Showing posts with label Supreme Court. Show all posts
Showing posts with label Supreme Court. Show all posts

Saturday, September 24, 2016

ಕಾವೇರಿ ವಿವಾದ ಮುಂದೇನಾಗಬಹುದು?

ಮುಂದೇನಾಗಬಹುದು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿಗಳು ಆತಂಕದಿಂದ, ವಿರೋಧಿಗಳು ಖುಷಿಯಿಂದ ಕೇಳುತ್ತಿದ್ದಾರೆ. ಅಭಿಮಾನಿಗಳ ಆತ್ಮಸಂತೋಷಕ್ಕಾಗಿ, ವಿರೋಧಿಗಳ ಆತ್ಮಶಾಂತಿಗಾಗಿ ನನಗೆ ಹೊಳೆದದ್ದನಿಷ್ಟು ಹೇಳುತ್ತಿದ್ದೇನೆ.
ಸಾಧ್ಯತೆ 1. ಉದ್ದೇಶಪೂರ್ವಕವಾಗಿ ಆದೇಶ ಪಾಲನೆ ಮಾಡದಿರುವ ನಿರ್ಧಾರವಾಗಿರುವ ಕಾರಣ ಇದು ನ್ಯಾಯಾಂಗ ನಿಂದನೆ ಆಗಲಾರದು ಎನ್ನುವುದನ್ನು ಸುಪ್ರೀಂಕೋರ್ಟ್ ಒಪ್ಪಿಕೊಳ್ಳಬಹುದು. ಕೇಂದ್ರ ಸರ್ಕಾರವೂ ಕರ್ನಾಟಕದ ರಕ್ಷಣೆಗೆ ನಿಲ್ಲಬಹುದು. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕರ್ನಾಟಕ ಸರ್ಕಾರದ ನಡವಳಿಕೆಯನ್ನು ಸ್ವೀಕರಿಸಿ ತನ್ನ ಆದೇಶದ ಮಾರ್ಪಾಟಿಗೆ ಒಪ್ಪಿಕೊಳ್ಳಬಹುದು.
ಸಾಧ್ಯತೆ 2. ಸುಪ್ರೀಂಕೋರ್ಟ್ ಯಾವ ರಿಯಾಯಿತಿಯನ್ನು ತೋರಿಸದೆ ಕೇವಲ ಸಂವಿಧಾನದ 141 ಮತ್ತು 142ನೇ ಪರಿಚ್ಛೇದದ ಆಶಯವನ್ನಷ್ಟೇ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಮತ್ತು ಮುಖ್ಯಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕ್ರಿಯೆಗೆ ಚಾಲನೆ ನೀಡಬಹುದು.
ನ್ಯಾಯಾಂಗನಿಂದನೆ ಪ್ರಕಿಯೆ ಪ್ರಾರಂಭವಾದರೆ ಏನಾಗಬಹುದು?
ಸಾಧ್ಯತೆ 1: ಮುಖ್ಯಮಂತ್ರಿಗಳು ಮತ್ತು ಮುಖ್ಯಕಾರ್ಯದರ್ಶಿಯವರು ತಮ್ಮ ಮುಂದೆ ಹಾಜರಾಗಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಬಹುದು. ಇಬ್ಬರೂ ಆದೇಶಕ್ಕೆ ತಲೆಬಾಗಿ ಆದೇಶ ಉಲ್ಲಂಘನೆಗಾಗಿ ಕ್ಷಮೆಕೇಳಿ ಪಾರಾಗಬಹುದು. (ಹಿಂದೆಲ್ಲ ನಡೆದಿರುವಂತೆ)
ಸಾಧ್ಯತೆ 2: ಕ್ಷಮೆ ಕೇಳದೆ ವಿಧಾನಮಂಡಲ ಕೈಗೊಂಡಿರುವ ಸಾಮೂಹಿಕ ನಿರ್ಣಯಕ್ಕೆ ಬದ್ಧತೆಯನ್ನು ಘೋಷಿಸಬಹುದು.
ಕ್ಷಮೆ ಕೇಳಿ ತಪ್ಪೊಪ್ಪಿಕೊಳ್ಳದೆ ಆದೇಶದ ಉಲ್ಲಂಘನೆ ಮಾಡಿದರೆ ಏನಾಗಬಹುದು?
- ಸುಪ್ರೀಂಕೋರ್ಟ್ ಸಂವಿಧಾನದ 356ನೇ ಪರಿಚ್ಛೇದದಡಿ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸುಮಾಡಿ, ಅದರ ಮೂಲಕ ನೀರು ಬಿಡಬೇಕೆಂಬ ತನ್ನ ಆದೇಶದ ಅನುಷ್ಠಾನಕ್ಕೆ ಮುಂದಾಗಬಹುದು.
