Monday, December 5, 2011

ರಾಜಕೀಯದ ಎಂಜಲಲ್ಲಿ ಅಮಾಯಕರ ಉರುಳುಸೇವೆ

ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಮತ್ತು ಮೂಢನಂಬಿಕೆಯ ನಡುವಿನ ಗೆರೆ ತೀರಾ ತೆಳ್ಳನೆಯದು. ನಂಬಿಕೆಯ ಹಾದಿಯಲ್ಲಿ ಹೋಗುತ್ತಿರುವವರು ತುಸು ಹೆಜ್ಜೆ ತಪ್ಪಿದರೆ ಮೂಢನಂಬಿಕೆಯ ಕಂದಕಕ್ಕೆ ಜಾರಿಬಿಡುವ ಅಪಾಯ ಇದೆ.

ನಂಬಿಕೆ ಪ್ರಜ್ಞಾಪೂರ್ವಕವಾದ ನಡವಳಿಕೆ, ಮೂಢನಂಬಿಕೆ ಪ್ರಜ್ಞೆ ಇಲ್ಲದೆ ಮಾಡಿಕೊಳ್ಳುವ ಅಪಘಾತ. ಆದುದರಿಂದಲೇ ನಂಬಿಕೆ ಎಂದರೆ ಬದುಕು, ಮೂಢನಂಬಿಕೆ ಎಂದರೆ ಒಮ್ಮಮ್ಮೆ  ಸಾವು ಕೂಡಾ.

ನಂಬಿಕೆಯ ಹಾದಿಯಲ್ಲಿ ನಡೆಯುವವರನ್ನು ಮೂಢನಂಬಿಕೆಯ ಗುಂಡಿಗೆ ತಳ್ಳಲು ಕಾಯುತ್ತಿರುವವರು ಎಲ್ಲ ಧರ್ಮಗಳಲ್ಲಿ ಇರುತ್ತಾರೆ, ಹಿಂದೂ ಧರ್ಮದಲ್ಲಿ ಹೊಟ್ಟೆಪಾಡಿಗಾಗಿ ಅಮಾಯಕರ ದಾರಿ ತಪ್ಪಿಸುವ  ಕೆಲಸವನ್ನು ಮಾಡುತ್ತಾ ಬಂದವರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ.
ಖೊಟ್ಟಿ ಜ್ಯೊತಿಷಿಗಳು, ವಂಚಕ ಪೂಜಾರಿಗಳು, ಮಾಟ ಗಾರರು, ಮಂತ್ರವಾದಿಗಳು, ಕೈಮದ್ದು ಹಾಕುವವರು, ತಥಾಕಥಿತ ವಿದ್ವಾಂಸರು -ಇಂತಹವರ ದೊಡ್ಡ ವರ್ಗವೇ ಇದೆ. ಅವರಿಗಿಂತಲೂ ಅಪಾಯಕಾರಿಯಾದ ಹೊಸ ಪೀಳಿಗೆಯೊಂದು ಈಗ ಸೇರಿಕೊಂಡಿದೆ, ಇದು ರಾಜಕಾರಣಿಗಳದ್ದು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತಿರುವುದು ನಂಬಿಕೆ-ಮೂಢನಂಬಿಕೆಗಳ ನಡುವಿನ ಸಂಘರ್ಷ ಅಲ್ಲವೇ ಅಲ್ಲ, ಅದು ಎಂಜಲು ರಾಜಕೀಯ. ರಕ್ತದ ರುಚಿಹತ್ತಿದ ಹುಲಿಯಂತೆ ಧರ್ಮದ ಹೆಸರಲ್ಲಿ ನಡೆಯುವ ವಿವಾದದ ರಾಜಕೀಯ ಲಾಭದ ರುಚಿ ಏನೆಂದು ಈ `ಎಂಜಲು ರಾಜಕೀಯ~ದಲ್ಲಿ ತೊಡಗಿರುವವರಿಗೆ ಗೊತ್ತಾಗಿಹೋಗಿದೆ.
