Saturday, September 24, 2016

ಕಾವೇರಿ ವಿವಾದ ಮುಂದೇನಾಗಬಹುದು?

ಮುಂದೇನಾಗಬಹುದು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿಗಳು ಆತಂಕದಿಂದ, ವಿರೋಧಿಗಳು ಖುಷಿಯಿಂದ ಕೇಳುತ್ತಿದ್ದಾರೆ. ಅಭಿಮಾನಿಗಳ ಆತ್ಮಸಂತೋಷಕ್ಕಾಗಿ, ವಿರೋಧಿಗಳ ಆತ್ಮಶಾಂತಿಗಾಗಿ ನನಗೆ ಹೊಳೆದದ್ದನಿಷ್ಟು ಹೇಳುತ್ತಿದ್ದೇನೆ.
ಸಾಧ್ಯತೆ 1. ಉದ್ದೇಶಪೂರ್ವಕವಾಗಿ ಆದೇಶ ಪಾಲನೆ ಮಾಡದಿರುವ ನಿರ್ಧಾರವಾಗಿರುವ ಕಾರಣ ಇದು ನ್ಯಾಯಾಂಗ ನಿಂದನೆ ಆಗಲಾರದು ಎನ್ನುವುದನ್ನು ಸುಪ್ರೀಂಕೋರ್ಟ್ ಒಪ್ಪಿಕೊಳ್ಳಬಹುದು. ಕೇಂದ್ರ ಸರ್ಕಾರವೂ ಕರ್ನಾಟಕದ ರಕ್ಷಣೆಗೆ ನಿಲ್ಲಬಹುದು. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕರ್ನಾಟಕ ಸರ್ಕಾರದ ನಡವಳಿಕೆಯನ್ನು ಸ್ವೀಕರಿಸಿ ತನ್ನ ಆದೇಶದ ಮಾರ್ಪಾಟಿಗೆ ಒಪ್ಪಿಕೊಳ್ಳಬಹುದು.
ಸಾಧ್ಯತೆ 2. ಸುಪ್ರೀಂಕೋರ್ಟ್ ಯಾವ ರಿಯಾಯಿತಿಯನ್ನು ತೋರಿಸದೆ ಕೇವಲ ಸಂವಿಧಾನದ 141 ಮತ್ತು 142ನೇ ಪರಿಚ್ಛೇದದ ಆಶಯವನ್ನಷ್ಟೇ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಮತ್ತು ಮುಖ್ಯಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕ್ರಿಯೆಗೆ ಚಾಲನೆ ನೀಡಬಹುದು.
ನ್ಯಾಯಾಂಗನಿಂದನೆ ಪ್ರಕಿಯೆ ಪ್ರಾರಂಭವಾದರೆ ಏನಾಗಬಹುದು?
ಸಾಧ್ಯತೆ 1: ಮುಖ್ಯಮಂತ್ರಿಗಳು ಮತ್ತು ಮುಖ್ಯಕಾರ್ಯದರ್ಶಿಯವರು ತಮ್ಮ ಮುಂದೆ ಹಾಜರಾಗಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಬಹುದು. ಇಬ್ಬರೂ ಆದೇಶಕ್ಕೆ ತಲೆಬಾಗಿ ಆದೇಶ ಉಲ್ಲಂಘನೆಗಾಗಿ ಕ್ಷಮೆಕೇಳಿ ಪಾರಾಗಬಹುದು. (ಹಿಂದೆಲ್ಲ ನಡೆದಿರುವಂತೆ)
ಸಾಧ್ಯತೆ 2: ಕ್ಷಮೆ ಕೇಳದೆ ವಿಧಾನಮಂಡಲ ಕೈಗೊಂಡಿರುವ ಸಾಮೂಹಿಕ ನಿರ್ಣಯಕ್ಕೆ ಬದ್ಧತೆಯನ್ನು ಘೋಷಿಸಬಹುದು.
ಕ್ಷಮೆ ಕೇಳಿ ತಪ್ಪೊಪ್ಪಿಕೊಳ್ಳದೆ ಆದೇಶದ ಉಲ್ಲಂಘನೆ ಮಾಡಿದರೆ ಏನಾಗಬಹುದು?
- ಸುಪ್ರೀಂಕೋರ್ಟ್ ಸಂವಿಧಾನದ 356ನೇ ಪರಿಚ್ಛೇದದಡಿ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸುಮಾಡಿ, ಅದರ ಮೂಲಕ ನೀರು ಬಿಡಬೇಕೆಂಬ ತನ್ನ ಆದೇಶದ ಅನುಷ್ಠಾನಕ್ಕೆ ಮುಂದಾಗಬಹುದು.
- ರಾಷ್ಟ್ರಪತಿ ಆಳ್ವಿಕೆಯ ಹೇರಬೇಕಾದರೆ ಅಂತಿಮವಾಗಿ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸಚಿವ ಸಂಪುಟ ತೀರ್ಮಾನಕೈಗೊಳ್ಳಬೇಕಾಗುತ್ತದೆ.
- ಅಂತಹದ್ದೊಂದು ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡರೆ (ನನ್ನ ದೃಡವಾದ ಭಾವನೆ ಪ್ರಕಾರ ಇಂತಹ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಳ್ಳಲಾರದು) ಅಲ್ಲಿಂದ ರಾಜಕೀಯದಾಟ ಶುರುವಾಗುತ್ತದೆ.
- ನೀರು ಬಿಡುವುದಿಲ್ಲ ಎಂದು ಸಾರಿ ಜೈಲಿಗೆ ಹೋಗಲು ಸಿದ್ದರಾದ ಮುಖ್ಯಮಂತ್ರಿಗಳು ಮತ್ತು ಮುಖ್ಯಮಂತ್ರಿಯನ್ನು ಜೈಲಿಗಾದರೂ ಕಳಿಸಿ ನೀರು ಬಿಡಲು ಹೊರಟ ಪ್ರಧಾನಮಂತ್ರಿ. ಆರು ತಿಂಗಳ ನಂತರ ರಾಷ್ಟ್ರಪತಿ ಆಳ್ವಿಕೆ ಕೊನೆಗೊಂಡು ಮಧ್ಯಂತರ ಚುನಾವಣೆ ಎದುರಾದಾಗ ಮತದಾರರ ಮುಂದೆ ಇರಬಹುದಾದ ಎರಡು ಆಯ್ಕೆ ಇದು.
ಇಂತಹದ್ದೊಂದು ಅತಿರೇಕದ ಸಾಧ್ಯತೆ ನಿಜವಾದರೆ ಚುನಾವಣೆ ನಡೆಯುವ ಮೊದಲೇ ಫಲಿತಾಂಶವನ್ನೂ ಹೇಳಿಬಿಡಬಹುದು.
ಅಂತಹದ್ದೊಂದು ಅತಿರೇಕದ ಸ್ಥಿತಿ ನಿರ್ಮಾಣವಾಗಿ ಅಪರೂಪಕ್ಕೆ ರಾಜ್ಯದ ಹಿತಾಸಕ್ತಿಯ ರಕ್ಷಣೆಗಾಗಿ ರಾಜ್ಯದಲ್ಲಿ ಸ್ಥಾಪನೆಗೊಂಡಿರುವ ರಾಜಕೀಯ ಪಕ್ಷಗಳ ನಡುವಿನ ಸೌಹಾರ್ದತೆ ಹಾಳಾಗದಿರಲಿ ಎಂದು ಪ್ರಾಮಾಣಿಕವಾಗಿನಾನು ಆಶಿಸುತ್ತೇನೆ.

Friday, September 23, 2016

ಒಮ್ಮೊಮ್ಮೆ ಇತಿಹಾಸದ ಭಾಗವಾಗುವ ಅವಕಾಶ

ಇತಿಹಾಸಕ್ಕೆ ಸಾಕ್ಷಿಯಾಗುವುದು ಇದ್ದೇ ಇರುತ್ತದೆ, ಒಮ್ಮೊಮ್ಮೆ ಇತಿಹಾಸದ ಭಾಗವಾಗುವಂತಹ ಅವಕಾಶವೂ ಒದಗಿಬರುತ್ತದೆ. ಇಂದು ಸಂಜೆ ವಿಧಾನಸಭೆಯ ವಿಶೇಷ ಅಧಿವೇಶನ ಮುಗಿಸಿ ನಿರ್ಗಮಿಸುತ್ತಿದ್ದಾಗ ಒಂದು ಕ್ಷಣ ಇಂತಹದ್ದೊಂದು ಭಾವನೆ ನನ್ನೊಳಗೆ ಸುಳಿದಾಡಿದ್ದು ನಿಜ.  ಹೌದು ನನಗೆ ಸಿಕ್ಕಾಪಟ್ಟೆ ಖುಷಿಯಾದಾಗ ನಾನು ಏನು ಮಾಡ್ತೇನೆ ಎನ್ನುವುದು ನನ್ನನ್ನು ಪ್ರೀತಿಸುವ, ದ್ವೇಷಿಸುವ ಎಲ್ಲ ಸ್ನೇಹಿತರಿಗೂ ಈಗ ಗೊತ್ತಾಗಿಬಿಟ್ಟಿದೆ. ಆದರೇನು ಮಾಡುವುದು? ಮನೆಯಲ್ಲಿ ಫ್ರಿಜ್ ಖಾಲಿಯಾಗಿತ್ತು, ಮಾರ್ಕೆಟ್ ಬಂದ್ ಆಗಿತ್ತು. ನಾಳೆ ಹುಡುಕಿಕೊಂಡು ಹೋಗಬೇಕು ನನ್ನಿಷ್ಟದ ಕಾಣೆಮೀನಿಗಾಗಿ.

