Thursday, January 19, 2012

ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು.... January 16, 2012


ಸ್ವಾಮಿ ವಿವೇಕಾನಂದರು ಒಬ್ಬ `ದಡ್ಡ` ವಿದ್ಯಾರ್ಥಿಯಾಗಿದ್ದರು. `ವಿದ್ಯಾರ್ಥಿಗಳಿಗೆ ಬೋಧಿಸಲು ಬರುವುದಿಲ್ಲ` ಎಂಬ ಕಾರಣಕ್ಕೆ ಶಿಕ್ಷಕನ ಉದ್ಯೋಗ ಕಳೆದುಕೊಂಡಿದ್ದರು.

ಹುಟ್ಟಿನಿಂದಲೇ ರೋಗಿಷ್ಠರಾಗಿದ್ದ ಅವರು ಸಾಯುವ ಹೊತ್ತಿಗೆ ಒಂದೆರಡಲ್ಲ, ಮೂವತ್ತೊಂದು ಬಗೆಯ ರೋಗಗಳಿಂದ ಬಳಲಿ ಹೋಗಿದ್ದರು. ಎಲ್ಲ ಬಂಗಾಳಿಗಳಂತೆ ಅವರೊಬ್ಬ ಮಹಾ ತಿಂಡಿಪೋತರಾಗಿದ್ದರು.

ಜೀವನದ ಕೊನೆಯ ದಿನದವರೆಗೂ ಅವರು ಮಾಂಸಾಹಾರಿ ಆಗಿದ್ದರು. ಜತೆಗೆ ದೇಶ-ವಿದೇಶದ ಮಾಂಸಾಹಾರಿ ಅಡುಗೆಯನ್ನು ಮಾಡುವ ಪಾಕಪ್ರಾವೀಣ್ಯತೆ ಹೊಂದಿದ್ದರು. ವ್ಯಸನಿಯಂತೆ ಸಿಗರೇಟ್-ಹುಕ್ಕಾ ಸೇದುವ ಧೂಮಪಾನಿಯಾಗಿದ್ದರು. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲರ ಮನೆಯಲ್ಲಿ ಭೇದ ಇಲ್ಲದೆ ಊಟ ಮಾಡುತ್ತಿದ್ದರು.

ಸನ್ಯಾಸಿಯಾಗಿದ್ದುಕೊಂಡೇ ಅವರು ಅಮೆರಿಕದ ಪ್ರಖ್ಯಾತ ಹೋಟೆಲ್‌ಗಳಲ್ಲಿ ರಾತ್ರಿಯಿಂದ ಬೆಳಗಿನ ಜಾವದವರೆಗೆ ನಡೆಯುವ ಔತಣಕೂಟಗಳಲ್ಲಿ ಭಾಗವಹಿಸುತ್ತಿದ್ದರು....ಹೀಗೆ ಹೇಳುತ್ತಾ ಹೋದರೆ ಸ್ವಾಮಿ ವಿವೇಕಾನಂದರನ್ನು `ಹಿಂದೂ ಧರ್ಮದ ವೀರ ಸನ್ಯಾಸಿ` ಎಂದು ಕೊಂಡಾಡುತ್ತಾ ಅವರ 150ನೇ ಜಯಂತಿ ಆಚರಣೆಯ ಸಂಭ್ರಮದಲ್ಲಿ ಮುಳುಗಿರುವವರಿಗೆ ಆಘಾತವಾದೀತು! ಆದರೆ ಇದು ಸತ್ಯ.

ಒಬ್ಬ ಶೂದ್ರನಾಗಿ ಹಿಂದೂ ಧರ್ಮದ ಪರಂಪರೆಗೆ ವಿರುದ್ಧವಾಗಿ ಸನ್ಯಾಸಿ ದೀಕ್ಷೆ ಪಡೆದ ವಿವೇಕಾನಂದರು, ಅದೇ ಪರಂಪರೆಯನ್ನು ಧಿಕ್ಕರಿಸಿ ಸಮುದ್ರ ಲಂಘನ ಮಾಡಿದ್ದರು.

ಸನಾತನಿಗಳು ದ್ವೇಷಿಸುತ್ತಿದ್ದ `ಮ್ಲೇಚ್ಛರ` ಮನೆಗಳಲ್ಲಿಯೇ ಉಳಿದು ಉಂಡು ದಿನ ಕಳೆದಿದ್ದರು. ಇದಕ್ಕಾಗಿಯೇ ಚಿಕಾಗೋ ಧರ್ಮ ಸಮ್ಮೇಳನಕ್ಕೆ ಹೋಗಿ ಹಿಂದಿರುಗಿದ ಅವರನ್ನು ಸ್ವಾಗತಿಸಲು ರಚಿಸಿದ ಸಮಿತಿಗೆ ಅಧ್ಯಕ್ಷರಾಗಲು ಹೈಕೋರ್ಟ್ ನ್ಯಾಯಮೂರ್ತಿ ಗುರುದಾಸ್ ಮುಖರ್ಜಿ ನಿರಾಕರಿಸಿದ್ದರು.

ಸನ್ಯಾಸಿಯಾದ ನಂತರವೂ ಬಹಳಷ್ಟು ಮೇಲ್ಜಾತಿ ಗಣ್ಯರು ಅವರನ್ನು `ಸೋದರ`ನೆಂದು ಕರೆಯುತ್ತಿದ್ದರೇ ಹೊರತು `ಸ್ವಾಮಿ` ಎನ್ನುತ್ತಿರಲಿಲ್ಲ. ಹಿಂದೂ ಧರ್ಮದ ಜಾತೀಯತೆ, ಅಸ್ಪೃಶ್ಯತೆ, ಅಂಧ ಸಂಪ್ರದಾಯಗಳು, ದೇವಾಲಯಗಳಲ್ಲಿ ನಡೆಯುತ್ತಿರುವ ಡಾಂಭಿಕತನ, ಮತಾಂತರದ ಬಗ್ಗೆ ಅವರು ಬರೆದುದನ್ನು ಓದಿದರೆ ಅವರೊಬ್ಬ ಹಿಂದು ವಿರೋಧಿ ಎಂದು ಹಿಂದುತ್ವದ ಉಗ್ರ ಪ್ರತಿಪಾದಕರು ಸುಲಭದಲ್ಲಿ ಆರೋಪಿಸಬಹುದು.

`ತಲೆ ಮೇಲು, ಕಾಲು ಕೀಳು` ಎಂದೆಲ್ಲ ಮನುಷ್ಯನ ಅಂಗಾಂಗಳಲ್ಲಿಯೇ ತಾರತಮ್ಯ ಕಾಣುತ್ತಿದ್ದ ಹಿಂದುಗಳ ನಡವಳಿಕೆಯಿಂದ ರೋಸಿಹೋಗಿದ್ದ ಅವರು, ಮನುಷ್ಯನಿಗೆ `ಮುಸ್ಲಿಂ ದೇಹ ಮತ್ತು ವೇದಾಂತದ ಮೆದುಳು` ಇರಬೇಕೆಂದು ಹೇಳುತ್ತಿದ್ದರು.
ಮುಸ್ಲಿಂ ಮನೆಯಲ್ಲಿ ಊಟಮಾಡಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ಅವರ ಅಭಿಮಾನಿ ಖೇತ್ರಿಯ ಮಹಾರಾಜನಿಗೆ ವಿವೇಕಾನಂದರು `ನಾನು ಭಂಗಿಗಳ ಜತೆ ಕೂತು ಕೂಡಾ ಊಟಮಾಡಬಲ್ಲೆ. ನಿಮ್ಮಂತಹವರ ಬಗ್ಗೆ ನಾನು ಹೆದರಲಾರೆ. ನಿಮಗೆ ದೇವರು ಇಲ್ಲವೇ ಧರ್ಮದ ಬಗ್ಗೆ ಗೊತ್ತಿಲ್ಲ` ಎಂದು ತಿರುಗೇಟು ನೀಡಿದ್ದರು. 
`ಜೀಸಸ್ ಬದುಕಿದ್ದ ದಿನಗಳಲ್ಲಿ ನಾನೇನಾದರೂ ಪ್ಯಾಲೆಸ್ತೀನ್‌ನಲ್ಲಿದ್ದಿದ್ದರೆ ಕಣ್ಣಿರಿನಿಂದಲ್ಲ, ನನ್ನ ಹೃದಯದಿಂದ ರಕ್ತಬಸಿದು ಆತನ ಪಾದ ತೊಳೆಯುತ್ತಿದ್ದೆ..` ಎಂದು ಭಾವುಕರಾಗಿ ಅವರು ಬರೆದುಕೊಂಡಿದ್ದಾರೆ.

ಹಿಂದೂಗಳು ಮುಸ್ಲಿಂ ದೊರೆಗಳ ಪ್ರಭಾವ ಮತ್ತು ಬಲವಂತದಿಂದಾಗಿ ಮತಾಂತರಗೊಂಡರು ಎನ್ನುವುದನ್ನು ಅವರು ಒಪ್ಪುತ್ತಿರಲಿಲ್ಲ.
ಹಿಂದೂ ಧರ್ಮದ ಒಳಗಿನ ಜಾತೀಯತೆ, ಅಸ್ಪೃಶ್ಯತೆ, ಶೋಷಣೆ ಇದಕ್ಕೆ ಕಾರಣ. ಮೂಲಭೂತವಾದ ಮಾನವಹಕ್ಕುಗಳು ಮತ್ತು ವ್ಯಕ್ತಿ ಘನತೆಯನ್ನು ಗೌರವಿಸದೆ ಇರುವ ಧರ್ಮ ಅಲ್ಲವೇ ಅಲ್ಲ, ಅದು `ಪ್ರೇತ ನೃತ್ಯ`, ಅದು ನಡೆಯುವ ಸ್ಥಳ ನರಕ` ಎಂದು ಹೇಳಿದ್ದರು.
`ಧರ್ಮ-ಧರ್ಮಗಳ ನಡುವೆ ಸಹನೆಯಷ್ಟೇ ಇದ್ದರಷ್ಟೇ ಸಲ್ಲದು, ಅವುಗಳನ್ನು ಸತ್ಯ ಎಂದು ಒಪ್ಪಿಕೊಳ್ಳಬೇಕು, ಗುರು ರಾಮಕೃಷ್ಣ ಪರಮಹಂಸರಿಂದ ನಾನು ಇದನ್ನೇ ಕಲಿತದ್ದು` ಎಂದು ಅವರು ಬರೆದಿದ್ದಾರೆ.

ವಿವೇಕಾನಂದರ ಬಗ್ಗೆ ನಮ್ಮಲ್ಲಿ ಇನ್ನಷ್ಟು ಗೌರವ-ಅಭಿಮಾನ ಹುಟ್ಟಿಸುವ ಈ `ಮನುಷ್ಯ ಮುಖ`ವನ್ನು ಅವರ 150ನೇ ಜಯಂತಿ ಆಚರಣೆಯಲ್ಲಿ ಬಿಂಬಿಸಲಾಗುತ್ತಿರುವ `ಉತ್ಸವಮೂರ್ತಿ`ಯಲ್ಲಿ ಕಾಣಲು ಹೋದರೆ ನಿರಾಶೆಯಾಗುತ್ತದೆ.
ಕೇವಲ 39 ವರ್ಷ, ಐದು ತಿಂಗಳು ಮತ್ತು 24 ದಿನ ಬದುಕಿದ್ದ ಮತ್ತು 24ರ ಹರಯದಲ್ಲಿಯೇ ಸನ್ಯಾಸ ಸ್ವೀಕರಿಸಿದ್ದ ವಿವೇಕಾನಂದರನ್ನು ಅವರ ಸಾವಿನ 110 ವರ್ಷಗಳ ನಂತರವೂ ನಮಗೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲವೇನೋ ಎಂದು ಅನಿಸತೊಡಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ವಿವೇಕಾನಂದರನ್ನು ಹಿಂದೂ ಧರ್ಮದ `ಬ್ರಾಂಡ್ ಅಂಬಾಸಿಡರ್` ಆಗಿ ಬಿಂಬಿಸುವ ಭರದಲ್ಲಿ ಅವರ ಮೇಲೆ ಇಲ್ಲಸಲ್ಲದ ಗುಣ-ವಿಶೇಷ, ಶಕ್ತಿ -ಸಾಮರ್ಥ್ಯಗಳನ್ನು ಆರೋಪಿಸಿ ದೇವರ ಪಟ್ಟಕ್ಕೆ ಏರಿಸಲಾಗುತ್ತಿದೆ.

ಇದೇನು ಹೊಸದಲ್ಲ. ಧಾರ್ಮಿಕ ಸುಧಾರಣೆಯ ಮೂಲಕವೇ ಸಮಾಜವನ್ನು ಸುಧಾರಿಸಲು ಹೊರಟವರನ್ನೆಲ್ಲ ನಾವು `ದೇವರು` ಮಾಡಿ ನಮ್ಮ ಕೈಗೆ ಎಟುಕದಷ್ಟು ದೂರದಲ್ಲಿರಿಸಿದ್ದೇವೆ.
 ದೇವರ ಅವತಾರವಾಗದೆ ಕೇವಲ ಮನುಷ್ಯನಾಗಿ ಹುಟ್ಟಿ ಅಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯ ಇಲ್ಲ ಎಂಬ ನಂಬಿಕೆಯನ್ನು ನಮ್ಮ ಅನೇಕ ಧಾರ್ಮಿಕ ನಾಯಕರು ಮತ್ತು ಧಾರ್ಮಿಕ ನಾಯಕರ ಸೋಗಿನ ರಾಜಕಾರಣಿಗಳು ಬಿತ್ತುತ್ತಾ, ಬೆಳೆಸುತ್ತಾ ಸಾಗಿದ್ದಾರೆ.
ಬುದ್ಧ-ಬಸವನಿಂದ ಹಿಡಿದು ವಿವೇಕಾನಂದ-ನಾರಾಯಣ ಗುರುಗಳವರೆಗೆ ಎಲ್ಲರನ್ನೂ ಅವರವರ ಭಕ್ತ ಸಮೂಹ ದೇವರುಗಳಾಗಿ ಮಾಡಿ ಪೂಜೆ-ಭಜನೆಗಳಲ್ಲಿ ಮುಳುಗಿಸಿ ಬಿಟ್ಟಿದ್ದಾರೆ. ಈ ಆರಾಧನೆಯ ಭರದಲ್ಲಿ ಆ ಮಹನೀಯರ ನಿಜವಾದ ಬದುಕು ಮತ್ತು ಚಿಂತನೆಯ ವಿವರಗಳೆಲ್ಲ ಇತಿಹಾಸದ ಪುಟಗಳಲ್ಲಿ ಎಲ್ಲೋ ಹೂತುಹೋಗಿರುತ್ತವೆ.

 ಪ್ರಖ್ಯಾತ ಬಂಗಾಳಿ ಸಾಹಿತಿ ಮಣಿ ಸಂಕರ್ ಮುಖರ್ಜಿ ಅವರ `ದಿ ಮಾಂಕ್ ಆ್ಯಸ್ ಮ್ಯಾನ್` ಎನ್ನುವ ಪುಸ್ತಕವನ್ನು ಕಳೆದ ವರ್ಷ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದೆ. ಇದು ಎಂಟು ವರ್ಷಗಳ ಹಿಂದೆ  ಪ್ರಕಟವಾದ ಸಂಶೋಧನೆ ಆಧಾರಿತ ಬಂಗಾಳಿ ಭಾಷೆಯ ಪುಸ್ತಕದ ಇಂಗ್ಲಿಷ್ ಅನುವಾದ (ಸಂಕರ್ ಅವರ `ಸೀಮಾಬದ್ದ` ಮತ್ತು `ಜನ ಅರಣ್ಯ` ಕಾದಂಬರಿಗಳನ್ನು ಸತ್ಯಜಿತ್ ರೇ ಚಲನಚಿತ್ರ ಮಾಡಿದ್ದರು).
ವಿವೇಕಾನಂದರ ತತ್ವ-ಸಿದ್ಧಾಂತಗಳ ಜತೆ ಅವರ ಖಾಸಗಿ ಬದುಕಿನ ಅಪರಿಚಿತ ಮುಖವನ್ನು ಸಂಕರ್ ಅವರ ಪುಸ್ತಕ, ತಮ್ಮಂದಿರಾದ ಮಹೇಂದ್ರನಾಥ ದತ್ತಾ ಮತ್ತು ಡಾ. ಭೂಪೇಂದ್ರನಾಥ ದತ್ತಾ ಅವರು ಅಣ್ಣನ ಬಗ್ಗೆ ಬರೆದ ಪುಸ್ತಕಗಳು ಹಾಗೂ ಸೋದರಿ ನಿವೇದಿತಾ ಅವರ ಲೇಖನಗಳು  ತೆರೆದಿಡುತ್ತದೆ.
 
