Saturday, March 14, 2015

ಜಾತಿ ಒಳಗೆ ಇಣುಕಿ

(ಪ್ರಜಾವಾಣಿಯಲ್ಲಿ ನಡೆಯುತ್ತಿರುವ 'ಜಾತಿವಾರು ಜನಗಣತಿ ಸುತ್ತ'.. ಚರ್ಚೆಗೆ ಪ್ರತಿಕ್ರಿಯೆ)ಎಸ್.ಎಂ.ಜಾಮದಾರ ಅವರ  ‘ಜಾತಿವಾರು ಜನಗಣತಿ ಸುತ್ತ...’ ಎಂಬ ಲೇಖನ (ಪ್ರ.ವಾ., ಫೆ. 19) ತಪ್ಪುದಾರಿಗೆಳೆಯುವಂತಿದೆ. ಸಾಮಾಜಿಕ ನ್ಯಾಯದ ಹೋರಾಟದ ಭಾಗವಾದ ಜಾತಿ ಆಧಾರಿತ ಮೀಸಲಾತಿ ಮತ್ತು ಜಾತಿ ಗುರುತಿಸಲು ನೆರವಾಗುವ ಜಾತಿ ಗಣತಿಗೆ ಸಂಬಂಧಿಸಿದ ಸರ್ಕಾರದ ನಿರ್ಧಾರಗಳ ಹಿಂದೆ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿರುವುದು ಶಾಸಕಾಂಗ, ನ್ಯಾಯಾಂಗ ಹಾಗೂ  ಸಂವಿಧಾನ.  ಜಾಮದಾರರು ಇದನ್ನು ಗುರುತಿಸಲು ವಿಫಲರಾಗಿರುವುದು ಆಶ್ಚರ್ಯ.ಜಾತಿ,  ಧರ್ಮ, ಲಿಂಗ, ಹುಟ್ಟಿದ ಸ್ಥಳ ಮತ್ತು ವಾಸಸ್ಥಾನಗಳನ್ನು ಮೀರಿ ಭಾರತೀಯರೆಲ್ಲರೂ ಸಮಾನರು ಎಂದು ಸಾರಿರುವ ಸಂವಿಧಾನವೇ ಕೆಲವು ವರ್ಗಗಳಿಗೆ ನಿರ್ದಿಷ್ಟ ಕಾರಣಗಳಿಗಾಗಿ ‘ಸಮಾನತೆ’ಯಿಂದ ವಿನಾಯಿತಿಯನ್ನು ನೀಡಿದೆ. ಈ ವರ್ಗಗಳು ಯಾವುವು? ಅವುಗಳ ಮುನ್ನಡೆಗೆ ಏನು ಮಾಡಬೇಕೆಂಬುದಕ್ಕೆ  ಸಂವಿಧಾನದ 15 (3), 15 (4), 16 (4) ಮತ್ತು 46ನೇ ಪರಿಚ್ಛೇದಗಳಲ್ಲಿ ಉಲ್ಲೇಖವಿದೆ. ಜಾಮದಾರರು ಆರೋಪಿಸುವಂತೆ ಈ ಜಾತಿ ಗಣತಿ ಹಿಂದೆ ಕುತಂತ್ರ ಇರುವುದು ನಿಜವೆಂದಾದರೆ ಅವರು ಈ ಆರೋಪವನ್ನು ಸಂವಿಧಾನದ ವಿರುದ್ಧ ಮಾಡಬೇಕಾಗುತ್ತದೆ.‘ಹಿಂದಿನ ಮೂರು ಜನಗಣತಿಗಳು ಎಲ್ಲಿ ಹೋದವು? ಎರಡು ದಶಕಗಳಲ್ಲಿ ರಾಜ್ಯದ ಸಾಮಾಜಿಕ ರಚನೆಯಲ್ಲಿ ಗುರುತಿಸಲಾರದಷ್ಟು ಪರಿವರ್ತನೆಯಾಗಿದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.  ಹಿಂದಿನ ಜಾತಿಗಣತಿ ಮತ್ತು ಈಗ ನಡೆಸಲು ಉದ್ದೇಶಿಸಿರುವ ಜಾತಿ ಗಣತಿಗಳ ನಡುವಿನ ವ್ಯತ್ಯಾಸವನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾಗಿರುವುದು ಆಶ್ಚರ್ಯಕರ. ಹಿಂದಿನ ಆಯೋಗಗಳೆಲ್ಲವೂ  ಆಧರಿಸಿದ್ದು 1931ರ ಜನಗಣತಿಯ ಜಾತಿ ಪ್ರಮಾಣವನ್ನು ಜನಸಂಖ್ಯೆಯ ಹೆಚ್ಚಳದ ಪ್ರಮಾಣಕ್ಕೆ ಹಿಗ್ಗಿಸಿ ಮಾಡಿದ ಲೆಕ್ಕವನ್ನು. ಇಂತಹ ಸಮೀಕ್ಷೆಗಳಿಗೆ ಮಿತಿಗಳಿರುವುದನ್ನು ನ್ಯಾಯಾಲಯವೇ ಒಪ್ಪಿಕೊಂಡಿದೆ.