Friday, November 20, 2015

ಬಿಲ್ಲವರು ಎಲ್ಲಿರಬೇಕಿತ್ತು? ಎಲ್ಲಿದ್ದಾರೆ?

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಸುಧಾರಣಾ ಕಾಯಿದೆಯಿಂದಾಗಿ ಭೂಮಿ ಪಡೆದುಕೊಂಡವರು, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಮೀಸಲಾತಿಯ ಫಲ ಉಂಡವರು ಮತ್ತು ಸಂತ ನಾರಾಯಣ ಗುರುಗಳ ಸಂದೇಶ ತೋರಿದ ಸುಧಾರಣೆಯ ಹಾದಿಯನ್ನು ಬಹಳ ಬೇಗ ತಿಳಿದುಕೊಂಡವರು ಬಿಲ್ಲವರು. ಈ ಎಲ್ಲ ಬೆಳವಣಿಗಳ ಫಲಾನುಭವಿ ಬಿಲ್ಲವರು ಎಲ್ಲಿರಬೇಕಿತ್ತು? ಎಲ್ಲಿದ್ದಾರೆ?
ಕೇರಳದಲ್ಲಿ ನಾರಾಯಣ ಗುರು ಚಳುವಳಿ ನಡೆದ 50 ವರ್ಷಗಳ ನಂತರ ಅಲ್ಲಿನ ಈಳವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿತ್ತು. ನಾರಾಯಣ ಗುರು ಚಳುವಳಿಯ ಯಶಸ್ಸಿನ ಬಿಂಬವನ್ನು ಆ ಸಮೀಕ್ಷೆಯ ವರದಿಯಲ್ಲಿ ಕಾಣಬಹುದು. ವಕೀಲರು, ವೈದ್ಯರು, ಪತ್ರಕರ್ತರು, ರಾಜಕಾರಣಿಗಳು,ಸರ್ಕಾರಿ ಅಧಿಕಾರಿಗಳು ಶಿಕ್ಷಕರು, ಉದ್ಯಮಿಗಳು, ವ್ಯಾಪಾರಿಗಳು, ಬ್ಯಾಂಕರ್ ಗಳು, ಕಲಾವಿದರು ಸೇರಿದಂತೆ ಹತ್ತು ವೃತ್ತಿಗಳಲ್ಲಿರುವ ಈಳವರನ್ನು ಗುರುತಿಸುವ ಕೆಲಸಅಲ್ಲಿ ನಡೆಯಿತು. ಅಷ್ಟೊತ್ತಿಗೆ ಈ ಎಲ್ಲ ವೃತ್ತಿಗಳಲ್ಲಿ ಈಳವರು ತಮ್ಮ ಆಧಿಪತ್ಯ ಸ್ಥಾಪಿಸಿದ್ದರು.

ಕೇರಳದ ಈಳವರಂತೆಯೇ ನಾರಾಯಣ ಗುರುಗಳ ಮಾರ್ಗದರ್ಶನ ಪಡೆದ, ಅಲ್ಲಿಯಂತೆಯೇ ಭೂ ಸುಧಾರಣೆ ಮತ್ತು ಮೀಸಲಾತಿಯ ಫಲಾನುಭವಿಗಳಾದ ಬಿಲ್ಲವರು ಈಗ ಎಲ್ಲಿದ್ದಾರೆ? ಬಿಲ್ಲವರಲ್ಲಿ ಎಷ್ಟುಮಂದಿ ವಕೀಲರು, ವೈದ್ಯರು, ಎಂಜನಿಯರ್ ಗಳು, ಉದ್ಯಮಿಗಳು, ಪತ್ರಕರ್ತರು, ಸರ್ಕಾರಿ ನೌಕರರು, ಪ್ರಾಧ್ಯಾಪಕರು ಇದ್ದಾರೆ?
ಬಿಲ್ಲವ ಯುವಕರು ಎಲ್ಲಿದ್ದಾರೆಂದು ಹುಡುಕಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಗಳ ದಾಖಲೆಗಳನ್ನು ನೋಡಬೇಕು. ಸೂತ್ರಧಾರಿಗಳು ತಲೆಗೆ ತುಂಬಿದ ಧರ್ಮದ ನಶೆಯೇರಿಸಿಕೊಂಡ ಪಾತ್ರಧಾರಿ ಬಿಲ್ಲವ ಯುವಕರು ಧರ್ಮದ ಹೆಸರಲ್ಲಿ ಒಂದಷ್ಟು ಮಂದಿಯ ಪ್ರಾಣ ತೆಗೆದಿದ್ದಾರೆ, ತಾವೂ ಅದೇ ದ್ವೇಷಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹಾದಿ ತಪ್ಪಿದ ಈ ಅಮಾಯಕ ಯುವಕರ ಬಡ ತಂದೆತಾಯಿಗಳು ಬದುಕಿಯೂ ಸತ್ತಂತಿದ್ದಾರೆ.
