Tuesday, June 30, 2015

ಕೌಸರ್ ಬಾನು ನೆನಪಲ್ಲಿ ಕರಗಿಹೋದ ಸೆಲ್ಪಿ ಸಂಭ್ರಮ

ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಯ ಮೇರೆಗೆ ನಮ್ಮ ಅನೇಕ ಸ್ನೇಹಿತರು ಮಗಳ ಜತೆ ತೆಗೆಸಿಕೊಂಡ ಸೆಲ್ಪಿಗಳನ್ನು ನೋಡಿದಾಗ ಖುಷಿಯಾಗುತ್ತದೆ.ಈ ಚಿತ್ರಗಳನ್ನೆಲ್ಲ ನೋಡುತ್ತಿದ್ದಾಗ ನನಗೂ ನನಗಿರುವ ಒಬ್ಬಳೇ ಮಗಳ ಜತೆ ಸೆಲ್ಪಿ ತೆಗೆದು ಪ್ರಧಾನಿಯವರಿಗೆ ಕಳುಹಿಸಿಕೊಡಬೇಕೆನಿಸಿತು. ಹಾಗೆಂದು ಯೋಚಿಸಿದಾಕ್ಷಣ ನುಗ್ಗಿಬಂದು ದಾಳಿಮಾಡುತ್ತಿವೆ ಹಾಳು ನೆನಪುಗಳು. ನಮ್ಮ ಬಹಳಷ್ಟು ಯುವಜನರು ಯಾಕೆ ಇಷ್ಟೊಂದು ಖುಷಿಯಲ್ಲಿರುತ್ತಾರೆಂದರೆ ಅವರಿಗೆ ಇತಿಹಾಸದ ನೆನಪುಗಳಿರುವುದಿಲ್ಲ. ನನ್ನಂತಹ ಸ್ವಲ್ಪ ಹಿರಿಯರು ಅವರಂತೆ ಸದಾ ನಗುನಗುತ್ತಾ ಖುಷಿಖುಷಿಯಾಗಿರಲು ಸಾಧ್ಯವಾಗದೆ ‘ಸಿನಿಕ’ರೆಂದು ಕರೆಸಿಕೊಳ್ಳುತ್ತಾ ನರಳಾಡುತ್ತಿರುವುದು ಯಾಕೆಂದರೆ ನಮ್ಮಲ್ಲಿ ಕಾಡುವ ನೆನಪುಗಳಿರುತ್ತವೆ.
ಸೆಲ್ಪಿ ಸಂಭ್ರಮದಲ್ಲಿ ನಮ್ಮ ಅನೇಕ ಸ್ನೇಹಿತರು ಮೈಮರೆತಿರುವಾಗ ಯಾವುದೋ ನೆನಪುಗಳ ಕಾಟದಿಂದಾಗಿ ನಿದ್ದೆಬಾರದೆ ಬೆಳಗಾವಿಯ ಹೊಟೇಲ್ ನ ಹಾಸಿಗೆಯಲ್ಲಿ ಹೊರಳಾಡಿ ಮುಂಜಾನೆ ನಾಲ್ಕುಗಂಟೆಗೆ ಎದ್ದು ಇದನ್ನು ಬರೆಯಲುಕೂತಿರುವೆ.
ಸೆಲ್ಪಿ ಸಂಭ್ರಮದ ನಡುವೆ ನನ್ನನ್ನು ಕಾಡುತ್ತಿರುವ ಮಹಿಳೆ ಆಗಿನ್ನೂ 22ರ ಹರಯದವಳಾಗಿದ್ದ ಹೀನಾ ಕೌಸರ್ ಅಲಿಯಾಸ್ ಕೌಸರ್ ಬಾನು. ಆಕೆಯ ಹೊಟ್ಟೆಯಲ್ಲಿದ್ದ ಮಗು ಬದುಕಿದ್ದರೆ ಕಳೆದ ಭಾನುವಾರಕ್ಕೆ ಅದಕ್ಕೆ ಹದಿಮೂರು ವರ್ಷ ಐದು ತಿಂಗಳಾಗುತ್ತಿತ್ತು, ಕೌಸರ್ ಬಾನು ಕೂಡಾ ತನ್ನ ಮಗಳ ಜತೆ ಸೆಲ್ಪಿ ತೆಗೆದು ನರೇಂದ್ರ ಮೋದಿಯವರಿಗೆ ಕಳುಹಿಸಿಕೊಡುತ್ತಿದ್ದಳೋ ಏನೋ? ಆದರೆ ಹಾಗಾಗಲಿಲ್ಲ.
‘ಚೋಟಾ ಕರ್ನಾಟಕ’ ಎಂದೇ ಕರೆಯಲಾಗುವ ಅಹ್ಮದಾಬಾದ್ ನ ನರೋಡಾ ಪಾಟಿಯಾದಲ್ಲಿ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ರಿಕ್ಷಾಚಾಲಕ ಫಿರೋಜ್ ಮತ್ತು ಕೌಸರ್ ಬಾನು ಬಡತನದಲ್ಲಿಯೂ ನೆಮ್ಮದಿಯಾಗಿದ್ದರು. 2002ರ ಫೆಬ್ರವರಿ 28ರಂದು ಗುಜರಾತ್ ನಲ್ಲಿ ಕೋಮುಹಿಂಸಾಚಾರ ಭುಗಿಲೆದ್ದಾಗ ಫಿರೋಜ್ ಮನೆಯಲ್ಲಿರಲಿಲ್ಲ. ‘ಸೀಮಂತ’ಕ್ಕೆ ಬಂದಿದ್ದ ಕೌಸರ್ ತಂದೆ,ಸಹೋದರ್ ಜಾಹಿದ್, ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಮನೆಯಲ್ಲಿದ್ದರು. ಆ ದಿನ ನರೋಡಾ ಪಾಟಿಯಾದ ಫಿರೋಜ್ ಮನೆಗೆ ನುಗ್ಗಿದ್ದ ದುರುಳರು ಮನೆಯಲ್ಲಿದ್ದವರನ್ನೆಲ್ಲ ಹೊರಗೆಳೆದು ತಂದಿದ್ದಾರೆ. ದುರುದ್ದೇಶವಿಟ್ಟುಕೊಂಡಿದ್ದ ದುರುಳರು ಕೌಸರ್ ತುಂಬು ಗರ್ಭಿಣಿಯೆಂದು ಗೊತ್ತಾದಾಗ ಇನ್ನಷ್ಟು ಕೆರಳಿರಬಹುದು. ಆ ಸಿಟ್ಟಿನಲ್ಲಿಯೇ ಆಕೆಯ ಹೊಟ್ಟೆಯನ್ನು ಸೀಳಿದ್ದಾರೆ, ಆ ಇರಿತಕ್ಕೆ ಭ್ರೂಣ ಹೊರಬಂದಿದೆ. ಅದರ ನಂತರ ಆಕೆಯನ್ನು ಬೆಂಕಿಗೆ ಎಸೆದಿದ್ದಾರೆ. 

