Saturday, August 29, 2015

ಇದು ಮೀಸಲಾತಿ ವಿರೋಧಿ ಚಳವಳಿ - ಅಂತರಂಗದ ವಿರೋಧ ಬೇರೆ ಬೇರೆ ಬಗೆಯ ಸಂಚಿನ ರೂಪಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ

ಬಹಿರಂಗವಾಗಿ ವಿರೋಧಿಸಲಾಗದ್ದನ್ನು ಅಂತರಂಗದ ಹುನ್ನಾರದ ಮೂಲಕ ನಾಶಪಡಿಸಲೆತ್ನಿಸುವುದು ಎಲ್ಲ ಕಾಲ-ದೇಶಗಳ ಸಂಚುಕೋರರ ಮೊಡಸ್ ಅಪರೆಂಡಿ. ಸಾಮಾಜಿಕ ನ್ಯಾಯದ ಪ್ರಮುಖ ಅಸ್ತ್ರವಾದ ಮೀಸಲಾತಿ ವಿರುದ್ಧ ಇಂತಹದ್ದೊಂದು ಸಂಚು ಗುಜರಾತ್ ರಾಜ್ಯದ ಪಟೇಲರ ಚಳವಳಿಯಲ್ಲಿ ಕಾಣಬಹುದು. ಮೀಸಲಾತಿ ನೀತಿಯನ್ನು ದೇಶದ ಯಾವ ರಾಜಕೀಯ ಪಕ್ಷ ಕೂಡಾ ಇಂದು ಬಹಿರಂಗವಾಗಿ ವಿರೋಧಿಸುವ ಸ್ಥಿತಿಯಲ್ಲಿಲ್ಲ.

ಮಂಡಲ್ ವರದಿಯ ಅನುಷ್ಠಾನವನ್ನು ವಿರೋಧಿಸಿ ಮೈಗೆ ಬೆಂಕಿ ಹಚ್ಚಿಕೊಂಡವರು ಮತ್ತು ಅವರನ್ನು ಬೆಂಬಲಿಸಿದ್ದ ಪಕ್ಷ-ಪರಿವಾರಗಳ ಅಂತರಂಗದ ಚಡಪಡಿಕೆ ಏನೇ ಇರಲಿ ಅವುಗಳು ಬಹಿರಂಗವಾಗಿ ಮೀಸಲಾತಿಯನ್ನು ಸಮರ್ಥಿಸಲೇಬೇಕಾದ ಸ್ಥಿತಿಯಲ್ಲಿವೆ. ಸಂಸತ್‌ನಲ್ಲಿಯೂ ಯಾವ ಜನಪ್ರತಿನಿಧಿಯೂ ಮೀಸಲಾತಿ ವಿರುದ್ಧ ಸೊಲ್ಲೆತ್ತುವ ಸ್ಥಿತಿಯಲ್ಲಿಲ್ಲ. ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಆತ್ಮ ತಣ್ಣಗಿರಲಿ. ತಕ್ಷಣದ ರಾಜಕೀಯ ಉದ್ದೇಶ ಏನೇ ಇದ್ದರೂ ವಿ.ಪಿ.ಸಿಂಗ್, ಮಂಡಲ್ ವರದಿ ಆಧಾರದಲ್ಲಿ ಹಿಂದುಳಿದ ಜಾತಿಗಳಿಗೆ ಶಿಕ್ಷಣ- ಉದ್ಯೋಗದಲ್ಲಿ ಮೀಸಲಾತಿಯನ್ನು ಘೋಷಿಸಿದ ನಂತರ ಈ ವರ್ಗದಲ್ಲಿ ಮೂಡಿದ ಜಾಗೃತಿ ಮತ್ತು ಗಳಿಸಿಕೊಂಡ ಶಕ್ತಿ ದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಚಿತ್ರವನ್ನೇ ಬದಲಾಯಿಸಿರುವುದು ನಿಜ.