ಈ ಪಾತ್ರಧಾರಿಗಳನ್ನು ಪೋಷಿಸಿಕೊಂಡು ಬಂದ ಸೂತ್ರಧಾರಿಗಳು ತಮ್ಮ ಮಕ್ಕಳನ್ನು ಡಾಕ್ಟರ್, ಎಂಜನಿಯರ್, ಅಡ್ವೋಕೇಟ್, ಉದ್ಯಮಿಗಳನ್ನಾಗಿ ಮಾಡಿ ಆಗಾಗ ಹಿಂದೂ ಧರ್ಮಕ್ಕೆ ಒದಗಿ ಬಂದ ಆಪತ್ತಿನ ಬಗ್ಗೆ ಅಂಗರಕ್ಷಕರನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ಭಾಷಣ ಮಾಡುತ್ತಾ ಹೊಸ ಬಲಿಪಶುಗಳನ್ನು ತಯಾರುಮಾಡುತ್ತಿದ್ದಾರೆ.
ಈ ಅಮಾಯಕ ಯುವಕರಿಗೆ ಸರಿತಪ್ಪು ತಿಳಿಸಿ ಅವರನ್ನು ಹಾದಿ ತಪ್ಪದಂತೆ ನೋಡಿಕೊಳ್ಳಬೇಕಾದ ಬಿಲ್ಲವ ಸಮುದಾಯದ ನಾಯಕರು ಧರ್ಮಸ್ಥಳ, ಕೊಲ್ಲೂರಿಗೆ ಪೈಪೋಟಿ ನೀಡುತ್ತಿದ್ದೇವೆ ಎಂದು ಎದೆತಟ್ಟಿಕೊಂಡು ದೇವಸ್ಥಾನದ ಜೀರ್ಣೋದ್ದಾರಕ್ಕೆ ತಮ್ಮನ್ನು ಅರ್ಪಿಸಿಕೊಂಡು ತಾವೇ ನಿಜವಾದ ಹಿಂದೂಗಳೆಂದು ಸಾಬೀತುಮಾಡಲು ಹೊರಟಿದ್ದಾರೆ. ನಾರಾಯಣ ಗುರು ಸ್ಥಾಪಿಸಿದ್ದ ದೇವಸ್ಥಾನದಲ್ಲಿ ಅವರ ಸಂದೇಶದ ಗೋರಿ ಕಾಣಿಸುತ್ತಿದೆ. ನಾರಾಯಣ ಗುರು ಸಂದೇಶದಿಂದ ಬೆಳಗಬೇಕಾದ ಬಿಲ್ಲವರ ಮನೆಗಳಲ್ಲಿ ಕತ್ತಲು ತುಂಬಿದೆ.
---------------------------------------------------------------------------------------------------------------------------------

(ನನಗೆ ವೈಯಕ್ತಿಕವಾಗಿ ಪರಿಚಿತರಲ್ಲದ ವಿಶು ಶೆಟ್ಟಿ ಮತ್ತು ಪರಿಚಿತರಾದ ಹರಿಶ್ಚಂದ್ರ ಭಟ್ ಸೇರಿದಂತೆ ಕೆಲವರು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ನನ್ನದೂ ಒಂದಷ್ಟು ಪ್ರಶ್ನೆಗಳಿವೆ. ಅವುಗಳನ್ನು ನಿಮ್ಮ ಮುಂದಿಟ್ಟಿದ್ದೇನೆ.)
ನಾನು ಮೊಗವೀರ,ಬ್ಯಾರಿ,ಬಂಟರ ಜತೆಯಲ್ಲಿ ವಿದ್ಯಾರ್ಥಿ ಜೀವನ ಮತ್ತು ವೃತ್ತಿ ಬದುಕಿನ ಸುಮಾರು 20 ವರ್ಷಗಳನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದವನು. ಈ ಎಲ್ಲ ಸಮುದಾಯಗಳ ನಡುವೆ ಆಗಲೂ ಸ್ನೇಹ, ಪ್ರೀತಿ,ವಿಶ್ವಾಸದ ಜತೆಯಲ್ಲಿ ಸಿಟ್ಟು, ಜಗಳ, ಅಸೂಯೆ, ದ್ವೇಷ ಕೂಡಾ ಇತ್ತು.