ಮುಂದೊಂದು ದಿನ ವಿದೇಶಿ ನೆಲದಲ್ಲಿ ನಿಂತು ತನ್ನಲ್ಲಿರುವ ಜ್ಞಾನ ಮತ್ತು ಇಂಗ್ಲಿಷ್ ಭಾಷಾ ಪಾಂಡಿತ್ಯದಿಂದ ಅಲ್ಲಿನ ಇಂಗ್ಲಿಷ್ ಭಾಷಿಕರ ಮಂತ್ರಮುಗ್ಧಗೊಳಿಸಿದ್ದ ವಿವೇಕಾನಂದರು ಇಂಟರ್‌ಮಿಡಿಯೇಟ್ ಮತ್ತು ಬಿಎ ಪದವಿಯ ಇಂಗ್ಲಿಷ್ ಪರೀಕ್ಷೆಗಳಲ್ಲಿ ಗಳಿಸಿದ್ದ ಅಂಕ ಕ್ರಮವಾಗಿ ಶೇಕಡಾ 46 ಮತ್ತು ಶೇಕಡಾ 56.  ಬಿಎ ಪರೀಕ್ಷೆಯ  ಒಟ್ಟು 500 ಅಂಕಗಳಲ್ಲಿ ಗಳಿಸಿದ್ದು ಕೇವಲ 261. (ಸಂಸ್ಕೃತದಲ್ಲಿ 43 ಮತ್ತು ತತ್ವಶಾಸ್ತ್ರದಲ್ಲಿ 45).
ತಂದೆಯ ಸಾವಿನ ನಂತರ ಅನಿವಾರ‌್ಯವಾಗಿ ಉದ್ಯೋಗ ಮಾಡಬೇಕಾಗಿ ಬಂದ ವಿವೇಕಾನಂದರು ಮೊದಲು ಕೆಲಸಕ್ಕೆ ಸೇರಿದ್ದು ಈಶ್ವರಚಂದ್ರ ವಿದ್ಯಾಸಾಗರ ಅವರು ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲಿ. ಅಲ್ಲಿ ಇವರನ್ನು ಮಕ್ಕಳಿಗೆ ಪಾಠ ಹೇಳಲು ಬರುವುದಿಲ್ಲ ಎನ್ನುವ ಕಾರಣ ನೀಡಿ ಸ್ವತಃ ಈಶ್ವರಚಂದ್ರರೇ ಕೆಲಸದಿಂದ ವಜಾಗೊಳಿಸಿದ್ದರು.

ಭುವನೇಶ್ವರಿ ದೇವಿ ಎಂಬ ತಾಯಿ ಇಲ್ಲದೆ ಹೋಗಿದ್ದರೆ ಜಗತ್ತಿಗೆ ವಿವೇಕಾನಂದರು ಸಿಗುತ್ತಿರಲಿಲ್ಲವೇನೋ? ಕೋಲ್ಕತ್ತಾದ ಸಾವಿರಾರು ನರೇಂದ್ರನಾಥರಲ್ಲಿ ಒಬ್ಬರಾಗಿ ಅವರು ಹುಟ್ಟಿ ಸಾಯುತ್ತಿದ್ದರು.
ವಿವೇಕಾನಂದರು ಮೂಲತಃ ಶ್ರಿಮಂತ ಕುಟುಂಬಕ್ಕೆ ಸೇರಿದವರಾಗಿದ್ದರೂ ತಂದೆಯ ಅಕಾಲಮೃತ್ಯುವಿನ ನಂತರ ಆಸ್ತಿಯನ್ನೆಲ್ಲ ದಾಯಾದಿಗಳು ಕಬಳಿಸಿದ ಕಾರಣ ಇಡೀ ಕುಟುಂಬ ಬೀದಿ ಪಾಲಾಗುತ್ತದೆ. ಹನ್ನೊಂದು ಮಕ್ಕಳಲ್ಲಿ ಇವರೇ ದೊಡ್ಡ ಗಂಡುಮಗನಾದ ಕಾರಣ ಸಂಸಾರ ನಿರ್ವಹಣೆ ನರೇಂದ್ರನಾಥನ ಪುಟ್ಟ ಹೆಗಲಮೇಲೆ ಬೀಳುತ್ತದೆ.

ನಿರುದ್ಯೋಗಿಯಾಗಿ ಹರಕಲು ಅಂಗಿ-ಪೈಜಾಮ ಹಾಕಿ ಬೀದಿ ಸುತ್ತುತ್ತಿದ್ದ ಅವರು ಎಷ್ಟೋ ಬಾರಿ ಉಪವಾಸ ಇರುತ್ತಿದ್ದರಂತೆ. ಕುಟುಂಬದ ಆಸ್ತಿಗಾಗಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಹೋರಾಟ ಸತತ ಹದಿನೇಳು ವರ್ಷ ನಡೆದು ವಿವೇಕಾನಂದರ ಸಾವಿನ ಹಿಂದಿನ ತಿಂಗಳಷ್ಟೇ ಇತ್ಯರ್ಥವಾಗಿತ್ತು.

ಕುಟುಂಬದ ಕಷ್ಟಗಳನ್ನು ತಾಯಿಯ ಹೆಗಲ ಮೇಲೆ ಹಾಕಿ ವಿವೇಕಾನಂದರು ಸಂಸಾರ ತೊರೆದು ಸನ್ಯಾಸಿಯಾಗುತ್ತಾರೆ. ಕಷ್ಟ ಕಾಲದಲ್ಲಿ ಕೈಬಿಟ್ಟು ಹೋದ ಎಂದು ಮಗನನ್ನು ತಾಯಿ ಭುವನೇಶ್ವರಿದೇವಿ ದ್ವೇಷಿಸಲಿಲ್ಲ, `ನನ್ನ ಮಗ 24ನೇ ವರ್ಷಕ್ಕೆ ಸನ್ಯಾಸಿಯಾದ` ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಇದ್ದರು.
ಮಗ ಸತ್ತನಂತರ ಎಂಟು ವರ್ಷ ಬದುಕಿದ್ದ ತಾಯಿ ಖೇತ್ರಿ ಮಹಾರಾಜ ಕೊಡುತ್ತಿದ್ದ ಮಾಸಿಕ ನೂರು ರೂಪಾಯಿಯಲ್ಲಿ ಕಡು ಕಷ್ಟದಲ್ಲಿಯೇ ಜೀವನ ಸಾಗಿಸಿದ್ದರು.
ಈಗ ವಿವೇಕಾನಂದರನ್ನು ತಲೆಮೇಲಿಟ್ಟು ಮೆರೆದಾಡಲಾಗುತ್ತಿದ್ದರೂ ಬದುಕಿದ್ದಾಗ  ಭಾರತೀಯರು ಅವರಿಗೆ ಹೆಚ್ಚು ನೆರವಾಗಿರಲಿಲ್ಲ. `ಪ್ರತಿ ಬಾರಿ ವಿದೇಶಿಯರಲ್ಲಿಯೇ ಭಿಕ್ಷೆ ಕೇಳಲೇನು` ಎಂದು ಅವರೊಮ್ಮೆ ಬೇಸರದಿಂದ ಪ್ರಶ್ನಿಸಿದ್ದರು.

`ವಿಶಾಲವಾದ ಎದೆ, ಬಲಿಷ್ಠವಾದ ತೋಳುಗಳು, ಕಾಂತಿಯುತ ಕಣ್ಣುಗಳು...` ಎಂದೆಲ್ಲ ವಿವೇಕಾನಂದರನ್ನು ಹಿಂದೂ ಧರ್ಮದ `ಹೀ ಮ್ಯಾನ್` ಎಂಬಂತೆ ಬಣ್ಣಿಸುವವರಿಗೆ ಅವರು ಹುಟ್ಟುರೋಗಿಯಾಗಿದ್ದರೆಂದು ಗೊತ್ತಿದೆಯೋ ಇಲ್ಲವೋ? ತೀವ್ರ ತಲೆನೋವಿನಿಂದ ಹಿಡಿದು ಹೃದಯದ ಕಾಯಿಲೆವರೆಗೆ ಅವರಿಗೆ 31 ಬಗೆಯ ರೋಗಗಳಿದ್ದವು.
ಮೂತ್ರಕೋಶ, ಲಿವರ್, ಗಂಟಲು ಸಂಬಂಧಿ ರೋಗಗಳಲ್ಲದೆ ರಕ್ತದೊತ್ತಡ, ಮಧುಮೇಹ, ಆಸ್ತಮಾ, ಅಜೀರ್ಣ, ಮಲಬದ್ಧತೆ, ಭೇದಿ, ನರದೌರ್ಬಲ್ಯ, ಮಂಡಿನೋವು, ಕಾಲುಬಾವು ಎಲ್ಲವೂ ಅವರನ್ನು ಕಾಡುತ್ತಿತ್ತು. ಪ್ರಾರಂಭದಿಂದಲೇ ನಿದ್ರಾಹೀನತೆಯಿಂದ ಬಳಲುತ್ತಿದ್ದ ಅವರು ಕೊನೆಯ ದಿನಗಳಲ್ಲಿ, ದಿನದಲ್ಲಿ ಒಂದೆರಡು ಗಂಟೆಗಳ ಕಾಲವೂ ನಿದ್ದೆ ಮಾಡಲಾಗುತ್ತಿರಲಿಲ್ಲ.
ಯಾರಾದರೂ ಮುಟ್ಟಿದರೆ ಮೈಯೆಲ್ಲ ನೋಯುತ್ತಿತ್ತು. `ನನ್ನ ಕೂದಲು-ಗಡ್ಡಗಳೆಲ್ಲ ವಯಸ್ಸಿಗೆ ಮೊದಲೇ ಬೆಳ್ಳಗಾಗಿ ಹೋಗಿದೆ, ಮುಖದ ಚರ್ಮ ಸುಕ್ಕುಗಟ್ಟಿ ನೆರಿಗೆಗಳು ಮೂಡಿವೆ` ಎಂದು ತನ್ನ 34ನೇ ವಯಸ್ಸಿನಲ್ಲಿ ಶಿಷ್ಯೆ ಮೇರಿ ಹೇಲ್‌ಗೆ ಬರೆದ ಪತ್ರದಲ್ಲಿ ಅವರು ಹೇಳಿಕೊಂಡಿದ್ದಾರೆ.
ಅನಾರೋಗ್ಯದಿಂದ ಬೇಸತ್ತು ಹೋಗಿದ್ದ ಅವರು, ಒಂದು ದಿನ `ದಯಾಮರಣದ ಮೂಲಕವಾದರೂ ನನಗೆ ಸಾವು ನೀಡಿ, ರೇಸ್‌ನಲ್ಲಿ ಓಡಲಾಗದ ಕುಂಟು ಕುದುರೆಯಂತಾಗಿದ್ದೇನೆ ನಾನು. ಈ ನೋವು-ಸಂಕಟ ಸಹಿಸಲಾರೆ` ಎಂದು ಹತಾಶೆಯಿಂದ ಹೇಳಿದ್ದನ್ನು ಸೋದರಿ ನಿವೇದಿತಾ ದಾಖಲಿಸಿದ್ದಾರೆ..
 
ಈ ಎಲ್ಲ ರೋಗಗಳ ನಡುವೆಯೂ ಅವರ ನಾಲಗೆಯ ಚಪಲ ಮಾತ್ರ ಕಡಿಮೆಯಾಗಿರಲಿಲ್ಲ. ಎಲ್ಲ ಬಂಗಾಳಿಗಳಂತೆ ಅವರೊಬ್ಬ ತಿಂಡಿಪೋತರಾಗಿದ್ದರು. `ನಾನು ಠಾಕೂರ್ (ಪರಮಹಂಸ) ಅವರಿಗೆ  ಬಿಸಿನೀರಿನಲ್ಲಿ ಮಸಾಲೆಯ ಜತೆ ಮಾಂಸದ ತುಂಡುಗಳನ್ನು ಹಾಕಿ ಬೇಯಿಸಿ ಪಲ್ಯ ಮಾಡಿಕೊಡುತ್ತಿದ್ದೆ. ಆದರೆ ನರೇನ್ (ವಿವೇಕಾನಂದ) ಮಾತ್ರ ಮಾಂಸದ ಅಡುಗೆಯನ್ನು ಬಗೆಬಗೆಯಲ್ಲಿ ಮಾಡುತ್ತಿದ್ದ` ಎಂದು ಶಾರದಾದೇವಿ ಬರೆದಿದ್ದಾರೆ.
ದೇಶ-ವಿದೇಶಗಳ ಮಾಂಸಾಹಾರಿ ಅಡುಗೆಯನ್ನು ಮಾಡುವ ಅವರ ಪಾಕಪ್ರಾವೀಣ್ಯತೆ ಬಗ್ಗೆ ಸೋದರಿ ನಿವೇದಿತಾ ವಿವರವಾಗಿ ದಾಖಲಿಸಿದ್ದಾರೆ. ಅವರ ಸಾವಿನ ದಿನವೇ ಮಳೆಗಾಲದ ಮೊದಲ ಅತಿಥಿಗಳಾಗಿ `ಹಿಲ್ಸಾ` ಮೀನುಗಳು ಹೂಗ್ಲಿ ನದಿ ಪ್ರವೇಶಿಸಿದ್ದವು. ಅದನ್ನು ತಂದು ಪಲ್ಯಮಾಡಿ ಮಧ್ಯಾಹ್ಮ ಊಟ ಮಾಡಿ ವಿರಮಿಸಿದ್ದ ಅವರು ರಾತ್ರಿ ಕೊನೆಯುಸಿರೆಳೆದಿದ್ದರು.

ಅಕಾಡೆಮಿಕ್ ಮಾನದಂಡಗಳ ಪ್ರಕಾರ ದಡ್ಡರಾಗಿರುವ, ಹತ್ತಾರು ಬಗೆಯ ಕಾಯಿಲೆಗಳಿಂದ ನರಳುತ್ತಿರುವ, ಕುಟುಂಬದ ಕಷ್ಟಗಳಿಂದ ಜರ್ಝರಿತರಾಗಿರುವ, ತಿಂಡಿಪೋತರಾಗಿರುವ ಸಾಮಾನ್ಯ ವ್ಯಕ್ತಿಗಳು ಕೂಡಾ `ವಿವೇಕಾನಂದ`ನಾಗಿ ಬೆಳೆಯಲು ಸಾಧ್ಯ ಎಂಬುದನ್ನು ನರೇಂದ್ರನಾಥ ತನ್ನ ಸಾಧನೆ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಇಷ್ಟೆಲ್ಲ ಕಷ್ಟ-ಕಾಯಿಲೆಗಳ ನಡುವೆಯೂ ಹಿಂದೂ ಧರ್ಮವೂ ಸೇರಿದಂತೆ ಜಗತ್ತಿನ ಎಲ್ಲ ಧರ್ಮಗಳ ಗ್ರಂಥಗಳು ಮತ್ತು ತತ್ವಜ್ಞಾನವನ್ನು ಅವರು ಅಧ್ಯಯನ ಮಾಡಿದ್ದರು. ದೇಶ-ವಿದೇಶಗಳಿಗೆ ಭೇಟಿ ನೀಡಿ ಭಾಷಣ ಮಾಡುತ್ತಿದ್ದರು, ನಿರಂತರವಾಗಿ ಪುಸ್ತಕ ಮತ್ತು ಪತ್ರಗಳನ್ನು ಬರೆಯುತ್ತಿದ್ದರು.
ಸಾವಿರಾರು ಶಿಷ್ಯರನ್ನು, ಕೋಟ್ಯಂತರ ಅನುಯಾಯಿಗಳನ್ನು ಹೊಂದಿದ್ದರು. ತಮ್ಮ ಗುರುವಿನ ಹೆಸರಲ್ಲಿ ಜಗತ್ತಿನಾದ್ಯಂತ ರಾಮಕೃಷ್ಣ ಮಿಷನ್ ಹೆಸರಿನ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದರು.
ಇವೆಲ್ಲವನ್ನು ಅವರು ಮಾಡಿದ್ದು ಕೇವಲ ಹದಿನೈದು ವರ್ಷಗಳ ಅವಧಿಯಲ್ಲಿ. ಯಃಕಶ್ಚಿತ್ ಮನುಷ್ಯನೊಬ್ಬ ಇಂತಹ ಸಾಧನೆ ಮಾಡಲು ಸಾಧ್ಯವೇ? ಖಂಡಿತ ಸಾಧ್ಯ, ಅದಕ್ಕಾಗಿ ಆತ `ವಿವೇಕಾನಂದ` ಆಗಿರಬೇಕು

19/01/2011

`ವಿವೇಕಾನಂದರ ಬಗ್ಗೆ...' ಗ್ರಹಿಕೆಗೆ ಪೂರಕವಾಗಿ...