ಅದಕ್ಕೆ ಹೀಗಾಗುತ್ತಿದೆ. `ಅಯ್ಯ ದಕ್ಷಿಣ ಕನ್ನಡದ ಬುದ್ಧಿವಂತರು ಹೀಗ್ಯಾಕೆ ಮತಾಂಧರಾಗಿ ಹೋದರು? ಎಂದು ಸಾಮಾನ್ಯವಾಗಿ ಅಚ್ಚರಿಪಡುತ್ತಿರುವವರಿಗೆ ಆ ಜಿಲ್ಲೆಯ ಧಾರ್ಮಿಕ ಮತ್ತು ಸಾಮಾಜಿಕ ಇತಿಹಾಸದ ಅರಿವು ಸರಿಯಾಗಿಲ್ಲ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 75ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಮೂಲನಿವಾಸಿಗಳಾದ ಕೊರಗರು, ಮಲೆಕುಡಿಯರು, ಬಿಲ್ಲವರು, ಮೊಗವೀರರು, ಬಂಟರು, ಗೌಡರು ಯಾರೇ ಇರಲಿ,  ಅವರ‌್ಯಾರೂ ವೈದಿಕ ಸಂಸ್ಕೃತಿ-ಸಂಪ್ರದಾಯವನ್ನು ಆಚರಣೆ ಮಾಡಿಕೊಂಡು ಬಂದವರಲ್ಲ. ಅವರ ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಗುಡ್ಡಗಾಡು ಜನಾಂಗದ ಕೆಲವು ಗುಣಲಕ್ಷಣಗಳಿವೆ.

ಅಲ್ಲಿಯೂ ರಾಮ, ಕೃಷ್ಣ, ಶಿವನ ದೇವಾಲಯಗಳಿವೆ ನಿಜ, ಆದರೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭೂತದ ಸಾನಗಳು, ನಾಗನ ಬನಗಳು, ಗರೋಡಿಗಳು ಇವೆ.
ಈ ಮೂಲ ನಿವಾಸಿಗಳ `ದೇವರು~ಗಳೇನೇ ಇದ್ದರೂ ಕೋಡ್ದಬ್ಬು, ಜುಮಾದಿ, ಪಂಜುರ್ಲಿ, ನಾಗಬ್ರಹ್ಮ, ಸಿರಿ, ಕೋಟಿ ಚೆನ್ನಯ, ಕಾಂತಬಾರೆ ಬುದಭಾರೆಗಳು. ಈ ಭೂತ-ದೈವ್ವಗಳೆಲ್ಲ ಅನ್ಯಾಯದ ವಿರುದ್ದ ಹೋರಾಡಿ ಹುತಾತ್ಮರಾದ ಹಿಂದಿನ ತಲೆಮಾರುಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ನಾಯಕರು. 
ಪ್ರತಿ ಊರಿಗೆ ಮಾತ್ರವಲ್ಲ ಪ್ರತಿ ಕುಟುಂಬಕ್ಕೂ ಒಂದು ಭೂತ, ನಾಗ ಇರುತ್ತದೆ. ಕಷ್ಟ ಬಂದಾಗ ಅದಕ್ಕೆ ಹರಕೆಹೊರುತ್ತಾರೆ, ಇಷ್ಟಾರ್ಥ ನೆರವೇರದಿದ್ದಾಗ ಮನೆಯವನಿಗೆ ಬೈದ ಹಾಗೆ ಬೈಯ್ಯುತ್ತಾರೆ, ಫಲಸಿಕ್ಕಿದಾಗ ಉಣ್ಣುವ, ತಿನ್ನುವ, ಉಡುವ ಎಲ್ಲವನ್ನೂ ಅರ್ಪಿಸಿ ಕಣ್ಣುತೇವ ಮಾಡಿಕೊಳ್ಳುತ್ತಾರೆ.
ಈಗ ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವ ಜ್ಯೋತಿಷಿಗಳ ರೀತಿ ಈ ಭೂತಗಳು ಯಾವ ಕುಟುಂಬವನ್ನು ಒಡೆದಿಲ್ಲ, ದ್ವೇಷ ಬಿತ್ತಿಲ್ಲ, ಜಗಳ ತಂದು ಹಾಕಿಲ್ಲ. ಅವುಗಳು ನಿಜವಾದ ರಕ್ಷಕರು ಮತ್ತು ಕೌಟುಂಬಿಕ ಸಲಹೆಗಾರರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿಯಿಡೀ ನಡೆಯುವ ಭೂತದ ಕೋಲದ ಕೊನೆಯ ಘಟ್ಟ ಬೆಳಗಿನ ಜಾವ ನಡೆಯುವ ಹರಕೆ ಕಾರ‌್ಯಕ್ರಮ. ಅಲ್ಲಿ ಊರಿನ ಜನ ಬಂದು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ತೋಡಿಕೊಂಡು ಭೂತ ನೀಡುವ ಅಭಯದಿಂದ ಪರಿಹಾರ ಪಡೆದುಕೊಳ್ಳುತ್ತಾರೆ.
