Tuesday, March 10, 2015

ನೇಪಥ್ಯಕ್ಕೆ ಸರಿಯುತ್ತಿರುವ ಪ್ರತಿಭಾವಂತ ಪತ್ರಕರ್ತರು

‘’ನೀವು ಮತ್ತೆ ಪತ್ರಿಕೆಗೆ ಬರೆಯುವುದಿಲ್ವಾ, ಯಾಕೆ ಅರ್ಧದಲ್ಲಿಯೇ ನಿವೃತ್ತಿ ತೆಗೆದುಕೊಂಡ್ರಿ ಸಾರ್’ - ಇದು ಕಳೆದ 19 ತಿಂಗಳಲ್ಲಿ ನನ್ನನ್ನು ಭೇಟಿಯಾದ ಬಹುತೇಕ ಮಂದಿ ಕೇಳುತ್ತಿರುವ ಸಾಮಾನ್ಯ ಪ್ರಶ್ನೆ. ಇವರಲ್ಲಿ ಬಹಳಷ್ಟು ಮಂದಿ ಅಮಾಯಕರು. ಅವರು ನನ್ನ ಬರವಣಿಗೆಗಳನ್ನು ಓದುತ್ತಾ ಬಂದವರು, ಮುಂದೆಯೂ ಓದಲು ಬಯಸುವವರು ಅಷ್ಟೆ. ಅದರಾಚೆಗೆ ಇರುವ ಮಾಧ್ಯಮಲೋಕದ ಅಂತರಂಗದ ಬಗ್ಗೆ ಅವರಿಗೇನು ಗೊತ್ತಿಲ್ಲ. ಈ ಪ್ರಶ್ನೆಯ ಹುಳು ನನ್ನನ್ನು ಸದಾ ಕೊರೆಯುತ್ತಲೇ ಇದೆ. ಇದೇ ಗುಂಗಿನಲ್ಲಿ ನನ್ನಂತೆಯೇ ಪತ್ರಿಕಾ ವೃತ್ತಿಯಿಂದ ವಿರಾಮ ಪಡೆದವರು ಯಾರೆಲ್ಲಾ ಇದ್ದಾರೆ ಎಂದು ಯೋಚನೆ ಮಾಡತೊಡಗಿದೆ.
ನನಗೆ ಮೊದಲು ಹೊಳೆದದ್ದು ಮುಂಗಾರು ಪತ್ರಿಕೆಯ ಆರು ಮಂದಿ ನನ್ನ ಹಿರಿಯ ಸಹದ್ಯೋಗಿಗಳು. ಎನ್.ಎಸ್. ಶಂಕರ್,ಇಂದೂಧರ ಹೊನ್ನಾಪುರ, ಕೆ.ರಾಮಯ್ಯ, ಕೆ.ಪುಟ್ಟಸ್ವಾಮಿ, ಮಂಗ್ಲೂರು ವಿಜಯ ಮತ್ತು ಹಸನ್ ನಯೀಂ ಸುರಕೋಡ. ಇವರಲ್ಲಿ ಇಂದೂಧರ ಅವರು ಸಂವಾದ ಪತ್ರಿಕೆಯನ್ನು ನಡೆಸುತ್ತಾ ಇನ್ನೂ ವೃತ್ತಿಯಲ್ಲಿ ಸಕ್ರಿಯರಾಗಿದ್ದಾರೆ. ಉಳಿದವರೆಲ್ಲರೂ ಪತ್ರಿಕಾ ವೃತ್ತಿಯಿಂದ ದೂರ ಉಳಿದಿದ್ದಾರೆ. ಇವರೆಲ್ಲರನ್ನೂ ವೈಯಕ್ತಿಕವಾಗಿ ನಾನು ರೋಲ್ ಮಾಡೆಲ್ ಎಂದು ತಿಳಿದುಕೊಂಡವನು. ಇವರೆಲ್ಲರೂ ಪತ್ರಕರ್ತರಾಗಿ ಈಗಲೂ ಸಕ್ರಿಯರಾಗಿದ್ದರೆ ಕನ್ನಡ ಮಾಧ್ಯಮದ ದಿಕ್ಕು-ದೆಸೆ ಬೇರೆಯೇ ಆಗಿರುತ್ತಿತ್ತು.
