Monday, November 24, 2014

ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ‘’ನೂರಾರು ಕವನಗಳು’’

‘’ ನನಗೆ ಮುತ್ತುಕೊಟ್ಟ ಮೊಟ್ಟ ಮೊದಲ ಹುಡುಗಿಗೆ
ಮತ್ತು
ಮುತ್ತು ಕೊಡುವ ಕಟ್ಟ ಕಡೆಯ ಹುಡುಗಿಗೆ
ಅರ್ಪಣೆ ಈ ಹಾರು ಪದ್ಯಗಳು’’
- ಹೀಗೆಂದು ಹಿರಿಯ ಕವಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ತಮ್ಮ ‘’ನೂರಾರು ಕವನಗಳು’’ ಎಂಬ ಕವನ ಸಂಕಲನವನ್ನು ಅರ್ಪಣೆ ಮಾಡಿ ಬರೆದಿದ್ದರು. ಇಪ್ಪತ್ತೈದು ವರ್ಷಗಳ ಹಿಂದೆ ನಾನು ಧಾರವಾಡದಲ್ಲಿದ್ದಾಗ ಈ ಕವನ ಸಂಕಲನವನ್ನು ನನಗೂ ಕೊಟ್ಟಿದ್ದರು. ಆಗಷ್ಟೇ ಮದುವೆಯಾಗಿದ್ದ ನಾನು ಅರ್ಪಣೆಯ ಸಾಲುಗಳನ್ನು ಓದಿ ‘’’ಇವರು ಮೊದಲ ಮುತ್ತು ಕೊಟ್ಟ ಹುಡುಗಿಯನ್ನು ನೆನೆಸಿಕೊಳ್ಳುವ ಜತೆಯಲ್ಲಿ ಕೊನೆಯಲ್ಲಿ ಮುತ್ತುಕೊಡುವ ಹುಡುಗಿಯನ್ನೂ ಬುಕ್ ಮಾಡಿಕೊಂಡಿದ್ದರಲ್ವಾ? ಮೇಸ್ಟ್ರು ಭಲೇ ರಸಿಕರು’’ ಎಂದು ಮನಸ್ಸಿನಲ್ಲಿಯೇ ಅಂದು ಕೊಂಡು ಸುಮ್ಮಾನಾಗಿದ್ದೆ.ಕೆಲವು ತಿಂಗಳುಗಳ ನಂತರ ಪಟ್ಟಣಶೆಟ್ಟಿ ದಂಪತಿಗಳ ಜತೆ ಗದಗದಲ್ಲಿ ಸಾಹಿತ್ಯ ಕಾರ್ಯಕ್ರಮಕ್ಕೆ ಹೋಗಿದ್ದೆ. ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದವರು ನಾನು ವೈಯಕ್ತಿಕವಾಗಿ ಬಹಳ ಗೌರವಿಸುವ ಗದಗ ಡಂಬಳ ಮಠದ ಸ್ವಾಮೀಜಿಗಳು.
ಅವರು ಆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ‘’ ಪಟ್ಟಣಶೆಟ್ಟಿಯವರ ಕವನಗಳು ಮಾತ್ರವಲ್ಲ, ಅರ್ಪಣೆಯ ಸಾಲುಗಳು ಕೂಡಾ ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ವಾ? ಈ ಮೂಲಕ ಎಷ್ಟು ಚೆನ್ನಾಗಿ ಅವರು ತನ್ನ ಮಗಳು ಮತ್ತು ಮೊಮ್ಮಗಳನ್ನು ನೆನೆಸಿಕೊಂಡಿದ್ದಾರೆ’’ ಎಂದು ಹೇಳಿಬಿಟ್ಟರು. ಸ್ವಾಮೀಜಿ ಮಾತು ಕೇಳಿ ಅಲ್ಲಿಯೇ ಎದುರಿಗೆ ಕೂತಿದ್ದ ನಾನು ದಂಗಾಗಿ ಹೋಗಿದ್ದೆ. ನನ್ನ ದುಷ್ಟ ಆಲೋಚನಾ ಲಹರಿ ಬಗ್ಗೆ ನನಗೆ ಮುಖ ಮುಚ್ಚಿಕೊಳ್ಳಬೇಕೆನಿಸುವಷ್ಟು ನಾಚಿಕೆಯಾಗಿಬಿಟ್ಟಿತ್ತು.
- ‘’ಕಿಸ್ ಆಪ್ ಲವ್’’ ವಿವಾದವನ್ನು ವಿರೋಧಿಸುವವರು ಆ ಕಾರ್ಯಕ್ರಮವನ್ನು ತಮಗೆ ತೋಚಿದಂತೆ ಕಲ್ಪಿಸಿಕೊಂಡು ಪ್ರತಿಕ್ರಿಯಿಸಿ ಸುಖ ಪಡುತ್ತಿರುವುದನ್ನು ಕಂಡಾಗ ಈ ಹಳೆಯ ಘಟನೆ ನೆನಪಾಯಿತು.