ಕಾಯಿಲೆ ಬಿದ್ದವರು ಪಂಜುರ್ಲಿ ನೀಡುವ ಪ್ರಸಾದದಿಂದ `ಗುಣಮುಖ~ರಾಗುತ್ತಾರೆ, ಮಕ್ಕಳಾಗದ ದಂಪತಿಗೆ  ಕೋರ‌್ದಬ್ಬು ನೀಡುವ ಕರಿಗಂಧವನ್ನು ತಿಂದ ನಂತರ `ಮಕ್ಕಳಾಗುತ್ತವೆ~, ಮಗಳಿಗೆ ಮದುವೆಯಾಗಲು `ಸಂಬಂಧಕೂಡಿ~ ಬರುತ್ತವೆ.
ಕಚ್ಚಾಡಿಕೊಂಡ ಅಣ್ಣ-ತಮ್ಮಂದಿರು ಭೂತ ನಡೆಸಿದ ಪಂಚಾಯಿತಿಯಿಂದ ಒಂದಾಗುತ್ತಾರೆ, ಪರಊರಿಗೆ ಹೋದ ಮಕ್ಕಳು ಊರಿನ ಭೂತ ಹಾಕಿದ ಒಂದು ಬೆದರಿಕೆಯಿಂದ ಓಡಿ ಬಂದು ತಂದೆ-ತಾಯಿ ಕಾಲು ಹಿಡಿಯುತ್ತಾರೆ.
ಇನ್ನೂ ಬುದ್ಧಿ ಬಲಿಯದೆ ಇದ್ದ ಬಾಲ್ಯದ ದಿನಗಳಲ್ಲಿ ಇದು ಭೂತದ ಕಾರಣೀಕ ಎಂದು ಎಲ್ಲರಂತೆ ನಮ್ಮಂತವಹರೂ ತಿಳಿದುಕೊಂಡಿದ್ದೆವು. ಬುದ್ಧಿ ಬೆಳೆದ ಹಾಗೆ ಇದರ ಹಿಂದಿನ ಗುಟ್ಟುಗಳೆಲ್ಲ ಒಂದೊಂದಾಗಿ ಅರಿವಾಗತೊಡಗಿತ್ತು.
ಈಗಲೂ ಇದು ನಡೆಯುತ್ತಿದೆ. ಆದರೆ ಜನೋಪಕಾರಿಯಾದ ಮತ್ತು ಸಮಾಜಕ್ಕೆ ಅಪಾಯಕಾರಿಯಲ್ಲದ ಇಂತಹ ನಂಬಿಕೆಗಳ ಪೊಳ್ಳುತನವನ್ನು ಯಾರೂ ಪ್ರಶ್ನಿಸಲು ಹೋಗುವುದಿಲ್ಲ. ಯಾವ ವಿಚಾರವಾದಿಯೂ ಬಂದು ಇದನ್ನು ತಡೆಯುವುದಿಲ್ಲ, ಇದನ್ನು ಮೂಢನಂಬಿಕೆ ಎಂದು ಹೀಯಾಳಿಸುವುದಿಲ್ಲ.
ಯಾಕೆಂದರೆ ಅಲ್ಲಿ ಭಕ್ತರ ಶೋಷಣೆ ಇರುವುದಿಲ್ಲ. ಇಷ್ಟೆಲ್ಲ ಸೇವೆಗೆ ಭೂತ ಕೇಳುತಿದ್ದದ್ದು ಏನು? `ಒಂದು ಚೆಂಡು ಮಲ್ಲಿಗೆ~ ಒಂದು ಗೊನೆ ಎಳೆನೀರು, ಒಂದು ಹಾಳೆ ಪಿಂಗಾರ  ಇನ್ನೂ ಹೆಚ್ಚೆಂದರೆ ಇನ್ನೊಂದು ಕೋಲ-ನೇಮದ ಸೇವೆ. ಅಲ್ಲಿ ಶೋಷಣೆ ಇಲ್ಲ, ಯಾರ ಆತ್ಮಗೌರವವನ್ನೂ ಅದು ಕೆಣಕುವುದಿಲ್ಲ. ಭೂತದ ಪಾತ್ರಧಾರಿಯಾದ ದಲಿತ ಸಮುದಾಯಕ್ಕೆ ಸೇರಿದ ಪಂಬದ ಇಲ್ಲವೇ ನಲ್ಕೆಯವನ ಮುಂದೆ ಮೇಲ್ಜಾತಿ-ಕೆಳಜಾತಿ ಎನ್ನದೆ ಎಲ್ಲರೂ ಕೈಮುಗಿದು ತಲೆತಗ್ಗಿಸಿ ನಿಲ್ಲುತ್ತಾರೆ.