ಆದರೆ ಬಹಿರಂಗವಾಗಿ ಮೀಸಲಾತಿಯನ್ನು ಸಮರ್ಥಿಸುವವರೆಲ್ಲರೂ ಅಂತರಂಗದಲ್ಲಿ ಮೀಸಲಾತಿಯನ್ನು ಒಪ್ಪಿಕೊಂಡಿದ್ದಾರೆಂದು ಹೇಳುವ ಹಾಗಿಲ್ಲ. ಇಂತಹ ಅಂತರಂಗದ ವಿರೋಧ  ಬೇರೆ ಬೇರೆ ಬಗೆಯ ಸಂಚಿನ ರೂಪಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ. ಮೀಸಲಾತಿಯನ್ನು ಗೇಲಿ, ಅಪಹಾಸ್ಯ ಮಾಡಿ ಅದರ ಫಲಾನುಭವಿಗಳೇ ಕೀಳರಿಮೆಯಿಂದ ಬಳಲುವಂತೆ ಮಾಡಿ ಅವರೇ ಮೀಸಲಾತಿ ವಿರೋಧಿಸುವಂತೆ ಮಾಡುವುದು ಸಂಚಿನ ಒಂದು ಭಾಗವಾದರೆ, ಮೀಸಲಾತಿ ನೀತಿಯ ಸುತ್ತ ವಿವಾದದ ದೂಳೆಬ್ಬಿಸಿ ನೋಡುವವರ ಕಣ್ಣು ಕುರುಡುಗೊಳಿಸಿ, ಅದರ ವಿರುದ್ಧ ಜನರನ್ನು ಎತ್ತಿಕಟ್ಟುವುದು ಸಂಚಿನ ಇನ್ನೊಂದು ಭಾಗ. ಗುಜರಾತಿನಲ್ಲಿ ಪಟೇಲರು ಮೀಸಲಾತಿಗಾಗಿ ನಡೆಸುತ್ತಿರುವ ಚಳವಳಿಯಲ್ಲಿಯೂ ಎರಡನೇ ಬಗೆಯ ಸಂಚಿನ ನೆರಳಿದೆ.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಹೀಗೆ ಯಾವ ಕೋನದಲ್ಲಿಟ್ಟು ನೋಡಿದರೂ ಗುಜರಾತಿನ ಪಟೇಲ್ ಸಮುದಾಯ ಹಿಂದುಳಿದ ವರ್ಗದ ಸಮೀಪ ಸುಳಿಯಲಾರದು. ಆ ರಾಜ್ಯದ ಜನಸಂಖ್ಯೆಯ ಶೇ ೧೫ರಷ್ಟಿರುವ ಪಟೇಲರು ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ಬಲಾಢ್ಯರು. ಆ ರಾಜ್ಯದ ಎಣ್ಣೆ ಗಿರಣಿಗಳು, ಉದ್ಯಮಗಳು, ಸೂರತ್‌ನ ವಜ್ರ ವ್ಯಾಪಾರ- ಎಲ್ಲೆಡೆ ಪಟೇಲರದ್ದೇ ಕಾರುಬಾರು. ಅಮೆರಿಕ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಸೇರಿದಂತೆ ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರಲ್ಲಿಯೂ ಇವ ರದ್ದೇ ಬಹುಸಂಖ್ಯೆ. ಮೂಲತಃ ಇವರು ಭೂಮಾಲಕರು.
