Thursday, September 14, 2017

ಶಾಸಕ ಸುರೇಶ್ ಕುಮಾರ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ

ಗೌರಿ ಲಂಕೇಶ್ ಹತ್ಯಾ ವಿರೋಧಿ ಸಮಾವೇಶವನ್ನು ಕಾಂಗ್ರೆಸ್ ಪ್ರಾಯೋಜಿತ ಮತ್ತು ಇದಕ್ಕೆ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರೇ ಮಾರ್ಗದರ್ಶಕರು ಎಂದು ಆರೋಪಿಸಿರುವ ಶಾಸಕ ಸುರೇಶ್ ಕುಮಾರ್ ಅವರ ಬಗ್ಗೆ ನನಗೆ ಮರುಕ ಇದೆ.
ಗೌರಿ ನಾನು ಪ್ರತಿನಿಧಿಸುವ ಪತ್ರಕರ್ತರ ಕುಟುಂಬಕ್ಕೆ ಸೇರಿದವರು. ಅವರ ಮೇಲಿನ ಪ್ರೀತಿ ಮತ್ತು ಹತ್ಯೆಯಿಂದಾಗಿರುವ ಆಘಾತ ಸಮಾವೇಶದಲ್ಲಿ ಒಬ್ಬ ಕಾರ್ಯಕರ್ತನಾಗಿ ನನ್ನನ್ನು ಪಾಲ್ಗೊಳ್ಳುವಂತೆ ಮಾಡಿದೆ. ಆ ದಿನ ಅಲ್ಲಿ ಪ್ರವಾಹದೋಪಾದಿಯಲ್ಲಿ ಸೇರಿದ್ದ ಜನ ಇದೇ ಭಾವನೆಯಿಂದ ಪಾಲ್ಗೊಂಡವರು. ಇದನ್ನು ರಾಜಕೀಯ ಪಕ್ಷವೊಂದರ ಪ್ರಾಯೋಜಿತ ಎಂದು ಹಂಗಿಸಿ ಆ ಜನರ ಭಾವನೆಯನ್ನು ಅವಮಾನಿಸಬೇಡಿ ಎಂದಷ್ಟೇ ಸುರೇಶ್ ಕುಮಾರ್ ಅವರನ್ನು ನಾನು ಕೇಳಿಕೊಳ್ಳುತ್ತೇನೆ.
ಆ ಸಮಾವೇಶ ನಿಜಕ್ಕೂ ಕಾಂಗ್ರೆಸ್ ಪ್ರಾಯೋಜಿಸಿದ್ದು ಎಂದು ಸುರೇಶ್ ಕುಮಾರ್ ನಂಬಿದ್ದರೆ, ಇನ್ನೈದು ವರ್ಷಗಳ ಕಾಲ ಅವರ ಪಕ್ಷದ ರಾಜಕೀಯ ವನವಾಸದ ಜನಾಧೇಶಕ್ಕಾಗಿ ಚುನಾವಣಾ ಫಲಿತಾಂಶದ ವರೆಗೆ ಕಾಯಬೇಕಾಗಿಲ್ಲ.
ಸುರೇಶ್ ಕುಮಾರ್ ಅವರ ಪತ್ನಿ ಪತ್ರಕರ್ತೆಯಾಗಿರುವುದರಿಂದ ಅವರು ಕೂಡಾ ನಮ್ಮ ಕುಟುಂಬದ ಸದಸ್ಯರು ಎಂದು ನಾನು ತಿಳಿದುಕೊಂಡಿದ್ದೇನೆ. ಹೀಗಿದ್ದೂ ಪತ್ರಕರ್ತೆಯೊಬ್ಬರ ಸಾವಿನ ಸಂತಾಪ ಸಭೆಯನ್ನು ಸಾಮಾಜಿಕ ಜಾಲತಾಣದಲ್ಲಿ ಗೇಲಿಮಾಡುತ್ತಿರುವುದು ಸುರೇಶ್ ಕುಮಾರ್ ಸಾಗುತ್ತಿರುವ ದಾರಿಯನ್ನು ಸೂಚಿಸುತ್ತದೆ.
ರಾಜಕೀಯ ಪಕ್ಷದ ನಿಷ್ಠಾವಂತ ಸದಸ್ಯನೆನಿಸಿಕೊಳ್ಳಲು ಈ ರೀತಿ ತಮ್ಮ ಆತ್ಮಸಾಕ್ಷಿಯನ್ನು ಮಾರಿಕೊಳ್ಳುವುದು ಅನಿವಾರ್ಯವೇ ಸುರೇಶ್ ಕುಮಾರ್?
ಈ ಸಮಾವೇಶವನ್ನು ಕೇವಲ ನಾಲ್ಕು ದಿನಗಳ ಕಿರು ಅವಧಿಯಲ್ಲಿ ಯೋಜಿಸಿ ಯಶಸ್ಸುಗೊಳಿಸಲು ಹಿರಿಯರು-ಕಿರಿಯರನ್ನೊಳಗೊಂಡ ತಂಡ ರಾತ್ರಿ ಹಗಲೆನ್ನದೆ, ಊಟ-ನಿದ್ದೆ ಬಿಟ್ಟು ಶ್ರಮಿಸಿದೆ. ಆದ್ದರಿಂದ ಸುರೇಶ್ ಕುಮಾರ್ ಅವರ ಆರೋಪದಿಂದ ನನಗೆ ಆಗಿರುವ ನೋವಿಗಿಂತಲೂ ಹೆಚ್ಚಾಗಿ, ಸಮಾವೇಶದ ಯಶಸ್ಸಿನ ಹೊಣೆಯನ್ನು ನನ್ನ ಮೇಲೆ ಹೊರಿಸಿರುವುದು ನನ್ನನ್ನು ಅಪರಾಧಿ ಪ್ರಜ್ಞೆಯಿಂದ ನರಳುವಂತೆ ಮಾಡಿದೆ.
ಸಾಧ್ಯವಾದರೆ ಸುರೇಶ್ ಕುಮಾರ್ ಅವರು ತಮ್ಮ ಆತ್ಮಸಾಕ್ಷಿ ಯನ್ನು ಒಮ್ಮೆ ಕೇಳಿಕೊಂಡು ನನ್ನ ಮೇಲೆ ಮಾಡಿರುವ ಆರೋಪವನ್ನು ಹಿಂದಕ್ಕೆ ಪಡೆದು ಸಜ್ಜನಿಕೆಯನ್ನು ಮೆರೆಯಬೇಕೆಂದು ಕೇಳಿಕೊಳ್ಳುತ್ತೇನೆ.

No comments:

Post a Comment