Wednesday, July 1, 2015

ಬಾಪು ನಾಡಿನಲ್ಲಿ ಸತ್ಯವನ್ನು ಶೋಧಿಸುತ್ತಾ.... ( ಅನಾವರಣ, ಪ್ರಜಾವಾಣಿ, ಏಪ್ರಿಲ್ 12, 2010)

ನರೇಂದ್ರಮೋದಿ ರಾಜ್ಯಭಾರದ ಇತಿಹಾಸದ ಹೊಟ್ಟೆ ಬಗೆಯುವುದು ಕೂಡಾ ಬೀಭತ್ಸವಾದುದು. ದೇವರನ್ನು ನಂಬುವವರಾಗಿದ್ದರೆ ‘ತಪ್ಪಿತಸ್ಥರಿಗೆ ದೇವರೇ ಶಿಕ್ಷೆ ನೀಡಲಿ’ ಎಂದು ಹಾರೈಸಿ ಸುಮ್ಮನಿರುವುದರಲ್ಲಿಯೇ ಮನಃಶಾಂತಿ ಇದೆ. ಆದರೆ ಇತಿಹಾಸದ ಹೊಟ್ಟೆಯಿಂದಲೇ ವರ್ತಮಾನ ಹುಟ್ಟಿರುವುದರಿಂದ ಇತಿಹಾಸವನ್ನು ಮರೆಯುವುದೂ ಕಷ್ಟ.
ಇತಿಹಾಸಕ್ಕೆ ಸಾಕ್ಷಿಯಾದವರಿಗೆ ಅದು ಇನ್ನೂ ಕಷ್ಟ. ಮರೆಯಬೇಕೆನಿಸಿದರೂ ಸಮಯ-ಸಂದರ್ಭ ನೆನಪಿಸಿಕೊಳ್ಳುವಂತೆ ಮಾಡುತ್ತದೆ. ‘ಎರಡು ಸಾವಿರ ಜನರ ಸಾವಿಗೆ ವಿಷಾದವಾದರೂ ಬೇಡವೇ’ ಎಂಬ ನನ್ನ ಅಂಕ-ಣಕ್ಕೆ(ಮಾರ್ಚ್.29)ಹಿರಿಯಪತ್ರಕರ್ತ ಎಚ್. ಎನ್.ಆನಂದ್ ಅವರು ನೀಡಿರುವ ಪ್ರತಿಕ್ರಿಯೆ ಇಂತಹದ್ದೊಂದು ಸಂದರ್ಭವನ್ನು ಸೃಷ್ಟಿಸಿದೆ.

‘ಗುಜರಾತ್ ಕೋಮುಗಲಭೆಯಲ್ಲಿ ಹತ್ಯೆಗೀಡಾದ ಕೌಸರ್‌ಬಾನು ಹೊಟ್ಟೆಯಲ್ಲಿದ್ದ ಭ್ರೂಣ ಸುರಕ್ಷಿತವಾಗಿತ್ತು ಎಂದು ಅವರ ಮರಣೋತ್ತರ ಪರೀಕ್ಷೆ ನಡೆಸಿದ್ದ ಸರ್ಕಾರಿ ವೈದ್ಯ ಡಾ.ಜೆ.ಎಸ್ಕನೋರಿಯಾ ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಹೇಳಿದ್ದಾರೆ. ನೀವು ಬೇರೆಯೇ ಬರೆದಿದ್ದೀರಿ. ಯಾರನ್ನು ನಂಬುವುದು?’ ಎನ್ನುವುದು ಆನಂದ್ ಅವರಲ್ಲಿ ಹುಟ್ಟಿರುವ ಜಿಜ್ಞಾಸೆ.