- ರಾಷ್ಟ್ರಪತಿ ಆಳ್ವಿಕೆಯ ಹೇರಬೇಕಾದರೆ ಅಂತಿಮವಾಗಿ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸಚಿವ ಸಂಪುಟ ತೀರ್ಮಾನಕೈಗೊಳ್ಳಬೇಕಾಗುತ್ತದೆ.
- ಅಂತಹದ್ದೊಂದು ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡರೆ (ನನ್ನ ದೃಡವಾದ ಭಾವನೆ ಪ್ರಕಾರ ಇಂತಹ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಳ್ಳಲಾರದು) ಅಲ್ಲಿಂದ ರಾಜಕೀಯದಾಟ ಶುರುವಾಗುತ್ತದೆ.
- ನೀರು ಬಿಡುವುದಿಲ್ಲ ಎಂದು ಸಾರಿ ಜೈಲಿಗೆ ಹೋಗಲು ಸಿದ್ದರಾದ ಮುಖ್ಯಮಂತ್ರಿಗಳು ಮತ್ತು ಮುಖ್ಯಮಂತ್ರಿಯನ್ನು ಜೈಲಿಗಾದರೂ ಕಳಿಸಿ ನೀರು ಬಿಡಲು ಹೊರಟ ಪ್ರಧಾನಮಂತ್ರಿ. ಆರು ತಿಂಗಳ ನಂತರ ರಾಷ್ಟ್ರಪತಿ ಆಳ್ವಿಕೆ ಕೊನೆಗೊಂಡು ಮಧ್ಯಂತರ ಚುನಾವಣೆ ಎದುರಾದಾಗ ಮತದಾರರ ಮುಂದೆ ಇರಬಹುದಾದ ಎರಡು ಆಯ್ಕೆ ಇದು.
ಇಂತಹದ್ದೊಂದು ಅತಿರೇಕದ ಸಾಧ್ಯತೆ ನಿಜವಾದರೆ ಚುನಾವಣೆ ನಡೆಯುವ ಮೊದಲೇ ಫಲಿತಾಂಶವನ್ನೂ ಹೇಳಿಬಿಡಬಹುದು.
ಅಂತಹದ್ದೊಂದು ಅತಿರೇಕದ ಸ್ಥಿತಿ ನಿರ್ಮಾಣವಾಗಿ ಅಪರೂಪಕ್ಕೆ ರಾಜ್ಯದ ಹಿತಾಸಕ್ತಿಯ ರಕ್ಷಣೆಗಾಗಿ ರಾಜ್ಯದಲ್ಲಿ ಸ್ಥಾಪನೆಗೊಂಡಿರುವ ರಾಜಕೀಯ ಪಕ್ಷಗಳ ನಡುವಿನ ಸೌಹಾರ್ದತೆ ಹಾಳಾಗದಿರಲಿ ಎಂದು ಪ್ರಾಮಾಣಿಕವಾಗಿನಾನು ಆಶಿಸುತ್ತೇನೆ.

Monday, September 12, 2016

ಕಾವೇರಿ ವಿವಾದ: ಜಲತಜ್ಞರು, ಕಾನೂನು ತಜ್ಞರು & ಹೋರಾಟಗಾರರು

ರಾಜ್ಯದ ಜಲವಿವಾದಗಳಿಗೆ ಸಂಬಂಧಿಸಿದಂತೆ ನಮ್ಮ ವಕೀಲರು ಸಮರ್ಥವಾಗಿ ವಾದಿಸಿಲ್ಲ, ಅವಶ್ಯಕ ದಾಖಲೆಗಳನ್ನು ನ್ಯಾಯಮಂಡಳಿ, ನ್ಯಾಯಾಲಯದ ಮುಂದಿಡದೆ ವಿಫಲರಾದರು.. ಇತ್ಯಾದಿ ಆರೋಪಗಳು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿವೆ. ಪತ್ರಕರ್ತನಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಯಾವುದಾದರೂ ಒಂದು ವಿಷಯದ ಬಗ್ಗೆ ನಾನು ಅತೀ ಹೆಚ್ಚು ಬರೆದಿದ್ದರೆ ಅದು ಕಾವೇರಿ ಜಲವಿವಾದದ ಬಗ್ಗೆ. ನಾನು ಬರೆದಿರುವುದು ಕಾಡಿಗೆ ಹೋಗಿ ತಪಸ್ಸುಮಾಡಿ ಗಳಿಸಿದ ಜ್ಞಾನದಿಂದಲ್ಲ. ಇವೆಲ್ಲವೂ ರಾಜ್ಯದ ವಕೀಲರ ಮತ್ತು ನೀರಾವರಿ ತಜ್ಞರ ಜತೆಗಿನ ಮಾತುಕತೆ, ಕಾವೇರಿ ನ್ಯಾಯಮಂಡಳಿ ಕಲಾಪದ ವರದಿ ಮತ್ತು ಸರ್ಕಾರಿ ಇಲಾಖೆಗಳಿಂದ ಪಡೆದ ದಾಖಲೆಗಳ ಮೂಲಕ ನಾನು ತಿಳಿದುಕೊಂಡದ್ದು. ಈ ಎಲ್ಲ ವಿಷಯಗಳನ್ನು ರಾಜ್ಯ ಸರ್ಕಾರದ ಪರವಾಗಿ ನಮ್ಮ ವಕೀಲರು ನ್ಯಾಯಾಲಯ ಮತ್ತು ನ್ಯಾಯಮಂಡಳಿಯ ಮುಂದೆ ಮಾಡಿರುವ ವಾದಗಳಲ್ಲಿಯೂ ನಾನು ಕಿವಿಯಾರೆ ಕೇಳಿದ್ದೇನೆ. ನನಗೆ ತಿಳಿದಂತೆ ಈಗ ವರ್ತಮಾನದ ಸ್ಥಿತಿಯ ಕಡೆ ನ್ಯಾಯಾಲಯದ ಗಮನಸೆಳೆಯುವುದು ಬಿಟ್ಟರೆ ಹೊಸದಾಗಿ ಹೇಳುವುದೇನೂ ಉಳಿದಿಲ್ಲ.
ಉದಾಹರಣೆಗೆ ಕಾವೇರಿ ನ್ಯಾಯಮಂಡಳಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಯೋಜನೆಗಳಿಗಾಗಿ ನಿಗದಿಪಡಿಸಿರುವ ಅತ್ಯಂತ ಕಡಿಮೆ ಪ್ರಮಾಣವಾಗಿರುವ 1.75 ಟಿಎಂಸಿ ನೀರು, ತಮಿಳುನಾಡಿಗೆ ಡಿಸೆಂಬರ್ ವರೆಗೂ ಲಭ್ಯ ಇರುವ ಈಶಾನ್ಯಮಾರುತದ ಮಳೆಯ ಪ್ರಸ್ತಾವ, ತಮಿಳುನಾಡಿನಲ್ಲಿ ಲಭ್ಯ ಇರುವ ಅಂತರ್ಜಲವನ್ನು ನ್ಯಾಯಮಂಡಳಿ ಪರಿಗಣಿಸದೆ ಇರುವುದು, ನಾವು ಬೆಳೆಯುವ ಒಂದು ಬೆಳೆ, ಅವರು ಬೆಳೆಯುವ ಮೂರು ಬೆಳೆ, ಪರಿಸರ ರಕ್ಷಣೆಗಾಗಿ ತಮಿಳುನಾಡಿಗೆ ನ್ಯಾಯಮಂಡಳಿ ನೀಡಿರುವ 10 ಟಿಎಂಸಿ ವಿಶೇಷ ಕೊಡುಗೆ ಇತ್ಯಾದಿ ಅಂಶಗಳೆಲ್ಲವನ್ನು ಅಂತಿಮ ಐತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ Special leave petition ನಲ್ಲಿ ರಾಜ್ಯದ ವಕೀಲರು ಹೇಳಿದ್ದಾರೆ.
ಹೀಗಿದ್ದರೂ ಈ ರೀತಿಯ ಅಪಪ್ರಚಾರ ಯಾಕೆ ಆಗುತ್ತಿದೆಯೆಂದರೆ ಜಲವಿವಾದ ಪ್ರಾರಂಭವಾದ ಕೂಡಲೇ ಬೀದಿಗಿಳಿದವರೆಲ್ಲರೂ ದಿಢೀರ್ ‘ನೀರಾವರಿ ತಜ್ಞರು’ ಮತ್ತು ‘ಕಾನೂನು ತಜ್ಞರು’ ಆಗಿಬಿಡುತ್ತಾರೆ. ನಮ್ಮ ರೈತರ ಬಗ್ಗೆ, ನೆಲ-ಜಲದ ಬಗ್ಗೆ ನಮ್ಮ ನಟ-ನಟಿಯರ,ಕನ್ನಡ ಚಳುವಳಿಗಾರರ ಪ್ರೀತಿ,ಅಭಿಮಾನ, ಕಳಕಳಿ, ಕಾಳಜಿ ಎಲ್ಲವೂ ಅಭಿನಂದಾರ್ಹ. ಆದರೆ ಅವರಲ್ಲಿ ಹೆಚ್ಚಿನ ಮಂದಿ ಭಾಷಣಶೂರರಾಗಲು ಹೋಗಿ ಬಹಿರಂಗವಾಗಿ ತಮ್ಮ ಅಜ್ಞಾನ ಪ್ರದರ್ಶಿಸುತ್ತಾರೆ. ಕೊನೆಗೆ ಹೇಳಲು ಏನೂ ವಿಷಯ ಇಲ್ಲದೆ ಇದ್ದಾಗ ಮಾತು ವೈಯಕ್ತಿಕ ಮಟ್ಟಕ್ಕೆ ಇಳಿದು ‘ಗಂಡಸ್ತನ’ ‘ಸೀರೆ-ಬಳೆ’ ಕಡೆ ಹೊರಳುತ್ತವೆ. ಇವರಲ್ಲಿಯೇ ಕೆಲವರು ಟಿವಿಚಾನೆಲ್ ಗಳಲ್ಲಿ ಹೋಗಿ ಕೂತು ಚರ್ಚೆ ನಡೆಸುತ್ತಾರೆ.
