Saturday, September 16, 2017

ಪತ್ರಕರ್ತ ನಟೇಶ್ ಬಾಬು ಗೌರಿ ನಿಂದಕರನ್ನು ಉದ್ದೇಶಿಸಿ ಬರೆದದ್ದು

ಮನಸ್ಸು ಮಾಡಿದ್ದರೆ ಸಾಮಾನ್ಯ ಗೃಹಿಣಿಯಂತೆ ಮನೆಯ ನಾಲ್ಕುಗೋಡೆಗಳ ನಡುವೆ ಉಳಿದುಬಿಡಬಹುದಿತ್ತು. ಟಿ.ವಿ ಸೀರಿಯಲ್ ನಾಳೆ ಏನಾಗುತ್ತೋ ಎಂದು ಚರ್ಚಿಸುತ್ತಾ, ಬೆಳಗಿನ ತಿಂಡಿಗೆ ಪದಾರ್ಥಗಳನ್ನು ಹೊಂದಿಸುತ್ತಾ ಕಳೆದು ಹೋಗಬಹುದಿತ್ತು. ಇಲ್ಲವೇ, ಯಾವುದೋ ಪತ್ರಿಕೆ ಅಥವಾ ಟಿ.ವಿ ಚಾನೆಲ್ ನಲ್ಲಿ ಲಕ್ಷಗಟ್ಟಲೇ ಸಂಬಳ, ಹೆಸರು ಗಳಿಸುತ್ತಾ, ತಮಗೆ ಆಗದವರನ್ನು ದೂಷಿಸುತ್ತಾ ಜೀವನ ಕಳೆಯಬಹುದಿತ್ತು. ಹೀಗೆ ಬದುಕಿದ್ದ ಪಕ್ಷದಲ್ಲಿ ಆಕೆಗೆ ಅಕಾಲಿಕ ಸಾವು ತಪ್ಪುತ್ತಿತ್ತು. ಆದರೆ, ಇಂಥ ಬದುಕನ್ನು ಗೌರಿಯಂಥ ದಿಟ್ಟೆ ಹೇಗೆ ಒಪ್ಪುತ್ತಾಳೆ? ಗೌರಿ ಆಯ್ಕೆ ಮಾಡಿಕೊಂಡದ್ದು ಮುಳ್ಳಿನ ಹಾದಿ. ತನ್ನ ಅಪ್ಪ ನಂಬಿದ್ದ ವಿಚಾರ, ಹೋರಾಟಗಳನ್ನು ಮುಂದುವರಿಸಲು ಬದುಕನ್ನು ಮೀಸಲಿಟ್ಟಳು. ಪತ್ರಿಕೆಯನ್ನು ಕೋಮುವಿರೋಧಿಗಳು, ಜಾತಿವಾದಿಗಳು, ದುಷ್ಟರನ್ನು ಹಣಿಯಲು ಅಸ್ತ್ರ ಮಾಡಿಕೊಂಡರು. ಯಾರೋ ಒಬ್ಬ ದಲಿತ, ಅಲ್ಪಸಂಖ್ಯಾತ, ದುರ್ಬಲನ ನೋವುಗಳಿಗೆ ದನಿಯಾದರು. ಶೋಷಿತರಿಗೆ ಶಕ್ತಿ ತುಂಬಿದಳು. ಸುತ್ತಾಟಗಳಿಗಂತೂ ಕೊನೆಯೇ ಇಲ್ಲ. ಅಲ್ಲೊಂದು ಪ್ರತಿಭಟನೆ, ಇಲ್ಲೊಂದು ಶಾಂತಿ ಸಭೆ, ಮತ್ತೆಲ್ಲೊ ಜಾಗೃತಿ ಜಾಥಾ ಹೀಗೆ ನೂರೊಂದು ಕೆಲಸಗಳು. ಕೋಮುವಾದ ಮತ್ತು ಮೌಢ್ಯದ ವಿರುದ್ಧ ಸಿಡಿದೆದ್ದಾಗ ಸಾವಿರಾರು ಶತ್ರುಗಳು ಎದ್ದು ನಿಂತರು. 

