Friday, August 24, 2012

ಬೂದಿ ಮುಚ್ಚಿದ ಕೆಂಡದಂತೆ ಸುಡುತ್ತಿರುವ ವಲಸೆ ಸಮಸ್ಯೆ August 20, 2012

ಯಾರೋ ಕಿಡಿಗೇಡಿಗಳು ಹಚ್ಚಿದ ಗಾಳಿಮಾತಿನ ಕಿಡಿಗಳಲ್ಲಿ ತಮ್ಮನ್ನು ಸುಟ್ಟುಬಿಡುವ ಬೆಂಕಿಯನ್ನು ಕಂಡು ಬೆದರಿ ಬೆಂಗಳೂರು ಬಿಟ್ಟು ಓಡಿಹೋಗಿರುವ ಈಶಾನ್ಯ ರಾಜ್ಯದ ಜನರು ಮುಂದಿನ ದಿನಗಳಲ್ಲಿ ಮರಳಿ ಬರಬಹುದು. ತಾವು ಊರು ಬಿಟ್ಟು ಹೋಗುವಂತಹ ಭಯಾನಕ ಪರಿಸ್ಥಿತಿ ಬೆಂಗಳೂರಿನಲ್ಲಿ ಇಲ್ಲ ಎನ್ನುವುದು ನಿಧಾನವಾಗಿ ಅರಿವಾಗಿ ಅವರು ಪಶ್ಚಾತಾಪಪಡಲೂ ಬಹುದು.
 
ಈ ಭಯಭೀತ ವಾತಾವರಣದ ನಿರ್ಮಾಣಕ್ಕೆ ಕಾರಣರಾದವರನ್ನು ಪೊಲೀಸರು ಬಂಧಿಸಿ ಸಂಚನ್ನು ಬಯಲುಮಾಡಿದರೆ ಮುಖ್ಯಮಂತ್ರಿಗಳು ಮತ್ತು ಅವರ ಸಹೊದ್ಯೋಗಿಗಳು ನೀಡಿರುವ ಆಶ್ವಾಸನೆಯನ್ನು ಅವರು ನಂಬಲೂಬಹುದು. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸದೆ ಇದ್ದರೆ ತಮ್ಮನ್ನು ತಾವೇ ಸಮಾಧಾನಪಡಿಸಿಕೊಂಡು ಇದೊಂದು ದುಃಸ್ವಪ್ನ ಎಂದು ಅವರು ಮರೆತುಬಿಡಬಹುದು. ಇಷ್ಟಕ್ಕೆ ಎಲ್ಲ ಸಮಸ್ಯೆಗಳು ಶಾಶ್ವತ ಪರಿಹಾರ ಕಂಡು ವಲಸೆ ಬಂದವರು ಮತ್ತು ಸ್ಥಳೀಯರು ಹಾಲುಜೇನಿನಂತೆ ಒಂದಾಗಿ ನೂರುಕಾಲ ನೆಮ್ಮದಿಯಿಂದ ಬಾಳ್ವೆಮಾಡಬಹುದೇ?

ಪೊಲೀಸರ ತನಿಖೆ, ಅಪರಾಧಿಗಳ ಪತ್ತೆ, ರಾಜ್ಯದ ರಾಜಕಾರಣಿಗಳೆಲ್ಲ ಕೂಡಿ ನೀಡಿರುವ ಭದ್ರತೆಯ ಆಶ್ವಾಸನೆ ...ಇವೆಲ್ಲವೂ ಮೊನ್ನೆ ನಡೆದ ನಿರ್ದಿಷ್ಟ ದುರ್ಘಟನೆಗೆ ತಾತ್ಕಾಲಿಕ ರೂಪದ ಪರಿಹಾರ ಅಷ್ಟೆ. ಇದಕ್ಕೆ ಕಾರಣವಾದ ಸಮಸ್ಯೆಯ ಬೇರುಗಳು ಇನ್ನೂ ಆಳದಲ್ಲಿವೆ. 

ಅವುಗಳನ್ನು ಹುಡುಕಿತೆಗೆದು ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ ಇಂತಹ ಸಂಘರ್ಷಗಳು ಪುನರಾವರ್ತನೆಯಾಗುವುದನ್ನು ತಡೆಯುವುದು ಸಾಧ್ಯವಾಗಲಾರದು. ಆ ಸಮಸ್ಯೆಯ ಹೆಸರು ವಲಸೆ. ಬೆಂಗಳೂರನ್ನು ಮಾತ್ರವಲ್ಲ ದೇಶದ ಎಲ್ಲ ಮಹಾನಗರಗಳನ್ನೂ ಕಾಡುತ್ತಿರುವ ಮತ್ತು ಭವಿಷ್ಯದಲ್ಲಿ ಭೂತಾಕಾರವಾಗಿ ಬೆಳೆದು ಕಾಡಲಿರುವ ಸಮಸ್ಯೆ ಇದು. ಕೇಂದ್ರ ಯೋಜನಾ ಆಯೋಗದ ಮಟ್ಟದಲ್ಲಿ ಈ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇದ್ದರೂ ಪರಿಹಾರವನ್ನು ಮಾತ್ರ ಕಂಡುಕೊಳ್ಳಲಾಗಿಲ್ಲ.

ಬಹುಶಃ ಹುಟ್ಟಿದ ಊರಿನಲ್ಲಿಯೇ ಬಯಸಿದ್ದೆಲ್ಲವೂ ಸಿಕ್ಕಿಬಿಟ್ಟರೆ ಯಾರೂ ಊರು ಬಿಡಲಾರರೇನೋ? ವಲಸೆ ಬಂದವರಲ್ಲಿ ಯಾರೂ ಕೂಡಾ ಬಹಳ ಸಂತೋಷದಿಂದ ಊರು ಬಿಟ್ಟು ಬಂದಿರುವುದಿಲ್ಲ, ವಲಸೆ ಬಂದವರೆಲ್ಲರೂ ಬಹಳ ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದು ಹೇಳುವುದೂ ಸಾಧ್ಯ ಇಲ್ಲ.
 
ವಲಸೆಕೋರರ ಮನಸ್ಸು ಇರುವುದೇ ಹಾಗೆ. ಹುಟ್ಟೂರಿನ ಬೇರು ಕಳಚಿಕೊಂಡು ಬೇರೆ ಊರುಗಳಲ್ಲಿ ನೆಲೆ ಕಂಡುಕೊಂಡಿರುವ ಈ ಜನ ಸದಾ ಅಸುರಕ್ಷತೆಯಿಂದ ಬಳಲುತ್ತಾ ಇರುತ್ತಾರೆ. ಬೀದಿಯಲ್ಲಿ ಅಪರಿಚಿತರು ಸುಮ್ಮನೆ ದಿಟ್ಟಿಸಿ ನೋಡಿದರೂ ಅವರ ಎದೆ ಬಡಿದುಕೊಳ್ಳುತ್ತದೆ. ಒಂಟಿಯಾಗಿ ಹೊರಟಾಗ ಪಕ್ಕದಲ್ಲಿ ನೆರಳೊಂದು ಹಾದುಹೋದರೂ ಅವರು ಬೆಚ್ಚಿಬೀಳುತ್ತಾರೆ. 

ಸಣ್ಣಪುಟ್ಟ ಕಾಯಿಲೆಗಳು ಕೂಡಾ ಅವರನ್ನು ಮಾನಸಿಕವಾಗಿ ಇನ್ನಷ್ಟು ದುರ್ಬಲರನ್ನಾಗಿ ಮಾಡುತ್ತದೆ.  ಮನೆಯಿಂದ ಹೊರಗೆಹೋದವರು ಹಿಂದಿರುಗುವುದು ವಿಳಂಬವಾದ ಕೂಡಲೇ ಕೆಟ್ಟಯೋಚನೆಗಳು ಸುಳಿದಾಡುತ್ತಿರುತ್ತವೆ.
 
