Tuesday, November 10, 2015

ಮಡಿಕೇರಿ ಗಲಭೆ

ಒಮ್ಮೊಮ್ಮೆ ಸುರಂಗದ ಕೊನೆಯಲ್ಲಿ ಬೆಳಕು ಕಾಣಿಸುತ್ತದೆ. ಮಡಿಕೇರಿ ಗಲಭೆ ಬಗ್ಗೆ ಟಿವಿ9 ಮತ್ತು ಸುವರ್ಣ ಟಿವಿ ಚಾನೆಲ್ ಗಳು
ವರದಿಯಲ್ಲಿ ತೋರಿದ ಸಂಯಮ ಮತ್ತು ಜನಪದ ಕಾಳಜಿಯಿಂದ ಮಾಡಿದ ಮನವಿ ಅಭಿನಂದನೆಗೆ ಮತ್ತು ಅನುಕರಣೆಗೆ ಅರ್ಹವಾದುದು.

Monday, November 9, 2015

ನಾವೂ ಖುಷಿಯಾಗಿರೋಣ

ನನಗೆ ಬಹಳ ಖುಷಿಯಾದಾಗ ಸಿಹಿ ತಿನ್ನುವುದಿಲ್ಲ, ಹೊಟ್ಟೆ ತುಂಬಿ ತೇಗು ಬರುವಷ್ಟು ಮೀನು ತಿನ್ನುತ್ತೇನೆ. ಈಗಷ್ಟೇ ಒಂದು ಕಿಲೋ ಕಾಣೆ ಮೀನು ತೆಗೆದುಕೊಂಡು ಬಂದೆ. ಬಾಯಲ್ಲಿ ನೀರು. ಇತ್ತೀಚೆಗೆ ಇಷ್ಟೊಂದು ಖುಷಿ ಎಂದೂ ಆಗಿರಲಿಲ್ಲ. ಈ ಖುಷಿ ಎಲ್ಲರದ್ದಾಗಲಿ. ಬಿಹಾರದ ಜನರಷ್ಟೇ ಯಾಕೆ ಖುಷಿಪಡಬೇಕು, ನಾವೂ ಖುಷಿಯಾಗಿರೋಣ.

Sunday, November 8, 2015

ನಿತೀಶ್‌ಕುಮಾರ್ ಸೋತರೆ ಬಿಹಾರ ಸೋತಂತೆ

(ಇದು 2010ರ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ (ನವಂಬರ್ 8, 2010) 'ಅನಾವರಣ' ಅಂಕಣ ಬರಹ. ಬಹುಷ: ಈ ಚುನಾವಣೆಯ ಪೂರ್ವದಲ್ಲಿ ಇದನ್ನು ಬರೆದಿದ್ದರೆ ನಿತೀಶ್ ಸೋತರೆ ಭಾರತ ಸೋತಂತೆ ಎಂದು ಬರೆಯುತ್ತಿದ್ದೆನೋ ಏನೋ)
ನಿತೀಶ್‌ಕುಮಾರ್ ಸೋತರೆ ಬಿಹಾರ ಸೋತಂತೆ
‘ಬಿಹಾರಕ್ಕೆ ಪ್ರಕೃತಿ ಎಲ್ಲವನ್ನೂ ಕೊಟ್ಟಿದೆ, ಫಲವತ್ತಾದ ಭೂಮಿ, ಹಿಮಾಲಯದಲ್ಲಿ ಹುಟ್ಟುವ ಎಲ್ಲ ನದಿಗಳ ನೀರು, ಸಮೃದ್ಧ ಖನಿಜ ಸಂಪತ್ತು ಮತ್ತು ಶ್ರಮಜೀವಿಗಳಾದ ಜನ. ಜತೆಗೆ ಬುದ್ಧ, ಮಹಾವೀರ, ಅಶೋಕ, ಚಂದ್ರಗುಪ್ತ ಮೌರ್ಯ, ಚಾಣಕ್ಯ, ಆರ್ಯಭಟ್ಟ, ಗುರುಗೋವಿಂದ ಸಿಂಗ್, ಶೇರ್ ಷಹಾ ಮೊದಲಾದ ಮಣ್ಣಿನ ಮಕ್ಕಳನ್ನೂ ಕೊಟ್ಟಿದೆ.
