Saturday, September 23, 2017

ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿ

ನಾನು ಪಾಲ್ಗೊಳ್ಳುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಾಮಾನ್ಯವಾಗಿ ಇಲ್ಲಿ ಶೇರ್ ಮಾಡುವುದಿಲ್ಲ. ಆದರೆ ಇದೊಂದು ವಿಶೇಷ ಕಾರ್ಯಕ್ರಮ.
ಮಂಗಳೂರಿನ ಜಾಗೃತ ಬಿಲ್ಲವ ಯುವಕರ ತಂಡ ಸಮಾನ ಚಿಂತಕರೆಲ್ಲರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಇದನ್ನು ನಡೆಸುತ್ತಿರುವ ಸಂಸ್ಥೆ ಹೊಸದಾಗಿ ಸ್ಥಾಪನೆಯಾಗಿರುವ 'ನಾರಾಯಣಗುರು ವಿಚಾರ ಕಮ್ಮಟ (ನಾವಿಕ). ಇಂತಹದ್ದೊಂದು ಹೆಸರಿನ ಸಂಸ್ಥೆಯೊಂದನ್ನು ಹುಟ್ಟುಹಾಕಬೇಕೆಂದು ಸುಮಾರು ೩೦ ವರ್ಷಗಳ ಹಿಂದೆ ಯೋಚಿಸಿದ್ದೆ. ನಮ್ಮ ಯುವಮಿತ್ರರು ಇದನ್ನು ಸಾಕಾರಗೊಳಿಸಿದ್ದಾರೆ.
"ತರ್ಕ ನಡೆಸಲು ಅಲ್ಲ, ಗೆಲ್ಲುವುದಕ್ಕೂ ಅಲ್ಲ. ಪರಸ್ಪರ ತಿಳಿದುಕೊಳ್ಳಲು ಮತ್ತು ತಿಳಿಸಿಕೊಡಲು"- ನಾರಾಯಣ ಗುರುಗಳು ೧೯೨೪ರಲ್ಲಿ ತಾವೇ ಆಲ್ವಾಯಿಯಲ್ಲಿ ಆಯೋಜಿಸಿದ್ದ ಸರ್ವಧರ್ಮಗಳ ಸಮ್ಮೇಳನದ ಉದ್ದೇಶದ ಬಗ್ಗೆ ಹೇಳಿದ್ದು.
ಆಯೋಜಕರ ಉದ್ದೇಶವೂ ಇದೇ ಆಗಿದೆ ಎಂಬ ನಂಬಿಕೆ ನನಗಿದೆ.
ಪುರುಸೊತ್ತುಮಾಡಿಕೊಂಡು ಬನ್ನಿ, ಮಾತನಾಡೋಣ.

"ಮನುಷ್ಯನ ಧರ್ಮ, ಆಚಾರ,ಭಾಷೆ ಯಾವುದೇ ಇರಲಿ ಮನುಷ್ಯ ಸಂತತಿ ಒಂದೇ ಆಗಿರುವ ಕಾರಣ ಅಂತರ್ಜಾತಿ ಮದುವೆ ಮತ್ತು ಸಹಭೋಜನ ತಪ್ಪಲ್ಲ"
-ನಾರಾಯಣಗುರುಗಳು ೧೯೨೧ರಲ್ಲಿ ನಡೆದಿದ್ದ 'ಅಖಿಲ ಕೇರಳ ಸಹೋದರ ಸಂಗಮ' ಸಮ್ಮೇಳನದಲ್ಲಿ ಹೇಳಿದ್ದು.