ಇದರ ಜತೆಗೆ ಊರಲ್ಲಿರುವ ವಯಸ್ಸಾದ ತಂದೆ-ತಾಯಿ, ಜತೆಯಲ್ಲಿ ಆಡಿ ಬೆಳೆದ ಸೋದರ - ಸೋದರಿಯರು, ಸಲಿಗೆಯಿಂದ ಎಲ್ಲವನ್ನೂ ಹಂಚಿಕೊಳ್ಳಲು ಸಾಧ್ಯ ಇರುವಂತಹ ಗೆಳೆಯ-ಗೆಳತಿಯರು..ಹೀಗೆ ಎಲ್ಲರ ನೆನಪುಗಳು ಕಾಡಲಾರಂಭಿಸುತ್ತವೆ. ಇವೆಲ್ಲ ಹೇಳಿ ಅರ್ಥವಾಗುವಂತಹದ್ದಲ್ಲ, ಅನುಭವಿಸಿ ತಿಳಿದುಕೊಳ್ಳಬೇಕು.

ನೂರಾರು ಬಗೆಯ ವಲಸೆಗಳಿದ್ದರೂ ಇದರಲ್ಲಿ ಪ್ರಧಾನವಾಗಿ ಎರಡು ಗುಂಪುಗಳಿವೆ. ಮೊದಲನೆಯದು ದೈಹಿಕಶ್ರಮದ ಉದ್ಯೋಗ ಮಾಡುತ್ತಿರುವವರ ಗುಂಪು, ಎರಡನೆಯದು ಕಚೇರಿಗಳಲ್ಲಿ ಬಿಳಿ ಕಾಲರ್ ಉದ್ಯೋಗದಲ್ಲಿರುವವರ ಗುಂಪು. ಬರಗಾಲ, ನೆರೆಹಾವಳಿ, ಭೂಕಂಪ ಮೊದಲಾದ ಪ್ರಾಕೃತಿಕ ವಿಕೋಪಗಳಿಂದಾಗಿ ನಿರ್ಗತಿಕರಾದವರು, ಜಮೀನ್ದಾರಿ ವ್ಯವಸ್ಥೆಯ ಶೋಷಣೆಗೆ ಸಿಕ್ಕವರು, ಜಾತಿ-ಧರ್ಮ ಆಧಾರಿತ ದ್ವೇಷ ಭುಗಿಲೆದ್ದಾಗ ಪ್ರಾಣಬೆದರಿಕೆಯಿಂದ ಓಡಿ ಬಂದವರೆಲ್ಲ ಮೊದಲ ಗುಂಪಿಗೆ ಸೇರಿದವರು. 

ಇದಕ್ಕೆ ಉತ್ತಮ ಉದಾಹರಣೆ `ಬಿಮಾರು` ಎಂಬ ಹಣೆಪಟ್ಟಿಹಚ್ಚಿಕೊಂಡಿರುವ ಬಿಹಾರ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರಪ್ರದೇಶಗಳದ್ದು. ಭಾರತದಲ್ಲಿ ಈಗಲೂ ಅತಿಹೆಚ್ಚಿನ ಪ್ರಮಾಣದಲ್ಲಿ ವಲಸೆ ನಡೆಯುತ್ತಿರುವುದು ರಾಜ್ಯಗಳಿಂದ. ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳು ಉಳಿದೆರಡು ರಾಜ್ಯಗಳಷ್ಟು ಬರಪೀಡಿತ ಅಲ್ಲದೆ ಇದ್ದರೂ ಅಲ್ಲಿ ಈಗಲೂ ಜೀವಂತವಾಗಿರುವ ಊಳಿಗಮಾನ್ಯ ವ್ಯವಸ್ಥೆಯಿಂದಾಗಿ ಸಮಾನವಾಗಿ ಭೂಮಿ ಹಂಚಿಕೆ ಆಗಿಲ್ಲ. 

ಶೇಕಡಾ 80ರಷ್ಟು ಜನರ ಕೈಯಲ್ಲಿ ಒಟ್ಟು ಭೂಮಿಯ ಶೇಕಡಾ 20ರಷ್ಟಿದ್ದರೆ, ಶೇಕಡಾ 20ರಷ್ಟು ಜನರ ಕೈಯಲ್ಲಿ ಒಟ್ಟುಭೂಮಿಯ ಶೇಕಡಾ 80ರಷ್ಟು ಭೂಮಿ ಇದೆ. ಮೊದಲು ಡಕಾಯಿತರು, ನಂತರದ ದಿನಗಳಲ್ಲಿ ಮಾವೋವಾದಿಗಳು ಹುಟ್ಟಿಕೊಂಡದ್ದಕ್ಕೆ ಇದೂ ಕಾರಣ.

 ಬಿಹಾರಿಗಳ ರೀತಿಯಲ್ಲಿಯೇ ಇತ್ತೀಚೆಗೆ ಹೆಚ್ಚು ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವವರು ಈಶಾನ್ಯ ರಾಜ್ಯದ ಜನರು. ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್ ಮತ್ತು ಕೊಲ್ಕೊತ್ತಾಗಳಂತಹ ಮಹಾನಗರಗಳಲ್ಲಿ ಇವರ ಸಂಖ್ಯೆ ಹೆಚ್ಚುತ್ತಲೇ ಇದೆ. ರಾಷ್ಟ್ರ ಮತ್ತು ರಾಜ್ಯಗಳನ್ನು ಆಳಿದವರ ನಿರಂತರ ರಾಜಕೀಯ ನಿರ್ಲಕ್ಷ, ಕರ್ತವ್ಯಲೋಪ ಮತ್ತು ಆಂತರಿಕವಾದ ಸಾಮಾಜಿಕ ಬಿಕ್ಕಟ್ಟಿನಿಂದಾಗಿ ಕಳೆದ ನಾಲ್ಕೈದು ದಶಕಗಳಿಂದ ಆ ರಾಜ್ಯಗಳಲ್ಲಿನ ಸಾಮಾನ್ಯ ಜನ ಅನೇಕ ಬಗೆಯ ಕಷ್ಟ-ನಷ್ಟಗಳಿಗೆ ಈಡಾಗುತ್ತಾ ಬಂದಿದ್ದಾರೆ.
 
ಕೇಂದ್ರ ಯೋಜನಾ ಆಯೋಗ ನಡೆಸಿರುವ ಸಾಮಾಜಿಕ-ಆರ್ಥಿಕ ಅಧ್ಯಯನಗಳು ಕೂಡಾ ಇದನ್ನೆ ಹೇಳುತ್ತಿವೆ. ಇದರ ಪ್ರಕಾರ  ಕಳೆದ 1996-97ರಿಂದ 2007-2008ರ ಅವಧಿಯ ಹತ್ತುವರ್ಷಗಳಲ್ಲಿ ಕೃಷಿ ಕ್ಷೇತ್ರದ ಸರಾಸರಿ ಅಭಿವೃದ್ಧಿ ದರ ಕರ್ನಾಟಕದಲ್ಲಿ ಶೇಕಡಾ 7.16, ಆಂಧ್ರ ಪ್ರದೇಶದಲ್ಲಿ ಶೇಕಡಾ 6.82 ಮತ್ತು ಗುಜರಾತ್‌ನಲ್ಲಿ ಶೇಕಡಾ 7.46 ಆಗಿದ್ದರೆ, ಅದು ಅಸ್ಸಾಂನಲ್ಲಿ ಶೇಕಡಾ 1.51, ಮಣಿಪುರದಲ್ಲಿ ಶೇಕಡಾ 1.31, ಅರುಣಾಚಲ ಪ್ರದೇಶದಲ್ಲಿ ಶೇಕಡಾ 4.49, ನಾಗಲ್ಯಾಂಡ್‌ನಲ್ಲಿ ಶೇಕಡಾ 4.92, ತ್ರಿಪುರದಲ್ಲಿ ಶೇಕಡಾ 3.74, ಮಿಜೋರಾಂನಲ್ಲಿ ಶೇಕಡಾ 2.85, ಮತ್ತು ಮೇಘಾಲಯದಲ್ಲಿ ಶೇಕಡಾ 5.06 ಆಗಿದೆ. ಈ ರಾಜ್ಯಗಳ ಜತೆ ಸೇರಿಸಬಹುದಾದ ಇನ್ನೊಂದು ರಾಜ್ಯ ಒರಿಸ್ಸಾ. 