ಇವುಗಳೆಲ್ಲದರ ಜತೆಗೆ ಒಬ್ಬ ದೇವರಾಜ ಅರಸು ಅವರಂತಹ ನಾಯಕನನ್ನೂ ಕೊಟ್ಟಿದ್ದರೆ ಬಿಹಾರ ಖಂಡಿತ ಈಗಿನಂತೆ ಇರುತ್ತಿರಲಿಲ್ಲವೇನೋ...’ ಎಂದು ಆರು ವರ್ಷಗಳ ಹಿಂದೆ ಲೋಕಸಭಾ ಚುನಾವಣಾ ಸಮೀಕ್ಷೆಗಾಗಿ ಬಿಹಾರಕ್ಕೆ ಹೋಗಿ ಬಂದ ನಂತರ ಬರೆದಿದ್ದೆ. ಅದರ ನಂತರ ಎರಡು ಬಾರಿ ಲಾಲು ಪ್ರಸಾದ್ ಅವರ ಬಿಹಾರಕ್ಕೆ ಸುತ್ತುಹೊಡೆದಾಗಲೂ ಇದೇ ಅಭಿಪ್ರಾಯದ ನಿಟ್ಟುಸಿರು ನನ್ನಿಂದ ಹೊರಬಿದ್ದಿತ್ತು. ನಿತೀಶ್‌ಕುಮಾರ್ ಕಾಲದ ಈಗಿನ ಬಿಹಾರ ನಾನು ನೋಡಿಲ್ಲ, ಅಲ್ಲಿ ಇಲ್ಲಿ ಕೇಳಿದ್ದೇನೆ, ಒಂದಷ್ಟು ಓದಿದ್ದೇನೆ. ಬಿಹಾರಕ್ಕೆ ಕೊನೆಗೂ ಒಬ್ಬ ದೇವರಾಜ ಅರಸು ಸಿಕ್ಕಿದ್ದಾರೆ ಎಂದು ಹೇಳಲು ಆ ರಾಜ್ಯದ ಬಗ್ಗೆ ಕೇಳಿದ್ದು ಓದಿದ್ದು ಸಾಕೇನೋ? ಈ ಚುನಾವಣೆಯಲ್ಲಿ ನಿತೀಶ್ ಕುಮಾರ್ ಸೋತರೆ ಖಂಡಿತ ಬೇಸರವಾಗುತ್ತದೆ.
ಲಾಲು ಪ್ರಸಾದ್ ಗೆದ್ದುಬಿಟ್ಟರಲ್ಲಾ ಎಂಬುದಕ್ಕಲ್ಲ, ಶಾಪಗ್ರಸ್ತ ಬಿಹಾರಕ್ಕೆ ವಿಮೋಚನೆಯೇ ಇಲ್ಲದಂತಾಗುತ್ತದ್ದಲ್ಲ ಎಂಬುದಕ್ಕಾಗಿ. ಆದ್ದರಿಂದ ಬಿಹಾರದ ಜನತೆ ನಿತೀಶ್‌ಕುಮಾರ್ ಅವರನ್ನು ಸೋಲಲು ಬಿಡಬಾರದು. ಅವರು ಸೋತರೆ ಬಿಹಾರ ಸೋತಂತೆ.
ದೇವರಾಜ ಅರಸು ಅವರನ್ನು ನೆನಪು ಮಾಡಿಕೊಳ್ಳಲು ಕಾರಣ ಇದೆ. ಗಂಗಾನದಿಯ ಎರಡು ದಂಡೆಗಳಲ್ಲಿ ಹರಡಿಕೊಂಡಿರುವ ಬಿಹಾರದ ಮಣ್ಣು ಪಂಜಾಬ್, ಹರಿಯಾಣಗಳಿಗಿಂತಲೂ ಫಲವತ್ತಾದುದು. ಎರಡು ಅವಧಿಗಳಲ್ಲಿ ಬರುವ ಮಳೆ ವರ್ಷಕ್ಕೆ ಎರಡು ಬೆಳೆಗಳಿಗೆ ನೀರುಣಿಸುತ್ತದೆ. ದೇಶದ ಕೃಷಿಯೋಗ್ಯ ಭೂಮಿಯ ಪ್ರಮಾಣ ಶೇ 47, ಆದರೆ ಬಿಹಾರದಲ್ಲಿ ಇದು ಶೇ 61.