ಆದರೆ ಈ ಭೂತದ ಕೋಲ-ನೇಮಗಳು ಕೂಡಾ ಹಿಂದಿನಷ್ಟು ಸರಳವಾಗಿ ಉಳಿದಿಲ್ಲ, ಇವುಗಳು ವಾಣಿಜ್ಯೀಕರಣಗೊಳ್ಳಲು ತೊಡಗಿ ಬಹಳ ದಿನಗಳಾಗಿವೆ. ಪಾಡ್ದನ-ಭಜನೆ ಹಾಡುಗಳಿಗೆ, ತೆಂಬರೆ-ದುಡಿಗಳ ವಾದನಕ್ಕೆ ಹೆಜ್ಜೆ ಹಾಕುತ್ತಿದ್ದ ಭೂತಗಳು ಈಗ ಜನಪ್ರಿಯ ಚಿತ್ರಗೀತೆಗಳಿಗೆ ಕುಣಿಯತೊಡಗಿವೆ.

ವೇಷಭೂಷಣ, ಕೋಲದ ದೊಂಪ, ಅಲಂಕಾರ ಎಲ್ಲವೂ ಬದಲಾಗುತ್ತಾ ಬಂದಿದೆ. ಇದೇ ಹೊತ್ತಿಗೆ ಸರಿಯಾಗಿ  `ಅವಿಭಜಿತ ದಕ್ಷಿಣ ಕನ್ನಡ~ವನ್ನು ಹಿಂದುತ್ವದ ಪ್ರಯೋಗಶಾಲೆ ಮಾಡಲು ಹೊರಟವರು ಶೂದ್ರ ಸಮುದಾಯದ ಆರಾಧಾನ ಕೇಂದ್ರಗಳಾದ ಈ ಭೂತ, ದೈವ್ವ, ನಾಗಗಳ ಲೋಕವನ್ನು ಪ್ರವೇಶಿಸಿದ್ದಾರೆ.
ಕೋಲ ನಡೆಯುವ ಸ್ಥಳಗಳಲ್ಲಿ ಭಗವಧ್ವಜಗಳು, ಹಿಂದುಗಳ ಏಕತೆ ಸಾರುವ ಬ್ಯಾನರ್‌ಗಳು ರಾರಾಜಿಸತೊಡಗಿವೆ. ಈಗ  ಭೂತಗಳು ಕೂಡಾ ಒಮ್ಮಮ್ಮೆ ಹಿಂದುಗಳ ಏಕತೆ ಬಗ್ಗೆ ಭಾಷಣ ಮಾಡಿಬಿಡುವುದುಂಟು. ಮುಂಬೈ ಕಡೆಯಿಂದ ಹರಿದುಬರುತ್ತಿರುವ ಹಣದ ಹೊಳೆಯನ್ನು ಬಳಸಿಕೊಂಡು  ಸಾನ-ಗರೋಡಿ, ನಾಗಬನಗಳ ಜೀರ್ಣೋದ್ಧಾರ ನಡೆಯುತ್ತಿದೆ. ಅಮಾಯಕ ಭೂತ, ದೈವ್ವ, ನಾಗಗಳು ಕೂಡಾ ಯಾವುದೋ `ಅದೃಶ್ಯ ಶಕ್ತಿ~ಗಳ ಕೈಗೊಂಬೆಗಳಾಗಿ ಕುಣಿಯತೊಡಗಿವೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಡೆಸ್ನಾನದ ವೈಭವೀಕರಣ ಇದೇ ಕಾರ‌್ಯಸೂಚಿಯ ಮುಂದುವರಿದ ಭಾಗ. ಇತ್ತೀಚಿನ ವರ್ಷಗಳವರೆಗೂ ಧರ್ಮಸ್ಥಳದ ಮಂಜುನಾಥ ದರ್ಶನ ಮಾಡಲಿಕ್ಕೆ ಹೋದವರು ಸುಬ್ರಹ್ಮಣ್ಯಕ್ಕೆ ಹೋಗಿ ಬರುತ್ತಿದ್ದರು. ಆದರೆ ಇತ್ತೀಚೆಗೆ ಇದ್ದಕ್ಕಿದ್ದಂತೆ ಅದರ ಚಹರೆಯೇ ಬದಲಾಗಿ ಹೋಯಿತು.