ಹತ್ತು ವರ್ಷಗಳ ಅವಧಿಯಲ್ಲಿ ಆ ರಾಜ್ಯದ ಕೃಷಿಕ್ಷೇತ್ರದ ಅಭಿವೃದ್ಧಿ ದರ ಶೇಕಡಾ 2.93ರಲ್ಲಿಯೇ ಇದೆ. ಕೃಷಿಕ್ಷೇತ್ರದ ಜತೆಯಲ್ಲಿ ದುಡಿಯುವ ಕೈಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡುವ ಕೈಗಾರಿಕಾ ಕ್ಷೇತ್ರದ ಸ್ಥಿತಿ ಭಿನ್ನವಾಗಿಲ್ಲ. 1997-98ರಿಂದ 2007-08ರ ಅವಧಿಯ ಹತ್ತು ವರ್ಷಗಳಲ್ಲಿ ಕೈಗಾರಿಕಾ ಕ್ಷೇತ್ರದ ಸರಾಸರಿ ಅಭಿವೃದ್ಧಿ ದರ ಕರ್ನಾಟಕದಲ್ಲಿ ಶೇಕಡಾ 8.36 ಮತ್ತು ಆಂಧ್ರಪ್ರದೇಶದಲ್ಲಿ ಶೇಕಡಾ 6.61 ಆಗಿದ್ದರೆ, ಇದು ಅಸ್ಸಾಂನಲ್ಲಿ ಶೇಕಡಾ 1.51, ಅರುಣಾಚಲಪ್ರದೇಶದಲ್ಲಿ ಶೇಕಡಾ 4.49, ಮಣಿಪುರದಲ್ಲಿ ಶೇಕಡಾ 1.31, 

ಮೇಘಾಲಯದಲ್ಲಿ ಶೇಕಡಾ 5.06, ಮಿಜೋರಾಂನಲ್ಲಿ ಶೇಕಡಾ 2.85, ನಾಗಲ್ಯಾಂಡ್‌ನಲ್ಲಿ ಶೇಕಡಾ 4.92 ಮತ್ತು ತ್ರಿಪುರದಲ್ಲಿ ಶೇಕಡಾ 3.74 ಆಗಿದೆ. ಬಡತನದ ರೇಖೆಗಿಂತ ಕೆಳಗಿರುವವರ ಪ್ರಮಾಣ ಕರ್ನಾಟಕದಲ್ಲಿ ಶೇಕಡಾ 23.6 ಮತ್ತು ಆಂಧ್ರಪ್ರದೇಶದಲ್ಲಿ ಶೇಕಡಾ 21.1 ಆಗಿದ್ದರೆ, ಮಣಿಪುರದಲ್ಲಿ ಶೇಕಡಾ 47.1,ಅಸ್ಸಾಂನಲ್ಲಿ ಶೇಕಡಾ 40, ಅರುಣಾಚಲ ಪ್ರದೇಶದಲ್ಲಿ ಶೇಕಡಾ 26 ಆಗಿದೆ. ಆರೋಗ್ಯ, ಕುಡಿಯುವ ನೀರಿನ ಪೂರೈಕೆ, ಮೂಲಸೌಕರ್ಯ ಇತ್ಯಾದಿ ಮಾನವ ಸಂಪನ್ಮೂಲ ಅಭಿವೃದ್ಧಿಯ ಇತರ 

ಸೂಚ್ಯಂಕಗಳಲ್ಲಿಯೂ ಈಶಾನ್ಯ ರಾಜ್ಯಗಳು ದಕ್ಷಿಣದ ರಾಜ್ಯಗಳಿಂದ ಹಿಂದೆ ಉಳಿದಿವೆ.
ಸಾಮಾನ್ಯ ಓದು-ಬರಹಗಳಿಗಷ್ಟೇ ಸೀಮಿತಗೊಳಿಸಿ ಲೆಕ್ಕಹಾಕುವ ಸಾಕ್ಷರತೆಯ ಪ್ರಮಾಣದಲ್ಲಿ ಮಾತ್ರ ಈಶಾನ್ಯರಾಜ್ಯಗಳ ಸಾಧನೆ ಇತರ ಹಲವಾರು ರಾಜ್ಯಗಳಿಗಿಂತ ಉತ್ತಮವಾಗಿದೆ. ಸಾಕ್ಷರರ ಪ್ರಮಾಣ ರಾಷ್ಟ್ರಮಟ್ಟದಲ್ಲಿ ಶೇಕಡಾ 74.4 ಮತ್ತು ಕರ್ನಾಟಕದಲ್ಲಿ ಶೇಕಡಾ 75.60 ಆಗಿದೆ. ಅಸ್ಸಾಂ (ಶೇಕಡಾ 73.18) ರಾಜ್ಯವೊಂದನ್ನು ಹೊರತುಪಡಿಸಿ ಮಣಿಪುರ ( ಶೇಕಡಾ 80) ಮಿಜೋರಾಂ (ಶೇಕಡಾ 91.58) 

ನಾಗಲ್ಯಾಂಡ್ (ಶೇಕಡಾ 80.4),ಮೇಘಾಲಯ (ಶೇಕಡಾ 75.58) ಮತ್ತು ತ್ರಿಪುರ (ಶೇಕಡಾ 87.75) ರಾಜ್ಯಗಳು ದಕ್ಷಿಣದ ಕೆಲವು ರಾಜ್ಯಗಳಿಗಿಂತಲೂ ಮುಂದೆ ಇವೆ. ಆದರೆ ಉನ್ನತ ಶಿಕ್ಷಣದ ಕ್ಷೇತ್ರಗಳಲ್ಲಿ ಈಶಾನ್ಯರಾಜ್ಯಗಳು ಹಿಂದೆ ಉಳಿದಿವೆ. ಇದರಿಂದಾಗಿ ಆ ರಾಜ್ಯಗಳಲ್ಲಿ ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. ಈ ಕಾರಣದಿಂದಾಗಿಯೇ ಉನ್ನತ ಶಿಕ್ಷಣವನ್ನರಸಿಕೊಂಡು ಆ ರಾಜ್ಯಗಳ ವಿದ್ಯಾರ್ಥಿಗಳು ದೆಹಲಿ, ಬೆಂಗಳೂರು, ಹೈದರಾಬಾದ್, ಪುಣೆಯಂತಹ ಮಹಾನಗರಗಳಿಗೆ ಬರುತ್ತಿದ್ದಾರೆ.

ಸಾಮಾನ್ಯವಾಗಿ ದೈಹಿಕ ಶ್ರಮದ ಉದ್ಯೋಗ ಮಾಡಲು ವಲಸೆ ಬರುವವರನ್ನು ಮಹಾನಗರಗಳು ತೆರೆದ ಬಾಹುಗಳಿಂದ ಸ್ವಾಗತಿಸುತ್ತವೆ. ನಗರವಾಸಿಗಳ ಚಾಕರಿ ಮಾಡಲು ಕೂಲಿಕಾರ್ಮಿಕರು ಬೇಕಾಗುತ್ತಾರೆ. ಈಗಲೂ ಬಿಹಾರ,ರಾಜಸ್ತಾನ, ಉತ್ತರಪ್ರದೇಶ, ಜಾರ್ಖಂಡ್ ಮೊದಲಾದ ರಾಜ್ಯಗಳಿಂದ ಬರುವ ಕೂಲಿಕಾರ್ಮಿಕರಿಲ್ಲದೆ ಹೋದರೆ ಮಹಾನಗರಗಳಲ್ಲಿನ ಕಟ್ಟಡ ನಿರ್ಮಾಣ ಕೆಲಸ ನಡೆಯಲಾರದು.
 
ವಲಸೆ ಸಮಸ್ಯೆ ಉಲ್ಬಣಗೊಂಡಿರುವುದು  ಆರ್ಥಿಕ ಉದಾರೀಕರಣದ ನಂತರದ ದಿನಗಳಲ್ಲಿ ಬಿಳಿಕಾಲರ್ ಉದ್ಯೋಗಗಳನ್ನು ಅರಸುತ್ತಾ  ನಗರಗಳಿಗೆ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗತೊಡಗಿದಾಗ. ಮುಂಬೈ, ಕೊಲ್ಕೊತ್ತಾ, ದೆಹಲಿಗಳಿಗೆ ಸೀಮಿತವಾಗಿದ್ದ ಈ ಸಂಘರ್ಷ ಈಗ ಬೆಂಗಳೂರು ಮಹಾನಗರದಲ್ಲಿಯೂ ಕಾಣಿಸಿಕೊಂಡಿದೆ.
 
ಬಿಳಿ ಬಣ್ಣದ, ನೋಡಲು ವಿದೇಶಿಯರಂತೆ ಕಾಣುವ, ಇಂಗ್ಲಿಷ್ ಮಾತನಾಡಬಲ್ಲ ಈಶಾನ್ಯ ರಾಜ್ಯಗಳ ಯುವಕ-ಯುವತಿಯರು ಮಹಾನಗರಗಳ ಆತಿಥ್ಯ, ವೈದ್ಯಕೀಯ, ಪ್ರವಾಸೋದ್ಯಮ, ಸೌಂದರ್ಯವರ್ಧನೆ ಮೊದಲಾದ ಕ್ಷೇತ್ರಗಳ ಅವಶ್ಯಕತೆಗಳಿಗೆ ಹೇಳಿ ಮಾಡಿಸಿದಂತಿದ್ದಾರೆ.
 
ಉದ್ಯೋಗಾವಕಾಶ ಹೆಚ್ಚುತ್ತಿದ್ದಂತೆ ಆ ರಾಜ್ಯಗಳ ವಲಸೆಯ ಪ್ರಮಾಣ ಕೂಡಾ ಹೆಚ್ಚಾಗತೊಡಗಿದೆ. ಈಶಾನ್ಯರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಕೂಡಾ ವಲಸೆಹೋಗಲು ಜನರನ್ನು ದೂಡುತ್ತಿರುವ ಹಾಗೆ ಕಾಣುತ್ತಿದೆ. ಇಲ್ಲಿಯವರೆಗೆ ಪೊಲೀಸರು ನಡೆಸಿರುವ ತನಿಖೆಯ ಪ್ರಕಾರ ಕಳೆದ ವಾರ ಇಲ್ಲಿ ನಡೆದ ಘಟನೆಗಳಿಗೆ ವಲಸೆಯ ಸಮಸ್ಯೆ ನೇರವಾಗಿ ಕಾರಣ ಆಗಿರಲಾರದೆಂದು ಅನಿಸಿದರೂ ಎಚ್ಚರಿಕೆಯ ಗಂಟೆಗಳಂತಿರುವ ಇಂತಹ ಘಟನೆಗಳನ್ನು ನಿರ್ಲಕ್ಷಿಸಲಾಗದು.

ಭಾರತದ ಯಾವ ಮೂಲೆಯಲ್ಲಿಯಾದರೂ ಬದುಕುವ ಹಕ್ಕನ್ನು ಸಂವಿಧಾನ ನೀಡಿರುವುದು ನಿಜ. ಈ ಅಸ್ತ್ರವನ್ನೇ ಎತ್ತಿಕೊಂಡು ವಲಸೆಯನ್ನು ಸಮರ್ಥಿಸುವ ರೀತಿಯಲ್ಲಿಯೇ ಭಾಷಾವಾರು ಪ್ರಾಂತ್ಯ ರಚನೆಯ ಆಶಯವನ್ನು ಮುಂದಿಟ್ಟುಕೊಂಡು ವಲಸೆಯನ್ನು ಪ್ರಶ್ನಿಸಲು ಕೂಡಾ ಸಾಧ್ಯ. ಆದರೆ ಇಂತಹ ತರ್ಕ-ಕುತರ್ಕಗಳ ಮೂಲಕ ವಲಸೆಯಿಂದಾಗಿ ಹುಟ್ಟಿಕೊಳ್ಳುವ ನೂರಾರು ಬಗೆಯ ಸಂಘರ್ಷಗಳನ್ನು ತಡೆಯಲಿಕ್ಕಾಗದು. 

ವಲಸೆಯ ಮೂಲ ಕಾರಣ ರಾಜ್ಯಗಳ ಅಸಮಾನ ಅಭಿವೃದ್ಧಿಯಲ್ಲಿದೆ. ಹಿಂದುಳಿದ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಮತ್ತು ಅಭಿವೃದ್ಧಿಯ ಪ್ಯಾಕೇಜ್‌ಗಳನ್ನು ನೀಡಿದರಷ್ಟೇ ಸಾಲದು. ಆ ರಾಜ್ಯಗಳ ಆಡಳಿತ ಸೂತ್ರ ಹಿಡಿದವರು ಪ್ರಜೆಗಳ ಮೂಲಭೂತ 

ಅವಶ್ಯಕತೆಗಳನ್ನು ಮೂಲ ಸೌಕರ್ಯಗಳನ್ನು ಒದಗಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು, ಇಲ್ಲದೆ ಹೋದರೆ ಹಿಂದುಳಿದ ರಾಜ್ಯಗಳನ್ನು ಆಳುವವರು ಮಾಡಿದ ತಪ್ಪಿಗೆ ನಾವು ಯಾಕೆ ಬೆಲೆ ಕೊಡಬೇಕು ಎಂದು ಅಭಿವೃದ್ಧಿಹೊಂದುತ್ತಿರುವ ರಾಜ್ಯಗಳ ಜನರ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗಬಹುದು. 

ವಲಸೆ ಎನ್ನುವುದು ಸದ್ಯಕ್ಕೆ ಬೂದಿಮುಚ್ಚಿದ ಕೆಂಡದಂತಿದೆ, ನಿರ್ಲಕ್ಷಿಸಿದರೆ ಅದು ಬೆಂಕಿಯಾಗಿ ಹೊತ್ತಿಕೊಳ್ಳುವ ಅಪಾಯ ಇದೆ.

ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ August 13, 2012


ಮಳೆ ನಿಂತರೂ ಒಂದಷ್ಟು ಹೊತ್ತು ಮಳೆಹನಿ ನಿಲ್ಲುವುದಿಲ್ಲ. ಅಣ್ಣಾ ತಂಡವನ್ನು ಬರ್ಖಾಸ್ತುಗೊಳಿಸಲಾಗಿದ್ದರೂ ಅದು ಪ್ರಾರಂಭಿಸಿದ್ದ ಚಳವಳಿ ಬಗ್ಗೆ ಚರ್ಚೆ-ವಿಶ್ಲೇಷಣೆಗಳು ನಿಂತಿಲ್ಲ, ಇದು ಇನ್ನಷ್ಟು ಕಾಲ ಮುಂದುವರಿಯಲಿದೆ.

ಮಿಂಚಿಮರೆಯಾಗಿ ಹೋದ ಈ ಚಳವಳಿಯ ಗರ್ಭಪಾತಕ್ಕೆ ಕಾರಣರಾದ ಖಳನಾಯಕರು ಯಾರು ಎನ್ನುವುದನ್ನು ಗುರುತಿಸುವ ಕೆಲಸ ಈಗ ಪ್ರಾರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಎಲ್ಲರೂ ಅಣ್ಣಾತಂಡದ ಪ್ರಮುಖ ಸದಸ್ಯರಾದ ಅರವಿಂದ್ ಕೇಜ್ರಿವಾಲ್, ಕಿರಣ್‌ಬೇಡಿ ಮತ್ತು ಪ್ರಶಾಂತ್ ಭೂಷಣ್ ಮೇಲೆ ಎರಗಿಬಿದ್ದಿದ್ದಾರೆ.

`ಸೃಷ್ಟಿ, ಪಾಲನೆ ಮತ್ತು ಲಯ`ದ ಮೂರೂ ಕೆಲಸಗಳನ್ನು ಈ ತ್ರಿಮೂರ್ತಿಗಳೇ ಮಾಡಿದ್ದು ಎಂದು ಅಣ್ಣಾಬೆಂಬಲಿಗರು ಆರೋಪಿಸತೊಡಗಿದ್ದಾರೆ. ಚಳವಳಿ ಹಾದಿ ತಪ್ಪಲು ಕಾರಣವಾದ ಇವರ ಪಾತ್ರ  ಕ್ಷಮಿಸಿ ಬಿಡುವಂತಹದ್ದು ಖಂಡಿತ ಅಲ್ಲ.

ಆದರೆ ಇವರಷ್ಟೇ ಖಳನಾಯಕರೇ? ಹಾಗೆಂದು ತೀರಾ ಸರಳವಾಗಿ ತೀರ್ಮಾನಿಸಿಬಿಟ್ಟರೆ ಈ ಚಳವಳಿಯ ಸೋಲು-ಗೆಲುವುಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಾರದು.

ಈ ತ್ರಿಮೂರ್ತಿಗಳಷ್ಟೇ ಖಳರು ಅಲ್ಲದೆ ಇದ್ದರೆ ಬೇರೆ ಯಾರು ? ಕೆಲವರು ಅಣ್ಣಾಹಜಾರೆಯವರನ್ನೇ ಹೆಸರಿಸುತ್ತಾರೆ. ಸ್ವಲ್ಪ ಮಟ್ಟಿಗೆ ಇದು ನಿಜ ಕೂಡಾ. ಹಜಾರೆ ಅವರು ಸಜ್ಜನ, ಪ್ರಾಮಾಣಿಕ, ನಿಸ್ವಾರ್ಥಿ, ಸರಳಜೀವಿ ಎನ್ನುವುದರ ಬಗ್ಗೆ ಬಹಳ ಮಂದಿಗೆ ಅನುಮಾನ ಇಲ್ಲ.

ಆದರೆ ಈ ಗುಣಗಳಿಂದಷ್ಟೇ ನಾಯಕನಾಗಲು ಸಾಧ್ಯವೇ ಎನ್ನುವುದು ಪ್ರಶ್ನೆ. ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ನಂತರದಲ್ಲಿ ನಡೆದ ಎರಡು ಪ್ರಮುಖ ಚಳವಳಿಗಳನ್ನು ಮುನ್ನಡೆಸಿದ್ದ ಗಾಂಧೀಜಿ ಮತ್ತು ಜಯಪ್ರಕಾಶ್ ನಾರಾಯಣ್ ಕೇವಲ ಸಜ್ಜನರು ಮತ್ತು ಪ್ರಾಮಾಣಿಕರಾಗಿರಲಿಲ್ಲ.

ಅವರು ಬುದ್ದಿವಂತರೂ ಆಗಿದ್ದರು.  ವಿಸ್ತಾರವಾದ ಓದು, ರಾಷ್ಟ್ರ-ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಅರಿವು, ಪ್ರವಾಸ ಮತ್ತು ಜನರ ಜತೆಗಿನ ಒಡನಾಟ ಅವರಿಗೆ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುವ ತೀಕ್ಷ್ಣಗ್ರಹಣಶಕ್ತಿಯನ್ನು ತಂದು ಕೊಟ್ಟಿತ್ತು.  ಒಂದು ಅನ್ನದ ಅಗುಳನ್ನು ಮುಟ್ಟಿಯೇ ಪಾತ್ರೆಯಲ್ಲಿದ್ದ ಅನ್ನ ಬೆಂದಿದೆಯೇ ಇಲ್ಲವೇ ಎನ್ನುವುದನ್ನು ಹೇಳುವಷ್ಟು ಸಮಾಜದ ನಾಡಿಮಿಡಿತವನ್ನ್ನು ಬಲ್ಲವರಾಗಿದ್ದರು.

ಜನಪ್ರಿಯತೆಯಲ್ಲಿ ತೇಲಿಹೋಗದೆ ಅದನ್ನು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಳ್ಳುವ ನಿರ್ವಹಣಾ ಶಕ್ತಿ ಮತ್ತು ಸಂಯಮ ಅವರಲ್ಲಿತ್ತು. ಜಾತಿ,ಧರ್ಮ,ಪ್ರದೇಶಗಳಲ್ಲಿ ಒಳಗಿಂದೊಳಗೆ ಒಡೆದುಹೋಗಿರುವ ದೇಶದಲ್ಲಿ ಒಂದು ಸಾಮೂಹಿಕ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗಲು ಇಂತಹ ಸಾಮರ್ಥ್ಯಬೇಕಾಗುತ್ತದೆ. ಈ ಗುಣಗಳು ಅಣ್ಣಾಹಜಾರೆಯವರಲ್ಲಿ ಇದ್ದಿದ್ದರೆ ಭ್ರಷ್ಟಾಚಾರ ವಿರೋಧಿ ಚಳವಳಿ ನಡುಹಾದಿಯಲ್ಲಿಯೇ ಅಪಘಾತಕ್ಕೆ ಈಡಾಗುತ್ತಿರಲಿಲ್ಲ.

ಅಣ್ಣಾಚಳವಳಿ ಹಾದಿ ತಪ್ಪಲು ಮಾಧ್ಯಮರಂಗ ವಹಿಸಿದ ಖಳನಾಯಕನ ಪಾತ್ರವೇ ಕಾರಣ ಎನ್ನುವವರೂ ಇದ್ದಾರೆ. ಈ ಆರೋಪವನ್ನು ಮಾಡುವ ಅಣ್ಣಾತಂಡದ ಸದಸ್ಯರು ಮತ್ತು  ಬೆಂಬಲಿಗರು  ಕೊನೆದಿನಗಳಲ್ಲಿ ಮಾಧ್ಯಮಗಳ ನಿರ್ಲಕ್ಷ್ಯ ಮತ್ತು ಟೀಕೆಗಳನ್ನು ಉದಹರಿಸುತ್ತಿದ್ದಾರೆ.

ಇದು ಮಾಧ್ಯಮಗಳನ್ನು ಅರ್ಥಮಾಡಿಕೊಳ್ಳಲಾಗದ ಅವರ ಅಜ್ಞಾನವನ್ನಷ್ಟೇ ತೋರಿಸುತ್ತದೆ. ಕೊನೆದಿನಗಳ ನಿರ್ಲಕ್ಷ್ಯಗಿಂತಲೂ  ಅಣ್ಣಾಚಳವಳಿಗೆ ಹೆಚ್ಚು ಹಾನಿ ಉಂಟು ಮಾಡಿದ್ದು ಪ್ರಾರಂಭದ ದಿನಗಳ ಅತಿಪ್ರಚಾರ.