ಅತಿವೃಷ್ಟಿ ಮತ್ತು ಅನಾವೃಷ್ಟಿಯ ಹೊರತಾಗಿಯೂ ಅಲ್ಲಿನ ಭೂಮಿ ಕೈಕೊಟ್ಟಿದ್ದು ಕಡಿಮೆ. ಗಯಾ, ಜೆಹನಾಬಾದ್, ಬೆಟಿಯಾ, ದರ್ಬಾಂಗ...ಬಿಹಾರದ ಯಾವ ಮೂಲೆಗೂ ಹೋಗಿ, ತಟ್ಟನೆ ನಮ್ಮ ಗಮನ ಸೆಳೆಯುವುದು- ಕಣ್ಣು ಹಾಯಿಸಿದಷ್ಟು ದೂರ ಹಚ್ಚಹಸಿರಿನ ಚಾದರ ಹೊದ್ದುಕೊಂಡಂತಹ ಗದ್ದೆಗಳು. ಈ ವಿಸ್ಮಯದ ಜತೆಯಲ್ಲಿಯೇ ‘ಹೀಗಿದ್ದರೂ ಬಿಹಾರದಲ್ಲಿ ಇಷ್ಟೊಂದು ದಾರಿದ್ರ್ಯ ಯಾಕಿದೆ?’ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದಕ್ಕೂ ಉತ್ತರ ಇದೆ.
ಆ ರಾಜ್ಯದ ಶೇಕಡಾ 77ರಷ್ಟು ಕುಟುಂಬಗಳ ಸರಾಸರಿ ಭೂ ಹಿಡುವಳಿ ಒಂದು ಹೆಕ್ಟೇರ್ ಮಾತ್ರ. ಶೇಕಡಾ 19ರಷ್ಟು ಕುಟುಂಬಗಳು 1.4 ಹೆಕ್ಟೇರ್‌ನಷ್ಟು ಭೂ ಹಿಡುವಳಿ ಹೊಂದಿವೆ. ಶೇಕಡಾ ಒಂದರಷ್ಟು ಕುಟುಂಬಗಳು ನಾಲ್ಕು ಹೆಕ್ಟೇರ್‌ನಿಂದ ಸಾವಿರಾರು ಹೆಕ್ಟೇರ್‌ಗಳಷ್ಟು ಭೂಮಿ ಹೊಂದಿವೆ. ಎಷ್ಟೋ ಜಮೀನ್ದಾರರು ಮನುಷ್ಯರ ಹೆಸರಲ್ಲಿ ಮಾತ್ರ ಅಲ್ಲ, ಮನೆಯಲ್ಲಿರುವ ದನ, ಆಡು, ನಾಯಿಗಳ ಹೆಸರಲ್ಲಿ ಭೂಮಿ ಕೈಯಲ್ಲಿ ಇಟ್ಟುಕೊಂಡಿರುವ ದಾಖಲೆಗಳನ್ನು ಚಂಪಾರಣ್‌ದಲ್ಲಿ ಭೇಟಿಯಾಗಿದ್ದ ಸಿಪಿಐ (ಎಂಎಲ್) ಕಾರ್ಯಕರ್ತನೊಬ್ಬ ನನಗೆ ನೀಡಿದ್ದ. ಲಾಲುಪ್ರಸಾದ್ ಮುಖ್ಯಮಂತ್ರಿಯಾಗಿ ವಿಧಾನಸಭೆಯಲ್ಲಿ ಮಾಡಿದ ಮೊದಲ ಭಾಷಣದಲ್ಲಿ ಕಾನೂನಿನ ಕಣ್ಣಿಗೆ ಮಣ್ಣೆರೆಚಿ ಸಾವಿರಾರು ಎಕರೆ ಭೂಮಿಯನ್ನು ವಶದಲ್ಲಿಟ್ಟುಕೊಂಡಿರುವ 377 ಭೂಮಾಲೀಕರ ಹೆಸರನ್ನು ಓದಿ ಹೇಳಿದ್ದರಂತೆ. ಪಶ್ಚಿಮಬಂಗಾಳದ ಮಾದರಿಯಲ್ಲಿ ‘ಬರ್ಗಾ ಕಾರ್ಯಾಚರಣೆ’ ಜಾರಿಗೆ ತಂದು ಅವರೆಲ್ಲರ ಹುಟ್ಟಡಗಿಸಿಬಿಡುತ್ತೇನೆ ಎಂದು ಅಬ್ಬರಿಸಿದ್ದರಂತೆ. ಅವರ ಎಲ್ಲ ಭರವಸೆಗಳಂತೆ ಅದು ಕೂಡಾ ಗಂಗಾ ನದಿಯಲ್ಲಿ ಕೊಚ್ಚಿಹೋಗಿತ್ತು.