ಹಿಂದೂ ಹುಡುಗರು, ಮುಸ್ಲಿಮ್ ಹುಡುಗಿಯರನ್ನು ಛೇಡಿಸುವುದು, ಮುಸ್ಲಿಮ್ ಹುಡುಗರು ಹಿಂದೂ ಹುಡುಗಿಯರ ಜತೆ ಐಸ್ ಕ್ರೀಮ್ ಪಾರ್ಲರ್ ಗಳಿಗೆ ಹೋಗುವುದು ಕೂಡಾ ನಡೆದಿತ್ತು. ಎರಡೂ ಧರ್ಮಗಳ ಗಂಡು-ಹೆಣ್ಣಿನ ನಡುವಿನ ಅಕ್ರಮ ಸಂಬಂಧಗಳ ಬಗ್ಗೆ ಆಗಲೂ ಗಾಳಿಸುದ್ದಿಗಳು ಹಾರಾಡುತ್ತಿತ್ತು. ಈ ಕಾರಣಗಳಿಗಾಗಿ ನಮ್ಮ ನಡುವೆ ಜಗಳ-ಹೊಡೆದಾಟಗಳೂ ನಡೆಯುತ್ತಿದ್ದುದೂ ಉಂಟು.
ಆದರೆ ನಾವೆಂದೂ ಧರ್ಮದ ಕನ್ನಡಕ ಹಾಕಿಕೊಂಡು ಪ್ರೀತಿ-ಜಗಳ ಮಾಡುತ್ತಿರಲಿಲ್ಲ. ಆ ಕಾಲದಲ್ಲಿ ನನ್ನೂರಿನ ಹುಡುಗಿಯೊಬ್ಬಳನ್ನು ನನ್ನ ಮುಸ್ಲಿಮ್ ಸ್ನೇಹಿತ ಪ್ರೀತಿಸಿ ಮದುವೆಯಾದಾಗ ನಮ್ಮೂರು ಹೊತ್ತಿ ಉರಿದಿರಲಿಲ್ಲ. ಅದು ಎರಡು ಕುಟುಂಬಗಳಿಗೆ ಸಂಬಂಧಿಸಿದ ವಿಷಯವೆಂದು ಉಳಿದವರು ಅದನ್ನು ಸಹಜವಾಗಿ ಸ್ವೀಕರಿಸಿದ್ದರು.
ಆಗ ನಮ್ಮ ನಡುವೆ ಇಲ್ಲದ ಧರ್ಮ ಕೇಂದ್ರಿತ ಸಿಟ್ಟು, ಜಗಳ, ದ್ವೇಷ ಈಗ ಯಾಕೆ ಹುಟ್ಟಿಕೊಂಡಿದೆ ಎನ್ನುವುದು ಪ್ರಶ್ನೆ. ಪರಸ್ಪರ ಪ್ರಾಣ ತೆಗೆಯಲು ಕಾದಾಡುವಂತಹ ಮಟ್ಟಕ್ಕೆ ಹಿಂದೂ-ಮುಸ್ಲಿಮರು ಇಳಿಯುವಷ್ಟು ದ್ವೇಷ ಹುಟ್ಟಿಸುವ ಯಾವ ಘಟನೆ-ಬೆಳವಣಿಗೆ ಕಳೆದ ಮೂವತ್ತು ವರ್ಷಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ ಎನ್ನುವುದನ್ನು ಯಾರಾದರೂ ಹೇಳಬಲ್ಲಿರಾ?
ಹಿಂದೂಗಳು, ಮುಸ್ಲಿಮರ ಇಲ್ಲವೆ ಮುಸ್ಲಿಮರು ಹಿಂದೂಗಳ ಆಸ್ತಿ-ಭೂಮಿ ಕಿತ್ತುಕೊಂಡರೇ? ಸಾವಿರಾರು ಸಂಖ್ಯೆಯಲ್ಲಿ ಮತಾಂತರ ನಡೆಯಿತೇ? ಯಾವುದಾದರೂ ದೇವಸ್ಥಾನ, ಮಸೀದಿಗಳ ಧ್ವಂಸ ನಡೆಯಿತೇ? ಏನಾಯಿತು ಹೇಳಿ?


