Monday, March 28, 2011

ಸ್ನಾನದ ಮನೆಯಲ್ಲಿ ಎಲ್ಲರೂ ಬೆತ್ತಲೆ

ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಭ್ರಷ್ಟ ಆಡಳಿತ ಪಕ್ಷಕ್ಕಿಂತ  ಹೆಚ್ಚು ಹಾನಿಕಾರಿ.ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂರು ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಹಾಗೂ ಸ್ವಘೋಷಿತ ನಾಲ್ಕನೇ ಸ್ಥಂಭವಾದ ಪತ್ರಿಕಾರಂಗದ ಜತೆ ವಿರೋಧಪಕ್ಷಕ್ಕೆ ಕೂಡಾ  ಮಹತ್ವದ ಪಾತ್ರ ಇದೆ. ಈ ದೃಷ್ಟಿಯಿಂದ ಇದನ್ನು ಸಂವಿಧಾನದ ‘ಐದನೇ ಸ್ಥಂಭ’ ಎಂದು ಕರೆಯಬಹುದು.
ಆಡಳಿತ ಪಕ್ಷವೊಂದು ಸ್ವಚ್ಛ, ಪ್ರಾಮಾಣಿಕ ಮತ್ತು ಜನಪರವಾಗಿದ್ದಾಗ ಏನೂ ಕೆಲಸವಿಲ್ಲದ ಈ ‘ಐದನೆಯ ಸ್ಥಂಭ’ ದುರ್ಬಲಗೊಂಡರೆ ಅದು ಸಹಜ. ಆದರೆ ನಾವು ಕಾಣುತ್ತಿರುವುದು ತದ್ವಿರುದ್ಧವಾದ ಬೆಳವಣಿಗೆ. ಇಲ್ಲಿ ಆಡಳಿತ ಪಕ್ಷ ಹೆಚ್ಚುಹೆಚ್ಚು ಭ್ರಷ್ಟ, ಅಪ್ರಮಾಣಿಕ ಮತ್ತು ಜನವಿರೋಧಿಯಾಗುತ್ತಿದ್ದಾಗ ಶಕ್ತಿಶಾಲಿಯಾಗಿ ಹೊರಹೊಮ್ಮಬೇಕಾದ ವಿರೋಧಪಕ್ಷಗಳು ಹೆಚ್ಚುಹೆಚ್ಚು ದುರ್ಬಲಗೊಂಡಂತೆ ಕಾಣುತ್ತಿವೆ.ಇದೊಂದು ಪಕ್ಷಾತೀತ ಬೆಳವಣಿಗೆ. ವಿರೋಧ ಪಕ್ಷಗಳಾಗಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್  ಎರಡೂ ಪಕ್ಷಗಳ ವಿಷಯದಲ್ಲಿಯೂ ಇದು ಸತ್ಯ.
ವಿರೋಧ ಪಕ್ಷಗಳು ಹೆಚ್ಚು ದುರ್ಬಲಗೊಳ್ಳತೊಡಗಿದ್ದು ಇತ್ತೀಚಿನ ವರ್ಷಗಳಲ್ಲಿ. ಎರಡು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ವಿರೋಧಪಕ್ಷಗಳ ನಾಯಕರು ದೆಹಲಿಯ ಜನಪಥ ರಸ್ತೆಯ ಹತ್ತನೆ ನಂಬರಿನ ಬಂಗಲೆ ಕಡೆ ಓಡತೊಡಗಿದ್ದರು.ಫಲಿತಾಂಶ ಪ್ರಕಟಣೆಯ ಮೊದಲೇ ಕಾಂಗ್ರೆಸ್ ಗೆಲುವಿನ ವಾಸನೆ ಹಿಡಿದು ಹೋದವರು ಜೆಡಿ (ಎಸ್) ನಾಯಕ ಎಚ್.ಡಿ.ಕುಮಾರಸ್ವಾಮಿ. ಹೇಗೋ ಸುದ್ದಿ ತಿಳಿದು ಕನ್ನಡದ ಟಿವಿ ಚಾನೆಲ್‌ನ ಒಬ್ಬ ವರದಿಗಾರ ಅಲ್ಲಿಗೆ ಓಡಿ ಕ್ಯಾಮೆರಾ ಹಿಡಿದರೆ ಕುಮಾರಸ್ವಾಮಿಯವರು ಕರ್ಚಿಫ್‌ನಿಂದ ಮುಖಮುಚ್ಚಿಕೊಂಡು ಅಲ್ಲಿಂದ ಪಾರಾಗುವ ಪ್ರಯತ್ನ ನಡೆಸಿ ವಿಫಲವಾಗಿದ್ದರು.