ರವಿಶಾಸ್ತ್ರಿ, ಸಚಿನ ತೆಂಡೂಲ್ಕರ್ ಮೊದಲಾದ ಕ್ರಿಕೆಟಿಗರು, ಸಿನಿಮಾನಟರು, ಗಣ್ಯರು ದಂಡು ಕಟ್ಟಿ ಹೋಗತೊಡಗಿದರು. ಭ್ರಷ್ಟರಾಜಕಾರಣಿಗಳು ತಮ್ಮ ಪಾಪದ ಭಾರ ಇಳಿಸಿಕೊಳ್ಳಲು ಅಲ್ಲಿಗೆ ಬಂದು ತುಲಾಭಾರ ನಡೆಸತೊಡಗಿದರು. ಇವೆಲ್ಲವೂ ಆಕಸ್ಮಿಕವಾಗಿ ನಡೆದ ಬೆಳವಣಿಗೆಗಳಲ್ಲ, ಇಂತಹ `ಹುಚ್ಚುತನಗಳಲ್ಲಿಯೂ ಒಂದು ಕ್ರಮ~ ಇರುತ್ತದೆ.
ಇಂತಹ ಗೊಡ್ಡು ಆಚರಣೆಗಳನ್ನು ವಿರೋಧಿಸುತ್ತಿರುವವರೆಲ್ಲರೂ `ಹಿಂದೂ ವಿರೋಧಿ~ಗಳು ಮತ್ತು ಸಮರ್ಥಿಸುತ್ತಿರುವವರು `ಹಿಂದೂ ಧರ್ಮದ ರಕ್ಷಕ~ರು ಬ್ರಾಂಡ್ ಮಾಡುತ್ತಾ, ತಮ್ಮ ಬಳಗವನ್ನು ವಿಸ್ತರಿಸುತ್ತಾ ಹೋಗುವ ಹುನ್ನಾರ ಇದು. ಸಿದ್ಧಾಂತ ಮತ್ತು ಕಾರ‌್ಯಕ್ರಮಗಳ ಆಧಾರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ನಡೆಯಬೇಕಾದ ಹೋರಾಟ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ದೇವಸ್ಥಾನ, ಭೂತಗಳ ಸಾನ, ನಾಗನ ಬನಗಳ ಅಂಗಳಗಳಲ್ಲಿ ನಡೆಯುತ್ತಿದೆ.
ಮಡೆಸ್ನಾನದ ಸಮೂಹಸನ್ನಿಯನ್ನು ಅರ್ಥಮಾಡಿಕೊಳ್ಳಲು ಕುಕ್ಕೆ ಸುಬ್ರಹ್ಮಣ್ಯ ಇರುವ ಸುಳ್ಯ ಮೀಸಲು ವಿಧಾನಸಭಾ ಕ್ಷೇತ್ರವನ್ನು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಹಿನ್ನೆಲೆಯಿಂದ ಅಧ್ಯಯನ ಮಾಡಿದರೆ ಸಾಕು. ಈ ಕ್ಷೇತ್ರವನ್ನು ಬಿಜೆಪಿಗೆ ಸೇರಿರುವ ಟಿ.
ಅಂಗರ ಅವರು ಕಳೆದ ಐದು ಅವಧಿಗಳಲ್ಲಿ ಪ್ರತಿನಿಧಿಸುತ್ತಾ ಬಂದಿದ್ದಾರೆ. ಊಳಿಗಮಾನ್ಯ ವ್ಯವಸ್ಥೆಯ ಬೇರುಗಳು ಇನ್ನೂ ಬಲವಾಗಿರುವ ಈ ಕ್ಷೇತ್ರದಲ್ಲಿ ಅಂಗರ ಅವರು ತಮ್ಮದೇ ಸಮುದಾಯದ ಜನ ಎಂಜಲೆಲೆ ಮೇಲೆ ಉರುಳಾಡತ್ತಿದ್ದರೂ ತಪ್ಪು ಎಂದು ಬಹಿರಂಗವಾಗಿ ಹೇಳಲಾರದಷ್ಟು ಅಸಹಾಯಕರು.

