Monday, November 21, 2011

ನ್ಯಾ. ಖಟ್ಜು ಹೇಳಿದ್ದು ಮತ್ತು ಹೇಳದೆ ಉಳಿದದ್ದು...

ಭ್ರಷ್ಟರು, ಪತ್ನಿ ಪೀಡಕರು, ಎನ್‌ಕೌಂಟರ್ ಮಾಡುವ ಪೊಲೀಸರು, ಮರ್ಯಾದಾ ಹತ್ಯೆಕೋರರು -ಎಲ್ಲರನ್ನೂ `ಸಮೀಪದ ಲೈಟ್‌ಕಂಬ~ಕ್ಕೆ ನೇತುಹಾಕಿ ಗಲ್ಲುಶಿಕ್ಷೆ ನೀಡಬೇಕೆಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದ ದಿನಗಳಲ್ಲಿ ಹೇಳಿ ವಿವಾದ ಸೃಷ್ಟಿಸಿದ್ದವರು ಮಾರ್ಕಾಂಡೇಯ ಖಟ್ಜು.

ಪತ್ರಕರ್ತರ ಬಗ್ಗೆ ಯಾಕೋ ಅವರು ಸ್ವಲ್ಪ ಕರುಣೆ ತೋರಿಸಿದ್ದಾರೆ, `ಅಜ್ಞಾನಿ~ ಮತ್ತು `ಸಮಾಜದ್ರೋಹಿ~ ಪತ್ರಕರ್ತರನ್ನು ಗಲ್ಲಿಗೇರಿಸಬೇಕೆಂದು ಹೇಳಲಿಲ್ಲ, `ಕೆಟ್ಟ~ ಪತ್ರಕರ್ತರು ಬದುಕಿಕೊಂಡಿದ್ದಾರೆ. ಒಂದು ಟಿವಿ ಚಾನೆಲ್‌ಗೆ ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷರಾಗಿ ನ್ಯಾ.ಖಟ್ಜು ನೀಡಿದ್ದ ಸಂದರ್ಶನದಲ್ಲಿ ಹೇಳಿರುವ ಮಾತುಗಳು ಪತ್ರಕರ್ತರನ್ನು ಕೆರಳಿಸಿವೆ.
ಕೈಯಲ್ಲಿದ್ದ ಲೇಖನಿ ನಿಜಕ್ಕೂ ಖಡ್ಗವೇ ಆಗಿದ್ದರೆ ಖಟ್ಜು ಅವರ ತಲೆ ಇಷ್ಟೊತ್ತಿಗೆ ಹೋಳುಹೋಳಾಗುತ್ತಿತ್ತು. ಅವರೂ ಬದುಕಿಕೊಂಡಿದ್ದಾರೆ. ನ್ಯಾ.ಖಟ್ಜು ಬಗ್ಗೆ ಪತ್ರಕರ್ತರಿಗೆ ಇಷ್ಟೊಂದು ಕೋಪ ಯಾಕೆ? ಸುಳ್ಳು ಹೇಳಿದ್ದಕ್ಕೋ, ಅಪ್ರಿಯವಾದ ಸತ್ಯ ಹೇಳಿದ್ದಕ್ಕೋ?
ನೀವು ಸಮಾಜದಲ್ಲಿ ಅತಿ ಹೆಚ್ಚು ದ್ವೇಷಿಸುವವರು ಯಾರು ಎಂದು ಪ್ರಶ್ನಿಸಿ ಅಮೆರಿಕದಲ್ಲಿ ಇತ್ತೀಚೆಗೆ ಒಂದು ಸಮೀಕ್ಷೆ ನಡೆದಿತ್ತು. ಜನತೆ ದ್ವೇಷಿಸುವ ವ್ಯಕ್ತಿಗಳ ಮೊದಲ ಸಾಲಲ್ಲಿ ರಾಜಕಾರಣಿಗಳಿದ್ದರು, ಎರಡನೇ ಸಾಲಿನಲ್ಲಿ ಪತ್ರಕರ್ತರಿದ್ದರು (ಅತ್ಯಂತ ಪ್ರೀತಿಸುವವರ ಮೊದಲ ಸಾಲಿನಲ್ಲಿ ದಾದಿಯರಿದ್ದರು).

