Monday, August 22, 2011

ಬೀದಿಗಿಳಿದು ಕೂಗಿಕೊಂಡವರಷ್ಟೇ ದೇಶಪ್ರೇಮಿಗಳೇ?

ಕೇಂದ್ರ ಸರ್ಕಾರದ ಮೂರ್ಖತನ ಮತ್ತು ತಥಾಕಥಿತ ನಾಗರಿಕ ಸಮಿತಿಯ ಹಟಮಾರಿತನದ ನಡುವಿನ ಹಗ್ಗಜಗ್ಗಾಟದಲ್ಲಿ ಸಿಕ್ಕಿಹಾಕಿಕೊಂಡು ದೇಶ ಒದ್ದಾಡುತ್ತಿದೆ.
ಸರ್ಕಾರದ ಲೋಕಪಾಲ ಮಸೂದೆಯನ್ನು ವಿರೋಧಿಸುವವರು `ಸಂಸದೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿರೋಧಿಗಳು~ ಎಂದು ಯುಪಿಎ ಆರೋಪಿಸುತ್ತಿದೆ.
ಜನಲೋಕಪಾಲ ಮಸೂದೆಯನ್ನು ಒಪ್ಪದವರೆಲ್ಲ `ಕಾಂಗ್ರೆಸ್ ಏಜೆಂಟ್~ಗಳೆಂದು ನಾಗರಿಕ ಸಮಿತಿ ಲೇವಡಿ ಮಾಡುತ್ತಿದೆ. ಸಂಸತ್‌ನ ಉಭಯ ಸದನಗಳ ಸದಸ್ಯರ ಒಟ್ಟು ಸಂಖ್ಯೆ 790.
ದೇಶದ ಬೇರೆಬೇರೆ ಕಡೆ ನಡೆಯುತ್ತಿರುವ `ಭ್ರಷ್ಟಾಚಾರ ವಿರೋಧಿ ಚಳವಳಿ~ಯಲ್ಲಿ ಪಾಲ್ಗೊಂಡವರ ಸಂಖ್ಯೆಯನ್ನು ಎಷ್ಟೇ ಹಿಗ್ಗಿಸಿದರೂ ಅದು 25 ಲಕ್ಷ ದಾಟಲಾರದು.
120 ಕೋಟಿ ಜನಸಂಖ್ಯೆಯ ದೇಶದಲ್ಲಿ ಈ 25,00,790 ಮಂದಿ ಸೇರಿ ಉಳಿದವರ ಮೇಲೆ ಸವಾರಿ ಮಾಡುತ್ತಿದ್ದಾರೆ. ಈ ಎರಡು ಗುಂಪುಗಳ ಅರ್ಭಟದಲ್ಲಿ ಯಾವ ಗುಂಪಿಗೂ ಸೇರದೆ ಇರುವವರು ದನಿ ಕಳೆದುಕೊಂಡಿದ್ದಾರೆ.
ಉದಾಹರಣೆಗೆ ಪ್ರಧಾನ ಮಂತ್ರಿ ಮತ್ತು ನ್ಯಾಯಮೂರ್ತಿಗಳನ್ನು ಲೋಕಪಾಲರ ವ್ಯಾಪ್ತಿಗೆ ಸೇರಿಸುವುದನ್ನು ಸರ್ಕಾರ ವಿರೋಧಿಸುತ್ತಿದೆ, ಅವರನ್ನು ಸೇರಿಸಬೇಕೆಂದು ನಾಗರಿಕ ಸಮಿತಿ ಹಟ ಹಿಡಿದು ಕೂತಿದೆ.