'ಈಳವ ಎನ್ನುವ ಹೆಸರು ಒಂದು ಜಾತಿಯಾಗಿಯೋ, ಮತವಾಗಿಯೋ ಸೂಚಿಸಲ್ಪಟ್ಟಿಲ್ಲ. ಆದ್ದರಿಂದ ನಾರಾಯಣಗುರು ಧರ್ಮ ಪರಿಪಾಲನಾ ಯೋಗ' (ಎಸ್ ಎನ್ ಡಿಪಿ) ದಲ್ಲಿ ಜಾತಿಮತಭೇದ ಮಾಡದೆ ಸದಸ್ಯರನ್ನು ಸೇರಿಸಿಕೊಳ್ಳ ಬೇಕೆಂದು ನಾನು ಅಪೇಕ್ಷಿಸುತ್ತೇನೆ.'
-ಸಾವಿನ ಎರಡು ವರ್ಷ ಮೊದಲು ನಾರಾಯಣ ಗುರುಗಳು ಎಸ್ ಎನ್ ಡಿ ಪಿ ಗೆ ಬರೆದಿದ್ದ ಪತ್ರದ ಸಾಲುಗಳು.

Thursday, September 21, 2017

ಮಾಡಿದುಣ್ಣೋ ಮಹರಾಯ

ಸಾಮಾಜಿಕ ಜಾಲತಾಣಗಳಲ್ಲಿ ತಮಗಾದವರನ್ನು ನಿಂದಿಸಿ, ಹಂಗಿಸಿ,ಸುದ್ದಿಗಳನ್ನು ತಿರುಚುತ್ತಾ, ಸುಳ್ಳುಗಳು ಮೂಲಕ ಚಾರಿತ್ರ್ಯ ಹನನಮಾಡುತ್ತಿದ್ದವರ ವಿರುದ್ಧ ಪೋಲೀಸರಿಗೆ ದೂರು ನೀಡಿದರೆ ' ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ' ಎಂದು ಬೊಬ್ಬಿಟ್ಟವರು.....
ಇಂದು ತಮ್ಮ ನಾಯಕರ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಓಡೋಡಿ ಹೋಗಿ ಪೋಲೀಸರಿಗೆ ದೂರು ನೀಡಿ ಕ್ರಮಕ್ಕೆ ಮೊರೆಇಡುತ್ತಿರುವುದು ತಮಾಷೆಯಾಗಿ ಕಾಣುತ್ತಿದೆ.
#heightofhippocracy
#ಮಾಡಿದುಣ್ಣೋಮಹರಾಯ

Sunday, September 17, 2017

ನಾನು ಗೌರಿ ನಾವೆಲ್ಲರೂ ಗೌರಿ

ಗೌರಿ ಜತೆಗಿನ ನನ್ನ ಪೋಟೊ ನನ್ನಲಿಲ್ಲ ಎಂದಾಕ್ಷಣ ಸ್ನೇಹಿತರಾದ ವಿಕಾಸ್ ಸೊಪ್ಪಿನ್ ಇದನ್ನು ಕಳಿಸಿದ್ದಾರೆ. (ಪೋಟೊ ತೆಗೆದದ್ದು ಅಜ್ಜಂಪುರ ವೆಂಕಟೇಶ್) ಗೌರಿ ಹೇಗೆ ನನ್ನ ತೋಳು ಹಿಡಿದುಕೊಂಡಿದ್ದಾಳೆ ನೋಡಿ, 
ನನ್ನನ್ನೂ ತನ್ನ ಜತೆ ಕರೆದುಕೊಂಡು ಹೋಗುವ ಹಾಗೆ, 
ಅಲ್ಲ, ನನ್ನನ್ನು ಬಿಟ್ಟು ಹೋಗಬೇಡ ಎನ್ನುವ ಹಾಗೆ,
ಅಲ್ಲ,ನಾವೆಲ್ಲ ಜತೆಯಲ್ಲಿರುವ ಎನ್ನುವ ಹಾಗೆ.
ಮೂರನೆಯದೇ ನಿಜ ಇದ್ದಿರಬಹುದು.
ಈ ಪ್ರೀತಿಗಾಗಿಯೇ ನಾವು ಹೇಳುತ್ತಿರುವುದು #ನಾನುಗೌರಿನಾವೆಲ್ಲರೂಗೌರಿ