ಧರ್ಮದ ಕನ್ನಡಕ ಕೆಳಗಿಟ್ಟು ಸುತ್ತಲಿನ ಸಮಾಜ ನೋಡಿದರೆ ಬಂಟ,ಬ್ಯಾರಿ,ಬಿಲ್ಲವ,ಮೊಗವೀರ, ಕ್ರಿಶ್ಚಿಯನರು ಕೂಡಿ ಸ್ವಾಭಿಮಾನದಿಂದ ಕಟ್ಟಿದ ಸ್ವಾವಲಂಬಿ ಜಿಲ್ಲೆಯನ್ನು ಕಾಣಬಹುದು. ಅದು ಪರಸ್ಪರ ಕಾದಾಡಿ, ರಕ್ತಹರಿಸಿ ಕಟ್ಟಿದ್ದಲ್ಲ, ಶ್ರಮಪಟ್ಟು, ಊರೂರು ಅಲೆದು ಬೆವರು ಸುರಿಸಿ ಕಟ್ಟಿದ ಜಿಲ್ಲೆ. (ನನ್ನ ಅಪ್ಪ ಇದ್ದ ತುಂಡುಭೂಮಿಯನ್ನು ಉಳಿಸಲು ಮುಂಬೈಗೆ ಓಡಿ ಹೋಗಿ ಬೆವರು-ರಕ್ತ ಸುರಿಸಿ ದುಡಿಯದೆ ಇದ್ದಿದ್ದರೆ ನಾನು ಮಟ್ಟುವಿನಲ್ಲಿ ದೋಣಿ ಓಡಿಸುತ್ತಾ ಇರುತ್ತಿದ್ದೆನೋ ಏನೋ?)
ಈ ಜಿಲ್ಲೆಯ ಈಗಿನ ಸ್ಥಿತಿ ಏನಾಗಿದೆ ನೋಡಿ. ಬೀದಿಯಲ್ಲಿ ರಕ್ತ ಹರಿಯುತ್ತಿದೆ. ಪಾಸ್ ಪೋರ್ಟ್ ಕಚೇರಿ ಮುಂದೆ ಕ್ಯೂ ನಿಲ್ಲುತ್ತಿದ್ದ ಹಿಂದೂ-ಮುಸ್ಲಿಮ್ ಯುವಕರು ಪೊಲೀಸ್ ಠಾಣೆಯ ಮುಂದೆ ನಿಂತಿದ್ದಾರೆ. ಪೊಲೀಸ್ ಕೇಸ್ ಗಳಿಂದಾಗಿ ಬೇರೆ ದೇಶಗಳಿಗೆ ಹೋಗಿ ದುಡಿಯವ ಅವಕಾಶದ ಬಾಗಿಲು ಮುಚ್ಚಿದೆ. ಒಮ್ಮೆ ಕ್ರಿಮಿನಲ್ ಎಂಬ ಕಳಂಕ ಹತ್ತಿದರೆ ಅದನ್ನು ಕಿತ್ತುಹಾಕುವುದು ಕಷ್ಟ. ಈ ಚಕ್ರವ್ಯೂಹದೊಳಗೆ ಸಿಕ್ಕಿಹಾಕಿಕೊಂಡ ನಮ್ಮ ಯುವಕರು ಹೊರಬರಲಾಗದೆ ಇನ್ನಷ್ಟು ವ್ಯಗ್ರರಾಗಿ,ಕ್ರೂರಿಗಳಾಗಿ, ಕೊಲೆಗಡುಕರಾಗಿ ಬದಲಾಗುತ್ತಿದ್ದಾರೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜವಾಗಿ ನಡೆಯಬೇಕಾದ ಹೋರಾಟದ ಬಗ್ಗೆ ಯಾರೂ ತಲೆ ಕೆಡಿಸುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬದಲಾಗುತ್ತಿದೆ. ನೆಲ-ಜಲ-ಜೀವದ ಧಾರಣಾ ಸಾಮರ್ಥ್ಯವನ್ನು ಮೀರಿ ಕೈಗಾರಿಕಿಕರಣ ನಡೆಯುತ್ತಿದೆ. ಕಳೆದ 30 ವರ್ಷಗಳಲ್ಲಿ ಸಾವಿರಾರು ಕುಟುಂಬಗಳು ಭೂಮಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಗಾಳಿಯಲ್ಲಿ ವಿಷ ತುಂಬಿದೆ. ಈ ಬಗ್ಗೆ ಸೊಲ್ಲೆತ್ತುವವರೇ ಇಲ್ಲ. ಶತ್ರುಗಳು ಮರೆಯಲ್ಲಿ ನಿಂತು ಮುಸಿಮುಸಿ ನಗುತ್ತಿದ್ದಾರೆ, ಮಿತ್ರರಂತೆ ಇರಬೇಕಾದವರು ಬೀದಿಯಲ್ಲಿ ಕಾದಾಡುತ್ತಿದ್ದಾರೆ.