`ಲೋಕಪಾಲರ ವ್ಯಾಪ್ತಿಯಲ್ಲಿ ಪ್ರಧಾನಿ ಮತ್ತು ನ್ಯಾಯಮೂರ್ತಿಗಳು ಇರಲಿ, ಅವರ ಜತೆ ಕಾರ್ಪೊರೇಟ್ ಕ್ಷೇತ್ರ, ಧಾರ್ಮಿಕ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳೂ (ಎನ್‌ಜಿಒ) ಇರಲಿ ~ ಎಂದರೆ `ನಿಮ್ಮದು ಮೂರನೇ ಗುಂಪೇನು~ ಎಂದು ಉಳಿದೆರಡು ಗುಂಪುಗಳ ನಾಯಕರು ಬಾಯಿಮುಚ್ಚಿಸುವ ಪ್ರಯತ್ನ ಮಾಡುತ್ತಾರೆಯೇ ವಿನಾ ಉತ್ತರ ನೀಡುವುದಿಲ್ಲ.
ಯಾಕೆಂದರೆ ಹೀಗೆ ಪ್ರಶ್ನಿಸುವ ಎರಡೂ ಗುಂಪುಗಳಲ್ಲಿಯೂ ಲೋಕಪಾಲ ಮಸೂದೆಗಳಿಂದ ಹೊರಗಿಟ್ಟಿರುವ ಮೂರು ವರ್ಗಗಳ ಪ್ರತಿನಿಧಿಗಳಿದ್ದಾರೆ. ಅಗತ್ಯ ಸಂಪನ್ಮೂಲ ಮತ್ತು ಕಾರ‌್ಯಕರ್ತರನ್ನು ಪಡೆಯಲು ಚಳವಳಿಗಾರರಿಗೆ ಈ ವರ್ಗಗಳ ನೆರವು ಬೇಕು.
ರಾಜಕಾರಣದ ಇಂತಹದೇ ಅಗತ್ಯಗಳನ್ನು ಕೂಡಾ  ಈ ವರ್ಗಗಳು ಪೂರೈಸುತ್ತವೆ. ರಾಮ್‌ದೇವ್ ಎಂಬ ಯೋಗಗುರುವನ್ನು ಮೊದಲು ತಲೆಮೇಲೆ ಹೊತ್ತುಕೊಂಡು ಮೆರೆದದ್ದೇ ಈ ವರ್ಗಗಳು. ಆ ಮೂರ್ತಿಭಂಜನ ನಡೆದ ನಂತರ ಈಗ ಅಣ್ಣಾ ಹಜಾರೆ ಎಂಬ ಅಮಾಯಕ ಸಮಾಜಸೇವಕನ ಬೆನ್ನ ಹಿಂದೆ ನಿಂತಿವೆ.
ಇವರೆಲ್ಲರೂ ಕೂಡಿ ಸೃಷ್ಟಿಸಿರುವ ಸಮೂಹಸನ್ನಿಯಲ್ಲಿ ಬಹುಸಂಖ್ಯೆಯಲ್ಲಿರುವ `ಮೌನಿ ಮೂರನೇ ವರ್ಗ~ದ್ದು ಮಾತ್ರವಲ್ಲ, ಅರ್ಭಟಿಸುತ್ತಿರುವ ಎರಡು ಗುಂಪುಗಳ ನಾಯಕರ ದನಿಗಳೂ ಉಡುಗಿಹೋಗಿವೆ.
ಪ್ರಾಮಾಣಿಕವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗದ ಅಸಹಾಯಕತೆ ಪ್ರಧಾನಿ ಮನಮೋಹನ್‌ಸಿಂಗ್ ಅವರದ್ದಾದರೆ, ತಿಳುವಳಿಕೆಯ ಕೊರತೆಯಿಂದಾಗಿ ಅನಿವಾರ್ಯವಾಗಿ ಇತರರ ಮೇಲೆ ಅವಲಂಬಿಸಬೇಕಾಗಿರುವ ಅಸಹಾಯಕತೆ ಅಣ್ಣಾ ಹಜಾರೆ ಅವರದ್ದು.