ಬಿಹಾರದ ಇನ್ನೊಂದು ಕಟುವಾಸ್ತವವನ್ನು ನನ್ನೆದುರು ಅನಾವರಣಗೊಳಿಸಿದ್ದು ಮಹಾಬೀರ್ ರಾಯ್ ಎಂಬ ರಾಘೋಪುರದ ಒಬ್ಬ ಬಡರೈತ. ‘ಕಾಯ್ ಕಾ ವಿಕಾಸ್, ಸಮ್ಮಾನ್ ಕೇ ಬಿನಾ?’ (ಗೌರವ ಇಲ್ಲದ ಅಭಿವೃದ್ಧಿ ಯಾಕೆ?) ಎಂದು ಹೇಳಿ ನನ್ನನ್ನು ಕೆಕ್ಕರಿಸಿ ನೋಡಿದ್ದ ಸುಮಾರು 70 ವರ್ಷದ ಮಹಾಬೀರ್ ರಾಯ್‌ನ ಚಿತ್ರ ಇನ್ನೂ ನನ್ನ ಕಣ್ಣಮುಂದಿದೆ. ಬಿಜೆಪಿ ಮೊದಲ ಬಾರಿ ‘ಹಿಂದುತ್ವ’ ಅಜೆಂಡಾ ಮುಚ್ಚಿಟ್ಟು ಅಭಿವೃದ್ಧಿಯ ಮಂತ್ರ ಪಠಿಸುತ್ತಿದ್ದ ಕಾಲ ಅದು. ಇಡೀ ದೇಶ ಎನ್‌ಡಿಎ ನಡೆಸುತ್ತಿದ್ದ ‘ಇಂಡಿಯಾ ಶೈನಿಂಗ್’ (ಭಾರತ ಪ್ರಕಾಶಿಸುತ್ತಿದೆ!) ಪ್ರಚಾರದಲ್ಲಿ ಮುಳುಗಿಹೋಗಿತ್ತು. ಆಗಿನ ಮುಖ್ಯಮಂತ್ರಿ ರಾಬ್ಡಿದೇವಿ ಅವರ ವಿಧಾನಸಭಾ ಕ್ಷೇತ್ರವಾದ ರಾಘೋಪುರ್‌ನಲ್ಲಿ ಸಿಕ್ಕಿದ್ದ ಮಹಾಬೀರ್ ರಾಯ್‌ಗೆ ಇದನ್ನೆಲ್ಲ ವಿವರಿಸಿ ಬಿಹಾರದಲ್ಲಿ ಯಾರೂ ಅಭಿವೃದ್ಧಿಯ ಬಗ್ಗೆ ಮಾತನಾಡುವುದೇ ಇಲ್ಲವಲ್ಲಾ ಎಂದು ಹೇಳಿದಾಗ ಆತ ಸಿಟ್ಟುಮಾಡಿಕೊಂಡಿದ್ದ.
ಆತನ ಸಿಟ್ಟಿನ ಪ್ರತಿಕ್ರಿಯೆಯಲ್ಲಿಯೇ ಲಾಲು ಪ್ರಸಾದ್ ರಾಜಕೀಯ ಯಶಸ್ಸಿನ ಗುಟ್ಟು ಇತ್ತು. ಲಾಲು ಪ್ರಸಾದ್ ಅಧಿಕಾರಕ್ಕೆ ಬಂದದ್ದೇ ‘ವಿಕಾಸ್ ನಹೀಂ, ಪಹಲೇ ಸಮ್ಮಾನ್’ (ಮೊದಲು ಗೌರವ, ನಂತರ ಅಭಿವೃದ್ಧಿ) ಎನ್ನುವ ವಿಲಕ್ಷಣ ಘೋಷಣೆಯ ಮೂಲಕ.