ಹೀಗೆ ಯಾಕಾಯಿತು ಎಂದು ನಾನು ಬಿಡಿಸಿ ಹೇಳುವುದಿಲ್ಲ. ಅದು ಮತ್ತೆ ಬಿಜೆಪಿ-ಕಾಂಗ್ರೆಸ್ ನಡುವಿನ ಥೂಥೂ- ಮೈಮೈ ಜಗಳವಾಗುತ್ತದೆ. ಈ ಗಂಡಾಂತಕಾರಿ ಬೆಳವಣಿಗೆಯ ನಿಜವಾದ ಫಲಾನುಭವಿಗಳು ಯಾರು?ಬಲಿಪಶುಗಳು ಯಾರು ಎನ್ನುವುದನ್ನು ನೀವೇ ಯೋಚಿಸಿ ತೀರ್ಮಾನಕ್ಕೆ ಬನ್ನಿ.

Wednesday, November 18, 2015

‘ರಾಜೀವ್ ಗಾಂಧಿ, ನರಸಿಂಹ ರಾವ್ ಮಾಡಿದ್ದನ್ನು ವಾಜಪೇಯಿ ಮಾಡಲಿ’

ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಲ್ ಅವರ ನಿಧನಕ್ಕೆ ಕಂಬನಿಗರೆಯುತ್ತಿರುವವರನ್ನು ಕಂಡಾಗ 2002ರಲ್ಲಿ ಅಯೋಧ್ಯೆಯ ಕರಸೇವಕ ಪುರದಲ್ಲಿ ಅವರೊಡನೆ ನಾನು ನಡೆಸಿದ್ದ ಮಾತುಕತೆ ನೆನಪಾಯಿತು. (ಆಫ್ ದಿ ರೆಕಾರ್ಡ್ ಎಂದು ಹೇಳಿ ಸಿಂಘಲ್ ಅವರು ಬಿಜೆಪಿ ಮತ್ತು ಅಟಲ ಬಿಹಾರಿ ವಾಜಪೇಯಿ ಅವರ ಬಗ್ಗೆ ಹೇಳಿರುವುದನ್ನು ನಾನು ಬರೆದಿರಲಿಲ್ಲ)
‘ರಾಜೀವ್ ಗಾಂಧಿ, ನರಸಿಂಹ ರಾವ್ ಮಾಡಿದ್ದನ್ನು ವಾಜಪೇಯಿ ಮಾಡಲಿ’
ಅಯೋಧ್ಯೆ: ಫೆ.21 - ಮಾರ್ಚ್ 15ಕ್ಕೆ ಅಯೋಧ್ಯೆಯಲ್ಲಿ ಏನಾಗಬಹುದು? ವಾಜಪೇಯಿ ಕರೆಗೆ ಓಗೊಟ್ಟು ವಿಎಚ್ಪಿ ಮಂದಿರ ನಿರ್ಮಾಣವನ್ನು ಇನ್ನೆರಡು ವರ್ಷಗಳಿಗೆ ಮಂದೂಡಬಹುದೇ?.ಇಲ್ಲವೇ 1992ರ ಡಿಸೆಂಬರ್ ಆರು ಪುನರಾವರ್ತನೆಯಾಗಬಹುದೇ?. ಉತ್ತರ ಗೊತ್ತಿರುವ ವ್ಯಕ್ತಿ ಸುಲಭದಲ್ಲಿ ಬಾಯಿ ಬಿಡುತ್ತಿಲ್ಲ.‘ ಏನೂ ಆಗದಿದ್ದರೆ ಸತ್ಯಾಗ್ರಹವಂತೂ ಆಗಿಯೇ ಆಗುತ್ತದೆ. ಅದರ ಪರಿಣಾಮ ಏನೆಂಬುದನ್ನು ಈಗ ಹೇಳಲು ಸಾಧ್ಯ?’ ಎಂದು ಕೇಳುತ್ತಾರೆ ಮಂದಿರ ನಿರ್ಮಾಣದ ಸೂತ್ರಧಾರ ಅಶೋಕ್ ಸಿಂಘಲ್. ಮಂದಿರ ನಿರ್ಮಾಣ ಯೋಜನೆಯ ಕಂಟ್ರೋಲ್ ರೂಮ್ ಇರುವ ಕರಸೇವಕ ಪುರದಲ್ಲಿ ‘ಸತ್ಯಾಗ್ರಹ’ದ ತಯಾರಿ ನಡೆಯುತ್ತಿದೆ. ಹುಲ್ಲಿನ ಹೊದಿಕೆಯ ಬೃಹತ್ ಕುಟೀರದಲ್ಲಿ ಪೂರ್ಣಾಹುತಿ ಯಜ್ಞ ಪ್ರಾರಂಭವಾಗಿದೆ. ದೇಶದ ವಿವಿಧೆಡೆಗಳಿಂದ ರಾಮಸೇವಕರ ದಂಡು ಒರತೊಡಗಿದೆ. ಅವರ ಊಟ-ವಸತಿ-ಚಿಕಿತ್ಸೆಗೆ ಸಿದ್ಧತೆ ನಡೆಯುತ್ತಿದೆ. ಭೋಜನ ಶಾಲೆ, ಚಿಕಿತ್ಸಾಲಯ ಗೋಶಾಲೆ ಇಲ್ಲಿ ಎಲ್ಲವೂ ಇದೆ.