ನೋಡುನೋಡುತ್ತಿದ್ದಂತೆಯೇ ತೃತೀಯರಂಗ-ಚತುರ್ಥರಂಗದ ಸೌಧಗಳೆಲ್ಲ ಕುಸಿಯತೊಡಗಿದ್ದವು. ಲಾಲುಪ್ರಸಾದ್,ಮುಲಾಯಂಸಿಂಗ್ ಯಾದವ್, ರಾಮ್‌ವಿಲಾಸ್ ಪಾಸ್ವಾನ್ ಮೊದಲಾದ ತೃತೀಯರಂಗದ ನಾಯಕರು ಪೈಪೋಟಿಯಲ್ಲಿ ಕಾಂಗ್ರೆಸ್ ಮೈಮೇಲೆ ಬಿದ್ದು ಬೆಂಬಲ ಘೋಷಿಸತೊಡಗಿದ್ದರು. ಚುನಾವಣೆಯ ಮೊದಲು ಪ್ರಧಾನಿ ಪಟ್ಟ ಏರಲು ಕನಸಿನ ಆನೆ ಏರಿ ಹೊರಟಿದ್ದ ಮಾಯಾವತಿಯವರು ಕೂಡಾ ಬೇಷರತ್ ಬೆಂಬಲ ಘೋಷಿಸಿ ಕಾಂಗ್ರೆಸ್ ಪಕ್ಷಕ್ಕೆ ಶರಣಾಗಿದ್ದರು.
ಆ ಕಾಲದ ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಬಿಜೆಪಿ ನಾಯಕರೊಬ್ಬರು ದೆಹಲಿಯ ಪಕ್ಷದ ಕಚೇರಿಯಲ್ಲಿ ಪತ್ರಕರ್ತರ ಜತೆ ಮಾತನಾಡುತಾ  ‘ನಮ್ಮ ಪಕ್ಷವೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸುತ್ತದೆಯೇನೋ ಎಂದು ಭಯವಾಗುತ್ತಿದೆ’ಎಂದು ಕುಹಕವಾಡಿದ್ದರು. ಆದರೆ ಅದು ಬರೀ ಕುಹಕವಾಗಿರಲಿಲ್ಲ, ಆಗಲೆ ಬಿಜೆಪಿ ಬಗ್ಗೆ ಒಲವುಹೊಂದಿದ್ದ ಬುದ್ದಿಜೀವಿಗಳ ಗುಂಪೊಂದು ಕಾಂಗ್ರೆಸ್ ಮತ್ತು ಬಿಜೆಪಿ ಕೂಡಿ ಯಾಕೆ ಸರ್ಕಾರ ರಚಿಸಬಾರದು ಎನ್ನುವ ಚರ್ಚೆಗೆ ಚಾಲನೆ ನೀಡಿತ್ತು. ಇಂದು ಕೇಂದ್ರ ಮತ್ತು ರಾಜ್ಯದ ವಿರೋಧಪಕ್ಷಗಳ ಸ್ಥಿತಿ ಅಂದಿಗಿಂತ ಭಿನ್ನವೇನಿಲ್ಲ.ಭ್ರಷ್ಟಾಚಾರದ ಆರೋಪಗಳು ಮತ್ತು ಭಿನ್ನಮತೀಯ ಚಟುವಟಿಕೆಗಳಿಂದಾಗಿ ರಾಜ್ಯದ ಬಿಜೆಪಿ ಸರ್ಕಾರ ಕುಸಿಯತೊಡಗಿದೆ. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರಲ್ಲಿ ಯುದ್ಧಭೂಮಿಗಿಳಿಯುವ ಯೋಧರ ವೀರಾವೇಶ ಕಾಣಬೇಕಿತ್ತು.
ಆದರೆ ದೆಹಲಿ ಕಡೆಯಿಂದ ನಾಯಕರು ಬಂದರೆ ಮೆರೆದಾಡುವ ಕಟೌಟ್‌ಗಳು ಮತ್ತು ಒಂದಷ್ಟು ಕಾರ್ಯಕರ್ತರ ಗೌಜಿಗದ್ದಲ   ಬಿಟ್ಟರೆ ಉಳಿದ ಸಮಯದಲ್ಲಿ ಕೆಪಿಸಿಸಿ ಕಚೇರಿ ಬಿಕೋ ಅನಿಸುತ್ತಿದೆ. ಕಾಂಗ್ರೆಸ್ ನಾಯಕರು ವಾರಕ್ಕೊಮ್ಮೆ ಪತ್ರಿಕಾಗೋಷ್ಠಿ ನಡೆಸಿ ಯಾರೋ ಮಾಡಿರುವ ಆರೋಪಗಳನ್ನು ಪುನರುಚ್ಚರಿಸಿ ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತಾರೆ. ಪತ್ರಕರ್ತರು ಕಾಡಿದರೆ ನಡುನಡುವೆ ಒಂದಷ್ಟು ಪ್ರತಿಕ್ರಿಯೆ ನೀಡುತ್ತಾರೆ. ಯಾರಾದರೂ ಸ್ಥಳೀಯ ಕಾರ್ಯಕರ್ತರು ದುಡ್ಡು-ಶ್ರಮ ಹಾಕಿ ಸಮಾವೇಶಗಳನ್ನು ಮಾಡಿದರೆ ಅಲ್ಲಿಗೆ ಹೋಗಿ ಒಂದಷ್ಟು ಭಾಷಣ ಮಾಡಿ ಬರುತ್ತಾರೆ.
 ಉಳಿದಂತೆ ದೆಹಲಿ ಕಡೆ ಮುಖಮಾಡಿ ಗಡದ್ದಾಗಿ ನಿದ್ದೆ ಮಾಡುತ್ತಾರೆ. ಬಳ್ಳಾರಿ ಕಡೆ ಪಾದಯಾತ್ರೆ ಹೊರಟಾಗ ವ್ಯಕ್ತವಾದ ಸಾರ್ವಜನಿಕ ಪ್ರತಿಕ್ರಿಯೆ ಕಂಡಾಗ ಈ ಸರ್ಕಾರ ಪತನದ ದಿನಗಳ ಎಣಿಕೆ ಪ್ರಾರಂಭವಾಗಿದೆಯೇನೋ ಎಂಬ ಅಭಿಪ್ರಾಯ ಮೂಡಿತ್ತು. ಮತ್ತೆ ಎಲ್ಲ ಯಥಾಸ್ಥಿತಿ. ಜೆಡಿ (ಎಸ್)ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಆಗಾಗ ಹಗರಣಗಳನ್ನು ಬಯಲುಗೊಳಿಸುತ್ತಿರುತ್ತಾರೆ.ಅವರ ‘ಒನ್‌ಮ್ಯಾನ್ ಶೋ’ನಲ್ಲಿ ಆಗಾಗ ಇಂಟರ್‌ವಲ್‌ಗಳಿರುತ್ತವೆ. ಈ ಇಂಟರ್‌ವಲ್‌ಗಳಲ್ಲಿ ಅವರೇನು ಮಾಡುತ್ತಾರೆ ಎನ್ನುವುದೇ ಕುತೂಹಲ.