ಕಳೆದ ಸೋಮವಾರದ (ಜ.16) ಸ್ವಾಮಿ ವಿವೇಕಾನಂದರ ಕುರಿತ ನನ್ನ ಅಂಕಣಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹಳ ಮಂದಿ ಅದನ್ನು ಮೆಚ್ಚಿಕೊಂಡಿದ್ದಾರೆ, ಕೆಲವರು ಅದನ್ನು ವಿರೋಧಿಸಿದ್ದಾರೆ. ವಿರೋಧಿಸುವವರು ಅಂಕಣದಲ್ಲಿ ವ್ಯಕ್ತಪಡಿಸಿದ ವಿಚಾರಗಳನ್ನು ಮತ್ತು ಅದರ ಒಟ್ಟು ಆಶಯವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗಿಲ್ಲವೇನೋ ಎಂಬ ಅನುಮಾನ ನನಗೆ.

ಸಂವಹನ ಸಾಮರ್ಥ್ಯ ಒಬ್ಬ ಪತ್ರಕರ್ತನ ದೊಡ್ಡ ಶಕ್ತಿ. ಇದರ ಮೂಲಕವೇ ಆತ ಓದುಗನ ಜತೆ ಸಂಬಂಧ ಸ್ಥಾಪನೆಗೆ ಪ್ರಯತ್ನ ಮಾಡಬೇಕಾಗುತ್ತದೆ. ಸಂವಹನದ ಸೇತುವೆ ಮುರಿದುಬಿದ್ದರೆ ಪತ್ರಕರ್ತ ಮತ್ತು ಓದುಗರಿಬ್ಬರೂ ಪರಸ್ಪರ ಸಂಧಿಸಲಾಗದೆ ಇದ್ದಲ್ಲಿಯೇ ಉಳಿದುಬಿಡುತ್ತಾರೆ.

ಪೂರ್ವಗ್ರಹ ಇಲ್ಲದ ಮುಕ್ತ ಮನಸ್ಸಿನ ಮೂಲಕ ಮಾತ್ರ ಸಂವಹನದ ಸೇತುವೆಯನ್ನು ಗಟ್ಟಿಗೊಳಿಸಲು ಸಾಧ್ಯ. ಈ ಉದ್ದೇಶದಿಂದ ಕೆಲವು ವಿವರಣೆಗಳನ್ನು ನೀಡಬಯಸುತ್ತೇನೆ. ಇದು ನನ್ನ ಬರವಣಿಗೆಯನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ನೆರವಾಗಬಹುದೆಂಬ ಆಶಯ ನನ್ನದು.

ಯಾವುದೇ ವ್ಯಕ್ತಿಯ ಬಗ್ಗೆ ದುರುದ್ದೇಶ ಇರಬೇಕಾದರೆ ಕನಿಷ್ಠ ಭಿನ್ನಾಭಿಪ್ರಾಯಗಳಾದರೂ ಇರಬೇಕು.ನನ್ನ ಓದಿನ ಮಿತಿಯಲ್ಲಿಯೂ ನನಗೆ ಗಾಂಧೀಜಿ ಮತ್ತು ಅಂಬೇಡ್ಕರ್ ಬಗ್ಗೆ ಭಿನ್ನಾಭಿಪ್ರಾಯಗಳಿವೆ, ಆದರೆ ವಿವೇಕಾನಂದರು ಹೇಳಿರುವ ಯಾವ ವಿಚಾರದ ಬಗ್ಗೆಯೂ ಲವಲೇಶದಷ್ಟೂ ಭಿನ್ನಾಭಿಪ್ರಾಯ ಇಲ್ಲ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬಯಸುತ್ತೇನೆ.

ಆದರೆ ವಿವೇಕಾನಂದರನ್ನು ಸರಿಯಾಗಿ ಓದಿದ ಯಾರಿಗೂ ಅವರು ಹಿಂದೂ ಧರ್ಮದ ಸುಧಾರಣೆಗಾಗಿ ಹೇಳಿರುವ ವಿಚಾರಗಳು ಅವರ ಸಾವಿನ 110 ವರ್ಷಗಳ ನಂತರವೂ ಅನುಷ್ಠಾನಕ್ಕೆ ಬಂದಿಲ್ಲ ಎನ್ನುವ ನೋವು ಕಾಡದೆ ಇರದು.

ಬಹುಶಃ ಅವರು ಬಯಸಿದ ರೀತಿಯಲ್ಲಿ ಸುಧಾರಣೆಯಾಗಿದ್ದರೆ ಹಿಂದೂ ಧರ್ಮ ಭಾರತ-ನೇಪಾಳಕ್ಕಷ್ಟೇ ಸೀಮಿತಗೊಳ್ಳದೆ ಜಗತ್ತಿನಾದ್ಯಂತ ಹರಡುತ್ತಿತ್ತು. ಆ ಪ್ರಯತ್ನವನ್ನೇ ಅವರು ಮಾಡಿದ್ದಲ್ಲವೇ?

 ಇದರಲ್ಲಿ ಮುಖ್ಯವಾಗಿ ನಾನು ಬಳಸಿದ ಕೆಲವು ಶಬ್ದಗಳ ಬಗ್ಗೆ ಕೆಲವರು ಆಕ್ಷೇಪ ಎತ್ತಿದ್ದಾರೆ. ಉದಾಹರಣೆಗೆ ಅವರನ್ನು `ದಡ್ಡ ವಿದ್ಯಾರ್ಥಿ` ಎಂದು ಕರೆದದ್ದು ಸರಿಯೇ ಎನ್ನುವುದು ಕೆಲವರ ಪ್ರಶ್ನೆ. `ದಡ್ಡ` ಎನ್ನುವ ಶಬ್ದ ಮಾನಹಾನಿಕರ ಅಲ್ಲವೇ ಅಲ್ಲ.

ಆದರೆ ವಿವೇಕಾನಂದರನ್ನು ಆ ಅರ್ಥದಲ್ಲಿಯೂ ದಡ್ಡ ಎಂದು ಹೇಳಿದುದಲ್ಲ. ಅವರಿಗೆ ಕಡಿಮೆ ಅಂಕಗಳು ಬಂದಿರುವುದು ನಮ್ಮ ಶಿಕ್ಷಣದ ವ್ಯವಸ್ಥೆಯಲ್ಲಿನ ದೋಷವನ್ನು ತೋರಿಸುತ್ತದೆಯೇ ಹೊರತು ಅವರ ಅಸಾಮರ್ಥ್ಯವನ್ನಲ್ಲ. ನಿಜವಾದ ಬುದ್ಧಿವಂತರನ್ನು ಗುರುತಿಸಲು ಸಾಧ್ಯವಾಗದ ಅಂದಿನ ವ್ಯವಸ್ಥೆ ಇನ್ನೂ ಬದಲಾಗಿಲ್ಲ.

ಈಗಲೂ ಬಾಯಿಪಾಠ ಮಾಡಿಸಿ ಪರೀಕ್ಷೆಗಳಲ್ಲಿ ಅಂಕ ಗಳಿಸಲಷ್ಟೇ ನೆರವಾಗುವ ಮಟ್ಟದಲ್ಲಿ ಅದು ಉಳಿದುಕೊಂಡುಬಿಟ್ಟಿದೆ ಎನ್ನುವುದನ್ನು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು.
ಅವರನ್ನು ಶಿಕ್ಷಕ ವೃತ್ತಿಯಿಂದ ವಜಾಗೊಳಿಸಿದ್ದನ್ನು ಹೇಳಿರುವ ಬಗ್ಗೆ ಕೆಲವರ ತಕರಾರುಗಳಿವೆ.

ಆ ಪ್ರಕರಣವನ್ನು ನಾನು ಇನ್ನಷ್ಟು ವಿವರಿಸಬೇಕಾಗಿತ್ತೋ ಏನೋ? ಈಶ್ವರಚಂದ್ರ ವಿದ್ಯಾಸಾಗರ ಅವರು ವಿವೇಕಾನಂದರನ್ನು ಕೆಲಸದಿಂದ ಕಿತ್ತುಹಾಕಲು ಕಾರಣ ಅವರ ಅಳಿಯ. ಆತ ಶಿಕ್ಷಣ ವ್ಯವಸ್ಥೆಯ ಆಡಳಿತ ಸೂತ್ರ ಕೈಗೆತ್ತಿಕೊಂಡ ನಂತರ ವಿವೇಕಾನಂದರ ಪ್ರತಿಭೆಯ ಬಗ್ಗೆ ಅಸೂಯೆಪಟ್ಟು ಚಾಡಿ ಹೇಳಿ ಮಾವನ ತಲೆ ಕೆಡಿಸುತ್ತಾನೆ.

ಈಶ್ವರಚಂದ್ರ ವಿದ್ಯಾಸಾಗರರಂತಹ ವ್ಯಕ್ತಿ ಕೂಡಾ ದೂರನ್ನು ಪರಾಮರ್ಶಿಸಲು ಹೋಗುವುದಿಲ್ಲ. ನಮ್ಮ ಈಗಿನ ಶಿಕ್ಷಣ ಸಂಸ್ಥೆಗಳು ಇದಕ್ಕಿಂತ ಏನಾದರೂ ಭಿನ್ನವಾಗಿವೆಯೇ? ಪ್ರತಿಭಾವಂತ ಶಿಕ್ಷಕನಿಗೆ ಮಾನ್ಯತೆ ಸಿಗುತ್ತಿದೆಯೇ? ಒಂದು ಸಣ್ಣಶಾಲೆಯಲ್ಲಿ ಪಾಠ ಹೇಳಲು `ಅಸಮರ್ಥ`ನಾದ ವ್ಯಕ್ತಿ ಮುಂದೊಂದು ದಿನ ಇಡೀ ಜಗತ್ತಿಗೆ ಪಾಠಹೇಳುತ್ತಾರೆ. 

ನರೇಂದ್ರನಾಥರೇನೋ ಕೀಳರಿಮೆಯಿಂದ ಬಳಲದೆ ಇನ್ನಷ್ಟು ಎತ್ತರಕ್ಕೆ ಬೆಳೆದುಬಿಟ್ಟರು. ಆದರೆ ಇದೇ ವ್ಯವಸ್ಥೆಯೊಳಗೆ ಸಿಕ್ಕಿ ಎಷ್ಟೋ ಪ್ರತಿಭೆಗಳು ಕಮರಿಹೋಗಿವೆಯೋ ಏನೋ? ಅಂತಹವರಿಗೆ ವಿವೇಕಾನಂದರ ಸಾಧನೆ ಸ್ಫೂರ್ತಿಯಾಗಬೇಕು.

ಅವರನ್ನು `ತಿಂಡಿಪೋತ` ಎಂದು ಕರೆದದ್ದು ಸರಿಯೇ ಎನ್ನುವುದು ಕೆಲವರ ಪ್ರಶ್ನೆ. ನನಗೆ ಅನೇಕ ಬಂಗಾಳಿ ಮಿತ್ರರಿದ್ದಾರೆ. ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಬಂಗಾಳಿಗಳು ನಿಜಕ್ಕೂ ತಿಂಡಿಪೋತರು. ಹಾಗೆಂದು ಕರೆದರೆ ಅವರು ಹೆಮ್ಮೆಪಡುತ್ತಾರೆ. ಸ್ವತಃ ರಾಮಕೃಷ್ಣ ಪರಮಹಂಸರು ತಿಂಡಿಯನ್ನು ಬಹಳ ಇಷ್ಟಪಡುತ್ತಿದ್ದರು.

ಬಂಗಾಳಿ ಭಕ್ತರು ಬರಿಗೈಯಲ್ಲಿ ಬಂದರೆ `ಬಂಗಾಳಿಯಾಗಿ ನೀನು ಸಿಹಿತಿಂಡಿ ಇಲ್ಲದೆ ಬಂದಿದ್ದಿಯಲ್ಲಾ` ಎಂದು ಹುಸಿಮುನಿಸು ತೋರಿದ್ದುಂಟು. ನಮ್ಮ ಯುವಕರು ತಿಂದುಂಡು ಆರೋಗ್ಯವಂತರಾಗಿ ಬೆಳೆದರೆ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ವಿವೇಕಾನಂದರು ಹೇಳುತ್ತಿದ್ದರು.

ಅವರನ್ನು `ರೋಗಿ` ಎಂದು ಕರೆದದ್ದು ಸರಿಯೇ ಎಂದು ಕೆಲವರು ದುಃಖದಿಂದ ಪ್ರಶ್ನಿಸಿದ್ದಾರೆ. ರೋಗ ಎನ್ನುವುದು ಅಪರಾಧ ಇಲ್ಲವೇ ಪಾಪ ಅಲ್ಲ. ವಿವೇಕಾನಂದರು ರೋಗಿಯಾಗಿದ್ದು ದುರ್ವ್ಯಸನಗಳಿಂದಲ್ಲ. ಅದು ಸ್ವಲ್ಪಮಟ್ಟಿಗೆ ವಂಶವಾಹಿಯಾಗಿ ಬಂದದ್ದು, ಅವರ ತಂದೆ ಕೂಡಾ 52ನೇ ವಯಸ್ಸಿಗೆ ನಿಧನರಾಗಿದ್ದರು.

ಜತೆಗೆ ಜೀವನದಲ್ಲಿ ಅನುಭವಿಸಿದ ಬಡತನ, ಹಸಿವು ಮೊದಲಾದ ಕಷ್ಟಗಳು ಅವರ ದೈಹಿಕ ಆರೋಗ್ಯವನ್ನು ಕೆಡಿಸಿತ್ತು. ಒಂದು ಸಣ್ಣ ತಲೆನೋವು ಬಂದರೆ ಒದ್ದಾಡುವ, ವೈಫಲ್ಯಗಳಿಗೆ ಅನಾರೋಗ್ಯದ ಸಬೂಬು ನೀಡಿ ತಪ್ಪಿಸಿಕೊಳ್ಳುವ ನಮ್ಮಂತಹವರಿಗೆ ವಿವೇಕಾನಂದರು ತಮ್ಮ ಅನಾರೋಗ್ಯವನ್ನು ಮೀರಿ ಮಾಡಿದ ಸಾಧನೆ ಸ್ಫೂರ್ತಿಯಲ್ಲವೇ? ಅವರು ವಿಶ್ವದ ಆಧ್ಯಾತ್ಮಿಕ ಕ್ಷೇತ್ರವನ್ನು ಗೆದ್ದದ್ದು ದೈಹಿಕ ಬಲದಿಂದ ಅಲ್ಲ, ಆತ್ಮಬಲದಿಂದ. ಇದು ವಿವೇಕಾನಂದರ ಜೀವನದಿಂದ ಕಲಿಯಬೇಕಾದ ಪಾಠ.