ಇತ್ತೀಚೆಗೆ ನಾನು ಅಪರೂಪಕ್ಕೆ ಒಂದು ಟಿವಿಚಾನೆಲ್ ನಲ್ಲಿ ಕಾವೇರಿ ವಿಷಯದ ಚರ್ಚೆಗೆ ಹೋಗಿದ್ದೆ. ಅಲ್ಲಿ ಕನ್ನಡದ
ಯುವನಿರ್ದೇಶಕರೊಬ್ಬರಿದ್ದರು. ‘ಚರ್ಚೆಯುದ್ದಕ್ಕೂ ಅವರು ‘ಕಾವೇರಿ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ಏನಾಗುತ್ತದೆ ಎಂದು ಗೊತ್ತಿಲ್ಲ...’ ಇತ್ಯಾದಿ ಆರೋಪಮಾಡುತ್ತಿದ್ದರು. ಮೊದಲನೆಯದಾಗಿ ಏನೂ ಗೊತ್ತಿಲ್ಲದೆ ಇದ್ದರೆ ಇಂತಹ ಚರ್ಚೆಯಲ್ಲಿ ಪಾಲ್ಗೊಳ್ಳಬಾರದು. ಎರಡನೆಯದಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುವುದೇ ಆಗಿದ್ದರೆ ವಿಷಯ ಸಂಗ್ರಹ ಮಾಡಿಕೊಂಡು ಬರಬೇಕು. ಇಂದು ಬಹಳಷ್ಟು ಮಾಹಿತಿ ಇಂಟರ್ ನೆಟ್ ಮೂಲಕ ನಮ್ಮ ಬೆರಳತುದಿಗಳಲ್ಲಿವೆ. ಒಬ್ಬ ಸಾಮಾನ್ಯ ರೈತರಿಗೆ ನಾವು ಇದನ್ನು ಹೇಳಲಾಗದು, ಆದರೆ ಚಳುವಳಿಯ ನಾಯಕರು, ಚರ್ಚೆಯಲ್ಲಿ ಬಂದು ಪಾಲ್ಗೊಳ್ಳುವ ಮತ್ತು ಬೀದಿಭಾಷಣ ಮಾಡುವ ನಟ-ನಟಿಯರಾದರೂ ಸರಿಯಾದ ಮಾಹಿತಿ ತಿಳಿದುಕೊಂಡಿರಬೇಕಲ್ಲವೇ? ಅಂದಹಾಗೆ ಈ ಯುವನಿರ್ದೇಶಕರ ಎರಡು ಚಿತ್ರಗಳನ್ನು ನೋಡಿದ್ದೆ. ಅದು ನಾಯಕ-ನಾಯಕಿ ಮರಸುತ್ತುವ, ಲಾಂಗ್-ಮಚ್ಚುಗಳ ಕತೆಯಲ್ಲ. ನೈಜ ಘಟನೆಗಳ ಬಗ್ಗೆ ಶ್ರಮವಹಿಸಿ ಸಂಶೋಧನೆ ಮಾಡಿ ವಿಷಯ ಸಂಗ್ರಹಿಸಿ ಮಾಡಿರುವ ಚಲನಚಿತ್ರಗಳು. ಇಂತಹವರೂ ಕಾವೇರಿ ಬಗ್ಗೆ ನಮಗೇನೂ ಗೊತ್ತಿಲ್ಲ, ಎಲ್ಲಿದೆ ಮಾಹಿತಿ ಎಂದು ಗೋಳಾಡಿದರೆ?