‘ಕರ್ನಾಟಕಕ್ಕಿಂತ ಹೆಚ್ಚು ಗುಜರಾತ್ ಸುತ್ತಿರುವ, 2002ರ ಕೋಮುಗಲಭೆ ಮಾತ್ರವಲ್ಲ ಅಲ್ಲಿನ ಎರಡು ವಿಧಾನಸಭಾ ಚುನಾವಣೆಗಳ ಕಾಲದಲ್ಲಿ ಪ್ರತ್ಯಕ್ಷವಾಗಿ ತೆರಳಿ ವರದಿ ಮಾಡಿ ಆ ರಾಜ್ಯವನ್ನು ತಕ್ಕಮಟ್ಟಿಗೆ ತಿಳಿದುಕೊಂಡಿರುವ ನಿಮ್ಮ ಹಳೆಯ ಸಹೋದ್ಯೋಗಿಯಾದ ನನ್ನನ್ನೇ ನಂಬಿಬಿಡಿ ಸಾರ್’ ಎಂದು ಅವರಿಗೆ ನಮ್ರನಾಗಿ ಉತ್ತರಿಸಿ ಸುಮ್ಮನಿರಬಹುದಿತ್ತೋ ಏನೋ?
ಆದರೆ ಈ ರೀತಿ ಹುಟ್ಟಿಕೊಂಡ ಪ್ರಶ್ನೆಗಳಿಂದ ತೊಳಲಾಡುತ್ತಿರುವ ಇತರರ ಮನಃಶಾಂತಿಗಾಗಿಯಾದರೂ ಗುಜರಾತ್ ಕೋಮುಗಲಭೆಯ ರಕ್ತಸಿಕ್ತ ಇತಿಹಾಸದ ಪುಟಗಳನ್ನು ತಿರುವಿಹಾಕಿ ಕೆಲವು ಸತ್ಯಗಳನ್ನು ಅನಾವರಣಗೊಳಿಸಬೇಕಾಗಿದೆ.ಮೋದಿಯವರ ಬಗ್ಗೆ ಬರೆದ ಅಂಕಣಕ್ಕೆ ಪ್ರತಿಕ್ರಯಿಸಿದ ಕಿರಿಯ ಮಹಿಳಾ ಸಹದ್ಯೋಗಿಯೊಬ್ಬರು ‘ನೀವು ಬಿಲ್ಕಿಸ್ ಬಾನು ಬಗ್ಗೆಯೂ ಬರೆಯಬೇಕಿತ್ತು’ ಎಂದಿದ್ದರು. ನಮ್ಮ ಬಹಳಷ್ಟು ಜಾಗೃತ, ಸ್ವಾಭಿಮಾನಿ ಮತ್ತು ಸಾಹಸಿ ಹೆಣ್ಣುಮಗಳ ಪಾಲಿನ ‘ಹೀರೊಯಿನ್’ ಈ ಬಿಲ್ಕಿಸ್ ಬಾನು.
ಗುಜರಾತ್ ಕೋಮುಗಲಭೆಯ ಸಂದರ್ಭದಲ್ಲಿ ಹೆದರಿ ಊರು ಬಿಟ್ಟು ಓಡಿಹೋಗುತ್ತಿದ್ದವರನ್ನು ಬೆನ್ನಟ್ಟಿಕೊಂಡು ಬಂದ ದುಷ್ಕರ್ಮಿಗಳು ನಡುದಾರಿಯಲ್ಲಿ ಅಡ್ಡಹಾಕಿ ಬಿಲ್ಕಿಸ್ಬಾನು ಮತ್ತು ಆಕೆಯ ತಾಯಿ ಸೇರಿದಂತೆ ನಾಲ್ವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಕೈಗೆ ಸಿಕ್ಕವರನ್ನೆಲ್ಲ ಸಾಯಿಸಿದ್ದರು. ಊರುಬಿಟ್ಟ ಹದಿನಾರು ಮಂದಿಯಲ್ಲಿ ಉಳಿದುಕೊಂಡವರು ಮೂವರು ಮಾತ್ರ. ದುರ್ಬಲ ಮನಸ್ಸಿನ ಹೆಣ್ಣುಮಕ್ಕಳಾದರೆ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೋ ಏನೋ? ಆದರೆ ಮೈ-ಮನಸ್ಸು ತುಂಬಾ ಗಾಯಗಳಾಗಿದ್ದರೂ ಹಿಂಜರಿಯದ ಬಿಲ್ಕಿಸ್‌ಬಾನು ಬದುಕುಳಿದ ತನ್ನ ಮೂರುವರ್ಷದ ಮಗನನ್ನು ಕಟ್ಟಿಕೊಂಡು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು.
ಅನಕ್ಷರಸ್ಥೆಯಾದ ಬಿಲ್ಕಿಸ್‌ಬಾನು ಹೇಳಿದ್ದೇ ಒಂದು, ಪೊಲೀಸರು ಬರೆದುಕೊಂಡದ್ದೇ ಇನ್ನೊಂದು. ಎರಡು ದಿನಗಳ ನಂತರ ಪತ್ರಿಕೆ¬ಯೊಂದು ಬಿಲ್ಕಿಸ್‌ಬಾನು ಕುಟುಂಬದ ಎಂಟು ಸದಸ್ಯರ ಕೊಳೆತುಹೋದ ಶವಗಳ ಚಿತ್ರ ಪ್ರಕಟಿಸಿದಾಗ ಪೊಲೀಸರು ಹೋಗಿ ವೈದ್ಯರಿಂದ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಕೆಲವು ತಿಂಗಳುಗಳ ನಂತರ ಪೊಲೀಸರು ‘ನಡೆದಿದ್ದು ನಿಜ, ಪತ್ತೆಯಾಗಿಲ್ಲ’ ಎಂದು ಹೇಳಿ ಪ್ರಕರಣವನ್ನು ಮುಚ್ಚಿಹಾಕಿದ್ದರು. ಅದನ್ನು ಒಪ್ಪದ ಬಿಲ್ಕಿಸ್‌ಬಾನು ಈ ಪ್ರಕರಣದ ಮರುತನಿಖೆ ನಡೆಸುವಂತೆ ಕೋರಿ ಸುಪ್ರೀಂ-ಕೋರ್ಟ್‌ಗೆ ಮೊರೆ ಹೋದರು. ಮರುತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಿದ ಸುಪ್ರೀಂಕೋರ್ಟ್ ಅದರ ವಿಚಾರಣೆಯನ್ನು ಮುಂಬೈ ಹೈಕೋರ್ಟ್ ಉಸ್ತುವಾರಿಯ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು.
ಹೂತಿದ್ದ ಶವಗಳನ್ನೆಲ್ಲ ಹೊರತೆಗೆಸಿ ಮರು ಮರಣೋತ್ತರ ಪರೀಕ್ಷೆ ನಡೆಸಿದ ಸಿಬಿಐ ‘ಆರು ಮಂದಿ ಪೊಲೀಸರು ಹಾಗೂ ಮೊದಲ ಮರಣೋತ್ತರ ಪರೀಕ್ಷೆ ನಡೆಸಿದ್ದ ಇಬ್ಬರು ವೈದ್ಯರು ಷಾಮೀಲಾಗಿ ಆರೋಪಿಗಳನ್ನು ಬಚಾವು ಮಾಡಲು ಸಾಕ್ಷ್ಯಗಳನ್ನೆಲ್ಲಾ ನಾಶಮಾಡಿದ್ದಾರೆ’ ಎಂದು ಆರೋಪ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಮುಂಬೈನ ವಿಶೇಷ ನ್ಯಾಯಾಲಯ 20 ಆರೋಪಿಗಳಲ್ಲಿ ಹನ್ನೊಂದು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಬಿಲ್ಕಿಸ್‌ಬಾನು ಕುಟುಂಬದ ಮೃತ ಸದಸ್ಯರ ಮೊದಲ ಮರಣೋತ್ತರ ಪರೀಕ್ಷೆ ನಡೆಸಿದ್ದ ಇಬ್ಬರು ಸರ್ಕಾರಿ ವೈದ್ಯರನ್ನು ನಂಬುವುದಾದರೆ ಕೌಸರ್ಬಾನು ಮರಣೋತ್ತರ ಪರೀಕ್ಷೆ ನಡೆಸಿದ್ದ ಡಾ.ಕನೋರಿಯಾ ಅವರನ್ನೂ ನಂಬಬಹುದೇನೋ? ಆದರೆ ಸುಪ್ರೀಂಕೋರ್ಟ್ ಕೂಡಾ ಗುಜರಾತ್‌ನ ಸರ್ಕಾರಿ ವೈದ್ಯರು ಮತ್ತು ಪೊಲೀಸರನ್ನು ಮಾತ್ರವಲ್ಲ ಅಲ್ಲಿನ ಮುಖ್ಯಮಂತ್ರಿಯವರನ್ನೇ ನಂಬಲಿಲ್ಲ. ಇದಕ್ಕಾಗಿಯೇ ಅಲ್ಲವೇ ಬೆಸ್ಟ್ ಬೇಕರಿ ಮತ್ತು ಬಿಲ್ಕಿಸ್‌ಬಾನು ಪ್ರಕರಣಗಳನ್ನು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದ್ದು.
ಕೋಮುಗಲಭೆಯ ಕಾಲದಲ್ಲಿ ದಾಖಲಾಗಿದ್ದ 4,252 ಪ್ರಕರಣಗಳಲ್ಲಿ 2000 ಪ್ರಕರಣಗಳನ್ನು ಪೊಲೀಸರು ಕೈಬಿಟ್ಟಿದ್ದರೆನ್ನುವುದು ಗಮನಾರ್ಹ. ಈ ರೀತಿ ಮುಚ್ಚಿಹಾಕಲಾದ ಪ್ರಕರಣಗಳ ಮರುತನಿಖೆ ನಡೆಸುವಂತೆ ಗುಜರಾತ್ ಸರ್ಕಾರಕ್ಕೆ ಆದೇಶ ನೀಡಿದ್ದ ಸುಪ್ರೀಂಕೋರ್ಟ್ ಇದಕ್ಕಾಗಿಯೇ ವಿಶೇಷ ತನಿಖಾ ದಳವನ್ನು ರಚಿಸಿದೆ. ಇತ್ತೀಚೆಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಜರಾಗಿದ್ದು ಇದೇ ತನಿಖಾದಳದ ಮುಂದೆ. ಒಂದು ರಾಜ್ಯದ ಸರ್ಕಾರವನ್ನೇ ಸುಪ್ರೀಂಕೋರ್ಟ್ ನಂಬದಿರುವಾಗ ಅಲ್ಲಿನ ಒಬ್ಬ ಸರ್ಕಾರಿ ವೈದ್ಯನನ್ನು ನಂಬುವುದು ಹೇಗೆ ಸಾಧ್ಯ?
ಗುಜರಾತ್‌ನಲ್ಲಿ ಆಮಿಷ ಇಲ್ಲವೇ ಬೆದರಿಕೆ ಮೂಲಕ ಹೇಗೆ ಸಾಕ್ಷಿಗಳ ಬಾಯಿ ಮುಚ್ಚಿಸಲಾಗುತ್ತಿದೆ ಎನ್ನುವುದಕ್ಕೆ ಬೆಸ್ಟ್‌ಬೇಕರಿ ಹತ್ಯಾಕಾಂಡ ಒಳ್ಳೆಯ ಉದಾಹರಣೆ. ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಜಾಹೀರಾ ಶೇಖ್ ಬರೋಡಾ ಸೆಷನ್ಸ್ ನ್ಯಾಯಾಲಯದ ಮುಂದೆ ತಿರುಗಿಬಿದ್ದಿದ್ದಳು. (ಸುಳ್ಳು ಸಾಕ್ಷಿ ಹೇಳಲು ಆಕೆಗೆ ಹದಿನೆಂಟು ಲಕ್ಷ ರೂಪಾಯಿ ನೀಡಿದ್ದಾಗಿ ಬಿಜೆಪಿ ಶಾಸಕ ಮಧು ಶ್ರೀವಾಸ್ತವ ತೆಹೆಲ್ಕಾ ಪತ್ರಿಕೆಯ ‘ಕುಟುಕು ಕಾರ್ಯಾರಚಾರಣೆ’ಯಲ್ಲಿ ಒಪ್ಪಿಕೊಂಡಿದ್ದರು).
ಅಲ್ಲಿ ಸುಳ್ಳುಹೇಳಿದ್ದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಒಪ್ಪಿಕೊಂಡ ಜಾಹೀರಾ ಶೇಖ್, ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಮತ್ತೆ ತನ್ನ ಮೂಲ ಹೇಳಿಕೆಯನ್ನೇ ಸಮರ್ಥಿಸಿಕೊಂಡಳು. ಆದರೆ ಇದನ್ನು ನಂಬದ ವಿಶೇಷ ನ್ಯಾಯಾಲಯ ಗುಜರಾತ್‌ನ ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದ್ದ ಎಂಟು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿತಲ್ಲದೆ ಜಾಹೀರಾಳನ್ನು ‘ಸುಳ್ಳು ಸಾಕ್ಷಿ’ (ಪರ್ಜುರ್)ಯ ಅಪರಾಧಕ್ಕಾಗಿ ಜೈಲಿಗೆ ಕಳುಹಿಸಿತು.
ಗುಜರಾತ್ ಕೋಮುಗಲಭೆಯ ಪ್ರಕರಣಗಳನ್ನು ಕೆದಕುತ್ತಾ ಹೋದರೆ ಅಲ್ಲಿನ ರಾಜಕಾರಣಿಗಳು ಮತ್ತು ಅಧಿಕಾರಿಗಳು ಷಾಮೀಲಾಗಿ ನ್ಯಾಯಕ್ಕೆ ಬಗೆದ ಇಂತಹ ದ್ರೋಹದ ಕತೆಗಳು ಒಂದೊಂದಾಗಿ ಹೊರಬೀಳುತ್ತವೆ.ಗುಜರಾತ್‌ನ ಅಂದಿನ ಪರಿಸ್ಥಿತಿ ಹೇಗಿತ್ತೆಂದರೆ ಒಬ್ಬ ಅಧಿಕಾರಿ ಪ್ರಾಮಾಣಿಕವಾಗಿ ವೃತ್ತಿಧರ್ಮ ಪಾಲನೆ ಮಾಡಲು ಹೊರಟರೂ ಅದು ಸಾಧ್ಯ ಇರಲಿಲ್ಲ. ಇದಕ್ಕೆ ಕೋಮುಗಲಭೆಯ ಕಾಲದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಆರ್.ಬಿ.ಶ್ರೀಕುಮಾರ್ ಸಾಕ್ಷಿ.
ಕೋಮುಗಲಭೆಯ ಕಾಲದಲ್ಲಿ ಇಡೀ ಆಡಳಿತ ವ್ಯವಸ್ಥೆ ಹೇಗೆ ಮುಸ್ಲಿಮರ ವಿರುದ್ಧವಾಗಿತ್ತೆಂಬ ಬಗ್ಗೆ ಶ್ರೀಕುಮಾರ್ ಗಲಭೆ ನಡೆದ ಮೂರು ತಿಂಗಳ ನಂತರ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅದರಲ್ಲಿ ಹೇಳಿದದನ್ನೇ ಕೋಮುಗಲಭೆಯ ತನಿಖೆಗೆ ನೇಮಿಸಲಾಗಿದ್ದ ನಾನಾವತಿ-ಶಹಾ ಆಯೋಗದ ಮುಂದೆ ಶ್ರೀಕುಮಾರ್ ಹೇಳಿದರೆ ಏನು ಗತಿ ಎಂದು ಗಾಬರಿಯಾದ ಸರ್ಕಾರ ಅವರ ಮೇಲೆ ನಾನಾಬಗೆಯ ಒತ್ತಡ ಹೇರಿತ್ತು.
ಗೃಹ ಕಾರ್ಯ ದರ್ಶಿ ಜಿ.ಸಿ.ಮುರ್ಮು ಮತ್ತು ಸರ್ಕಾರಿ ವಕೀಲ ಅರವಿಂದ್ ಪಾಂಡ್ಯ ಅವರು ಶ್ರೀಕುಮಾರ್ ಅವರನ್ನು ಕರೆಸಿ ನಾನಾವತಿ ಆಯೋಗದ ಮುಂದೆ ‘ಏನು ಹೇಳಬೇಕು ಮತ್ತು ಏನು ಹೇಳಬಾರದು’ ಎಂಬ ಬಗ್ಗೆ ಬೋಧನೆ ಮಾಡಿದ್ದರು. ಹೇಳಿದಂತೆ ಕೇಳದಿದ್ದರೆ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ ಎನ್ನುವ ಬೆದರಿಕೆಯೂ ಬೋಧನೆಯಲ್ಲಿತ್ತು. ಇದನ್ನೆಲ್ಲ ಮೊದಲೇ ನಿರೀಕ್ಷಿಸಿದ್ದ ಶ್ರೀಕುಮಾರ್ ಆ ಸಂಭಾಷಣೆಯನ್ನು ರಹಸ್ಯವಾಗಿ ಧ್ವನಿಮುದ್ರಿಸಿಕೊಂಡು ನಂತರ ಪತ್ರಿಕೆಗಳಿಗೆ ಬಿಡುಗಡೆ ಮಾಡಿದಾಗ ನರೇಂದ್ರಮೋದಿ ಸರ್ಕಾರ ಬತ್ತಲಾಗಿತ್ತು.
ಬೆಸ್ಟಬೇಕರಿ ಮತ್ತು ಬಿಲ್ಕಿಸ್‌ಬಾನು ಪ್ರಕರಣ ಸೇರಿದಂತೆ ಪೊಲೀಸರು ಕೈಬಿಟ್ಟ ಪ್ರಕರಣಗಳ ಮರುತನಿಖೆಗೆ ಆದೇಶ ನೀಡಿದವರು ಸುಪ್ರೀಂಕೋರ್ಟ್‌ನ ಆಗಿನ ಮುಖ್ಯನ್ಯಾಯಮೂರ್ತಿ ವಿ.ಎನ್.ಖರೆ ಅವರು. ಕೋಮು-ಗಲಭೆಯಲ್ಲಿ ಬಲಿಯಾದವರಿಗೆ ಒಂದಷ್ಟು ನ್ಯಾಯಸಿಕ್ಕಿದ್ದರೆ ಅದು ಈ ಖರೆ ಎಂಬ ಪುಣ್ಯಾತ್ಮನಿಂದಾಗಿ. ‘ಗುಜರಾತ್ ಸರ್ಕಾರ ಮತ್ತು ಪ್ರಾಸಿಕ್ಯೂಷನ್ ಮೇಲೆ ನನಗೆ ನಂಬಿಕೆ ಉಳಿದಿಲ್ಲ. ನೀವು ಜನರನ್ನು ರಕ್ಷಿಸಬೇಕು, ತಪ್ಪಿತಸ್ಥರನ್ನು ಶಿಕ್ಷಿಸಬೇಕು.
ಇದಲ್ಲದೆ ಮತ್ತೆ ಯಾವುದು ರಾಜಧರ್ಮ? ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಸಾಧ್ಯವಾಗದಿದ್ದರೆ ಅಧಿಕಾರದಿಂದ ಕೆಳಗಿಳಿಯಿರಿ, ಅದೇನು ಸ್ವಂತ ಆಸ್ತಿಯಲ್ಲ. ಜನರಿಗೆ ರಕ್ಷಣೆ ನೀಡಲಾಗದಿದ್ದರೆ ನೀವು ಅಧಿಕಾರದಲ್ಲಿ ಮುಂದುವರಿಯುವಂತಿಲ್ಲ...’ ಎಂದು 2003ರ ಸೆಪ್ಟೆಂಬರ್ ಹನ್ನೆರಡರಂದು ಮುಖ್ಯನ್ಯಾಯಮೂರ್ತಿಗಳು ತುಂಬಿದ ನ್ಯಾಯಾಲಯದಲ್ಲಿ ನರೇಂದ್ರಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ನಿವೃತ್ತಿಯಾದ ನಂತರ ಅವರು ಬರೆಯುತ್ತಾರೆ: ‘....ಸರ್ಕಾರವೊಂದಕ್ಕೆ ಮೂರು ಜವಾಬ್ದಾರಿಗಳಿರುತ್ತವೆ.ಮೊದಲನೆಯದು ಜನತೆಗೆ ಜಾತಿ-ಧರ್ಮದ ಭೇದವಿಲ್ಲದೆ ರಕ್ಷಣೆ ನೀಡುವುದು, ಎರಡನೆಯದು ಕಾನೂನು ಮುರಿದವರನ್ನು ಶಿಕ್ಷಿಸುವುದು ಮೂರನೆಯದು ಅನ್ಯಾಯ ಹಿಂಸೆಗೆ ಬಲಿಯಾದವರಿಗೆ ಪರಿಹಾರ ಕಲ್ಪಿಸುವುದು. ರಸ್ತೆ ನಿರ್ಮಿಸುವುದು, ಶಿಕ್ಷಣ ನೀಡುವುದು ಎಲ್ಲವೂ ಮುಖ್ಯ ಎನ್ನುವುದು ಸರಿ, ರಕ್ಷಣೆ ಇಲ್ಲದ ಜನತೆ ಈ ಸೌಲಭ್ಯಗಳನ್ನು ಕಟ್ಟಿಕೊಂಡು ಏನು ಮಾಡಬೇಕು?’
ಕೊನೆಯದಾಗಿ ವಿವಾದಾತ್ಮಕ ಕೌಸರ್‌ಬಾನು ಹತ್ಯೆ ಪ್ರಕರಣ. ಇದರಲ್ಲಿ ಮುಖ್ಯ ಆರೋಪಿಗಳು ಇಬ್ಬರು. ಒಬ್ಬ ರತಿಲಾಲ್ ರಾಥೋಡ್ ಅಲಿಯಾಸ್ ಭವಾನಿಸಿಂಗ್ ಎಂಬ ಗುಜರಾತ್ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್, ಇನ್ನೊಬ್ಬ ಬಾಬು ಬಜರಂಗಿ ಎಂಬ ವಿಶ್ವಹಿಂದೂ ಪರಿಷತ್ ನಾಯಕ. ಎರಡು ವರ್ಷಗಳ ಹಿಂದೆ ‘ಕುಟುಕು ಕಾರ್ಯಾಚರಣೆ’ಯಲ್ಲಿ ತೊಡಗಿದ್ದ ತೆಹೆಲ್ಕಾ ಪತ್ರಿಕೆಯ ವರದಿಗಾರನೆದುರು ಬಾಬು ಬಜರಂಗಿ ನರೋಡಾ ಪಾಟಿಯಾದಲ್ಲಿನ ತನ್ನ ‘ಸಾಹಸ’ಗಳನ್ನು ಕೊಚ್ಚಿಕೊಂಡಿದ್ದ. ‘. ಏಕ್ ವೋ ಪ್ರೆಗ್ನೆಂಟ್ ತಿ, ಉಸ್ಕೊ ಹಮೆ ಚೀರ್ ದೀಯಾ ತಾ...’ ಎಂದು ಹೇಳಿಕೊಂಡಿದ್ದ.
ಹಾಗಿದ್ದರೆ ಡಾ.ಕನೋರಿಯಾ ಮರಣೋತ್ತರ ಪರೀಕ್ಷೆ ನಡೆಸಿದ್ದು ಯಾರದ್ದು? ನಿಜವಾಗಿ ನಡೆದದ್ದೇನು ಎಂದು ಇನ್ನೊಬ್ಬ ಆರೋಪಿಯಾದ ಭವಾನಿಸಿಂಗ್‌ನನ್ನಾದರೂ ಕೇಳೋಣವೆಂದರೆ ಆತನನ್ನು ಎಲ್ಲಿ ಹುಡುಕುವುದು? ಐದು ವರ್ಷಗಳ ಹಿಂದೆ ಗಾಂಧಿನಗರದ ನರ್ಮದಾ ಕಾಲುವೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಪಾಪ ಪ್ರಜ್ಞೆಯಿಂದಾಗಿ ಹುಚ್ಚನಂತೆ ಆಡುತ್ತಿದ್ದ ಭವಾನಿಸಿಂಗ್ ಆತ್ಮಹತ್ಯೆ ಮಾಡಿಕೊಂಡ ಎನ್ನುವವರಿದ್ದಾರೆ. ಅದು ಆತ್ಮಹತ್ಯೆ ಅಲ್ಲ, ತಪ್ಪೊಪ್ಪಿಗೆ ಮಾಡಬಹುದೆಂಬ ಭಯದಿಂದ ಆತನನ್ನು ಸಾಯಿಸಲಾಗಿದೆ ಎಂದು ಹೇಳುವವರೂ ಇದ್ದಾರೆ. ಸತ್ಯ ಸಾವು ಕಂಡರಲ್ಲವೇ ಸುಳ್ಳು ಬದುಕುವುದು. ಸತ್ಯಕ್ಕೆ ಸಾವಿಲ್ಲ ಎಂದವರು ಯಾರು?

No comments:

Post a Comment