ಇದರ ಉಸ್ತುವಾರಿ ನೋಡುತ್ತಿರುವ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಶೋಕ್ ಸಿಂಘಲ್ ತನ್ನ ಕಛೇರಿಯಲ್ಲಿ ನಿರಾಳವಾಗಿ ಕೂತ್ತಿದ್ದಾರೆ. ಅಸ್ವಸ್ಥನಾಗಿದ್ದೇನೆ ಎಂದು ಮೊದಲು ಭೇಟಿ ನಿರಾಕರಿಸಿದ ಅಶೋಕ್ ಸಿಂಘಲ್ ಆನಂತರ ‘ಪ್ರಜಾವಾಣಿ’ ಜತೆ ಮಾತನಾಡಿದರು. ಮಾತನಾಡಿದರು ಅನ್ನುವುದಕ್ಕಿಂತ ಬಿಜೆಪಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಆದೇಶ ನೀಡುತ್ತಾ ಹೋದರು. ತಮ್ಮ ನಿಲುವನ್ನು ಸಮರ್ಥಿಸುತ್ತಾ ಹೋದರು ಎನ್ನುವುದೇ ಸರಿ.
‘’ಇಷ್ಟೆಲಾ ತಯಾರಿ ನಡೆಯುತ್ತಿರುವುದು. ಹನ್ನೆರಡು ಲಕ್ಷ ರಾಮಸೇವಕರನ್ನು ಮಾರ್ಚ್ 15ರ ಹೊತ್ತಿಗೆ ಅಯೋಧ್ಯೆಯಲ್ಲಿ ಸೇರಿಸುತ್ತಿರುವುದು ಕೇವಲ ಸತ್ಯಾಗ್ರಹಕ್ಕಾಗಿಯೇ? ಅಂದಾಜು ನಾಲ್ಕೈದು ಸಾವಿರ ಜನ ಸೇರಲು ಸಾಧ್ಯವಿರುವ ಕಾರಸೇವಕಪುರದಲ್ಲಿ ಅಷ್ಟೊಂದು ಸಂಖ್ಯೆಯ ರಾಮಸೇವಕರು ಹೇಗೆ ಉಳಿದುಕೊಳ್ಳಲು ಸಾಧ್ಯ?. ಅವರನ್ನೆಲ್ಲಾ ನಿಯಂತ್ರಿಸಲು ಸಾಧ್ಯವಾಗಬಹುದೇ?’’ ಈ ಪ್ರಶ್ನೆಗಳನ್ನು ಅವರು ನಿರೀಕ್ಷಿಸಿದ್ದರು.
‘’ಅದು ಸರ್ಕಾರಕ್ಕೆ ಬಿಟ್ಟ ವಿಚಾರ ಮಂದಿರ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳಲು ಬರುವ ರಾಮಸೇವಕರನ್ನು ನಾವು ಹೇಗೆ ತಡೆಯಲು ಸಾಧ್ಯ?. ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ವಶಕ್ಕೆ ತೆಗೆದುಕೊಂಡಿರುವ ನಿವೇಶವನ್ನು ಕೊಡಲಿ; ಎಲ್ಲವೂ ಶಾಂತಿಯುತವಾಗಿ ಪರಿಹಾರವಾಗುತ್ತದೆ’- ಇದು ಅಶೋಕ್ ಸಿಂಘಲ್ ಪರಿಹಾರ ಸೂತ್ರ.
ಅವರ ಪ್ರಕಾರ ಈ ಬಾರಿಯ ನಾಲ್ಕು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಕಂಡರೆ ಅದಕ್ಕೆ ಈ ಪಕ್ಷ ರಾಮಜನ್ಮಭೂಮಿ ಚಳವಳಿಯನ್ನು ನಿರ್ಲಕ್ಷಿಸಿದ್ದೇ ಕಾರಣವಂತೆ. ‘’ಪಕ್ಷದಲ್ಲಿರುವ ಬಹುತೇಕ ನಾಯಕರು ಚಳವಳಿಯನ್ನು ಬೆಂಬಲಿಸುತ್ತಾರೆ. ಆದರೆ ನಿರ್ಣಾಯಕ ಸ್ಥಾನದಲ್ಲಿರುವ ಒಬ್ಬಿಬ್ಬರು ನಾಯಕರು ಸಹಕಾರ ನೀಡುತ್ತಿಲ್ಲ’’ ಎನ್ನುವ ಸಿಂಘಲ್ ಆ ಒಬ್ಬಿಬ್ಬರು ವ್ಯಕ್ತಿಗಳ ಹೆಸರು ಹೇಳುವುದಿಲ್ಲ ಅವರಲ್ಲೊಬ್ಬರು ವಾಜಪೇಯಿಯವರಿರಬಹುದೇ?. ಹಾಗೆ ಕೇಳಿದರೆ, ‘’ ವಾಜಪೇಯಿಯವರು ಮಂದಿರ ನಿರ್ಮಾಣವನ್ನು ಯಾವಾಗ ವಿರೋಧಿಸಿದ್ದಾರೆ?. ಎಂದು ಥಟ್ಟನೇ ಪ್ರಶ್ನಿಸುತ್ತಾರೆ.