ಭಾರತವೂ ಸೇರಿದಂತೆ ಯಾವ ದೇಶದಲ್ಲಿ ಇಂತಹ ಸಮೀಕ್ಷೆ ನಡೆಸಿದರೂ ಹೆಚ್ಚುಕಡಿಮೆ ಇದೇ ಮಾದರಿಯ ಫಲಿತಾಂಶ ಹೊರಹೊಮ್ಮಬಹುದು. ನ್ಯಾ.ಖಟ್ಜು ಹೇಳಿಕೆ ಬಗ್ಗೆ ನಮ್ಮಲ್ಲಿಯೇ ಸಮೀಕ್ಷೆ ನಡೆದರೆ ಅವರ ಪರವಾಗಿ ಮತ ಚಲಾಯಿಸುವವರೇ ಹೆಚ್ಚಿನ ಸಂಖ್ಯೆಯಲ್ಲಿರಬಹುದೇನೋ?

ಆದ್ದರಿಂದ ನ್ಯಾ.ಖಟ್ಜು ಅವರ ಕಟುಮಾತುಗಳು ಪತ್ರಕರ್ತರ ಆತ್ಮಾವಲೋಕನಕ್ಕೆ ಕಾರಣವಾಗಬೇಕಿತ್ತು, ಆದರೆ ಅವರು ಪ್ರತೀಕಾರಕ್ಕೆ ಹೊರಟಿದ್ದಾರೆ. ಪತ್ರಿಕಾ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಅವರನ್ನು ಕಿತ್ತುಹಾಕಬೇಕೆಂಬ ಕೂಗು ಕೇಳತೊಡಗಿದೆ.
ನ್ಯಾ.ಖಟ್ಜು ಅವರು ಬಿಟ್ಟ ಬಾಣ ಗುರಿತಪ್ಪಲು ವೈಯಕ್ತಿಕವಾಗಿ ಅವರೂ ಕಾರಣ. ಆಡುವ ಮಾತುಗಳಲ್ಲಿ ಎಷ್ಟೇ ಸತ್ಯ-ಪ್ರಾಮಾಣಿಕತೆಗಳಿರಲಿ, ಹೇಳುವ ರೀತಿ ಸರಿ ಇಲ್ಲದೆ ಇದ್ದರೆ ಮಾತು ಸೋತುಹೋಗುತ್ತದೆ, ಅತಿರೇಕಕ್ಕೆ ಹೋದರೆ ಬಾಯಿಬಡುಕತನವಾಗುತ್ತದೆ.
ಕೇಂದ್ರದ ಮಾಜಿ ಕಾನೂನು ಸಚಿವರ ಮೊಮ್ಮಗ ಮತ್ತು ಅಲಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯ ಮಗನಾದ ನ್ಯಾ.ಖಟ್ಜು ಅವರಂತಹ `ಬುದ್ಧಿಜೀವಿ ನ್ಯಾಯಮೂರ್ತಿ~ಗಳನ್ನು ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಕಂಡಿಲ್ಲ.

ಬಾಯಿಬಿಟ್ಟರೆ ಮಿರ್ಜಾ ಗಾಲಿಬ್, ಫಯಾಜ್ ಅಹ್ಮದ್ ಫಯಾಜ್ ಅವರಂತಹ ಕವಿಗಳ ಪದ್ಯಗಳನ್ನು ನಿರರ್ಗಳವಾಗಿ ಉದಹರಿಸುವ ಖಟ್ಜು ಅವರಿಗೆ  ಮಾತಿನ ಮೇಲೆ ಮಾತ್ರ ಲಗಾಮಿಲ್ಲ.

ಅದೇ ಅವರ ದೌರ್ಬಲ್ಯ.  ಸುಪ್ರೀಂ ಕೋರ್ಟ್‌ನಲ್ಲಿ ಅವರು ನಡೆಸಿರುವ ಕೆಲವು ಪ್ರಕರಣಗಳ ವಿಚಾರಣೆಗಳ ಸಂದರ್ಭದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ನಾನು ಕಿವಿಯಾರೆ ಕೇಳಿ ಬೆಚ್ಚಿ ಬಿದ್ದಿದ್ದೇನೆ.

ಕೆಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟೀಕರಣವನ್ನೂ ನೀಡಿತ್ತು. ಆದರೆ ತಮ್ಮ ಮಾತಿನ ಅತಿರೇಕತನಗಳೆಲ್ಲ ವಿಚಾರಣಾ ಸಂದರ್ಭದ ಅಭಿಪ್ರಾಯಗಳಿಗಷ್ಟೇ ಸೀಮಿತಗೊಳಿಸುತ್ತಿದ್ದ ಅವರು, ತೀರ್ಪುಗಳಲ್ಲಿ ಅದನ್ನು ವ್ಯಕ್ತಪಡಿಸುತ್ತಿರಲಿಲ್ಲ.

