Thursday, June 18, 2015

ಸಾಂಸ್ಕೃತಿಕ ರಾಜಕಾರಣ

ಪ್ರಜೆಗಳ ಆರೋಗ್ಯವನ್ನಷ್ಟೇ ಗಮನದಲ್ಲಿಟ್ಟುಕೊಂಡು ನಾಡಿನ ಪ್ರಭುಗಳು ಯೋಗ ದಿನ ಆಚರಿಸಲು ಹೊರಟರೆ ಅದಕ್ಕೆ ಧರ್ಮ, ಪಕ್ಷಗಳನ್ನು ತಳಕುಹಾಕಿ ಯಾಕೆ ರಾಡಿ ಮಾಡ್ತಿದ್ದೀರಿ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಮೇಲ್ನೋಟಕ್ಕೆ ಈ ಪ್ರಶ್ನೆ ಸದಾಶಯವನ್ನೊಳಗೊಂಡಂತೆ ಕಂಡರೂ, ಹೀಗೆ ಪ್ರಶ್ನಿಸುವವರೆಲ್ಲರೂ ಈ ಸದಾಶಯವನ್ನು ಮಾತ್ರ ಹೊಂದಿದ್ದಾರೆಂದು ಅನಿಸದಿರುವ ಕಾರಣದಿಂದಾಗಿಯೇ ವಿವಾದ ಹುಟ್ಟಿಕೊಂಡಿದೆ. ಕತ್ತಿ ಅದರಷ್ಟಕ್ಕೆ ಅಪಾಯಕಾರಿಯಾದುದಲ್ಲ, ಅದರ ಒಳಿತು-ಕೆಡುಕುಗಳು ಕತ್ತಿ ಕೈಗೆತ್ತಿಕೊಂಡವನ ಉದ್ದೇಶ-ದುರುದ್ದೇಶಗಳನ್ನು ಅವಲಂಬಿಸಿರುತ್ತದೆ. ಕತ್ತಿಯಿಂದ ಪೈರನ್ನಾದರೂ ಕೊಯ್ಯಬಹುದು, ಮನುಷ್ಯನ ಕತ್ತನ್ನಾದರೂ ಕೊಯ್ಯಬಹುದು.
ಯೋಗವು ವೈದ್ಯಕೀಯ ವಿಜ್ಞಾನದ ಭಾಗ ಎನ್ನುವುದರ ಬಗ್ಗೆ ಯಾರ ತಕರಾರೂ ಇಲ್ಲ. ಎಲ್ಲ ಧರ್ಮ, ಪಂಥ, ವರ್ಗದವರೂ ಯೋಗಾಭ್ಯಾಸ ಮಾಡುತ್ತಾರೆ. ಇದು ಹಲವು ರೋಗಗಳಿಗೆ ಯಶಸ್ವಿ ಚಿಕಿತ್ಸೆ ಎನಿಸಿಕೊಂಡಿರುವುದೂ  ಸಾಬೀತಾಗಿದೆ. ಆದರೆ ಯೋಗಾಭ್ಯಾಸದ ಪ್ರಚಾರಕ್ಕೆ ಹೊರಟವರು ಜನತೆಯ ಆರೋಗ್ಯ ಸುಧಾರಣೆ ದೃಷ್ಟಿಯನ್ನು ಮಾತ್ರ ಹೊಂದಿದ್ದಾರೆಯೇ ಎನ್ನುವುದಷ್ಟೇ ಈಗಿನ ಪ್ರಶ್ನೆ. ಘರ್ ವಾಪಸಿ, ಲವ್ ಜಿಹಾದ್, ನೈತಿಕ ಪೊಲೀಸ್‌ಗಿರಿ, ಜ್ಯೋತಿಷ, ವಾಸ್ತು ಬಗ್ಗೆ ಬೊಬ್ಬಿಡುವವರು ಯೋಗದ ಬಗ್ಗೆ ಮಾತನಾಡುವುದನ್ನು ಕಂಡಾಗ ಸಹಜವಾಗಿಯೇ ಉದ್ದೇಶದ ಬಗ್ಗೆ ಅನುಮಾನ ಮೂಡುತ್ತದೆ. ಈ ಅನುಮಾನ ನಿರಾಧಾರವಾದುದು ಕೂಡಾ ಅಲ್ಲ.
ಬಹಿರಂಗವಾಗಿ ಪಕ್ಷ ರಾಜಕಾರಣವನ್ನು, ಗುಪ್ತವಾಗಿ ಸಾಂಸ್ಕೃತಿಕ ರಾಜಕಾರಣವನ್ನು ನಡೆಸುತ್ತಿರುವ ಬಿಜೆಪಿಗೆ ಎರಡು ಬಗೆಯ ಅಜೆಂಡಾಗಳಿವೆ. ಈ ಪಕ್ಷದ ಬಹಿರಂಗ ಅಜೆಂಡಾ ಲೋಕಸಭಾ ಚುನಾವಣೆಗೆ ಮುನ್ನ  ಪ್ರಕಟಿಸಿದ ಚುನಾವಣಾ ಪ್ರಣಾಳಿಕೆಯಲ್ಲಿದೆ. ಅಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿ ರಾಜ್ಯದಲ್ಲಿ ನವದೆಹಲಿಯಲ್ಲಿರುವ ‘ಏಮ್ಸ್’ ಮಾದರಿಯ ಆಸ್ಪತ್ರೆಗಳಿಂದ ಹಿಡಿದು ಸೊಳ್ಳೆ ನಿಯಂತ್ರಣ ಮಿಷನ್ ಸ್ಥಾಪನೆವರೆಗೆ ಹಲವಾರು ಆಶ್ವಾಸನೆಗಳಿವೆ. ಎಲ್ಲಿಯೂ ಯೋಗ ದಿನಾಚರಣೆ ಇಲ್ಲವೆ ಯೋಗ ಪ್ರಚಾರದ ಉಲ್ಲೇಖ ಇಲ್ಲ. ಅದು ಇರುವುದು ಬಿಜೆಪಿಯ ಗುಪ್ತ ಅಜೆಂಡಾದ ಬುಟ್ಟಿಯಲ್ಲಿ.
ಬಿಜೆಪಿಯ  ಗುಪ್ತ ಸಾಂಸ್ಕೃತಿಕ ರಾಜಕಾರಣಕ್ಕೆ ಅದು ತನ್ನದೆಂದು ಹೇಳಿಕೊಳ್ಳುತ್ತಿರುವ ಸಾಂಸ್ಕೃತಿಕ ರಾಷ್ಟ್ರೀಯತೆಯೇ ಪ್ರೇರಣೆ. ಈ ಸಾಂಸ್ಕೃತಿಕ ರಾಷ್ಟ್ರೀಯತೆ ಬಹುಸಂಸ್ಕೃತಿಯನ್ನು ಒಪ್ಪುವುದಿಲ್ಲ.  ಸಾಂಸ್ಕೃತಿಕ ರಾಷ್ಟ್ರೀಯತೆಗೆ ಸಾವರ್ಕರ್ ಪ್ರತಿಪಾದಿಸಿದ್ದ ಹಿಂದುತ್ವವೇ ಸ್ಫೂರ್ತಿ. ‘ಮುಸ್ಲಿಮ್ ಇಲ್ಲವೆ ಕ್ರೈಸ್ತರಿಗೆ ವಂಶಪಾರಂಪರ್ಯವಾಗಿ ಭಾರತ ಪಿತೃಭೂಮಿಯಾಗಿದ್ದರೂ ಅವರನ್ನು ಹಿಂದೂಗಳೆನ್ನಲು ಸಾಧ್ಯ ಇಲ್ಲ. ಅವರ ಪುಣ್ಯಭೂಮಿ ಅರೇಬಿಯಾ ಇಲ್ಲವೇ ಪ್ಯಾಲೆಸ್ಟೀನ್‌ನಲ್ಲಿದೆ. ಅವರು ಹಿಂದೂ ಧರ್ಮವನ್ನು ಒಪ್ಪಿಕೊಂಡರೆ ಮಾತ್ರ ಹಿಂದೂಗಳು’ ಎಂದು ಸಾವರ್ಕರ್ ತಮ್ಮ ‘ಹಿಂದುತ್ವ’ ಪುಸ್ತಕದಲ್ಲಿ ಬರೆದಿದ್ದಾರೆ.
ಈ ವ್ಯಾಖ್ಯಾನವನ್ನು ಒಪ್ಪುವ ಪಕ್ಷ ಮತ್ತು ಸಂಘಟನೆ ಯೋಗಾಭ್ಯಾಸದ ಬಗ್ಗೆ ಪ್ರಚಾರದಲ್ಲಿ ತೊಡಗಿದಾಗ ಬೇರೆ ಧರ್ಮೀಯರಲ್ಲಿ ಆತಂಕ ಸಹಜ. ಸಾವರ್ಕರ್ ಅವರ ಹಿಂದುತ್ವದ ವ್ಯಾಖ್ಯಾನವನ್ನು ಒಪ್ಪುವುದಿಲ್ಲ ಎಂದಾದರೆ  ಮತ್ತು ‘ಭಾರತದ ನೆಲದಲ್ಲಿ ಹುಟ್ಟಿದವರೆಲ್ಲರೂ ಭಾರತೀಯರು’ ಎನ್ನುವ ಮಹಾತ್ಮ ಗಾಂಧೀಜಿ ವ್ಯಾಖ್ಯಾನವನ್ನು ಒಪ್ಪುವುದಾದರೆ, ಬೇರೆ ಧರ್ಮಗಳಲ್ಲಿಲ್ಲದ ಯೋಗವನ್ನು ಭಾರತೀಯ ಸಂಸ್ಕೃತಿ ಎಂದು ಹೇಗೆ ಒಪ್ಪಿಕೊಳ್ಳಲು ಸಾಧ್ಯ?  ಯೋಗಾಭ್ಯಾಸ ಮಾತ್ರವಲ್ಲ, ಆಯುರ್ವೇದ, ಶಾಸ್ತ್ರೀಯ ಸಂಗೀತ ಎಲ್ಲವೂ ಧರ್ಮಾತೀತವಾದವು. ಆದರೆ ಇವುಗಳನ್ನು ರಾಜಕೀಯ ಉದ್ದೇಶಕ್ಕಾಗಿ ಸಾಂಸ್ಕೃತಿಕ ರಾಜಕಾರಣದ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲು ಹೊರಟಾಗಲೇ ವಿವಾದಗಳು ಹುಟ್ಟಿಕೊಳ್ಳುವುದು.
ಯೋಗವನ್ನು ಭಾರತೀಯ ಸಂಸ್ಕೃತಿ, ಪರಂಪರೆಯ ಭಾಗವಾಗಿ ಬಿಂಬಿಸುವ ಪ್ರಯತ್ನದ ಬಗ್ಗೆ ಹಿಂದೂ ಧರ್ಮದೊಳಗೂ ಭಿನ್ನಾಭಿಪ್ರಾಯಗಳಿವೆ. ಬೇರೆ ಧರ್ಮಗಳನ್ನು ಬಿಟ್ಟುಬಿಡಿ ದೇಶದ ಜನಸಂಖ್ಯೆಯಲ್ಲಿ ಶೇಕಡ 80ರಷ್ಟಿರುವ ಹಿಂದೂಗಳಲ್ಲಿ ಎಷ್ಟು ಮಂದಿ ಯೋಗವನ್ನು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಭಾಗ ಎಂದು ತಿಳಿದುಕೊಂಡಿದ್ದಾರೆ. ತಾತ-ಮುತ್ತಾತರನ್ನು ಬಿಟ್ಟುಬಿಡಿ, ನನ್ನ ತಂದೆ-ತಾಯಿ ಕೂಡಾ ಯೋಗದ ಬಗ್ಗೆ ಮನೆಯಲ್ಲಿ ಮಾತನಾಡಿದ್ದನ್ನು ನಾನು ಕೇಳಿಲ್ಲ. ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಮತ್ತು ಟಿ.ವಿ. ಚಾನೆಲ್‌ಗಳ ಮೂಲಕ ಯೋಗ ಜನಪ್ರಿಯವಾಗಿರುವುದು ನಿಜ.
ಇದರಿಂದ ಆರೋಗ್ಯ ಸುಧಾರಣೆಯಾಗುತ್ತಿರುವುದು ಕೂಡಾ ಈ ಜನಪ್ರಿಯತೆಗೆ ಕಾರಣ ಇರಬಹುದು. ಇಷ್ಟು ಮಾತ್ರಕ್ಕೆ ಯೋಗವನ್ನು ನಮ್ಮ ಸಂಸ್ಕೃತಿ-ಪರಂಪರೆ ಭಾಗ ಎನ್ನಲಾದೀತೇ? ಅವೈದಿಕ ಪರಂಪರೆಯಲ್ಲಿ ಮೈಮುರಿದು, ಬೆವರು ಸುರಿಸಿ ದುಡಿಯುವ ಶ್ರಮ ಸಂಸ್ಕೃತಿ ಇದೆಯೇ ಹೊರತು ಏಕಾಂತದಲ್ಲಿ ಕೂತು ಕಣ್ಣುಮುಚ್ಚಿ, ಕಾಲುಮಡಚಿ ನಡೆಸುವ ಯಾವ ಕಸರತ್ತುಗಳೂ ಇಲ್ಲ  ಎನ್ನುವುದೂ ಸತ್ಯ. ಶ್ರಮಜೀವಿಯಾದ ರೈತ-ಕಾರ್ಮಿಕರಿಗೆ ಈಗಲೂ ಯೋಗದ ಅಗತ್ಯ ಇಲ್ಲ. ಯೋಗ ಜನಪ್ರಿಯವಾಗಿರುವುದು ಶ್ರಮ ಸಂಸ್ಕೃತಿಯಿಂದ ದೂರವಾಗುತ್ತಿರುವ ನಗರಗಳಲ್ಲಿ.
ಕೇಂದ್ರ ಸರ್ಕಾರದ ಯೋಗ ದಿನಾಚರಣೆ ಗುರಿ ನಮ್ಮ ಶಾಲೆಗಳು. ಮಕ್ಕಳ ಆರೋಗ್ಯಕ್ಕೆ ಯೋಗ ನೆರವಾಗುತ್ತದೆ ಎಂದು ತಥಾಕಥಿತ ಆರೋಗ್ಯ ತಜ್ಞರು ಹೇಳುತ್ತಿರುವಾಗ ಆ ಮಕ್ಕಳು ಹಿರಿಯರ ಅಜ್ಞಾನಕ್ಕೆ ಮುಸಿಮುಸಿ ನಗುತ್ತಿವೆ. ಯಾವ ಮಕ್ಕಳೂ ಕಣ್ಣುಮುಚ್ಚಿ, ಕಾಲುಮಡಚಿ, ಬಾಯಿಮುಚ್ಚಿ ಬಹಳ ಹೊತ್ತು ಕೂರುವುದನ್ನು ಇಷ್ಟಪಡುವುದಿಲ್ಲ. ಈ ಕಾರಣಕ್ಕಾಗೇ ಮಕ್ಕಳಿಗೆ ಅತಿ ಶಿಸ್ತಿನ ತರಗತಿಗಳು ಜೈಲುಗಳೆಂದು ಅನಿಸುವುದು. ಮಕ್ಕಳಿಗೆ ಕುಣಿಯುತ್ತಾ, ಕುಪ್ಪಳಿಸುತ್ತಾ, ಓಡುತ್ತಾ, ಆಡುತ್ತಾ ಇರುವುದೇ ಖುಷಿ.
ಇದರಿಂದಲೇ ಅವುಗಳಿಗೆ ಆರೋಗ್ಯ. ಮಕ್ಕಳ ದೈಹಿಕ ಆರೋಗ್ಯದ ಬಗ್ಗೆ ಯಾವುದೇ ಸರ್ಕಾರ ಪ್ರಾಮಾಣಿಕ ಕಾಳಜಿ ಹೊಂದಿದ್ದರೆ, ಮೊದಲು ಎಲ್ಲ ಶಾಲೆಗಳಿಗೆ ಸುಸಜ್ಜಿತವಾದ ಆಟದ ಮೈದಾನ ನಿರ್ಮಿಸಬೇಕು, ಆಸಕ್ತಿ ಇರುವ ದೈಹಿಕ ಶಿಕ್ಷಣಾಧಿಕಾರಿಗಳನ್ನು ನೇಮಿಸಬೇಕು, ಕ್ರೀಡಾ ಸಲಕರಣೆ ಒದಗಿಸಬೇಕು. ಹೆಚ್ಚು ದೈಹಿಕ ಕಸರತ್ತಿನ ಅಗತ್ಯ ಇಲ್ಲದ, ಜೂಜು-ಮೋಜುಗಳಿಂದ ಮಕ್ಕಳ ಮನಸ್ಸು ಕೆಡಿಸುವ ಕ್ರಿಕೆಟ್ ಆಟದ ಎದುರು ಕಬಡ್ಡಿ, ಹಾಕಿ  ಸೇರಿದಂತೆ  ಭಾರತೀಯ ಕ್ರೀಡೆಗಳೆಲ್ಲ ಮೂಲೆಗುಂಪಾಗಿವೆ. ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ ಕ್ರೀಡಾಕೂಟಗಳಲ್ಲಿ ಭಾರತದ ಸ್ಥಾನ ಎಲ್ಲಿದೆ ಎಂದು ಹುಡುಕಬೇಕಾಗಿದೆ. ಸರ್ಕಾರ ಈ ಬಗ್ಗೆ ಯೋಚನೆ ಮಾಡಬೇಕಾಗಿದೆ.
ಮಕ್ಕಳ ಆರೋಗ್ಯದ ದೃಷ್ಟಿಯಿಂದಲೇ ಯೋಗಾಭ್ಯಾಸ ಅಗತ್ಯ ಎನ್ನುವ ಬಿಜೆಪಿ ಸರ್ಕಾರದ ಸಮರ್ಥನೆ ಆತ್ಮವಂಚನೆಯಿಂದ ಕೂಡಿದೆ ಎನ್ನುವುದಕ್ಕೆ ಇನ್ನೂ ಒಂದು ಉದಾಹರಣೆ ಕೊಡಬಹುದು. ಪೌಷ್ಟಿಕಾಂಶದ ಕೊರತೆಯಿಂದ ನಿಮಿಷಕ್ಕೊಂದು ಮಗು ಸಾಯುತ್ತಿರುವ ಭಾರತದಲ್ಲಿ ಸರ್ಕಾರದ ಆದ್ಯತೆ ಏನಿರಬೇಕು? ಯೋಗಾಭ್ಯಾಸವೇ? ಪೌಷ್ಟಿಕಾಂಶ ಆಹಾರವೇ? ಅನ್ನಭಾಗ್ಯ, ಕ್ಷೀರಭಾಗ್ಯವನ್ನು ಗೇಲಿ ಮಾಡುವ, ಬಹುಸಂಖ್ಯಾತ ಮಕ್ಕಳು ಬಯಸುವ ಪೋಷಕಾಂಶ ಭರಿತ ಮೊಟ್ಟೆಯನ್ನು ಶಾಲೆಗಳಲ್ಲಿ ನೀಡುವುದನ್ನು ಧಾರ್ಮಿಕ ಕಾರಣಕ್ಕಾಗಿ ವಿರೋಧಿಸುವವರು, ಮಕ್ಕಳ ಆರೋಗ್ಯಕ್ಕಾಗಿ ಯೋಗ ಎಂದು ಪ್ರತಿಪಾದಿಸುತ್ತಿರುವುದು ಹಾಸ್ಯ ಪ್ರಸಂಗದಂತೆ ಕಾಣುತ್ತಿಲ್ಲವೇ?

No comments:

Post a Comment