂದೂ ಆತ್ಮವಂಚನೆ ಮಾಡಿಕೊಂಡು ಸುಳ್ಳು ಹೇಳಿಲ್ಲ, ಓದುಗರನ್ನು ತಪ್ಪುದಾರಿಗೆಳೆದಿಲ್ಲ. ಸುದ್ದಿಯ ವಿಷಯದಲ್ಲಿ ಪಕ್ಷಪಾತ ಮಾಡಿಲ್ಲ. ಇದು ನಾನು ಕೆಲಸಮಾಡಿದ ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಎಬಿವಿಪಿಯ ಹಳೆಯ ಸದಸ್ಯರನ್ನು ಕೇಳಿ ದೃಡಪಡಿಸಿಕೊಳ್ಳಬಹುದು. ಗುಜರಾತ್ ನ ಎರಡು ವಿಧಾನಸಭಾ ಚುನಾವಣೆಗಳು ಮತ್ತು ಒಂದು ಲೋಕಸಭಾ ಚುನಾವಣೆಯ ಸಮೀಕ್ಷೆ ನಡೆಸಿದ್ದೆ. ಆ ಚುನಾವಣೆಗಳಲ್ಲಿ ಮೋದಿಯವರದ್ದೇ ಮೇಲುಗೈ ಎಂದು ಬರೆದಿದ್ದೇನೆ. (ಆಸಕ್ತಿ ಇದ್ದವರು ಪ್ರಜಾವಾಣಿ ಆರ್ಕೈವ್ಸ್ ಗೆ ಹೋಗಿ ಓದಬಹುದು)
ಅಚ್ಚರಿಯ ಸಂಗತಿಯೆಂದರೆ ನಾನು ಆರ್ ಎಸ್ ಎಸ್, ಬಿಜೆಪಿ ಮತ್ತು ನರೇಂದ್ರಮೋದಿಯವರ ಕಟುಟೀಕಾಕಾರನಾಗಿದ್ದರೂ 2012ರ ಜನವರಿ 19ರ ವರೆಗೆ ಯಾವ ಬಿಜೆಪಿ ನಾಯಕರು,ಕಾರ್ಯಕರ್ತರು, ಬೆಂಬಲಿಗರು ನನ್ನನ್ನು ಬಹಿರಂಗವಾಗಿ ಟೀಕಿಸಿರಲಿಲ್ಲ, ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೆ ಯಾರೂ ಬೆದರಿಸಿ ಇಲ್ಲವೇ ಅವಾಚ್ಯವಾಗಿ ಪತ್ರ ಬರೆಯುವುದು, ಪೋನಿನಲ್ಲಿ ಕೆಟ್ಟದಾಗಿ ಬೈಯ್ಯುವುದು, ಸೋಷಿಯಲ್ ಮೀಡಿಯಾದಲ್ಲಿ ಗುದ್ದಿ ಓಡಿಹೋಗುವುದು-ಯಾವುದನ್ನೂ ಮಾಡಿಲ್ಲ.
ಆದರೆ 2012ರ ಜನವರಿ 19ರಂದು ವಿವೇಕಾನಂದರ ಬಗ್ಗೆ ನಾನು ಬರೆದ ಅಂಕಣದ ನಂತರ ಎಲ್ಲವೂ ಬದಲಾಗಿಹೋಯಿತು. ಇವೆಲ್ಲವನ್ನೂ ಪ್ರಾರಂಭಿಸಿದ್ದು, ಪ್ರಚೋದಿಸಿದ್ದು , ಸಂಚನ್ನು ಹೆಣೆದಿದ್ದು ಈಗ ರೇಪಿಸ್ಟ್ ಸ್ವಾಮಿಗಳು, ಕೊಲೆಗಡುಕರನ್ನು ಹುಡುಕಿಕೊಂಡು ಹೋಗಿ ಬೆಂಬಲಿಸುತ್ತಾ ಸುಳ್ಳು ಬೊಗಳುತ್ತಾ ಅಂಡಲೆಯುತ್ತಿರುವ ವಕ್ರಬುದ್ದಿಯ ಸುಳ್ಳುಕೋರ. ಈತನಬೆಂಬಲಕ್ಕೆ ನಿಂತವನು ಈಗ ಮಂಗಳೂರು ಜೈಲಲ್ಲಿದ್ದಾನೆ. ಈ ಕಿಡಿಗೇಡಿ ಜೋಡಿ ಆಗಲೇ ಮೋದಿಬ್ರಿಗೇಡ್ ಹೆಸರಲ್ಲಿ ಯುವಕ-ಯುವತಿಯರ ತಲೆಕೆಡಿಸಿ ಪುಂಡರ ತಂಡವನ್ನು ಕಟ್ಟಿತ್ತು. ಈ ಬ್ರಿಗೇಡಿಗಳು ಆರ್ ಎಸ್ ಎಸ್ ಶಾಖೆಗಳಲ್ಲಿ ತರಬೇತಿಹೊಂದಿದ ಸ್ವಯಂಸೇವಕರೂ ಅಲ್ಲ. ಅವರ ಜತೆಯಲ್ಲಿಯಾದರೂ ಕನಿಷ್ಠ ಒಂದು ಮಾತುಕತೆ-ಚರ್ಚೆ ಸಾಧ್ಯವಿತ್ತು. ಈ ಬ್ರಿಗೇಡಿಗಳ ತಲೆಯಲ್ಲಿ ಇರುವುದು ಸೆಗಣಿ. ಯಾವ ಧರ್ಮ,ಸಂಸ್ಕೃತಿ, ಇತಿಹಾಸದ ಪರಿಚಯವೂ ಇವರಿಗಿಲ್ಲ. ಅಶ್ಲೀಲವಾಗಿ ಬೈಯ್ಯುವುದಷ್ಟೇ ಬಂಡವಾಳ.
ನನ್ನನ್ನು ವಿರೋಧಿಸುತ್ತಿರುವವರ ಗ್ಯಾಂಗ್ ಗೆ ಒಬ್ಬ ಲೀಡರ್ ಇದ್ದಾನೆ. ಈ ಆತ್ಮವಂಚಕ ತಾನು ಪತ್ರಕರ್ತನಾಗಿದ್ದಾಗ, ಅನಂತಕುಮಾರ್, ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ಬಗ್ಗೆ ,ಬಿಜೆಪಿ ಬಗ್ಗೆ, ಪೇಜಾವರ ಮಠದ ಸ್ವಾಮಿಗಳ ಬಗ್ಗೆ ಮನಸಾರೆ ಟೀಕಿಸಿ, ನಿಂದಿಸಿ ಬರೆಯುತ್ತಿದ್ದ. ಪುರಾವೆ ಬೇಕಿದ್ದರೆ ಆತನೇ ಪ್ರಕಟಿಸಿದ ಪುಸ್ತಕಗಳು ಎಲ್ಲಾದರೂರದ್ದಿ ಅಂಗಡಿಯಲ್ಲಿ ಸಿಕ್ಕರೆ ಓದಿಕೊಳ್ಳಿ. ಇಷ್ಟೆಲ್ಲಾ ಆರ್ಭಟಿಸಿದ ಈತ ಕೊನೆಗೆ ಪತ್ರಕರ್ತನಾಗಿ ತಾನು ಟೀಕಿಸಿದ್ದ ನಾಯಕರ ಕಾಲಿಗೆ ಬಿದ್ದು ಸಂಸದನಾದ. ಈಗ ನಿರ್ಲಜ್ಜತೆಯಿಂದ ಅವರನ್ನೇ ಹಾಡಿಹೊಗಳುತ್ತಾ ಉಳಿದವರನ್ನು ಕಾಂಗ್ರೆಸ್ ಏಜಂಟರೆಂದು ಘೀಳಿಡುತ್ತಾ ಅಲೆಯುತ್ತಿದ್ದಾನೆ. ನಾನು ಇಂತಹವನಲ್ಲ.
ಹಾಗಿದ್ದರೆ ನೀವು ಕಾಂಗ್ರೆಸ್ ಪಕ್ಷವನ್ನು ಮೊದಲಿನಂತೆ ಟೀಕಿಸುತ್ತಿಲ್ಲವಲ್ಲಾ ಎಂಬ ಪ್ರಶ್ನೆಯನ್ನು ಯಾರಾದರೂ ಕೇಳಬಹುದು. ಇಂತಹ ಪ್ರಶ್ನೆ ಕೇಳಿದವರನ್ನು ನಾನು ಗೌರವಿಸುತ್ತೇನೆ. ವೈಯಕ್ತಿಕವಾಗಿ ನಾನು ಬಿಜೆಪಿ ಮತ್ತುಕಾಂಗ್ರೆಸ್ ನಿಂದ ಹೊರತಾದ ತೃತೀಯ ಶಕ್ತಿಯ ಪರವಾಗಿ ಇರುವವನು. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷ ಸೇರಿದಾಗ ವ್ಯಥೆಪಟ್ಟವನು. (ಇದನ್ನು ಆ ಸಂದರ್ಭದಲ್ಲಿ ಬರೆದಿದ್ದೇನೆ ಕೂಡಾ). ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ ನಾನು ಕಾಂಗ್ರೆಸ್ ಪರವಾಗಿಯೇ ನಿಂತವನು. ನರೇಂದ್ರಮೋದಿ ಮತ್ತು ಸೋನಿಯಾಗಾಂಧಿ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ ಸೋನಿಯಾಗಾಂಧಿ ಪರವಾಗಿ ಈಗಲೂ ನಿಲ್ಲುವವನು. ಸಿದ್ದರಾಮಯ್ಯ ಮತ್ತು ಬಿಜೆಪಿಯ ನಾಯಕರ ನಡುವಿನ ಆಯ್ಕೆ ಎದುರಾದಾಗ ಸಿದ್ದರಾಮಯ್ಯನವರ ಪರವಾಗಿಯೇ ನಿಲ್ಲುವವನು.
ಬಿಜೆಪಿ ಬಗ್ಗೆ ಯಾಕೆ ವಿರೋಧ ಎಂದು ಕೇಳುವವರಿಗೆ ನನ್ನದೊಂದು ಸರಳ ಉತ್ತರ ಇದೆ. ಇದೊಂದು ಸೈದ್ಧಾಂತಿಕ ಸಂಘರ್ಷ. ಆರ್ ಎಸ್ ಎಸ್ ನಿಯಂತ್ರಣದಿಂದ ಮುಕ್ತಗೊಂಡು ಬಿಜೆಪಿ ಒಂದು ಸಂವಿಧಾನಬದ್ಧ ರಾಜಕೀಯ ಪಕ್ಷವಾಗಿಯೇ ಕಾರ್ಯನಿರ್ವಹಿಸಲು ಶುರುಮಾಡಿದರೆ ಅದನ್ನು ಉಳಿದೆಲ್ಲ ರಾಜಕೀಯ ಪಕ್ಷಗಳ ಜತೆ ನಿಲ್ಲಿಸಿ ಒಳಿತು-ಕೆಡುಕುಗಳನ್ನು ಈಗಲೂ ಚರ್ಚಿಸಲು ನಾನು ಮುಕ್ತಮನಸ್ಸು ಹೊಂದಿದ್ದೇನೆ.
ಇದು ನನ್ನ ಹಿಂದಿನ, ಇಂದಿನ ಮತ್ತು ಮುಂದಿನ ನಿಲುವು. ಇದನ್ನು ಒಪ್ಪದವರೂ ಇರಬಹುದು, ಅವರ ಅಭಿಪ್ರಾಯದ ಬಗ್ಗೆ ನನಗೆ ಗೌರವ ಇದೆ. ಆದರೆ ಪತ್ರಕರ್ತನಾಗಿ ಮೊದಲ ಬಾರಿ ಪೆನ್ನು ಕೈಗೆತ್ತಿಕೊಂಡಾಗ ಸೈದ್ಧಾಂತಿಕವಾಗಿ ನಾನು ಹೇಗಿದ್ದೆನೋ ಈಗಲೂ ಹಾಗೆಯೇ ಇದ್ದೇನೆ. ಕೆಲವರು ನನ್ನನ್ನು ನೋಡುವ ದೃಷ್ಟಿ ಬದಲಾಗಿದೆ. ಅದಕ್ಕೆ ನಾನು ಹೊಣೆಯಲ್ಲ.

No comments:

Post a Comment