ಅವರ ಈ `ಜಾಣತನ~ದ ಕಾರಣದಿಂದಾಗಿಯೇ ಜನಪರ ಕಾಳಜಿಯ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಲಾಗುತ್ತಿತ್ತು, `ಪ್ರಚಾರಪ್ರಿಯರು~ ಎನ್ನುವ ಆರೋಪವನ್ನು ಅವರು ಎದುರಿಸುವಂತಾಗಿತ್ತು.
ಪತ್ರಕರ್ತರ ಅಜ್ಞಾನವಾಗಲಿ, ವರದಿಗಾರಿಕೆಯಲ್ಲಿ ಮುಖ್ಯವಾಗಿ ಕೋಮುಗಲಭೆಗಳು ನಡೆದ ಸಂದರ್ಭದಲ್ಲಿ ಅವರು ತೋರಿಸುವ ಬೇಜವಾಬ್ದಾರಿತನಗಳಾಗಲಿ, ಸಿನಿಮಾ, ಕ್ರಿಕೆಟ್, ಜ್ಯೋತಿಷಗಳಿಗೆ ನೀಡಲಾಗುತ್ತಿರುವ ಅತಿ ಪ್ರಾಮುಖ್ಯತೆಯಾಗಲಿ, ಯಾವುದೂ ಹೊಸತಲ್ಲ.
ಬಹಿರಂಗವಾಗಿ ಬೀದಿಗಳಲ್ಲಿ ಮತ್ತು ಅಂತರಂಗದಲ್ಲಿ ಮಾಧ್ಯಮಗಳ ಕಚೇರಿಯೊಳಗೆ ಈ ವಿಷಯದ ಚರ್ಚೆ ನಡೆಯುತ್ತಲೇ ಇದೆ. ನ್ಯಾ.ಖಟ್ಜು ಅವರು ಎರಡು ತಪ್ಪುಗಳನ್ನು ಮಾಡಿದ್ದಾರೆ.
ಮೊದಲನೆಯದಾಗಿ ಎಲ್ಲ ಪತ್ರಕರ್ತರನ್ನು ಒಂದೇ ಸಾಲಲ್ಲಿ ನಿಲ್ಲಿಸಿ ಕತ್ತಿಬೀಸಿದ್ದಾರೆ, ಎರಡನೆಯದಾಗಿ ಬೀಸು ಹೇಳಿಕೆಗಳ ಮೂಲಕ ಆರೋಪಗಳನ್ನಷ್ಟೇ ಮಾಡಿದ್ದಾರೆ, ಅದರ ಹಿಂದಿನ ಕಾರಣಗಳನ್ನು ಚರ್ಚಿಸಲು ಹೋಗಿಲ್ಲ.
ಯಾರೂ ಹುಟ್ಟುಜ್ಞಾನಿಯಾಗಿರುವುದಿಲ್ಲ, ಹುಟ್ಟಿನೊಂದಿಗೆ ಬರುವುದು ಅಜ್ಞಾನ ಮಾತ್ರ. ಜ್ಞಾನವನ್ನು ಸಂಪಾದನೆ ಮಾಡಬೇಕಾಗುತ್ತದೆ. ಇದನ್ನು ಪತ್ರಕರ್ತರಿಗೆ ಸೀಮಿತಗೊಳಿಸಿ ಹೇಳುವುದಾದರೆ ಪತ್ರಕರ್ತರ ಜ್ಞಾನಸಂಪಾದನೆಯ ದಾರಿಯಲ್ಲಿಯೇ ದೋಷ ಇದೆ.
ಪತ್ರಕರ್ತರನ್ನು ನೇಮಿಸಿಕೊಳ್ಳಲು ಹೊರಟ ಎಲ್ಲ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರ ಅನುಭವ ಇದು. ಇತ್ತೀಚಿನ ದಿನಗಳಲ್ಲಿ ಪ್ರವೃತ್ತಿಯಿಂದ ಪತ್ರಕರ್ತರಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಇದೊಂದು ಹೊಟ್ಟೆಪಾಡಿನ ವೃತ್ತಿ ಎಂದು ತಿಳಿದುಕೊಂಡವರೇ ಹೆಚ್ಚು.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ಕಲಿತು ಬಂದ ವಿದ್ಯಾರ್ಥಿಗಳ ಅರ್ಹತೆಯನ್ನೇ ಮಾನದಂಡವನ್ನಾಗಿಟ್ಟುಕೊಂಡು ಅವರಿಗೆ ಬೋಧನೆ ಮಾಡಿದವರ ಸಾಧನೆಯ ಮೌಲ್ಯಮಾಪನ ಮಾಡಿದರೆ ಶೇಕಡಾ 90ರಷ್ಟು ಪತ್ರಿಕೋದ್ಯಮದ ಗುರುಗಳು ಕೆಲಸ ಕಳೆದುಕೊಳ್ಳಬೇಕಾಗಬಹುದು.
ಬೋಧಿಸುವವರ ಅಜ್ಞಾನ, ನಿರಾಸಕ್ತಿ, ಪ್ರಾಯೋಗಿಕ ಅನುಭವದ ಕೊರತೆ  ಮತ್ತು ಕಾಲದ ಜತೆ ಹೆಜ್ಜೆಹಾಕಲಾಗದ ಜಿಡ್ಡುಗಟ್ಟಿದ ಮನಃಸ್ಥಿತಿ ಕೂಡಾ `ಅಜ್ಞಾನಿ~ ಪತ್ರಕರ್ತರ ಸಂತತಿಗೆ ಒಂದು ಕಾರಣ. ಇದರಲ್ಲಿ ಓಬಿರಾಯನ ಕಾಲದ ಪಠ್ಯಕ್ರಮದ ಕೊಡುಗೆಯೂ ಇದೆ. ಇದಕ್ಕೆ ಬಲಿಯಾಗುತ್ತಿರುವವರು ಮಾತ್ರ ಬಡಪಾಯಿ ವಿದ್ಯಾರ್ಥಿಗಳು.
ಮಾಧ್ಯಮ ಕ್ಷೇತ್ರದ  ಬಗ್ಗೆ ಸ್ವತಃ `ಅಜ್ಞಾನಿ~ಯಾಗಿರುವ ನ್ಯಾ.ಖಟ್ಜು ಅವರಿಗೆ ಇದೆಲ್ಲ ತಿಳಿದಿರಲಿಕ್ಕಿಲ್ಲ, ಮಾಧ್ಯಮರಂಗ ಮೈಯೊಡ್ಡುತ್ತಿರುವ ಕ್ಷಿಪ್ರಗತಿಯ ಬದಲಾವಣೆಗಳನ್ನೂ ಅವರು ಸರಿಯಾಗಿ ಗ್ರಹಿಸಿಲ್ಲ.
ಕಾನೂನು, ತತ್ವಜ್ಞಾನ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ  ಮೊದಲಾದ ಎಲ್ಲ ವಿಷಯಗಳಲ್ಲಿಯೂ ನ್ಯಾಯಮೂರ್ತಿಗಳಿಗೆ ಹೇಗೆ ಪಾಂಡಿತ್ಯ ಬೇಕಾಗುವುದಿಲ್ಲವೋ ಹಾಗೆ ಪತ್ರಕರ್ತರು ಕೂಡಾ ಆ ಎಲ್ಲ ವಿಷಯಗಳಲ್ಲಿ ಪಂಡಿತರಾಗಬೇಕಾಗಿಲ್ಲ. ಅವರ ಕೆಲಸ ಸಂಶೋಧನಾ ಪ್ರಬಂಧ ಮಂಡನೆ ಅಲ್ಲ.

ವರದಿ, ವಿಶ್ಲೇಷಣೆ, ಲೇಖನಗಳ ಬರವಣಿಗೆ ಅಷ್ಟೇ ಅವರ ಕೆಲಸ. ಅದಕ್ಕೆ ಬೇಕಾದಷ್ಟು ಜ್ಞಾನವನ್ನು ಅವರು ಹೊಂದಿದ್ದರೆ ಸಾಕು. ಅಷ್ಟೂ ಇಲ್ಲದೆ ಇದ್ದವರು ಇರುವುದೂ ನಿಜ. ಬಾಡಿಗೆ ಬರಹಗಾರರನ್ನು ಇಟ್ಟುಕೊಂಡು ಪತ್ರಕರ್ತರೆಂದು, ಅಂಕಣಕಾರರೆಂದು ಮೆರೆಯುತ್ತಿರುವ ಹಿರಿಯ ಪತ್ರಕರ್ತರೂ ನಮ್ಮಲ್ಲಿದ್ದಾರೆ.
 ಮಾಧ್ಯಮ ಸಂಸ್ಥೆಗಳಲ್ಲಿ ಕೂಡಾ `ಪ್ರತಿಭೆಗಿಂತಲೂ ಹೆಚ್ಚಾಗಿ ರಾಜಕಾರಣಿಗಳ ಜತೆಗಿನ `ಸಂಪರ್ಕ~ದ ಆಧಾರದಲ್ಲಿ ಪತ್ರಕರ್ತರನ್ನು ನೇಮಿಸಿಕೊಳ್ಳುವ ಕೆಟ್ಟಚಾಳಿಯೂ ಬೆಳೆಯುತ್ತಿದೆ. ಇದರ ಜತೆಗೆ ಒಂದಷ್ಟು ಸಕಾರಾತ್ಮಕವಾದ ಬೆಳವಣಿಗೆಗಳು ನಡೆಯುತ್ತಿವೆ.
ಮೊಳೆ ಜೋಡಿಸುವುದರಿಂದ ಹಿಡಿದು ಪತ್ರಿಕೆ ವಿತರಿಸುವವರೆಗೆ ಎಲ್ಲವನ್ನೂ ಒಬ್ಬರೇ ಮಾಡುತ್ತಿದ್ದ ಮತ್ತು ಎಲ್ಲ ವಿಷಯಗಳನ್ನು ಒಬ್ಬರೇ ವರದಿ ಮಾಡುತ್ತಿದ್ದ ಕಾಲ ಸರಿದುಹೋಗಿದೆ. ಈಗ `ಸ್ಪೆಷಲೈಷೇಶನ್~ಗಳ ಕಾಲ. ನಿರ್ದಿಷ್ಟವಾದ ವಿಭಾಗಕ್ಕೆ ಅಗತ್ಯವಾದ ವಿಷಯವನ್ನು ಅಭ್ಯಾಸ ಮಾಡಿದವರನ್ನೇ ನೇಮಿಸಲಾಗುತ್ತಿದೆ.
ಆದ್ದರಿಂದ ಸಮೂಹ ಮಾಧ್ಯಮ ಅಧ್ಯಯನ ಮಾಡಿದವರು ಮಾತ್ರವಲ್ಲ, ಸಾಹಿತ್ಯ, ಇತಿಹಾಸ, ಕಾನೂನು ಮತ್ತು ಎಂಬಿಎ ಪದವೀಧರರು, ವೈದ್ಯರು, ಎಂಜಿನಿಯರ್‌ಗಳು ಕೂಡಾ ಪತ್ರಕರ್ತರಾಗಿ ನೇಮಕಗೊಳ್ಳುತ್ತಿದ್ದಾರೆ.