ಜಾತಿಗಳನ್ನು ಜೀವಂತವಾಗಿಡಲು ಸರ್ಕಾರಗಳು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಈಗಿನ ಮೀಸಲಾತಿಗೆ ಆಧಾರವಾಗಿರುವ ಜಾತಿ ಸಂಖ್ಯೆಗಳ ವೈಜ್ಞಾನಿಕತೆಯನ್ನು ಸುಪ್ರೀಂಕೋರ್ಟ್ ಪ್ರಶ್ನಿಸುತ್ತಾ ಬಂದಿದೆ. ಹಿಂದುಳಿದ ಜಾತಿಗಳಿಗೆ ಪ್ರ‍ತ್ಯೇಕ ಮೀಸಲಾತಿ ಕಲ್ಪಿಸಲಾಗಿದೆ, ನಮ್ಮಲ್ಲಿ ಜಾತಿ ನಿರ್ದಿಷ್ಟವಾದ ಯೋಜನೆಗಳಿವೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮಾಹಿತಿ ಇಲ್ಲದೆ ಈ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಹೇಗೆ? ಈಗಿನ ಜನಗಣತಿಯಲ್ಲಿ ಈ ಮಾಹಿತಿ ಎಲ್ಲಿ ಲಭ್ಯ ಇದೆ?‘ಭಾರತದಲ್ಲಿ ಜಾತಿ ಎನ್ನುವುದು ಸಾಮಾಜಿಕ ವರ್ಗ. ಸಾಮಾಜಿಕ ಹಿಂದುಳಿಯುವಿಕೆಯನ್ನು ಗುರುತಿಸಲು ಜಾತಿ ಪ್ರಮುಖ ಮಾನದಂಡ. ಇದಕ್ಕಾಗಿ ವೈಜ್ಞಾನಿಕವಾಗಿ ಸಂಗ್ರಹಿಸಿರುವ ಜಾತಿ ಗಣತಿ ಬೇಕು. ಹಿಂದುಳಿದ ವರ್ಗಗಳ ಗುಂಪಿಗೆ ಯಾವ ಜಾತಿ ಸೇರ್ಪಡೆಯಾಗಬೇಕು, ಬೇರ್ಪಡೆಯಾಗಬೇಕು ಎನ್ನುವುದನ್ನು ತೀರ್ಮಾನಿಸಲು  ಕೇಂದ್ರ, ರಾಜ್ಯ ಸರ್ಕಾರಗಳು ಶಾಶ್ವತ ಹಿಂದುಳಿದ ಆಯೋಗಗಳನ್ನು ರಚಿಸಬೇಕು’ ಎಂದು 23 ವರ್ಷಗಳ ಹಿಂದೆ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.‘ನೇರ ಮೀಸಲಾತಿಗೆ ಅವಕಾಶವಿಲ್ಲದಾಗ ಉಪಜಾತಿಗಳಿಗೆ ಒಳ ಮೀಸಲಾತಿಯ ಅಸ್ತ್ರವನ್ನು ಬಳಸಿ ಮುಖ್ಯ ಜಾತಿಗಳಿಂದ ಉಪಜಾತಿಗಳನ್ನು ಬೇರ್ಪಡಿಸಿ ನಿಯಂತ್ರಿಸುವ ಹುನ್ನಾರಗಳು ನಮ್ಮ ಮುಂದಿವೆ’ ಎಂದು ಜಾಮದಾರ ಹೇಳಿದ್ದಾರೆ. ನಮ್ಮಲ್ಲಿ ಯಾವ ಜಾತಿಯೂ ಏಕಶಿಲಾ ರೂಪದ್ದಲ್ಲ, ಅದರೊಳಗೆ ನೂರಾರು ಉಪಜಾತಿಗಳಿವೆ. ಮೀಸಲಾತಿಯ ಲಾಭವನ್ನು ನಿರ್ದಿಷ್ಟ ಜಾತಿಯೊಳಗಿನ ಬಲಾಢ್ಯ ಗುಂಪುಗಳಷ್ಟೇ ಕೈವಶ ಮಾಡಿಕೊಳ್ಳುವುದರಿಂದ ಅದೇ ಜಾತಿಯೊಳಗಿನ ದುರ್ಬಲರ ಗುಂಪಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಇದೆ. ಹಾಗಿದ್ದರೆ ಸತ್ಯಾಂಶವನ್ನು ತಿಳಿದುಕೊಳ್ಳುವುದು ಬೇಡವೇ? ಸಂಖ್ಯಾ ಬಲಕ್ಕಾಗಿ ಎಲ್ಲರೂ ಬೇಕು, ಸೌಲಭ್ಯಗಳ ಪ್ರಶ್ನೆ ಎದುರಾದಾಗ ‘ಅವರಿಗೆ ಬೇಡ, ನಮಗಷ್ಟೇ ಸಾಕು’ ಎಂದು ಹೇಳುವುದು ಆಷಾಢಭೂತಿತನ.ಜಾತಿಗಣತಿ ಎನ್ನುವುದು ಆರ್ಎಸ್ಎಸ್‌ನ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನಕ್ಕೆ ನೆರವಾಗಬಹುದು ಎಂದು ಅವರು ಕಳವಳಪಟ್ಟಿದ್ದಾರೆ. ನಮ್ಮ ತಥಾಕಥಿತ ಹಿಂದೂ ರಾಷ್ಟ್ರವಾದಿಗಳು ಜಾತಿಯ ಪ್ರಶ್ನೆ ಎದುರಾದಾಗ ಓಡಿಹೋಗುತ್ತಾರೆ. ಯಾಕೆಂದರೆ ಜಾತಿಯ ಜತೆ ಎದುರಾಗುವ ಅಸ್ಪೃಶ್ಯತೆ, ಅಸಮಾನತೆ, ಪಂಕ್ತಿಭೇದ,  ಕಂದಾಚಾರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದಕ್ಕಾಗಿ ಅವರು ಜಾತಿಯ ಹುಣ್ಣನ್ನು ಒಳಗೆ ಕೊಳೆಯಲು ಬಿಟ್ಟು ಮೇಲೆ ಧರ್ಮದ ಮುಲಾಮು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಜಾತಿಗಣತಿ ನಡೆದರೆ ಈ ಹಿಂದೂಗಳಲ್ಲಿ ಕಳೆದುಕೊಂಡವರು ಯಾರು, ಪಡೆದುಕೊಂಡವರು ಯಾರು ಎಂಬ ಲೆಕ್ಕ ಸಿಕ್ಕಿದರೆ ಬಯಲಾಗುವುದು ಯಾರ ಮುಖಗಳು ಎನ್ನುವುದನ್ನು ಬಿಡಿಸಿ ಹೇಳಬೇಕೇ?ಬಲಿಷ್ಠ ಜಾತಿಗಳ ನಾಯಕರ ನೇತೃತ್ವದಲ್ಲಿಯೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ  ಎಂಬ ಆಧಾರರಹಿತ ರಾಜಕೀಯ ವಿಶ್ಲೇಷಣೆಯನ್ನು ಜಾಮದಾರ ಮುಂದಿಟ್ಟಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮೊದಲ ಬಾರಿಗೆ ಜಾತಿ ಬಲ ಇಲ್ಲದ ದೇವರಾಜ ಅರಸು ಅಧಿಕಾರಕ್ಕೆ ಬಂದಿರುವುದನ್ನು ಅವರು ಮುಚ್ಚಿಡುತ್ತಾರೆ, ಅರಸು ಅಧಿಕಾರ ಕಳೆದುಕೊಂಡದ್ದನ್ನು ಮಾತ್ರ ಪ್ರಸ್ತಾಪಿಸುತ್ತಾರೆ. 1983ರಲ್ಲಿ ಕಾಂಗ್ರೆಸ್  ಪಕ್ಷವನ್ನು ಸೋಲಿಸಿದ್ದು ಎಸ್.ಬಂಗಾರಪ್ಪ ಮತ್ತು ಅಬ್ದುಲ್ ನಜೀರ್ ಸಾಬ್ ನೇತೃತ್ವದ ಜನತಾ ರಂಗ. 1994ರಲ್ಲಿ ಕಾಂಗ್ರೆಸ್ ಪಕ್ಷ ಸೋತದ್ದು ವೀರೇಂದ್ರ ಪಾಟೀಲ್ ಅವರಿಗೆ ಕಾಂಗ್ರೆಸ್ ಪಕ್ಷ ಮಾಡಿದ ಮೋಸ ದಿಂದ ಎಂದು ಹೇಳುವವರು ಆ ಚುನಾವಣೆಯಲ್ಲಿ ಬಂಗಾರಪ್ಪ ಅವರು ವಹಿಸಿದ್ದ ಬಂಡುಕೋರನ ಪಾತ್ರ ವನ್ನು ಮರೆಯುತ್ತಾರೆ.