ಹೌದು, ಕೆಲವು ಶಬ್ದಗಳನ್ನು ಇನ್ನಷ್ಟು ಮೆದುಗೊಳಿಸಬಹುದಿತ್ತು.. ದಡ್ಡ ಎನ್ನುವ ಬದಲು `ಬುದ್ಧಿವಂತನಲ್ಲದ` `ಹೆಚ್ಚು ಅಂಕ ಗಳಿಸಲಾಗದ` ಎಂದು, `ತಿಂಡಿಪೋತ` ಎನ್ನುವ ಬದಲಿಗೆ `ತಿಂಡಿಯನ್ನು ಇಷ್ಟಪಡುವ` ಎಂದು ಹೇಳಬಹುದಿತ್ತೋ ಏನೋ? ಇಂಗ್ಲಿಷಿನ `ಚೆಯಿನ್ ಸ್ಮೋಕರ್` ಎನ್ನುವುದಕ್ಕೆ ಕನ್ನಡದಲ್ಲಿ ಏನು ಹೇಳುವುದೆಂದು ಗೊತ್ತಾಗದೆ `ವ್ಯಸನಿ` ಎಂದು ಬರೆದೆ.

ಅದನ್ನು ತಪ್ಪಿಸಬಹುದಿತ್ತು. ಕೆಲವು ವಿಷಯಗಳನ್ನು ಇನ್ನಷ್ಟು ವಿಸ್ತರಿಸಿ ಬರೆಯಬಹುದಿತ್ತು. ಉದಾಹರಣೆಗೆ ಅಮೆರಿಕದಲ್ಲಿ ರಾತ್ರಿ ಔತಣಕೂಟಕ್ಕೆ ಹೋಗಿದ್ದರೂ ಅವರು ಅಲ್ಲಿ ಕುಡಿದು-ಕುಣಿದು ಕುಪ್ಪಳಿಸುವ ಮೋಜು ಮಾಡಿಲ್ಲ. ಆ ಔತಣಗಳ ಕರೆಗಳಿಂದ ತಪ್ಪಿಸಲಿಕ್ಕಾಗಿ ಅವರು ವಿದೇಶಕ್ಕೆ ಹೋದ ಬಹಳಷ್ಟು ಸಂದರ್ಭಗಳಲ್ಲಿ ಸಸ್ಯಾಹಾರಿಯಾಗಿ ಬಿಡುತ್ತಿದ್ದರು. 

ಈ ಬರವಣಿಗೆಗೆ ಆಧಾರವಾಗಿ ಸಿಕ್ಕಿದ್ದು ಮುಖ್ಯವಾಗಿ ಮಣಿ ಸಂಕರ್ ಮುಖರ್ಜಿ ಅವರ `ದಿ ಮಾಂಕ್ ಆ್ಯಸ್ ಮ್ಯಾನ್` ಪುಸ್ತಕ. ನನ್ನ ಬಂಗಾಳಿ ಮಿತ್ರರು ಕೆಲವು ವರ್ಷಗಳ ಹಿಂದೆಯೇ ಈ ಪುಸ್ತಕದ ಬಗ್ಗೆ ನನಗೆ ಹೇಳಿದ್ದರೂ ಭಾಷಾ ಸಮಸ್ಯೆಯಿಂದಾಗಿ ಓದಲಾಗಿರಲಿಲ್ಲ. ಕಳೆದ ವರ್ಷ ಇಂಗ್ಲಿಷ್‌ನಲ್ಲಿ ಪ್ರಕಟವಾಗಿದ್ದನ್ನು ಕೇಳಿ ತಂದು ಓದಿದೆ. 

ವಿವೇಕಾನಂದರ `ಸಮಗ್ರ ಕೃತಿ ಸಂಗ್ರಹ`, ಮೇರಿ ಲೂಯಿಸ್ ಬರ್ಕ್ ಅವರ `ವಿವೇಕಾನಂದ ಇನ್ ದಿ ವೆಸ್ಟ್: ನ್ಯೂ ಡಿಸ್ಕವರಿ`,  ಸ್ವಾಮಿ ವಿವೇಕಾನಂದ ಅವರ ಸೋದರ ಮಹೇಂದ್ರನಾಥ ದತ್ತಾ ಬರೆದಿರುವ ಸುಮಾರು 90 ಪುಸ್ತಕಗಳು, ಇನ್ನೊಬ್ಬ ಸೋದರ ಡಾ. ಭೂಪೇಂದ್ರನಾಥ ದತ್ತಾ ಬರೆದಿರುವ ಪುಸ್ತಕ, ಸೋದರಿ ನಿವೇದಿತಾ ಅವರ ಲೇಖನಗಳು-ಹೀಗೆ ನೂರಾರು ಪುಸ್ತಕಗಳನ್ನು ಓದಿ ಬರೆದ ಪುಸ್ತಕ ಅದು. ಅದನ್ನು ಆಧರಿಸಿಯೇ ಬರೆದೆ.

ಸ್ವಾಮಿ ವಿವೇಕಾನಂದರು ಇಡೀ ವಿಶ್ವದ ಅಭಿಮಾನ-ಗೌರವಕ್ಕೆ ಪಾತ್ರವಾದ ಅಧ್ಯಾತ್ಮ ಚೇತನ. ಅದನ್ನು ಯಾರೂ ಅಲ್ಲಗಳೆಯುವುದು ಸಾಧ್ಯ ಇಲ್ಲ. ಅವರನ್ನು ಇನ್ನಷ್ಟು ಅರಿಯುವ ಪ್ರಯತ್ನದಿಂದ ಅವರ ಬಗೆಗಿನ ಅಭಿಮಾನ-ಗೌರವ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗಲಾರದು.

ಪಶ್ಚಿಮ ಬಂಗಾಳದ ಜನತೆಯ ಕಷ್ಟಕ್ಕೆ ಅಂತ್ಯವೇ ಇಲ್ಲ January 09, 2012

ಪಶ್ಚಿಮ ಬಂಗಾಳದಲ್ಲಿ ಯಾರೂ ಊಹಿಸದಂತಹ ರಾಜಕೀಯ ಬೆಳವಣಿಗೆಗಳೇನೂ ನಡೆದಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸ್ವಭಾವ ಮತ್ತು ಮಿತ್ರಪಕ್ಷಗಳ ಜತೆಗಿನ ಕಾಂಗ್ರೆಸ್ ಪಕ್ಷದ ನಡವಳಿಕೆಯನ್ನು ಗಮನಿಸುತ್ತಾ ಬಂದ ಯಾರಲ್ಲಿಯೂ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಶಾಶ್ವತವಾದುದು ಎಂಬ ನಿರೀಕ್ಷೆ ಇರಲು ಸಾಧ್ಯವೂ ಇಲ್ಲ. ಆದರೆ ಈಗಿನ ಬೆಳವಣಿಗೆ ನಿರೀಕ್ಷೆಗಿಂತ ಸ್ವಲ್ಪ ಮೊದಲೇ ನಡೆದಿದೆ.

ಎರಡು ಪಕ್ಷಗಳ ನಡುವಿನ ಮೈತ್ರಿಕೂಟದ ಸರ್ಕಾರ 232 ದಿನಗಳನ್ನಷ್ಟೇ ಪೂರ್ಣಗೊಳಿಸಿದೆ. ಆಗಲೇ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಪಕ್ಷಕ್ಕೆ ಹೊರಗೆ ಹೋಗುವ ಬಾಗಿಲು ತೋರಿಸಿದ್ದಾರೆ. ಬಹಳಷ್ಟು ಸಂದರ್ಭಗಳಲ್ಲಿ ರಾಜಕೀಯ ಮೈತ್ರಿಗಳು ಉಳಿದುಕೊಂಡು ಹೋಗುವುದು ಸಮಾನ ಚಿಂತನೆ, ಪರಸ್ಪರ ಗೌರವ ಇಲ್ಲವೇ ತಿಳಿವಳಿಕೆಯಿಂದ ಅಲ್ಲ, ರಾಜಕೀಯ ಅನಿವಾರ‌್ಯತೆ ಎಂಬ ಅಂಟಿನಿಂದ.

ಈ ಕಾರಣದಿಂದಾಗಿಯೇ ಈ ಎರಡು ಪಕ್ಷಗಳ ಮೈತ್ರಿ ಇನ್ನಷ್ಟು ದಿನ ಮುಂದುವರಿದುಕೊಂಡು ಹೋಗಲೂಬಹುದು. ಆದರೆ ಮನಸ್ಸು ಒಡೆದು ಹೋದ ಮೇಲೆ ಮೈತ್ರಿ ಒಡೆಯಲು ಬಹಳ ದಿನ ಬೇಕಾಗಲಾರದು.

ಮನುಷ್ಯರಿರಲಿ, ರಾಜಕೀಯ ಪಕ್ಷಗಳೇ ಇರಲಿ, ಮೈತ್ರಿಯ ಎಳೆ ಸೂಕ್ಷ್ಮವಾದುದು, ಅದನ್ನು ಅತಿಯಾಗಿ ಎಳೆದಾಡಿದರೆ ಕಡಿದು ಹೋಗುತ್ತದೆ.  ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗಿನ ಮಮತಾ ಬ್ಯಾನರ್ಜಿ ಅವರ ರಾಜಕೀಯ ನಿರ್ಧಾರಗಳನ್ನು ನೋಡಿದರೆ ಅವರು ಈ ಸೂಕ್ಷ್ಮವನ್ನು ಅರ್ಥಮಾಡಿಕೊಂಡಂತೆ ಕಾಣುವುದಿಲ್ಲ. ಹೊಂದಾಣಿಕೆ ಅವರ ಸ್ವಭಾವವೇ ಅಲ್ಲ. ಅವರು ಎರಡು ಬಾರಿ ಕಾಂಗ್ರೆಸ್ ತೊರೆದು ಎನ್‌ಡಿಎ ಮತ್ತು ಎರಡು ಬಾರಿ ಎನ್‌ಡಿಎ ತೊರೆದು ಕಾಂಗ್ರೆಸ್ ಜತೆ ಸೇರಿಕೊಂಡವರು. ಎನ್‌ಡಿಎದಲ್ಲಿದ್ದಾಗಲೂ ಅವರೊಬ್ಬ ಶಾಶ್ವತ ಭಿನ್ನಮತೀಯರಾಗಿದ್ದರು.
ರಾಜ್ಯದ ಯಾವುದೋ ಒಂದು ಕಾಲೇಜಿನ ಪ್ರಾಚಾರ್ಯರ ಮೇಲೆ ತೃಣಮೂಲ ಕಾಂಗ್ರೆಸ್ ಯುವ ಘಟಕದ ಸದಸ್ಯರು ನಡೆಸಿದ ಹಲ್ಲೆ ಮತ್ತು ಅದರ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗಳದ್ದು ಸಣ್ಣ ಘಟನೆ. ಸಂಬಂಧಗಳು ಸೌಹಾರ್ದಯುತವಾಗಿದ್ದ ಸಂದರ್ಭದಲ್ಲಿ ಸರ್ಕಾರದ ಮುಖ್ಯಸ್ಥರು  ಕೇಳಿ ಮರೆತು ಬಿಡುವಂತಹದ್ದು. ಎರಡು ಪಕ್ಷಗಳ ನಡುವಿನ ಸಂಘರ್ಷಕ್ಕೆ ಈ ಘಟನೆಯೇ ಕಾರಣ ಅಲ್ಲ, ನಿಜವಾದ ಕಾರಣಗಳು ಬೇರೆಲ್ಲೋ ಇವೆ.

ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದರ ಹೆಚ್ಚಳ, ಬಾಂಗ್ಲಾದೇಶದ ಜತೆಗೆ ತೀಸ್ತಾ ನದಿ ನೀರು ಹಂಚಿಕೆಯ ಒಪ್ಪಂದ, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ), ಲೋಕಪಾಲ ಮತ್ತು ಲೋಕಾಯುಕ್ತರ ನೇಮಕದ ಮಸೂದೆ, ಪಿಂಚಣಿ ಮಸೂದೆ.. ಹೀಗೆ ಯುಪಿಎ ಸರ್ಕಾರದ ಹಲವು ಪ್ರಮುಖ ನಿರ್ಧಾರಗಳನ್ನು ಕಳೆದ ಎಂಟು ತಿಂಗಳ ಕಿರು ಅವಧಿಯಲ್ಲಿ ಮಮತಾ ಬ್ಯಾನರ್ಜಿ ವಿರೋಧಿಸುತ್ತಾ ಬಂದಿದ್ದಾರೆ. ಆ ನಿರ್ಧಾರಗಳನ್ನು ಸರ್ಕಾರ ವಾಪಸು ಪಡೆಯುವ ಹಾಗೆಯೂ ಮಾಡಿದ್ದಾರೆ.

ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಎಫ್‌ಡಿಐಗೆ ಅವಕಾಶ ನೀಡದಿರುವ ಯುಪಿಎ ನಿರ್ಧಾರವನ್ನು ಪ್ರಕಟಿಸಿದ್ದು ಕೇಂದ್ರ ಸಚಿವರಲ್ಲ, ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ. ತೀಸ್ತಾ ನದಿ ನೀರು ಹಂಚಿಕೆ ವಿವಾದವನ್ನು ಹೊರತುಪಡಿಸಿ ಉಳಿದ ಯಾವ ಸಂಗತಿಗಳೂ ಪಶ್ಚಿಮ ಬಂಗಾಳಕ್ಕೆ ನೇರವಾಗಿ ಸಂಬಂಧಿಸಿದ ವಿಷಯಗಳೂ ಅಲ್ಲ.

ಲೋಕಪಾಲ ನೇಮಕದ ಮಸೂದೆಯನ್ನು ಲೋಕಸಭೆಯಲ್ಲಿ ಬೆಂಬಲಿಸಿ, ಒಕ್ಕೂಟ ವ್ಯವಸ್ಥೆಯನ್ನು ಭಂಗಗೊಳಿಸುವ ಪ್ರಯತ್ನ ಎಂಬ ಕಾರಣವೊಡ್ಡಿ ರಾಜ್ಯಸಭೆಯಲ್ಲಿ ವಿರೋಧಿಸಿದ್ದು ಕಾಲುಕೆರೆದು ಜಗಳಕ್ಕೆ ಇಳಿಯುವಂತಹ ನಡವಳಿಕೆ. ಇದು ಸಾಲದೆಂಬಂತೆ ಕೋಲ್ಕತ್ತದ ಪ್ರತಿಷ್ಠಿತ ಸಾಲ್ಟ್‌ಲೇಕ್‌ನಲ್ಲಿರುವ ಸರ್ಕಾರಿ ಬಂಗಲೆಗೆ ಈಗ ಇರುವ ಇಂದಿರಾಗಾಂಧಿ ಹೆಸರನ್ನು ಕಿತ್ತುಹಾಕಿ ಹೊಸ ನಾಮಕರಣ ಮಾಡಲು ಹೊರಟಿದ್ದಾರೆ.  ಮುಂದಿನ ವರ್ಷ ನಡೆಯಲಿರುವ ಪಂಚಾಯತ್ ಚುನಾವಣೆಯನ್ನು ಮೈತ್ರಿ ಇಲ್ಲದೆ ಸ್ವತಂತ್ರವಾಗಿ ಎದುರಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ. 

ಮಮತಾ ಬ್ಯಾನರ್ಜಿ ಅವರ ಈ ವಿರೋಧಗಳಲ್ಲಿ ಯಾವುದನ್ನೂ ಜನವಿರೋಧಿ ಎಂದು ಹೇಳುವ ಹಾಗಿಲ್ಲ. ಆದರೆ ಅವರಿಗಿರುವ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ಅವರ ಆದ್ಯತೆಗಳೇನಾಗಬೇಕಿತ್ತು ಎನ್ನುವುದಷ್ಟೇ ಈಗಿನ ಪ್ರಶ್ನೆ.