ಮಾಧವ ಸಿನ್ಹಾ ಸೋಲಂಕಿ ನೇತೃತ್ವದ ಸರ್ಕಾರದ ಅವಧಿಯನ್ನು ಹೊರತುಪಡಿಸಿದರೆ ರಾಜಕೀಯದಲ್ಲಿಯೂ ಇವರದ್ದೇ ಪಾರಮ್ಯ. ಈಗಿನ ವಿಧಾನಸಭೆಯಲ್ಲಿನ ೧೮೨ ಶಾಸಕರಲ್ಲಿ ೪೪ ಮಂದಿ ಪಟೇಲರು, ೨೬ ಲೋಕಸಭಾ ಸದ ಸ್ಯರಲ್ಲಿ ಐವರು  ಪಟೇಲರು, ಮೂವರು ಸಂಪುಟ ಸಚಿವರು, ನಾಲ್ವರು ರಾಜ್ಯ ಸಚಿವರು ಜತೆಗೆ ಮುಖ್ಯಮಂತ್ರಿ ಸ್ಥಾನ. ಉದ್ಯಮ, ಕೃಷಿ, ರಾಜಕೀಯ ಕ್ಷೇತ್ರಗಳಲ್ಲಿ ಈ ಮಟ್ಟದ ಆಧಿಪತ್ಯ ಹೊಂದಿರುವ ಮತ್ತೊಂದು ಜಾತಿಯನ್ನು ದೇಶದಲ್ಲೆಲ್ಲೂ ಕಾಣಲು ಸಾಧ್ಯವಿಲ್ಲ. ಈಗ ಇವರಿಗೆ ಮೀಸಲಾತಿ ಬೇಕಂತೆ.
ಒಂದು ಕಾಲದಲ್ಲಿ ಗುಜರಾತ್ ರಾಜಕೀಯ, ಪಟೇಲರ ಆಡುಂಬೊಲವಾಗಿತ್ತು. ಅದನ್ನು ಮುರಿದವರು ಗುಜರಾತ್ ರಾಜ್ಯದ ‘ದೇವರಾಜ ಅರಸು’ ಎಂದು ಕರೆಸಿಕೊಳ್ಳುವ ಮಾಧವ ಸೋಲಂಕಿ. ಅವರು ಆ ರಾಜ್ಯದ ಹಿಂದುಳಿದವರನ್ನೆಲ್ಲ ಒಗ್ಗೂಡಿಸಿ ‘ಖಾಮ್ (ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಮ್) ಎಂಬ ಹೊಸ ಗುಂಪನ್ನು ಸೃಷ್ಟಿಸಿದರು. ೧೯೭೫ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೂಳಿಪಟವಾದ ನಂತರ ಸೋಲಂಕಿ ಅವರು ಪ್ರಾರಂಭಿಸಿದ ಸೋಷಿಯಲ್ ಎಂಜಿನಿಯರಿಂಗ್ ಫಲವೇ ‘ಖಾಮ್’. ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ ೮೦ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅಲ್ಲಿಯವರೆಗೆ ಈ ಗುಂಪಿಗೆ ನ್ಯಾಯಬದ್ಧ ರಾಜಕೀಯ ಪ್ರಾತಿನಿಧ್ಯ ಇರಲಿಲ್ಲ. ಆದರೆ ಖಾಮ್ ಪ್ರಭಾವದಿಂದಾಗಿ ೧೯೮೦ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್  ೧೮೨ ಸ್ಥಾನಗಳಲ್ಲಿ ೧೪೨ ಸ್ಥಾನಗಳನ್ನು ಗಳಿಸಿತ್ತು.  ಸೋಲಂಕಿ ಮುಖ್ಯಮಂತ್ರಿಯಾದರು. ಈ ಚೈತ್ರಯಾತ್ರೆ ೧೯೮೫ರಲ್ಲಿಯೂ ಮುಂದುವರಿದು ಕಾಂಗ್ರೆಸ್ ೧೪೯ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಲೋಕಸಭಾ ಚುನಾವಣೆಯಲ್ಲಿ ೨೬ರಲ್ಲಿ ೨೫ ಸ್ಥಾನಗಳು ಕಾಂಗ್ರೆಸ್ ಪಾಲಾಗಿತ್ತು. ಗುಜರಾತ್ ರಾಜಕೀಯ ಇತಿಹಾಸದಲ್ಲಿಯೇ ಮೊದಲ ಬಾರಿ ೧೯೮೦ ಮತ್ತು ೧೯೮೫ರ ರಾಜ್ಯ ಸಚಿವ ಸಂಪುಟದಲ್ಲಿ ಪಟೇಲ್ ಜಾತಿಗೆ ಸೇರಿದ ಒಬ್ಬರೇ ಒಬ್ಬ ಸಚಿವರಿರಲಿಲ್ಲ.