ಜಾಮದಾರರು 1999ರ ಚುನಾವಣೆಯಲ್ಲಿ ಎಸ್. ಎಂ.ಕೃಷ್ಣ  ಅವರ ನೇತೃತ್ವದಲ್ಲಿ ಕಾಂಗ್ರೆಸ್ ಗೆದ್ದಿರುವುದನ್ನು ಉಲ್ಲೇಖಿಸುತ್ತಾರೆ. ಆದರೆ ಕಾಂಗ್ರೆಸ್ 2004ರಲ್ಲಿ ಕೃಷ್ಣ ನೇತೃತ್ವದಲ್ಲಿ ಸೋತಿರುವುದನ್ನು ಮರೆಯುತ್ತಾರೆ. ಆಶ್ಚರ್ಯ­ವೆಂದರೆ, ಅವರ ಚುನಾವಣಾ ವಿಶ್ಲೇಷಣೆ 2004ಕ್ಕೆ ನಿಂತು ಬಿಟ್ಟಿರುವುದು. ಅವರು 2013ರ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿದ್ದರೆ ಅವರ ಚುನಾವಣಾ ವಿಶ್ಲೇಷಣೆ ತಾರ್ಕಿಕ  ಅಂತ್ಯ ಕಾಣುತ್ತಿತ್ತು.  2013ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವ ವಹಿಸಿದ್ದವರು ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ. ಸೋತುಹೋದ ಅವರ ಎದುರಾಳಿ ಪಕ್ಷಗಳಾದ ಜೆಡಿಎಸ್, ಕೆಜೆಪಿ ಮತ್ತು ಬಿಜೆಪಿಯ  ನಾಯಕತ್ವ ಯಾರ ಕೈಯಲ್ಲಿತ್ತು? ಯಾವುದೇ ಚುನಾವಣೆಯಲ್ಲಿ ನಿರ್ದಿಷ್ಟ ಜಾತಿ ಜನ ನೂರಕ್ಕೆ ನೂರರಷ್ಟು ಒಂದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಹಾಗೆಂದು ತಿಳಿದುಕೊಳ್ಳುವುದು ಮತದಾರರಿಗೆ ಮಾಡುವ ಅವಮಾನ ಅಷ್ಟೆ.

Tuesday, March 10, 2015

ನೇಪಥ್ಯಕ್ಕೆ ಸರಿಯುತ್ತಿರುವ ಪ್ರತಿಭಾವಂತ ಪತ್ರಕರ್ತರು

‘’ನೀವು ಮತ್ತೆ ಪತ್ರಿಕೆಗೆ ಬರೆಯುವುದಿಲ್ವಾ, ಯಾಕೆ ಅರ್ಧದಲ್ಲಿಯೇ ನಿವೃತ್ತಿ ತೆಗೆದುಕೊಂಡ್ರಿ ಸಾರ್’ - ಇದು ಕಳೆದ 19 ತಿಂಗಳಲ್ಲಿ ನನ್ನನ್ನು ಭೇಟಿಯಾದ ಬಹುತೇಕ ಮಂದಿ ಕೇಳುತ್ತಿರುವ ಸಾಮಾನ್ಯ ಪ್ರಶ್ನೆ. ಇವರಲ್ಲಿ ಬಹಳಷ್ಟು ಮಂದಿ ಅಮಾಯಕರು. ಅವರು ನನ್ನ ಬರವಣಿಗೆಗಳನ್ನು ಓದುತ್ತಾ ಬಂದವರು, ಮುಂದೆಯೂ ಓದಲು ಬಯಸುವವರು ಅಷ್ಟೆ. ಅದರಾಚೆಗೆ ಇರುವ ಮಾಧ್ಯಮಲೋಕದ ಅಂತರಂಗದ ಬಗ್ಗೆ ಅವರಿಗೇನು ಗೊತ್ತಿಲ್ಲ. ಈ ಪ್ರಶ್ನೆಯ ಹುಳು ನನ್ನನ್ನು ಸದಾ ಕೊರೆಯುತ್ತಲೇ ಇದೆ. ಇದೇ ಗುಂಗಿನಲ್ಲಿ ನನ್ನಂತೆಯೇ ಪತ್ರಿಕಾ ವೃತ್ತಿಯಿಂದ ವಿರಾಮ ಪಡೆದವರು ಯಾರೆಲ್ಲಾ ಇದ್ದಾರೆ ಎಂದು ಯೋಚನೆ ಮಾಡತೊಡಗಿದೆ.