ಇವರ ನಂತರ ನನಗೆ ನೆನಪಾದವರು ವೃತ್ತಿಯಿಂದ ನಿವೃತ್ತಿಯಾದರೂ ಬರೆಯುವ ಶಕ್ತಿ ಮತ್ತು ಆಸಕ್ತಿಯನ್ನು ಉಳಿಸಿಕೊಂಡ ಪ್ರಜಾವಾಣಿಯ ನನ್ನ ಹಿರಿಯ ಸಹದ್ಯೋಗಿಗಳು. ಇವರಲ್ಲಿ ರಾಜಾ ಶೈಲೇಶಚಂದ್ರ ಗುಪ್ತಾ, ಶಿವಾಜಿ ಗಣೇಶನ್, ಡಿ.ವಿ.ರಾಜಶೇಖರ್, ಲಕ್ಷ್ಮಣ ಕೊಡಸೆ ಮತ್ತು ಅಬ್ಬೂರು ರಾಜಶೇಖರ ಪ್ರಮುಖರು. ಕನ್ನಡದಲ್ಲಿ ಹಣಕಾಸು ಕ್ಷೇತ್ರದ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲವರು ಶೈಲೇಶಚಂದ್ರ ಗುಪ್ತಾ. ಶಿವಾಜಿ ಗಣೇಶನ್ ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಅತ್ಯುನ್ನತ ಹುದ್ದೆಗೇರಿ ನಿವೃತ್ತರಾದ ಮೊದಲ ದಲಿತ ಪತ್ರಕರ್ತ. ಕನ್ನಡದಲ್ಲಿ ವಿದೇಶಾಂಗ ವ್ಯವಹಾರದ ಬಗ್ಗೆ ಸುದೀರ್ಘವಾಗಿ ಬರೆದು ಕನ್ನಡದ ಓದುಗರಿಗೆ ಹೊರಜಗತ್ತನ್ನು ಪರಿಚಯಿಸುತ್ತಾ ಬಂದವರು ಡಿ.ವಿ.ರಾಜಶೇಖರ್. ಇದೇ ರೀತಿ ಲಕ್ಷಣ ಕೊಡಸೆ ಮತ್ತು ಅಬ್ಬೂರು ರಾಜಶೇಖರ್ ಯಾವುದಾದರೂ ಒಂದು ಪತ್ರಿಕೆಯ ಸಾರಥ್ಯ ವಹಿಸುವಷ್ಟು ಪ್ರತಿಭಾವಂತರು. ಇವರಲ್ಲಿ ಗುಪ್ತಾ ಅವರು ಸಂಯುಕ್ತ ಕರ್ನಾಟಕಕ್ಕೆ ಅಂಕಣ ಬರೆಯುತ್ತಿದ್ದಾರೆ. ರಾಜಶೇಖರ್ ಇತ್ತೀಚಿನ ವರೆಗೆ ವಿಜಯಕರ್ನಾಟಕಕ್ಕೆ ಬರೆಯುತ್ತಿದ್ದರು. ಅದನ್ನು ನಿಲ್ಲಿಸಿದ ಹಾಗೆ ಕಾಣುತ್ತಿದೆ.
ಕೊನೆಯದಾಗಿ ಇವರಿಗೆಲ್ಲರಿಗಿಂತ ಕಡಿಮೆ ವಯಸ್ಸಿನ ಪತ್ರಕರ್ತರ ಇನ್ನೊಂದು ಗುಂಪಿದೆ. ಮಾತು ಮತ್ತು ಕೃತಿ ನಡುವೆ ಅಂತರ ಇಲ್ಲದಂತೆ ಬದುಕುತ್ತಾ ಬಂದ ಶಶಿಧರ್ ಭಟ್ ಪತ್ರಿಕೆ ಮತ್ತು ಚಾನೆಲ್ ಗಳೆರಡರಲ್ಲಿಯೂ ದೀರ್ಘ ಅನುಭವ ಇದ್ದವರು. ರಾಜಿ ಮನೋಭಾವದವರಲ್ಲದ ಭಟ್ರು ಸದ್ಯಕ್ಕೆ ನಿರುದ್ಯೋಗಿ. ಪ್ರಿಂಟ್ ನಿಂದ ಟಿವಿ ಪ್ರವೇಶಿಸಿ ಅಲ್ಲಿಯೂ ತನ್ನ ಛಾಪು ಮೂಡಿಸಿದ್ದ ಲಕ್ಷ್ಮಣ್ ಹೂಗಾರ್ ವೃತ್ತಿಯಿಂದ ದೂರವಾಗಿ ತೋಟ ನೋಡಿಕೊಳ್ಳುತ್ತಾ, ನೀರಾವರಿ ಹೋರಾಟ ನಡೆಸುತ್ತಾ ಆರಾಮವಾಗಿದ್ದಾರೆ(?). ಕನ್ನಡದಿಂದ ಇಂಗ್ಲೀಷ್ ಗೆ ಜಿಗಿದ ಇನ್ನೊಬ್ಬ ಗ್ರಾಮೀಣ ಪ್ರತಿಭೆ ನವೀನ್ ಅಮ್ಮೆಂಬಳ ಕೂಡಾ ಕಳೆದ ಕೆಲವು ತಿಂಗಳುಗಳಿಂದ ನಿರುದ್ಯೋಗಿ. ಇದೇ ಸಾಲಿನಲ್ಲಿ ಮುಂಗಾರು ತೊರೆದು ಲಂಕೇಶ್ ಪತ್ರಿಕೆ ಸೇರಿ ಅಲ್ಲಿಂದಲೂ ಹೊರಬಂದು ಈಗ ಮಾಧ್ಯಮಲೋಕದಿಂದ ದೂರ ಇರುವ ಟಿ.ಕೆ.ತ್ಯಾಗರಾಜ್ ಇದ್ದಾರೆ, ಜತೆಗೆ ಚಿದಂಬರ ಬೈಕಂಪಾಡಿ ಎಂಬ ಇನ್ನೊಬ್ಬ ಗೆಳೆಯ ಮಂಗಳೂರಿನಲ್ಲಿದ್ದಾನೆ.
ಇಂಗ್ಲೀಷ್ ಪತ್ರಿಕೋದ್ಯಮ ತೊರೆದು ಕನ್ನಡಕ್ಕೆ ಬಂದ ಸುಗತ ಶ್ರೀನಿವಾಸರಾಜು ವಿಜಯ ಕರ್ನಾಟಕ ಪತ್ರಿಕೆಯಿಂದ ಬಿಡುಗಡೆ ಹೊಂದಿರುವುದು ಇತ್ತೀಚಿನ ಶಾಕಿಂಗ್ ಸುದ್ದಿ. ಇಂಗ್ಲೀಷ್ ಮತ್ತು ಕನ್ನಡಗಳೆರಡರಲ್ಲಿಯೂ ಸೊಗಸಾಗಿ ಬರೆಯಬಲ್ಲ ಮತ್ತು ಹೊಸತಲೆಮಾರಿನ ಅತ್ಯಂತ ಪ್ರತಿಭಾವಂತ ಪತ್ರಕರ್ತ ಸುಗತ ಪತ್ರಿಕಾ ವೃತ್ತಿಯಲ್ಲಿ ಮುಂದುವರಿದರೂ ಕನ್ನಡದಲ್ಲಿಯೇ ಉಳಿಯುವುದು ಅನುಮಾನ.
ಯಾಕೆ ಹೀಗಾಗುತ್ತಿದೆ? ಯಾರಲ್ಲಿಯಾದರೂ ಉತ್ತರ ಇದೆಯಾ? ಸೂಕ್ಷ್ಮವಾಗಿ ನಾನು ಉಲ್ಲೇಖಿಸಿದ ಪತ್ರಕರ್ತರೆಲ್ಲರ ಹಿನ್ನೆಲೆಯನ್ನು ನೋಡಿ ಉತ್ತರ ಸಿಗಬಹುದೇನೋ? ಇದರ ನಂತರವಾದರೂ ನನ್ನನ್ನು ಪ್ರಶ್ನಿಸುವವರು ಕಡಿಮೆಯಾಗಬಹುದೇನೋ? ‘’ಅದೆಲ್ಲ ಇರಲಿ ನೀವು ಯಾಕೆ ಪ್ರಜಾವಾಣಿ ಬಿಟ್ಟು ಬಂದ್ರಿ?’’ ಎಂದು ಮತ್ತೆ ಯಾರಾದರೂ ಕೇಳಿದರೆ ನಾನು ಉತ್ತರಿಸಲಾರೆ.

1 comment:

  1. ಹೌದು, ಪತ್ರಕರ್ತರ ಹಿನ್ನೆಲೆ ನೋಡಿದರೆ ವ್ಯವಸ್ಥಿತ ಷಡ್ಯಂತ್ರ ನಡೆದಿದೆಯೇ ಎಂಬ ಅನುಮಾನ ಮೂಡುತ್ತದೆ. ವ್ಯವಸ್ಥಿತ ಪ್ರಗತಿಪರ ಪತ್ರಿಕೆಯೊಂದರ ಅಗತ್ಯತೆ ತುಂಬಾ ಕಾಡುತ್ತಿದೆ ಸರ್. ನಿಮ್ಮಿಂದ ಆ ಕೈಂಕರ್ಯಕ್ಕೆ ಮುನ್ನುಡಿ ಬೀಳಬೇಕು.

    ReplyDelete