ಕಾಂಗ್ರೆಸ್ ಎಷ್ಟೇ ಹಾರಾಡಿದರೂ ಪಶ್ಚಿಮ ಬಂಗಾಳದ ಮಟ್ಟಿಗೆ ಈಗ ಇರುವ ಮೂರನೇ ಸ್ಥಾನದಿಂದ ಮೇಲೆ ಬರಲು ಅದಕ್ಕೆ ಸಾಧ್ಯವಾಗಲಾರದು. ಮಮತಾ ಬ್ಯಾನರ್ಜಿ ಇಷ್ಟು ತಿಳಿದುಕೊಂಡಿದ್ದರೆ ಈಗಿನ ಬಿಕ್ಕಟ್ಟು ಸೃಷ್ಟಿಯಾಗುತ್ತಿರಲಿಲ್ಲ. ಮೈಮೇಲೇರಿ ಹೋಗಿ ಜಗಳ ಮಾಡಿದ ನಂತರ ಕೇಂದ್ರದಲ್ಲಿ ಅಧಿಕಾರವನ್ನು ಹೊಂದಿರುವ ರಾಷ್ಟ್ರೀಯ ಪಕ್ಷ ಕೈಕಟ್ಟಿ ಕೂರಬೇಕೆಂದು ಯಾರೂ ಹೇಳಲಾರರು.

`ಕೇಂದ್ರ ಸರ್ಕಾರದ ನೀತಿ-ನಿರ್ಧಾರಗಳನ್ನು ತೃಣಮೂಲ ಕಾಂಗ್ರೆಸ್ ಪ್ರಶ್ನಿಸಬಹುದಾದರೆ ನಾವು ಒಪ್ಪದ ರಾಜ್ಯ ಸರ್ಕಾರದ ನಿರ್ಧಾರಗಳನ್ನು ನಾವು ಯಾಕೆ ವಿರೋಧಿಸಬಾರದು?` ಎಂಬ ರಾಜ್ಯ ಕಾಂಗ್ರೆಸ್ ನಾಯಕರ ಪ್ರಶ್ನೆ ತಪ್ಪೆಂದು ಮಮತಾ ಬ್ಯಾನರ್ಜಿ ಹೇಳಲು ಸಾಧ್ಯ ಇಲ್ಲ.

ಕಾಂಗ್ರೆಸ್ ಪಕ್ಷವನ್ನು ಅತ್ತಿತ್ತ ಮಿಸುಕಾಡದಂತೆ ಕಟ್ಟಿಹಾಕಿದ್ದ ಮಮತಾ ಬ್ಯಾನರ್ಜಿ ಕೋಲ್ಕೊತ್ತಾದಲ್ಲಿಯೇ ಕೂತು ಕೇಂದ್ರ ಸರ್ಕಾರವನ್ನೂ ನಿಯಂತ್ರಿಸಲು ಹೊರಟಿರುವುದನ್ನು ಕಂಡ ನಂತರವೇ ಕಾಂಗ್ರೆಸ್ ಪಕ್ಷ ಪರ್ಯಾಯ ಮಾರ್ಗದ ಹುಡುಕಾಟದಲ್ಲಿ ತೊಡಗಿರುವುದು. ಆಗ ಅವರಿಗೆ ಎದುರಾದವರು ಮುಲಾಯಂ ಸಿಂಗ್ ಯಾದವ್. ತಮ್ಮ `ಆಜನ್ಮ ಶತ್ರು` ಮಾಯಾವತಿ ಅವರನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವೇ ಇಲ್ಲ ಎಂದು ಮನವರಿಕೆಯಾದ ನಂತರ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಒಲವು ತೋರಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವೂ ಅಷ್ಟೇ ಅಸಹಾಯಕ ಸ್ಥಿತಿಯಲ್ಲಿದೆ. ಎರಡು ಪಕ್ಷಗಳ ಯುವ ಉತ್ತರಾಧಿಕಾರಿಗಳಾದ ರಾಹುಲ್‌ಗಾಂಧಿ ಮತ್ತು ಅಖಿಲೇಶ್‌ಸಿಂಗ್ ನಡುವಿನ ಸೌಹಾರ್ದಯುತ ಸಂಬಂಧವೂ ಮೈತ್ರಿಯ ಸಾಧ್ಯತೆಯನ್ನು ಹೆಚ್ಚಿಸಿವೆ.

ಲೋಕಸಭೆಯಲ್ಲಿ 23 ಸಮಾಜವಾದಿ ಪಕ್ಷದ ಸದಸ್ಯರಿರುವುದರಿಂದ 19 ಲೋಕಸಭಾ ಸದಸ್ಯರನ್ನಷ್ಟೇ ಹೊಂದಿರುವ ಮಮತಾ ಬ್ಯಾನರ್ಜಿ ಮೈತ್ರಿಯನ್ನು ಕಡಿದುಕೊಂಡರೂ ಯುಪಿಎ ಸರ್ಕಾರಕ್ಕೇನೂ ಹಾನಿಯಾಗಲಾರದು. ಆದರೆ ಈ ಮೈತ್ರಿಯನ್ನು ಈಗಾಗಲೇ ಘೋಷಣೆಯಾಗಿರುವ ವಿಧಾನಸಭಾ ಚುನಾವಣೆಯಲ್ಲಿ  ಮಾಡಿಕೊಳ್ಳುವ ಸ್ಥಿತಿಯಲ್ಲಿ ಎರಡೂ ಪಕ್ಷಗಳೂ ಇಲ್ಲ. ಇವೆಲ್ಲವೂ ಉತ್ತರಪ್ರದೇಶದ ಚುನಾವಣೋತ್ತರ ಕಾಲದ ಲೆಕ್ಕಾಚಾರ.

ಮೈತ್ರಿಯನ್ನು ಕಡಿದುಕೊಂಡರೆ ಮಮತಾ ಬ್ಯಾನರ್ಜಿ ಅವರ ಸರ್ಕಾರದ ಸುಭದ್ರತೆಗೂ ಧಕ್ಕೆ ಉಂಟಾಗಲಾರದು. 294 ಸದಸ್ಯ ಬಲದ ವಿಧಾನಸಭೆಯಲ್ಲಿ 186 ಸ್ಥಾನಗಳನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್‌ನ ಸರ್ಕಾರವನ್ನು 42 ಸ್ಥಾನ ಹೊಂದಿರುವ ಕಾಂಗ್ರೆಸ್ ಪಕ್ಷ ಎಡಪಕ್ಷಗಳ ಜತೆ ಕೂಡಿಕೊಂಡರೂ ಉರುಳಿಸಲು ಸಾಧ್ಯ ಇಲ್ಲ.

ಮಮತಾ ಬ್ಯಾನರ್ಜಿ ಅವರಿಗೆ ಈ ಗಣಿತ ಗೊತ್ತಿರುವ ಕಾರಣದಿಂದಾಗಿಯೇ ಕಾಂಗ್ರೆಸ್ ಪಕ್ಷದ ವಿರುದ್ಧ ಅವರು ದಾಳಿ ಪ್ರಾರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷವೇ ತಮ್ಮನ್ನು ಮೈತ್ರಿಕೂಟದಿಂದ ಕೈಬಿಡುವ ಮೊದಲೇ ತಾನೇ ಆ ಪಕ್ಷದಿಂದ ದೂರ ಹೋಗುವ ಉದ್ದೇಶವೂ ಅವರಿಗೆ ಇದ್ದಿರಬಹುದು.

ಆದರೆ ಈ ಎರಡು ಪಕ್ಷಗಳ ನಡುವಿನ ಸ್ವಹಿತಾಸಕ್ತಿ ಪ್ರೇರಿತ ಸಂಘರ್ಷದಿಂದ ನಿಜಕ್ಕೂ ಕಷ್ಟ-ನಷ್ಟ ಅನುಭವಿಸಲಿರುವವರು ಪಶ್ಚಿಮಬಂಗಾಳದ ಜನತೆ. `ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾದ` ಸ್ಥಿತಿ ಅವರದ್ದು.

34 ವರ್ಷಗಳ ಎಡಪಕ್ಷಗಳ ಆಡಳಿತದಿಂದ ಬೇಸತ್ತ ಆ ರಾಜ್ಯದ ಜನತೆ ಅನಿವಾರ್ಯವೆಂಬಂತೆ ಮಮತಾ ಬ್ಯಾನರ್ಜಿ ಅವರ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ ಅಧಿಕಾರಕ್ಕೆ ತಂದರು. ಅಲ್ಲಿನ ಹಿರಿ ಕಿರಿಯರೆಲ್ಲರೂ `ದೀದಿ` ಎಂದೇ ಪ್ರೀತಿಯಿಂದ ಕರೆಯುವ ಮಮತಾ ಬ್ಯಾನರ್ಜಿ ಅವರ ಬಗ್ಗೆ ಅವರಿಗೆ ತಿಳಿಯದ ಸಂಗತಿಗಳ್ಯಾವುದೂ ಇಲ್ಲ.

ಈ `ದೀದಿ`ಯ ಸರಳತೆ, ಪ್ರಾಮಾಣಿಕತೆ, ಬಡಜನರ ಬಗ್ಗೆ ಇರುವ ಕಾಳಜಿ ಎಲ್ಲವೂ ಅವರಿಗೆ ತಿಳಿದಿದೆ. ಇದರ ಜತೆಗೆ ಸಿಟ್ಟಿನ ಕೈಗೆ ಬುದ್ಧಿ ಕೊಡುವ `ದೀದಿ`ಯ ದೌರ್ಬಲ್ಯ ಮತ್ತು ಆಡಳಿತದ ಅನುಭವದ ಕೊರತೆಯೂ ಅವರಿಗೆ ಗೊತ್ತಿದೆ. ಬಯಸಿದ್ದು ಸಿಕ್ಕಿದ ನಂತರವಾದರೂ ಮಮತಾ ಬ್ಯಾನರ್ಜಿ ಅವರ ತಮ್ಮ ದೌರ್ಬಲ್ಯಗಳನ್ನು ಮೀರುವ ಪ್ರಯತ್ನ ಮಾಡಬಹುದೆಂಬ ನಿರೀಕ್ಷೆ ಅವರಲ್ಲಿತ್ತೋ ಏನೋ? ಅದಕ್ಕಾಗಿ ಭಾರಿ ಬಹುಮತದಿಂದ ಅವರ ಪಕ್ಷವನ್ನು ಗೆಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ `ದೀದಿ` ಮಾಡುತ್ತಿರುವುದೇನು?

 ಕೈಗಾರಿಕಾ ಹಿನ್ನಡೆ, ಮೂಲ ಸೌಕರ್ಯಗಳ ಕೊರತೆ, ಹೆಚ್ಚುತ್ತಿರುವ ನಿರುದ್ಯೋಗ, ಇಳಿಯುತ್ತಿರುವ ಕೃಷಿ ಆದಾಯ ಮೊದಲಾದ ಅನೇಕ ಮೂಲಭೂತ ಸಮಸ್ಯೆಗಳನ್ನು ಮಮತಾ ಬ್ಯಾನರ್ಜಿ ಎಡಪಕ್ಷಗಳಿಂದ ಬಳುವಳಿಯಾಗಿ ಪಡೆದಿದ್ದಾರೆ.

ಇವುಗಳನ್ನೆಲ್ಲ ಎದುರಿಸಿ ಪರಿಹರಿಸಲು ಆಡಳಿತದ ಅನುಭವ, ಅಭಿವೃದ್ಧಿಯ ಮುನ್ನೋಟ, ಹೊಂದಾಣಿಕೆಯ ಮನೋಭಾವ, ತಂತ್ರಗಾರಿಕೆ ಎಲ್ಲವೂ ಬೇಕಾಗುತ್ತದೆ. ಆದರೆ ಇವುಗಳ್ಯಾವುದೂ ಮಮತಾ ಬ್ಯಾನರ್ಜಿ ಅವರಲ್ಲಿ ಇಲ್ಲ.  ಆಡಳಿತದ ಕೌಶಲಕ್ಕೆ ಮಮತಾ ಬ್ಯಾನರ್ಜಿ ಹೆಸರಾದವರಲ್ಲ. ಕೇಂದ್ರದಲ್ಲಿ ಮೂರು ಬಾರಿ ರೈಲ್ವೆ, ಒಂದು ಬಾರಿ ಮಾನವ ಸಂಪನ್ಮೂಲ ಅಭಿವೃದ್ಧಿ, ಇನ್ನೊಂದು ಬಾರಿ ಕಲ್ಲಿದ್ದಲು ಮತ್ತು ಗಣಿ ಖಾತೆಗಳಿಗೆ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ದೇಶದ ಜನತೆ ನೆನಪಲ್ಲಿಟ್ಟುಕೊಳ್ಳುವಂತಹ ಯಾವ ಕೆಲಸವನ್ನೂ ಮಾಡಿಲ್ಲ. ಕಳೆದ ಏಳೆಂಟು ತಿಂಗಳ ಅವರ ಆಡಳಿತವನ್ನು ನೋಡಿದರೂ ಅಂತಹ ಯಾವ ನಿರೀಕ್ಷೆಯನ್ನು ಅವರು ಹುಟ್ಟುಹಾಕಿಲ್ಲ.

ಶನಿವಾರ ಅವರೇ ಮಾಧ್ಯಮದ ಎದುರು ಆಡಿದ ಮಾತುಗಳು ಅವರ ಅಸಹಾಯಕತೆ ಮತ್ತು ಹತಾಶೆಯನ್ನು  ತೋರಿಸುತ್ತದೆ. `ಎಡಪಕ್ಷಗಳಿಗೆ ನಿಷ್ಠರಾದವರೇ ತುಂಬಿಕೊಂಡಿರುವ ಪೊಲೀಸ್ ಇಲಾಖೆಯನ್ನು ಕಟ್ಟಿಕೊಂಡು ಏನು ಆಡಳಿತ ನಡೆಸಲಿ?` ಎಂದು ಅವರು ಕೇಳಿದ್ದಾರೆ.

ಎಡಪಕ್ಷಗಳ `ಅತಿಕ್ರಮಣ` ಕೇವಲ ಪೊಲೀಸ್ ಇಲಾಖೆಯೊಂದಕ್ಕೆ ಸೀಮಿತವಾಗಿಲ್ಲ. ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಮೇಲಿನಿಂದ ಕೆಳಗಿನವರೆಗೆ ಎಡಪಕ್ಷಗಳಿಗೆ ನಿಷ್ಠರಾದವರೇ ತುಂಬಿಕೊಂಡಿದ್ದಾರೆ.

ಚುನಾವಣೆ ಮೂಲಕ ರಾಜಕೀಯ ಬದಲಾವಣೆಯನ್ನು ಮಾಡಿದಷ್ಟು ಸುಲಭದಲ್ಲಿ ಬ್ಯುರೋಕ್ರಸಿಯನ್ನು ಒಂದೇ ಏಟಿಗೆ ಬದಲಾಯಿಸುವುದು ಸಾಧ್ಯ ಇಲ್ಲ. ಅಲ್ಲಿ ಇರುವವರು ಮಮತಾ ಬ್ಯಾನರ್ಜಿ ಅವರನ್ನು ಅಷ್ಟೊಂದು ಸುಲಭದಲ್ಲಿ ಒಪ್ಪಿಕೊಳ್ಳುವವರೂ ಅಲ್ಲ.

ಅವರನ್ನು ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ ಮಮತಾ ಅವರಲ್ಲಿಯೂ ಇಲ್ಲ.
ಅವರದ್ದು ಮುಟ್ಟಿದರೆ ಸಿಡಿಯುವಂತಹ ಸ್ವಭಾವ. ಮಮತಾ ಬ್ಯಾನರ್ಜಿ ಅವರ ಈ ದೌರ್ಬಲ್ಯವನ್ನೇ ಉಪಯೋಗಿಸಿಕೊಂಡು ಕಾಂಗ್ರೆಸ್ ಮತ್ತು ಎಡಪಕ್ಷಗಳು ಅವರನ್ನು ಕೆಡವಿಹಾಕಲು ಬೋನು ಇಟ್ಟಿದ್ದಾರೆ. ಮಮತಾ ಬ್ಯಾನರ್ಜಿ ಸುಲಭದಲ್ಲಿ ಅದಕ್ಕೆ ಬೀಳುತ್ತಿದ್ದಾರೆ.