ಅವರು ಮಾತ್ರವಲ್ಲ ಅವರ ವಿರುದ್ಧ ಸ್ಪರ್ಧಿಸುತ್ತಾ ಬಂದ ಬೇರೆ ಪಕ್ಷದವರೂ ಮಡೆಸ್ನಾನದ ವಿರುದ್ಧ ತಪ್ಪಿಯೂ ಮಾತನಾಡುವುದಿಲ್ಲ.  ದಲಿತರೊಬ್ಬರು ಅಧ್ಯಕ್ಷರು ಮತ್ತು ಹಿಂದುಳಿದ ಜಾತಿ ನಾಯಕರೊಬ್ಬರು ವಿರೋಧಪಕ್ಷದ ನಾಯಕರಾಗಿರುವ ರಾಜ್ಯ ಕಾಂಗ್ರೆಸ್ ವಹಿಸಿರುವ ಮೌನಕ್ಕೆ ಏನನ್ನಬೇಕು?
ವೈದ್ಯರು, ಆಸ್ಪತ್ರೆ, ಆಧುನಿಕ ಔಷಧಿಗಳ್ಯಾವುದೂ ಇಲ್ಲದ ಕಾಲದಲ್ಲಿ ಅಸಹಾಯಕ ಜನ ಇಂತಹ ನಂಬಿಕೆಗಳನ್ನು ಹೊಂದಿರಬಹುದು. ಈಗಲೂ ಹಳ್ಳಿಗಳಲ್ಲಿ ಜ್ವರಬಂದರೆ ತಾಯತ ಕಟ್ಟುವ, ಮಂತ್ರಹಾಕುವ `ಚಿಕಿತ್ಸೆ~ ನೀಡಲಾಗುತ್ತದೆ.
ಇವುಗಳ ಮೇಲಿನ ನಂಬಿಕೆಯಿಂದ ಹುಟ್ಟುವ ಆತ್ಮವಿಶ್ವಾಸ ಸಣ್ಣ-ಪುಟ್ಟರೋಗಗಳನ್ನು ಗುಣಪಡಿಸುತ್ತದೆ ಕೂಡಾ. ಆದರೆ ಇದನ್ನು ಸಮರ್ಥಿಸಿಕೊಳ್ಳಲಾದೀತೇ? ಎಂಜಲೆಲೆ ಯಾರದ್ದೇ ಇರಲಿ ಅದರಲ್ಲಿ ಬೇಕಾದರೆ ಉಂಡವರೇ ಉರುಳಾಡಲಿ, ಆಗಲೂ ಅದು ತಪ್ಪು. ಎಂಜಲು ಮೈಗೆ ಅಂಟುವುದರಿಂದ ರೋಗ ಗುಣವಾಗುವುದು ಒತ್ತಟ್ಟಿಗಿರಲಿ ರೋಗ ಅಂಟಿಕೊಳ್ಳದಿದ್ದರೆ ಸಾಕು.

ಯಾಕೆಂದರೆ ಎಂಜಲಿನ ಮೂಲಕ ಹರಡುವ ರೋಗಗಳೂ ಇವೆ. ಉಡಾಫೆ ಮಾತುಗಳಿಂದ ಆಗಾಗ ಮನರಂಜನೆ ನೀಡುತ್ತಿರುವ ಸಚಿವ ರೇಣುಕಾಚಾರ್ಯರಂತಹವರು ಇದನ್ನು ಸಮರ್ಥಿಸಿ ಮಾತನಾಡಿದ್ದರೆ ನಕ್ಕು ಸುಮ್ಮನಿರಬಹುದಿತ್ತು.