ಕೇಂದ್ರದಲ್ಲಿ ವಿರೋಧಪಕ್ಷವಾಗಿರುವ ಬಿಜೆಪಿಯದ್ದು ಕಣ್ಣೆತ್ತಿ ಕಾಂಗ್ರೆಸ್ ಕಡೆ ನೋಡಲಾರದ ಸ್ಥಿತಿ. ಕಾಮನ್‌ವೆಲ್ತ್, 2ಜಿ ತರಂಗಾಂತರ, ಆದರ್ಶ ಹೌಸಿಂಗ್ ಕಾರ್ಪೋರೇಷನ್ ಮೊದಲಾದ ಭ್ರಷ್ಟಾಚಾರದ ಹಗರಣಗಳಲ್ಲಿ ಯುಪಿಎ ಸರ್ಕಾರ ಮುಳುಗಿಹೋಗಿದೆ, ಸ್ವಚ್ಛ, ಸಮರ್ಥ ಎಂಬ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಅವರ ಬಿಂಬ ಒಡೆದುಹೋಗಿದೆ. ಈ ಪ್ರತಿಕೂಲ ಬೆಳವಣಿಗೆಗಳನ್ನು ಬಳಸಿಕೊಂಡು ಆಡಳಿತ ಪಕ್ಷವನ್ನು ಮಂಡಿ ಊರುವಂತೆ ಮಾಡಬೇಕಾದ ಬಿಜೆಪಿಯ ಬಾಯಿ ಕಟ್ಟಿಹೋಗಿದೆ. ಯಾಕೆಂದರೆ ಭ್ರಷ್ಟಾಚಾರದ ವಿಷಯ ಎತ್ತಿದ ಕೂಡಲೇ ಆಡಳಿತ ಪಕ್ಷದ ಸದಸ್ಯರು ನಿಮ್ಮ ಯಡಿಯೂರಪ್ಪನವರದ್ದೇನು ಎಂದು ಕೇಳುತ್ತಾರೆ. ಉತ್ತರ ಕೊಡುವ ಸ್ಥಿತಿಯಲ್ಲಿ ಯಾರೂ ಇಲ್ಲ. ಇಂತಹ ಮುಜುಗರಗಳೇ ಬೇಡ ಎಂದುಕೊಂಡು ಆಡಳಿತ ಮತ್ತು ವಿರೋಧಪಕ್ಷಗಳು ಜತೆಗೂಡಿ ವಿಕಿಲೀಕ್ಸ್‌ನಂತಹ ಅಪ್ರಸ್ತುತ ವಿಷಯವನ್ನೆತ್ತಿಕೊಂಡು ಕಾಲಹರಣ ಮಾಡುತ್ತಿವೆ.ಹಿಂದಿನ ವಿರೋಧಪಕ್ಷಗಳು  ಮತ್ತು ಅದರ ನಾಯಕರು ಹೀಗಿರಲಿಲ್ಲ.
ಮುಂದೊಂದು ದಿನ ತಾವೂ ಅಧಿಕಾರಕ್ಕೆ ಬರಬಹುದೆಂದು ಸ್ವಾತಂತ್ರ್ಯಾನಂತರದ  ಮೊದಲು 25 ವರ್ಷಗಳ ಕಾಲ ಯಾವ ವಿರೋಧ ಪಕ್ಷವೂ ಕನಸಿನಲ್ಲಿಯೂ ಯೋಚಿಸಿರಲಿಕ್ಕಿಲ್ಲ.ಮೊದಲ 30ವರ್ಷಗಳ ಕಾಲ ತೆಪ್ಪಗೆ ವಿರೋಧಪಕ್ಷದ ಸ್ಥಾನದಲ್ಲಿ ಕೂತು ಕಾಂಗ್ರೆಸ್‌ನಂತಹ ದೈತ್ಯಪಕ್ಷವನ್ನು ಅವುಗಳು ಎದುರಿಸಿದ್ದವು.