ನ್ಯಾಯಾಂಗದಲ್ಲಿ ಇಂತಹ ಅವಕಾಶ ಇಲ್ಲದೆ ಇರುವುದರಿಂದ ನ್ಯಾಯಮೂರ್ತಿಗಳು ಎಲ್ಲವನ್ನೂ ಓದಿಕೊಂಡಿರಬೇಕಾಗುತ್ತದೆ. ಇದು ನ್ಯಾ.ಖಟ್ಜು ಅವರ ಅನುಭವದ ಮಿತಿ.
ನ್ಯಾ.ಖಟ್ಜು ಅವರು ನೀಡಿರುವ ಸಂದರ್ಶನವನ್ನು ಅವರು ಹೇಳಿರುವ ವಿಷಯಕ್ಕಲ್ಲ, ಹೇಳದೆ ಇರುವ ವಿಷಯಕ್ಕಾಗಿ ಆಕ್ಷೇಪಿಸಬೇಕಾಗುತ್ತದೆ. ಅವರು ಅಗತ್ಯವಾಗಿ ಚರ್ಚೆಯಾಗಬೇಕಾಗಿರುವ ಮುಖ್ಯ ವಿಷಯವನ್ನೇ ಕೈಬಿಟ್ಟಿದ್ದಾರೆ..