ಆದರೆ ವೈದ್ಯಕೀಯ ವಿಜ್ಞಾನವನ್ನು ವ್ಯಾಸಂಗ ಮಾಡಿರುವ ಡಾ.ವಿ.ಎಸ್.ಆಚಾರ್ಯ ಅವರಂತಹವರೇ ಸಮರ್ಥನೆಗೆ ಇಳಿದುಬಿಟ್ಟರೇ? `ಎಂಜಲೆಲೆ ಮೇಲೆ ಉರುಳಾಡುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ~ ಎಂದು ಭಾರತೀಯ ವೈದ್ಯಕೀಯ ಮಂಡಳಿ ಮುಂದೆ ಹೇಳುವ ಧೈರ್ಯ ಡಾ.ಆಚಾರ್ಯರಲ್ಲಿದೆಯೇ? ಇಷ್ಟು ಸುಲಭದ ಚಿಕಿತ್ಸೆಯ ಉಪಾಯಗಳಿದ್ದರೆ ಜನರ ತೆರಿಗೆಯ ಕೋಟ್ಯಂತರ ರೂಪಾಯಿಗಳನ್ನು ನುಂಗಿಹಾಕುತ್ತಿರುವ ಆರೋಗ್ಯ ಇಲಾಖೆ, ಒಬ್ಬರು ಸಚಿವರು, ಸರ್ಕಾರಿ ಆಸ್ಪತ್ರೆಗಳು, ವೈದ್ಯರು, ವೈದ್ಯಕೀಯ ಕಾಲೇಜುಗಳು ಯಾಕೆ ಬೇಕು? ಆಚಾರ್ಯರು ಯಾಕೆ ಎಂಬಿಬಿಎಸ್ ಓದಿ ವೈದ್ಯರಾಗಬೇಕಿತ್ತು?
ಬೆತ್ತಲೆಸೇವೆ, ದೇವದಾಸಿ ಪದ್ಧತಿ, ಸತಿಸಹಗಮನ, ಅಜಲು ಪದ್ಧತಿ ಮೊದಲಾದವುಗಳೆಲ್ಲ ಧರ್ಮದ ಪೋಷಾಕು ತೊಟ್ಟ ನಂಬಿಕೆಯ ಹೆಸರಲ್ಲಿಯೇ ನಡೆಯುತ್ತಿದ್ದ ಕಂದಾಚಾರಗಳು. ಅವುಗಳನ್ನು ನಡೆಸುತ್ತಿದ್ದವರ‌್ಯಾರೂ ಸರ್ಕಾರಕ್ಕೆ ಅರ್ಜಿ ಹಾಕಿ ನಿಷೇಧ ಹೇರಲು ಕೋರಿಲ್ಲ.
ಜಾಗೃತ ಸಮುದಾಯದ ಒತ್ತಡಕ್ಕೆ ಮಣಿದು ಸರ್ಕಾರವೇ ನಿಷೇಧಿಸಿದ್ದು. ಜನಮತಗಣನೆ ನಡೆಸಿ ಇಂತಹ ಮೂಢನಂಬಿಕೆಗಳನ್ನು ತೊಡೆದುಹಾಕಲು ಸಾಧ್ಯವೇ ಇಲ್ಲ, ಅಂತಹ ನಿದರ್ಶನಗಳೂ ದೇಶದಲ್ಲೆಲ್ಲೂ ಇಲ್ಲ. ಸಮಾಜದಲ್ಲಿ ಅಸ್ಪೃಶ್ಯತೆ ಕಡಿಮೆಯಾಗಿರುವುದು ಅದನ್ನು ಆಚರಿಸುವವರಲ್ಲಿ ಉಂಟಾಗಿರುವ ಜ್ಞಾನೋದಯದಿಂದಲೇ ಅಲ್ಲ, ಅದಕ್ಕೆ ಮುಖ್ಯ ಕಾರಣ ಸರ್ಕಾರ ಜಾರಿಗೆ ತಂದಿರುವ ಕಾನೂನು. ಮೂಢನಂಬಿಕೆಗಳ ವಿರುದ್ಧದ ಹೋರಾಟವನ್ನು ಜಾಗೃತ ಜನಸಮುದಾಯ ಮತ್ತು ಕಾನೂನು ಜತೆಜತೆಯಾಗಿ ನಡೆಸಬೇಕಾಗುತ್ತದೆ.