ಆಗಿನ ಕಾಲದ ಬುದ್ದಿಜೀವಿ ಪ್ರಧಾನಿ ಜವಾಹರಲಾಲ ನೆಹರೂ ಅವರಲ್ಲಿಯೂ ಕೀಳರಿಮೆ ಹುಟ್ಟಿಸಬಲ್ಲಂತಹ ಚಿಂತನಶೀಲ ರಾಜಕೀಯ ನಾಯಕರಾದ ಆಚಾರ್ಯ ಕೃಪಲಾನಿ, ರಾಮಮನೋಹರ ಲೋಹಿಯಾ, ಅಶೋಕ್ ಮೆಹ್ತಾ, ಎ.ಕೆ.ಗೋಪಾಲನ್,ಮಿನೂ ಮಸಾನಿ ಮೊದಲಾದ ವಿರೋಧಪಕ್ಷಗಳ ನಾಯಕರಿದ್ದರು. ಭ್ರಷ್ಟತೆ ಬಿಡಿ ಕನಿಷ್ಠ ಆತ್ಮವಂಚನೆಯನ್ನೂ ಈ ನಾಯಕರು ಮಾಡಿಕೊಂಡಿರಲಿಲ್ಲ.
 ವಿರೋಧಿ ಸ್ಥಾನದಲ್ಲಿ ಕೂರಬೇಕಾದ ಪರಿಸ್ಥಿತಿ ಎದುರಾದಾಗ ಹಿಂದಿನ ಕಾಂಗ್ರೆಸ್ ನಾಯಕರು ಕೂಡಾ ವಿಶ್ವಾಸ ಕಳೆದುಕೊಂಡಿರಲಿಲ್ಲ. ವಿರೋಧಪಕ್ಷಗಳಿಗೆ 2009ರ ಚುನಾವಣಾ ಸೋಲು ಎಷ್ಟೇ ಹೀನಾಯವಾಗಿದ್ದರೂ ಅದನ್ನು 1977ರ ಚುನಾವಣೆಯಲ್ಲಿನ ಇಂದಿರಾಗಾಂಧಿ ಸೋಲಿಗೆ ಹೋಲಿಸಲಾಗದು. ಅಧಿಕಾರದಿಂದ ಅಲ್ಲ ಸರ್ವಾಧಿಕಾರದಿಂದ ಮೆರೆದಿದ್ದ ಇಂದಿರಾಗಾಂಧಿಯವರನ್ನು ದೇಶದ ಮತದಾರ ಕಿತ್ತೊಗೆದಿದ್ದ. ಅವರ ಪಕ್ಷದ ಬಲ 352ರಿಂದ 154ಕ್ಕೆ ಇಳಿದಿತ್ತು. ಮಗ ಸಂಜಯಗಾಂಧಿ ಕೂಡಾ ಸೋತುಹೋಗಿದ್ದ.
ಆಯೋಗಗಳ ಮೇಲೆ ಆಯೋಗ, ತನಿಖೆ, ಯಾವಾಗ ಜೈಲಿಗೆ ತಳ್ಳಲಿದ್ದಾರೆ ಎಂಬ ಭೀತಿ, ಸೇಡುತೀರಿಸಿಕೊಳ್ಳುವ ರೀತಿಯಲ್ಲಿ ಮಾಧ್ಯಮಗಳ ದಾಳಿ, ಕೈಬಿಟ್ಟುಹೋದ ಮಿತ್ರರು, ಹೆಚ್ಚಿದ ಶತ್ರುಗಳು.. ಆದರೆ ಇಂದಿರಾಗಾಂಧಿ ಅಂಜಿದ್ದರೇ, ಅಳುಕಿದ್ದರೇ? ಮೂರೇ ಮೂರುವರ್ಷಗಳಲ್ಲಿ ಮರಳಿ ಅಧಿಕಾರಕ್ಕೆ ಬಂದರು. ಅದೂ 1971ರ ಚುನಾವಣೆಗಿಂತಲೂ ಒಂದು ಸ್ಥಾನವನ್ನು ಹೆಚ್ಚುಗಳಿಸಿ. ನುಚ್ಚುನೂರಾಗಿ ಹೋದ ಆಗಿನ ಆಡಳಿತಪಕ್ಷಗಳಲ್ಲಿ ಯಾವುದರ ಸಂಖ್ಯೆಯೂ 50 ದಾಟಿರಲಿಲ್ಲ.