ಅಲ್ಲಿಂದ ಮತ್ತೊಂದು ಬಗೆಯ ರಾಜಕೀಯ ಮತ್ತು ಜಾತಿ ಧ್ರುವೀಕರಣ ಪ್ರಾರಂಭವಾಯಿತು. ಅಲ್ಲಿಯವರೆಗೆ ಕಾಂಗ್ರೆಸ್ ಬೆಂಬಲಿಸುತ್ತಿದ್ದ ಪಟೇಲರು ಬಿಜೆಪಿ ಮತ್ತು ಚಿಮನ್ ಭಾಯ್ ಪಟೇಲ್ ನೇತೃತ್ವದ ಜನತಾ ಪಕ್ಷದತ್ತ ವಲಸೆ ಹೋಗಲಾರಂಭಿಸಿದರು. ೧೯೯೦ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ೩೩ ಸ್ಥಾನಗಳನ್ನಷ್ಟೇ ಗೆದ್ದು ಹೀನಾಯ ಸೋಲು ಅನುಭವಿಸಿತು. ಬಿಜೆಪಿ ಮತ್ತು ಜನತಾದಳದ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಚಿಮನ್ ಭಾಯ್ ಪಟೇಲ್ ಮುಖ್ಯಮಂತ್ರಿ, ಕೇಶುಭಾಯ್ ಪಟೇಲ್ ಉಪಮುಖ್ಯಮಂತ್ರಿ. ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷಕ್ಕೆ ಆ ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ.
ಅಯೋಧ್ಯೆ ಯಾತ್ರೆ ಹೊರಟಿದ್ದ ಎಲ್.ಕೆ. ಅಡ್ವಾಣಿ ಅವರನ್ನು ಬಿಹಾರದಲ್ಲಿ ಬಂಧಿಸಿದ್ದನ್ನು ಪ್ರತಿಭಟಿಸಿ ಬಿಜೆಪಿ ಬೆಂಬಲ ವಾಪಸು ಪಡೆದ ಕಾರಣದಿಂದ ಸಮ್ಮಿಶ್ರ ಸರ್ಕಾರ ಪತನವಾಯಿತು. ನಂತರ ಚಿಮನ್ ಭಾಯ್ ಪಟೇಲ್ ತಮ್ಮ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದರೂ ಪಟೇಲರು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬರಲಿಲ್ಲ. ೧೯೯೫ರ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದು ಕೇಶುಭಾಯ್ ಪಟೇಲ್ ಮುಖ್ಯಮಂತ್ರಿಯಾದರು.
ಆದರೆ ಕ್ಷತ್ರಿಯ ಜಾತಿಗೆ ಸೇರಿದ ಶಂಕರಸಿಂಗ್ ವಘೇಲಾ, ಸರ್ಕಾರದೊಳಗಿನ ‘ಪಟೇಲಗಿರಿ’ ವಿರುದ್ಧ ಬಂಡೆದ್ದ ಪರಿಣಾಮ ಬಿಜೆಪಿ ಸರ್ಕಾರ ಪತನವಾಯಿತು. ವಘೇಲಾ ಪ್ರತ್ಯೇಕ ಪಕ್ಷ ಕಟ್ಟಿ ಕಾಂಗ್ರೆಸ್ ಬೆಂಬಲದ ಜತೆಗೆ ಸರ್ಕಾರ ರಚಿಸಿದರು. ೧೯೯೮ರ ವಿಧಾನಸಭಾ ಚುನಾವಣೆ ಯಲ್ಲಿ ಮತ್ತೆ ಕೇಶುಭಾಯ್ ನೇತೃತ್ವದ ಬಿಜೆಪಿ ಬಹುಮತ ದೊಂದಿಗೆ ಅಧಿಕಾರಕ್ಕೇರಿತು. ಆಗ ಬಿಜೆಪಿಯಲ್ಲಿದ್ದ ೧೧೭ ಶಾಸಕರಲ್ಲಿ ೪೨ ಮಂದಿ ಪಟೇಲ್ ಜಾತಿಗೆ ಸೇರಿದವರಾಗಿದ್ದರು.
೨೦೦೧ರಲ್ಲಿ ಕೇಶುಭಾಯ್ ಅವರನ್ನು ಪದಚ್ಯುತಗೊಳಿಸಿ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಯಿತು. ಅಲ್ಲಿಯವರೆಗೆ ಗುಜರಾತ್ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದ ‘ಜಾತಿ’ ಪಕ್ಕಕ್ಕೆ ಸರಿದು ಆ ಸ್ಥಾನವನ್ನು ‘ಧರ್ಮ’ ಆಕ್ರಮಿಸಿಕೊಂಡಿತು. ೨೦೦೨ರ ಗುಜರಾತ್ ಕೋಮು ದಂಗೆಯಿಂದ ಪ್ರಾರಂಭವಾದ ಈ ‘ಧರ್ಮ ರಾಜಕಾರಣ’ ಮೋದಿಯವರನ್ನು ಪ್ರಧಾನಿ ಪಟ್ಟದವರೆಗೆ ಕೊಂಡೊಯ್ದಿದೆ. ‘ಹಿಂದೂ ಹೃದಯ ಸಾಮ್ರಾಟ’ನಾಗಿ ತಮ್ಮನ್ನು ಬಿಂಬಿಸಿಕೊಂಡ ಮೋದಿ ಅವರು ನಾಜೂಕಾಗಿ ಕೇಶುಭಾಯ್ ಪಟೇಲ್ ಅವರನ್ನು ರಾಜಕೀಯವಾಗಿ ಮುಗಿಸಿಬಿಟ್ಟರು. ೨೦೦೭ ಮತ್ತು ೨೦೧೨ರ ವಿಧಾನಸಭಾ ಚುನಾವಣೆಗಳಲ್ಲಿ ಅತೃಪ್ತ ಕೇಶುಭಾಯ್ ಪಟೇಲ್ ಎಷ್ಟೇ ಗುಡುಗಾಡಿದರೂ ಹಿಂದುತ್ವದ ಪ್ರವಾಹದಲ್ಲಿ ತೇಲಿಹೋಗಿದ್ದವರನ್ನು ಮೋದಿ ಪ್ರಭಾವದಿಂದ ಬಿಡಿಸಿ ತಮ್ಮೆಡೆ ಸೆಳೆಯಲು ಸಾಧ್ಯವಾಗಲಿಲ್ಲ.
ಹಿಂದುಳಿದ ಗಾಂಚಿ (ಗಾಣಿಗ) ಜಾತಿಗೆ ಸೇರಿರುವ ಮೋದಿ ಅವರು ಸೋಲಂಕಿ ಅವರ ‘ಖಾಮ್’ ಸೂತ್ರದಲ್ಲಿದ್ದ ಮುಸ್ಲಿಮರನ್ನು ಹೊರಗಿಟ್ಟು ಹಿಂದುತ್ವದ ಹೊಸ ಸೂತ್ರವನ್ನು ಹೆಣೆದು ಆ ರಾಜ್ಯವನ್ನು ಹನ್ನೆರಡು ವರ್ಷ ಆಳಿದರು. ಅದೇ ಚಿಮ್ಮುಹಲಗೆಯನ್ನು ಬಳಸಿ ದೆಹಲಿಗೆ ಜಿಗಿದಿದ್ದಾರೆ. ಈಗ ಪಟೇಲ್ ಸಮುದಾಯಕ್ಕೆ ಸೇರಿದ ಆನಂದಿ ಬೆನ್ ಪಟೇಲ್ ಮುಖ್ಯಮಂತ್ರಿಯಾದರೂ ಪಟೇಲ್ ಸಮುದಾಯಕ್ಕೆ ರಾಜಕೀಯದ ಗತವೈಭವಕ್ಕೆ ಮರಳಲು ಸಾಧ್ಯವಾಗಿಲ್ಲ. ಇವೆಲ್ಲವನ್ನೂ ಅಸಹಾಯಕರಂತೆ ನೋಡುತ್ತಾ ನರಳಾಡುತ್ತಿದ್ದ ಪಟೇಲ್ ಸಮುದಾಯಕ್ಕೆ ಹಾರ್ದಿಕ್ ಪಟೇಲ್ ಎನ್ನುವ ಪಡ್ಡೆ ಹುಡುಗನಲ್ಲಿ ರಾಜಕೀಯವಾಗಿ ತಮ್ಮನ್ನು ಪ್ರಸ್ತುತಗೊಳಿಸಬಲ್ಲ ನಾಯಕ ಕಂಡಿರಬಹುದು.
ವಿಚಿತ್ರವೆಂದರೆ ೧೯೮೫ರಲ್ಲಿ ಗುಜರಾತ್‌ನಲ್ಲಿ ಮೀಸಲಾತಿ ವಿರೋಧಿ ಚಳವಳಿಯ ಮುಂಚೂಣಿಯಲ್ಲಿದ್ದದ್ದು ಇದೇ ಪಟೇಲ್ ಸಮುದಾಯ. ಇತಿಹಾಸದ ಚಕ್ರ ಸಂಪೂರ್ಣವಾಗಿ ಒಂದು ಸುತ್ತು ತಿರುಗಿದೆ. ಇದು ಕೇವಲ ಪಟೇಲ್ ಸಮುದಾಯದ ಎಡಬಿಡಂಗಿತನವಲ್ಲ. ಮೀಸಲಾತಿಯ ವಿರೋಧಿಗಳಲ್ಲಿ ಬಹಳಷ್ಟು ಮಂದಿ ಸೈದ್ಧಾಂತಿಕವಾಗಿ ಅದನ್ನು ವಿರೋಧಿಸುವವರಲ್ಲ. ಅವರ ವಿರೋಧದಲ್ಲಿರುವುದು ‘ಮೀಸಲಾತಿಯ ಭಾಗ್ಯ ನಮಗಿಲ್ಲವಲ್ಲಾ’ ಎನ್ನುವ ಅಸೂಯೆ ಅಷ್ಟೇ. ಖೊಟ್ಟಿ ಜಾತಿ ಸರ್ಟಿಫಿಕೇಟ್ ಮಾಡಿಕೊಂಡು ಹಿಂದುಳಿದ ಜಾತಿ, ಪರಿಶಿಷ್ಟ ಜಾತಿ? ಪಂಗಡಗಳ ಒಳಗೆ ಅಕ್ರಮವಾಗಿ ನುಸುಳುವವರು ಇದೇ ಗುಂಪಿಗೆ ಸೇರಿದವರು.
ಗುಜರಾತ್‌ನಲ್ಲಿ ಮೀಸಲಾತಿಗಾಗಿ ಪಟೇಲರು ನಡೆಸುತ್ತಿರುವ ಚಳವಳಿಗೆ ಮೇಲ್ನೋಟಕ್ಕೆ ಎರಡು ಮುಖಗಳಿರುವಂತೆ ಕಾಣಿಸುತ್ತಿದೆ. ಮೊದಲನೆಯದು ಈಗಾಗಲೇ ಚರ್ಚಿಸಿರುವ ರಾಜಕೀಯವಾದ ಮುಖ. ಈ ಚಳವಳಿಯ ಇನ್ನೊಂದು ಮುಖದ ವಿನ್ಯಾಸ ವಿಸ್ತಾರವಾದುದು. ಅದರ ಸಣ್ಣ ಸುಳಿವನ್ನು ವಿಶ್ವಹಿಂದೂ ಪರಿಷತ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ನೀಡಿದ್ದಾರೆ.