ಬಿಹಾರದ ರಾಜಕೀಯ ಸಂತೆಯಲ್ಲಿ ಮಾತ್ರ ಮಾರಾಟ ಮಾಡಲು ಸಾಧ್ಯ ಇರುವ ಈ ಘೋಷಣೆಯ ಪರಿಣಾಮವನ್ನು ತಿಳಿದುಕೊಳ್ಳಬೇಕಾದರೆ ಬಿಹಾರದ ಹಳ್ಳಿಗಳಲ್ಲಿ ಸುತ್ತಾಡಬೇಕು. ಅಲ್ಲಿನ ಸಮಾಜವನ್ನು ಅಡ್ಡ-ಉದ್ದ ಸೀಳಿ ಹಾಕಿರುವ ಜಾತಿಗಳ ನಗ್ನನರ್ತನದ ಘೋರವೈಭವವನ್ನು ಕಿವಿಯಾರೆ ಕೇಳಬೇಕು. ಭೂಮಾಲೀಕರ ಮುಂದೆ ತಗ್ಗಿಸದ ತಲೆ ಮರುಕ್ಷಣದಲ್ಲಿ ಭುಜದ ಮೇಲೆ ಇರುತ್ತಿರಲಿಲ್ಲವಂತೆ. ಇದನ್ನು ಅಲ್ಲಿನ ಹಳ್ಳಿಗಳ ಜನ ‘ಚಾವು ಇಂಚ್ ಛೋಟಾ ಹೋಗಯಾ’ ಎನ್ನುತ್ತಿದ್ದರಂತೆ ನಿರ್ವಿಕಾರವಾಗಿ. ರಾಜ್ಯದ ಜನಸಂಖ್ಯೆಯಲ್ಲಿ ಮುಕ್ಕಾಲು ಪಾಲು ಜನ ತಲೆ ಉಳಿಸಿಕೊಳ್ಳಬೇಕಾದರೆ ತಲೆತಗ್ಗಿಸಿಯೇ ನಡೆಯಬೇಕಾದ ಸ್ಥಿತಿ ಇತ್ತು. ಲಾಲುಪ್ರಸಾದ್ ಪ್ರವೇಶವಾಗಿದ್ದೇ ಈ ಪರಿಸ್ಥಿತಿಯಲ್ಲಿ. ಆದರೆ ಅವರು ಜಾತಿ ತಾರತಮ್ಯ ನಿವಾರಣೆಗೆ ರಚನಾತ್ಮಕವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿಲ್ಲ, ತನ್ನ ರಾಜಕೀಯ ಉಳಿವಿಗಾಗಿ ಜಾತಿಕಲಹವನ್ನು ಬಳಸಿಕೊಂಡರು.
ಕೆಟ್ಟು ನಾರುತ್ತಿದ್ದ ವ್ಯವಸ್ಥೆಗೆ ಲಾಲುಪ್ರಸಾದ್ ‘ಪ್ರತಿಕ್ರಿಯೆ’ ರೂಪದಲ್ಲಿ ಪ್ರವೇಶ ಮಾಡಿದರೇ ಹೊರತು ‘ಪರಿಹಾರ’ ಆಗಲಿಲ್ಲ. ಮಂತ್ರದಂಡ ಎನ್ನುವುದು ಅಧಿಕಾರ ಕೈಯಲ್ಲಿ ಹಿಡಿದುಕೊಂಡ ಲಾಲು ಕೈಯಲ್ಲಿ ಇರಲಿಲ್ಲ, ನಾಲಿಗೆಯಲ್ಲಿ ಇತ್ತು. ಹುಂಬ ಜನ ತಲೆತೂಗುವಂತೆ ಮಾಡಬಲ್ಲ ವಿಚಿತ್ರ ಹಾವ ಭಾವಗಳಿಂದ ಕೂಡಿದ ಭಾಷಣದ ಮೂಲಕವೇ ಬಿಹಾರದ ಜನತೆಯನ್ನು ಲಾಲು ಬೆಳಿಗ್ಗೆ ಎಬ್ಬಿಸಿ, ಮಧ್ಯಾಹ್ನ ಊಟ ಮಾಡಿಸಿ ರಾತ್ರಿ ಮಲಗಿಸಿಬಿಡುತ್ತಿದ್ದರು. ಆದ್ದರಿಂದ ಒಂದು ದಿನ ಜನ ನಿದ್ದೆಯಿಂದ ಎದ್ದು ‘ಗೌರವ ಸಿಕ್ಕಿತು ನಿಜ, ಮುಂದೇನು?’ ಎಂದು ಪ್ರಶ್ನಿಸಿದಾಗ ಲಾಲು ಬಳಿ ಉತ್ತರ ಇರಲಿಲ್ಲ. ಇದು ಲಾಲು ದುರಂತ, ಬಿಹಾರದ್ದು ಕೂಡಾ.