“ಆಟಲ್ ಬಿಹಾರಿ ವಾಜಪೇಯಿಯವರು ಈಗ ಕುಳಿತಿರುವ ಸ್ಥಾನ ರಾಮಮಂದಿರ ಚಳವಳಿಯ ಕೊಡುಗೆ. ಆ ಋಣ ತೀರಿಸುವ ಜವಾಬ್ದಾರಿ ಅವರ ಮೇಲಿದೆ. ರಾಜೀವ್ಗಾಂಧಿ ಕಾಲದಲ್ಲಿ ಶಿಲಾನ್ಯಾಸ ನಡೆಯಿತು; ನರಸಿಂಹ ರಾವ್ ಕಾಲದಲ್ಲಿ ವಿವಾದಾತ್ಮಕ ಕಟ್ಟಡ (ಬಾಬ್ರಿಮಸೀದಿ) ಧ್ವಂಸ ಮಾಡಲಾಯಿತು. ಈಗ ವಾಜಪೇಯಿಯವರ ಸರದಿ. ಅವರ ಕಾಲದಲ್ಲಿ ಮಂದಿರ ನಿರ್ಮಾಣವಾಗಬೇಕು. ಇದು ಸಮಸ್ತ ಹಿಂದೂಗಳ ಅಭಿಲಾಷೆ’’ – ಈ ಮಾತುಗಳನ್ನು ಹೇಳುವಾಗ ವಾಜಪೇಯಿಯವರ ಬಗ್ಗೆ ಇರುವ ಅಸಮಾಧಾನವನ್ನು ಅವರ ಮುಖದಲ್ಲಿ ಕಾಣುವುಕ್ಕೆ ಕಷ್ಟವಾಗಲಿಲ್ಲ.ಈ ವಿವಾದಕ್ಕೆ ಅಂತಿಮ ಪರಿಹಾರ ಏನು?. ‘’ಮುಸ್ಲಿಮರು ರಾಮಜನ್ಮಭೂಮಿ ಮೇಲೆ ಅನವಶ್ಯಕವಾಗಿ ತಮ್ಮ ಹಕ್ಕು ಚಲಾಯಿಸಲು ಹೋಗದೆ ಅದನ್ನು ಬಿಟ್ಟುಬಿಡುವುದೇ ಅಂತಿಮ ಪರಿಹಾರ. ಅವರು ಆ ನಿವೇಶನ ನೀಡಿದರೆ ನಾವು ಅವರಿಗೆ ಪ್ರೀತಿ-ವಿಶ್ವಾಸ-ರಕ್ಷಣೆ ನೀಡುತ್ತೇವೆ. ಮುಸ್ಲಿಮ್ ದೊರೆಗಳು 30 ಸಾವಿರ ದೇವಸ್ಥಾನಗಳನ್ನು ನಾಶ ಮಾಡಿದ್ದಾರೆ; ಅದರ ಬದಲಿಗೆ ನಾವು ಲಕ್ಷಾಂತರ ದೇವಸ್ಥಾನಗಳನ್ನು ಕಟ್ಟಿದ್ದೇವೆ. ಆದರೆ ರಾಮ ಹುಟ್ಟಿದ ಸ್ಥಳವನ್ನು ಹೇಗೆ ಬಿಡಲು ಸಾಧ್ಯ?’’ ಎನ್ನುವುದು ಅವರ ಪ್ರಶ್ನೆ.ಆ ನಂತರ ಕಾಶಿ. ಮಥುರಾದ ವಿವಾದವನ್ನು ಎತ್ತುವುದಿಲ್ಲವೆ?.