‘ಜಾತಿ ಆಧರಿತ ಮೀಸಲಾತಿ ರದ್ದಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕೆಂಬುದು ವಿಎಚ್‌ಪಿ ಬಯಕೆ. ಇದಕ್ಕಾಗಿ ಮೀಸಲಾತಿಯ ಅವಶ್ಯಕತೆಯನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ ಉಸ್ತುವಾರಿಯಲ್ಲಿ ಆಯೋಗವನ್ನು ರಚಿಸಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ಸೌಲಭ್ಯ ಇರಬೇಕು...’ ಎಂದೆಲ್ಲಾ ಜೈನ್ ಹೇಳಿದ್ದಾರೆ. ಬೆಕ್ಕು ಚೀಲದಿಂದ ಹೊರಗೆ ಬಂದಿದೆ.
ಮೀಸಲಾತಿಯನ್ನು ಶೇ ೫೦ಕ್ಕೆ ಸೀಮಿತಗೊಳಿಸಿ ಸುಪ್ರೀಂಕೋರ್ಟ್ ಈಗಾಗಲೇ ತೀರ್ಪು ನೀಡಿರುವುದರಿಂದ ಮತ್ತು ರಾಜಸ್ತಾನದಲ್ಲಿ ಪಟೇಲ್ ಜಾತಿಗೆ ಸಮೀಪ ಇರುವ ಜಾಟರಿಗೆ ನೀಡಿರುವ ಮೀಸಲಾತಿಯನ್ನು ಸುಪ್ರೀಂಕೋರ್ಟ್  ರದ್ದುಗೊಳಿಸಿರುವುದರಿಂದ ತಾವು ಮೀಸಲಾತಿಯನ್ನು ಪಡೆದುಕೊಳ್ಳುವುದು ಅಸಾಧ್ಯ ಎಂದು ತಿಳಿದುಕೊಳ್ಳದಷ್ಟು ಪಟೇಲರು ದಡ್ಡರಲ್ಲ. ಪಟೇಲರ ಈಗಿನ ಚಳವಳಿಗೆ ತಮಗೆ ಮೀಸಲಾತಿಯನ್ನು ಪಡೆದುಕೊಳ್ಳುವ ಉದ್ದೇಶಕ್ಕಿಂತಲೂ ಮುಖ್ಯವಾಗಿ ಇತರ ಜಾತಿಗಳಿಗೆ ಇರುವ ಮೀಸಲಾತಿಯನ್ನು ಕಿತ್ತುಕೊಳ್ಳಬೇಕೆಂಬ ದುರುದ್ದೇಶ ಇರುವುದು ಸ್ಪಷ್ಟ.