ಕೇಂದ್ರ ಸರ್ಕಾರದ ಸಹಕಾರ ಇಲ್ಲದೆ ಪಶ್ಚಿಮ ಬಂಗಾಳವನ್ನು ಈಗಿನ ದುಃಸ್ಥಿತಿಯಿಂದ ಪಾರು ಮಾಡುವುದು ಸಾಧ್ಯವೇ ಇಲ್ಲ. ಮಮತಾ ಬ್ಯಾನರ್ಜಿ ನಿಜಕ್ಕೂ ಜಾಣೆಯಾಗಿದ್ದರೆ ಕೆಲವು ವರ್ಷಗಳ ಕಾಲವಾದರೂ ಕಾಂಗ್ರೆಸ್ ಪಕ್ಷದ ಜತೆ ಹೊಂದಿಕೊಂಡು ಹೋಗುವ ಔದಾರ್ಯವನ್ನು ತೋರಬೇಕಿತ್ತು. ಆ ಮೂಲಕ ಕೇಂದ್ರದ ನೆರವನ್ನು ಪಡೆದು ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗುವ ಪ್ರಯತ್ನ ಮಾಡಬಹುದಿತ್ತು.

ಕನಿಷ್ಠ ತನ್ನ ನೆರೆಯ ರಾಜ್ಯವಾದ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯವನ್ನು ನೋಡಿಯಾದರೂ ಕಲಿಯಬಹುದಿತ್ತು. ಕೇಂದ್ರದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಅದರ ಜತೆ ಎಲ್ಲಿಯೂ ಸಂಘರ್ಷಕ್ಕಿಳಿಯದೆ ಅಗತ್ಯ ಇರುವಲ್ಲಿ ಸಹಕಾರ ಪಡೆಯುತ್ತಾ ಪಶ್ಚಿಮಬಂಗಾಳಕ್ಕಿಂತಲೂ ದುಃಸ್ಥಿತಿಯಲ್ಲಿದ್ದ ಬಿಹಾರವನ್ನು ಸರಿ ದಾರಿಗೆ ತರಲು ನಿತೀಶ್ ಪ್ರಯತ್ನಿಸುತ್ತಿದ್ದಾರೆ. ಸ್ವಂತ ಅನುಭವದಿಂದಲೇ ಕಲಿಯದವರು ಬೇರೆಯವರ ಅನುಭವದಿಂದ ಏನು ಕಲಿಯುತ್ತಾರೆ

Wednesday, January 18, 2012

ನಡವಳಿಕೆಯಲ್ಲಿ ಆದರ್ಶದ ಹುಡುಕಾಟ ವಿಷಾದಕರ

`ಸ್ವಾಮಿ ವಿವೇಕಾನಂದ ಹೀಗಿದ್ದರು...~(ಜ.16) ಲೇಖನ ಅನೇಕ ಕಹಿ ಮತ್ತು ವಾಸ್ತವಿಕ ಸತ್ಯಗಳನ್ನು ಓದುಗರ ಮುಂದಿಟ್ಟಿದೆ. ಈಗಾಗಲೇ ತಮ್ಮ ವಿಚಾರ ಮತ್ತು ಕೃತಿಗಳ ಮೂಲಕ ದೇಶದ ಮನೆಮಾತಾಗಿರುವ ಅನೇಕ ಧೀಮಂತ ವ್ಯಕ್ತಿಗಳನ್ನು ಸರಿಯಾಗಿ ಓದದೆ ತಿಳಿದುಕೊಳ್ಳದೆ ಅವರನ್ನು ತಮ್ಮ ರಾಜಕೀಯ ಹಿತಾಸಕ್ತಿಗೆ ಅನೇಕ ಸಂಘಟನೆಗಳು ಬಳಸಿಕೊಳ್ಳುತ್ತಿವೆ. ತನ್ನ ಅಂಗಭಾಗವಾದ ಎಬಿವಿಪಿಯ ಮೂಲಕ ಬಿಜೆಪಿಯು ಇತ್ತೀಚೆಗೆ ವಿವೇಕಾನಂದರನ್ನು ಹೀಗೆ ಅತಿಯಾಗಿ ಬಳಸಿಕೊಳ್ಳುತ್ತಿದೆ.

ಚೋದ್ಯದ ಸಂಗತಿಯೆಂದರೆ ಭಗತ್ ಸಿಂಗರನ್ನೂ ಈ ವಿಚಾರದಲ್ಲಿ ಬಿಟ್ಟಿಲ್ಲ. ಎಡಪಂಥೀಯರನ್ನು ಉಗ್ರವಾಗಿ ವಿರೋಧಿಸುವ ಇದೇ ಹಿಂದುತ್ವದ ಪ್ರತಿಪಾದಕ ಭಗತ್ ಸಿಂಗ್ ಎಡಪಂಥೀಯ ವಿಚಾರಧಾರೆಗಳನ್ನು ಆಯ್ದು ಬದಿಗಿರಿಸಿ ಅವರನ್ನು ಕೂಡಾ ತಮ್ಮ ಬ್ರಾಂಡಿನ ಅಂಬಾಸಡರ್ ಆಗಿಯೇ ಬಿಂಬಿಸುತ್ತಿದ್ದು ಇದರ ಹಿಂದಿನ ಹುನ್ನಾರ ಅರ್ಥವಾಗದ್ದೇನಲ್ಲ.
ಧಾರ್ಮಿಕ ಸುಧಾರಣೆಯ ಮೂಲಕವೇ ಸಮಾಜವನ್ನು ಸುಧಾರಿಸಲು ಹೊರಟವರನ್ನೆಲ್ಲ ನಾವು `ದೇವರು~ ಮಾಡಿ ನಮ್ಮ ಕೈಗೆ ಎಟುಕದಷ್ಟು ದೂರದಲ್ಲಿರಿಸಿದ್ದೇವೆ~ ಎಂಬ ಒಂದೇ ಒಂದು ಸಾಲು, ಸಾವಿರ ಪದಗಳಲ್ಲಿ ಹೇಳಬಹುದಾದುದನ್ನು ಹೇಳುವಂತಿದೆ. ಲೇಖನದ ಕೊನೆಯ ಭಾಗವಂತೂ ಅತ್ಯಂತ ಮನನೀಯವಾಗಿದೆ.
ಹಿಂದೂ ಧರ್ಮದ ಹುಳುಕುಗಳನ್ನು ಕೊಳಕುಗಳನ್ನು ಎಗ್ಗಿಲ್ಲದೆ ಝಾಡಿಸಿದ ವಿವೇಕಾನಂದರನ್ನು ಹಿಂದೂ ಮತಾಂಧರು `ವಶಪಡಿಸಿಕೊಂಡಿರುವುದು~ ನಿಜಕ್ಕೂ ಖೇದದ ಮತ್ತು ಅಷ್ಟೇ ತಮಾಷೆಯ ಸಂಗತಿ. ಲೇಖನ ಇಂತಹ ಅನೇಕ ಸಂಗತಿಗಳ ಮೂಲಕ ಅಪರೂಪದ ಮಾಹಿತಿಯನ್ನು ಒದಗಿಸಿದೆ.
ಶ್ರೀನಿವಾಸ ಕಾರ್ಕಳ, ಮಂಗಳೂರು
* * *
ತುಂಬ ಚೆನ್ನಾಗಿದೆ ನಿಮ್ಮ `ವಿವೇಕಾನಂದ..~ ಪರಮಹಂಸರು ಇನ್ನೂ ಅದ್ಭುತ. ಆರೆಸ್ಸೆಸ್ ಮನಸ್ಸಿಗೆ ಇವರು ನಿಲುಕುವುದಿಲ್ಲ.
ಯು.ಆರ್.ಅನಂತಮೂರ್ತಿ, ಬೆಂಗಳೂರು
* * *
ತಮ್ಮ ಅಂಕಣದಲ್ಲಿ ದಿನೇಶ್ ಅಮಿನ್ ಮಟ್ಟು ಅವರು ವಿವರವಾಗಿ ಸ್ವಾಮೀಜಿಯವರ `ಗುಣಗಾನ~ ಮಾಡಿರುವುದು ಹೇಗಿದೆ ಅಂದರೆ- `ಗುಡಿಯೊಳಗಿನ ಪವಿತ್ರ ದೇವತಾ ಮೂರ್ತಿ ಎಲ್ಲೋ ಕಲ್ಮಶಗಳಲ್ಲಿ ಹೂತು ಹೋಗಿದ್ದ ಶಿಲೆ.

ಅದನ್ನು ತಿಳಿವಳಿಕೆಯಿಲ್ಲದ ಈ ಜನ ಸುಂದರವಾಗಿ ಕಡೆದು ತಂದು ಗುಡಿಯೊಳಗಿಟ್ಟು ದೇವರು ಅಂತ ಭಕ್ತಿಯಿಂದ ಪೂಜಿಸುತ್ತಿದ್ದಾರೆ. ಅದು ಪೂಜೆಗೆ ಅನರ್ಹವಾದದ್ದು. ಅದು ತಿಪ್ಪೆಗುಂಡಿಯಲ್ಲಿದ್ದ ಶಿಲೆ. ನೀವು ಪೂಜಿಸುವುದಕ್ಕೆ ಮೊದಲು ಸ್ವಲ್ಪ ಯೋಚನೆಮಾಡಿ~ ಎಂಬ ಬುದ್ಧಿವಾದದಂತಿತ್ತು.
ದಿನೇಶ್ ಅವರಿಗೆ ಆದರ್ಶ ಎನ್ನುವುದು ವಿವೇಕಾನಂದರು ಪ್ರತಿಪಾದಿಸಿದ ಮೌಲ್ಯಗಳಲ್ಲಿ ಗೋಚರಿಸದೆ ಅವರ ವೈಯಕ್ತಿಕ ನಡವಳಿಕೆಯಲ್ಲಿ ಗೋಚರಿಸಿರುವುದು ನಿಜಕ್ಕೂ ವಿಷಾದನೀಯ.
ಕೆ. ಕೆ. ಭಟ್, ಬೆಂಗಳೂರು
* * *
ಸ್ವಾಮಿ ವಿವೇಕಾನಂದ ಅವರ ಕುರಿತ ದಿನೇಶ್ ಅಮಿನಮಟ್ಟು ಅವರ ಲೇಖನ ಬಹುತೇಕ ಜನರ ಮಟ್ಟಿಗೆ ಹೊಸದಾಗಿದೆ. ಈ ಲೇಖನ ಎಲ್ಲರಿಗೂ ತಲುಪಬೇಕು. ಈ ಕುರಿತು ಎಡ-ಬಲ ಪೂರ್ವಗ್ರಹಪೀಡಿತರಲ್ಲದವರಿಂದ ಮೂರ‌್ನಾಲ್ಕು ದಿನಪತ್ರಿಕೆಯಲ್ಲಿ ಚರ್ಚೆಗೆ ವೇದಿಕೆ ಒದಗಿಸಿದರೆ ಸತ್ಯ ತಿಳಿಯಲು ಸಹಕಾರಿ ಆಗುತ್ತದೆ.
ಈ ಲೇಖನ ಓದಿ ನಂಬುವುದು ಹೇಗೆ? ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತಿದೆ. ಏಕೆಂದರೆ ಇಷ್ಟು ದಿನ ನಮ್ಮನ್ನು ನಂಬಿಸಿದ್ದ ಜನ, ನಾವು ಓದಿದ ಲೇಖನಗಳು, ಪುಸ್ತಕಗಳು, ಪಠ್ಯ ಪುಸ್ತಕದಲ್ಲಿ ಎಲ್ಲ ಕಡೆ ಏಕಮುಖವಾಗಿ ವಿವೇಕಾನಂದ ಅವರನ್ನು ಚಿತ್ರಿಸಲಾಗಿತ್ತು. ಅದನ್ನೇ ನಾವು ಇಷ್ಟು ದಿನ ಓದಿ, ತಿಳಿದುಕೊಂಡು ನಂಬಿಕೊಂಡು ಬಂದಿದ್ದೆೀವೆ.
ಕತ್ತಲಲ್ಲಿ ಗೊಗ್ಗ ಎಂಬ ಭಯ ಎಷ್ಟು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆಯೋ, ಅಷ್ಟೇ ಗಟ್ಟಿಯಾಗಿ ವಿವೇಕಾನಂದರ ಕುರಿತು ನಮ್ಮಲ್ಲಿ ಒಂದು ನಂಬಿಕೆ ಗಟ್ಟಿಯಾಗಿ ಬೇರೂರಿದೆ. ಅದು ಸುಳ್ಳು ಎಂಬುದು ಈಗ ಸ್ವಲ್ಪ ಸ್ಪಷ್ಟವಾಗಿದೆ. ಆದರೆ ಇನ್ನೂ ಪೂರ್ಣ ಕತ್ತಲಿನಿಂದ ಹೊರಬರಬೇಕಾಗಿದೆ.
ಸ್ವಾಮಿ ವಿವೇಕಾನಂದ ಅವರು ಕೂಡ ನಮ್ಮಂತೆ ಮನುಷ್ಯರು, ಅವರು ದೇವರ ಅನುಗ್ರಹವಿಲ್ಲದೇ ಸಾಮಾನ್ಯ ಮನುಷ್ಯನಂತೆ ಸಾಧನೆಗೈದ ಮಹಾನ್ ವ್ಯಕ್ತಿ. ನಾವು ಕೂಡ ಸಾಧನೆ ಮಾಡಬಹುದು ಎಂಬ ಅಮಿನ್‌ಮಟ್ಟು ಅವರ ಲೇಖನ ಸಾಂದರ್ಭಿಕವಾಗಿದೆ.
ಅದು ಇನ್ನೂ ಹೆಚ್ಚು ಜನರಿಗೆ ತಲುಪುವಂತಾಗಲು ವಿತಂಡವಾದಿಗಳಲ್ಲದವರಿಂದ ಒಂದೆರಡು ದಿನಗಳ ಕಾಲ ಲೇಖನಗಳ ಮೂಲಕ ಚರ್ಚೆಗೆ ಅವಕಾಶ ಕಲ್ಪಿಸಿದರೆ ನಮ್ಮಂತಹ ಸಾವಿರಾರು ಜನರಿಗೆ ಹೆಚ್ಚು ಸಹಕಾರಿ ಆಗುತ್ತದೆ.
ಈ.ಮಹೇಶ್‌ಬಾಬು, ಚಿತ್ರದುರ್ಗ
***
ಭಾರತದ ಇತಿಹಾಸದಲ್ಲಿ ಸಾಧನೆ ಮಾಡಿದ ಸಾಧಕರೂ ಇದ್ದಾರೆ. ಜತೆಗೆ ಅವರ ದೌರ್ಬಲ್ಯಗಳನ್ನೇ (ಇದ್ದರೆ!) ವೈಭವೀಕರಿಸಿ ಪ್ರಚುರಪಡಿಸುವ ಮತ್ತೊಂದು ವರ್ಗವು ಇದ್ದೆೀ ಇದೆ. ಇತಿಹಾಸದಲ್ಲಿ ಸಾಧನೆ ಮಾಡಿದ ಬಹುತೇಕರು ಹುಟ್ಟಿನಿಂದಲೇ ಯಾರೂ ವೀರರೂ ಅಲ್ಲ, ಶೂರರೂ ಅಲ್ಲ. ಜ್ಞಾನಿಗಳೂ ಅಲ್ಲ.

ಜೀವನದ ವಿವಿಧ ಘಟ್ಟಗಳನ್ನು ದಾಟಿ ಸಾಧಕರಾಗಿ ಮೆರೆದವರೇ. ಬೇಟೆ ಮಾಡುತ್ತಿದ್ದ ವಾಲ್ಮೀಕಿ ಇರಬಹುದು, ವೇಶ್ಯೆಯ ಸಂಘ ಮಾಡಿದ ಕಾಳಿದಾಸನಿರಬಹುದು. ಅಷ್ಟೇಕೆ, ಬಾಲ್ಯದಲ್ಲಿ ಕಳ್ಳತನ ಮಾಡಿದ್ದೆ, ಧೂಮಪಾನ ಮಾಡಿದ್ದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡು ನಂತರ ಮಹಾತ್ಮನಾದ ಗಾಂಧಿ ಇರಬಹುದು.
ಎಲ್ಲರೂ ಜೀವನದ ವಿವಿಧ ಮಜಲುಗಳನ್ನು ದಾಟಿ ಸಾಧನೆ ಮಾಡಿದವರೇ. ಇಂತಹ ಸಾಧಕರುಗಳಿಗೆ ಆಯಾ ಸಂದರ್ಭಗಳಲ್ಲಿ ಸಿಕ್ಕ ಪ್ರೇರಣೆ, ಸ್ಪೂರ್ತಿ, ಮಾರ್ಗದರ್ಶನ ಅವರ ಸಾಧನೆಗೆ ಕಾರಣವಿರಬಹುದು. ಇದು ಹಿಂದಿನಿಂದ ಇಂದಿಗೂ ನಡೆದುಕೊಂಡು ಬರುತ್ತಲೇ ಇದೆ.
ಅದೇ ರೀತಿ ವಿವೇಕಾನಂದರ ಜೀವನದಲ್ಲಿಯೂ ಕೆಲವು ಘಟನೆಗಳು ಆಗಿದ್ದಿರಬಹುದು. ಆದರೆ ಮಹನೀಯರು ಮಾಡಿದ ಸಾಧನೆಗಿಂತ ಅವರುಗಳು ಮಾಡಿದ ಯಾವುದೋ ಕೃತ್ಯಗಳಿಗೆ (ಮಾಡಿದ್ದಾರೋ ಇಲ್ಲವೋ?) ಹೆಚ್ಚು ಪ್ರಚಾರ ಕೊಡುವುದು ಸರಿಯೇ? 
ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ ಖಾಸಗಿ ಬದುಕು ಎಂಬುದಿರುತ್ತದೆ. ಅದಕ್ಕೆ ಸಾಕಷ್ಟು ಆಧಾರಗಳಿರಬಹುದು. ಈ ಬದುಕಿನ ಬಗ್ಗೆ ನಿಜ ಸುಳ್ಳುಗಳು ಸೃಷ್ಟಿಯಾಗಿರಬಹುದು. ಆದರೆ ಆ ವ್ಯಕ್ತಿಗಳ ಸಾಧನೆಗಿಂತ ಅವರ ಖಾಸಗಿ ಜೀವನಕ್ಕೆ ಅನಗತ್ಯ ಪ್ರಚಾರ ಕೊಡುವುದು ಅವಶ್ಯಕವೇ? ಅಥವಾ ಆ ಮಹಾನ್ ವ್ಯಕ್ತಿಗಳ ಖಾಸಗಿ ಬದುಕಿನ ವೈರುಧ್ಯಗಳ ನಡುವೆಯೂ ಮಾಡಿದ ಸಾಧನೆ ದೊಡ್ಡದಲ್ಲವೇ? ಈ ಬಗ್ಗೆ ಪ್ರಜ್ಞಾವಂತರು  ಚಿಂತಿಸಲೇಬೇಕಾಗಿದೆ.
ಬಿದರೆ ಪ್ರಕಾಶ್, ತುಮಕೂರು

Tuesday, January 17, 2012

ರಾಷ್ಟ್ರ ರಾಜಕಾರಣದ ಪ್ರಶ್ನೆಗೆ ಉತ್ತರಪ್ರದೇಶದಲ್ಲಿ ಉತ್ತರ 02/01/2012

`ಉತ್ತರ ಪ್ರದೇಶದ ರಾಜಕೀಯ ಅರ್ಥವಾಗದೆ ಇದ್ದರೆ ನಿನಗೆ ದೇಶದ ರಾಜಕೀಯ ಅರ್ಥ ಆಗುವುದಿಲ್ಲ` ಎಂದು ನಾನು ದೆಹಲಿಗೆ ಹೋದ ಹೊಸದರಲ್ಲಿ ಹಿರಿಯ ಪತ್ರಕರ್ತರೊಬ್ಬರು ನನಗೆ ಹೇಳಿದ್ದರು.

ಎರಡು ಬಾರಿ ವಿಧಾನಸಭೆಗೆ ಇನ್ನೆರಡು ಬಾರಿ ಲೋಕಸಭೆಗೆ ನಡೆದ ಚುನಾವಣೆಯ ಕಾಲದಲ್ಲಿ ಆ ರಾಜ್ಯದ ಉದ್ದಗಲಕ್ಕೆ, ಮೀರತ್‌ನಿಂದ ಮಿರ್ಜಾಪುರದ ವರೆಗೆ, ಇಟಾವದಿಂದ ಗೋರಖ್‌ಪುರದ ವರೆಗೆ ನಾನು ಅಲೆದಾಡಿದ್ದೇನೆ.

ಆದರೆ ಆ ರಾಜ್ಯದ ರಾಜಕೀಯವನ್ನು ಇನ್ನೂ ನನಗೆ ಅರ್ಥ ಮಾಡಿಕೊಳ್ಳಲಿಕ್ಕೆ ಆಗಿಲ್ಲ. ಇದರಿಂದಾಗಿಯೋ ಏನೋ, ದೇಶದ ರಾಜಕೀಯ ಕೂಡಾ ನನಗಿನ್ನೂ ಅರ್ಥವಾಗಿಲ್ಲ.

ಈಗ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಘೋಷಣೆಯಾದ ದಿನದಿಂದಲೇ `ಯುಪಿಎ ಕಾ ಭವಿಷ್ಯ್ ಯುಪಿ ಕೆ ಊಪರ್` (ಯುಪಿಎ ಭವಿಷ್ಯ ಉತ್ತರ ಪ್ರದೇಶದ ಮೇಲಿದೆ) ಎನ್ನುವ ಮಾತು ಕೇಳಿಬರುತ್ತಿದೆ.

ಹೊಸ ವರ್ಷದಲ್ಲಿ ದೇಶದ ರಾಜಕೀಯ ಯಾವ ದಾರಿ ಹಿಡಿಯಲಿದೆ ಎನ್ನುವ ದಿಕ್ಸೂಚಿ ಮುಂದಿನ ತಿಂಗಳು ಆ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯ ಫಲಿತಾಂಶ ನೀಡಲಿದೆ ಎನ್ನುವ ನಿರೀಕ್ಷೆ ಎಲ್ಲರದ್ದು. ಆ ಫಲಿತಾಂಶ ಏನಿರಬಹುದೆನ್ನುವುದನ್ನು ಈಗಲೂ ಊಹಿಸುವುದು ಕಷ್ಟ.

ಉತ್ತರಪ್ರದೇಶವನ್ನು ಪಕ್ಕಕ್ಕೆ ಇಟ್ಟು ದೇಶದ ರಾಜಕೀಯ ಚಿತ್ರ ಬಿಡಿಸುವುದು ಸಾಧ್ಯವೇ ಇಲ್ಲ. ದೇಶಕ್ಕೆ ಅತಿಹೆಚ್ಚಿನ ಪ್ರಧಾನಿಗಳನ್ನು ನೀಡಿದ ಮತ್ತು ಲೋಕಸಭೆಯಲ್ಲಿ ಅತಿ ಹೆಚ್ಚು ಸಂಖ್ಯೆಯ ಸದಸ್ಯರನ್ನು (ಮೊದಲು 83 ಈಗ 80) ಹೊಂದಿರುವ ಉತ್ತರಪ್ರದೇಶದ ರಾಜಕೀಯ ಮಹತ್ವ ಈ ಸಂಖ್ಯೆಯ ಆಟವನ್ನು ಮೀರಿದ್ದು.

ರಾಯಬರೇಲಿಯಲ್ಲಿ ಇಂದಿರಾಗಾಂಧಿಯ ಸೋಲು ಇರಬಹುದು ಇಲ್ಲವೇ ಬಾಬರಿ ಮಸೀದಿಯ ಧ್ವಂಸ ಇರಬಹುದು, ರಾಷ್ಟ್ರಮಟ್ಟದಲ್ಲಿ ನಡೆದ ಅನೇಕ ರಾಜಕೀಯ ಸ್ಥಿತ್ಯಂತರಗಳಿಗೆ ಕಾರಣವಾದ ಘಟನೆಗಳು ನಡೆದದ್ದು ಉತ್ತರಪ್ರದೇಶದಲ್ಲಿ.

ಬಹುಕಾಲ ದೇಶವನ್ನು ಆಳಿದ ನೆಹರೂ ಕುಟುಂಬದ ತವರು ಕೂಡಾ  ಆ ರಾಜ್ಯ ಆಗಿರುವುದು ಅದಕ್ಕೆ ಇರುವ ರಾಜಕೀಯ ಮಹತ್ವಕ್ಕೆ ಕಾರಣ ಇರಬಹುದು.

ಉತ್ತರಪ್ರದೇಶದ ಮೇಲಿನ ರಾಜಕೀಯ ನಿಯಂತ್ರಣ ಕಳೆದುಕೊಂಡ ನಂತರವೇ ಕಾಂಗ್ರೆಸ್ ಏಕಚಕ್ರಾಧಿಪತ್ಯವನ್ನು ಕಳೆದುಕೊಂಡು ಮಿತ್ರಕೂಟದ ಔದಾರ‌್ಯದ ಉರುಳಲ್ಲಿ ಸಿಕ್ಕಿಹಾಕಿಕೊಂಡಿದ್ದು ಎನ್ನುವುದು ಕೂಡಾ ನಿಜ.

ರಾಜಕೀಯ ಎನ್ನುವುದು `ಸಾಧ್ಯತೆಗಳ ಕಲೆ` ಎನ್ನುವ ಮಾತು ಉತ್ತರಪ್ರದೇಶದ ಮಟ್ಟಿಗೆ ನೂರಕ್ಕೆ ನೂರರಷ್ಟು ನಿಜ. ಉಳಿದ ರಾಜ್ಯಗಳಲ್ಲಿ ರಾಜಕೀಯ ಲೆಕ್ಕಾಚಾರಕ್ಕೆ ಬಳಸುವ ಸೂತ್ರ, ಸಾಧನ ಇಲ್ಲವೇ ಅನುಭವ ಅಲ್ಲಿ ಕೆಲಸಕ್ಕೆ ಬರುವುದಿಲ್ಲ.

ಕಾಂಗ್ರೆಸ್ ಸುಮಾರು ನಾಲ್ಕುದಶಕಗಳ ಕಾಲ ಆ ರಾಜ್ಯವನ್ನು ಆಳಿಕೊಂಡು ಬಂದದ್ದು ಬ್ರಾಹ್ಮಣ, ಮುಸ್ಲಿಮ್ ಮತ್ತು ದಲಿತರನ್ನೊಳಗೊಂಡ ವಿಲಕ್ಷಣ ಜಾತಿ ಸೂತ್ರದಿಂದ. ಮುಸ್ಲಿಮರು ಪ್ರಾರಂಭದಿಂದಲೂ ಕಾಂಗ್ರೆಸ್ ಜತೆ ಗುರುತಿಸಿಕೊಂಡೇ ಬಂದವರು. ಆದರೆ ಉಳಿದ ರಾಜ್ಯಗಳಲ್ಲಿ ಬ್ರಾಹ್ಮಣರಿಗೆ ಕಾಂಗ್ರೆಸ್ ಬಗೆಗಿನ ಒಲವು ಅಷ್ಟಕ್ಕಷ್ಟೆ.

ನೆಹರೂ ಕುಟುಂಬ ತಮ್ಮ ಜಾತಿಗೆ ಸೇರಿರುವ ಕಾರಣಕ್ಕೆ ಬ್ರಾಹ್ಮಣರು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಬೆಂಬಲಿಸಿರಬಹುದೆನ್ನುವ ವಾದವನ್ನು ಕೂಡಾ ಆ ಕುಟುಂಬದಲ್ಲಿ ನಡೆಯುತ್ತಾ ಬಂದ ವರ್ಣಸಂಕರದ ಹಿನ್ನೆಲೆಯಲ್ಲಿ ಒಪ್ಪುವುದು ಕಷ್ಟ.

ಕರ್ನಾಟಕವೂ ಸೇರಿದಂತೆ ಬಹಳಷ್ಟು ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳು (ಒಬಿಸಿ) ಕಾಂಗ್ರೆಸ್ ಜತೆ ಗುರುತಿಸಿಕೊಂಡದ್ದೇ ಹೆಚ್ಚು. ಆದರೆ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಒಬಿಸಿಗಳು ಎಂದೂ ಕಾಂಗ್ರೆಸ್ ಪಕ್ಷದ ಮತಬ್ಯಾಂಕ್ ಆಗಿರಲಿಲ್ಲ.

ಇದಕ್ಕೆ ವಿ.ಪಿ.ಸಿಂಗ್ ಅನುಷ್ಠಾನಕ್ಕೆ ತಂದ ಮಂಡಲ ವರದಿಯೊಂದೇ ಕಾರಣವಲ್ಲ; ಡಾ.ರಾಮಮನೋಹರ ಲೋಹಿಯಾ ಅವರ ನೇತೃತ್ವದ ಸಮಾಜವಾದಿ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯರಾಗಿದ್ದವರು ಈ ಎರಡು ರಾಜ್ಯಗಳ ಒಬಿಸಿಗಳು. ಆದ್ದರಿಂದ ಅಲ್ಲಿನ ಒಬಿಸಿಗಳು ಸ್ವಭಾವತಃ ಕಾಂಗ್ರೆಸ್ ವಿರೋಧಿಗಳು.

ಇದರಿಂದಾಗಿಯೇ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಮುಲಾಯಂ ಸಿಂಗ್ ಯಾದವ್ ಮತ್ತು ಲಾಲು ಪ್ರಸಾದ್ ಅವರಂತಹ ನಾಯಕರು ಬೆಳೆಯಲು ಸಾಧ್ಯವಾಗಿದ್ದು.

ದಲಿತರಿಗೆ ಬ್ರಾಹ್ಮಣರು ನಾಯಕತ್ವ ನೀಡಿದ್ದ ಉದಾಹರಣೆಗಳು ದೇಶದ ಸಾಮಾಜಿಕ ಇತಿಹಾಸದಲ್ಲಿ ಬಹಳಷ್ಟಿವೆ. ಆದರೆ ದಲಿತ ನಾಯಕ ಇಲ್ಲವೇ ನಾಯಕಿಯನ್ನು ಬ್ರಾಹ್ಮಣರು ಒಪ್ಪಿಕೊಂಡ ಉದಾಹರಣೆಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ಆದರೆ ಉತ್ತರಪ್ರದೇಶದಲ್ಲಿ ಬ್ರಾಹ್ಮಣರಿಗೆ ಮಾಯಾವತಿಯವರೇ ನಾಯಕಿ. ಬೇರೆ ರಾಜ್ಯಗಳಂತೆ ಅಲ್ಲಿ ಬ್ರಾಹ್ಮಣರು ಅಲ್ಪಸಂಖ್ಯಾತರೂ ಅಲ್ಲ, ಅಷ್ಟೊಂದು ಅಸಹಾಯಕರೂ ಅಲ್ಲ. ಆ ರಾಜ್ಯದಲ್ಲಿ ಬ್ರಾಹ್ಮಣರು ಶೇಕಡಾ ಹತ್ತರಷ್ಟಿದ್ದಾರೆ.

ಹೀಗಿದ್ದರೂ `ಮೇಲ್ಜಾತಿ ಜನರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು` ಎಂದು ಹೇಳುತ್ತಾ ರಾಜಕೀಯ ಪ್ರಾರಂಭಿಸಿದ್ದ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಬ್ರಾಹ್ಮಣರ ಕಣ್ಮಣಿ.

ಬಿಜೆಪಿ ಎಂದರೆ `ಬಿಪಿ` (ಬ್ರಾಹ್ಮಣ-ಬನಿಯಾ) ಪಕ್ಷ ಎಂದು ಗೇಲಿ ಮಾಡುತ್ತಿದ್ದ ಬಿಎಸ್‌ಪಿ ಹದಿನೈದು ವರ್ಷಗಳ ಹಿಂದೆ ಅದೇ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಾಗ ಅಚ್ಚರಿ ಪಟ್ಟವರೇ ಹೆಚ್ಚು.

ಅಲ್ಲಿಗೆ ಬಿಎಸ್‌ಪಿ ಕತೆ ಮುಗಿಯಿತು ಎಂದೇ ಎಲ್ಲರೂ ವಿಶ್ಲೇಷಿಸತೊಡಗಿದ್ದರು. ಆದರೆ ಮಾಯಾವತಿ ಒಂದಲ್ಲ, ಮೂರು ಬಾರಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಮೂರು ಬಾರಿ ಅದನ್ನು ಮುರಿದು ದಕ್ಕಿಸಿಕೊಂಡರು.

ದಲಿತ ಸಮುದಾಯದ ಅಖಂಡ ಬೆಂಬಲವೇ ಮಾಯಾವತಿಯವರ ರಾಜಕೀಯ ಶಕ್ತಿ. ಈ ರೀತಿಯ ಜಾತಿ ಆಧಾರಿತ  ರಾಜಕೀಯ ಮಾಡುವವರು ಬೇರೆ ರಾಜ್ಯಗಳಲ್ಲಿ, ಇಲ್ಲವೇ ಬೇರೆ ಜಾತಿಗಳಲ್ಲಿ ಬಹಳ ಕಾಲ ರಾಜಕೀಯ ಯಶಸ್ಸನ್ನು ಉಳಿಸಿಕೊಳ್ಳಲು ಆಗಿಲ್ಲ. ಬಿಹಾರದಲ್ಲಿ ಲಾಲುಪ್ರಸಾದ್ ಮಾಡಿದ್ದ ಇದೇ ರಾಜಕೀಯ ಹದಿನಾರು ವರ್ಷಗಳಲ್ಲಿ ಕೊನೆಗೊಂಡಿತ್ತು.

ಉತ್ತರಪ್ರದೇಶದಲ್ಲಿಯೇ ಮುಲಾಯಂ ಸಿಂಗ್ ಏದುಸಿರು ಬಿಡತೊಡಗಿದ್ದಾರೆ. ಆದರೆ ಬಿಎಸ್‌ಪಿ ಸ್ಥಾಪನೆಯಾದ ದಿನದಿಂದ ಇಲ್ಲಿಯ ವರೆಗಿನ ಸುಮಾರು ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ನಡೆದ ಪ್ರತಿ ಚುನಾವಣೆಯಲ್ಲಿಯೂ ಬಿಎಸ್‌ಪಿಯ ದಲಿತರ ಬೆಂಬಲ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ. ಇದು ಬರೀ ಬೆಂಬಲ ಅಲ್ಲ, ಒಂದು ರೀತಿಯಲ್ಲಿ ಕುರುಡು ಬೆಂಬಲ.

ಸಾಮಾಜಿಕವಾಗಿ ತಮ್ಮ ಶತ್ರುಗಳು ಎಂದು ತಿಳಿದುಕೊಂಡ ಮೇಲ್ಜಾತಿಗಳಿಗೆ ಸೇರಿದ ಅಭ್ಯರ್ಥಿಗಳನ್ನು ತಮ್ಮ ಪಕ್ಷದಿಂದ ಕಣಕ್ಕಿಳಿಸಿದರೂ ಕಣ್ಣುಮುಚ್ಚಿ ಅವರಿಗೆ ಮತ ಹಾಕುವಷ್ಟು ಉತ್ತರಪ್ರದೇಶದ ದಲಿತರಿಗೆ ಮಾಯಾವತಿಯವರ ಮೇಲೆ ಅಂಧಾಭಿಮಾನ ಇದೆ ಎನ್ನುವುದು ಚುನಾವಣೆಗಳಲ್ಲಿ ಸಾಬೀತಾಗಿದೆ.

ಮಾಯಾವತಿ ಅವರ ನಾಯಕತ್ವದಿಂದ ದಲಿತರಿಗೇನಾದರೂ ಲಾಭ ಆಗಿದೆಯೇ? ಮಾಯಾವತಿ ಉತ್ತರಪ್ರದೇಶ ಪ್ರವೇಶಿಸಿದಾಗ ದಲಿತರು ಯಾವ ಸ್ಥಿತಿಯಲ್ಲಿದ್ದರೋ ಹೆಚ್ಚು ಕಡಿಮೆ ಈಗಲೂ ಹಾಗೆಯೇ ಇದ್ದಾರೆ.

ಅವರು ಸಮಾಜದಲ್ಲಿ ಭಯಮುಕ್ತರಾಗಿ  ಆತ್ಮಗೌರವದಿಂದ ಬದುಕುವ ವಾತಾವರಣವನ್ನಷ್ಟೇ ಮಾಯಾವತಿ ಕಲ್ಪಿಸಿದ್ದಾರೆ.  ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಉಳಿದ ರಾಜ್ಯಗಳ ದಲಿತರಷ್ಟೇ ಹಿಂದುಳಿದಿದ್ದಾರೆ. ಭೂ ಹಂಚಿಕೆಯಲ್ಲಿ ಆಗಿರುವ ಅನ್ಯಾಯ ಈಗಲೂ ಮುಂದುವರಿದಿದೆ.

ಹೀಗಿದ್ದರೂ ಮಾಯಾವತಿ ಅವರ ಬಗೆಗಿನ ದಲಿತರ ಅಭಿಮಾನ ಕಡಿಮೆಯಾದಂತೆ ಕಾಣುತ್ತಿಲ್ಲ. ಅವರಿಗೆ ಇದಿರಾಗಿ ಇನ್ನೊಬ್ಬ ದಲಿತ ನಾಯಕ ಅಲ್ಲಿ ಬೆಳೆಯುವುದು ಕೂಡಾ ಇಲ್ಲಿಯ ವರೆಗೆ ಸಾಧ್ಯವಾಗಿಲ್ಲ.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮತ್ತೆ ಗತವೈಭವದ ಸ್ಥಿತಿಗೆ ಮರಳಲು ಸಾಧ್ಯವೇ ಇಲ್ಲವೆಂದು ವಿರೋಧಪಕ್ಷಗಳು ಮಾತ್ರವಲ್ಲ, ಕಾಂಗ್ರೆಸ್ ಪಕ್ಷದ ನಾಯಕರು ಕೂಡಾ ಮೂರು ವರ್ಷಗಳ ಹಿಂದೆ ಖಾಸಗಿ ಮಾತುಕತೆಯಲ್ಲಿ ಹೇಳುತ್ತಿದ್ದರು. ಕಾಗದದ ಮೇಲಿನ ಲೆಕ್ಕಾಚಾರ ಕೂಡಾ ಅದನ್ನೇ ಹೇಳುತ್ತಿತ್ತು.

ಬ್ರಾಹ್ಮಣರು ಮೊದಲು ಬಿಜೆಪಿಗೆ, ನಂತರ ಬಿಎಸ್‌ಪಿಗೆ, ದಲಿತರು ಬಿಎಸ್‌ಪಿಗೆ, ಮತ್ತು ಬಾಬರಿ ಮಸೀದಿ ಧ್ವಂಸದ ನಂತರ ಮುಸ್ಲಿಮರು ಮುಲಾಯಂಸಿಂಗ್ ಅವರ ಸಮಾಜವಾದಿ ಪಕ್ಷಕ್ಕೆ ವಲಸೆ ಹೋಗಿದ್ದ ಕಾರಣ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಬೆಂಬಲದ ಮತಬುಟ್ಟಿ ಖಾಲಿಯಾಗಿತ್ತು.

ಯಾವುದೇ ನಿರ್ದಿಷ್ಟ ಜಾತಿ ಇಲ್ಲವೇ ಧರ್ಮದ ಜತೆ ಗುರುತಿಸಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇರಲಿಲ್ಲ. ಮಂಡಲೋತ್ತರ ದಿನಗಳಲ್ಲಿ ಉತ್ತರಪ್ರದೇಶದಲ್ಲಿ ನಡೆಯುತ್ತಾ ಬಂದ ಬಿರುಸಾದ ಜಾತಿ ಸಂಘರ್ಷದ ರಾಜಕೀಯ ಕಾಂಗ್ರೆಸ್ ಪಕ್ಷವನ್ನು ಮೂಲೆಗುಂಪು ಮಾಡಿತ್ತು.

2007ರ ಚುನಾವಣೆಯಲ್ಲಿ ಮಾಯಾವತಿ ಅರ್ಧಕ್ಕಿಂತಲೂ ಹೆಚ್ಚು ವಿಧಾನಸಭಾ ಸ್ಥಾನಗಳನ್ನು ಗಳಿಸಿದಾಗ ಉಳಿದೆಲ್ಲ ಪಕ್ಷಗಳ ಕತೆ ಮುಗಿಯಿತೆಂದೇ ಎಲ್ಲರೂ ತಿಳಿದಿದ್ದರು. ಬಿಎಸ್‌ಪಿಯ 208 ಸದಸ್ಯಬಲದ ಎದುರು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ 21 ಸದಸ್ಯರು ಲೆಕ್ಕಕ್ಕಿಲ್ಲದಷ್ಟು ನಗಣ್ಯರಾಗಿದ್ದರು.

ಇಷ್ಟೊಂದು ಭದ್ರವಾಗಿದ್ದ ಮಾಯಾವತಿಯವರ ರಾಜಕೀಯ ನೆಲೆ ಎರಡೇ ವರ್ಷಗಳ ಅವಧಿಯಲ್ಲಿ ಕುಸಿದು ಹೋಯಿತೇನೋ ಎಂಬ ಅನುಮಾನ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ಹುಟ್ಟಿಸಿತ್ತು.

ಆ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಕಾಂಗ್ರೆಸ್ ಪಕ್ಷ ಚೇತರಿಸಿಕೊಂಡಿತ್ತು. 1984ರಲ್ಲಿ ಎಲ್ಲ 83 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಪಕ್ಷದ ಸದಸ್ಯ ಬಲ ಪ್ರತಿಚುನಾವಣೆಯಲ್ಲಿ ಕುಸಿಯುತ್ತಾ ಬಂದು 2004ರಲ್ಲಿ ಕೇವಲ ಒಂಬತ್ತಕ್ಕೆ ಇಳಿದಿತ್ತು.

ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ಅದು ಇದ್ದಕ್ಕಿದ್ದಂತೆ 21ಕ್ಕೆ ಏರಿತ್ತು, ಬಿಎಸ್‌ಪಿ ಬಲ 19ಕ್ಕೆ ಇಳಿದಿತ್ತು. ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಬಹಳಷ್ಟು ಕಾಲದಿಂದ ರಾಜಕೀಯ ಯಶಸ್ಸಿಗಾಗಿ ಕಾಯುತ್ತಿದ್ದ ರಾಹುಲ್‌ಗಾಂಧಿಯವರಿಗೂ ರಾಜಕೀಯವಾಗಿ ಜೀವದಾನ ಮಾಡಿದ ಫಲಿತಾಂಶ.

ಈ ಚುನಾವಣಾ ಗೆಲುವಿನ ಗುಟ್ಟೇನು? ಉತ್ತರಪ್ರದೇಶದ ಮತದಾರರ ಮನೋಭಾವದಲ್ಲಿ ದಿಢೀರನೆ ಆಗಿರುವ ಈ ಬದಲಾವಣೆಗೆ ಕಾರಣಗಳೇನು? ಎಂಬುದು ಈಗಲೂ ಯಾರಿಗೂ ಸ್ಪಷ್ಟ ಇಲ್ಲ.

ಬಹಳಷ್ಟು ಮಂದಿ ಇದಕ್ಕೆ ರಾಹುಲ್ ಗಾಂಧಿಯವರ ವರ್ಚಸ್ಸು ಕಾರಣ ಎನ್ನುತ್ತಾರೆ. ಜಾತಿ-ಧರ್ಮವನ್ನು ಲೆಕ್ಕಿಸದೆ ಟಿಕೆಟ್ ನೀಡಿದ ಕಾರ‌್ಯತಂತ್ರ ಫಲ ನೀಡಿತು ಎನ್ನುವವರೂ ಇದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿನ ಗೆಲುವಿನ ನಂತರ ಮಾಯಾವತಿಯವರಲ್ಲಿ ಹುಟ್ಟಿಕೊಂಡ ರಾಷ್ಟ್ರ ರಾಜಕಾರಣದ ಆಕಾಂಕ್ಷೆಯಿಂದಾಗಿ ರಾಜ್ಯ ರಾಜಕಾರಣವನ್ನು ನಿರ್ಲಕ್ಷಿಸಿದ್ದು ಇದಕ್ಕೆ ಕಾರಣ ಎನ್ನುವವರೂ ಇದ್ದಾರೆ.

ದಶಕಗಳ ಕಾಲದ ಪ್ರಾದೇಶಿಕ ಪಕ್ಷಗಳ ರಾಜಕಾರಣದಿಂದ ಬೇಸತ್ತು ಹೋಗಿರುವ ಉತ್ತರಪ್ರದೇಶದ ಮತದಾರರು ಮರಳಿ ರಾಷ್ಟ್ರೀಯ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿರಬಹುದೆಂಬ ವ್ಯಾಖ್ಯಾನ ಕೂಡಾ ಕೇಳಿಬಂದಿತ್ತು.

 ಈ ಎಲ್ಲ ಕಾರಣಗಳಿಂದಾಗಿಯೇ ಮುಂದಿನ ತಿಂಗಳು ನಡೆಯಲಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಬಗ್ಗೆ ದೇಶದ ಜನರಲ್ಲಿ ಕುತೂಹಲ ಇದೆ. ಒಂದೊಮ್ಮೆ ಮಾಯಾವತಿ ಮತ್ತೆ ಹಿಂದಿನ ವಿಧಾನಸಭಾ ಚುನಾವಣೆಯ ಗೆಲುವನ್ನು ಪುನರಾವರ್ತಿಸಿದರೆ ರಾಹುಲ್‌ಗಾಂಧಿಯವರ ರಾಜಕೀಯ ಭವಿಷ್ಯಕ್ಕೆ ಮಂಕು ಕವಿಯಲಿದೆ.

ಅಷ್ಟು ಮಾತ್ರವಲ್ಲ, ಅಂತಹ ಸಂದರ್ಭದಲ್ಲಿ ಮಾಯಾವತಿ ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವುದನ್ನು ಯಾರೂ ತಡೆಯಲಾರರು.

  ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ಪುನರಾವರ್ತನೆಯಾದರೆ ಕಾಂಗ್ರೆಸ್ ಪಕ್ಷ, ವರ್ಷಗಳಿಂದ ಕಾಯುತ್ತಿರುವ ಭವಿಷ್ಯದ ನಾಯಕತ್ವ ರಾಹುಲ್‌ಗಾಂಧಿಯ ರೂಪದಲ್ಲಿ ಅದಕ್ಕೆ ಸಿಗಬಹುದು.

ಮಾಯಾವತಿಯವರ ರಾಜಕೀಯ ಸದ್ಯಕ್ಕೆ ಉತ್ತರಪ್ರದೇಶಕ್ಕಷ್ಟೇ ಸೀಮಿತವಾಗಬಹುದು. ಉತ್ತರಪ್ರದೇಶದ ಮತದಾರರ ಮನಸ್ಸಿನಲ್ಲಿ ಏನಿದೆ ಎನ್ನುವುದು ಸುಲಭದಲ್ಲಿ ಅರ್ಥವಾಗುವಂತಹದ್ದಲ್ಲ.