‘’ಅದನ್ನು ಹೇಗೆ ಬಿಟ್ಟುಬಿಡಲು ಸಾಧ್ಯ?. ಅಯೋಧ್ಯೆ. ಕಾಶಿ ಮಥುರಾ ಮೂರು ಕಡೆಗಳಿಂದಲೂ ಅವರು ಹೊರಹೋಗಬೇಕು. ಆಗ ಮಾತ್ರ ಎರಡು ಜನಾಂಗದ ನಡುವೆ ಸೌಹಾರ್ದಯುತ ಸಂಬಂಧ ಸಾಧ್ಯ. ನಾಸ್ತಿಕರನ್ನು (ಅಂದರೆ ಕಮ್ಯುನಿಸ್ಟರು ಮತ್ತು ಸೋಷಲಿಷ್ಟರಂತೆ) ನಂಬಿ ಅವರು ಎಷ್ಟು ದಿನ ಹಾರಾಡಲು ಸಾಧ್ಯ” ಎಂದು ಸಿಂಘಲ್ ಸಿಡಿಯುತ್ತಾರೆ.
ಕರಸೇವಕಪುರದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದರೆ ಮಾರ್ಚ್ 15ರಂದು ಮತ್ತೊಮ್ಮೆ ಅಯೋಧ್ಯೆ ದೇಶದ ಗಮನಸೆಳೆಯುವ ಸಾಧ್ಯತೆ ಸ್ಪಷ್ಟವಾಗಿ ಕಾಣುತ್ತದೆ. ಮಾರ್ಚ್ 15ರ ಹೊತ್ತಿಗೆ 12 ಲಕ್ಷ ರಾಮಸೇವಕರು ಇಲ್ಲಿ ಬರಲಿದ್ದಾರೆ ಎಂದು ವಿಎಚ್ಪಿ ನಾಯಕರು ಹೇಳುತ್ತಿದ್ದಾರೆ. ಅವರು ಅರ್ಧದಲ್ಲಿ ನಿಂತಿರುವ ಕಾರ್ಯ ಪೂರ್ಣಗೊಳಿಸಲು ಹೊರಡಬಹುದೇ?. ವಿಎಚ್ಪಿ ಉದ್ದೇಶ ಅದೇ ಇರಬಹುದೆಂದು ತೋರುತ್ತದೆ.


Monday, November 16, 2015

ಜನನುಡಿ-2015

ನಮ್ಮೆಲ್ಲರ ಪ್ರೀತಿಯ ದೇವನೂರು ಮಹದೇವ ಅವರು ಡಿಸೆಂಬರ್ 19-20ರಂದು ಮಂಗಳೂರಿನಲ್ಲಿ ನಡೆಯಲಿರುವ ಜನನುಡಿಯನ್ನು ಉದ್ಘಾಟಿಸಲು ಕೊನೆಗೂ ಒಪ್ಪಿಕೊಂಡಿದ್ದಾರೆ. 
ನಿನ್ನೆ ಮತ್ತೆ ಮಾತನಾಡುತ್ತಾ 'ಮಾನವೀಯ ನೆಲೆಯಲ್ಲಿ ನನ್ನ ಕೈಬಿಡಿ' ಎಂದು ಕೇಳಿಕೊಂಡರು. 'ಮಾನವೀಯ ನೆಲೆಯಲ್ಲಿಯೇ ನಮ್ಮ ಕೈ ಹಿಡಿಯಿರಿ ' ಎಂದು ಬೇಡಿಕೊಂಡೆ, ಒಪ್ಪಿಕೊಂಡರು.
ಮಹಾಮುಜುಗರದ ಈ ',ಮನುಷ್ಯ' ಇನ್ನು ನಮ್ಮ ಕೈಬಿಡಬಾರದೆಂದು ಈ ಸುದ್ದಿ ಯನ್ನು ಜಗಜ್ಜಾಹೀರುಗೊಳಿಸುತ್ತಿದ್ದೇನೆ.
ಅವರನ್ನು ಇನ್ನೊಂದು ಬಗೆಯ ಮುಜುಗರಕ್ಕೆ ಈಡುಮಾಡಬಾರದೆಂದು ಈ ಬಾರಿ ಖಂಡಿತ ಅವರಿಗೆ ಕಾಣೆಮೀನು ತಿನ್ನಿಸುವುದಿಲ್ಲ ಎಂದು ಆಣೆಮಾಡಿದ್ದೇನೆ. ನನ್ನ ಇಷ್ಟದ, ನಮ್ಮಂತಹವರ ಮೈಬಣ್ಣದ ಮತ್ತು ನಮ್ಮಂತಹವರಿಗೆ ಇಷ್ಟವಾಗುವ ಸುವಾಸನೆ ಬೀರುವ ಬೂತಾಯಿ ತಿನ್ನಿಸಬೇಕೆಂದಿದ್ದೇನೆ.