`ಭ್ರಷ್ಟರನ್ನು ಗಲ್ಲಿಗೇರಿಸಿ~ ಎಂದು ಒಂದು ಕಾಲದಲ್ಲಿ ಗುಡುಗಿದ್ದ ನ್ಯಾ.ಖಟ್ಜು ಅವರು ಅಜ್ಞಾನಿ ಪತ್ರಕರ್ತರ ಮೇಲೇರಿ ಹೋಗುವ ಭರದಲ್ಲಿ (ಇಲ್ಲವೇ ಉದ್ದೇಶಪೂರ್ವಕವಾಗಿ) ಮಾಧ್ಯಮರಂಗದ ಭ್ರಷ್ಟಾಚಾರವನ್ನು ಮರೆತೇ ಬಿಟ್ಟಿದ್ದಾರೆ. ಮಾಧ್ಯಮರಂಗ ಮತ್ತು ಸಮಾಜಕ್ಕೆ ಇಂದು ಯಾರಿಂದಾದರೂ ಹೆಚ್ಚು ಅನ್ಯಾಯವಾಗುತ್ತಿದ್ದರೆ ಅದು ಅಜ್ಞಾನಿ ಪತ್ರಕರ್ತರಿಂದಲ್ಲ, ಅದು ಭ್ರಷ್ಟ ಪತ್ರಕರ್ತರಿಂದ ಎನ್ನುವುದು ಕಟು ವಾಸ್ತವ.

ಕಾಸು ಪಡೆದು ಸುದ್ದಿ ಪ್ರಕಟಿಸುತ್ತಿದ್ದ, ರಾಡಿಯಾ ಟೇಪ್ ಹಗರಣ ಬಯಲು ಮಾಡಿದಂತೆ ರಾಜಕೀಯ ಸಂಪರ್ಕ ಬಳಸಿಕೊಂಡು ಕಾರ್ಪೋರೇಟ್ ದೊರೆಗಳ ದಲ್ಲಾಳಿಗಿರಿ ಮಾಡುತ್ತಿದ್ದ  ಮತ್ತು ಗಣಿ ಲೂಟಿಕೋರರಿಂದ ಕಾಣಿಕೆ ಪಡೆದಿದ್ದಾರೆ ಎಂಬ ಆರೋಪಕ್ಕೊಳಗಾಗಿರುವ ಪತ್ರಕರ್ತರು ಖಂಡಿತ `ಅಜ್ಞಾನಿ~ಗಳು ಅಲ್ಲವೇ ಅಲ್ಲ, ಅವರೆಲ್ಲ ಪರಮ ಬುದ್ಧಿವಂತರು.

ನ್ಯಾ. ಖಟ್ಜು ಅವರ ನಿರೀಕ್ಷೆಯಂತೆ ಅವರೆಲ್ಲ ರಾಜಕೀಯ ಶಾಸ್ತ್ರ, ಸಾಹಿತ್ಯ, ತತ್ವಶಾಸ್ತ್ರಗಳಲ್ಲಿ ಪಾರಂಗತರಾದವರು. ಮಾಧ್ಯಮರಂಗ ಇಂದು ಎದುರಿಸುತ್ತಿರುವ ಮಾರಣಾಂತಿಕ ರೋಗ ಭ್ರಷ್ಟಾಚಾರದ್ದು. ಗಲ್ಲು ಶಿಕ್ಷೆ ವಿಧಿಸುವುದನ್ನು ಹೊರತುಪಡಿಸಿ ನ್ಯಾ. ಖಟ್ಜು ಅವರಲ್ಲಿ ಈ ರೋಗ ಗುಣಪಡಿಸುವ ಬೇರೆ ಔಷಧಿಯೇನಾದರೂ ಇದೆಯೇ?
ಮಾಧ್ಯಮರಂಗವನ್ನು ಶುಚಿಗೊಳಿಸಬೇಕೆಂಬ ಪ್ರಾಮಾಣಿಕವಾದ ಉದ್ದೇಶ ನ್ಯಾ.ಖಟ್ಜು ಅವರಲ್ಲಿದ್ದರೆ ಅದನ್ನು ತೋರಿಸುವ ಒಂದು ಅವಕಾಶ ಅವರ ಮುಂದಿದೆ. `ಕಾಸಿಗಾಗಿ ಸುದ್ದಿ~ ಹಗರಣದ ಬಗ್ಗೆ ತನಿಖೆ ನಡೆಸಲು ಭಾರತೀಯ ಪತ್ರಿಕಾ ಮಂಡಳಿಯೇ ನೇಮಿಸಿದ್ದ ಉಪಸಮಿತಿ ನೀಡಿರುವ ವರದಿ ಅವರ ಮೇಜಿನ ಮೇಲಿದೆ. ಅದರಲ್ಲಿ ಅಪರಾಧ ಎಸಗಿದ ಪತ್ರಿಕಾ ಸಂಸ್ಥೆಗಳ ಹೆಸರೂ ಸೇರಿದಂತೆ ಎಲ್ಲ ವಿವರಗಳೂ ಇವೆ.