ನನಗೆ ಮೊದಲು ಹೊಳೆದದ್ದು ಮುಂಗಾರು ಪತ್ರಿಕೆಯ ಆರು ಮಂದಿ ನನ್ನ ಹಿರಿಯ ಸಹದ್ಯೋಗಿಗಳು. ಎನ್.ಎಸ್. ಶಂಕರ್,ಇಂದೂಧರ ಹೊನ್ನಾಪುರ, ಕೆ.ರಾಮಯ್ಯ, ಕೆ.ಪುಟ್ಟಸ್ವಾಮಿ, ಮಂಗ್ಲೂರು ವಿಜಯ ಮತ್ತು ಹಸನ್ ನಯೀಂ ಸುರಕೋಡ. ಇವರಲ್ಲಿ ಇಂದೂಧರ ಅವರು ಸಂವಾದ ಪತ್ರಿಕೆಯನ್ನು ನಡೆಸುತ್ತಾ ಇನ್ನೂ ವೃತ್ತಿಯಲ್ಲಿ ಸಕ್ರಿಯರಾಗಿದ್ದಾರೆ. ಉಳಿದವರೆಲ್ಲರೂ ಪತ್ರಿಕಾ ವೃತ್ತಿಯಿಂದ ದೂರ ಉಳಿದಿದ್ದಾರೆ. ಇವರೆಲ್ಲರನ್ನೂ ವೈಯಕ್ತಿಕವಾಗಿ ನಾನು ರೋಲ್ ಮಾಡೆಲ್ ಎಂದು ತಿಳಿದುಕೊಂಡವನು. ಇವರೆಲ್ಲರೂ ಪತ್ರಕರ್ತರಾಗಿ ಈಗಲೂ ಸಕ್ರಿಯರಾಗಿದ್ದರೆ ಕನ್ನಡ ಮಾಧ್ಯಮದ ದಿಕ್ಕು-ದೆಸೆ ಬೇರೆಯೇ ಆಗಿರುತ್ತಿತ್ತು.
ಇವರ ನಂತರ ನನಗೆ ನೆನಪಾದವರು ವೃತ್ತಿಯಿಂದ ನಿವೃತ್ತಿಯಾದರೂ ಬರೆಯುವ ಶಕ್ತಿ ಮತ್ತು ಆಸಕ್ತಿಯನ್ನು ಉಳಿಸಿಕೊಂಡ ಪ್ರಜಾವಾಣಿಯ ನನ್ನ ಹಿರಿಯ ಸಹದ್ಯೋಗಿಗಳು. ಇವರಲ್ಲಿ ರಾಜಾ ಶೈಲೇಶಚಂದ್ರ ಗುಪ್ತಾ, ಶಿವಾಜಿ ಗಣೇಶನ್, ಡಿ.ವಿ.ರಾಜಶೇಖರ್, ಲಕ್ಷ್ಮಣ ಕೊಡಸೆ ಮತ್ತು ಅಬ್ಬೂರು ರಾಜಶೇಖರ ಪ್ರಮುಖರು. ಕನ್ನಡದಲ್ಲಿ ಹಣಕಾಸು ಕ್ಷೇತ್ರದ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲವರು ಶೈಲೇಶಚಂದ್ರ ಗುಪ್ತಾ. ಶಿವಾಜಿ ಗಣೇಶನ್ ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಅತ್ಯುನ್ನತ ಹುದ್ದೆಗೇರಿ ನಿವೃತ್ತರಾದ ಮೊದಲ ದಲಿತ ಪತ್ರಕರ್ತ. ಕನ್ನಡದಲ್ಲಿ ವಿದೇಶಾಂಗ ವ್ಯವಹಾರದ ಬಗ್ಗೆ ಸುದೀರ್ಘವಾಗಿ ಬರೆದು ಕನ್ನಡದ ಓದುಗರಿಗೆ ಹೊರಜಗತ್ತನ್ನು ಪರಿಚಯಿಸುತ್ತಾ ಬಂದವರು ಡಿ.ವಿ.ರಾಜಶೇಖರ್. ಇದೇ ರೀತಿ ಲಕ್ಷಣ ಕೊಡಸೆ ಮತ್ತು ಅಬ್ಬೂರು ರಾಜಶೇಖರ್ ಯಾವುದಾದರೂ ಒಂದು ಪತ್ರಿಕೆಯ ಸಾರಥ್ಯ ವಹಿಸುವಷ್ಟು ಪ್ರತಿಭಾವಂತರು. ಇವರಲ್ಲಿ ಗುಪ್ತಾ ಅವರು ಸಂಯುಕ್ತ ಕರ್ನಾಟಕಕ್ಕೆ ಅಂಕಣ ಬರೆಯುತ್ತಿದ್ದಾರೆ. ರಾಜಶೇಖರ್ ಇತ್ತೀಚಿನ ವರೆಗೆ ವಿಜಯಕರ್ನಾಟಕಕ್ಕೆ ಬರೆಯುತ್ತಿದ್ದರು. ಅದನ್ನು ನಿಲ್ಲಿಸಿದ ಹಾಗೆ ಕಾಣುತ್ತಿದೆ.