ಕಣ್ಣುಕಟ್ಟಿನ ಪ್ರಚಾರ ವೈಖರಿ ಮೂಲಕ ಉಪವಾಸ ಶಿಬಿರದ ಮುಂದೆ ಸೇರಿದ್ದ ಸಾವಿರ ಜನರನ್ನು  ಲಕ್ಷವಾಗಿ, ಲಕ್ಷ ಜನರನ್ನು ಕೋಟಿಯಾಗಿ ಮಾಧ್ಯಮಗಳು ಬಿಂಬಿಸಿದ್ದನ್ನು ನಿಜವೆಂದೇ ನಂಬಿದ ಅಣ್ಣಾತಂಡದ ಸದಸ್ಯರು ದೇಶದ 120 ಕೋಟಿ ಜನ ತಮ್ಮ ಬೆನ್ನಹಿಂದೆ ಇದ್ದಾರೆ ಎಂದು ಭ್ರಮಿಸಿಬಿಟ್ಟರು.
 
ಮೂರೂಹೊತ್ತು ಟಿವಿ ಪರದೆಗಳಲ್ಲಿ, ಪತ್ರಿಕೆಗಳ ಪುಟಗಳಲ್ಲಿ ಕಾಣಿಸುವ ತಮ್ಮ ಮುಖಗಳನ್ನು ಪ್ರೀತಿಸುತ್ತಾ ಆತ್ಮರತಿಗೆ ಜಾರಿಬಿಟ್ಟರು. ಮಾಧ್ಯಮರಂಗ ವಾಣಿಜ್ಯೀಕರಣಗೊಂಡ ಬದಲಾದ ಪರಿಸ್ಥಿತಿಯಲ್ಲಿ ಮುಖ್ಯವಾಗಿ ಟಿವಿ ಚಾನೆಲ್‌ಗಳು ಹುಟ್ಟು-ಸಾವುಗಳೆರಡನ್ನು ಸಂಭ್ರಮದಿಂದ ಆಚರಿಸುತ್ತದೆ.

ಈ ಭರದಲ್ಲಿ ಸರಿ-ತಪ್ಪು ಇಲ್ಲವೆ ಒಳ್ಳೆಯದು-ಕೆಟ್ಟದನ್ನು ಗುರುತಿಸುವ ನ್ಯಾಯಪ್ರಜ್ಞೆ ಜನಪ್ರಿಯತೆಯ ಪ್ರವಾಹದಲ್ಲಿ ಕೊಚ್ಚಿಕೊಂಡುಹೋಗುತ್ತದೆ. ಮಾಧ್ಯಮಗಳಿಂದ ಪ್ರಚಾರ ಬಯಸುವವರಿಗೆ ಇದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲದೆ ಇದ್ದರೆ ಅಣ್ಣಾತಂಡಕ್ಕಾದ ಗತಿಯೇ ಆಗುತ್ತದೆ.

ಮಾಧ್ಯಮಗಳ ಪ್ರಚಾರದ ಊರುಗೋಲಿನ ಬಲದಿಂದ ಎದ್ದುನಿಂತದ್ದು, ಆ ಊರುಗೋಲನ್ನು ಕಿತ್ತುಕೊಂಡ ಕೂಡಲೇ ಕುಸಿದುಬೀಳುತ್ತದೆ. ಹಾಗೆಯೇ ಆಯಿತು.

ಇವರೆಲ್ಲರ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲಿ ಅಣ್ಣಾಚಳವಳಿಯ ವೈಫಲ್ಯದಲ್ಲಿ ಖಳನಾಯಕರ ಪಾತ್ರವಹಿಸಿದ್ದ ಬಹುಮುಖ್ಯವಾದ ಸಮುದಾಯವನ್ನು ಎಲ್ಲರೂ ಮರೆತುಬಿಟ್ಟಿದ್ದಾರೆ. ಅದು ಚಳವಳಿಗೆ ಸೇರುತ್ತಿದ್ದ ಜನ. ಜಯಪ್ರಕಾಶ್ ನಾರಾಯಣ್ ನೇತೃತ್ವದ `ಸಂಪೂರ್ಣ ಕ್ರಾಂತಿ`ಯ ನಂತರದ ದಿನಗಳಲ್ಲಿ ಒಂದು ಚಳವಳಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಎಂದೂ ಭಾಗವಹಿಸಿರಲಿಲ್ಲ.

`ನಾನೇ ಅಣ್ಣಾ` ಎಂದು ತಲೆಪಟ್ಟಿ ಕಟ್ಟಿಕೊಂಡು, ಎದೆಮೇಲೆ ಬರೆಸಿಕೊಂಡು, ಹಗಲುಹೊತ್ತಿನಲ್ಲಿ ಘೋಷಣೆ ಕೂಗುತ್ತಾ, ರಾತ್ರಿಹೊತ್ತು ಕ್ಯಾಂಡಲ್ ಹಚ್ಚುತ್ತಾ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಕ್ರೀಯಾಶೀಲರಾಗಿ `ಅರಬ್ ವಸಂತ` ಇನ್ನೇನು ಭಾರತದಲ್ಲಿ ಪ್ರಾರಂಭವಾಗಿಯೇ ಬಿಟ್ಟಿತೆನ್ನುವ ಭ್ರಮಾಲೋಕವನ್ನು ಸೃಷ್ಟಿಸುತ್ತಿದ್ದವರು ಚಳವಳಿಯಲ್ಲಿ ಭಾಗವಹಿಸಿದ್ದ ಜನ.

ಅಣ್ಣಾಹಜಾರೆ ಅವರ ಮೊದಲೆರಡು ಉಪವಾಸಗಳ ಕಾಲದಲ್ಲಿ ಸಕ್ರಿಯವಾಗಿದ್ದ ಈ ಜನಸಮೂಹ ನಂತರದ ಎರಡು ಉಪವಾಸಗಳ ಕಾಲಕ್ಕೆ ಆಸಕ್ತಿಯನ್ನು ಕಳೆದುಕೊಂಡುಬಿಟ್ಟಿತು.

ಹಿಂದಿನಷ್ಟು ಜನ ಸೇರುತ್ತಿಲ್ಲ ಎಂದು ಗೊತ್ತಾದ ಕೂಡಲೇ ಆಡಳಿತಾರೂಢ ಪಕ್ಷ ಚಳವಳಿಗಾರರನ್ನು ಕರೆಸಿ ಮಾತನಾಡಲು ಕೂಡಾ ಹೋಗದೆ ಸುಮ್ಮನಾಯಿತು, ಜನ ಕಡಿಮೆ ಸೇರುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಮಾಧ್ಯಮಗಳು ಕೂಡಾ ಹಿಂದೆ ಸರಿದುಬಿಟ್ಟವು. ಅಣ್ಣಾತಂಡ ಯುದ್ಧಮುಗಿಯವ ಮೊದಲೇ ಶಸ್ತ್ರತ್ಯಾಗ ಮಾಡಲು ಮುಖ್ಯ ಕಾರಣ ತಮ್ಮ ಹಿಂದೆ ಲಕ್ಷಲಕ್ಷ ಸಂಖ್ಯೆಯಲ್ಲಿದ್ದೇವೆ ಎಂಬ ನಂಬಿಕೆ ಹುಟ್ಟಿಸಿದ್ದ ಜನ ದೂರವಾಗಿದ್ದು.

ಈ ಜನ ಹೀಗೆ ಯಾಕೆ ವರ್ತಿಸಿದರು ಎನ್ನುವುದನ್ನು ವಿಶ್ಲೇಷಿಸುವ ಮೊದಲು ಇವರು ಯಾರು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ನಡೆಯುವ ಚಳವಳಿಗಳನ್ನು ಒಂದು ನಿರ್ದಿಷ್ಟವಾದ ಆವರಣದೊಳಗೆ ಸೇರಿಸುವುದು ಕಷ್ಟವಾದರೂ ಸ್ಥೂಲವಾಗಿ ಇವುಗಳನ್ನು ರಾಜಕೀಯ ಮತ್ತು ರಾಜಕೀಯೇತರ  ಎಂದು ಗುರುತಿಸಬಹುದು.