ಓಡೋಡುತ್ತಾ ಬಂದ ಗಂಡ ಕಂಡದ್ದು ಹೆಂಡತಿಯ ಅರ್ಧಸುಟ್ಟ ನಗ್ನದೇಹ. ಆ ಹಿಂಸಾಕಾಂಡದಲ್ಲಿ ಫಿರೋಜ್ ತಂಗಿ, ಮಾವ, ಕೌಸರ್ ಬಾನು ಸೋದರನ ಪತ್ನಿ ಮತ್ತು ಇಬ್ಬರು ಮಕ್ಕಳು ಕೂಡಾ ಪ್ರಾಣ ಕಳೆದುಕೊಂಡಿದ್ದರು. ಈ ಕುಟುಂಬ ಕರ್ನಾಟಕ ಮೂಲದ್ದು. ಅಹ್ಮದಾಬಾದ್ ನಲ್ಲಿಯೇ ಇದ್ದ ಕೌಸರ್ ಬಾನು ತಂದೆ ಪ್ರಾಣ ಬೆದರಿಕೆಯ ಕಾರಣದಿಂದಾಗಿ ವರ್ಷಗಳ ಹಿಂದೆಯೇ ಕರ್ನಾಟಕಕ್ಕೆ ಹಿಂದಿರುಗಿದ್ದರು. ... ಇಷ್ಟೆಲ್ಲ ನಡೆಯುತ್ತಿರುವಾಗ ಗುಜರಾತ್ ಎಂಬ ರಾಜ್ಯದಲ್ಲಿ, ಈಗಿನ “ಬೇಟಿ ಬಚಾವೋ’ ಆಂದೋಲನದ ನೇತರಾರರೂ ಮತ್ತು ಈ ದೇಶದ ಪ್ರಧಾನಿಗಳೂ ಆಗಿರುವ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದರು. 'ರಾಜಧರ್ಮ' ಪಾಲಿಸು ಎಂದು ಅವರ ಪಕ್ಷದ ಹಿರಿಯರೂ ಮತ್ತು ಆಗಿನ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಕೂಗಿಕೂಗಿ ಹೇಳುತ್ತಿದ್ದರೂ ಮೋದಿ ಕಿವುಡಾಗಿದ್ದರು.

ಈ ನೆನಪುಗಳನ್ನು ಹೊತ್ತುಕೊಂಡು ನಾನು ನನ್ನ ಮಗಳೊಂದಿಗೆ ಸೆಲ್ಪಿ ತೆಗೆಸಿ ಪ್ರಧಾನಿಗೆ ಹೇಗೆ ಕಳುಹಿಸಲಿ? ನನ್ನ ಸ್ನೇಹಿತರ ಸೆಲ್ಪಿ ಸಂಭ್ರಮದಲ್ಲಿ ಹೇಗೆ ಕೂಡಿಕೊಳ್ಳಲಿ. ತುರ್ತಾಗಿ ನನಗೆ ನೆಮ್ಮದಿಯ ನಿದ್ದೆ ಬೇಕಾಗಿದೆ. ಗುಡ್ ಮಾರ್ನಿಂಗ್.

1 comment: