Monday, May 30, 2011

ಒಂದು ಕಲ್ಲಿಗೆ ಎರಡು ಹಕ್ಕಿ- ಇದು ಸುಷ್ಮಾ ತಂತ್ರ

`ದೈತ್ಯರ~ ನಿರ್ಗಮನವಾದ ನಂತರ `ಕುಬ್ಜ~ರ ಪಾಲಾದ ಭಾರತೀಯ ಜನತಾ ಪಕ್ಷದಲ್ಲಿ ಇಂತಹದ್ದೊಂದು `ಆಂತರಿಕ ಯುದ್ಧ~ ತೀರಾ ಅನಿರೀಕ್ಷಿತವಾದುದೇನಲ್ಲ.
ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿಯಾಗಿರುವ ಸುಷ್ಮಾ ಸ್ವರಾಜ್ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಅರುಣ್ ಜೇಟ್ಲಿ ನಡುವೆ ಮುಸುಕಿನೊಳಗಿನ ಗುದ್ದಾಟ ಬಹಳ ದಿನಗಳಿಂದಲೇ ನಡೆಯುತ್ತಿತ್ತು, ಈಗ ಬೀದಿಗೆ ಬಂದಿದೆ.
ಸುಷ್ಮಾ ಸ್ವರಾಜ್ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಬಳ್ಳಾರಿಯ ರೆಡ್ಡಿ ಸೋದರರ ಜತೆಗೆ ತನಗೆ ಸಂಬಂಧ ಇಲ್ಲ ಎನ್ನುವುದನ್ನು ಹೊರಜಗತ್ತಿನ ಕಣ್ಣಿಗಾದರೂ ಅವರು ತೋರಿಸಿಕೊಳ್ಳಬೇಕಿತ್ತು, ಇದೇ ವೇಳೆ ಪಕ್ಷದೊಳಗೆ ತನ್ನ ಎದುರಾಳಿಯಾಗಿರುವ ಅರುಣ್ ಜೇಟ್ಲಿ ಮೈಮೇಲೆ ಒಂದಷ್ಟು ಕೆಸರು ಸಿಡಿಸಬೇಕಿತ್ತು. ಈ ಎರಡೂ ಕೆಲಸವನ್ನು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಮಾಡಿ ಮುಗಿಸಿದ್ದಾರೆ.
ರೆಡ್ಡಿ ಸೋದರರ  ಮೇಲಿನ ಅಕ್ರಮ ಗಣಿಗಾರಿಕೆಯ ಆರೋಪದ ಬಗ್ಗೆ ಸುಪ್ರೀಂಕೋರ್ಟ್ ನಡೆಸುತ್ತಿರುವ ವಿಚಾರಣೆಯ ಉರುಳು ದಿನದಿಂದ ದಿನಕ್ಕೆ ಬಿಗಿಗೊಳ್ಳುತ್ತಿದೆ. ಸಿಬಿಐ ಕೂಡಾ ಬೆನ್ನು ಹತ್ತಿದೆ.
ಇದೇ ಕಾಲಕ್ಕೆ ಸರಿಯಾಗಿ ಕರ್ನಾಟಕದ ಲೋಕಾಯುಕ್ತರು ಅಕ್ರಮ ಗಣಿಗಾರಿಕೆ ಬಗ್ಗೆ ಅಂತಿಮ ವರದಿ ಸಲ್ಲಿಸುವ ತಯಾರಿಯಲ್ಲಿದ್ದಾರೆ. ಅದರಲ್ಲೇನಾದರೂ ರೆಡ್ಡಿ ಸೋದರರು ಸಿಕ್ಕಿಹಾಕಿಕೊಂಡರೆ ಅವರ ಪಾಲಿಗೆ `ಅಮ್ಮ~ನಾಗಿರುವ ಸುಷ್ಮಾ ಸ್ವರಾಜ್ ಮೇಲೆ ಕಾಂಗ್ರೆಸ್ ಎರಗಿಬೀಳುವುದು ಖಂಡಿತ. ಅಂತಹ ಸಂದರ್ಭದಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಅವರು ಮುಜುಗರದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು.
ಈ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ `ನಿರೀಕ್ಷಣಾ ಜಾಮೀನು~ ಪಡೆಯುವ ರೀತಿಯಲ್ಲಿ ರೆಡ್ಡಿ ಸೋದರರ ಜತೆಗಿನ ತಮ್ಮ ಸಂಬಂಧವನ್ನು ಕಡಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಹೆಚ್ಚು ಕಡಿಮೆ ಕಳೆದ 10-12 ವರ್ಷಗಳಿಂದ ಈ `ಅಮ್ಮ-ಮಕ್ಕಳ~ ಸಂಬಂಧ ನೋಡುತ್ತಾ ಬಂದವರು ಸುಲಭದಲ್ಲಿ ಸುಷ್ಮಾ ಅವರ ಬದಲಾದ ನುಡಿಯನ್ನು ಒಪ್ಪಲಾರರು.  ಆದರೆ ಆರೋಪ ಎದುರಾದ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಸುಷ್ಮಾ ಈ ಹೇಳಿಕೆಯನ್ನು ಬಳಸಿಕೊಳ್ಳಲು ಅಡ್ಡಿಯೇನು ಇಲ್ಲವಲ್ಲ?
ರೆಡ್ಡಿ ಸೋದರರ ಬಗ್ಗೆಯಷ್ಟೇ ಸುಷ್ಮಾ ಮಾತನಾಡಿದ್ದರೆ ಅದೇನು ದೊಡ್ಡ ಸುದ್ದಿಯಾಗುತ್ತಿರಲಿಲ್ಲ, ಆದರೆ ಅವರು ತನ್ನ ಬಿಚ್ಚುಮಾತುಗಳನ್ನು ಅಷ್ಟಕ್ಕೆ ನಿಲ್ಲಿಸದೆ ಅರುಣ್ ಜೇಟ್ಲಿ ಅವರನ್ನು ವಿವಾದದ ಮೈದಾನಕ್ಕೆ ಎಳೆದು ತಂದಿದ್ದಾರೆ. ಮೇಲ್ನೋಟಕ್ಕೆ ಇವರಿಬ್ಬರ ನಡುವಿನ ಸಂಘರ್ಷಕ್ಕೆ ಕಾರಣಗಳೇನು ಕಾಣುತ್ತಿಲ್ಲ.

ಸೋತ ರಾಜಕೀಯ ಪಕ್ಷದ ಪಾಲಿಗೆ ಇರುವ ಏಕೈಕ ಅಧಿಕಾರದ ಸ್ಥಾನ ವಿರೋಧಪಕ್ಷದ ನಾಯಕತ್ವ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿರುವ ಈ ಸ್ಥಾನಗಳನ್ನು ಸುಷ್ಮಾ ಮತ್ತು ಜೇಟ್ಲಿ ಹಂಚಿಕೊಂಡಿದ್ದಾರೆ. ಅವರಿಬ್ಬರೂ ಇಚ್ಚಿಸಿದರೂ ಒಬ್ಬರು ಮತ್ತೊಬ್ಬರ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಸಾಧ್ಯ ಇಲ್ಲ. ಅದಕ್ಕಿಂತ ದೊಡ್ಡ ಸ್ಥಾನಕ್ಕೇರಬೇಕೆಂದರೂ ಅಲ್ಲಿ ಈಗ ಯಾವುದೂ ಇಲ್ಲ. ಹೀಗಿದ್ದರೂ ಸುಷ್ಮಾ ಸ್ವರಾಜ್ ಕಾಲು ಕೆರೆದು ಯಾಕೆ ಜಗಳಕ್ಕಿಳಿದಿದ್ದಾರೆ?
ಮುಂದಿನ ಲೋಕಸಭಾ ಚುನಾವಣೆಯ ನಂತರ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಕನಸೇನಾದರೂ ಅವರಿಗೆ ಬಿದ್ದಿದೆಯೇ? ಭ್ರಷ್ಟಾಚಾರದ ಹಗರಣಗಳಿಂದ ಮುಳುಗಿಹೋಗಿರುವ ಯುಪಿಎ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂತಹದ್ದೊಂದು ಕನಸು ಅವರಿಗೆ ಬಿದ್ದಿರಲೂ ಬಹುದು.
ಸುಷ್ಮಾ-ಜೇಟ್ಲಿ ಜಟಾಪಟಿ ಕೇವಲ ಅವರಿಬ್ಬರಿಗೆ ಸಂಬಂಧಿಸಿದ ವೈಯುಕ್ತಿಕ ವಿಷಯ ಅಲ್ಲ. ಅದರಲ್ಲಿ ಬಿಜೆಪಿಯ ಭವಿಷ್ಯದ ಬಿಕ್ಕಟ್ಟು ಕೂಡಾ ಅಡಗಿದೆ. ಬಿಜೆಪಿಯೊಳಗಿನ ನಾಯಕರ ನಡುವಿನ ತಿಕ್ಕಾಟ ಕಳೆದ ಲೋಕಸಭಾ ಚುನಾವಣೆಯಲ್ಲಿನ ಸೋಲಿನೊಂದಿಗೆ ಪ್ರಾರಂಭವಾಗಿತ್ತು. ಆ ಸೋಲು ಕಾಂಗ್ರೆಸ್‌ಪಕ್ಷಕ್ಕಿಂತ ಕೇವಲ 22 ಸ್ಥಾನಗಳು ಮತ್ತು ಶೇಕಡಾ 2.87ರಷ್ಟು ಮತಗಳನ್ನು ಕಡಿಮೆ ಪಡೆದುದಷ್ಟೇ ಅಲ್ಲ, ಅದಕ್ಕಿಂತಲೂ ದೊಡ್ಡದು.
ಯಾಕೆಂದರೆ ಸೋಲಿನ ಕಾಲಕ್ಕೆ ಸರಿಯಾಗಿ ಕಳೆದ 60 ವರ್ಷಗಳಲ್ಲಿ ಪಕ್ಷವನ್ನು (ಮೊದಲು ಜನಸಂಘ, ನಂತರ ಬಿಜೆಪಿ) ಕಟ್ಟಿ ಬೆಳೆಸಿ ಮುನ್ನಡೆಸಿದ್ದ ಇಬ್ಬರು ದೈತ್ಯ ನಾಯಕರಲ್ಲಿ ಒಬ್ಬರಾದ ಅಟಲಬಿಹಾರಿ ವಾಜಪೇಯಿ ರಾಜಕೀಯದಿಂದ ನಿವೃತ್ತಿಯಾದರು.
ಮತ್ತೊಬ್ಬ ನಾಯಕರಾದ ಲಾಲ್‌ಕೃಷ್ಣ ಅಡ್ವಾಣಿಯವರು  ಒಂದಷ್ಟು ದಿನ ವಿರೋಧಪಕ್ಷದ ನಾಯಕರಾಗಿ ಮುಂದುವರಿದರೂ ಕೊನೆಗೂ ಆ ಸ್ಥಾನವನ್ನು ಬಿಟ್ಟುಕೊಟ್ಟು ಪಕ್ಕಕ್ಕೆ ಸರಿಯಬೇಕಾಯಿತು. ಬಿಜೆಪಿಯನ್ನು ಬೆಂಬಲಿಸುತ್ತಾ ಬಂದ ಮತದಾರರು ಈ ಎರಡು ಜನಪ್ರಿಯ ಮುಖಗಳನ್ನು ಮರೆತು ಆ ಪಕ್ಷವನ್ನು ಕಲ್ಪಿಸಿಕೊಳ್ಳುವುದು ಕೂಡಾ ಕಷ್ಟ.
ಇದರ ಜತೆಯಲ್ಲಿಯೇ ಇವರಿಬ್ಬರ ಉತ್ತರಾಧಿಕಾರಿಯೆಂದು ವಾಜಪೇಯಿ ಅವರಿಂದಲೇ ಘೋಷಿಸಲ್ಪಟ್ಟ ಪ್ರಮೋದ್ ಮಹಾಜನ್ ಕೂಡಾ ಅಕಾಲ ಸಾವಿಗೀಡಾದರು. ಈ ರೀತಿ ಮೊದಲ ಸಾಲಿನ ಮೂವರು ನಾಯಕರನ್ನು ಕೆಲವೇ ವರ್ಷಗಳ ಅವಧಿಯಲ್ಲಿ ಬಿಜೆಪಿ ಕಳೆದುಕೊಳ್ಳುವಂತಾಯಿತು.
ಯಾವಾಗಲೂ ಸೋತಪಕ್ಷಗಳ ಮುಂದಿರುವುದು ಯುದ್ಧಕಾಲ, ವಿಶ್ರಾಂತಿಯದ್ದಲ್ಲ.ಎರಡು ಸ್ಥಾನಗಳಷ್ಟೆ ಗಳಿಸಿದ 1984ರ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಬಹುಎತ್ತರಕ್ಕೆ ಬೆಳೆಯಿತೆನ್ನುವುದು ನಿಜ.

ಆದರೆ ಆ ಕಾಲದಲ್ಲಿ ಪಕ್ಷವನ್ನು ಮುನ್ನಡೆಸಲು ಅಟಲಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿಯವರಂತಹ ಸೇನಾಪತಿಗಳಿದ್ದರು. ಜತೆಗೆ ಕ್ಷಣಾರ್ಧದಲ್ಲಿ ಯುದ್ಧದ ದಿಕ್ಕನ್ನೇ ಬದಲಿಸಬಲ್ಲ `ಹಿಂದುತ್ವ~ ಎಂಬ ಸ್ಪೋಟಕ ಅಜೆಂಡಾ ಇತ್ತು.
ಸೈನಿಕರಂತೆ ನಿಸ್ವಾರ್ಥದಿಂದ ದುಡಿಯಬಲ್ಲ ಪರಿವಾರದ ಸದಸ್ಯರಿದ್ದರು. ಅಡ್ವಾಣಿ ಅವುಗಳನ್ನೆಲ್ಲ ಜಾಣ್ಮೆ ಮತ್ತು ಪರಿಶ್ರಮದಿಂದ ಬಳಸಿಕೊಂಡರು. ಅದರ ಫಲವೇ 1998ರಲ್ಲಿ ಸಿಕ್ಕ ಅತ್ಯುತ್ತಮ ಫಲಿತಾಂಶ- 182 ಸ್ಥಾನ ಮತ್ತು ಶೇಕಡಾ 25.59ರಷ್ಟು ಮತ. ಅದು ಬಿಜೆಪಿಯ ಶಿಖರ ಸಾಧನೆ.
ಆದರೆ ಈಗ ಆ ನಾಯಕರು ಮರೆಗೆ ಸರಿದಿದ್ದಾರೆ, ಅಧಿಕಾರದಲ್ಲಿದ್ದ ದಿನಗಳಲ್ಲಿನ ಪಕ್ಷದ ಆತ್ಮವಂಚನೆಯ ರಾಜಕೀಯದಿಂದಾಗಿ `ಹಿಂದುತ್ವ~ ಅಜೆಂಡಾ ತನ್ನ ಸ್ಪೋಟಕ ಗುಣವನ್ನು ಕಳೆದುಕೊಂಡಿದೆ. `ವಲಸೆ ಬಂದವರ~ ಪ್ರವಾಹದಲ್ಲಿ ಪಕ್ಷದ ನಿಷ್ಠಾವಂತ ಕಾರ‌್ಯಕರ್ತರು ಕೊಚ್ಚಿಕೊಂಡು ಹೋಗುತ್ತಿದ್ದಾರೆ.

ಇಂತಹ ಕಾಲದಲ್ಲಿ ಹೊಸಕಾಲ ಮತ್ತು ಹೊಸ ಜನಾಂಗದ ಆಶೋತ್ತರಗಳಿಗೆ ತಕ್ಕಂತೆ ಪಕ್ಷವನ್ನು ಮುರಿದುಕಟ್ಟುವ ನಾಯಕತ್ವ ಬಿಜೆಪಿಯ ಇಂದಿನ ಅಗತ್ಯ. ಇಂತಹ ಕಾಲದಲ್ಲಿ ಬಿಜೆಪಿಯ ಹಳೆಯ ಸೇನಾಪತಿಗಳು ರಣರಂಗದಿಂದ ನಿರ್ಗಮಿಸಿದ್ದಾರೆ, ಹೊಸಬರು ಬೀದಿ ಜಗಳಕ್ಕೆ ಇಳಿದಿದ್ದಾರೆ.
ವಾಜಪೇಯಿ, ಅಡ್ವಾಣಿ ಮತ್ತು ಮಹಾಜನ್ ಇವರಲ್ಲಿ ಒಬ್ಬರಿದ್ದರೂ ಬಿಜೆಪಿ ಸ್ಥಿತಿ ಇಂದಿನಷ್ಟು ಶೋಚನೀಯವಾಗಿ ಇರುತ್ತಿರಲಿಲ್ಲ. ಇನ್ನೊಂದು ರೀತಿಯಲ್ಲಿ ಇದು ಭವಿಷ್ಯದ ನಾಯಕರನ್ನು ಬೆಳೆಸಲಾಗದ ಹಿರಿಯರ ವೈಫಲ್ಯವೂ ಹೌದು.
ಈಗ ಉಳಿದಿರುವವರು ನರೇಂದ್ರಮೋದಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್‌ಸಿಂಗ್, ಮುರಳಿಮನೋಹರ ಜೋಷಿ, ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು, ಅನಂತಕುಮಾರ್ ಮೊದಲಾದವರು. ಇವರಲ್ಲಿ ಜನಪ್ರಿಯತೆಯಲ್ಲಿ ಎಲ್ಲರಿಗಿಂತಲೂ ಮುಂದೆ ಇರುವವರು ನರೇಂದ್ರಮೋದಿ.

ಆದರೆ ಆಗಲೇ ನ್ಯಾಯಾಲಯದಲ್ಲಿನ ಮೊಕದ್ದಮೆಗಳು, ಸಿಬಿಐ ತನಿಖೆ ಮತ್ತು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಮೋದಿ, ಮುಂದಿನ ದಿನಗಳಲ್ಲಿ ತನ್ನ ತಲೆ ಉಳಿಸಿಕೊಂಡರೆ ಸಾಕಾಗಿದೆ.
ಒಂದೊಮ್ಮೆ ಅವರು ಉಳಿದುಕೊಂಡರೂ ಬಿಜೆಪಿ ಸ್ವಂತ ಬಲದಿಂದ ಸರ್ಕಾರ ರಚಿಸುವಷ್ಟು ಬಹುಮತ ಗಳಿಸಿದರೆ ಮಾತ್ರ ಮೋದಿ ನಾಯಕತ್ವ ವಹಿಸಲು ಸಾಧ್ಯ.ಉಗ್ರಹಿಂದೂವಾದದ ಅವರ ಹಿನ್ನೆಲೆಯಿಂದಾಗಿ ಮೈತ್ರಿಕೂಟದ ನಾಯಕರಾಗುವುದು ಅವರಿಂದ ಸಾಧ್ಯವಾಗದು. ಬೇರೆ ಪಕ್ಷಗಳು ಮೋದಿ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದೆ ಬರಲಾರವು.
ರಾಜನಾಥ್‌ಸಿಂಗ್ ಅವರಲ್ಲಿ ಮಹತ್ವಾಕಾಂಕ್ಷೆ ಇದ್ದರೂ ಉತ್ತರಪ್ರದೇಶದಲ್ಲಿಯೇ ಅವರನ್ನು ಕೇಳುವವರಿಲ್ಲ. ಉತ್ತಮ ಸಂಘಟಕ ಇಲ್ಲವೇ ಆಡಳಿತಗಾರನೆಂದೂ ಅವರು ಹೆಸರು ಪಡೆದಿಲ್ಲ. ಆರ್‌ಎಸ್‌ಎಸ್ ಬೆಂಬಲ ಇದ್ದರೂ ರಾಷ್ಟ್ರೀಯ ನಾಯಕನಾಗಲು ಬೇಕಾದ ರಾಷ್ಟ್ರಮಟ್ಟದ ಜನಪ್ರಿಯತೆ ಅವರಿಗಿಲ್ಲ.
ಮುರಳಿಮನೋಹರ ಜೋಷಿ ಅವರು ಆರ್‌ಎಸ್‌ಎಸ್ ಕಣ್ಮಣಿ. ವಾಜಪೇಯಿ ಮತ್ತು ಅಡ್ವಾಣಿ ನಾಯಕತ್ವದ ನಂತರ `ಮೂರನೇ ಶಕ್ತಿ~ಯಾಗಿ ತಮ್ಮನ್ನು ಬಿಂಬಿಸಿಕೊಳ್ಳಲು ಅವರು ಎನ್‌ಡಿಎ ಅಧಿಕಾರವಧಿಯಲ್ಲಿ ಪ್ರಯತ್ನಪಟ್ಟು ವಿಫಲಗೊಂಡವರು. ವಯಸ್ಸು ಕೂಡಾ ಅವರ ಪರವಾಗಿಲ್ಲ.
ಬಿಜೆಪಿ ಈ ವರೆಗೆ ಕಂಡ ಅತ್ಯಂತ ದುರ್ಬಲ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ.ಆರ್‌ಎಸ್‌ಎಸ್ ಅವರನ್ನು ಎಷ್ಟೇ ಎತ್ತಿಹಿಡಿದರೂ ಎತ್ತರದ ಸ್ಥಾನದಲ್ಲಿ ಅವರನ್ನು ಆ ಪಕ್ಷದ ಅಭಿಮಾನಿಗಳು ಕೂಡಾ ಕಲ್ಪಿಸಿಕೊಳ್ಳಲಾರರು. ವೆಂಕಯ್ಯನಾಯ್ಡು ಅವರ ಶಕ್ತಿ ಎಂದರೆ ದೊಡ್ಡ ಬಾಯಿ. ತನ್ನ ರಾಜ್ಯದಲ್ಲಿಯೇ ನೆಲೆ ಇಲ್ಲದ ನಾಯ್ಡು, ಅವಧಿಗೆ ಮುನ್ನವೇ ನಿವೃತ್ತಿಯ ಅಂಚಿನಲ್ಲಿರುವವರು.

ಲಾಲ್‌ಕೃಷ್ಣ ಅಡ್ವಾಣಿ ಅವರ ಅಖಂಡ ಬೆಂಬಲದ ಹೊರತಾಗಿಯೂ ಸಂಸತ್‌ನ ಒಳಗೆ ಇಲ್ಲವೇ ಹೊರಗೆ ಒಬ್ಬ ಸಮರ್ಥನಾಯಕನಾಗಿ ಅನಂತಕುಮಾರ್ ತಮ್ಮನ್ನು ರೂಪಿಸಿಕೊಳ್ಳಲೇ ಇಲ್ಲ. ಇದರಿಂದಾಗಿ ಪಕ್ಷದಲ್ಲಿಯೇ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಉಳಿದಿರುವವರು ಇಬ್ಬರು- ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್. ಆರ್‌ಎಸ್‌ಎಸ್ ಹಿನ್ನೆಲೆ ಇಲ್ಲದೆ ಬಿಜೆಪಿಯಲ್ಲಿ ಉನ್ನತ ಸ್ಥಾನಕ್ಕೇರಿದ ಮೊದಲ ನಾಯಕಿ ಸುಷ್ಮಾ. ಸಂಘ ಪರಿವಾರದ ಪೂರ್ಣಬೆಂಬಲ ಅವರಿಗೆ ಈಗಲೂ ಇಲ್ಲ. ಈ ಕಾರಣದಿಂದಾಗಿಯೇ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುವ ಅವಕಾಶವನ್ನು ಕಳೆದುಕೊಂಡಿರುವುದು.
ಸುಷ್ಮಾ ಬುದ್ದಿವಂತ ಮಹಿಳೆ,ಆದರೆ ಅವರು ಶತ್ರುವನ್ನು ನಾಲಿಗೆಯಲ್ಲಿಯೇ ಇಟ್ಟುಕೊಂಡಿದ್ದಾರೆ. `ಸೋನಿಯಾಗಾಂಧಿ ಪ್ರಧಾನಿಯಾದರೆ ತಲೆಬೋಳಿಸಿಕೊಳ್ಳುತ್ತೇನೆ~ ಎಂದು ಕೇವಲ ಪ್ರಚಾರಕ್ಕಾಗಿ ಹೇಳಿ ಜನರ ಕಣ್ಣಿನಲ್ಲಿ ಅಗ್ಗವಾದವರು ಸುಷ್ಮಾ.
ಈಗಲೂ ಅವರು ಲೋಕಸಭೆಯಲ್ಲಿ ಮಾತನಾಡಿದರೆ ಬೆಳಕಿಗಿಂತ ಶಾಖವೇ ಹೆಚ್ಚು.ಸುಷ್ಮಾ ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿಯಾಗಿದ್ದು ಕೂಡಾ ಅನಿವಾರ‌್ಯವಾಗಿ ಸೃಷ್ಟಿಯಾದ ಅವಕಾಶದಿಂದಾಗಿ.ಜಸ್ವಂತ್‌ಸಿಂಗ್ ಆಗಲೇ ಪಕ್ಷದಿಂದ ಹೊರಟುಹೋಗಿದ್ದರು, ಮುರಳಿಮನೋಹರ ಜೋಷಿ ಅವರಿಗೆ ವಯಸ್ಸು ಅಡ್ಡಿಯಾಗಿತ್ತು. ಅನಂತಕುಮಾರ್ ನಾಯಕತ್ವದ ಮೇಲೆ ಅವರ ಪಕ್ಷದಲ್ಲಿಯೇ ವಿಶ್ವಾಸ ಇರಲಿಲ್ಲ. ಹೀಗಾಗಿ ಸುಷ್ಮಾ ಅನಿವಾರ‌್ಯವಾದರು.

ಅಧಿಕಾರದ ಸ್ಥಾನವೇ ಹಾಗೆ, ಅಲ್ಲಿ ಕೂತವನನ್ನು ಮಹತ್ವಾಕಾಂಕ್ಷಿಯನ್ನಾಗಿ ಮಾಡುತ್ತದೆ. ಆಗ ಕಣ್ಣೆದುರಿಗೆ ಕಾಣುವ ಎದುರಾಳಿಗಳನ್ನು ಹಣಿದುಹಾಕಲು ಮನಸ್ಸು ಹೊಂಚುಹಾಕುತ್ತಿರುತ್ತದೆ. ಹಿಂದೆ ಅರುಣ್ ಜೇಟ್ಲಿ ಸ್ನೇಹಿತರಾದ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ವಿರುದ್ಧ ಟೀಕಾಪ್ರಹಾರ ಮಾಡಿದ್ದ ಸುಷ್ಮಾ ಈಗ ಜೇಟ್ಲಿ ಕಡೆ ಬಾಣ ಬಿಟ್ಟಿದ್ದಾರೆ.
ಜೇಟ್ಲಿ ಎಂದೂ ನೇರಚುನಾವಣೆ ಎದುರಿಸಿದವರಲ್ಲ, ಇದರಿಂದಾಗಿ ಅವರಿಗೆ ನಿಶ್ಚಿತ ನೆಲೆ ಎಂಬುದಿಲ್ಲ. ಸಾಮಾನ್ಯ ಕಾರ‌್ಯಕರ್ತರ ಜತೆ ಅವರ ಸಂಪರ್ಕ ಅಷ್ಟಕಷ್ಟೇ.
ಸೂತ್ರಧಾರರಾಗಿಯೇ ಯಶಸ್ಸು ಗಳಿಸಿರುವ ಅವರು ಪಾತ್ರಧಾರಿಯಾಗಿ ಜನಪ್ರಿಯರಾಗಿಲ್ಲ. ಆದರೆ ಜೇಟ್ಲಿ ಎಬಿವಿಪಿ ಮೂಲಕ ರಾಜಕೀಯ ಪ್ರವೇಶಿಸಿದವರು.
ಇದರಿಂದಾಗಿ ಸಂಘಪರಿವಾರದ ಬೆಂಬಲ ಇದೆ. ವೃತ್ತಿಯಲ್ಲಿ ಯಶಸ್ವಿ ವಕೀಲ, ರಾಜಕೀಯ ತಂತ್ರಗಳನ್ನು ಹೆಣೆಯುವುದರಲ್ಲಿ ಮಾತ್ರವಲ್ಲ ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಪಕ್ಷವನ್ನು ಸಮರ್ಥಿಸಿಕೊಳ್ಳಬಲ್ಲ ಸಾಮರ್ಥ್ಯ ಹೊಂದಿದವರು.
ಇವೆಲ್ಲಕ್ಕಿಂತಲೂ ಮೇಲಾಗಿ ಕೈ-ಬಾಯಿ ಸ್ವಚ್ಚವಾಗಿಟ್ಟುಕೊಂಡ ಕ್ಲೀನ್ ಇಮೇಜ್ ಜೇಟ್ಲಿಯವರಿಗಿದೆ. ಸುಷ್ಮಾ ಸ್ವರಾಜ್ ನಾಯಕತ್ವದ ಸಾಮರ್ಥ್ಯ ಹೊಂದಿರುವ ಮಹಿಳೆ.ಆದರೆ ರೆಡ್ಡಿ ಸೋದರರ ತಲೆ ಮೇಲೆ ಕೈ ಇಟ್ಟ ನಂತರ ಅದು ಮಲಿನಗೊಂಡಿದೆ.
ಇದರಿಂದಾಗಿಯೇ ನಾಯಕತ್ವದ ಓಟದಲ್ಲಿ ಜೇಟ್ಲಿ ಒಂದು ಹೆಜ್ಜೆ ಮುಂದಿದ್ದಾರೆ. ಹಿಂದೆ ಉಳಿದವರಿಗೆ ಮುಂದೆ ಹೋದವರನ್ನು ಹಿಂದಕ್ಕೆ ತಳ್ಳಲು ಇರುವ ಏಕೈಕ ದಾರಿ ಎಂದರೆ ಕಾಲೆಳೆದು ಬೀಳಿಸುವುದು. ಸುಷ್ಮಾ ಆ ಪ್ರಯತ್ನವನ್ನೇ ಮಾಡಿರುವುದು.