ಈ ವ್ಯಾಖ್ಯಾನ ಕೂಡಾ ಚಳವಳಿಗಳ ಸ್ಪಷ್ಟ ಚಿತ್ರವನ್ನು ನೀಡುವುದಿಲ್ಲ. ರಾಜಕೀಯ ಉದ್ದೇಶದ ಚಳವಳಿಗಳ ಬಗ್ಗೆ ಯಾವುದೇ ಗೊಂದಲ ಇಲ್ಲ. ಉದಾಹರಣೆಗೆ ಕಾಂಗ್ರೆಸ್,ಬಿಜೆಪಿ, ಕಮ್ಯುನಿಸ್ಟ್ ಇತ್ಯಾದಿ ಪಕ್ಷಗಳು ನಡೆಸುವ ಚಳವಳಿಗಳು.

ಇಲ್ಲಿ ಎಲ್ಲವೂ ಪಾರದರ್ಶಕ. ಸಮಸ್ಯೆ ರಾಜಕೀಯೇತರ ಚಳವಳಿಗಳದ್ದು. ನಿರ್ದಿಷ್ಟವಾದ ರಾಜಕೀಯ ಸಿದ್ಧಾಂತವನ್ನು ಹೊಂದಿಯೂ ಚುನಾವಣಾ ರಾಜಕೀಯದಿಂದ ದೂರವಾಗಿರುವ ರಾಜಕೀಯೇತರ ಚಳವಳಿಗಳಿವೆ.

ಇದೇ ರೀತಿ  ರಾಜಕೀಯೇತರ ಚಳವಳಿಗಳಾಗಿ ಪ್ರಾರಂಭಗೊಂಡು ಕ್ರಮೇಣ ನೇರ ಚುನಾವಣೆಯಲ್ಲಿ ಪಾಲ್ಗೊಂಡ ಚಳವಳಿಗಳೂ ಇವೆ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕವೂ ಸೇರಿದಂತೆ ದೇಶದ ಬೇರೆಬೇರೆ ಭಾಗಗಳಲ್ಲಿನ ರೈತ ಮತ್ತು ದಲಿತ ಚಳವಳಿಗಳು. ರಾಜಕೀಯ ಚಳವಳಿಗಳಲ್ಲಿ ಭಾಗವಹಿಸಿದವರು ಒಂದು ಪಕ್ಷದ ಸಿದ್ಧಾಂತಕ್ಕೆ ಬದ್ದರಾಗಿರುವವರು.

ರಾಜಕೀಯೇತರ ಚಳವಳಿಗೆ ವಿಶಾಲವಾದ ಹರಹು ಇರುತ್ತದೆ. ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು ಇಲ್ಲವೆ ಭೂಮಿ ಕಳೆದುಕೊಂಡವರು, ಮನೆ ಕಳೆದುಕೊಂಡವರು,ಅನ್ಯಾಯಕ್ಕೀಡಾದವರು...

ಹೀಗೆ ಬೇರೆಬೇರೆ ಜನವರ್ಗವನ್ನು ನಿರ್ದಿಷ್ಟವಾಗಿ ಗುರಿಯಾಗಿಟ್ಟುಕೊಂಡು ಈ ಚಳವಳಿಗಳು ನಡೆಯುತ್ತಿರುತ್ತವೆ. ಈ ಎರಡೂ ಬಗೆಯ ಚಳವಳಿಗಳಿಗೆ ಸ್ಪಷ್ಟವಾದ ಐಡೆಂಟಿಟಿ ಇರುತ್ತದೆ. ಇದರಿಂದಾಗಿ ಚಳವಳಿಯ ನಾಯಕರಿಗೆ ಕೂಡಾ ತಮ್ಮ ಉದ್ದೇಶ ಮತ್ತು ಸಾಗುವ ದಾರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ.

 ಆದರೆ ಬಹಳ ದೊಡ್ಡ ಕ್ಯಾನ್‌ವಾಸ್ ಇಟ್ಟುಕೊಂಡು ಪ್ರಾರಂಭವಾದ ಅಣ್ಣಾಚಳವಳಿಗೆ ಒಂದು ನಿರ್ದಿಷ್ಟ ಐಡೆಂಟಿಟಿ ಇರಲಿಲ್ಲ. ಇದು ಈ ಚಳವಳಿಯ ಶಕ್ತಿಯೂ ಹೌದು, ದೌರ್ಬಲ್ಯ ಕೂಡಾ. ಯಾವುದೇ ರಾಜಕೀಯ ಪಕ್ಷದ ಜತೆಗೆ ಗುರುತಿಸಿಕೊಳ್ಳದವರು ಮಾತ್ರವಲ್ಲ, ಗುರುತಿಸಿಕೊಂಡವರು ಕೂಡಾ ಎದೆಮೇಲಿದ್ದ ಪಕ್ಷದ ಬ್ಯಾಡ್ಜ್‌ಗಳನ್ನು ಕಿಸೆಯಲ್ಲಿಟ್ಟುಕೊಂಡು ಅಣ್ಣಾಬ್ಯಾಡ್ಜ್ ಧರಿಸಿ ಉಪವಾಸ ಕೂತಿದ್ದರು.

ಭ್ರಷ್ಟಾಚಾರ ಎನ್ನುವುದು ಈ ದೇಶದ ಬಡವನಿಂದ ಹಿಡಿದು ಶ್ರಿಮಂತರವರೆಗೆ, ಅಶಿಕ್ಷಿತರಿಂದ ಹಿಡಿದು ಶಿಕ್ಷಿತರವರೆಗೆ ಎಲ್ಲರನ್ನೂ ಆವರಿಸಿರುವ ಸಮಸ್ಯೆಯಾಗಿರುವ ಕಾರಣ ನಮ್ಮ ಗುರಿ ದೇಶದ 120 ಕೋಟಿ ಜನ ಎಂದು ಅಣ್ಣಾತಂಡ ತಿಳಿದುಕೊಂಡುಬಿಟ್ಟಿತು.

ತಂಡದ ಸದಸ್ಯರು ಎಲ್ಲರನ್ನೂ ಬನ್ನಿಬನ್ನಿ ಎಂದು ಕೈಬೀಸಿ ಕರೆಯಲಾರಂಭಿಸಿದರು. ಹೀಗೆ ಬಂದವರಲ್ಲಿ ಬಹುಸಂಖ್ಯಾತರು ಮಧ್ಯಮವರ್ಗಕ್ಕೆ ಸೇರಿರುವ ನಗರ ಕೇಂದ್ರಿತ, ಉದ್ಯೋಗಸ್ಥ, ಸದಾ ಸುರಕ್ಷತೆಯ ಕಕ್ಷೆಯೊಳಗೆ ಇರಬೇಕೆಂದು ಬಯಸುವ ಮತ್ತು ಯಾವುದೇ ಚಳವಳಿಯಲ್ಲಿ ಭಾಗವವಹಿಸಿ ಕಷ್ಟ-ನಷ್ಟ ಅನುಭವಿಸದವರು.

ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಹುಟ್ಟಿದ ಮತ್ತು ಆರ್ಥಿಕ ಉದಾರೀಕರಣದ ಯುಗದಲ್ಲಿ ಕಣ್ಣುಬಿಟ್ಟ 25-35 ವಯಸ್ಸಿನ ಆಜುಬಾಜಿನ ಈ ಯುವವರ್ಗ  ಲಾಭ-ನಷ್ಟದ ಲೆಕ್ಕಾಚಾರ ಇಟ್ಟುಕೊಂಡೇ ಮುಂದೆ ಹೆಜ್ಜೆ ಇಡುವವರು. `ಸೋಡಾಗ್ಯಾಸ್` ರೀತಿ ಒಮ್ಮೆಲೇ ಚಿಮ್ಮಿದ ಈ `ಯುವಬೆಂಬಲ`ವನ್ನು ಅಣ್ಣಾತಂಡ ನಂಬಿತು.ನಂಬಿಕೆ ಕೈಕೊಟ್ಟಿತು.

 ಈ ಮಧ್ಯಮ ವರ್ಗ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಯಾವುದೇ ದೇಶದಲ್ಲಿ ರಾಜಕೀಯ ಇಲ್ಲವೆ ಸಾಮಾಜಿಕ ಬದಲಾವಣೆಯಲ್ಲಿ ಭಾಗವಹಿಸಿಲ್ಲ. ಇದನ್ನು ಹೇಳಿದಾಗ ಕೆಲವರು ಅರಬ್‌ರಾಷ್ಟ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಉದಾಹರಣೆ ಕೊಡಬಹುದು. ಅಲ್ಲಿನ ಮಧ್ಯಮವರ್ಗದಿಂದಲೇ ಚಳವಳಿ ಪ್ರಾರಂಭವಾದರೂ ಅದು ಅನ್ಯಾಯಕ್ಕೀಡಾದ ಎಲ್ಲ ವರ್ಗಗಳನ್ನು ಜತೆಯಲ್ಲಿ ಕಟ್ಟಿಕೊಂಡು ಬೆಳೆಯುತ್ತಾಹೋಯಿತು.

ಆ ದೇಶಗಳಲ್ಲಿ ಸರ್ವಾಧಿಕಾರದಿಂದ ನಲುಗಿಹೋದ ಸಾಮಾನ್ಯ ಜನ ಅದರಲ್ಲಿ ಭಾಗವಹಿಸಿದ್ದರು. ಪ್ರಾಣವೊಂದನ್ನು ಬಿಟ್ಟು ಕಳೆದುಕೊಳ್ಳಲು ಬೇರೆ ಏನೂ ಇಲ್ಲದವರು ಅವರು. ಇಲ್ಲಿ ಹಾಗಾಗಲಿಲ್ಲ. ಅಣ್ಣಾಚಳವಳಿ ಎತ್ತಿದ ಭ್ರಷ್ಟಾಚಾರದ ವಿಷಯ ಎಲ್ಲರಿಗೆ ಸಂಬಂಧಿಸಿದ್ದೇ ಆಗಿದ್ದರೂ ಅದರ ತೀವ್ರತೆಯ ಅನುಭವ ಬೇರೆಬೇರೆ ವರ್ಗದ ಜನರಿಗೆ ಬೇರೆಬೇರೆ ರೀತಿಯದಾಗಿದೆ.

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವ ರೈತ, ಹೆಚ್ಚು ಸಂಬಳ ಸಿಗುತ್ತಿಲ್ಲ ಎನ್ನುವ ಕಾರ್ಮಿಕ, ಲಿಂಗತಾರತಮ್ಯ  ನಡೆಯುತ್ತಿದೆ ಎನ್ನುವ ಮಹಿಳೆ, ಜಾತಿತಾರತಮ್ಯದಿಂದಾಗಿ ದೌರ್ಜನ್ಯ ನಡೆಯುತ್ತಿದೆ ಎನ್ನುವ ದಲಿತರು, ಉದ್ಯೋಗ ಸಿಗುತ್ತಿಲ್ಲ ಎನ್ನುವ ಯುವಕರು..ಹೀಗೆ ಸಮಸ್ಯೆಗಳು ಹತ್ತಾರು.

ಇವರ ಕಷ್ಟಗಳ ಪಟ್ಟಿಯಲ್ಲಿ ಭ್ರಷ್ಟಾಚಾರ  ಇದ್ದರೂ ಅದು ಮೊದಲ ಸ್ಥಾನದಲ್ಲಿ ಇಲ್ಲ. ಭ್ರಷ್ಟಾಚಾರ ನಿರ್ಮೂಲನೆ ಇವರ ಕಷ್ಟಪರಿಹಾರಕ್ಕೆ ನೆರವಾಗಲೂಬಹುದು. ಆದರೆ ಇದನ್ನು ಯಾರೂ ಅವರಿಗೆ ಮನವರಿಕೆ ಮಾಡಿಕೊಟ್ಟಿಲ್ಲ.

ಆದುದರಿಂದ ಅವರಲ್ಲಿ ಹೆಚ್ಚಿನ ಮಂದಿ ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ದೂರವೇ ಉಳಿದುಬಿಟ್ಟರು. ಅವರನ್ನು ಹತ್ತಿರಕ್ಕೆ ಕರೆದುಕೊಂಡು ಬರುವ ಪ್ರಯತ್ನವನ್ನೂ ಯಾರೂ ಮಾಡಲಿಲ್ಲ. ಈ ಕಾರಣದಿಂದಾಗಿಯೇ ಜನಲೋಕಪಾಲರ ನೇಮಕಕ್ಕಾಗಿ ನಡೆದ ಹೋರಾಟ ನಿಜವಾದ ಅರ್ಥದಲ್ಲಿ ಜನಚಳವಳಿ ಆಗಲೇ ಇಲ್ಲ.

ಅಣ್ಣಾಚಳವಳಿ ವಿಫಲಗೊಂಡ ಮಾತ್ರಕ್ಕೆ ಮುಂದಿನ ಎಲ್ಲ ದಾರಿಗಳು ಮುಚ್ಚಿಹೋಗಿವೆ ಎಂದರ್ಥ ಅಲ್ಲ. ರಾಷ್ಟ್ರೀಯ ಪಕ್ಷಗಳು ನಿಧಾನವಾಗಿ ಮರೆಗೆ ಸರಿದು ಪ್ರಾದೇಶಿಕ ಪಕ್ಷಗಳು ವಿಜೃಂಭಿಸುತ್ತಿರುವ ಈಗಿನ ರಾಜಕಾರಣದಿಂದಲೂ ಚಳವಳಿಗಾರರೂ ಕಲಿಯಬೇಕಾದ ಪಾಠ ಇದೆ.

ಬಹುಶಃ ರಾಷ್ಟ್ರಮಟ್ಟದ ಒಂದು ಚಳವಳಿಯನ್ನು ಇನ್ನುಮುಂದೆ ನಡೆಸಿಕೊಂಡು ಹೋಗುವುದು ಸಾಧ್ಯ ಇಲ್ಲವೇನೋ? ಇದರಿಂದ ನಿರಾಶರಾಗಬೇಕಾಗಿಲ್ಲ, ಈಗಲೂ ದೇಶದ ನಾನಾಭಾಗಗಳಲ್ಲಿ ನೀರು,ಭೂಮಿ, ಉದ್ಯೊಗ, ಶಿಕ್ಷಣ,ಆರೋಗ್ಯ,ಆತ್ಮಗೌರವ...ಹೀಗೆ ನಾನಾ ಉದ್ದೇಶದ ಚಳವಳಿಗಳು ತಮ್ಮ ಮಿತಿಯಲ್ಲಿ ನಡೆಯುತ್ತಿರುತ್ತವೆ.

ಪ್ರಜಾಪ್ರಭುತ್ವವನ್ನು ಜೀವಂತವಾಗಿ ಮತ್ತು ಆರೋಗ್ಯಪೂರ್ಣವಾಗಿ ಇಟ್ಟಿರುವ ಈ ಸಣ್ಣಸಣ್ಣ ಚಳವಳಿಗಳೇ ಭವಿಷ್ಯದ ಭರವಸೆಗಳು. ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ.