ಹತ್ತು ವರ್ಷಗಳ ಕಾಲ ರಾಜ್ಯವನ್ನು ಆಳಿ, ಮೂರು ಚುನಾವಣೆಗಳನ್ನು ಗೆದ್ದು, ದೇಶದಾದ್ಯಂತ ಪಕ್ಷದ ಕಾರ್ಯಕರ್ತರಲ್ಲಿ ಸಂಚಲನವನ್ನು ಉಂಟು ಮಾಡಿರುವ ನರೇಂದ್ರಮೋದಿ, ಗುಜರಾತ್‌ನಲ್ಲಿಯೇ ಉಳಿದು ಮುಂದೊಂದು ದಿನ ಅಲ್ಲಿಂದಲೇ ರಾಜಕೀಯ ನಿವೃತ್ತಿ ಘೋಷಿಸುತ್ತಾರೆ ಎಂದು ತಿಳಿದುಕೊಂಡವರು ಮೂರ್ಖರು. ನರೇಂದ್ರಮೋದಿ ಮೂರ್ಖರಲ್ಲ, ಅವರೊಬ್ಬ ಮಹತ್ವಾಕಾಂಕ್ಷಿ ಅಷ್ಟೇ ಜಾಣ ರಾಜಕಾರಣಿ. ರಾಷ್ಟ್ರರಾಜಕಾರಣದ ಕಡೆಗೆ ಅವರು ಹೊರಟಿರುವ ದಾರಿಯಲ್ಲಿ ಹಲವಾರು ಅಡ್ಡಿಆತಂಕಗಳಿವೆ ನಿಜ, ಆದರೆ ಇವು ಯಾವುದೂ ಮುಂದಿನ ದಿನಗಳ ಅವರ ದೆಹಲಿ ಪ್ರಯಾಣದ ಸಂಕಲ್ಪವನ್ನು ಬದಲಾಯಿಸದು. ಈ `ರಸ್ತೆತಡೆ'ಗಳನ್ನೆಲ್ಲ ಎದುರಿಸಿ ಅವರು ದೆಹಲಿ ತಲುಪಿದರೂ ಮುಂದೊಂದು ದಿನ ಪ್ರಧಾನಿಯಾಗಿಯೇ ಬಿಡುತ್ತಾರೆ ಎನ್ನುವುದಕ್ಕೂ ಖಾತರಿ ಇಲ್ಲ. ಆದರೆ ಮನೆಬಾಗಿಲಿಗೆ ಬಂದಿರುವ ಈ ಅವಕಾಶವನ್ನು ಸುಲಭದಲ್ಲಿ ಬಿಟ್ಟುಕೊಡುವಷ್ಟು ಉದಾರಿ ನರೇಂದ್ರಮೋದಿ ಅಲ್ಲ.
ಮೋದಿ ಇಂತಹದ್ದೊಂದು ಮಹತ್ವಾಕಾಂಕ್ಷೆ ಇಟ್ಟುಕೊಳ್ಳಲು ಅವರದ್ದೇ ಆಗಿರುವ ಕಾರಣಗಳಿವೆ. ಗುಜರಾತ್ ಮುಖ್ಯಮಂತ್ರಿಯಾಗಲು ಹನ್ನೊಂದು ವರ್ಷಗಳ ಹಿಂದೆ ದೆಹಲಿಯಿಂದ ನರೇಂದ್ರಮೋದಿ ಅವರನ್ನು ಕಳುಹಿಸಿದಾಗ ಆ ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಏನಿತ್ತೋ, ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಈಗಿನ ಸ್ಥಿತಿ ಹೆಚ್ಚುಕಡಿಮೆ ಹಾಗೆಯೇ ಇದೆ. 1998ರ ಲೋಕಸಭಾ ಚುನಾವಣೆಯ ನಂತರದ ದಿನಗಳಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಎದುರಿಸಿದ್ದು ನಿರಂತರ ಸೋಲಿನ ಸರಮಾಲೆಯನ್ನು. ಸಾಬರಮತಿ ವಿಧಾನಸಭಾ ಕ್ಷೇತ್ರ ಮತ್ತು ಸಬರ್‌ಕಾಂಟಾ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ, ಅನಂತರ ನಡೆದ ಪಂಚಾಯತ್ ಚುನಾವಣೆ ಹಾಗೂ ಅಹ್ಮದಾಬಾದ್ ಮತ್ತು ರಾಜಕೋಟ್ ನಗರಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಪರಾಭವಗೊಂಡಿತ್ತು. ಆ ಸೋಲಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಶಂಕರ್‌ಸಿಂಗ್ ವಘೇಲಾ. ಮುಖ್ಯಮಂತ್ರಿಯಾಗಿದ್ದ ಕೇಶುಭಾಯಿ ಪಟೇಲ್ ಅವರು ಪಕ್ಷದ ಹಿನ್ನಡೆಯನ್ನು ತಡೆಯಲಿಕ್ಕಾಗದೆ ಕೈಚೆಲ್ಲಿ ಕೂತಿದ್ದರು. ಆ ಕಾಲದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರಮೋದಿ ಅವರನ್ನು ಗುಜರಾತ್‌ಗೆ ಕಳುಹಿಸಿಕೊಡಲಾಯಿತು. ಅದರ ನಂತರ ಮೋದಿ ಮೂರು ಚುನಾವಣೆಗಳನ್ನು ಗೆದ್ದಿದ್ದಾರೆ. ಪ್ರಧಾನಮಂತ್ರಿ ಅಭ್ಯರ್ಥಿಯಾಗಲು ಅರ್ಜಿಯನ್ನೇನಾದರೂ ಬರೆದುಕೊಡಬೇಕಾದ ಪರಿಸ್ಥಿತಿ ಬಂದರೆ ಮೋದಿ ಖಂಡಿತ ಈ ಸಾಧನೆಯನ್ನು ಅದರಲ್ಲಿ ಉಲ್ಲೇಖಿಸಬಹುದು.
ಲೋಕಸಭಾ ಚುನಾವಣೆಯಲ್ಲಿ ಸತತ ಎರಡು ಸೋಲು, ಸಾಲುಸಾಲು ವಿಧಾನಸಭಾ ಚುನಾವಣೆಗಳಲ್ಲಿ ಪರಾಭವ, ಪಕ್ಷದ ಅಧ್ಯಕ್ಷರ ಮೇಲೆ ಭ್ರಷ್ಟಾಚಾರದ ಆರೋಪ, ದೆಹಲಿ ನಾಯಕರ ನಡುವಿನ ಬಿಕ್ಕಟ್ಟು, ದುರ್ಬಲವಾಗಿ ಹೋಗಿರುವ ಹೈಕಮಾಂಡ್, ಕರ್ನಾಟಕದಲ್ಲಿ ಹೋಳಾಗಿರುವ ಪಕ್ಷ, ರಾಜಸ್ತಾನದಲ್ಲಿ ತಣ್ಣಗಾಗದ ಬಂಡಾಯದ ಉರಿ...-ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಸ್ಥಿತಿ ಚಿಂತಾಜನಕವಾಗಿದೆ. ಪಕ್ಷವನ್ನು ಈಗಿನ ಸ್ಥಿತಿಯಿಂದ ಮೇಲೆತ್ತಲು ಸಾಧ್ಯ ಇರುವ ಏಕೈಕ ನಾಯಕ ಲಾಲ್‌ಕೃಷ್ಣ ಅಡ್ವಾಣಿಯವರಿಗೆ ವಯಸ್ಸಾಗಿದೆ, ಜತೆಗೆ ಸಂಘ ಪರಿವಾರ ಅವರ ನಿವೃತ್ತಿಯನ್ನು ಬಯಸುತ್ತಿದೆ. ಹಾಗೆಂದ ಮಾತ್ರಕ್ಕೆ ನರೇಂದ್ರಮೋದಿ ಪ್ರಧಾನಿ ಸ್ಥಾನಕ್ಕೆ ಪಕ್ಷದ ಒಮ್ಮತದ ಅಭ್ಯರ್ಥಿ ಅಲ್ಲ. ಅವರು ದೆಹಲಿಗೆ ಜಿಗಿಯಲು ನಿರ್ಧರಿಸಿದರೆ ಅಲ್ಲಿರುವ ನಾಯಕರು ಆರತಿಬೆಳಗಿ ಸ್ವಾಗತಿಸಲಿದ್ದಾರೆ ಎಂದು ಯಾರೂ ತಿಳಿದುಕೊಳ್ಳಬೇಕಾಗಿಲ್ಲ. ಮೋದಿಯವರು ಒಂದಲ್ಲ ಕನಿಷ್ಠ ಮೂರು ದಿಕ್ಕುಗಳಿಂದ ವಿರೋಧವನ್ನು ಎದುರಿಸಬೇಕಾಗುತ್ತದೆ.
ವಿರೋಧಿಸುವ ಮೊದಲನೆಯ ಗುಂಪು- ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮತ್ತು ರಾಜನಾಥ್ ಸಿಂಗ್ ಎಂಬ `ಡೆಲ್ಲಿ-4' ಗ್ಯಾಂಗ್. ಇವರಲ್ಲಿ ಜೇಟ್ಲಿ ಮತ್ತು ಸುಷ್ಮಾ ಖಂಡಿತ ಪ್ರಧಾನಿ ಅಭ್ಯರ್ಥಿಯಾಗುವ ಅರ್ಹತೆ ಉಳ್ಳವರು, ಆ ಮಹತ್ವಾಕಾಂಕ್ಷೆ ಕೂಡಾ ಅವರಲ್ಲಿದೆ. ಆದರೆ ಒಂದು ರಾಷ್ಟ್ರೀಯ ಪಕ್ಷದ ನಾಯಕ ಇಲ್ಲವೆ ನಾಯಕಿಗೆ ಇರಬೇಕಾದ ರಾಷ್ಟ್ರಮಟ್ಟದ ಪ್ರಭಾವ ಇಬ್ಬರಲ್ಲಿಯೂ ಇಲ್ಲ. ಸುಷ್ಮಾಸ್ವರಾಜ್ ಮಧ್ಯಪ್ರದೇಶದ ಸುರಕ್ಷಿತ ಲೋಕಸಭಾ ಕ್ಷೇತ್ರವನ್ನು ಆಯ್ದುಕೊಂಡು ಗೆದ್ದು ಬಂದವರು. ಜೇಟ್ಲಿಗೆ ರಾಜ್ಯಸಭೆಯನ್ನು ಪ್ರವೇಶಿಸಲು ಕೂಡಾ ನರೇಂದ್ರಮೋದಿ ನೆರವು ಬೇಕು. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ರಾಜನಾಥ್‌ಸಿಂಗ್‌ಗೆ ತನ್ನ ಜನಪ್ರಿಯತೆಯನ್ನು ಅವರ ರಾಜ್ಯದಲ್ಲಿಯೇ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ವೆಂಕಯ್ಯನಾಯ್ಡು ಅವರನ್ನು ಪಕ್ಷದಲ್ಲಿಯೇ ಯಾರೂ ಗಂಭೀರವಾಗಿ ಸ್ವೀಕರಿಸಿಲ್ಲ.

ಇಂತಹ `ಮನಮೋಹನ್‌ಸಿಂಗ್'ಗಳು ಪ್ರಧಾನಿಯಾಗಬೇಕಾದರೆ ಒಬ್ಬ `ಸೋನಿಯಾಗಾಂಧಿ' ಬೇಕಾಗುತ್ತದೆ. ಸದ್ಯದ ಬಿಜೆಪಿಯಲ್ಲಿ ಅಂತಹ ಯಾವ `ಸೋನಿಯಾಗಾಂಧಿ'ಯೂ ಕಾಣುತ್ತಿಲ್ಲ. ಈ `ಡೆಲ್ಲಿ-4' ತಮ್ಮವರಲ್ಲಿ ಒಬ್ಬರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಒಪ್ಪಿಕೊಂಡರೆ ಮೋದಿ ಅವರನ್ನು ತಡೆಯುವ ಒಂದು ಸಣ್ಣ ಅವಕಾಶ ಇದೆ. ಅಂತಹ ವಿಶಾಲ ಮನಸ್ಸು ಈ ಗ್ಯಾಂಗ್‌ನಲ್ಲಿ ಕಾಣುತ್ತಿಲ್ಲ. ಈ ಬಿಕ್ಕಟ್ಟು ನರೇಂದ್ರ ಮೋದಿಯವರಿಗೆ ನೆರವಾಗಬಹುದಾದ ಅನುಕೂಲತೆ. ಆದರೆ ಪರಸ್ಪರ ಸಹಮತ ಇಲ್ಲದೆ ಇದ್ದರೂ ಹೊರಗಿನವರ ಪ್ರವೇಶವನ್ನು ಸಹಿಸಲಾರದು ಈ `ಡೆಲ್ಲಿ-4'ಗ್ಯಾಂಗ್. ನಿತಿನ್ ಗಡ್ಕರಿ ಅವರನ್ನು ಆರ್‌ಎಸ್‌ಎಸ್ ನಾಗಪುರದಿಂದ ದೆಹಲಿಗೆ `ರಫ್ತು' ಮಾಡಿದಾಗ ಇವರೇ ಒಟ್ಟಾಗಿ ವಿರೋಧಿಸಿದವರು. ಸರ್ವಾಧಿಕಾರಿಯಂತಿರುವ ಮೋದಿ ತಮ್ಮನ್ನು ಮೂಲೆಗುಂಪು ಮಾಡಬಹುದೆಂಬ ಭೀತಿಯಿಂದ ನರಳುತ್ತಿರುವ ಈ ನಾಯಕರು ಅವರನ್ನು ಸ್ವಾಗತಿಸಲು ಹೇಗೆ ಸಾಧ್ಯ?
ಎರಡನೆಯ ಗುಂಪು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರದ್ದು. ಅಟಲಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿ ನಂತರ ಆರ್‌ಎಸ್‌ಎಸ್ ಪ್ರಯಾಸಪಟ್ಟು ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಆಕ್ರಮಣಕಾರಿ ಮತ್ತು ಸ್ವತಂತ್ರ ವ್ಯಕ್ತಿತ್ವದ ಮೋದಿ ಅವರನ್ನು ತಮ್ಮ ಹಿಡಿತದಲ್ಲಿಡುವುದು ಕಷ್ಟ ಎಂದು ಈ ಹಿರಿತಲೆಗಳಿಗೆ ಗೊತ್ತಿದೆ. (ಬಿ.ಎಸ್.ಯಡಿಯೂರಪ್ಪನವರು ಕಲಿಸಿದ ಪಾಠದ ನಂತರ ಆರ್‌ಎಸ್‌ಎಸ್‌ನ ಈ ಅಭಿಪ್ರಾಯ ಇನ್ನಷ್ಟು ಬಲವಾಗಿರಬಹುದು). ಇದಕ್ಕಾಗಿಯೇ ಅಲ್ಲವೆ ಅವರು ಭ್ರಷ್ಟಾಚಾರದ ಆರೋಪಗಳ ಬಗ್ಗೆ ತಿಳಿದಿದ್ದರೂ ಮತ್ತು ನರೇಂದ್ರಮೋದಿಯವರೇ ವಿರೋಧಿಸಿದ್ದರೂ ನಿತಿನ್ ಗಡ್ಕರಿ ಎಂಬ ಬೇರುಗಳಿಲ್ಲದ ದುರ್ಬಲ ನಾಯಕನನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದು ಮತ್ತು ಇನ್ನೊಂದು ಅವಧಿಗೂ ಅವರನ್ನು ಮುಂದುವರಿಸುವ ಪ್ರಯತ್ನ ಮಾಡುತ್ತಿರುವುದು.
ಮೋದಿ ಬಗ್ಗೆ ಸಂಘ ಪರಿವಾರದ ಆತಂಕಗಳಿಗೆ ಕಾರಣಗಳಿವೆ. ಕಳೆದ ಹತ್ತುವರ್ಷಗಳ ತನ್ನ ಆಳ್ವಿಕೆ ಕಾಲದಲ್ಲಿ ಮೋದಿ ಅವರು ಗುಜರಾತ್‌ನಲ್ಲಿ ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಅಂಗಸಂಸ್ಥೆಗಳ ನಾಯಕರ ಬಾಯಿಮುಚ್ಚಿಸಿ ಕೂರಿಸಿದ್ದಾರೆ. ದೇಶದಾದ್ಯಂತ ಸುತ್ತಾಡಿ ಬೆಂಕಿ ಉಗುಳುವ ವಿಶ್ವಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಗುಜರಾತ್‌ನವರೇ ಆಗಿದ್ದರೂ ಮೋದಿ ಆಳ್ವಿಕೆ ಕಾಲದಲ್ಲಿ ಅವರು ಅಲ್ಲಿ ಮಾತನಾಡಿದ್ದನ್ನು ಯಾರಾದರೂ ಕೇಳಿದ್ದಾರೆಯೇ?
ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಬೊಬ್ಬಿರಿದು ಅಬ್ಬರಿಸುವ ಹಿಂದೂ ಜಾಗರಣ ವೇದಿಕೆ, ಬಜರಂಗದಳ, ಹಿಂದೂ ಸೇನೆ ಇತ್ಯಾದಿ ಕೇಸರಿ ಪಡೆಗಳನ್ನು ಬಿಟ್ಟುಬಿಡಿ, ವಿಶ್ವಹಿಂದು ಪರಿಷತ್‌ನ ಹೆಸರನ್ನೂ ಅಲ್ಲಿ ಕೇಳುವವರಿಲ್ಲ. ಮೋದಿ ಈ ಸಂಘಟನೆಗಳ ಜತೆ ಬಹಿರಂಗವಾಗಿ ಗುರುತಿಸಿಕೊಂಡಿದ್ದೇ ಕಡಿಮೆ. ಕಳೆದೆರಡೂ ಚುನಾವಣೆಗಳಲ್ಲಿ ಪರಿವಾರದ ಹೆಚ್ಚಿನ ನಾಯಕರು ಮೋದಿ ವಿರುದ್ಧವೇ ಕೆಲಸಮಾಡಿದ್ದಾರೆ. ಇವರಲ್ಲಿ ಯಾರಿಗೂ ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದು ಬೇಡ.
ಮೂರನೆಯ ಗುಂಪು ಎನ್‌ಡಿಎ ಮಿತ್ರಪಕ್ಷಗಳದ್ದು. ಈ ವಿರೋಧಕ್ಕೆ ಬಹಳ ಬಲವಾದ ತಾತ್ವಿಕ ಕಾರಣ ಇದೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಈಗ ಮೋದಿ ವಿರುದ್ದ ನಿಂತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ 2001ರಲ್ಲಿ ಗುಜರಾತ್ ಕೋಮುಗಲಭೆ ನಡೆದಾಗ ಎನ್‌ಡಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದರು. ಅವರೇನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ.

ಮನಸ್ಸು ಮಾಡಿದ್ದರೆ ಗೋಧ್ರಾದಲ್ಲಿ ರೈಲ್ವೆ ಬೋಗಿಗೆ ಬೆಂಕಿ ತಗಲಿದ್ದು ಹೇಗೆ ಎಂಬುದನ್ನು ಪತ್ತೆಹಚ್ಚಿ ಸತ್ಯವನ್ನು ಬಹಿರಂಗಪಡಿಸಲು ಅವರಿಗೆ ಸಾಧ್ಯವಾಗಿತ್ತು. ಆಗ್ ಜಾರ್ಜ್ ಫರ್ನಾಂಡಿಸ್ ಜತೆಯಲ್ಲಿ ಮೋದಿ ರಕ್ಷಣೆಗೆ ನಿಂತವರಲ್ಲಿ ನಿತೀಶ್ ಕುಮಾರ್ ಕೂಡಾ ಒಬ್ಬರು. ಎನ್‌ಡಿಎ ಬಿಟ್ಟುಹೋದವರು ರಾಮ್‌ವಿಲಾಸ್ ಪಾಸ್ವಾನ್ ಮಾತ್ರ. ವೈಯಕ್ತಿಕವಾಗಿ ನರೇಂದ್ರಮೋದಿ ಬಗ್ಗೆ ವಿರೋಧ ಇಲ್ಲದವರು ಕೂಡಾ ಬಹಿರಂಗವಾಗಿ ಅವರ ಜತೆ ಗುರುತಿಸಿಕೊಳ್ಳಲು ಇಷ್ಟಪಡದೆ ಇರುವುದಕ್ಕೆ ಮುಖ್ಯ ಕಾರಣ ಅವರ ಮುಖಕ್ಕೆ ಅಂಟಿಕೊಂಡಿರುವ 2002ರ ಕೋಮು ಗಲಭೆಯ ಕಳಂಕ. ಮೋದಿ ಜತೆ ಕೈಜೋಡಿಸಿದರೆ ಮುಸ್ಲಿಮ್ ಮತಗಳನ್ನು ಕಳೆದುಕೊಳ್ಳಬಹುದೆಂಬ ಭೀತಿ ಎನ್‌ಡಿಎ ಮಿತ್ರಪಕ್ಷಗಳನ್ನು ಕಾಡುತ್ತಿದೆಯೇ ಹೊರತು ಈ ವಿರೋಧಕ್ಕೆ ಜಾತ್ಯತೀತತೆ ಬಗೆಗಿನ ಅಖಂಡ ಬದ್ಧತೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಕಾರಣಗಳೇನೇ ಇರಬಹುದು ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದನ್ನು ಎನ್‌ಡಿಎ ಮಿತ್ರಪಕ್ಷಗಳು ಸುಲಭದಲ್ಲಿ ಒಪ್ಪಿಕೊಳ್ಳಲಾರವು.
ಮಿತ್ರಪಕ್ಷಗಳ ಬೆಂಬಲ ಬೇಡವೇ ಬೇಡ ಎಂದಾದರೆ ನರೇಂದ್ರಮೋದಿ ಪ್ರಧಾನಿಯಾಗಲು ಬಹುಮತಕ್ಕೆ ಅಗತ್ಯ ಇರುವ 272 ಸ್ಥಾನಗಳನ್ನು ಬಿಜೆಪಿ ಸ್ವಂತಬಲದಿಂದ ಗೆಲ್ಲಬೇಕಾಗುತ್ತದೆ. ಆಗ ಮಾತ್ರ ಮಿತ್ರಪಕ್ಷಗಳ ಮುಲಾಜಿಲ್ಲದೆ ಅವರು ಪ್ರಧಾನಿಯಾಗಲು ಸಾಧ್ಯ. ಮೈತ್ರಿ ಅನಿವಾರ್ಯ ಎಂದಾದರೆ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಸ್ಥಾನದಿಂದ ದೂರ ಇಡಬೇಕಾಗಬಹುದು. ಈಗಿನ ರಾಜಕೀಯ ಸ್ಥಿತಿಯಲ್ಲಿ ಮುಂದಿನ ಲೋಕಸಭಾ ಚುನಾವಣೆಯ ನಂತರ ಯಾವುದೇ ಒಂದು ಪಕ್ಷ, ಸರ್ಕಾರ ರಚನೆಗೆ ಅಗತ್ಯ ಇರುವಷ್ಟು ಸ್ಪಷ್ಟ ಬಹುಮತ ಪಡೆಯುವುದು ಕಷ್ಟ. ಯುಪಿಎ, ಎನ್‌ಡಿಎ ಇಲ್ಲವೆ ತೃತೀಯರಂಗ-ಇವುಗಳಲ್ಲಿ ಯಾವುದಾದರೂ ಒಂದು ಮೈತ್ರಿಕೂಟವಷ್ಟೇ ಅಧಿಕಾರಕ್ಕೆ ಬರುವ ಸಾಧ್ಯತೆಗಳೇ ಹೆಚ್ಚು. ಈ ಪರಿಸ್ಥಿತಿಯಲ್ಲಿ ಬಹುಮತಕ್ಕೆ ಬೇಕಾಗುವಷ್ಟು ಸ್ಥಾನಗಳನ್ನು ಮಿತ್ರಪಕ್ಷಗಳ ಮೂಲಕ ಯಾರು ಗಳಿಸಿಕೊಳ್ಳಬಲ್ಲರೋ ಅವರೇ 2014ರ ಲೋಕಸಭಾ ಚುನಾವಣೆಯ ನಂತರ ಅಧಿಕಾರದ ಚುಕ್ಕಾಣಿ ಹಿಡಿಯುವವರು. ಅಧಿಕಾರದ ಈ ಓಟದಲ್ಲಿ ಮೋದಿ ಅವರನ್ನು ಬೆನ್ನಿಗೆ ಕಟ್ಟಿಕೊಂಡು ಎನ್‌ಡಿಎ ಹೊರಟರೆ ಮುಗ್ಗರಿಸಿ ಬೀಳುವ ಅಪಾಯ ಇದೆ.

ಸದ್ಯ ಜತೆಯಲ್ಲಿರುವ ಮಿತ್ರಪಕ್ಷಗಳನ್ನಷ್ಟೇ ನಂಬಿಕೊಂಡು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಕನಸನ್ನೂ ಕಾಣಲು ಬಿಜೆಪಿಗೆ ಸಾಧ್ಯ ಇಲ್ಲ. ಇದಕ್ಕಾಗಿ ಈಗಿನ ಮಿತ್ರಪಕ್ಷಗಳನ್ನು ಉಳಿಸಿಕೊಳ್ಳುವ ಜತೆಯಲ್ಲಿ ಬಿಟ್ಟುಹೋಗಿರುವ ಹಳೆಯ ಮಿತ್ರರನ್ನು ಒಲಿಸಿಕೊಳ್ಳಬೇಕಾಗುತ್ತದೆ. ಬಿಜು ಜನತಾದಳ, ತೆಲುಗುದೇಶಂ, ತೃಣಮೂಲ ಕಾಂಗ್ರೆಸ್, ನ್ಯಾಷನಲ್ ಕಾನಫರೆನ್ಸ್ ಮೊದಲಾದ ಪಕ್ಷಗಳು ವಾಜಪೇಯಿ ಕಾಲದಲ್ಲಿ ಎನ್‌ಡಿಎ ಜತೆ ಗುರುತಿಸಿಕೊಂಡಿದ್ದವು. ಇವುಗಳು ಸುಲಭದಲ್ಲಿ ಗೋಡೆಹಾರಿ ಬಂದುಬಿಡಬಹುದು.
ಅಧಿಕಾರದ ತಕ್ಕಡಿ ಎನ್‌ಡಿಎ ಕಡೆ ವಾಲುವುದು ಖಾತರಿಯಾದರೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ಎನ್‌ಸಿಪಿ ನಾಯಕ ಶರದ್‌ಪವಾರ್ ಕೂಡಾ ಬೆಂಬಲಕ್ಕೆ ನಿಂತರೆ ಅಚ್ಚರಿಯೇನಿಲ್ಲ. ಆದರೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಬಿಡಿ, ಪ್ರಧಾನಿ ಅಭ್ಯರ್ಥಿಯಾಗುವುದನ್ನೂ ಕೂಡಾ ಈ ಪಕ್ಷಗಳು ಒಪ್ಪಲಾರವು. ಇವೆಲ್ಲವೂ ಗೊತ್ತಿರುವುದಕ್ಕಾಗಿಯೇ ಈ `ರಸ್ತೆತಡೆ'ಗಳನ್ನು ದಾಟಿಬರುವ ಪ್ರಯತ್ನವನ್ನು ಮೋದಿ ಪ್ರಾರಂಭಿಸಿರುವುದು. ಕಳೆದ ಹತ್ತುವರ್ಷಗಳಲ್ಲಿ ಎಷ್ಟೇ ಒತ್ತಡ ಬಂದರೂ `ತಪ್ಪಾಗಿದ್ದರೆ ಕ್ಷಮಿಸಿ' ಎಂಬ ಎರಡು ಶಬ್ದಗಳನ್ನು ಉಚ್ಚರಿಸಲು ಒಪ್ಪದ ನರೇಂದ್ರಮೋದಿ ಚುನಾವಣಾ ಫಲಿತಾಂಶ ಹೊರಬಿದ್ದ ಮರುಗಳಿಗೆಯಲ್ಲಿ ಅದನ್ನು ಹೇಳಿದ್ದಾರೆ. ಈಗಲೂ `ಗುಜರಾತ್ ಗಲಭೆಗಾಗಿ ಕ್ಷಮಿಸಿ' ಎಂದು ಹೇಳದೆ ತಪ್ಪಿಸಿಕೊಂಡಿದ್ದರೂ, ಮುಂದೊಂದು ದಿನ ಅದನ್ನೂ ಹೇಳಿಬಿಡಬಹುದು. ಆದರೆ ಅಷ್ಟಕ್ಕೆ ಎನ್‌ಡಿಎ ಮಿತ್ರಪಕ್ಷಗಳು ಮೋದಿ ಅವರನ್ನು ಒಪ್ಪಿಕೊಳ್ಳಬಹುದೇ?
ಬಹುಶಃ ಈ ಕಾರಣಗಳಿಂದಾಗಿಯೇ ವರ್ಷ 86 ದಾಟಿದರೂ ಲಾಲ್‌ಕೃಷ್ಣ ಅಡ್ವಾಣಿಯವರು ಪ್ರಧಾನಿಯಾಗುವ ಕನಸಿನ ಚುಂಗು ಹಿಡಿದು ಕೂತಿದ್ದಾರೆ. ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದರೂ ಆಗಬಹುದು, ಎನ್‌ಡಿಎ ಅಭ್ಯರ್ಥಿ ಆಗಲಾರರು ಎಂಬ ಸತ್ಯ ಅವರಿಗೆ ಗೊತ್ತಿದೆ. ಅನಿವಾರ್ಯವಾದರೆ ಎನ್‌ಡಿಎ ಅಭ್ಯರ್ಥಿ ತಾನೇ ಎನ್ನುವುದೂ ಅವರಿಗೆ ತಿಳಿದಿದೆ. ಅಡ್ವಾಣಿಯವರನ್ನು ಆರ್‌ಎಸ್‌ಎಸ್ ವಿರೋಧಿಸಿದರೂ ಮೋದಿಯವರನ್ನು ತಡೆಯಲಿಕ್ಕಾಗಿ ಒಪ್ಪಿಕೊಳ್ಳಲೂ ಬಹುದು. ಉಳಿದಂತೆ `ಡೆಲ್ಲಿ-4' ಗ್ಯಾಂಗ್ ಮತ್ತು ಎನ್‌ಡಿಎ ಮಿತ್ರಪಕ್ಷಗಳಿಗೆ ಅಡ್ವಾಣಿ ಬಗ್ಗೆ ತಕರಾರಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಎದುರು ನರೇಂದ್ರಮೋದಿ ಅವರನ್ನು ತಂದು ನಿಲ್ಲಿಸುವ ಅವಸರದಲ್ಲಿದ್ದಾರೆ ಮೋದಿ ಅಭಿಮಾನಿಗಳು. ಆದರೆ ಅದಕ್ಕಿಂತ ಮೊದಲು ಮೋದಿ ಮನೆಯೊಳಗಿನ ವಿರೋಧದ `ರಸ್ತೆತಡೆ'ಗಳನ್ನು ದಾಟಿ ಬರಬೇಕಾಗುತ್ತದೆ. ಬರಬಹುದೇ?
No comments:
Post a Comment