ಪತ್ರಿಕಾ ಮಂಡಳಿಯ ಹಿಂದಿನ ಅಧ್ಯಕ್ಷರಿಗೆ ಅದನ್ನು ಮುಟ್ಟಿನೋಡುವ ಧೈರ್ಯವೂ ಇರಲಿಲ್ಲ, ಶಕ್ತಿಶಾಲಿ ಪತ್ರಿಕಾಸಂಸ್ಥೆಗಳ ಮಾಲೀಕರ ಒತ್ತಡಕ್ಕೆ ಮಣಿದು ಅವರು ಆ ವರದಿಯನ್ನು ಮುಚ್ಚಿಟ್ಟಿದ್ದರು.

ನ್ಯಾ.ಖಟ್ಜು ಅಂತಹ ಒತ್ತಡಕ್ಕೆ ಮಣಿಯುವವರಲ್ಲವಾದ ಕಾರಣ ವರದಿ ಆಧಾರದಲ್ಲಿ ಅವರು ಕ್ರಮ ಕೈಗೊಂಡರೆ ಮಾಧ್ಯಮರಂಗಕ್ಕೆ ದೊಡ್ಡ ಉಪಕಾರ ಮಾಡಿದಂತಾಗುತ್ತದೆ. ಜತೆಗೆ ರಾಡಿಯಾ ಟೇಪ್ ಹಗರಣ ಮತ್ತು ಗಣಿಲೂಟಿಕೋರರಿಂದ ಲಂಚ ಪಡೆದಿರುವ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಿ.
ನ್ಯಾ.ಖಟ್ಜು ಅವರು ಪ್ರಸ್ತಾಪಿಸಿರುವ ಎರಡನೇ ಮುಖ್ಯ ವಿಷಯ-ಸುದ್ದಿ ಪ್ರಕಟಣೆ ಮತ್ತು ಪ್ರಸಾರದಲ್ಲಿ ಮಾಧ್ಯಮಗಳು ತೋರಿಸುವ ಆದ್ಯತೆಗೆ ಸಂಬಂಧಿಸಿದ್ದು. ಅವರ ಆರೋಪದಲ್ಲಿ ಹುರುಳಿದೆ.

ಆದರೆ ಪೌಷ್ಟಿಕಾಂಶದ ಕೊರತೆಯಿಂದ ಸಾಯುತ್ತಿರುವ ಮಕ್ಕಳ ಬಗೆಗಿನ ಸುದ್ದಿಗಿಂತ ಐಶ್ಚರ್ಯ ರೈಗೆ ಮಗುವಾಗಿದ್ದು ದೊಡ್ಡ ಸುದ್ದಿಯಾಗುತ್ತಿರುವುದಕ್ಕೆ ಕಾರಣಗಳೇನು ಎಂಬುದನ್ನು ನ್ಯಾ.ಖಟ್ಜು ಅವರು ಯೋಚಿಸಿದಂತಿಲ್ಲ. ಎರಡನೆಯ ಸುದ್ದಿಗೆ ದೊಡ್ಡ ಸಂಖ್ಯೆಯ ಓದುಗ-ನೋಡುಗ ಜನವರ್ಗ ಇದೆ.

ಆದ್ದರಿಂದಲೇ ಅಂತಹ ಸುದ್ದಿಗಳಿಗಾಗಿ ಜಾಹೀರಾತು ಹರಿದು ಬರುತ್ತದೆ. ಒಂದು ಪತ್ರಿಕೆಯ ಶೇಕಡಾ 80ರಷ್ಟು ಆದಾಯ ಜಾಹೀರಾತಿನಿಂದಲೇ ಬರುತ್ತಿರುವುದರಿಂದ ಪತ್ರಿಕೆಯ ಮಾಲೀಕರಿಗೆ ಸಹಜವಾಗಿಯೇ ಐಶ್ಚರ‌್ಯ ರೈನ ಮಗುವೇ ಮುಖ್ಯವಾಗುತ್ತದೆ ಹೊರತು ಬಡಮಕ್ಕಳಲ್ಲ.
ಕೇವಲ ಪ್ರಚಾರಕ್ಕಾಗಿ ನಿಷ್ಪ್ರಯೋಜಕ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ನ್ಯಾ.ಖಟ್ಜು ಅವರಂತಹ ಪ್ರಾಜ್ಞರು ಜಾಹೀರಾತಿನ  ವಿಷವರ್ತುಲದೊಳಗೆ ಸಿಕ್ಕಿಹಾಕಿಕೊಂಡಿರುವ ಮಾಧ್ಯಮಗಳ ಬಿಡುಗಡೆಗೆ ದಾರಿ ತೋರಿಸಬೇಕು.
ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟಮಾಡುವುದು ಕಾನೂನು ಪ್ರಕಾರ ಅಪರಾಧ. ಇದನ್ನು ಪತ್ರಿಕೆಗಳಿಗೂ ಯಾಕೆ ಅನ್ವಯಿಸಬಾರದು? ಈಗ ಪತ್ರಿಕೆಗಳ ಮುಖಬೆಲೆಗೂ ಅದರ ಉತ್ಪಾದನಾ ವೆಚ್ಚಕ್ಕೂ ಸಂಬಂಧವೇ ಇಲ್ಲದಂತಹ ಸ್ಥಿತಿ ಇದೆ.