ಕೊನೆಯದಾಗಿ ಇವರಿಗೆಲ್ಲರಿಗಿಂತ ಕಡಿಮೆ ವಯಸ್ಸಿನ ಪತ್ರಕರ್ತರ ಇನ್ನೊಂದು ಗುಂಪಿದೆ. ಮಾತು ಮತ್ತು ಕೃತಿ ನಡುವೆ ಅಂತರ ಇಲ್ಲದಂತೆ ಬದುಕುತ್ತಾ ಬಂದ ಶಶಿಧರ್ ಭಟ್ ಪತ್ರಿಕೆ ಮತ್ತು ಚಾನೆಲ್ ಗಳೆರಡರಲ್ಲಿಯೂ ದೀರ್ಘ ಅನುಭವ ಇದ್ದವರು. ರಾಜಿ ಮನೋಭಾವದವರಲ್ಲದ ಭಟ್ರು ಸದ್ಯಕ್ಕೆ ನಿರುದ್ಯೋಗಿ. ಪ್ರಿಂಟ್ ನಿಂದ ಟಿವಿ ಪ್ರವೇಶಿಸಿ ಅಲ್ಲಿಯೂ ತನ್ನ ಛಾಪು ಮೂಡಿಸಿದ್ದ ಲಕ್ಷ್ಮಣ್ ಹೂಗಾರ್ ವೃತ್ತಿಯಿಂದ ದೂರವಾಗಿ ತೋಟ ನೋಡಿಕೊಳ್ಳುತ್ತಾ, ನೀರಾವರಿ ಹೋರಾಟ ನಡೆಸುತ್ತಾ ಆರಾಮವಾಗಿದ್ದಾರೆ(?). ಕನ್ನಡದಿಂದ ಇಂಗ್ಲೀಷ್ ಗೆ ಜಿಗಿದ ಇನ್ನೊಬ್ಬ ಗ್ರಾಮೀಣ ಪ್ರತಿಭೆ ನವೀನ್ ಅಮ್ಮೆಂಬಳ ಕೂಡಾ ಕಳೆದ ಕೆಲವು ತಿಂಗಳುಗಳಿಂದ ನಿರುದ್ಯೋಗಿ. ಇದೇ ಸಾಲಿನಲ್ಲಿ ಮುಂಗಾರು ತೊರೆದು ಲಂಕೇಶ್ ಪತ್ರಿಕೆ ಸೇರಿ ಅಲ್ಲಿಂದಲೂ ಹೊರಬಂದು ಈಗ ಮಾಧ್ಯಮಲೋಕದಿಂದ ದೂರ ಇರುವ ಟಿ.ಕೆ.ತ್ಯಾಗರಾಜ್ ಇದ್ದಾರೆ, ಜತೆಗೆ ಚಿದಂಬರ ಬೈಕಂಪಾಡಿ ಎಂಬ ಇನ್ನೊಬ್ಬ ಗೆಳೆಯ ಮಂಗಳೂರಿನಲ್ಲಿದ್ದಾನೆ.
ಇಂಗ್ಲೀಷ್ ಪತ್ರಿಕೋದ್ಯಮ ತೊರೆದು ಕನ್ನಡಕ್ಕೆ ಬಂದ ಸುಗತ ಶ್ರೀನಿವಾಸರಾಜು ವಿಜಯ ಕರ್ನಾಟಕ ಪತ್ರಿಕೆಯಿಂದ ಬಿಡುಗಡೆ ಹೊಂದಿರುವುದು ಇತ್ತೀಚಿನ ಶಾಕಿಂಗ್ ಸುದ್ದಿ. ಇಂಗ್ಲೀಷ್ ಮತ್ತು ಕನ್ನಡಗಳೆರಡರಲ್ಲಿಯೂ ಸೊಗಸಾಗಿ ಬರೆಯಬಲ್ಲ ಮತ್ತು ಹೊಸತಲೆಮಾರಿನ ಅತ್ಯಂತ ಪ್ರತಿಭಾವಂತ ಪತ್ರಕರ್ತ ಸುಗತ ಪತ್ರಿಕಾ ವೃತ್ತಿಯಲ್ಲಿ ಮುಂದುವರಿದರೂ ಕನ್ನಡದಲ್ಲಿಯೇ ಉಳಿಯುವುದು ಅನುಮಾನ.