Tuesday, September 20, 2016

ಕೆಲವರ ಜತೆ ಜಗಳಮಾಡಿದರೂ ನಮಗೆ ಲಾಭ ಇದೆ.

ಕಾವೇರಿ ನೀರು ಹಂಚಿಕೆಯ ಕುರಿತ ದೇವೇಗೌಡರ ಕೆಲವು ನಿಲುವುಗಳ ಬಗ್ಗೆ ನನಗೆ ತಕರಾರಿದೆ. ಆದರೆ ನೀರಾವರಿ ವಿಷಯದಲ್ಲಿ ಅವರ ಜ್ಞಾನ ನನ್ನನ್ನು ಬೆರಗುಗೊಳಿಸಿದೆ. ಕೆಲವರ ಜತೆ ಜಗಳಮಾಡಿದರೂ ನಮಗೆ ಲಾಭ ಇದೆ. ಅಂತಹವರಲ್ಲಿ ಒಬ್ಬರು ಗೌಡರು. ಇದು ನನ್ನ ಅನುಭವ.ಕೆಲವು ವಿಷಯಗಳನ್ನು ಹೇಳಬೇಕೋ ಬೇಡವೋ ಎನ್ನುವುದು ನನಗೆ ಇನ್ನೂ ಗೊತ್ತಿಲ್ಲ, ಹೇಳಿಯೇ ಬಿಡುತ್ತೇನೆ..15000 ಕ್ಯುಸೆಕ್ಸ್ ನೀರುಹರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ದಿನದಿಂದ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಗಳ ಜತೆ ಸಂಪರ್ಕದಲ್ಲಿದ್ದಾರೆ. ಒಮ್ಮೊಮ್ಮೆ ದಿನಕ್ಕೆರಡು ಬಾರಿ ಮಾತನಾಡಿದ್ದಾರೆ. ಈ ಮಾತುಕತೆ ೧೫ ನಿಮಿಷಕ್ಕಿಂತ ಮೊದಲು ಕೊನೆಗೊಂಡಿದ್ದೇ ಕಡಿಮೆ.

Sunday, September 18, 2016

ಆಫ್ ಕಿ ಅದಾಲತ್'ಮುಂಬೈನಲ್ಲಿ ಭಯೋತ್ಪಾದಕರು ದಾಳಿ ನಡೆಸಿದಾಗ 'ಇಂಡಿಯಾ ಟಿವಿ' ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಜತೆ ನಡೆಸಿದ್ದ ' ಆಫ್ ಕಿ.ಅದಾಲತ್'
ಪ್ರಶ್ನೆ:.೨೬/೧೧ ನಡೆದ ಕಾಲದಲ್ಲಿ ನೀವಿದ್ದರೆ ಏನು ಮಾಡ್ತಿದ್ದೀರಿ?
ಮೋದಿ: ನಾನು ಗುಜರಾತ್ ನಲ್ಲಿ ಏನು ಮಾಡಿದ್ದೇನೋ ಅದನ್ನೇ ಮಾಡ್ತಿದ್ದೆ. ನಾನು ವಿಳಂಬ ಮಾಡ್ತಿರಲಿಲ್ಲ.
- ನಾನು ಈಗಲೂ ಹೇಳ್ತಿದ್ದೇನೆ, ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡ್ಬೇಕು. ಲವ್ ಲೆಟರ್ ಬರೆಯೊದನ್ನು ನಿಲ್ಲಿಸ್ಬೇಕು.
- ಪಾಕಿಸ್ತಾನ ನಮ್ಮ ಮೇಲೆ ದಾಳಿ ನಡೆಸಿ ಓಡಿಹೋಗುತ್ತೆ. ಪ್ರಣಬ್ ಮುಖರ್ಜಿ ಅಮೆರಿಕಾಕ್ಕೆ ಹೋಗಿ ' ಒಬಾಮ, ಒಬಾಮ' ಎಂದು ಅಳುತ್ತಾರೆ.
- ಹೋಗುವುದಿದ್ದರೆ ಪಾಕಿಸ್ತಾನಕ್ಕೆ ಹೋಗಿ ಅಮೆರಿಕಾಕ್ಕೆ ಯಾಕೆ ಹೋಗ್ತೀರಿ?
- ಅಮೆರಿಕಾಕ್ಕೆ ಪತ್ರ ಬರೆಯುವುದಂತೆ, ಅವರು ಪ್ರಶ್ನೆ ಕೇಳುವುದಂತೆ, ನಾವು ಉತ್ತರಕೊಡುವುದಂತೆ. ನಿಲ್ಲಿಸಿ, ಇದನ್ನೆಲ್ಲ...
https://www.facebook.com/dinesh.amin.353/videos/10206056012674464/