ಕಾಂಗ್ರೆಸ್ ಕತೆ ಬಿಡಿ ಬಿಜೆಪಿಯ ಹಳೆಯ ಕತೆಗೆ ಬರೋಣ. 1984ರ ಚುನಾವಣೆಯಲ್ಲಿ ದೂಳೀಪಟವಾಗಿ ಹೋಗಿದ್ದ ವಿರೋಧ ಪಕ್ಷಗಳಲ್ಲಿ ಬಿಜೆಪಿಯೂ ಇತ್ತು. ಲೋಕಸಭೆಯಲ್ಲಿ ಎರಡೇ ಎರಡು ಸ್ಥಾನ. ವಾಜಪೇಯಿಯವರೇ ಸೋತಿದ್ದರು. ಆದರೆ ಆ ಪಕ್ಷದ ನಾಯಕರಾಗಲಿ, ಕಾರ್ಯಕರ್ತರಾಗಲಿ ಸೋಲು ಒಪ್ಪಿಕೊಂಡಿರಲಿಲ್ಲ. ಅವರು ಹಿಡಿದ ದಾರಿ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಅದರೆ ಹನ್ನೆರಡು ವರ್ಷಗಳ ನಂತರ ಬಿಜೆಪಿ ಸರ್ಕಾರ ರಚಿಸುವ ಸ್ಥಿತಿಗೆ ಬಂದು ತಲುಪಿತ್ತು. ಆ ರಾಜಕೀಯ ಹೋರಾಟ ನಡೆಸಿದ್ದ ಲಾಲ್‌ಕೃಷ್ಣ ಅಡ್ವಾಣಿ ಈಗಲೂ ಇದ್ದಾರೆ.
ಸೋನಿಯಾಗಾಂಧಿ ಎಂಬ ವಿದೇಶಿ ಮಹಿಳೆಯದ್ದು ಇನ್ನೂ ಇತ್ತೀಚಿನ ಕತೆ. ಮೊದಲು ಮೈದುನ, ನಂತರ ಅತ್ತೆ, ಕೊನೆಗೆ ಗಂಡನನ್ನು ಕಳೆದುಕೊಂಡವರು ಅವರು. ಕೆಲವರ್ಷಗಳಲ್ಲಿಯೇ ನೆಹರೂ ಕುಟುಂಬಕ್ಕೆ ಆಧಾರವಾಗಿದ್ದ ಕಾಂಗ್ರೆಸ್ ಪಕ್ಷ ಕೂಡಾ ಅಧಿಕಾರ ಕಳೆದುಕೊಂಡಿತ್ತು. ಕೊನೆಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದು ರಾಜಕೀಯ ಪ್ರವೇಶಿಸಿದ ಸೋನಿಯಾಗಾಂಧಿಯವರ ನೇತೃತ್ವದ ಕಾಂಗ್ರೆಸ್ 1999ರಲ್ಲಿ ಗಳಿಸಿದ್ದು 114 ಸ್ಥಾನಗಳನ್ನು ಮಾತ್ರ. ಇದು ಸೀತಾರಾಂ ಕೇಸರಿ ಎಂಬ ವಯೋವೃದ್ಧನ ನೇತೃತ್ವದಲ್ಲಿ ಎದುರಿಸಿದ 1998ರ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದಕ್ಕಿಂತ 27 ಸ್ಥಾನ ಕಡಿಮೆ. ಅನಂತರದ ಐದು  ವರ್ಷಗಳ ಕಾಲ ಸೋನಿಯಾಗಾಂಧಿಯವರು ರಾಜಕೀಯ ಮತ್ತು ವೈಯಕ್ತಿಕ ದಾಳಿಯನ್ನು ಪಕ್ಷದ ಒಳಗೆ ಮತ್ತು ಹೊರಗೆ ಎದುರಿಸಬೇಕಾಯಿತು. ಇದಕ್ಕೆಲ್ಲ  ಅರ್ಧ ಉತ್ತರವನ್ನು 2004ರ ಚುನಾವಣಾ ಫಲಿತಾಂಶದಲ್ಲಿ ಇನ್ನರ್ಧ ಉತ್ತರವನ್ನು ಪ್ರಧಾನಿ ಪಟ್ಟ ನಿರಾಕರಣೆಯ ಮೂಲಕ ಕೊಟ್ಟರು.
ಹಳೆಯ ಕಾಲದ ವಿರೋಧಪಕ್ಷದ ನಾಯಕರಲ್ಲಿ ಈಗ ಉಳಿದಿರುವವರು ಎಲ್.ಕೆ.ಅಡ್ವಾಣಿ ಮಾತ್ರ. ಹೆಚ್ಚುಕಡಿಮೆ ರಾಜಕೀಯ ಸನ್ಯಾಸ ಸ್ವೀಕರಿಸಿದಂತಿರುವ ಅಡ್ವಾಣಿಯವರು ಮತ್ತೆ ಸಕ್ರಿಯವಾದ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಕಷ್ಟ.ಹೊಸಬರಲ್ಲಿ ಯಾರೂ ಅಡ್ವಾಣಿ, ಇಂದಿರಾಗಾಂಧಿ ಬಿಡಿ, ಕನಿಷ್ಠ ಸೋನಿಯಾಗಾಂಧಿಯವರ ವ್ಯಕ್ತಿತ್ವಕ್ಕೆ ಸಮನಾದ ರಾಜಕೀಯ ನಾಯಕರು ಕಾಣುತ್ತಿಲ್ಲ. ದೀರ್ಘ ಕಾಲ ವಿರೋಧಪಕ್ಷದ ನಾಯಕರಾಗಿ ಕೆಲಸಮಾಡಿರುವ ಎಚ್.ಡಿ.ದೇವೇಗೌಡರಂತಹ ನಾಯಕರು ರಾಜ್ಯದಲ್ಲಿಯೂ ಕಾಣಿಸುತ್ತಿಲ್ಲ. ಯಾಕೆ ಹೀಗಾಗಿ ಹೋಗಿದೆ?
ಇದಕ್ಕೆ ಮುಖ್ಯ ಕಾರಣ-ಅಧಿಕಾರ. ಈಗ ವಿರೋಧಪಕ್ಷದಲ್ಲಿದ್ದವರೆಲ್ಲರೂ ಒಂದಷ್ಟು ವರ್ಷ ಅಧಿಕಾರ ಅನುಭವಿಸಿದವರು, ಮೊದಲ 30 ವರ್ಷಗಳ ಕಾಲ ಅಧಿಕಾರದ ಸಮೀಪ ಹೋಗಲಿಕ್ಕೂ ಆಗದ ವಿರೋಧ ಪಕ್ಷಗಳ ನಾಯಕರಂತಹವರಲ್ಲ. ಅಧಿಕಾರದ ಮಾಯೆಯೇ ಹಾಗೆ, ಒಮ್ಮೆ ಅನುಭವಿಸಿದ ಮೇಲೆ ಹೋರಾಟದ ರಾಜಕೀಯದ ಮೇಲಿನ ಆಸಕ್ತಿ ಕುಂದುತ್ತಾ ಹೋಗುತ್ತದೆ. ಅಧಿಕಾರದ ಸವಿಯನ್ನು ಚಪ್ಪರಿಸಿದ್ದ ನಾಲಿಗೆಯಲ್ಲಿ ನೀರೂರುತ್ತಲೇ ಇರುತ್ತದೆ. ಇನ್ನೊಂದು ಕಾರಣ ನೈತಿಕವಾಗಿ ಇವರನ್ನು ದಿವಾಳಿ ಮಾಡಿರುವ ಭ್ರಷ್ಟಾಚಾರದ ಕಳಂಕ. ಇದು ಅಧಿಕಾರದ ಜತೆಗೆ ಬಂದ ಉಚಿತ ಕೊಡುಗೆ.
ಕೇಂದ್ರದ ಬಿಜೆಪಿ ನಾಯಕರು ಎ.ರಾಜಾನ ಹೆಸರೆತ್ತಿದ ಕೂಡಲೇ ಕಾಂಗ್ರೆಸ್ ನಾಯಕರು ಪ್ರಮೋದ್ ಮಹಾಜನ್, ಅರುಣ್ ಶೌರಿ ಹೆಸರಿಡಿದು ಕೂಗುತ್ತಾರೆ, ಅಶೋಕ್ ಚವಾಣ್ ಹೆಸರೆತ್ತಿದರೆ ಅವರಿಗೆದುರಾಗಿ ಬಿ.ಎಸ್.ಯಡಿಯೂರಪ್ಪನವರನ್ನು ತಂದು ನಿಲ್ಲಿಸುತ್ತಾರೆ. ರಾಜ್ಯದ ಕಾಂಗ್ರೆಸ್ ನಾಯಕರು ಅಕ್ರಮಗಣಿಗಾರಿಕೆ, ಡಿನೋಟಿಫಿಕೇಶನ್ ಹಗರಣಗಳನ್ನೆತ್ತಿದರೆ ಬಿಜೆಪಿ ನಾಯಕರು ಧರ್ಮಸಿಂಗ್,ಎಸ್.ಎಂ.ಕೃಷ್ಣ, ಡಿ.ಕೆ.ಶಿವಕುಮಾರ್ ಮೊದಲಾದವರ ಕಾಲದ ಕತೆಗಳನ್ನು ಕೆದಕುತ್ತಾರೆ. ‘ಹಮಾಮ್ ಮೇ ಸಬ್ ನಂಗಾ ಹೈ’ (ಸ್ನಾನದ ಮನೆಯಲ್ಲಿ ಎಲ್ಲರೂ ಬೆತ್ತಲೆ). ಎಲ್ಲರೂ ತಮ್ಮ ತಮ್ಮ ಕಪಾಟುಗಳಲ್ಲಿ ಅಸ್ಥಿಪಂಜರಗಳನ್ನು ಇಟ್ಟುಕೊಂಡವರು. ಅಧಿಕಾರದಲ್ಲಿದ್ದ ಪಕ್ಷವೇನಾದರೂ ಕಪಾಟಿನ ಬಾಗಿಲು ತೆಗೆದುಬಿಟ್ಟರೆ ಗತಿ ಏನು ಎಂಬ ಭಯ ಚುನಾವಣೆಯಲ್ಲಿ ಸೋತ ಮರುಗಳಿಗೆಯಿಂದಲೇ ಇವರನ್ನು ಕಾಡತೊಡಗುತ್ತದೆ. ಆ ಕ್ಷಣದಿಂದಲೇ ಹೊಂದಾಣಿಕೆಯ ರಾಜಕೀಯ ಪ್ರಾರಂಭವಾಗುತ್ತದೆ. ಇದರಿಂದಾಗಿ ಉಳಿದ ‘ನಾಲ್ಕು ಸ್ಥಂಭ’ಗಳ ಜತೆ ‘ಐದನೇ ಸ್ಥಂಭ’ ಕೂಡಾ ಕುಸಿದುಬೀಳತೊಡಗಿದೆ. ಪ್ರಜಾಪ್ರಭುತ್ವಕ್ಕೆ ಆಧಾರ ಎಲ್ಲಿದೆ?