ಯಾಕೆ ಹೀಗಾಗುತ್ತಿದೆ? ಯಾರಲ್ಲಿಯಾದರೂ ಉತ್ತರ ಇದೆಯಾ? ಸೂಕ್ಷ್ಮವಾಗಿ ನಾನು ಉಲ್ಲೇಖಿಸಿದ ಪತ್ರಕರ್ತರೆಲ್ಲರ ಹಿನ್ನೆಲೆಯನ್ನು ನೋಡಿ ಉತ್ತರ ಸಿಗಬಹುದೇನೋ? ಇದರ ನಂತರವಾದರೂ ನನ್ನನ್ನು ಪ್ರಶ್ನಿಸುವವರು ಕಡಿಮೆಯಾಗಬಹುದೇನೋ? ‘’ಅದೆಲ್ಲ ಇರಲಿ ನೀವು ಯಾಕೆ ಪ್ರಜಾವಾಣಿ ಬಿಟ್ಟು ಬಂದ್ರಿ?’’ ಎಂದು ಮತ್ತೆ ಯಾರಾದರೂ ಕೇಳಿದರೆ ನಾನು ಉತ್ತರಿಸಲಾರೆ.

Sunday, March 8, 2015

ಮಾಧ್ಯಮ ಕ್ಷೇತ್ರದ ಕೊನೆಯ ‘ಕಸುಬುದಾರ ಸಂಪಾದಕ’

ಲಂಕೇಶ್ ಅವರ 80ನೇ ಹುಟ್ಟುಹಬ್ಬದ ದಿನವೇ ‘ಇಂಗ್ಲೀಷ್ ನ ಲಂಕೇಶ್ ‘ ಎಂದು ನನ್ನಂತಹವರು ತಿಳಿದುಕೊಂಡಿದ್ದ ಸಂಪಾದಕ ವಿನೋದ್ ಮೆಹ್ತಾ ನಮ್ಮನಗಲಿದ್ದಾರೆ. ಅವರಲ್ಲೊಂದು ಪಾಪ ನಿವೇದನೆ ಮಾಡುವುದಿತ್ತು. ಕೊನೆಗೂ ಅದಕ್ಕೆ ಅವಕಾಶ ಸಿಗಲಿಲ್ಲ. ನನ್ನ ವಯಸ್ಸಿನ ಪತ್ರಕರ್ತರೆಲ್ಲರೂ ಲಂಕೇಶ್ ಪತ್ರಿಕೆಯನ್ನು ಓದುತ್ತಾ ಬೆಳೆಯಲು ಪ್ರಯತ್ನಪಟ್ಟವರು. ಇದಕ್ಕಿಂತ ಮೊದಲು ವಿದ್ಯಾರ್ಥಿ ದಿನಗಳಲ್ಲಿಯೇ ಭಾರತದ ಪ್ಲೇ ಬಾಯ್ ಎಂದೇ ಬಣ್ಣಿಸಲಾಗುತ್ತಿದ್ದ ‘ಡೆಬೋನೇರ್’ ಪತ್ರಿಕೆಯ ಹಳೆಯ ಪ್ರತಿಗಳನ್ನು ಕದ್ದುಮುಚ್ಚಿ ಓದುತ್ತಿದ್ದರೂ ಅದರ ಸಂಪಾದಕ ವಿನೋದ್ ಮೆಹ್ತಾ ಎನ್ನುವುದು ಗೊತ್ತಿರಲಿಲ್ಲ.

ವಿನೋದ್ ಮೆಹ್ತಾ ನನ್ನ ಓದಿನ ಲೋಕ ಪ್ರವೇಶಿಸಿದ್ದು ಆಕಸ್ಮಿಕವಾಗಿ. ನಾನಾಗ ಮುಂಗಾರು ಪತ್ರಿಕೆಯಲ್ಲಿ ಸುದ್ದಿ ಸಂಪಾದಕನಾಗಿದ್ದೆ. ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಭಾನುವಾರದ ದಿನ ಸುದ್ದಿಗೆ ಬರ ಇರುತ್ತದೆ.ಅಂತಹದ್ದೊಂದು ಚಿಂತಾಕ್ರಾಂತ ಸ್ಥಿತಿಯಲ್ಲಿ ಮಂಗಳೂರಿನ ನ್ಯೂಸ್ ಪೇಪರ್ ಸ್ಟಾಲ್ ನಲ್ಲಿ ‘ಸಂಡೇ ಆಬ್ಸರ್ವರ್ ‘ಕಣ್ಣಿಗೆ ಬಿತ್ತು. ಪುಟ ತಿರುಗಿಸಿದರೆ ಎಲ್ಲೆಲ್ಲೂ ‘ exclusive ವರದಿಗಳು. ಕಚೇರಿಗೆ ಬಂದವನೇ ಒಂದೆರಡನ್ನು ಕದ್ದು ಕನ್ನಡಕ್ಕೆ ಭಟ್ಟಿ ಇಳಿಸಿದ್ದೆ. ಅದರ ನಂತರ ಪ್ರತಿ ಭಾನುವಾರ ಅದೊಂದು ಸಂಪ್ರದಾಯವಾಗಿತ್ತು. ಅವರು ಸಂಡೇ ಆಬ್ಸರ್ವರ್ ಬಿಟ್ಟಾಗ ಬಹಳ ಬೇಸರವಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರು ‘ದಿ ಇಂಡಿಯನ್ ಪೋಸ್ಟ್ ‘ ಎಂಬ ಇನ್ನೊಂದು ಪತ್ರಿಕೆ ಪ್ರಾರಂಭಿಸಿದ್ದರಿಂದ ನಮ್ಮ ಭಾನುವಾರದ ಸುದ್ದಿಗೆ ತತ್ವಾರ ಬರಲಿಲ್ಲ. ಅಲ್ಲಿಂದಲೂ ಬಿಟ್ಟುಹೋದ ಮೆಹ್ತಾ ‘ದಿ ಇಂಡಿಪೆಂಡೆಂಟ್’ ಪ್ರಾರಂಭಿಸಿದರು. ಅದು ಬಹಳ ಕಾಲ ಉಳಿಯಲಿಲ್ಲ.
ಮಂಗಳೂರಿನಲ್ಲಿ ಈ ಪತ್ರಿಕೆಗಳ ಪ್ರಸಾರವೇ 50ರ ಆಜುಬಾಜಿನಲ್ಲಿದ್ದರಿಂದ ವರದಿಯ ಮೂಲ ಯಾವುದು ಎಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ನಮ್ಮಲ್ಲಿ ಮುಂಬೈ, ದೆಹಲಿ ಡೇಟ್ ಲೈನ್ ನಲ್ಲಿ ಪ್ರಸಾರವಾಗುತ್ತಿದ್ದ ‘ exclusive ವರದಿಗಳಿಗೆ ಓದುಗರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಒಂದಷ್ಟು ದಿನ ಪ್ರತಿಸ್ಪರ್ಧಿ ಪತ್ರಿಕೆಗಳು ಕೂಡಾ ಬೇಸ್ತು ಬಿದ್ದದ್ದು ನಿಜ. ವಿನೋದ್ ಮೆಹ್ತಾ ಬದುಕಿದ್ದಾಗಲೇ ಭೇಟಿಯಾಗಿ ಸಾರಿ ಕೇಳಬೇಕೆಂದಿದ್ದೆ, ಆಗಲಿಲ್ಲ, ಅದಕ್ಕಾಗಿ ಈಗ ಆಕಾಶಕ್ಕೆ ಮುಖಮಾಡಿ ‘ ಈ ಕಳ್ಳನನ್ನು ಕ್ಷಮಿಸಿ’ ಎಂದು ಹೇಳುತ್ತಿರುವೆ.
ಆದರೆ ಈ ಕಳ್ಳಾಟದಲ್ಲಿ ನಾನು ವಿನೋದ್ ಮೆಹ್ತಾ ಅವರ ಅಭಿಮಾನಿಯಾಗಿಬಿಟ್ಟಿದ್ದೆ. ಡೆಬೋನೇರ್, ಸಂಡೇ ಆಬ್ಸರ್ವರ್, ದಿ ಇಂಡಿಯನ್ ಪೋಸ್ಟ್, ಇಂಡಿಪೆಂಡೆಂಟ್’ ಕೊನೆಗೆ ಔಟ್ ಲುಕ್ ಪತ್ರಿಕೆಗಳ ವರೆಗೆ ಅವರ ಜತೆ ನನ್ನ ಪಯಣವೂ ಸಾಗಿ ಬಂದಿತ್ತು. ಈಗ ಇದ್ದಕ್ಕಿದ್ದ ಹಾಗೆ ನಮ್ಮನ್ನು ಅಗಲಿ ಹೋಗಿದ್ದಾರೆ. ಸಂಪಾದಕರ ಸ್ಥಾನವನ್ನು ಮ್ಯಾನೇಜರ್ ಗಳು ಆಕ್ರಮಿಸಿಕೊಳ್ಳುತ್ತಿರುವುದನ್ನು ನೋಡಿದರೆ ‘ಕಸುಬುದಾರ ಸಂಪಾದಕ’ ಎಂಬ ಕಿರೀಟ ವಿನೋದ್ ಮೆಹ್ತಾ ಅವರ ತಲೆಮೇಲೆಯೇ ಶಾಶ್ವತವಾಗಿ ಉಳಿದುಬಿಡುತ್ತೋ ಏನೋ? ಅದಕ್ಕೆ ಅವರು ಸಂಪೂರ್ಣ ಅರ್ಹರು ಕೂಡಾ.

ಲಂಕೇಶ್ ರ 80ನೇ ಹುಟ್ಟುಹಬ್ಬ ಹಾಗೂ ಗೌರಿ ಲಂಕೇಶ್ ಪತ್ರಿಕೆಯ 10ನೇ ವಾರ್ಷಿಕೋತ್ಸವ