ವಿಎಚ್‌ಪಿ ಪರೋಕ್ಷವಾಗಿ ಬೆಂಬಲಿಸುತ್ತಿರುವುದನ್ನು ನೋಡಿದರೆ ಗುಜರಾತ್‌ನಲ್ಲಿ ಮೀಸಲಾತಿಗಾಗಿ ನಡೆಯುತ್ತಿರುವ ಚಳವಳಿಯನ್ನು ನಿಧಾನವಾಗಿ ಬೇರೆ ರಾಜ್ಯಗಳಿಗೂ ಪಸರಿಸಿ ಅಂತಿಮವಾಗಿ ಅದನ್ನು ಮೀಸಲಾತಿ ವಿರೋಧಿ ಚಳವಳಿಯಾಗಿ ಪರಿವರ್ತನೆಗೊಳಿಸುವ ಹುನ್ನಾರ ಇದ್ದ ಹಾಗೆ ಕಾಣುತ್ತಿದೆ. ತಕ್ಷಣದಲ್ಲಿ ಕೇಂದ್ರ ಸರ್ಕಾರ ಮೀಸಲಾತಿಯನ್ನು ಪರಿಷ್ಕರಿಸುವಂತಹ ದುಸ್ಸಾಹಸಕ್ಕೆ ಇಳಿಯದಿದ್ದರೂ, ಇಂತಹ ಚಳವಳಿಯನ್ನೇ ನೆಪವಾಗಿಟ್ಟುಕೊಂಡು ಮೀಸಲಾತಿಯ ಅಧ್ಯಯನಕ್ಕಾಗಿ ಆಯೋಗವನ್ನು ನೇಮಿಸುವ ಮೂಲಕ ಸಾರ್ವಜನಿಕ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬಹುದು.
ದಿಢೀರನೆ ಮೀಸಲಾತಿ ಬಗ್ಗೆ ಈ ರೀತಿಯ ವಿವಾದ ಹುಟ್ಟಿಕೊಳ್ಳಲು ಇನ್ನೂ ಒಂದು ಕಾರಣ ಇದೆ. ಭರದಿಂದ ನಡೆಯುತ್ತಿರುವ ಸರ್ಕಾರಿ ಸೇವೆಗಳ ಖಾಸಗೀಕರಣದಿಂದಾಗಿ ಸರ್ಕಾರಿ ಉದ್ಯೋಗಗಳ ಸಂಖ್ಯೆ ಪಾತಾಳಕ್ಕೆ ಇಳಿದಿದೆ. ಅದೇ ರೀತಿ ಶಿಕ್ಷಣದ ಖಾಸಗೀಕರಣದಿಂದಾಗಿ ಅಲ್ಲಿಯೂ ಮೀಸಲಾತಿ ಅಪ್ರಸ್ತುತವಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ರಂಗದಲ್ಲಿಯೂ ಮೀಸಲಾತಿ ನೀಡಬೇಕೆಂಬ ಬೇಡಿಕೆ ಹೆಚ್ಚು ಬಲವಾಗಿ ಕೇಳಿಬರುತ್ತಿದೆ. ಕಾಂಗ್ರೆಸ್ ಪಕ್ಷ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಬಗ್ಗೆ ತನ್ನ ಬದ್ಧತೆಯನ್ನು ಸಾರಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ  ಕಸುವು ಪಡೆಯುತ್ತಿರುವ ಖಾಸಗಿ ರಂಗದ ಉದ್ಯಮಗಳ ನಾಯಕರು ತಮ್ಮ ಮನೆಬಾಗಿಲು ತಟ್ಟಲಿರುವ ಮೀಸಲಾತಿ ಆಕಾಂಕ್ಷಿಗಳನ್ನು ದೂರ ಅಟ್ಟಲು  ಮೀಸಲಾತಿ ವಿರೋಧಿಗಳ ಜತೆ ಷಾಮೀಲಾಗಿರುವ ಸಾಧ್ಯತೆ ಕೂಡಾ ಇದೆ. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ ಆಧರಿತ ಮೀಸಲಾತಿಯನ್ನು ಬದಲಾಯಿಸುವ ಒಲವು ಉಳ್ಳವರೇ ಆಗಿರುವುದರಿಂದ ಮೀಸಲಾತಿ ಪರವಾಗಿರುವವರ ಮನಸ್ಸಲ್ಲಿ ಮೂಡಿರುವ ಸಂಶಯಗಳು ನಿರಾಧಾರ ಎಂದು ಹೇಳಲಾಗದು.
ಲೇಖಕ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ
ಕೃಪೆ: ಪ್ರಜಾವಾಣಿ ೨೯-೦೮-೨೦೧೫

No comments:

Post a Comment