ಮೊದಲನೆಯವರ ಬೆನ್ನ ಹಿಂದೆ `ಅಡಿಯಿಂದ ಮುಡಿ ವರೆಗೆ ಅಣ್ಣಾ ಭ್ರಷ್ಟರು~ ಎಂದು ಹೇಳುತ್ತಿರುವ ಮನೀಷ್ ತಿವಾರಿಯಂತಹ ಬಾಯಿಬಡುಕರು, `ಚಳವಳಿಯ ಹಿಂದೆ ವಿದೇಶಿ ಕೈವಾಡ ಇದೆ~ ಎಂದು ಹೇಳುತ್ತಿರುವ ರಶೀದ್ ದಲ್ವಿ ಅವರಂತಹ ಮೂರ್ಖರು, ಒಬ್ಬ ಸತ್ಯಾಗ್ರಹಿಯನ್ನು ಯಾವ ರೀತಿ ನಡೆಸಿಕೊಳ್ಳಬೇಕೆಂದು ತಿಳಿಯದ ಗೃಹಸಚಿವ ಚಿದಂಬರಮ್ ಅವರಂತಹ ಉದ್ಧಟರು, ಕಪಿಲ್ ಸಿಬಾಲ್ ಅವರಂತಹ ಭಟ್ಟಂಗಿಗಳು ನೆರೆದಿದ್ದಾರೆ.
ಇರುವವರಲ್ಲಿಯೇ ಪ್ರಬುದ್ಧತೆಯಿಂದ ಮಾತನಾಡಬಲ್ಲ ಪ್ರಣಬ್ ಮುಖರ್ಜಿ, ಸಲ್ಮಾನ್ ಖುರ್ಷಿದ್, ಎ.ಕೆ.ಆಂಟನಿ ಅವರ ಮುಖಗಳು ಎಲ್ಲೂ ಕಾಣುತ್ತಿಲ್ಲ. ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ರಕ್ಷಿಸುವುದಕ್ಕಾಗಿ ಭಟ್ಟಂಗಿ ಕೂಟ ಈ ರೀತಿ ಬಹಿರಂಗವಾಗಿ ಸಂಘರ್ಷಕ್ಕೆ ಇಳಿದಿದೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ತಮ್ಮನ್ನು ರಕ್ಷಿಸಿಕೊಳ್ಳಲು ಮನಮೋಹನ್‌ಸಿಂಗ್ ಅವರಿಗೆ ಇವರ ರಕ್ಷಣೆಯ ಅಗತ್ಯ ಇರಲಾರದು.
ಕಾಂಗ್ರೆಸ್ ನಾಯಕರ `ಗುಪ್ತ ಕಾರ್ಯಸೂಚಿ~ ಬೇರೆಯೇ ಇದೆ. ಅದು ಮುಂದೊಂದು ದಿನ ಪ್ರಧಾನಿ ಪಟ್ಟ ಏರಲಿದ್ದಾರೆ ಎಂದು ಅವರು ನಂಬಿರುವ ರಾಹುಲ್ ಗಾಂಧಿಯ ಭವಿಷ್ಯವನ್ನು ಸುರಕ್ಷಿತವಾಗಿಡುವುದು.

ಇನ್ನೂ ಬಾಲಲೀಲೆಯಲ್ಲಿಯೇ ಮೈಮರೆತಿರುವ ರಾಹುಲ್‌ಗಾಂಧಿ ತಮ್ಮ ಕುಟುಂಬದ ಭಟ್ಟಂಗಿಗಳ ಮೂರ್ಖ ನಡವಳಿಕೆಯ ಬೋನಿನಲ್ಲಿ ಬಿದ್ದ ಹಾಗೆ ಕಾಣುತ್ತಿದೆ. ಈಗ ನಡೆಯುತ್ತಿರುವ ಚಳವಳಿಯಲ್ಲಿ ಭಾಗಿಯಾಗಿರುವವರ ಮುಖಗಳನ್ನು ಕಣ್ಣುಬಿಟ್ಟು ನೋಡಿದರೆ ತಾನೇನು ಕಳೆದುಕೊಳ್ಳುತ್ತಿದ್ದೇನೆ ಎಂದು ಈ ಯುವನಾಯಕನಿಗೆ ಅರಿವಾಗಬಹುದು.