ಭಾರತದ ಧಾರ್ಮಿಕ ಪರಂಪರೆಯಷ್ಟೇ ದೀರ್ಘವಾದುದು ಅದಕ್ಕೆ ಎದುರಾಗಿ ಬಂದ ಸುಧಾರಣಾವಾದಿ ಚಳವಳಿಗಳ ಪರಂಪರೆ. ಬುದ್ಧ ಬಸವನಿಂದ ಪ್ರಾರಂಭಗೊಂಡು ಜ್ಯೋತಿಬಾ ಪುಲೆ, ನಾರಾಯಣಗುರು, ಪೆರಿಯಾರ್, ಅಂಬೇಡ್ಕರ್, ಗಾಂಧಿ, ಲೋಹಿಯಾ, ಸ್ವಾಮಿ ವಿವೇಕಾನಂದ, ರಾಜಾರಾಮ್ ಮೋಹನ್‌ರಾಯ್, ದಯಾನಂದ ಸರಸ್ವತಿ ಮೊದಲಾದವರ  ವರೆಗೆ ನಡೆದುಕೊಂಡು ಬಂದ ಈ ಚಳವಳಿಗಳಲ್ಲಿ ಪ್ರತಿಭಟನೆಯ ಭಿನ್ನ ಅಭಿವ್ಯಕ್ತಿಗಳನ್ನು ಕಾಣಬಹುದು.
ಧರ್ಮ ಸಮಾಜವನ್ನು ಜಡಗೊಳಿಸಿದಾಗೆಲ್ಲ ಅದಕ್ಕೆ ಚಲನಶೀಲತೆಯನ್ನು ತಂದುಕೊಟ್ಟದ್ದು ಈ ಚಳುವಳಿಗಳು. ಸನಾತನ ಎಂದು ಹೇಳಿಕೊಳ್ಳುವ ಹಿಂದೂ ಧರ್ಮ ಉಳಿದುಕೊಂಡದ್ದೇ ಈ ಸುಧಾರಣಾವಾದಿ ಚಳವಳಿಗಳು ಕೆಟ್ಟದ್ದನ್ನು ಕಳಚಿಕೊಂಡು ಒಳ್ಳೆಯದನ್ನು ಪಡೆದುಕೊಂಡು ಬೆಳೆಯಲು ನೀಡುತ್ತಾ ಬಂದ ಒತ್ತಾಸೆಯ ಮೂಲಕ. `ತಾಲೀಬಾನಿಕರಣ~ದ ಮೂಲಕ ಧರ್ಮ ಬೆಳೆಯಲಾರದು.
ಇದು ನಡೆಯದಿದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆಗೆ ಸಿ.ಆರ್.ರಾಜಗೋಪಾಲಾಚಾರಿ ಅವರು ಕೇರಳದಲ್ಲಿ ನಾರಾಯಣಗುರು ಚಳವಳಿ ನಡೆಯುತ್ತಿದ್ದ ಕಾಲದಲ್ಲಿ ತಿರುವಾಂಕೂರು ಸಂಸ್ಥಾನದ ದಿವಾನರಿಗೆ ಬರೆದ ಪತ್ರದಲ್ಲಿ ಉತ್ತರ ಇದೆ. ದೇವಸ್ಥಾನ ಪ್ರವೇಶ ಘೋಷಣೆ ಹೊರಡಿಸಲು ವಿಳಂಬ ಮಾಡುತ್ತಿದ್ದುದನ್ನು ಕಂಡ ರಾಜಗೋಪಾಲಾಚಾರಿ ಅವರು ದಿವಾನರಿಗೆ ಪತ್ರಬರೆದು `ನಾರಾಯಣ ಗುರುಗಳ ಸುಧಾರಣಾ ಚಳವಳಿ ನಡೆಯದೆ ಇದ್ದರೆ ಕೇರಳದಲ್ಲಿ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ಕ್ರೈಸ್ತಧರ್ಮಕ್ಕೆ ಮತಾಂತರವಾಗಿ ಹೋಗುತ್ತಿದ್ದರು~ ಎಂದು ಎಚ್ಚರಿಸಿದ್ದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕ್ರೈಸ್ತ ಮಿಷನರಿಗಳು ಹಿಂದೂ ಧರ್ಮದಿಂದ ಮತಾಂತರ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ದಾಂದಲೆ ಮಾಡುತ್ತಿರುವವರೇ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದೇ `ಹಿಂದೂ~ಗಳನ್ನು  ಎಂಜಲೆಲೆಯಲ್ಲಿ ಉರುಳಾಡಿಸುತ್ತಿರುವುದು ಎಂತಹ ವ್ಯಂಗ್ಯ ಅಲ್ಲವೇ?