ಸೈದ್ಧಾಂತಿಕವಾಗಿ ಉತ್ತರ ನೀಡಲಾಗದ ಹೇಡಿಗಳು ಗೌರಿಯ ಸಿಗರೇಟು ಸೇವನೆಯನ್ನು ಗೇಲಿ ಮಾಡಿದರು. ಬದುಕಿರುವ ತನಕ ಕತ್ತಿ ಮಸೆಯುತ್ತಿದ್ದ ಕೋಮುವಾದಿಗಳಿಗೆ ಆಕೆಯ ಸಾವು ಒಳಗೊಳಗೆ ಖುಷಿ ತಂದಿದೆ. ಆದರೆ, ಸಭ್ಯರಂತೆ ಈಗ ನೀತಿ ಪಾಠ ಹೇಳಲು ನಿಂತಿದ್ದಾರೆ. ಸಾವನ್ನು ಯಾರೂ ಸಂಭ್ರಮಿಸಬಾರದು. ಆದರೆ, ಆ ವಿವೇಕ ಹೊಂದಿದವರು ಹೇಗೆ ದಾರಿ ತಪ್ಪುವರು? ಅನಂತಮೂರ್ತಿ ಸತ್ತಾಗ ಸಂಭ್ರಮಿಸಿದ್ದ ಮನಸ್ಸುಗಳೇ ಗೌರಿ ಹತ್ಯೆಯಲ್ಲೂ ಸಂಭ್ರಮಿಸಿವೆ. ಪೊಲೀಸರು ಮತ್ತು ಕಾನೂನಿನ ಭಯದಿಂದ ಕೆಲವರು ತಮ್ಮ ವಾಂತಿಯನ್ನು ಹೊಟ್ಟೆಯೊಳಗೇ ಹಿಡಿದಿಟ್ಟುಕೊಂಡಿದ್ದಾರೆ! ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗೆ ಸೊಂಟದ ಕೆಳಗಿನ ಭಾಷೆ ಬಳಸುವ "ಸಂಸ್ಕೃತಿ' ರಕ್ಷಕರು, ಅವಕಾಶ ಸಿಕ್ಕಿದರೆ ಯಾವುದೇ ಸಾಹಸಕ್ಕೂ ಸೈ. ಆಕೆ ಇಂದು ನಮ್ಮ ನಡುವೆ ಇಲ್ಲ. ಆದರೆ, ಆಕೆ ಹೊತ್ತಿಸಿದ ದೀಪದ ಬೆಳಕು ಇನ್ನೂ ಇದೆ. ನಾಳೆಯೂ ಇರುತ್ತದೆ. ಗೌರಿ ಎನ್ನುವುದು ಒಬ್ಬ ವ್ಯಕ್ತಿಯಾಗಿ ಅಲ್ಲ, ಒಂದು ರೂಪಕವಾಗಿ ನಮ್ಮೊಂದಿಗೆ ಮುಂದುವರಿಯುತ್ತದೆ. ಮತ್ತು ಮುಂದುವರಿಯಬೇಕು.

ನಾನು ಕಂಡ ಗೌರಿ ಇಲ್ಲಿದ್ದಾಳೆ. ನಿಮಗೆ ಬೇರೆ ರೀತಿ ಕಂಡರೆ ನಾನು ಏನು ಮಾಡಲು ಸಾಧ್ಯ?

Thursday, September 14, 2017

ಶಾಸಕ ಸುರೇಶ್ ಕುಮಾರ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ

ಗೌರಿ ಲಂಕೇಶ್ ಹತ್ಯಾ ವಿರೋಧಿ ಸಮಾವೇಶವನ್ನು ಕಾಂಗ್ರೆಸ್ ಪ್ರಾಯೋಜಿತ ಮತ್ತು ಇದಕ್ಕೆ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರೇ ಮಾರ್ಗದರ್ಶಕರು ಎಂದು ಆರೋಪಿಸಿರುವ ಶಾಸಕ ಸುರೇಶ್ ಕುಮಾರ್ ಅವರ ಬಗ್ಗೆ ನನಗೆ ಮರುಕ ಇದೆ.
ಗೌರಿ ನಾನು ಪ್ರತಿನಿಧಿಸುವ ಪತ್ರಕರ್ತರ ಕುಟುಂಬಕ್ಕೆ ಸೇರಿದವರು. ಅವರ ಮೇಲಿನ ಪ್ರೀತಿ ಮತ್ತು ಹತ್ಯೆಯಿಂದಾಗಿರುವ ಆಘಾತ ಸಮಾವೇಶದಲ್ಲಿ ಒಬ್ಬ ಕಾರ್ಯಕರ್ತನಾಗಿ ನನ್ನನ್ನು ಪಾಲ್ಗೊಳ್ಳುವಂತೆ ಮಾಡಿದೆ. ಆ ದಿನ ಅಲ್ಲಿ ಪ್ರವಾಹದೋಪಾದಿಯಲ್ಲಿ ಸೇರಿದ್ದ ಜನ ಇದೇ ಭಾವನೆಯಿಂದ ಪಾಲ್ಗೊಂಡವರು. ಇದನ್ನು ರಾಜಕೀಯ ಪಕ್ಷವೊಂದರ ಪ್ರಾಯೋಜಿತ ಎಂದು ಹಂಗಿಸಿ ಆ ಜನರ ಭಾವನೆಯನ್ನು ಅವಮಾನಿಸಬೇಡಿ ಎಂದಷ್ಟೇ ಸುರೇಶ್ ಕುಮಾರ್ ಅವರನ್ನು ನಾನು ಕೇಳಿಕೊಳ್ಳುತ್ತೇನೆ.
ಆ ಸಮಾವೇಶ ನಿಜಕ್ಕೂ ಕಾಂಗ್ರೆಸ್ ಪ್ರಾಯೋಜಿಸಿದ್ದು ಎಂದು ಸುರೇಶ್ ಕುಮಾರ್ ನಂಬಿದ್ದರೆ, ಇನ್ನೈದು ವರ್ಷಗಳ ಕಾಲ ಅವರ ಪಕ್ಷದ ರಾಜಕೀಯ ವನವಾಸದ ಜನಾಧೇಶಕ್ಕಾಗಿ ಚುನಾವಣಾ ಫಲಿತಾಂಶದ ವರೆಗೆ ಕಾಯಬೇಕಾಗಿಲ್ಲ.
ಸುರೇಶ್ ಕುಮಾರ್ ಅವರ ಪತ್ನಿ ಪತ್ರಕರ್ತೆಯಾಗಿರುವುದರಿಂದ ಅವರು ಕೂಡಾ ನಮ್ಮ ಕುಟುಂಬದ ಸದಸ್ಯರು ಎಂದು ನಾನು ತಿಳಿದುಕೊಂಡಿದ್ದೇನೆ. ಹೀಗಿದ್ದೂ ಪತ್ರಕರ್ತೆಯೊಬ್ಬರ ಸಾವಿನ ಸಂತಾಪ ಸಭೆಯನ್ನು ಸಾಮಾಜಿಕ ಜಾಲತಾಣದಲ್ಲಿ ಗೇಲಿಮಾಡುತ್ತಿರುವುದು ಸುರೇಶ್ ಕುಮಾರ್ ಸಾಗುತ್ತಿರುವ ದಾರಿಯನ್ನು ಸೂಚಿಸುತ್ತದೆ.
ರಾಜಕೀಯ ಪಕ್ಷದ ನಿಷ್ಠಾವಂತ ಸದಸ್ಯನೆನಿಸಿಕೊಳ್ಳಲು ಈ ರೀತಿ ತಮ್ಮ ಆತ್ಮಸಾಕ್ಷಿಯನ್ನು ಮಾರಿಕೊಳ್ಳುವುದು ಅನಿವಾರ್ಯವೇ ಸುರೇಶ್ ಕುಮಾರ್?
ಈ ಸಮಾವೇಶವನ್ನು ಕೇವಲ ನಾಲ್ಕು ದಿನಗಳ ಕಿರು ಅವಧಿಯಲ್ಲಿ ಯೋಜಿಸಿ ಯಶಸ್ಸುಗೊಳಿಸಲು ಹಿರಿಯರು-ಕಿರಿಯರನ್ನೊಳಗೊಂಡ ತಂಡ ರಾತ್ರಿ ಹಗಲೆನ್ನದೆ, ಊಟ-ನಿದ್ದೆ ಬಿಟ್ಟು ಶ್ರಮಿಸಿದೆ. ಆದ್ದರಿಂದ ಸುರೇಶ್ ಕುಮಾರ್ ಅವರ ಆರೋಪದಿಂದ ನನಗೆ ಆಗಿರುವ ನೋವಿಗಿಂತಲೂ ಹೆಚ್ಚಾಗಿ, ಸಮಾವೇಶದ ಯಶಸ್ಸಿನ ಹೊಣೆಯನ್ನು ನನ್ನ ಮೇಲೆ ಹೊರಿಸಿರುವುದು ನನ್ನನ್ನು ಅಪರಾಧಿ ಪ್ರಜ್ಞೆಯಿಂದ ನರಳುವಂತೆ ಮಾಡಿದೆ.
ಸಾಧ್ಯವಾದರೆ ಸುರೇಶ್ ಕುಮಾರ್ ಅವರು ತಮ್ಮ ಆತ್ಮಸಾಕ್ಷಿ ಯನ್ನು ಒಮ್ಮೆ ಕೇಳಿಕೊಂಡು ನನ್ನ ಮೇಲೆ ಮಾಡಿರುವ ಆರೋಪವನ್ನು ಹಿಂದಕ್ಕೆ ಪಡೆದು ಸಜ್ಜನಿಕೆಯನ್ನು ಮೆರೆಯಬೇಕೆಂದು ಕೇಳಿಕೊಳ್ಳುತ್ತೇನೆ.

Tuesday, September 12, 2017

ಇಂದಿರಾ ಲಂಕೇಶ್ ಬಿಡುಗಡೆಗೊಳಿಸಿದ ಗೌರಿ ಲಂಕೇಶ್ ಪತ್ರಿಕೆಯ ವಿಶೇಷಾಂಕದಲ್ಲಿರುವ ಗೌರಿಯ ನನ್ನದೊಂದು ಸಣ್ಣ ನೆನಪು

ನಾವೆಲ್ಲ ಲಂಕೇಶ್ ಪತ್ರಿಕೆ ಎಂಬ ಏಕೋಪಾಧ್ಯಾಯ ಪಾಠಶಾಲೆಯ ವಿದ್ಯಾರ್ಥಿಗಳು. ನನಗೆ ಲಂಕೇಶ್ ತರಗತಿಯಲ್ಲಿ ಕಲಿಸಿದ ಗುರುವಲ್ಲ. ನನ್ನಂತಹ ಸಾವಿರಾರು ಏಕಲವ್ಯರಿಗೆ ಅವರು ಮಾನಸಗುರುಗಳು. ‘ಲಂಕೇಶ್ ಅವರ ವಾರಸುದಾರರು ನೀವು ಮೂವರು ಮಕ್ಕಳು ಮಾತ್ರ ಎಂದು ತಿಳಿಯಬೇಡಿ, ಅವರಿಂದ ಕಲಿತು ಬೆಳೆದ ನಮ್ಮಂತಹ ಲಕ್ಷಾಂತರ ಮಂದಿ ಇದ್ದಾರೆ’ ಎಂದು ಗೌರಿ ‘ಅಪ್ಪ’ ‘ಅಪ್ಪ’ ಎಂದಾಗ ನಾನು ಕಿಚಾಯಿಸಿದ್ದುಂಟು.

ಲಂಕೇಶ್ ಅವರ ಶಿಷ್ಯರು, ಅಭಿಮಾನಿಗಳು, ವಾರಸುದಾರರು ಎಂದು ತಿಳಿದುಕೊಂಡ ಒಂದು ದೊಡ್ಡ ಗುಂಪು ಇಂದಿನ ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿದೆ. ಆದರೆ ಗೌರಿ ಅಪ್ಪನನ್ನು ಮೀರಿಸಿದ್ದಾಳೆ. ಎಷ್ಟೊಂದು ಮಂದಿಗೆ ಈಕೆ ಅಮ್ಮ… ಎಷ್ಟೊಂದು ಮಕ್ಕಳು...
ಕಳೆದ ಕೆಲವು ದಿನಗಳಲ್ಲಿ ರಾಜ್ಯ ಮಾತ್ರ ಯಾಕೆ ದೇಶ-ವಿದೇಶಗಳಿಂದಲೂ ‘ನಾನು ಗೌರಿ’ ಎನ್ನುವ ಘೋಷಣೆ ಅನುರಣಿಸತೊಡಗಿದೆ. ಲಕ್ಷಾಂತರ ಯುವಕರು-ಯುವತಿಯರು, ವಿದ್ಯಾರ್ಥಿಗಳು ಸ್ವಂತ ಅಮ್ಮನನ್ನು, ಅಕ್ಕನನ್ನು ಕಳೆದುಕೊಂಡವರಂತೆ ರೋದಿಸತೊಡಗಿದ್ದಾರೆ. ಈ ಪ್ರೀತಿಗೆ ಗೌರಿ ಖಂಡಿತ ಅರ್ಹಳಾಗಿದ್ದಳು. ತನಗಿಂತ ಕಿರಿಯರನ್ನು ಆಕೆ ಅತ್ಯಂತ ಪ್ರೀತಿಯಿಂದ ಸಂಬೋಧಿಸುತ್ತಿದ್ದುದೇ ‘ಮರಿ’ ಮತ್ತು ‘ಕೂಸು’ ಎಂದು.

ಮಕ್ಕಳನ್ನು ಹೆತ್ತು ಅಮ್ಮನೆನಿಸಿಕೊಳ್ಳದೆ ಲಕ್ಷಾಂತರ ಮಕ್ಕಳಿಗೆ ಪ್ರೀತಿ ಕೊಟ್ಟು ಅಮ್ಮನಾದವಳು ಗೌರಿ. ಆಕೆಯ ಗುಬ್ಬಚ್ಚಿಯಂತ ಸಣ್ಣ ದೇಹದೊಳಗಿದ್ದ ದೊಡ್ಡ ಹೃದಯದಲ್ಲಿ ಪ್ರೀತಿಯೊಂದನ್ನು ಬಿಟ್ಟು ಇತರರಿಗೆ ಕೊಡಲು ಬೇರೆ ಏನೂ ಇರಲಿಲ್ಲ.

ಲಂಕೇಶ್ ನಿಧನಾನಂತರ ಮಕ್ಕಳು ಪತ್ರಿಕೆಯನ್ನು ಕೈಗೆ ತೆಗೆದುಕೊಂಡಾಗ ನನಗೆ ಬೇಸರವಾಗಿತ್ತು. ಮಕ್ಕಳಿಗೆ ಅಪ್ಪನ ಮೇಲೆ ಹಕ್ಕು ಇರಬಹುದು, ಆದರೆ ಆ ಅಪ್ಪ ಪ್ರಾರಂಭಿಸಿದ್ದ ಪತ್ರಿಕೆ ರಾಜ್ಯದ ಲಕ್ಷಾಂತರ ಓದುಗರ ಆಸ್ತಿಯಾಗಿತ್ತು. ಮಕ್ಕಳು ಅದನ್ನು ವಶಕ್ಕೆ ತೆಗೆದುಕೊಂಡದ್ದು ನನ್ನಂತಹವರಿಗೆ ಇಷ್ಟವಾಗಿರಲಿಲ್ಲ. ಅದಕ್ಕೆ ತಕ್ಕ ಹಾಗೆ ಲಂಕೇಶ್ ಅವರ ಹಳೆಯ ಬರಹಗಳನ್ನೇ ಹೆಚ್ಚು ಮುದ್ರಿಸುತ್ತಾ, ಅಪ್ಪನ ಹೆಸರನ್ನೇ ಬಳಸಿಕೊಂಡು ಪತ್ರಿಕೆ ಹೊರಬರುತ್ತಿರುವುದು ಕಂಡು ನಿರಾಶೆಯಾಗಿತ್ತು.

ಆಗಿನ ಗೌರಿಯ ಒಳಗಿನ ಕಷ್ಟಗಳು ಏನಿತ್ತೋ ಗೊತ್ತಿಲ್ಲ. ಕೊನೆಗೆ ಅದರಿಂದ ಹೊರಬಂದು ‘ಗೌರಿ ಲಂಕೇಶ್’ ಎಂಬ ಹೆಸರಿನ ಸ್ವಂತ ಪತ್ರಿಕೆ ಪ್ರಾರಂಭಿಸಿದ ನಂತರವೇ ಗೌರಿ ಮತ್ತು ಪತ್ರಿಕೆಯ ಕಡೆ ನಾನು ಕುತೂಹಲದಿಂದ ನೋಡಲಾರಂಭಿಸಿದ್ದು.

ಗೌರಿ ಸಂಪಾದಕತ್ವದಲ್ಲಿ ನಿಧಾನವಾಗಿ ಬದಲಾಗುತ್ತಿದ್ದ ಪತ್ರಿಕೆ ಅನೇಕ ಟೀಕೆ-ಟಿಪ್ಪಣಿಗಳನ್ನು ಎದುರಿಸುತ್ತಾ ಬಂದಿದೆ. ಅದರಲ್ಲಿ ಮುಖ್ಯವಾದುದು ಗೌರಿ Journalism ಮತ್ತು Activisam ನಡುವಿನ ಗೆರೆಯನ್ನು ಅಳಿಸಿ ಹಾಕಿದಳೆಂಬುದು. ಕಳೆದ ಬುಧವಾರ ವಿಕ್ಟೋರಿಯಾ ಶವಾಗಾರದಲ್ಲಿ ಭೇಟಿಯಾಗಿದ್ದ ಇಂದ್ರಜಿತ್ ಕೂಡಾ ಇದನ್ನೇ ಪರೋಕ್ಷವಾಗಿ ನನ್ನೊಡನೆ ಹೇಳಿದ್ದರು. ನಾನು ವೃತ್ತಿಯಲ್ಲಿ ಸಕ್ರಿಯನಾಗಿದ್ದಾಗ ಒಮ್ಮೊಮ್ಮೆ ನನಗೂ ಹಾಗೆ ಅನಿಸುತ್ತಿತ್ತು.

ಹಾಗಿದ್ದರೆ ಲಂಕೇಶ್ Activist ಆಗಿರಲಿಲ್ಲವೇ?ಲಂಕೇಶ್ ಒಬ್ಬ ಪಕ್ಕಾ ಕಸುಬುದಾರ ಪತ್ರಕರ್ತರಾಗಿದ್ದರೆಂಬುದು ನಿಜ. ಅವರು Journalism ಮತ್ತು Actvisam ನಡುವೆ ಗೆರೆ ಹಾಕಿಕೊಂಡಿದ್ದರೂ ಆಗಾಗ ತಾನೆ ಎಳೆದ ಗೆರೆಯನ್ನು ದಾಟುವ ಪ್ರಯತ್ನ ಮಾಡಿದ್ದರು ಎನ್ನುವುದು ಕೂಡ ನಿಜ. ಗುಂಡೂರಾವ್ ಸರ್ಕಾರದ ಪದಚ್ಯುತಿ, ಕ್ರಾಂತಿರಂಗದ ರಚನೆಯಲ್ಲಿ ಸಂಪಾದಕನಂತೆ ಮಾತ್ರವಲ್ಲ, ಅದರ ಹೊರಗೆ ನಿಂತು ರಾಜಕೀಯ ಕಾರ್ಯಕರ್ತನಂತೆ ಕೂಡಾ ಕಾರ್ಯನಿರ್ವಹಿಸಿದ್ದರು. 

ನಂತರದ ದಿನಗಳಲ್ಲಿ ತಮ್ಮದೇ ರಾಜಕೀಯ ಪಕ್ಷ ಸ್ಥಾಪಿಸಿದ್ದರು, ತೃತೀಯ ರಂಗ ಹುಟ್ಟುಹಾಕಲು ಪ್ರಯತ್ನಿಸಿದ್ದರು. . ಚುನಾವಣೆಯ ಕಾಲದಲ್ಲಿ ‘ಇಂತಹವರನ್ನು ಸೋಲಿಸಿ, ಗೆಲ್ಲಿಸಿ’ ಎಂದು ಫರ್ಮಾನು ಹೊರಡಿಸುತ್ತಿದ್ದರು. ಇವೆಲ್ಲವೂ ಕನ್ನಡದ ಪತ್ರಿಕಾ ಲೋಕಕ್ಕೆ ಹೊಸಪ್ರಯೋಗವಾಗಿತ್ತು. ಸಾಂಪ್ರದಾಯಿಕ ಸಂಪಾದಕನೊಬ್ಬ ಯೋಚನೆಯನ್ನೂ ಮಾಡದಿದ್ದ ನಿರ್ಧಾರಗಳು. ಆ ಅರ್ಥದಲ್ಲಿ ಅವರೂ ಒಬ್ಬ Activist Journalist ಆಗಿದ್ದರು

ಎಂಬತ್ತರ ದಶಕದಲ್ಲಿನ ದಲಿತ, ರೈತ ಮತ್ತು ಭಾಷಾ ಚಳುವಳಿಗಳಿಂದಾಗಿ ಇಡೀ ರಾಜ್ಯದಲ್ಲಿ ಸಾಮಾಜಿಕ,ರಾಜಕೀಯ ಮತ್ತು ಸಾಂಸ್ಕೃತಿಕ ಎಚ್ಚರದ ವಾತಾವರಣ ನಿರ್ಮಾಣವಾಗಿತ್ತು. ಆ ಕಾಲದ ಕರೆಯನ್ನು ಸರಿಯಾಗಿ ಗ್ರಹಿಸಿದ್ದ ಲಂಕೇಶ್ ಪತ್ರಿಕೆಯನ್ನು ಜಾಣಜಾಣೆಯರಿಗಾಗಿ ರೂಪಿಸುತ್ತಾ ಹೋದರು. ಲಂಕೇಶ್ ರೀತಿ ಯೋಚನೆ ಮಾಡುವುದೇ ಹೆಮ್ಮೆ ಎಂದು ಅನಿಸುತ್ತಿದ್ದ ಕಾಲ.ಅದು.

ಗೌರಿ ಬದುಕಿದ್ದು ಚಳುವಳಿಗಳೆಲ್ಲ ಸೊರಗಿ ಹೋಗಿರುವ, ಸಾರ್ವಜನಿಕ ಆತ್ಮ ಸಾಕ್ಷಿಯೇ ಸತ್ತುಹೋಗಿದೆಯೇನೋ ಎಂಬ ಆತಂಕ ಹುಟ್ಟಿಸಿರುವ, ಸಜ್ಜನರನ್ನು ಮೀರಿ ದುರ್ಜನರ ಸಂತತಿ ಬೆಳೆಯುತ್ತಿದೆಯೇನೋ ಎಂದು ನಮ್ಮಲ್ಲಿಯೇ ಅನುಮಾನ ಹುಟ್ಟಿಸುತ್ತಿರುವ,ಪ್ರಜಾಪ್ರಭುತ್ವದ ಅಸ್ತಿತ್ವವೇ ಅಪಾಯದಲ್ಲಿರುವ ಕಾಲದಲ್ಲಿ. ಇದು ಲಂಕೇಶ್ ಬದುಕಿದ್ದ ಕಾಲ ಅಲ್ಲ. 

ಆಗಿನ ಕಾಲದ ಕರೆ ಲಂಕೇಶ್ ಅವರನ್ನು ರೂಪಿಸಿದ ಹಾಗೆ, ಈ ಕಾಲದ ಕರೆ ಗೌರಿಯನ್ನು ರೂಪಿಸಿತ್ತು ಎನ್ನುವುದಷ್ಟೇ ಸತ್ಯ.

ಆದ್ದರಿಂದ ಗೌರಿ ಹೊಸ ಆ್ಯಕ್ಟಿವಿಸ್ಟ್ ಜರ್ನಲಿಸ್ಟ್ ಆಗಿರಲಿಲ್ಲ. ತಂದೆಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದಳು. ನನ್ನ ಗುರುಗಳಾದ ವಡ್ಡರ್ಸೆಯವರು ಪಕ್ಷಪಾತಿ ಪತ್ರಿಕೋದ್ಯಮದ ಬಗ್ಗೆ ಮಾತನಾಡುತ್ತಿದ್ದರು. ಸತ್ಯ,ಧರ್ಮ,ನ್ಯಾಯದ ಪ್ರಶ್ನೆ ಎದುರಾದಾಗ ಪತ್ರಕರ್ತರು ಪಕ್ಷಪಾತಿಗಳಾಗಿ ಇರಬೇಕಾಗುತ್ತದೆ ಎನ್ನುವುದು ಅವರ ವಾದವಾಗಿತ್ತು.

ಗೌರಿ ಅಂತಹ ಪಕ್ಷಪಾತಿ ಪತ್ರಿಕೋದ್ಯಮದ ಪರವಾಗಿದ್ದರು.ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್, ಆರ್.ಎಸ್.ಎಸ್., ಬಾಬಾಬುಡನ್ ಗಿರಿ ವಿವಾದ, ನಕ್ಸಲಿಸಂ ರಾಘವೇಶ್ವರ ಸ್ವಾಮೀಜಿ ಮೇಲಿನ ಅತ್ಯಾಚಾರದ ಆರೋಪ…ಇಂತಹ ಹಲವಾರು ವಿಷಯಗಳ ಬಗ್ಗೆ ಅವರು ಒಂದು ಕಡೆ ಗಟ್ಟಿಯಾಗಿ ನೆಲಕಚ್ಚಿ ನಿಂತು ಪತ್ರಕರ್ತೆಯ ಕರ್ತವ್ಯ ನಿರ್ವಹಿಸಿದ್ದಳು.

ಮಾಧ್ಯಮ ಕ್ಷೇತ್ರವೇ ಅತ್ಯಂತ ವೇಗವಾಗಿ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಗೌರಿ ಜನಪರವಾಗಿ ನಿಂತು ತನ್ನ ಪತ್ರಿಕೆಯ ಮೂಲಕವೇ ಸಾಮಾಜಿಕ-ರಾಜಕೀಯ ಹೋರಾಟವನ್ನು ನಡೆಸುತ್ತಿದ್ದರು. ಸಂಪ್ರದಾಯಸ್ಥ ಪತ್ರಕರ್ತರಿಗೆ ಗೌರಿ ವೃತ್ತಿಯಲ್ಲಿ ಹಿಡಿದ ದಾರಿ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು, ಮುಖ್ಯವಾಹಿನಿಯ ಪತ್ರಿಕೆಗಳ ಓದುಗರಿಗೆ ಗೌರಿಯ ಈ ನಿಲುವು ಅತಿರೇಕದ್ದು ಎಂದು ಅನಿಸಿರಲೂಬಹುದು ಆದರೆ ಆಕೆಯ ಉದ್ದೇಶದ ಹಿಂದಿನ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ನೈತಿಕತೆಯನ್ನು ಎಷ್ಟು ಮಂದಿ ಪತ್ರಕರ್ತರು ಉಳಿಸಿಕೊಂಡಿದ್ದಾರೆ?

ಇಡೀ ಮಾಧ್ಯಮ ಕ್ಷೇತ್ರವೇ ಉದ್ಯಮವಾಗಿರುವಾಗ ಅಪ್ಪ ನೆಟ್ಟ ಮರಕ್ಕೆ ಜೋತುಬಿದ್ದ ಗೌರಿ ಜಾಹೀರಾತು ಇಲ್ಲದೆಯೇ ಪತ್ರಿಕೆ ನಡೆಸಬೇಕೆಂದು ತೀರ್ಮಾನಿಸಿದಾಗಲೇ ಅರ್ಧ ಸೋತುಹೋಗಿದ್ದಳು. ಅದರ ಜತೆಗೆ ಸುದ್ದಿಗಾಗಿ, ಅದರಾಚೆಗಿನ ವಿಶ್ಲೇಷಣೆಗಾಗಿ ಟಿವಿ ಚಾನೆಲ್ ಗಳಿಂದ ಹಿಡಿದು ಮೊಬೈಲ್ ವರೆಗೆ ಹಲವಾರು ಮೂಲಗಳು ಹುಟ್ಟಿಕೊಂಡಿರುವಾಗ ಪ್ರತಿ ವಾರ 15 ರೂಪಾಯಿ ಕೊಟ್ಟು ಖರೀದಿಸುವವರ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿತ್ತು.

ಇಂತಹ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಗೆಲ್ಲುವಂತಹ ಆರ್ಥಿಕ ನಿಪುಣೆ ಕೂಡಾ ಗೌರಿ ಆಗಿರಲಿಲ್ಲ. ಪಿ.ಲಂಕೇಶ್ ತನ್ನೆಲ್ಲ ಪ್ರತಿಭೆಯ ಜತೆಗೆ ಒಬ್ಬ ಪಕ್ಕಾ ವ್ಯವಹಾರಸ್ಥರಾಗಿದ್ದರು. ಗೌರಿ ಪತ್ರಿಕೆ ನಡೆಸುವ ಕಷ್ಟಗಳನ್ನೆಲ್ಲ ಹೇಳಿಕೊಳ್ಳುವಾಗ ನನಗೆ ಮುಂಗಾರು ದಿನಗಳ ವಡ್ಡರ್ಸೆ ನೆನಪಾಗುತ್ತಿದ್ದರು. ‘ಈ ತಿಂಗಳ ಸಂಬಳ ಕೊಟ್ಟಿದ್ದೇನೆ, ಮುಂದಿನ ತಿಂಗಳು ಏನೆಂದು ಗೊತ್ತಿಲ್ಲ’ ಎಂದೇ ಇತ್ತೀಚಿನ ದಿನಗಳಲ್ಲಿ ಗೌರಿ ಮಾತು ಶುರುವಾಗುತ್ತಿತ್ತು.

ಕಾಂಗ್ರೆಸ್ ಪಕ್ಷದ ಬಗ್ಗೆ ಅನೇಕ ತಕರಾರುಗಳಿದ್ದರೂ ಸಿದ್ದರಾಮಯ್ಯನವರ ಜತೆಗೆ ಮುಖ್ಯಮಂತ್ರಿ ಮತ್ತು ಪತ್ರಕರ್ತರನ್ನು ಮೀರಿದ ಬಾಂಧವ್ಯ ಇತ್ತು. ಆದರೆ ಹಲವಾರು ಬಾರಿ ಸಾರ್ವಜನಿಕ ವಿಷಯಗಳಿಗೆ ಸಂಬಂಧಿಸಿದಂತೆ ತನ್ನೆದುರಿಗೆ ಕೂತವರು ಮುಖ್ಯಮಂತ್ರಿ ಎನ್ನುವುದನ್ನೇ ಮರೆತು ತಾರಾಮಾರ ಜಗಳವಾಡುತ್ತಿದ್ದುದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ. ಮುಖ್ಯಮಂತ್ರಿಯವರು ಕೂಡಾ ಮಕ್ಕಳನ್ನು ತಂದೆ ರಮಿಸುವಂತೆ ನಸುನಗುತ್ತಾ ಸಮಾಧಾನ ಮಾಡುತ್ತಿದ್ದರು.

ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರನಾಗಿ ಕೆಲವು ಸಂಪಾದಕರ ಎರಡು ಮುಖಗಳನ್ನು ನೋಡಿ ಕಣ್ಣಾರೆ ಕಂಡು ನಾನು ಅಸಹ್ಯ ಪಟ್ಟದ್ದುಂಟು. ಆದರೆ ಗೌರಿ ತನಗಿರುವ ಸಲಿಗೆಯನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ತನಗಾಗಿ ಎಂದೂ ಏನನ್ನೂ ಸರ್ಕಾರ ಇಲ್ಲವೆ ಮುಖ್ಯಮಂತ್ರಿಯವರಿಂದ ಕೇಳಿರಲಿಲ್ಲ.

ಕೇಳಲೇ ಇಲ್ಲವೆಂದಲ್ಲ. ಮುಖ್ಯಮಂತ್ರಿಯವರ ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಬುದ್ಧನ ಮೂರ್ತಿಗಳು. ಅದರಲ್ಲೊಂದು ಮೂರ್ತಿ ಗೌರಿಯನ್ನು ಸೆಳೆದಿತ್ತು. ಆ ಮೂರ್ತಿ ನನಗೆ ಬೇಕು ಎಂದು ಗೌರಿ ನನ್ನೊಡನೆ ಹೇಳಿದಾಗ ನಾನು ಸಿಎಂ ಕಡೆ ತೋರಿಸಿದ್ದೆ. ತಕ್ಷಣ ನೇರವಾಗಿ ಸಿದ್ದರಾಮಯ್ಯನವರ ಬಳಿ ಹೋದ ಗೌರಿ ‘ ಆ ಬುದ್ದನ ಮೂರ್ತಿ ನನಗೆ ಬೇಕು’ ಎಂದು ಕೇಳಿದ್ದಳು. ಅವರು ಅಷ್ಟೇ ಅಕ್ಕರೆಯಿಂದ ‘ಕೊಂಡ್ಹೋಗಮ್ಮ’’ ಎಂದರು. ಗೌರಿ ಅದನ್ನೆತ್ತಿಕೊಂಡು ಹೋಗಿಯೇ ಬಿಟ್ಟಳು. 

ಆ ಇಡೀ ದೃಶ್ಯ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ಅದು ಮಕ್ಕಳು ಯಾವುದೋ ಬೊಂಬೆಯನ್ನು ನೋಡಿ ಬೇಕೆಂದು ತಂದೆ ಬಳಿ ರಚ್ಚೆ ಹಿಡಿದ ಹಾಗೆ, ಅಪ್ಪ ಪ್ರೀತಿಯಿಂದ ಅದನ್ನು ಮಗಳ ಕೈಗೆ ಕೊಟ್ಟ ಹಾಗೆ ಇತ್ತು. ಈ ಸರ್ಕಾರದಿಂದ, ಮುಖ್ಯಮಂತ್ರಿಗಳಿಂದ ಗೌರಿ ಪಡೆದ ಏಕೈಕ ಉಡುಗೊರೆ ಬುದ್ಧನ ಮೂರ್ತಿ ಮಾತ್ರ. ಗೌರಿ ನಮ್ಮೊಡನೆ ಇಲ್ಲ ಎಂದಾಗೆಲ್ಲ ನನಗೆ ನೆನಪಾಗುವುದು ಆ ಬುದ್ಧನ ಶಾಂತ, ನಿರ್ಲಿಪ್ತ ಮುಖಾರವಿಂದ ಮಾತ್ರ. 

ಹೌದು ನಾನು ಗೌರಿ, ನಾವೆಲ್ಲರೂ ಗೌರಿ.

                                                                                                                             - ದಿನೇಶ್ ಅಮಿನ್ ಮಟ್ಟು