ಚಳವಳಿಯಲ್ಲಿ ಭಾಗವಹಿಸುತ್ತಿರುವವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಯುವಕರು. ವರ್ಷ ಕಳೆದಂತೆ ಭಾರತಕ್ಕೆ ಯೌವ್ವನ ಬರುತ್ತಿದೆ. ಈಗಿನ ಒಟ್ಟು ಜನಸಂಖ್ಯೆಯಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಶೇಕಡಾ 65ರಷ್ಟಿದ್ದಾರೆ.
ಮೊನ್ನೆ ಮೊನ್ನೆ ವರೆಗೆ ಮುದಿ ರಾಜಕಾರಣಿಗಳಿಂದ ಬೇಸತ್ತು ಹೋಗಿರುವ ಯುವಸಮೂಹಕ್ಕೆ ರಾಹುಲ್‌ಗಾಂಧಿ ಅನಿವಾರ್ಯ ಎನ್ನುವ ಸ್ಥಿತಿ ಇತ್ತು. ಈ ಯುವ ಸಮೂಹ ಈಗ ಬೀದಿಗಿಳಿದು ಕಾಂಗ್ರೆಸ್ ವಿರೋಧಿ ಘೋಷಣೆ ಕೂಗುತ್ತಿದೆ.
ಲೋಕಪಾಲರ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿಗಳನ್ನು ಸೇರಿಸುವುದಕ್ಕೆ ತಮ್ಮ ಒಪ್ಪಿಗೆ ಇದೆ ಎಂದು ಹೇಳುವಷ್ಟು ಧೈರ್ಯ ಇಲ್ಲದ ಈ ಯುವ ನಾಯಕನನ್ನು ಯುವಜನರಾದರೂ ಯಾಕೆ ಒಪ್ಪಿಕೊಳ್ಳಬೇಕು?
ಆಡಳಿತಾರೂಢ ಪಕ್ಷದಲ್ಲಿರುವಂತೆ ಅಣ್ಣಾ ಟೀಮ್‌ನಲ್ಲಿಯೂ `ಅಣ್ಣಾ ಎಂದರೆ ಇಂಡಿಯಾ~ ಎಂದು ಕೂಗುತ್ತಿರುವ ಕಿರಣ್ ಬೇಡಿಯವರಂತಹ ಬಾಯಿ ಬಡುಕರು, `ರಾಜಕಾರಣಿಗಳೆಲ್ಲ ಕಳ್ಳರು~ ಎಂದು ಹೇಳುತ್ತಿರುವ ಅರವಿಂದ್ ಕೇಜ್ರಿವಾಲಾ ಅವರಂತಹ ಸಿನಿಕರು ಇದ್ದಾರೆ. ಇವರಲ್ಲಿಯೇ ಜವಾಬ್ದಾರಿಯುತರಂತೆ ಕಾಣಿಸುತ್ತಿರುವ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆಯವರಂತಹ ನಿವೃತ್ತ ಲೋಕಾಯುಕ್ತರು ಮತ್ತು ಪ್ರಶಾಂತ್ ಭೂಷಣ್ ಅವರಂತಹ ವಕೀಲರೂ ಇದ್ದಾರೆ. ಇವರಿಬ್ಬರು ಭ್ರಷ್ಟಾಚಾರ ನಿರ್ಮೂಲನೆಗಾಗಿ ಕೆಲಸ ಮಾಡಿ ತೋರಿಸಿ ಕೊಟ್ಟವರು.
ನ್ಯಾ.ಸಂತೋಷ್ ಹೆಗ್ಡೆ ಮತ್ತು ಸಹೋದ್ಯೋಗಿಗಳ ಶ್ರಮದಿಂದಾಗಿ ಮಾಜಿ ಸಚಿವರೊಬ್ಬರು ಜೈಲಲ್ಲಿದ್ದಾರೆ, ಮುಖ್ಯಮಂತ್ರಿಗಳು ಮನೆಗೆ ಹೋಗಿದ್ದಾರೆ.
ಬೋಫೋರ್ಸ್, ನರ್ಮದಾ ಆಣೆಕಟ್ಟು, ಅಕ್ರಮ ಗಣಿಗಾರಿಕೆ ಮೊದಲಾದ ಪ್ರಕರಣಗಳು ಸೇರಿದಂತೆ ಕಳೆದ ಹದಿನೈದು ವರ್ಷಗಳಲ್ಲಿ ಸುಮಾರು 500 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ಹೆಚ್ಚು ಕಡಿಮೆ ಉಚಿತವಾಗಿ ವಕೀಲರಾಗಿ ವಾದ ನಡೆಸಿದವರು ಪ್ರಶಾಂತ್ ಭೂಷಣ್. ಆದರೆ ಟಿವಿ ಚಾನೆಲ್‌ಗಳಲ್ಲಿ, ಪತ್ರಿಕೆಗಳಲ್ಲಿ ಬೇಡಿ ಮತ್ತು ಕೇಜ್ರಿವಾಲ್ ಅವರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವವರು. `ಪ್ರಧಾನಿಯವರನ್ನು ಬೇಕಾದರೆ ಲೋಕಪಾಲರ ವ್ಯಾಪ್ತಿಯಿಂದ ಹೊರಗಿಡುವ~ ಎಂಬ ನ್ಯಾ.ಸಂತೋಷ್ ಹೆಗ್ಡೆ ರಾಜೀಸೂತ್ರವನ್ನು ಈ ದೆಹಲಿ ನಾಯಕರು ಒಪ್ಪುತ್ತಿಲ್ಲ.
  ಒಂದು ಚಳವಳಿಯ ಸೋಲು-ಗೆಲುವು ಅದರ ನಾಯಕತ್ವ, ಉದ್ದೇಶ, ಸಂಘಟನೆ ಮತ್ತು ಹೋರಾಟದ ಮಾರ್ಗವನ್ನು ಅವಲಂಬಿಸಿರುತ್ತದೆ. ಅಣ್ಣಾ ಚಳವಳಿಯ ಉದ್ದೇಶ ಸಾಧುವಾದುದು. ಈ ವರೆಗಿನ ಹೋರಾಟದ ಮಾರ್ಗ ಕೂಡಾ ಜನ ಒಪ್ಪುವಂತಹದ್ದೇ ಆಗಿದೆ. ಆದರೆ ನಾಯಕತ್ವ ಮತ್ತು ಚಳವಳಿಗೆ ಶಕ್ತಿ ತುಂಬಬಲ್ಲ ಸಂಘಟನೆಯಲ್ಲಿನ ದೋಷಗಳು ಈ ಚಳವಳಿಯನ್ನು ಕಾಡುತ್ತಿದೆ.
ಕಿಶನ್ ಬಾಬುರಾವ್ ಹಜಾರೆ ಒಬ್ಬ ಮುಗ್ದ, ಪ್ರಾಮಾಣಿಕ ಸಮಾಜ ಸೇವಕ ಅಷ್ಟೇ. ಅವರ ತಿಳುವಳಿಕೆಯ ಮಟ್ಟ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರಿಗಿಂತ ಹೆಚ್ಚಿಲ್ಲ. ಸಾರ್ವಜನಿಕ ಹೇಳಿಕೆ ನೀಡುವಾಗ ಅಕ್ಕಪಕ್ಕದಲ್ಲಿ ಸಂಭಾಳಿಸಲು ಯಾರಾದರೂ ಇಲ್ಲದೆ ಇದ್ದರೆ ಎಡವಟ್ಟು ಮಾಡಿಕೊಳ್ಳುತ್ತಾರೆ. ಅದು ಅವರ ಮಿತಿ.
ಇದರಿಂದಾಗಿ ಸಂಘಟನೆ ಹಾದಿ ತಪ್ಪುತ್ತಿದೆ. ನಾಯಕತ್ವದ ಈ ದೌರ್ಬಲ್ಯವನ್ನೇ ಬಳಸಿಕೊಂಡು ಬೇರೆಬೇರೆ ಶಕ್ತಿಗಳು ಚಳವಳಿಯ ಒಳ ಪ್ರವೇಶಿಸಿವೆ. 
ಉದಾಹರಣೆಗೆ ಕರ್ನಾಟಕದಲ್ಲಿ ಇದ್ದಕ್ಕಿದ್ದ ಹಾಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಸೇರಿದಂತೆ ಸಂಘ ಪರಿವಾರದ ಸದಸ್ಯರು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಭಾಗವಹಿಸತೊಡಗಿದ್ದಾರೆ.
ಯುವಜನರು-ವಿದ್ಯಾರ್ಥಿಗಳು ಈ ರೀತಿ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಕ್ರಿಯಾಶೀಲರಾಗುವುದು ಒಳ್ಳೆಯ ಬೆಳವಣಿಗೆ. ಆದರೆ ಕಳೆದ ಮೂರುವರ್ಷಗಳಲ್ಲಿ ಇವರೆಲ್ಲಿದ್ದರು? ಪ್ರಕೃತಿಯನ್ನು ದೇವರೆಂದು ಪೂಜಿಸುವ ಈ ಪರಿವಾರದವರು ಅದೇ ಪ್ರಕೃತಿಯನ್ನು ಅಕ್ರಮ ಗಣಿಗಾರಿಕೆ ಮೂಲಕ ಲೂಟಿ ಹೊಡೆಯುತ್ತಿದ್ದಾಗ ಅದರ ವಿರುದ್ಧ ಸೊಲ್ಲೆತ್ತಲಿಲ್ಲ.
ದೇಶದಲ್ಲಿಯೇ ಅತ್ಯಂತ ಭ್ರಷ್ಟ ರಾಜ್ಯ ಕರ್ನಾಟಕ ಎಂದು ರಾಷ್ಟ್ರೀಯ ಮಾಧ್ಯಮಗಳು ಮತ್ತು ನ್ಯಾಯಾಲಯಗಳು ಹೇಳಿದಾಗ ಇವರ‌್ಯಾರು ಸಿಡಿದೆದ್ದು ಬೀದಿಗಿಳಿಯಲಿಲ್ಲ.
ಲೋಕಾಯುಕ್ತರು ಆರೋಪಿ ಎಂದು ಹೇಳಿದ ಮೇಲೂ ರಾಜೀನಾಮೆ ನೀಡಲು ಮೀನಮೇಷ ಎಣಿಸುತ್ತಿದ್ದ ಮುಖ್ಯಮಂತ್ರಿಯವರ ವಿರುದ್ಧ ಕನಿಷ್ಠ ಹೇಳಿಕೆಯನ್ನೂ ನೀಡಲಿಲ್ಲ. `ನೂತನ ಮುಖ್ಯಮಂತ್ರಿಯ ಆಯ್ಕೆಯಲ್ಲಿ ಶಾಸಕರ ಖರೀದಿ ನಡೆದಿದೆ~ ಎಂದು ಬಿಜೆಪಿ ನಾಯಕರೇ ಹೇಳಿದಾಗಲೂ ಅದನ್ನು ಖಂಡಿಸಬೇಕೆಂದು ಇವರಿಗ್ಯಾರಿಗೂ ಅನಿಸಲಿಲ್ಲ.
ಲೋಕಾಯುಕ್ತ ವರದಿಯಲ್ಲಿ ಆರೋಪಿಗಳೆನಿಸಿಕೊಂಡವರು ರಾಜ್ಯ ಸಚಿವ ಸಂಪುಟಕ್ಕೆ ಸೇರಲು ಒತ್ತಡ ಹೇರುವುದನ್ನು ಇವರು ವಿರೋಧಿಸಲಿಲ್ಲ. ಇವೆಲ್ಲ ಭ್ರಷ್ಟಾಚಾರ ಅಲ್ಲವೇನು?
 ಲೋಕಪಾಲರ ನೇಮಕ ಎಂಬುದು ಭವಿಷ್ಯದಲ್ಲಿನ ಭ್ರಷ್ಟಾಚಾರವನ್ನು ತಡೆಯುವ ಒಂದು ಪ್ರಯತ್ನ. ಆದರೆ ಕರ್ನಾಟಕದಲ್ಲಿ ಈಗಾಗಲೇ ಇರುವ ಲೋಕಾಯುಕ್ತರು ಭ್ರಷ್ಟಾಚಾರವನ್ನು ಪತ್ತೆಹಚ್ಚಿ ರಾಜ್ಯಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿರುವವರಿಗೆ ಯಾವುದು ಮುಖ್ಯ? ಕೇಂದ್ರದಲ್ಲಿ ಲೋಕಪಾಲರ ನೇಮಕಕ್ಕಾಗಿ ನಡೆಸುವ ಹೋರಾಟವೇ? ಇಲ್ಲ, ಈಗಾಗಲೇ ನಮ್ಮಲ್ಲಿರುವ ಲೋಕಾಯುಕ್ತರು ಸಲ್ಲಿಸಿರುವ ವರದಿಯ ಆಧಾರದಲ್ಲಿ ಕೈಗೊಳ್ಳುವ ಕ್ರಮವೇ? ಈ ವರದಿಯನ್ನು ತಕ್ಷಣ ಒಪ್ಪಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಎಬಿವಿಪಿ ಕಾರ‌್ಯಕರ್ತರು ರಾಜ್ಯಸರ್ಕಾರದ ಮೇಲೆ ಒತ್ತಡ ಹೇರುವುದಿಲ್ಲ? ಇದಕ್ಕಾಗಿ ಯಾಕೆ ಉಪವಾಸ ಮಾಡಬಾರದು? ಇಂತಹ ಆತ್ಮವಂಚನೆಯ ನಡವಳಿಕೆಯೇ ಅಣ್ಣಾ ಚಳವಳಿಯಲ್ಲಿ ಭಾಗವಹಿಸುತ್ತಿರುವವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತೆ ಮಾಡಿರುವುದು. ಇಂತಹವರೇನು ಈ ಚಳವಳಿಯ ಗೌರವ ಹೆಚ್ಚಿಸುವುದಿಲ್ಲ.
ನಾಲ್ಕು ದಿಕ್ಕುಗಳಿಂದಲೂ ಗುರಿ ಇಟ್ಟಿರುವ ಟಿವಿ ಕ್ಯಾಮೆರಾಗಳ ಈ ಕಾಲದಲ್ಲಿ ಪ್ರಾಮಾಣಿಕರು, ಸಜ್ಜನರು, ದೇಶಪ್ರೇಮಿಗಳು ಎಂದು ತೋರಿಸಿಕೊಳ್ಳುವುದು ಬಹಳ ಸುಲಭ.
ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು, ಮುಖಕ್ಕೂ ಅದರ ಬಣ್ಣ ಬಳಿದುಕೊಂಡು ಕ್ಯಾಮೆರಾ ಮುಂದೆ `ಭಾರತ ಮಾತಾ ಕೀ ಜೈ~ ಎಂದು ಗಂಟಲು ಬಿರಿಯುವ ಹಾಗೆ ಕೂಗಿಕೊಂಡರೆ ಸಾಕು. ಹಗಲಲ್ಲಿ ಕಚೇರಿಗೆ ಹೋಗಬೇಕಾಗಿದ್ದರೆ ಸಂಜೆ ಹೊತ್ತು ಬಂದು ನಾಲ್ಕು ದಾರಿಗಳು ಕೂಡುವಲ್ಲಿ ಕ್ಯಾಂಡೆಲ್ ಹಚ್ಚಿದರೂ ಸಾಕು. ಇನ್ನೂ ಸ್ವಲ್ಪ ಸೃಜನಶೀಲರಾಗಿ ಯೋಚನೆ ಮಾಡುವವರು ಬೀದಿ ಗುಡಿಸುವುದು, ಶೂ ಪಾಲಿಷ್ ಮಾಡುವ ಕೆಲಸ ಮಾಡುತ್ತಾರೆ. ಇವೆಲ್ಲವೂ ಬಹಳ ಸುರಕ್ಷಿತವಾದ ವಿಧಾನ.
ಬಹುಶಃ ಈ ಕಲೆಯನ್ನು ಕಲಿತಿದ್ದರೆ ಭೋಪಾಲದ ಶೆಹಲಾ ಮಸೂದ್ ಎಂಬ ಯುವತಿ ಈಗಲೂ ಬದುಕಿರುತ್ತಿದ್ದಳು, ಅವಳ ತಂದೆ ಮಸೂದ್ ಸಿದ್ದಿಕಿ ವೃದ್ಧಾಪ್ಯದ ಕಾಲದಲ್ಲಿ ಮಗಳನ್ನು ಕಳೆದುಕೊಂಡು ರೋದಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಮಾಹಿತಿ ಹಕ್ಕು ಕಾಯಿದೆಯ ಕಾರ‌್ಯಕರ್ತೆಯಾಗಿದ್ದ ಶೆಹಲಾ ವನ್ಯಮೃಗಗಳ ಹತ್ಯೆ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟದಲ್ಲಿ ತೊಡಗಿದ್ದಳು. ಅದಕ್ಕಾಗಿ ಜೀವತೆತ್ತಳು.
ಈ ರೀತಿಯ ಹೋರಾಟದಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಈಕೆ ಮೊದಲನೆಯವಳೇನಲ್ಲ, ಗುಜರಾತ್‌ನ ಗಿರ್ ಅರಣ್ಯಪ್ರದೇಶದಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟದಲ್ಲಿ ತೊಡಗಿದ್ದ ಪರಿಸರವಾದಿ ಅಮಿತ್ ಜೆಟ್ವಾ ಅವರನ್ನು ಗುಜರಾತ್ ಹೈಕೋರ್ಟ್ ಮುಂಭಾಗದಲ್ಲಿಯೇ ಗುಂಡಿಟ್ಟು ಕೊಲ್ಲಲಾಗಿತ್ತು.
ಪುಣೆ ಸಮೀಪದ ತಾಲೆಗಾಂವ್‌ನಲ್ಲಿನ ದಕ್ಷಿಣ ಕನ್ನಡ ಮೂಲದ ಸತೀಶ್ ಶೆಟ್ಟಿ, ಮಹಾರಾಷ್ಟ್ರದ ದತ್ತಾತ್ರೇಯ ಪಾಟೀಲ್, ಔರಂಗಾಬಾದ್‌ನ ವಿಠ್ಠಲ್ ಗೀತೆ, ಆಂಧ್ರಪ್ರದೇಶದ ಸೋಲಾ ರಂಗರಾವ್....ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ಪರಿಸರ ನಾಶ ಮೊದಲಾದವುಗಳ ವಿರುದ್ಧ ಹೋರಾಟ ನಡೆಸಿ ಪ್ರಾಣ ಕಳೆದುಕೊಂಡವರ ಪಟ್ಟಿ ದೊಡ್ಡದಿದೆ.
ಇವರ‌್ಯಾರೂ ಬೀದಿಗಿಳಿದು ತಾವು ದೇಶಪ್ರೇಮಿಗಳೆಂದು ಪ್ರದರ್ಶಿಸಿಕೊಳ್ಳಲಿಲ್ಲ, ಅನಾಮಿಕರಾಗಿ ಅನ್ಯಾಯದ ವಿರುದ್ದ ಹೋರಾಟ ನಡೆಸಿದರು, ಅನಾಮಿಕರಾಗಿಯೇ ಮರೆಯಾಗಿ ಹೋದರು. ಟಿವಿ ಕ್ಯಾಮೆರಾ ಮುಂದೆ ಕೂಗಾಡುತ್ತಿರುವ ಭ್ರಷ್ಟಾಚಾರದ ವಿರುದ್ಧದ `ಉಗ್ರ ಹೋರಾಟಗಾರರನ್ನು~ ಕಂಡಾಗ ಇವರೆಲ್ಲ ನೆನಪಾಗುತ್ತಿದ್ದಾರೆ.