ನಿರ್ದಯ ಊಳಿಗಮಾನ್ಯ ವ್ಯವಸ್ಥೆಗೆ ಕಾರಣವಾದ ಅಸಮಾನ ಭೂ ಹಿಡುವಳಿ ಮತ್ತು ನಿಶ್ಚಲವಾದ ಜಾತಿ ವ್ಯವಸ್ಥೆ ಹುಟ್ಟುಹಾಕಿರುವ ಅಸಮಾನತೆಯೇ ಬಿಹಾರಕ್ಕೆ ತಗಲಿರುವ ರೋಗಗಳು (ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಕಣ್ಣಿಗೆ ಕರ್ನಾಟಕದಲ್ಲಿ ಕಂಡದ್ದು ಕೂಡಾ ಇದೇ ರೋಗಗಳಿರಬೇಕಲ್ಲವೇ?). ಎಂಜಿನಿಯರಿಂಗ್ ಶಿಕ್ಷಣ ಪಡೆದಿರುವ ನಿತೀಶ್‌ಕುಮಾರ್ ವೈದ್ಯರ ಮಗ. ಬಿಹಾರಕ್ಕೆ ಅಗತ್ಯವಾಗಿದ್ದ ವೈದ್ಯನ ಚಿಕಿತ್ಸಕ ಗುಣ ಮತ್ತು ಎಂಜಿನಿಯರ್ ನಿರ್ಮಾಣ ಕೌಶಲದೊಡನೆ ಆಡಳಿತ ಸೂತ್ರ ಹಿಡಿದ ಅವರು ಇನ್ನೂ ಯಶಸ್ಸಿನ ಗುರಿ ಮುಟ್ಟದೆ ಇರಬಹುದು, ಆದರೆ ಅವರು ನಡೆಯುತ್ತಿರುವ ದಾರಿ ಸರಿಯಾಗಿದೆ.
ಅಧಿಕಾರಕ್ಕೆ ಬಂದ ಮೂರೇ ವರ್ಷಗಳಲ್ಲಿ ಭೂಮಿಯ ಸಮಾನ ಹಂಚಿಕೆಗಾಗಿ ‘ಭೂ ಸುಧಾರಣಾ ಆಯೋಗ’ ರಚಿಸಿರುವುದು ಅವರ ದಿಟ್ಟ ನಿರ್ಧಾರಗಳಲ್ಲೊಂದು. ‘ಬರ್ಗಾ ಕಾರ್ಯಾಚರಣೆ’ ಮಾದರಿಯಲ್ಲಿ ಭೂ ಸುಧಾರಣೆ ಜಾರಿಗೊಳಿಸುವುದು ಅವರ ಉದ್ದೇಶ. ಆದರೆ ಅವರ ನಿರೀಕ್ಷೆಯ ಗತಿಯಲ್ಲಿ ಈ ಕೆಲಸ ನಡೆಯುತ್ತಿಲ್ಲ ಎನ್ನುವುದು ನಿಜ. ಇದಕ್ಕೆ ಮುಖ್ಯ ಕಾರಣ ಉಳಿದೆಲ್ಲ ರಾಜ್ಯಗಳಿಗಿಂತಲೂ ಹೆಚ್ಚು ಸಂಘರ್ಷಮಯವಾದ ಜಾತಿ ರಾಜಕೀಯದ ಸುಳಿಯಲ್ಲಿ ಸಿಕ್ಕಿ ನರಳಾಡುತ್ತಿರುವ ಬಿಹಾರದಲ್ಲಿ ನಿತೀಶ್‌ಗೆ ಮತಹಾಕಿದವರಲ್ಲಿ ಹೆಚ್ಚಿನವರು ‘ಭೂಮಿ ನುಂಗಣ್ಣ’ರೇ ಆಗಿರುವುದು. ಆ ರಾಜ್ಯದಿಂದ ಹೊರಬೀಳುತ್ತಿರುವ ಸುದ್ದಿಗಳ ಪ್ರಕಾರ ಈ ‘ಭೂಮಿ ನುಂಗಣ್ಣ’ರು ಈ ಬಾರಿ ಕಾಂಗ್ರೆಸ್ ಪರ ವಾಲುತ್ತಿದ್ದಾರಂತೆ. ಆಶ್ಚರ್ಯ ಏನಿಲ್ಲ, ಸುಮಾರು 32 ವರ್ಷಗಳ ಕಾಲ ಆ ರಾಜ್ಯವನ್ನು ಆಳಿದ ಕಾಂಗ್ರೆಸ್ ಪಕ್ಷಕ್ಕೆ ಈ ಜಮೀನ್ದಾರ ವರ್ಗ ದೊಡ್ಡ ಮತಬ್ಯಾಂಕ್ ಆಗಿತ್ತು. ಇದರಿಂದಾಗಿಯೇ ನಿತೀಶ್‌ಕುಮಾರ್ ಅವರಿಗೆ ಮತ್ತು ಬಿಹಾರಕ್ಕೆ ಈ ಚುನಾವಣೆ ನಿರ್ಣಾಯಕ.
ಬಿಹಾರದ ಜಾತಿ ರಾಜಕಾರಣವನ್ನು ಲಾಲುಪ್ರಸಾದ್ ಅವರಷ್ಟೇ ಚೆನ್ನಾಗಿ ಬಲ್ಲವರು ನಿತೀಶ್‌ಕುಮಾರ್. ಒಂದು ಕಾಲದಲ್ಲಿ ಹಿಂದುಳಿದ ಜಾತಿಗಳಲ್ಲಿ ಬಲಾಢ್ಯವಾಗಿರುವ ಯಾದವ್-ಕುರ್ಮಿ-ಕೊಯಿರಿಗಳ ತ್ರಿವೇಣಿ ಸಂಘ ಕಟ್ಟಿಕೊಂಡೇ ಇಬ್ಬರೂ ಹಿಂದುಳಿದ ಜಾತಿಗಳ ಚಳವಳಿ ಪ್ರಾರಂಭಿಸಿದವರು. ಆದರೆ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 13ರಷ್ಟಿರುವ ಯಾದವರು ಲಾಲುಪ್ರಸಾದ್ ಅವರಲ್ಲಿ ನಾಯಕನನ್ನು ಕಂಡುಕೊಳ್ಳಲು ಪ್ರಾರಂಭಿಸಿದ ನಂತರ ನಿತೀಶ್ ಹಿಂದೆ ಬಿದ್ದರು. ಅಡ್ವಾಣಿ ರಥಯಾತ್ರೆಯನ್ನು ತಡೆಯುವ ಮೂಲಕ ರಾಜ್ಯದಲ್ಲಿ ಶೇಕಡಾ 15ರಷ್ಟಿರುವ ಮುಸ್ಲಿಮರೂ ಲಾಲು ನಾಯಕತ್ವವನ್ನು ಒಪ್ಪಿಕೊಂಡರು. ಈ ಎಂ-ವೈ ಕೂಟದ ಬೆಂಬಲವೇ ಅವರ ಪಕ್ಷ ಹದಿನೈದು ವರ್ಷಗಳ ಕಾಲ ಬಿಹಾರದ ಮೇಲೆ ಅಧಿಕಾರ ಚಲಾಯಿಸುವಂತೆ ಮಾಡಿದ್ದು. ಈ ಹಿನ್ನಡೆಯಿಂದ ಸುಧಾರಿಸಿಕೊಳ್ಳಲು ನಿತೀಶ್‌ಕುಮಾರ್ ಅವರಿಗೆ ಸುಮಾರು 20 ವರ್ಷಗಳು ಬೇಕಾಯಿತು. ಕಳೆದ ಚುನಾವಣೆಯಲ್ಲಿ ಅವರ ಪ್ರಯತ್ನಕ್ಕೆ ಸ್ವಲ್ಪ ಯಶಸ್ಸು ಸಿಕ್ಕಿತ್ತು.
ಬಿಹಾರದಲ್ಲಿ ತಲಾ ಶೇಕಡಾ ಒಂದಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿರುವ ತೇಲಿ, ಮಲ್ಲಾ, ಕಾನು, ಧನುಕ್, ಭೀಂಡ್ ಮೊದಲಾದ ನೂರಾರು ಅತಿ ಹಿಂದುಳಿದ ಜಾತಿಗಳಿವೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಈ ಅತಿ ಹಿಂದುಳಿದ ಜಾತಿಗಳ ಪ್ರಮಾಣ ಸುಮಾರು ಶೇಕಡಾ 32. ಶಿಕ್ಷಣ, ಉದ್ಯೋಗ, ರಾಜಕೀಯ ಸೇರಿದಂತೆ ಯಾವ ಕ್ಷೇತ್ರದಲ್ಲಿಯೂ ಈ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಇಲ್ಲ. ಲಾಲು ಆಳ್ವಿಕೆಯಲ್ಲಿ ಪ್ರಬಲರಾದ ಯಾದವರ ಎದುರಲ್ಲಿ ಅಸುರಕ್ಷಿತ ಭಾವನೆಯಿಂದ ನರಳುತ್ತಿದ್ದ ಈ ಜಾತಿ ಜನ ಈಗ ನಿತೀಶ್‌ಕುಮಾರ್ ಅವರಲ್ಲಿ ಹೊಸ ನಾಯಕನನ್ನು ಕಾಣತೊಡಗಿದ್ದಾರೆ.
ಇದನ್ನೇ ಬಳಸಿಕೊಂಡು ನಿತೀಶ್‌ಕುಮಾರ್ ಅತಿಹಿಂದುಳಿದ ಜಾತಿಗಳಿಗೆ ವಿದ್ಯೆ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ಶೇಕಡಾ 20ರ ಮೀಸಲಾತಿ ಕಲ್ಪಿಸಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಈ ಜಾತಿಗಳಿಗೆ ಪ್ರತ್ಯೇಕ ರಾಜಕೀಯ ಮೀಸಲಾತಿ ಒದಗಿಸಿದ್ದಾರೆ. ಸಮಗ್ರ ರೂಪದ ಸಾಮಾಜಿಕ ಸುಧಾರಣೆಗೆ ಈ ಕ್ರಮ ಅಗತ್ಯ ಆಗಿತ್ತು.
ಭೂಮಿ ಮತ್ತು ಜಾತಿ ಮೂಲದ ರೋಗಗಳಿಗೆ ಔಷಧಿ ನೀಡುವುದರ ಜತೆಗೆ ನಿತೀಶ್‌ಕುಮಾರ್ ಬಿಹಾರದ ಜನತೆಗೆ ಅಭಿವೃದ್ಧಿಯ ನೋಟವೊಂದನ್ನೂ ನೀಡಿದ್ದಾರೆ. ರಾಜಧಾನಿ ಪಟ್ನಾದಲ್ಲಿ ಮಾತ್ರವಲ್ಲ, ಬೇರೆ ಪಟ್ಟಣಗಳಲ್ಲಿಯೂ ರಾತ್ರಿ ಹೊತ್ತು ಅಂಗಡಿ-ಹೋಟೆಲ್‌ಗಳು ತೆರೆದಿರುತ್ತವೆಯಂತೆ, ಅಪಹರಣ-ಕೊಲೆ-ದರೋಡೆಯ ಸುದ್ದಿಗಳು ಮೊದಲಿನಂತೆ ಪ್ರತಿನಿತ್ಯ ಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟವಾಗುತ್ತಿಲ್ಲವಂತೆ. ಹೇಮಮಾಲಿನಿಯ ಕೆನ್ನೆಯಷ್ಟು ನುಣುಪಾದ ರಸ್ತೆಗಳು ಇಲ್ಲದಿದ್ದರೂ ಕನಿಷ್ಠ ಓಂಪುರಿಯ ಕೆನ್ನೆಯಂತಹ ರಸ್ತೆಗಳಾದರೂ ಇದೆಯಂತೆ.
ಶಾಲೆಗಳಲ್ಲಿ ಶಿಕ್ಷಕರು ಇರುವುದರಿಂದ ಮಕ್ಕಳು ಶಾಲೆಗೆ ಹೋಗುತ್ತಿದ್ದಾರಂತೆ. ಭ್ರಷ್ಟ ನೌಕರಷಾಹಿಗೆ ಲಗಾಮು ಬಿದ್ದಿದೆಯಂತೆ. ಬಿಹಾರದ ಹೆಸರೆತ್ತಿದರೆ ಬೆಚ್ಚಿಬೀಳುತ್ತಿದ್ದ ಬಂಡವಾಳ ಹೂಡಿಕೆದಾರರು ಹಣ ತಂದು ಸುರಿಯುತ್ತಿದ್ದಾರಂತೆ..... ನಿತೀಶ್‌ಕುಮಾರ್ ಅವರ ಬಿಹಾರವನ್ನು ನೋಡಬೇಕೆಂದು ಅನಿಸುತ್ತಿದೆ.
ಐ ಮಿಸ್ ಬಿಹಾರ್.