ಇದನ್ನು ತಡೆಯಲು ನ್ಯಾಯಮೂರ್ತಿಗಳು ಒಂದು ಕಾನೂನನ್ನು ರಚಿಸಿ ಸರ್ಕಾರಕ್ಕೆ ಯಾಕೆ ಕಳುಹಿಸಬಾರದು? ಅನಾರೋಗ್ಯಕರವಾದ ದರಸಮರಕ್ಕೆ ಸಿಕ್ಕಿ ಮಾಧ್ಯಮ ಕ್ಷೇತ್ರ ದಾರಿ ತಪ್ಪುವುದನ್ನಾದರೂ ಇದರಿಂದ ತಪ್ಪಿಸಲು ಸಾಧ್ಯ.
ಮಾಧ್ಯಮ ಕ್ಷೇತ್ರದ ಕೆಂಗಣ್ಣಿಗೆ ಕಾರಣವಾದ ನ್ಯಾ.ಖಟ್ಜು ಅವರ ಹೇಳಿಕೆಯ ಮೂರನೆಯ ಅಂಶ- ಅವರು ಸರ್ಕಾರವನ್ನು ಕೇಳಿರುವ ಮಾಧ್ಯಮದ ಮೇಲಿನ ನಿಯಂತ್ರಣಾಧಿಕಾರ.  ಭಾರತೀಯ ಪತ್ರಿಕಾ ಮಂಡಳಿಯನ್ನು `ಹಲ್ಲಿಲ್ಲದ ಸಂಸ್ಥೆ~ ಎಂದು ಹಂಗಿಸುವ ಪತ್ರಕರ್ತರೇ ಇನ್ನೊಂದೆಡೆ ಅದಕ್ಕೆ ಹೆಚ್ಚಿನ ಅಧಿಕಾರ ನೀಡುವುದನ್ನು ವಿರೋಧಿಸುತ್ತಿರುವುದು ವಿಪರ್ಯಾಸದಂತೆ ಕಾಣುತ್ತಿರುವುದು ನಿಜ.

ಈ ಭೀತಿಗೂ ಕಾರಣ ಇದೆ. ಸ್ವಯಂ ಸರ್ಕಾರವೇ ನೇಮಿಸುವ ವ್ಯಕ್ತಿಯ ಕೈಗೆ ಕೊಡುವ ನಿಯಂತ್ರಣದ ಅಧಿಕಾರ ಪರೋಕ್ಷವಾಗಿ ಸರ್ಕಾರದ ಕೈಗೆ ಕೊಟ್ಟಂತಾಗುತ್ತದೆ. ಆದರೆ ಇದಕ್ಕೆ ಸ್ವಯಂ ನಿಯಂತ್ರಣ ಕೂಡಾ ಪರಿಹಾರ ಅಲ್ಲ, ಸ್ವಯಂನಿಯಂತ್ರಣ ವೈಯಕ್ತಿಕವಾಗಿ ಇಲ್ಲವೇ ಸಾಮಾಹಿಕವಾಗಿ ಯಶಸ್ವಿಯಾಗಿದ್ದು ಕಡಿಮೆ.

ಸುಲಭದ ಒಂದು ಪರಿಹಾರ ಇದೆ. ಶೀಘ್ರದಲ್ಲಿ ನೇಮಕಗೊಳ್ಳಲಿರುವ ಜನಲೋಕಪಾಲರ ಮೂಲಕ ನಿಯಂತ್ರಣಕ್ಕೆ ಮಾಧ್ಯಮಗಳು ಸ್ವ ಇಚ್ಛೆಯಿಂದ ಯಾಕೆ ತಮ್ಮನ್ನು ಒಪ್ಪಿಸಿಕೊಳ್ಳಬಾರದು?